ಬಲಪಂಥೀಯ ದಾಳಿಯ ಕ್ರೋಡೀಕರಣಕ್ಕೆ ಎದುರಾಗಿ ವರ್ಗ ಪರ್ಯಾಯವನ್ನು ಆಧರಿಸಿದ ಎಡಪಂಥೀಯ ಪ್ರತಿಧಾಳಿ

ಇದೀಗ ದೇಶದಲ್ಲಿನ ಹೊಸ ಧ್ರುವೀಕರಣ: ಸೀತಾರಾಂ ಯೆಚುರಿ

“17ನೇ ಲೋಕಸಭಾ ಚುನಾವಣೆಗಳಲ್ಲಿ ಬಲಪಂಥೀಯರಿಗೆ ಒಂದು ದೊಡ್ಡ ವಿಜಯ ಸಿಕ್ಕಿದೆ, ಇದು ಕಳೆದ ಐದು ವರ್ಷಗಳಲ್ಲಿ ನಡೆಸಿದ ಬಲಪಂಥೀಯ ದಾಳಿಗಳ ಕ್ರೋಡೀಕರಣ, ಎಡಶಕ್ತಿಗಳು ದೊಡ್ಡ ಹಿನ್ನಡೆ ಅನುಭವಿಸಿವೆ, ಆದರೆ ಎಡಪಂಥೀಯರು, ಕೆಲವರು ಹೇಳುವ ಹಾಗೆ ನಿಶ್ಶಸ್ತ್ರರಾಗಿಲ್ಲ, ಅಥವ ನಿರ್ಮೂಲಗೊಂಡಿಲ್ಲ., ನೆನಪಿಟ್ಟುಕೊಳ್ಳಿ, ಬಲಪಂಥೀಯ ರಾಜಕೀಯ ದಾಳಿಯನ್ನು ಎಡಪಂಥೀಯ ರಾಜಕೀಯ ಪ್ರತಿಧಾಳಿ ಮಾತ್ರವೇ ಎದುರಿಸಬಲ್ಲದು. ಈ ಪ್ರತಿದಾಳಿ ಒಂದು ವರ್ಗ ಪರ್ಯಾಯವನ್ನು, ವರ್ಗ ರಾಜಕೀಯವನ್ನು ಆಧರಿಸಿದೆ. ಕೇಂದ್ರ ಸಮಿತಿಯಲ್ಲಿ ಸಿಪಿಐ(ಎಂ) ಈಗ ಇದನ್ನೇ ಮಾಡಲು ನಿರ್ಧರಿಸಿದೆ” ಎಂದು ಸೀತಾರಾಮ್‍ ಯೆಚುರಿ, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ.

ಅವರು ಜೂನ್‍ 7ರಿಂದ 9 ರವರೆಗೆ ನಡೆದ ಸಿಪಿಐ(ಎಂ)ನ ಕೇಂದ್ರ ಸಮಿತಿಯ ಚರ್ಚೆಗಳು, ನಿರ್ಧಾರಗಳ ಬಗ್ಗೆ ಪತ್ರಿಕಾ ಸಮ್ಮೇಳನವನ್ನು ಉದ್ದೇಶಿಸಿ ಮಾತಾಡುತ್ತಿದ್ದರು. ಎಡಶಕ್ತಿಗಳು ಹಿಮ್ಮೆಟ್ಟುತ್ತಿಲ್ಲ, ಪ್ರತಿದಾಳಿ ನಡೆಸುತ್ತವೆ. ಇದೀಗ ಎಡಶಕ್ತಿಗಳು ಸೆಟೆದು ನಿಲ್ಲುವ ಸಮಯ, ಆಧುನಿಕ ಭಾರತದ ಮೌಲ್ಯಗಳನ್ನು ಎತ್ತಿ ಹಿಡಿಯಲು, ನಮ್ಮ ಸಂವಿಧಾನದ ಆಶ್ವಾಸನೆಗಳನ್ನು ರಕ್ಷಿಸಿಕೊಳ್ಳಲು ಮತ್ತು ಜನಗಳ ಪ್ರಜಾಪ್ರಭುತ್ವ ಹಕ್ಕುಗಳು ಹಾಗೂ ನಾಗರಿಕ ಸ್ವಾತಂತ್ರ್ಯಗಳನ್ನು ರಕ್ಷಿಸಿಕೊಳ್ಳಲು ಸೆಟೆದು ನಿಲ್ಲುವ ಸಮಯ. ಬಲಪಂಥ ಬಲಗೊಂಡಾಗ, ಎಡಪಂಥವೂ ಶಕ್ತಿಶಾಲಿಯಾಗಬೇಕಾಗುತ್ತದೆ. ಇದೀಗ ದೇಶದಲ್ಲಿನ ಹೊಸ ಧ್ರುವೀಕರಣ, ಮೆದು ಹಿಂದುತ್ವವು ಕಟ್ಟಾ ಹಿಂದುತ್ವಕ್ಕೆ ಉತ್ತರವಾಗದು, ಎಡ ಪಂಥ ಮಾತ್ರವೇ ಏಕೈಕ ಆಯ್ಕೆ ಎಂದು ಯೆಚುರಿ ಹೇಳಿದರು.

ಸಿಪಿಐ(ಎಂ) ಕೇಂದ್ರ ಸಮಿತಿ ಈ ಮೂರು ದಿನಗಳ ಸಭೆಯಲ್ಲಿ 17ನೇ ಲೋಕಸಭಾ ಚುನಾವಣೆಗಳ ಫಲಿತಾಂಶದ ಪ್ರಾಥಮಿಕ ವಿಮರ್ಶೆ ನಡೆಸಿದೆ. ಬಿಜೆಪಿ ಕಳೆದ ಐದು ವರ್ಷಗಳಲ್ಲಿ ಹರಿಯಬಿಟ್ಟಿರುವ ಬಲಪಂಥೀಯ ದಾಳಿ ಈ ಜನಾದೇಶದೊಂದಿಗೆ ಕ್ರೋಡೀಕರಣಗೊಂಡಿದೆ ಎಂದು ವಿಶ್ಲೇಷಿಸಿರುವ ಕೇಂದ್ರ ಸಮಿತಿ, ಪ್ರತಿಪಕ್ಷಗಳ ವಿಫಲತೆ, ಎಡಶಕ್ತಿಗಳ ತೀವ್ರ ಪರಾಭವದ ಪ್ರಾಥಮಿಕ ವಿಮರ್ಶೆಯನ್ನು ನಡೆಸಿತು.

