ಎನ್‌ ಆರ್‌ ಸಿ ದಾಖಲೆ ಪಟ್ಟಿಯ ಮರು ದೃಢೀಕರಣದ ಬಿಜೆಪಿ ಬೇಡಿಕೆ ದುರುದ್ದೇಶಪೂರಿತ

ಕೇಂದ್ರ ಸರಕಾರ ಮತ್ತು ಅಸ್ಸಾಂ ರಾಜ್ಯ ಸರಕಾರ ಜುಲೈ ೩೦, ೨೦೧೮ರಂದು ಪ್ರಕಟಿಸಿದ ರಾಷ್ಟ್ರೀಯ ಪೌರತ್ವ ದಾಖಲೆ (ಎನ್‌ ಆರ್‌ ಸಿ) ಯಲ್ಲಿ ಸೇರಿಸಲ್ಪಟ್ಟ ಹೆಸರುಗಳ ಸ್ಯಾಂಪಲ್ ಮರು-ದೃಢೀಕರಣ ನಡೆಸಬೇಕು ಎಂದು ಸುಪ್ರಿಂ ಕೋರ್ಟಿಗೆ ಅರ್ಜಿ ಹಾಕಿವೆ. ಇದಕ್ಕಾಗಿ ಎನ್‌ಆರ್‌ಸಿ ಪಟ್ಟಿಯ ಅಂತಿಮ ಪ್ರಕಟಣೆಯ ಕೊನೆಯ ದಿನಾಂಕವನ್ನು ಜುಲೈ 31 ರಿಂದ ಆಚೆಗೆ ವಿಸ್ತರಿಸಬೇಕು ಎಂದು ಅವು ಬಯಸಿವೆ.

ಕೇಂದ್ರ ಮತ್ತು ಅಸ್ಸಾಂ ರಾಜ್ಯಸರಕಾರ ಬಾಂಗ್ಲಾದೇಶದೊಂದಿಗೆ ಗಡಿ ಹೊಂದಿರುವ ಜಿಲ್ಲೆಗಳಲ್ಲಿ 20% ಹೆಸರುಗಳ ಮತ್ತು ಇತರೆಡೆಗಳಲ್ಲಿ ೧೦% ಹೆಸರುಗಳ ಮರು ದೃಢೀಕರಣ ಕೋರಿವೆ.

ಸಿಪಿಐ(ಎಂ) ಪೊಲಿಟ್‌ ಬ್ಯುರೊ ಈ ಮತ್ತೊಂದು ಸುತ್ತಿನ ದೃಢೀಕರಣವನ್ನು ಪಕ್ಷ ವಿರೋಧಿಸುವುದಾಗಿ ಹೇಳಿದೆ. ಲಕ್ಷಾಂತರ ನಾಗರಿಕರು ಈಗಾಗಲೆ ಮತ್ತೆ-ಮತ್ತೆ ವಿಚಾರಣೆಗಳು ಮತ್ತು ದಾಖಲೆಗಳ ಸಲ್ಲಿಕೆಗಾಗಿ ಬಹಳಷ್ಟು ಹಣ ಮತ್ತು ಸಮಯವನ್ನು ವ್ಯಯ ಮಾಡಿದ್ದಾರೆ. ಈ ಮರು-ದೃಢೀಕರಣ  ಇವರ ಬವಣೆಗಳನ್ನು ಮುಂದುವರೆಸುತ್ತದೆ, ಇನ್ನಷ್ಟು ಕಿರುಕುಳಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಅದು ಹೇಳಿದೆ.

ಜುಲೈ 31ರ ಅಂತಿಮ ಗಡುವಿನ ಸ್ವಲ್ಪವೇ ಮೊದಲು ಇದ್ದಕ್ಕಿದ್ದಂತೆ ಬಂದಿರುವ ಈ ಬೇಡಿಕೆ ಬಿಜೆಪಿಯ ದುರುದ್ದೇಶಪೂರಿತ ಅಜೆಂಡಾದಂತೆ ಕಾಣುತ್ತದೆ. ಅದು ಧಾರ್ಮಿಕ ಸಂಯೋಜನೆಯ ಆಧಾರದಲ್ಲಿ ಪೌರತ್ವವನ್ನು ಗುರುತಿಸುವ ಪ್ರಯತ್ನ ನಡೆಸಿದೆ.

ಎನ್ ಆರ್‌ ಸಿಗೆ ಸಂಬಂಧಪಟ್ಟ ಸಮಸ್ಯೆಗಳು ಬೇರೆಯೇ ಆಗಿವೆ. ತಪ್ಪಾಗಿ ಕೈಬಿಟ್ಟವರಿಗೆ ನ್ಯಾಯ ಒದಗಿಸಲು ಒಂದು ತ್ವರಿತ ಕಾನೂನು ಪ್ರಕ್ರಿಯೆ ಇರುತ್ತದೆಯೇ? ಎನ್ ಆರ್‌ ಸಿ ಯಲ್ಲಿ ಸೇರಿಸದಿರುವ ಲಕ್ಷಾಂತರ ಮಂದಿಯ ಗತಿಯೇನಾಗುತ್ತದೆ, ಅವರ ಸ್ಥಾನಮಾನವೇನಾಗುತ್ತದೆ ಇತ್ಯಾದಿ ಪ್ರಶ್ನೆಗಳಿವೆ.

ಈ ಎನ್‌ ಆರ್‌ ಸಿ ಪ್ರಕ್ರಿಯೆಯನ್ನು ಆಂಭಿಸಿರುವ ಮತ್ತು ಇದರ ಉಸ್ತುವಾರಿ ಮಾಡುತ್ತಿರುವ ಸುಪ್ರಿಂ ಕೋರ್ಟ್ ಈ ಪ್ರಶ್ನೆಗಳ ಬಗ್ಗೆ ಪೂರ್ಣ ಜವಾಬ್ದಾರಿಯನ್ನು ವಹಿಸಬೇಕಾಗುತ್ತದೆ ಎಂದಿರುವ ಸಿಪಿಐ(ಎಂ) ಪೊಲಿಟ್‌ ಬ್ಯುರೊ ಭಾರತೀಯ ನಾಗರಿಕತ್ವ ಮತ್ತು ನಾಗರಿಕರ ಮೂಲ ಹಕ್ಕುಗಳನ್ನು ಕುರಿತ ಮೂಲಭೂತ ವಿಷಯಗಳು ಪಣಕ್ಕೊಡ್ಡಲ್ಪಟ್ಟಿವೆ ಎಂದು ಹೇಳಿದೆ.

Leave a Reply

Your email address will not be published. Required fields are marked *