ಎಪ್ರಿಲ್ ಮತ್ತು ಜೂನ್ ನಡುವೆ ಸಂಭವಿಸಿದ್ದೇನು-ಸರ್ವಪಕ್ಷ ಸಭೆಯಿಂದ ತಿಳಿಯಲಿಲ್ಲ: ಯೆಚುರಿ

ಜೂನ್ 19ರಂದು ಪ್ರಧಾನ ಮಂತ್ರಿಗಳು ಭಾರತ-ಚೀನಾ ಗಡಿಯಲ್ಲಿನ ಇತ್ತಿಚಿನ ಘರ್ಷಣೆಗಳ ಬಗ್ಗೆ ಸರ್ವಪಕ್ಷ ವಿಡಿಯೋ ಸಭೆಯನ್ನು ಕರೆದಿದ್ದರು. ಇದರಲ್ಲಿ ಭಾಗವಹಿಸಿದ್ದ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ ಪಕ್ಷದ ನಿಲುವನ್ನು ಕುರಿತಂತೆ ಈ ಅಂಶಗಳನ್ನು ಪ್ರಸ್ತುತ ಪಡಿಸಿದರು.

  1. ಭಾರತ-ಚೀನಾ ವಾಸ್ತವಿಕ ಹತೊಟಿ ರೇಖೆಗುಂಟ  ಲಡಾಖ್ ನ ಗಲ್ವನ್ ಕಣಿವೆಯಲ್ಲಿ ನಡೆದ ಇತ್ತೀಚಿನ ಘರ್ಷಣೆಯಲ್ಲಿ ನಮ್ಮ ಸೇನಾಧಿಕಾರಿಗಳು ಮತ್ತು ಸೈನಿಕರ ಸಾವಿಗೆ ಸಿಪಿಐ(ಎಂ) ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತದೆ.
  2. ನಮ್ಮ ವಿದೇಶಾಂಗ ವ್ಯವಹಾರಗಳ ಮಂತ್ರಿಗಳು ಮತ್ತು ಚೀನಾದ ವಿದೇಶ ಮಂತ್ರಿಗಳ ನಡುವಿನ ಮಾತುಕತೆಗಳಲ್ಲಿ ನಮ್ಮ ಅಧಿಕೃತ ಹೇಳಿಕೆ ಹೀಗನ್ನುತ್ತದೆ: “ಚರ್ಚೆಯನ್ನು ಕೊನೆಗೊಳಿಸುತ್ತ ಒಟ್ಟಾರೆ ಪರಿಸ್ಥಿತಿಯನ್ನು ಒಂದು ಜವಾಬ್ದಾರಿಯುತ ರೀತಿಯಲ್ಲಿ ನಿಭಾಯಿಸಲಾಗುವುದು, ಮತ್ತು ಎರಡೂ ಕಡೆಯವರು ಜೂನ್6 ರ ಘರ್ಷಣೆಯಿರದಂತೆ ಮಾಡುವ ತಿಳುವಳಿಕೆಯನ್ನು ಜಾರಿಗೊಳಿಸುತ್ತವೆ ಎಂದು ಒಪ್ಪಲಾಗಿದೆ. ಯಾವುದೇ ಕಡೆಯವರು ವಿಷಯಗಳನ್ನು ಉಲ್ಬಣಗೊಳಿಸುವ ಯಾವುದೇ ಕ್ರಿಯೆಯನ್ನು ಕೈಗೊಳ್ಳುವುದಿಲ್ಲ, ಬದಲಿಗೆ, ದ್ವಿಪಕ್ಷೀಯ ಒಪ್ಪಂದಗಳು ಮತ್ತು ನಿಯಮಗಳ ಪ್ರಕಾರ ಶಾಂತಿ ಮತ್ತು ಪ್ರಶಾಂತತೆಯನ್ನು ಖಾತ್ರ‍್ರಿಪಡಿಸುತ್ತವೆ.”
  3. ಭಾರತ ಸರಕಾರ ಈ ನಿಲುವನ್ನು ತಳೆದಿರುವುದರಿಂದ, ಸಿಪಿಐ(ಎಂ) ಇದಕ್ಕೆ ಬೆಂಬಲ ಸೂಚಿಸುತ್ತದೆ.
  4. ಇದನ್ನನುಸರಿಸಿ, ಭಾರತ ಸರಕಾರ ಉನ್ನತ ಮಟ್ಟದ ಮಾತುಕತೆಗಳನ್ನು ಆರಂಭಿಸಬೇಕು, ಈ ಮೂಲಕ ಗಡಿಯಲ್ಲಿ ಶಾಂತಿ ಮತ್ತು ಪ್ರಶಾಂತತೆಯನ್ನು ಕಾಯ್ದುಕೊಳ್ಳಲು ವಾಸ್ತವಿಕ ಹತೋಟಿ ರೇಖೆಯನ್ನು ಸ್ಪಷ್ಟವಾಗಿ ಗುರುತಿಸುವುದೂ ಸೇರಿದಂತೆ ಕ್ರಮಗಳನ್ನು ಕೈಗೊಳ್ಳುವಂತಾಗಬೇಕು.