ಪಕ್ಷದ ಸ್ವತಂತ್ರ ಶಕ್ತಿ ಮತ್ತು ರಾಜಕೀಯ ಮಧ್ಯಪ್ರವೇಶದ ಸಾಮರ್ಥ್ಯಗಳು ದುರ್ಬಲಗೊಳ್ಳುತ್ತಲೇ ಇವೆ ಎಂದು ಗಮನಿಸಿದ ಸಿಪಿಐ(ಎಂ) ಕೇಂದ್ರ ಸಮಿತಿ ಇಂತಹ ಒಂದು ಪ್ರವೃತ್ತಿ ಆಳಗೊಳ್ಳಲು ಕಾರಣವಾಗಿರುವ ವಿವಿಧ ಅಂಶಗಳನ್ನು ಚರ್ಚಿಸಿತು. ಮತ್ತು ಈ ಅವನತಿಯನ್ನು ತಡೆಯಲು ಹಾಗೂ ತಿರುಗುಮುರುಗುಗೊಳಿಸಲು ಪಕ್ಷವು ಕೈಗೊಳ್ಳುವ ತಕ್ಷಣದ ಸಂಘಟನಾತ್ಮಕ ಮತ್ತು ರಾಜಕೀಯ ಕ್ರಮಗಳನ್ನು ರೂಪಿಸಿತು.

ಈ ನಿರ್ಣಾಯಕ ಬಿಜೆಪಿ ವಿಜಯವು ಖಂಡಿತವಾಗಿಯೂ ಒಡ್ಡಲಿರುವ ಸವಾಲುಗಳನ್ನು ಎದುರಿಸಲು ದೇಶ ಮತ್ತು ಜನತೆ ಸಿದ್ಧರಾಗಬೇಕಾಗಿದೆ ಎಂಬ ತೀರ್ಮಾನಕ್ಕೆ ಕೇಂದ್ರ ಸಮಿತಿ ಬಂದಿದೆ. ಅದು ಇಂತಹ ನಾಲ್ಕು ಮುಖ್ಯ ಸವಾಲುಗಳನ್ನು ಗಮನಿಸಿ, ಅವನ್ನು ಎದುರಿಸುವ ಬಗೆಗಳನ್ನೂ ಗುರುತಿಸಿದೆ.

ಪಕ್ಷಕ್ಕೆ ಆಗಿರುವ ಹಿನ್ನಡೆಯಿಂದಾಗಿ ಉಂಟಾಗಿರುವ ಗಂಭೀರ ಸನ್ನಿವೇಶವನ್ನು ಎದುರಿಸಲು ಕೇಂದ್ರ ಸಮಿತಿ, ಪಕ್ಷದ ಕೊಲ್ಕತಾ ಪ್ಲೀನಂನ ಮಹತ್ವದ ನಿರ್ಣಯಗಳ ಜಾರಿಯ ವಿಮರ್ಶೆಯೂ ಸೇರಿದಂತೆ ಹಲವಾರು ಕ್ರಮಗಳನ್ನು ಮತ್ತು ಕಾರ್ಯಭಾರಗಳನ್ನು ಅಂಗೀಕರಿಸಿದೆ.

ಕೇಂದ್ರ ಸಮಿತಿಯ ಸಭೆ ಚುನಾಣಾ ಸುಧಾರಣೆಗಳ, ಅದರಲ್ಲೂ ಚುನಾವಣಾ ಆಯೋಗದ ಸುಧಾರಣೆಗಳ ಅಗತ್ಯ ಮತ್ತು ಇಲೆಕ್ಟ್ರಾನಿಕ್ ಮತಯಂತ್ರಗಳ ಬಗ್ಗೆ ಎದ್ದಿರುವ ಸಂದೇಹಗಳನ್ನೂ ಚರ್ಚಿಸಿತು.

ಚುನಾವಣೆಗಳ ನಂತರ ಮುಂಬಯಿಯಲ್ಲಿ ಖ್ಯಾತ ಜಾತ್ಯತೀತ ಚಿಂತಕ ಡಾ. ರಾಮ್‍ ಪುನಿಯಾನಿಯವರಿಗೆ ಬೆದರಿಕೆಗಳು ಬರುತ್ತಿರುವುದನ್ನು ಕೇಂದ್ರ ಸಮಿತಿ ಖಂಡಿಸಿದೆ, ಹಾಗೂ ಚುನಾವಣಾ ಫಲಿತಾಂಶಗಳು ಪ್ರಕಟವಾಗುವ ಹಿಂದಿನ ದಿನವೇ ಜಾತಿ ಕಿರುಕುಳ-ದ್ವೇ಼ಷ ಪ್ರಚಾರಕ್ಕೆ ಬಲಿಯಾದ ಸ್ನಾತಕೋತ್ತರ ವಿದ್ಯಾರ್ಥಿನಿ ಡಾ. ಪಾಯಲ್ ‍ ತಡ್ವಿ ಆತ್ಮಹತ್ಯೆಯ ಬಗ್ಗೆ ದುಃಖ ವ್ಯಕ್ತಪಡಿಸಿದೆ.

