ರಾಜ್ಯಪಾಲರು ಹಾಗೂ ರಾಜ್ಯಪಾಲರ ಕಛೇರಿಯ ದುರುಪಯೋಗ

ರಾಜ್ಯದಲ್ಲಿ ಮೈತ್ರಿ ಸರಕಾರವನ್ನು ಆಪರೇಷನ್ ಕಮಲದ ಮೂಲಕ ಬೀಳಿಸಿ ಅಧಿಕಾರವನ್ನು ಹಿಡಿಯುವ ಬಿಜೆಪಿಯ ತೀವ್ರ ಅಧಿಕಾರದಾಹಿ ಹಾಗೂ ಪ್ರಜಾತಂತ್ರ ವಿರೋಧಿ ಪ್ರಯತ್ನದ ಭಾಗವಾಗಿ  ಮಗದೊಮ್ಮೆ ಬಿಜೆಪಿ, ಯುನಿಯನ್ ಸರಕಾರದ ಅಧಿಕಾರವನ್ನು ಮತ್ತು ರಾಜ್ಯಪಾಲರ ಕಛೇರಿಯನ್ನು ದುರುಪಯೋಗಪಡಿಸಿಕೊಂಡು ರಾಜ್ಯ ಸರಕಾರವನ್ನ ಉರುಳಿಸುವ ಕ್ರಮವನ್ನು ಸಿಪಿಐಎಂ ರಾಜ್ಯ ಸಮಿತಿ ಬಲವಾಗಿ ಖಂಡಿಸುತ್ತದೆ.

ಬಿಜೆಪಿ ಈ ಹಿಂದೆ ವಿಧಾನ ಸಭಾ ಚುನಾವಣೆಯಾದ ತಕ್ಷಣವೇ ತನಗೆ ಬಹುಮತವಿಲ್ಲದಿದ್ದರೂ ಮತ್ತು ಅದನ್ನು ಸಾಬೀತುಪಡಿಸಲು ಸಾದ್ಯವಿಲ್ಲವೆಂದು ಗೊತ್ತಿದ್ದರೂ ಆಪರೇಷನ್ ಕಮಲವೆಂಬ ನಿರ್ಲಜ್ಜ ಭ್ರಷ್ಟತೆಯ ಮೂಲಕ ವಿಶ್ವಾಸ ಮತಗಳಿಸಲು ನಡೆಸಿದ ವಿಫಲ ಯತ್ನದ ಸಂದರ್ಭದಲ್ಲೂ, ಇದೇ ರೀತಿ, ಕೇಂದ್ರ ಸರಕಾರದ ಹಾಗೂ ರಾಜ್ಯಪಾಲರ ಕಛೇರಿಯನ್ನು ದುರುಪಯೋಗ ಪಡಿಸಿಕೊಂಡದ್ದನ್ನು ರಾಜ್ಯದ ಹಾಗೂ ದೇಶದ ನಾಗರೀಕರು ಗಮನಿಸಿದ್ದರೆಂಬುದನ್ನು ಇಲ್ಲಿ  ನೆನಪಿಸಬಹುದಾಗಿದೆ.

ಸದನದಲ್ಲಿ ಮುಖ್ಯಮಂತ್ರಿಯವರು ವಿಶ್ವಾಸ ಮತ ಯಾಚನೆಯನ್ನು ಅದಾಗಲೇ, ನಡೆಸಿರುವಾಗ ರಾಜ್ಯಪಾಲರ ಮೂಲಕ ಈ ದಿನ ಮದ್ಯಾಹ್ನ ಒಂದೂವರೆ ಘಂಟೆಯೊಳಗೆ ಆ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಬೇಕೆಂದು ತಾಕೀತು ಮಾಡಿ ಸರಕಾರವನ್ನು ಕಿತ್ತು ಹಾಕುವ ಯತ್ನ ಮಾಡುತ್ತಿದೆಯೆಂಬುದನ್ನು ರಾಜ್ಯದ ಜನತೆ ಗಮನಿಸಬೇಕೆಂದು ಮತ್ತು ಜನ ಹಾಗೂ ಪ್ರಜಾಪ್ರಭುತ್ವ ವಿರೋಧಿ ಬಿಜೆಪಿಗೆ ಸರಿಯಾದ ಪಾಠ ಕಲಿಸಬೇಕೆಂದು ಮನವಿ ಮಾಡಿದೆ.

ಬಿಜೆಪಿ ಮತ್ತು ಕೇಂದ್ರ ಸರಕಾರ ತಕ್ಷಣವೇ ಇಂತಹ ಪ್ರಜಾಪ್ರಭುತ್ವ ವಿರೋಧಿ ಕೆಲಸಗಳನ್ನು ನಿಲ್ಲಿಸಬೇಕೆಂದು ಸಿಪಿಐಎಂ ರಾಜ್ಯ ಸಮಿತಿ ಬಲವಾಗಿ ಒತ್ತಾಯಿಸುತ್ತದೆ.