ಸಿಪಿಐ(ಎಂ )ನ ನಿಲುವನ್ನು ಕುರಿತಂತೆ ಈ ಅಂಶಗಳನ್ನು ಪ್ರಸ್ತುತ ಪಡಿಸಿದ್ದಲ್ಲದೆ ಕಾಂ. ಸೀತಾರಾಮ್ ಹೇಳಿದ ಇನ್ನು ಕೆಲವು ಅಂಶಗಳು ಹೀಗಿವೆ:

  1. ಈ ಸನ್ನಿವೇಶದಲ್ಲಿ ದೇಶ ಮತ್ತು ಜನತೆ ಒಗ್ಗಟ್ಟಿನಿಂದಿರಬೇಕು. ಸರಕಾರ ವಿಭಜನಕಾರಿ ಭಾವೋದ್ರೇಕಗಳು , ಸುಳ್ಳು ಸುದ್ದಿ ಮುಂತಾದವುಗಳನ್ನು ಕಟ್ಟುನಿಟ್ಟಾಗಿ ತಡೆಯುವದನ್ನು ಖಾತ್ರಿಪಡಿಸಬೇಕು.
  2. 45 ವರ್ಷಗಳ ನಂತರ ಜೀವಗಳನ್ನು ಬಲಿ ತೆಗೆದುಕೊಂಡ  ಎಪ್ರಿಲ್‌ನಿಂದ ಜೂನ್ ವರೆಗಿನ, ಈ ಘರ್ಷಣೆಗೆ ಕಾರಣವಾದ ಬೆಳವಣಿಗೆಗಳ ಬಗ್ಗೆ ತಿಳಿಸಲಾಗುವುದು ಎಂದು ನಾವು ಆಶಿಸಿದ್ದೆವು. ಇದು ಸಂಭವಿಸಲಿಲ್ಲ.
  3. ನಮ್ಮ ಸೈನಿಕರ ಜೀವಗಳನ್ನು ಉಳಿಸಬಹುದಿತ್ತೇ. ಲೋಪಗಳು, ಗೂಢಚರ್ಯೆ ವಿಫಲತೆ ಇತ್ಯಾದಿ ಪ್ರಶ್ನೆಗಳನ್ನು ಎತ್ತಲಾಗಿದೆ. ಕಾರ್ಗಿಲ್ ನಂತರ ವಾಜಪೇಯಿ ಸರಕಾರ ಲೋಪಗಳನ್ನು ಪರೀಕ್ಷಿಸಲು ಮತ್ತು ಸಶಸ್ತ್ರ ಪಡೆಗಳನ್ನು  ಆಧುನೀಕರಿಸುವ ಬಗ್ಗೆ ಕ್ರಮಗಳನ್ನು ಸೂಚಿಸಲು ಕೆ.ಸುಬ್ರಮಣ್ಯಂ ಸಮಿತಿಯನ್ನು ನೇಮಿಸಿತ್ತು.  ಇಂತಹ ಯಾವುದಾದರೂ ಯೋಚನೆ ಇದೆಯೇ?
  4. ಭಾರತ ಜಗತ್ತಿಗೆ ‘ಪಂಚಶೀಲ’ ಕೊಟ್ಟಿದೆ ಮತ್ತು ಒಂದು ಸ್ವತಂತ್ರ ವಿದೇಶಾಂಗ ಧೋರಣೆಯನ್ನು ಅನುಸರಿಸಿದೆ. ಇದಕ್ಕೆ ಕಟ್ಟುನಿಟ್ಟಾಗಿ ಬದ್ಧರಾಗಬೇಕು.

ಅಂತರಂಗ ಶೋಧನೆಯ ಪ್ರಮುಖ ಅಂಶವೆಂದರೆ ನಮ್ಮ ಸೈನಿಕರ ಅಮೂಲ್ಯ ಜೀವಗಳನ್ನು ಉಳಿಸಲು ನಾವು ಏನು ಮಾಡಬಹುದಿತ್ತು ಎಂಬುದು.  ಎಪ್ರಿಲ್ ಮತ್ತು ಜೂನ್ 2020ರ ನಡುವೆ ಏನು ಸಂಭವಿಸಿತು ಎಂಬುದನ್ನು ತಿಳಿಸಲಾಗುವುದು ಎಂದು ನಾವು ನಿರೀಕ್ಷಿಸಿದ್ದೆವು. ಸರ್ವಪಕ್ಷ ಸಭೆಯಲ್ಲಿ ಇದು ಕಾಣಬರಲಿಲ್ಲ.

ನಮ್ಮ ಪ್ರದೇಶದೊಳಕ್ಕೆ ಯಾರೂ ಅತಿಕ್ರಮಿಸಿಲ್ಲ, ಯಾವುದೇ ನೆಲೆಯನ್ನು ವಶಪಡಿಸಿಕೊಂಡಿಲ್ಲ ಎಂದು ಪ್ರಧಾನ ಮಂತ್ರಿ ಮೋದಿ ಸರ್ವಪಕ್ಷ ಸಭೆಯಲ್ಲಿ ಹೇಳಿರುವದಾಗಿ ವರದಿಯಾಗಿದೆ.

“ಹಾಗಿದ್ದರೆ ಘರ್ಷಣೆಯಿಲ್ಲ? ನಮ್ಮ ವೀರ ಸೈನಿಕರು ಹುತಾತ್ಮರಾಗಿದ್ದೇಕೆ? ಈ ಸರ್ವಪಕ್ಷ ಸಭೆ ಏಕೆ?” ಎಂದು ಸೀತಾರಾಮ್ ಯೆಚುರಿ ಟಿಪ್ಪಣಿ ಮಾಡಿದ್ದಾರೆ.

Leave a Reply

Your email address will not be published. Required fields are marked *