ಈ ಸಭೆಯ ನಂತರ ಪ್ರಕಟಿಸಿರುವ ಸಿಪಿಐ(ಎಂ) ಕೇಂದ್ರ ಸಮಿತಿಯ ಹೇಳಿಕೆಯ ಪೂರ್ಣ ಪಾಟವನ್ನು ಈ ಮುಂದೆ ಕೊಡಲಾಗಿದೆ:

ಲೋಕಸಭಾ ಚುನಾವಣೆಗಳ ಪ್ರಾಥಮಿಕ ಪರಾಮರ್ಶೆ

ಬಿಜೆಪಿ ವಿಜಯ:

17ನೇ ಲೋಕಸಭಾ ಚುನಾವಣೆಗಳ ತೀರ್ಪು ಬಿಜೆಪಿ ನೇತೃತ್ವದ ಎನ್‍.ಡಿ.ಎ. ಗೆ 2014ರಲ್ಲಿ ಗೆದ್ದುದಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಮತ್ತು ಹೆಚ್ಚಿನ ಮತಗಳಿಕೆಯನ್ನು ಕೊಟ್ಟಿದೆ. ಇದು ಅವರ ಪರವಾದ ಒಂದು ನಿರ್ಣಾಯಕ ಜನಾದೇಶವಾಗಿದೆ. ಬಿಜೆಪಿ ಕಳೆದ ಐದು ವರ್ಷಗಳಲ್ಲಿ ಹರಿಯಬಿಟ್ಟಿರುವ ಬಲಪಂಥೀಯ ದಾಳಿ ಈ ಜನಾದೇಶದೊಂದಿಗೆ ಕ್ರೋಡೀಕರಣಗೊಂಡಿದೆ.

ಪುಲ್ವಾಮ ಮತ್ತು ಬಾಲಾಕೋಟ್‍ ನಂತರ ಜನಗಳ ನಡುವೆ ಕಥನವನ್ನು ಕಳೆದ ಐದು ವರ್ಷಗಳಲ್ಲಿ ಎನ್.ಡಿ.ಎ. ಸರಕಾರ ಹೇರಿದ ಹತ್ತು-ಹಲವು ಜೀವನಾಧಾರದ ಪ್ರಶ್ನೆಗಳಿಂದ ಪಲ್ಲಟಗೊಳಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಸಂಕುಚಿತ ಕೋಮುವಾದಿ ರಾಷ್ಟ್ರವಾದಿ ಅಬ್ಬರದ ಹೊಸ ಕಥನಕ್ಕೆ ಹಲವಾರು ಅಂಶಗಳ ಮೂಲಕ ಮೋದಿಯ ವ್ಯಕ್ತಿತ್ವವನ್ನು ಕಟ್ಟಿದ್ದು ಇದಕ್ಕೆ ನೆರವಾಯಿತು. ಮಾಧ್ಯಮಗಳ ವಿಭಾಗಗಳು ಈ ಪ್ರಾಜೆಕ್ಟಿನಲ್ಲಿ ಪಾಲುದಾರರಾದವು. ಹಿಂದೆಂದೂ ಕಾಣದಂತಹ ಹಣಬಲದ ಬಳಕೆ ಈ ಚುನಾವಣೆಗಳಲ್ಲಿ ಕಂಡು ಬಂತು. ಚುನಾವಣಾ ಬಾಂಡುಗಳ ಮೂಲಕ ಅಗಾಧ ಮೊತ್ತಗಳು ಬಿಜೆಪಿಗೆ ವರ್ಗಾಯಿಸಲ್ಪಟ್ಟವು. ಚುನಾವಣಾ ಆಯೋಗದ ಪಾತ್ರವೂ ತನ್ನ ಕೊಡುಗೆ ನೀಡಿತು.

ಪ್ರತಿಪಕ್ಷಗಳು:

ಹೆಚ್ಚಿನ ಪ್ರತಿಪಕ್ಷಗಳು, ತಮಿಳುನಾಡು, ಆಂಧ್ರಪ್ರದೇಶ, ಇನ್ನು ಕೆಲವು ರಾಜ್ಯಗಳನ್ನು ಬಿಟ್ಟರೆ ಬೇರೆಡೆಗಳಲ್ಲಿ ದೊಡ್ಡ ನಷ್ಟವನ್ನು ಕಂಡಿವೆ.

ಪ್ರತಿಪಕ್ಷಗಳು, ನಿರ್ದಿಷ್ಟವಾಗಿ ಕಾಂಗ್ರೆಸ್‍, ಚುನಾವಣೆಗಳ ಮೊದಲು ಮುಂದಿಟ್ಟ ಜಾತ್ಯತೀತ ಪ್ರತಿಪಕ್ಷಗಳ ಐಕ್ಯತೆಯನ್ನು ಪ್ರಸ್ತುತಪಡಿಸುವಲ್ಲಿ ವಿಫಲವಾದವು. ಕೋಮುವಾದಿ ದಾಳಿಗೆ ಎದುರಾಗಿ ಜಾತ್ಯತೀತತೆಯನ್ನು ರಕ್ಷಿಸಿಕೊಳ್ಳುವ ಒಂದು ಪ್ರಚಾರಾಂದೋಲನವನ್ನು ನಡೆಸಲಿಲ್ಲ. ಕಟ್ಟಾ ಹಿಂದುತ್ವಕ್ಕೆ ಮೆದು ಹಿಂದುತ್ವ ಉತ್ತರವಲ್ಲ. ಹಿಂದುತ್ವ ಮತ್ತು ಜಾತ್ಯತೀತತೆಯ ನಡುವಿನ ಸೈದ್ಧಾಂತಿಕ ಸಮರವನ್ನು ಶಕ್ತಿಯುತವಾಗಿ ನಡೆಸಲಿಲ್ಲ.