ಸದನವು ಸಾಕಷ್ಠು ಮಹತ್ವದ ವಿಷಯಗಳನ್ನು ಗಂಭೀರವಾಗಿ ಚರ್ಚಿಸುತ್ತಿರುವಾಗ ಮತ್ತು ಮುಖ್ಯವಾಗಿ, ಕ್ರಿಯಾಲೋಪದ ಪ್ರಶ್ನೆಯ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ವಿಪ್ ವಿಚಾರಕ್ಕೆ ಸಂಬಂಧಿಸಿ ಮಾನ್ಯ ಸ್ಪೀಕರ್ ತಮ್ಮ ರೂಲಿಂಗ್ ನೀಡಬೇಕಿರುವಾಗಲೇ, ಮುಖ್ಯಮಂತ್ರಿಗಳಿಗೆ ಈ ರೀತಿಯ ಸೂಚನೆಯನ್ನು ರಾಜ್ಯಪಾಲರು ನೀಡುತ್ತಾರೆ. ಇದು ಸದನದ ಸದಸ್ಯರ ಚರ್ಚಿಸುವ ಹಕ್ಕಿನ ಮೇಲಿನ ದಮನವು ಆಗಿದೆ. ಸದನವನ್ನು ನಡೆಸುವ ಸ್ಪೀಕರ ರವರ ಕೈಗೊಳ್ಳಬೇಕಾದ ನಿಯಮಾವಳಿಗಳ ಉಲ್ಲಂಘನೆಗೆ ಅವಕಾಶ ನೀಡಲಿದೆ.

ರಾಜ್ಯಪಾಲರು ಮುಂದುವರೆದು ತನ್ನ ಆದೇಶವನ್ನು ಮುಖ್ಯಮಂತ್ರಿಗಳು ಪಾಲಿಸಲಿಲ್ಲವೆಂಬ ನೆಪವನ್ನು ಮುಂದೆ ಮಾಡಿ, ತಕ್ಷಣವೇ ಕೇಂದ್ರ ಸರಕಾರಕ್ಕೆ ವರದಿ ಕಳುಹಿಸಿರುವುದನ್ನು ಗಮನಿಸಿದರೂ, ಇದು ಬಿಜೆಪಿಯ, ವಿರೋದಿ ಮುಕ್ತ ಭಾರತ ನಿರ್ಮಿಸುವುದರ ಭಾಗವಾಗಿದೆಯೆಂಬುದು ಸ್ಪಷ್ಟವಾಗುತ್ತದೆ.

ಈ ಹಿಂದೆ ಬಹುಮತವಿಲ್ಲದ ಬಿಜೆಪಿಯ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಬಹುಮತ ಸಾಬೀತು ಪಡಿಸಲು ಅವರು ಒಂದು ವಾರ ಸಮಯ ಕೋರಿದ್ದರೇ, ಇದೇ ರಾಜ್ಯಪಾಲರು ೧೫ ದಿನಗಳ ಸಮಯಾವಕಾಶ ನೀಡಿದ್ದರು.

ಈಗ ನೋಡಿದರೇ ಪದೇ ಪದೇ ಕೆಲವೇ ಘಂಟೆಗಳ ಗಡುವಿನ ಆದೇಶ ನೀಡುತ್ತಿದ್ದಾರೆ. ಈ ತಾರತಮ್ಯವು ಬಹಳ ಸ್ಪಷ್ಟವಾಗಿ ರಾಜ್ಯಪಾಲರ ಕಛೇರಿಯನ್ನು ಬಿಜೆಪಿ ದುರುಪಯೋಗ ಮಾಡುತ್ತಿರುವುದನ್ನು ಸಾಬೀತು ಪಡಿಸುತ್ತದೆ.

ರಾಜ್ಯವು ಭೀಕರ ಬರಗಾಲವನ್ನೆದುರಿಸುತ್ತಿರುವಾಗ ಮತ್ತು ರೈತರ ಆತ್ಮಹತ್ಯೆಗಳು ಬೆಳೆಯುತ್ತಿರುವಾಗ, ಬೆಲೆ ಏರಿಕೆಗಳ ಮತ್ತಷ್ಠು ಧಾಳಿಗಳು ಸಂಕಷ್ಠದಲ್ಲಿರುವ ಜನಗಳ ಮೇಲೆ ಮುಂದುವರೆದಿರುವಾಗ, ಜನಪ್ರತಿನಿಧಿಗಳಾದ ರಾಜ್ಯದ ಶಾಸಕರು ಮತ್ತು ವಿರೋಧ ಪಕ್ಷವಾದ ಬಿಜೆಪಿ, ವಿಧಾನಸಭಾ ಅಧಿವೇಶನದಲ್ಲಿ ರಚನಾತ್ಮಕ ಚರ್ಚೆಯಲ್ಲಿ ತೊಡಗಿ ಜನತೆಗೆ ಸರಿಯಾದ ಪರಿಹಾರ ಹುಡುಕಬೇಕಾದ ಈ ಸಂದರ್ಭದಲ್ಲಿ,  ಜನಪರವಾದ ಈ ಕೆಲಸವನ್ನು ತೀವ್ರವಾಗಿ ಕಡೆಗಣಿಸಿ, ಕೇವಲ ಅಧಿಕಾರದಾಹಿ ಮನೋಭಾವದಿಂದ ಮೈತ್ರಿ ಸರಕಾರವನ್ನ ಅಸ್ಥಿರಗೊಳಿಸುವ ಬೆಳವಣಿಗೆ ತೀವ್ರ ನಾಚಿಕೆಗೇಡಿನದಾಗಿದೆಯೆಂದು ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಪ್ರತಿರೋಧಿಸಿದೆ.

ಯು. ಬಸವರಾಜ, ಕಾರ್ಯದರ್ಶಿ

Leave a Reply

Your email address will not be published. Required fields are marked *