ಸಿಪಿಐ(ಎಂ) ಮತ್ತು ಎಡಶಕ್ತಿಗಳಿಗೆ ತೀವ್ರ ಪರಾಭವ:

ಸಿಪಿಐ(ಎಂ) ಮತ್ತು ಎಡಶಕ್ತಿಗಳು ಒಂದು ತೀವ್ರ ಹಿನ್ನಡೆಯನ್ನು, ವಿಶೇಷವಾಗಿ ಕೇರಳ, ಪಶ್ಚಿಮ ಬಂಗಾಲ ಮತ್ತು ತ್ರಿಪುರಾದಲ್ಲಿನ ತಮ್ಮ ಬಲಿಷ್ಟ ನೆಲೆಗಳಲ್ಲಿ, ಅನುಭವಿಸಿವೆ.

ಪಶ್ಚಿಮ ಬಂಗಾಲ ಮತ್ತು ತ್ರಿಪುರಾ ಈ ಎರಡರಲ್ಲೂ ಚುನಾವಣೆಗಳು ತೀವ್ರ ಭಯೋತ್ಪಾದನೆ ಮತ್ತು ಹಿಂಸಾಚಾರದ ವಾತಾವರಣದಲ್ಲಿ ನಡೆದವು. ಇಂತಹ ಹಿಂಸಾಚಾರದಲ್ಲಿ ಪಶ್ಚಿಮ ಬಂಗಾಲದಲ್ಲಿ ಐವರು ಮತ್ತು ತ್ರಿಪುರಾದಲ್ಲಿ ಒಬ್ಬರು ಸಿಪಿಐ(ಎಂ) ಕಾರ್ಯಕರ್ತರು ಜೀವ ಕಳಕೊಂಡಿದ್ದಾರೆ. ತ್ರಿಪುರಾ ಪಶ್ಚಿಮ ಕ್ಷೇತ್ರ ಮತ್ತು ಪಶ್ಚಿಮ ಬಂಗಾಲದ ಡೈಮಂಡ್‍ ಹಾರ್ಬರ್‍ ಕ್ಷೇತ್ರದಲ್ಲಿ ಬಹುಪಾಲು ಮತಗಟ್ಟೆಗಳಲ್ಲಿ ಚುನಾವಣಾ ಮೋಸ ನಡೆದಿದೆ, ಮತ್ತು ಇತರ ಹಲವು ಕ್ಷೇತ್ರಗಳಲ್ಲಿ ದೂಷಿತಗೊಂಡಿದೆ. ಚುನಾವಣಾ ಆಯೋಗಕ್ಕೆ “ಮುಕ್ತ ಮತ್ತು ನ್ಯಾಯಯುತ ಮತದಾನ”ಗಳನ್ನು ನಡೆಸುವ ತನ್ನ ಆಶ್ವಾಸನೆಯನ್ನು ಜಾರಿಗೊಳಿಸಲು ಆಗಲಿಲ್ಲ.

ಈ ಮೂರು ರಾಜ್ಯಸಮಿತಿಗಳು ನಡೆಸಿರುವ ಪ್ರಾಥಮಿಕ ವಿಮರ್ಶೆಗಳನ್ನು ಕೇಂದ್ರ ಸಮಿತಿ ಚರ್ಚಿಸಿತು. ಒಂದು ವಿವರವಾದ ಮತಗಟ್ಟೆವಾರು ವಿಮರ್ಶೆ ನಡೆಯುತ್ತಿದ್ದು, ಅದರ ಆಧಾರದಲ್ಲಿ ಅಂತಿಮ ಅನುಭವಗಳ ಮೌಲ್ಯಮಾಪನ ಮಾಡಲಾಗುವುದು.

ಈ ಚುನಾವಣೆಗಳಲ್ಲಿ, ಬಿಜೆಪಿ ಮತ್ತು ಅದರ ಮಿತ್ರರನ್ನು ಸೋಲಿಸಬೇಕು, ಸಂಸತ್ತಿನಲ್ಲಿ ಎಡಪಕ್ಷಗಳ ಬಲವನ್ನು ಹೆಚ್ಚಿಸಬೇಕು ಮತ್ತು ಕೇಂದ್ರದಲ್ಲಿ ಒಂದು ಪರ್ಯಾಯ ಜಾತ್ಯತಿತ ಸರಕಾರವನ್ನು ಸ್ಥಾಪಿಸಲು ಅನುವು ಮಾಡಿಕೊಡಬೇಕು ಎಂದು ಸಿಪಿಐ(ಎಂ) ಕರೆ ನೀಡಿತ್ತು. ಈ ಧ್ಯೇಯೋದ್ದೇಶಗಳನ್ನು ಈ ಜನಾದೇಶ ನಿರಾಕರಿಸಿದೆ.

ಕೇರಳದಲ್ಲಿ ಮತದಾರರು ಒಂದು ಪರ್ಯಾಯ ಜಾತ್ಯತೀತ ಸರಕಾರವನ್ನು ರಚಿಸುವಲ್ಲಿ ಕಾಂಗ್ರೆಸ್‍ ಗೇ ಸಾಧ್ಯತೆ ಹೆಚ್ಚು ಎಂದು ಭಾವಿಸಿದರು. ಇದರ ಫಲಿತಾಂಶವಾಗಿ ಜಾತ್ಯತೀತ ಒಲವಿನ ಜನಗಳು ಮತ್ತು ಅಲ್ಪಸಂಖ್ಯಾತರು ಅವರಿಗೆ ಮತನೀಡುವಂತಾಯಿತು. ಶಬರಿಮಲೆ ಕುರಿತ ಸುಪ್ರಿಂ ಕೋರ್ಟ್‍ ತೀರ್ಪನ್ನು ಜಾರಿಗೊಳಿಸಲು ಬದ್ಧವಾಗಿದ್ದ ಎಲ್‍.ಡಿ. ಎಫ್‍. ಸರಕಾರದ ಸರಿಯಾದ ನಿಲುವನ್ನು ಕುರಿತಂತೆ ಬಿಜೆಪಿ ಮತ್ತು ಯುಡಿಎಫ್ ಆಸ್ತಿಕ ಜನವಿಭಾಗಗಳಲ್ಲಿ ಹಲವರಲ್ಲಿ ತಪ್ಪು ಕಲ್ಪನೆಗಳನ್ನು ಸೃಷ್ಟಿಸಿದವು. ಈ ವಿಭಾಗಗಳನ್ನು ಮತ್ತೆ ನಮ್ಮ ತೆಕ್ಕೆಗೆ ತರಲು ಪಕ್ಷವು ಸರ್ವ ಪ್ರಯತ್ನಗಳನ್ನು ನಡೆಸುತ್ತದೆ.

ಪಶ್ಚಿಮ ಬಂಗಾಲದಲ್ಲಿ ಚುನಾವಣೆಗಳು ಅತ್ಯಂತ ಧ್ರುವೀಕೃತ ವಾತಾವರಣದಲ್ಲಿ ನಡೆದಿವೆ. ಮಾಧ್ಯಮ ಒಂದು ಅವಳಿ ಕಥನವನ್ನು ಕಟ್ಟಿ ಟಿಎಂಸಿ ಮತ್ತು ಬಿಜೆಪಿ ನಡುವೆ ಇಂತಹ ಧ್ರುವೀಕರಣದಲ್ಲಿ ನೆರವಾಗುವಲ್ಲಿ ಒಂದು ದೊಡ್ಡ ಪಾತ್ರವನ್ನು ವಹಿಸಿತು. ಕೋಮುವಾದ ಪ್ರೇರಿತ ಪ್ರಚಾರವು ಮತದಾರರನ್ನು ಮತ್ತಷ್ಟು ಧ್ರುವೀಕರಿಸಿತು. ಟಿಎಂಸಿ ವಿರುದ್ಧ ಅಧಿಕಾರಸ್ಥ-ವಿರೋಧಿ ಭಾವನೆ ಬಹಳ ಗಟ್ಟಿಯಾಗಿತ್ತು. ಅದಕ್ಕೆ ಸಿಪಿಐ(ಎಂ) ಮತ್ತು ಎಡಶಕ್ತಿಗಳು ಪರ್ಯಾಯ ಎಂದು ಮತದಾರರು ಕಾಣಲಿಲ್ಲ, ಇದರಿಂದಾಗಿ ನಮ್ಮ ಪಾರಂಪರಿಕ ಬೆಂಬಲಿಗರಲ್ಲಿ ಒಂದು ವಿಭಾಗ ಪಲ್ಲಟಗೊಳ್ಳುವಂತಾಯಿತು. ಬಜೆಪಿ-ವಿರೋಧಿ, ಟಿಎಂಸಿ-ವಿರೋಧಿ ಮತಗಳನ್ನು ಗರಿಷ್ಟ ಪ್ರಮಾಣದಲ್ಲಿ ಕ್ರೋಡೀಕರಿಸುವ ಎಡಪಕ್ಷಗಳ ಪ್ರಸ್ತಾವವನ್ನು ಸ್ವೀಕರಿಸಲು ಕಾಂಗ್ರೆಸ್‍ ನಿರಾಕರಿಸಿದ್ದು ಈ ಅವಳಿ ಕಥನವನ್ನು ಗಟ್ಟಿಗೊಳಿಸಿತು.

ತ್ರಿಪುರಾದಲ್ಲಿ ಎರಡರಲ್ಲಿ ಒಂದು ಸ್ಥಾನದಲ್ಲಿ ಸುಮಾರಾಗಿ ಚುನಾವಣಾ ಮೋಸವೇ ನಡೆದಿದೆ. ಮೀಸಲು ಎಸ್‍.ಟಿ. ಕ್ಷೇತ್ರವನ್ನು ಬಿಜೆಪಿ ಗೆದ್ದಿದೆ, ಕಾಂಗ್ರೆಸ್‍ ಎರಡನೇ ಸ್ಥಾನ ಪಡೆದಿದೆ.

ಈ ಎರಡೂ ರಾಜ್ಯಗಳಲ್ಲಿ ಪಕ್ಷದ ಸಮಿತಿಗಳು ನಮ್ಮ ಪಾರಂಪರಿಕ ಬೆಂಬಲ ನೆಲೆ ಕುಗ್ಗುತ್ತಿರುವ ಬಗ್ಗೆ ಪ್ರಾಮಾಣಿಕ ಮೌಲ್ಯಮಾಪನ ನಡೆಸುತ್ತಿವೆ ಮತ್ತು ಈ ವಿಭಾಗಗಳನ್ನು ಮತ್ತೆ ನಮ್ಮ ತೆಕ್ಕೆಗೆ ತರಲು ತುರ್ತು ಕ್ರಮಗಳನ್ನು ರೂಪಿಸಲಾಗುವುದು.

ಈ ಬಲಿಷ್ಟ ನೆಲೆಗಳ ಹೊರಗೆ, ಸಿಪಿಐ(ಎಂ) ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಚುನಾವಣಾ ಮೈತ್ರಿಕೂಟದ ಭಾಗವಾಗಿ ಸ್ಪರ್ಧಿಸಿದ್ದ ಎರಡೂ ಸ್ಥಾನಗಳನ್ನು ಗೆದ್ದುಕೊಂಡಿದೆ. ಬೇರೆಲ್ಲ ರಾಜ್ಯಗಳಲ್ಲಿ ಸಿಪಿಐ(ಎಂ) ಸ್ವತಂತ್ರವಾಗಿ ಸ್ಪರ್ಧಿಸಿತ್ತು. ಈ ಸ್ಥಾನಗಳಲ್ಲಿ, ಮಹಾರಾಷ್ಟ್ರದ ದಿಂಡೋರಿ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ 1,09,570 ಮತಗಳನ್ನು ಪಡೆದಿದೆ.

ಒಡಿಶಾ ವಿಧಾನಸಭೆಯ ಚುನಾವಣೆಗಳಲ್ಲಿ ಸಿಪಿಐ(ಎಂ) ತನ್ನ ಬೊನೈ ಕ್ಷೇತ್ರವನ್ನು, ಕಳೆದ ಬಾರಿಗಿಂತ 20,000 ಹೆಚ್ಚು ಮತಗಳನ್ನು (34.67%) ಗಳಿಸಿ ಉಳಿಸಿಕೊಂಡಿದೆ.

ಪಕ್ಷದ ಸ್ವತಂತ್ರ ಶಕ್ತಿ ಮತ್ತು ರಾಜಕೀಯ ಮಧ್ಯಪ್ರವೇಶದ ಸಾಮರ್ಥ್ಯಗಳು ದುರ್ಬಲಗೊಳ್ಳುತ್ತಲೇ ಇವೆ ಎಂದು ಕೇಂದ್ರ ಸಮಿತಿ ಗಮನಿಸಿತು. ಇಂತಹ ಒಂದು ಪ್ರವೃತ್ತಿ ಆಳಗೊಳ್ಳಲು ಕಾರಣವಾಗಿರುವ ವಿವಿಧ ಅಂಶಗಳನ್ನು ಕೇಂದ್ರ ಸಮಿತಿ ಚರ್ಚಿಸಿತು. ಮತ್ತು ಈ ಅವನತಿಯನ್ನು ತಡೆಯಲು ಹಾಗೂ ತಿರುಗುಮುರುಗುಗೊಳಿಸಲು ಪಕ್ಷವು ಕೈಗೊಳ್ಳುವ ತಕ್ಷಣದ ಸಂಘಟನಾತ್ಮಕ ಮತ್ತು ರಾಜಕೀಯ ಕ್ರಮಗಳನ್ನು ರೂಪಿಸಿತು.

ಚುನಾವಣೆಗಳ ನಂತರದ ಸವಾಲುಗಳು:

ಈ ನಿರ್ಣಾಯಕ ಬಿಜೆಪಿ ವಿಜಯವು ಖಂಡಿತವಾಗಿಯೂ ಒಡ್ಡಲಿರುವ ಸವಾಲುಗಳನ್ನು ಎದುರಿಸಲು ದೇಶ ಮತ್ತು ಜನತೆ ಸಿದ್ಧರಾಗಬೇಕಾಗಿದೆ ಎಂಬ ತೀರ್ಮಾನಕ್ಕೆ ಕೇಂದ್ರ ಸಮಿತಿ ಬಂದಿದೆ. ಕೇಂದ್ರ ಸಮಿತಿ ಇಂತಹ ನಾಲ್ಕು ಸವಾಲುಗಳನ್ನು ಗಮನಿಸಿದೆ.

ಬಿಜೆಪಿ ಈ ನಿರ್ಣಾಯಕ ವಿಜಯವನ್ನು ಅಭೂತಪೂರ್ವ ಹಣಬಲ ಮತ್ತು ಅಂತರ್ರಾಷ್ಟ್ರೀಯ ಹಾಗೂ ದೇಶೀ ಕಾರ್ಪೊರೇಟ್‍ಗಳ ಸಂಪೂರ್ಣ ಬೆಂಬಲದಿಂದ ಗೆದ್ದಿದೆ. ದೊಡ್ಡ ವ್ಯವಹಾರಸ್ಥರು ಮತ್ತು ಶ್ರೀಮಂತರಿಗೆ ಅನುಕೂಲಕರವಾದ ಜನ-ವಿರೋಧಿ ಆರ್ಥಿಕ ಸುಧಾರಣೆಗಳ ದಿಕ್ಪಥವನ್ನು ಅದು ಇನ್ನಷ್ಟು ತೀವ್ರಗೊಳಿಸಲು ಬಹುಪಾಲು ಜನತೆಯ ಮೇಲೆ ಮತ್ತಷ್ಟು ಹೆಚ್ಚಿನ ಸಂಕಟಗಳನ್ನು ಖಂಡಿತವಾಗಿಯೂ ಹೇರುತ್ತದೆ. ಇಂತಹ ಆರ್ಥಿಕ ಹೊಡೆತಗಳ ವಿರುದ್ಧ ಹೋರಾಟಗಳಲ್ಲಿ ಗರಿಷ್ಟ ಜನವಿಭಾಗಗಳನ್ನು ಅಣಿನೆರೆಸುವಲ್ಲಿ ಪಕ್ಷವು ನೇತೃತ್ವ ನೀಡುತ್ತದೆ.

ಹಿಂದುತ್ವ ಕೋಮುವಾದಿ ಧ್ರುವೀಕರಣದ ಕ್ರೋಡೀಕರಣದಿಂದಾಗಿ ಧಾರ್ಮಿಕ ಮತ್ತು ಭಾಷಿಕ ಅಲ್ಪಸಂಖ್ಯಾತರ ಹಕ್ಕುಗಳ ಮೇಲೆ ಹೆಚ್ಚೆಚ್ಚು ಹಲ್ಲೆಗಳು ನಡೆಯಲಿವೆ, ಇದರಿಂದಾಗಿ, ಈ ಜನವಿಭಾಗಗಳ ಭದ್ರತೆ ಮತ್ತು ಜೀವನಾಧಾರ ಕುರಿತ ಆತಂಕಗಳು ಇನ್ನಷ್ಟು ಹದಗೆಡಲಿವೆ. ನಮ್ಮ ಸಂವಿಧಾನದಲ್ಲಿ ಪ್ರತಿಷ್ಟಾಪಿಸಿರುವ ಜಾತ್ಯತೀತತೆಯನ್ನು ರಕ್ಷಿಸುವ ಮತ್ತು ಬಲಪಡಿಸುವ ಕೆಲಸವನ್ನು ಪಕ್ಷವು ಈ ಹೋರಾಟಗಳಲ್ಲಿ ಸಾಕಷ್ಟು ವಿಶಾಲ ಪ್ರಮಾಣದಲ್ಲಿ ಜನವಿಭಾಗಗಳನ್ನು ಸೆಳೆದುಕೊಂಡು ಕೈಗೆತ್ತಿಕೊಳ್ಳುತ್ತದೆ.

ಕಳೆದ ಐದು ವರ್ಷಗಳಲ್ಲಿ ಎಲ್ಲ ಸಂವಿಧಾನಿಕ ಅಧಿಕಾರ ಪಡೆದಿರುವ ಸಂಸ್ಥೆಗಳಲ್ಲಿ ನಡೆದಿರುವ ಆರೆಸ್ಸೆಸ್‍ ನ ನುಸುಳಿಕೆ ಇನ್ನಷ್ಟು ತೀವ್ರಗೊಳ್ಳುವುದು ಖಂಡಿತ. ಇದು, ಸಂವಿಧಾನಿಕ ಗಣತಂತ್ರವನ್ನು ಆರೆಸ್ಸೆಸ್‍ ನ ಸೈದ್ಧಾಂತಿಕ ಯೋಜನೆಯಾದ ‘ಹಿಂದೂರಾಷ್ಟ್ರ’ವಾಗಿ ಪರಿವರ್ತಿಸಲು ಅನುವು ಮಾಡಿಕೊಳ್ಳುವುದಕ್ಕಾಗಿ, ಇಂತಹ ಸಂವಿಧಾನಿಕ ಪ್ರಾಧಿಕಾರಗಳನ್ನು ಶಿಥಿಲಗೊಳಿಸುವ ದಿಕ್ಕಿನಲ್ಲಿ ಸಾಗಲಿದೆ. ಎಲ್ಲ ಸಂವಿಧಾನಿಕ ಪ್ರಾಧಿಕಾರಗಳನ್ನು ರಕ್ಷಿಸುವ ಮತ್ತು ಬಲಪಡಿಸುವ ಕೆಲಸವನ್ನು ಸಿಪಿಐ(ಎಂ) ಈ ಹೋರಾಟಗಳಲ್ಲಿ ಜತೆಗೂಡಲು ಸಿದ್ಧವಿರುವ ಇತರ ಎಲ್ಲ ಶಕ್ತಿಗಳೊಂದಿಗೆ ಪ್ರತಿಪಾದಿಸುತ್ತದೆ.

ಬಿಜೆಪಿಯ ವಿಜಯವು ಭಾರತದಲ್ಲಿ ಒಂದು “ಭದ್ರತಾ’ ಪ್ರಭುತ್ವವನ್ನು ಸ್ಥಾಪಿಸುವ ಅಗತ್ಯವಿದೆಯೆಂಬುದರತ್ತ ಗಮನ ಕೇಂದ್ರೀಕರಿಸಿತ್ತು. ಇದರಿಂದಾಗಿ ವ್ಯಕ್ತಿಗಳ ಹಕ್ಕುಗಳನ್ನು, ನಿರ್ದಿಷ್ಟವಾಗಿ ಭಿನ್ನಾಭಿಪ್ರಾಯದ ಹಕ್ಕನ್ನು ತೀವ್ರವಾಗಿ ಮೊಟಕುಗೊಳಿಸಲಾಗುತ್ತದೆ. ಈಗಾಗಲೇ ಅನಿಷ್ಟಕಾರಿ ಸಂಕೇತಗಳು ಕಾಣುತ್ತಿವೆ. ಒಂದಿಲ್ಲೊಂದು ನೆಪದಲ್ಲಿ ದಲಿತರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಖಾಸಗಿ ಪಡೆಗಳ ಹಲ್ಲೆಗಳು ತೀವ್ರಗೊಳ್ಳಲಿವೆ. ದುಡಿಯುವ ಜನಗಳ ಮತ್ತು ಧಾರ್ಮಿಕ, ಭಾಷಿಕ ಅಲ್ಪಸಂಖ್ಯಾತರ ಹಕ್ಕುಗಳು ದಾಳಿಗೆ ಒಳಗಾಗಲಿವೆ, ಅವರ ಬೇಟೆ ನಡೆಯಲಿದೆ. ಈ ಸವಾಲುಗಳನ್ನು ನೇರವಾಗಿ ಎದುರಿಸಲು, ಪ್ರಜಾಪ್ರಭುತ್ವ ಮತ್ತು ನಾಗರಿಕ ಸ್ವಾತಂತ್ರ್ಯಗಳನ್ನು ನೆಚ್ಚಿಕೊಂಡಿರುವ ಸಾಧ್ಯವಾದಷ್ಟು ವಿಶಾಲವಾದ ಜನವಿಭಾಗಗಳನ್ನು ಅಣಿನೆರೆಸುವಲ್ಲಿ ಸಿಪಿಐ(ಎಂ) ನೇತೃತ್ವ ವಹಿಸುತ್ತದೆ.

ಕಾರ್ಯಭಾರಗಳು:

ಪಕ್ಷಕ್ಕೆ ಈ ಹಿನ್ನಡೆಯಿಂದಾಗಿ ಉಂಟಾಗಿರುವ ಗಂಭೀರ ಸನ್ನಿವೇಶವನ್ನು ಎದುರಿಸಲು ಕೇಂದ್ರ ಸಮಿತಿ ಹಲವಾರು ಕ್ರಮಗಳನ್ನು ಮತ್ತು ಕಾರ್ಯಭಾರಗಳನ್ನು ಅಂಗೀಕರಿಸಿದೆ.

ಜನಗಳೊಂದಿಗೆ ಸಂಪರ್ಕವನ್ನು ಆಳಗೊಳಿಸಲು ಮತ್ತು ವಿವಿಧ ರಂಗಗಳ ಚಟುವಟಿಕೆಗಳನ್ನು ಬಲಪಡಿಸಲು ನಿರ್ದಿಷ್ಟ ಕ್ರಮಗಳನ್ನು ನಿರ್ಧರಿಸಲಾಗಿದೆ.

ಜೀವನಾಧಾರದ ಪ್ರಶ್ನೆಗಳನ್ನು ಕುರಿತ ಹೋರಾಟಗಳನ್ನು, ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಬುಡಕಟ್ಟುಗಳು, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಸಾಮಾಜಿಕ ದಮನದ ವಿರುದ್ಧ ಹೋರಾಟಗಳೊಂದಿಗೆ ಸಮಗ್ರೀಕರಿಸಲು ನಿರ್ದಿಷ್ಟ ಗಮನವನ್ನು ಕೊಡಲಾಗುವುದು.

ಪಕ್ಷವು 2015ರಲ್ಲಿ ಕೊಲ್ಕತಾ ಪ್ಲೀನಂನಲ್ಲಿ ಅಂಗೀಕರಿಸಿದ ಪಕ್ಷದ ಸಂಘಟನೆ ಮತ್ತು ಅದರ ಕಾರ್ಯವೈಖರಿ ಕುರಿತ ಮಹತ್ವದ ನಿರ್ಣಯಗಳ ಜಾರಿಯ ಒಂದು ಪರಾಮರ್ಶೆಯನ್ನು ನಡೆಸುತ್ತದೆ. ಆಗಸ್ಟ್ ಕೊನೆಯ ವೇಳೆಗೆ ರಾಜ್ಯಗಳು ಈ ಪರಾಮರ್ಶೆಯನ್ನು ಪೂರ್ಣಗೊಳಿಸಲಿದ್ದು, ಇದರ ಆಧಾರದಲ್ಲಿ ಪಕ್ಷವನ್ನು ಬಲಿಷ್ಟಗೊಳಿಸುವ ಮತ್ತು ನಮ್ಮ ಕಾರ್ಯಕರ್ತರಲ್ಲಿ ಹುರುಪು ತುಂಬುವ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು.

ಈ ಚುನಾವಣೆಗಳ ಅನುಭವವು ವ್ಯಾಪಕವಾದ ಚುನಾವಣಾ ಸುಧಾರಣೆಗಳ ಅಗತ್ಯವನ್ನು, ಚುನಾವಣಾ ಆಯೋಗವನ್ನು ಸುಧಾರಿಸಬೇಕಾದ ತುರ್ತನ್ನು ತೋರಿದೆ. ಚುನಾವಣಾ ಆಯುಕ್ತರುಗಳನ್ನು ತತ್ಕಾಲೀನ ಸರಕಾರ ನೇಮಿಸುವ ಬದಲು ಭಾರತದ ರಾಷ್ಟ್ರಪತಿಗಳ ನೇತೃತ್ವದ ಒಂದು ವ್ಯವಸ್ಥೆಯ ಮೂಲಕ ನೇಮಿಸುವಂತೆ ಮಾಡಲು, ಇದನ್ನು ಒಪ್ಪುವ ಎಲ್ಲ ರಾಜಕಿಯ ಅಭಿಪ್ರಾಯದವರನ್ನು ಸಿಪಿಐ(ಎಂ) ಅಣಿನೆರೆಸುತ್ತದೆ.

ಇಲೆಕ್ಟ್ರಾನಿಕ್ ಮತಯಂತ್ರ(ಇವಿಎಂ)ಗಳ ತಟಸ್ಥತೆಯ ಕುರಿತಂತೆ ಇರುವ ವಿವಿಧ ದೂರುಗಳು ಮತ್ತು ಈ ಯಂತ್ರಗಳಲ್ಲಿ ಕೈಯಾಡಿಸುವ ಸಾಧ್ಯತೆಯ ಬಗ್ಗೆ ಎದ್ದಿರುವ ಸಂದೇಹಗಳನ್ನು ಕುರಿತ ವರದಿಗಳ ಒಂದು ಅಧ್ಯಯನವನ್ನು ಸಿಪಿಐ(ಎಂ) ನಡೆಸುತ್ತದೆ ಮತ್ತು ಇತರ ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚಿಸಿ ಮುಂದಿನ ಕ್ರಮಗಳನ್ನು ನಿರ್ಧರಿಸುತ್ತದೆ.

ಜಾತ್ಯತೀತ ಚಿಂತಕ ಡಾ. ರಾಮ್‍ ಪುನಿಯಾನಿಯವರಿಗೆ ಚುನಾವಣೆಗಳ ನಂತರ ಬೆದರಿಕೆಯ ಕರೆಗಳನ್ನು ಮಾಡಿರುವುದನ್ನು ಕೇಂದ್ರ ಸಮಿತಿ ಖಂಡಿಸಿದೆ.

ಒಬ್ಬ ಯುವ ಪರಿಶಿಷ್ಟ ಬುಡಕಟ್ಟಿನ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿ ಡಾ. ಪಾಯಲ್‍ ತಡ್ವಿಯ ಆತ್ಮಹತ್ಯೆಯ ಬಗ್ಗೆ ಕೇಂದ್ರ ಸಮಿತಿ ತನ್ನ ದುಃಖವನ್ನು ವ್ಯಕ್ತಪಡಿಸಿದೆ. ಜಾತಿ ಕಿರುಕುಳಗಳು ಆಕೆಯನ್ನು ಆತ್ಮಹತ್ಯೆಯತ್ತ ತಳ್ಳಿದವು. ಮಹಾರಾಷ್ಟ್ರ ರಾಜ್ಯ ಸರಕಾರ ಅಪರಾಧಿಗಳ ವಿರುದ್ಧ ಮತ್ತು ಇಂತಹ ದ್ವೇಷ ಪ್ರಚಾರಗಳನ್ನು ಹುಟ್ಟಿಹಾಕುವವರ ವಿರುದ್ಧ ದೃಢವಾದ ಕ್ರಮವನ್ನು ಕೈಗೊಳ್ಳಬೇಕು.

Leave a Reply

Your email address will not be published. Required fields are marked *