ಮಾನವ ಹಕ್ಕುಗಳ ಹೋರಾಟಗಾರರೊಂದಿಗೆ ಅಮಾನವೀಯ ವರ್ತನೆ- ಗೃಹಮಂತ್ರಿಗಳಿಗೆ ಬೃಂದಾ ಕಾರಟ್ ಪತ್ರ

ಭೀಮಾ ಕೊರೆಗಾಂವ್ ಪ್ರಕರಣಕ್ಕೆ ಸಂಬಂಧಪಟ್ಟಂತೆ  ಬಂಧಿಸಿರುವ ಮಾನವ ಹಕ್ಕುಗಳ ಕಾರ್ಯಕರ್ತರೊಂದಿಗೆ ಅಮಾನವೀಯವಾಗಿ ವರ್ತಿಸಲಾಗುತ್ತಿದೆ. ಇದು ಅತ್ಯಂತ ದುರದೃಷ್ಟಕರ ಸಂಗತಿ ಎಂದು ಈ ಕುರಿತು ಕೇಂದ್ರ ಗೃಹಮಂತ್ರಿಗಳಿಗೆ ಸಿಪಿಐ(ಎಂ) ಪೊಲಿಟ್ ಬ್ಯುರೊ ಸದಸ್ಯರೂ, ಮಾಜಿ ರಾಜ್ಯಸಭಾ ಸದಸ್ಯರೂ ಅಗಿರುವ ಬೃಂದಾ ಕಾರಟ್ ಜೂನ್21ರಂದು ಒಂದು ಪತ್ರ ಬರೆದಿದ್ದಾರೆ.

ಗೌತಮ್ ನವ್ಲಖರವರ ಜಾಮೀನು ಅರ್ಜಿ ಬಗ್ಗೆ ದಿಲ್ಲಿ ಹೈಕೋರ್ಟ್ ವಿಚಾರಣೆ ನಡೆಸುತ್ತಿದ್ದಾಗಲೇ, ಇದ್ದಕಿದ್ದಂತೆ ಅವರನ್ನು ಎನ್.ಐ.ಎ. ತಂಡ ಮುಂಬೈಗೆ ಸಾಗಿಸಿತು. ಅಲ್ಲಿ ಕ್ವಾರಂಟೈನ್ ಎಂದು ಒಂದು ಕಿಕ್ಕಿರಿದ, ಅನಾರೋಗ್ಯಕರ ಪರಿಸ್ಥಿತಿಯಿರುವ ಜಾಗದಲ್ಲಿ ಕ್ವಾರಂಟೈನ್ ಅವಧಿ ಮುಗಿದ ಮೇಲೂ ಇಡಲಾಗಿದೆ, 81 ವರ್ಷದ ವರವರ ರಾವ್ ಅವರ ಆರೊಗ್ಯ ಸ್ಥಿತಿ ಬಿಗಡಾಯಿಸುತ್ತಿದ್ದರೂ ಜಾಮೀನು ನಿರಾಕರಿಸಲಾಗುತ್ತಿದೆ. ಇವರೆಲ್ಲರ ಜೀವಗಳಿಗೆ ನಿಜವಾದ ಅಪಾಯವಿದ್ದರೂ ಮಹಾಮಾರಿಯ ಅವಧಿಗೆ ತಾತ್ಕಾಲಿಕ ಜಾಮೀನನ್ನಾದರೂ ಕೊಡಬೇಕು ಎಂಬ ಬಗ್ಗೆ ಅರ್ಜಿಯನ್ನು ಎನ್..ಐ.ಎ. ಆಕ್ಷೇಪಗಳನ್ನು ಎತ್ತಿದ್ದರಿಂದ ನಿರಾಕರಿಸಲಾಗಿದೆ.

ಜಾಮೀನು ನಿರಾಕರಿಸಲು ಯಾವುದೇ ತರ್ಕಬದ್ಧ ಕಾರಣಗಳಿಲ್ಲ. ಏಕೇಂದರೆ ಅವರುಗಳು ತನಿಖೆಗೆ ಯಾವಾಗ ಬೇಕಾದರೂ ಲಭ್ಯವಿರುತ್ತಾರೆ. ಬಡವರು ಮತ್ತು ಅಂಚಿಗೆ ತಳ್ಳಲ್ಪಟ್ಟವರ  ಸೇವೆಯಲ್ಲಿ ತೊಡಗಿರುವವರ ಮೇಲೆ ಸೇಡು ತೀರಿಸಿಕೊಳ್ಳುವ ರಾಜಕೀಯ ಕ್ರಿಯೆಗಳು ಯಾವ ಸರಕಾರಕ್ಕೂ ಶೋಭೆ ತರುವಂತದ್ದಲ್ಲ ಎಂದಿರುವ ಬೃಂದಾ ಕಾರಟ್ ಮಹಾಮಾರಿಯ ಅವಧಿಯಲ್ಲಾದರೂ ಎನ್.ಐ.ಎ. ಅವರ ಜಾಮೀನು ಅರ್ಜಿಯನ್ನು ವಿರೋಧಿಸಬಾರದು ಎಂದು ಹೇಳಿದ್ದಾರೆ. ಪತ್ರದ ಪೂರ್ಣ ಪಾಟವನ್ನು ಈ ಮುಂದೆ ಕೊಡಲಾಗಿದೆ:

ಶ್ರೀ ಅಮಿತ್ ಷಾ ಜೀ,

ನಮಸ್ಕಾರ. ನಾನು ಭೀಮಾ ಕೊರೆಗಾಂವ್ ಪ್ರಕರಣದಲ್ಲಿ ಬಂಧಿಸಿರುವ ರಾಜಕೀಯ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರೊಂದಿಗೆ ಅಮಾನವೀಯ ವರ್ತನೆಯತ್ತ ನಿಮ್ಮ ಗಮನ ಸೆಳೆಯಲು ಬರೆಯುತ್ತಿದ್ದೇನೆ. ತನಿಖೆಯನ್ನು ನಿಮ್ಮ ಆದೇಶದ ಅಡಿಯಲ್ಲಿರುವ ಎನ್.ಐ.ಎ. ನಡೆಸುತ್ತಿರುವುದರಿಂದಾಗಿ ನಿಮಗೆ ಬರೆಯುತ್ತಿದ್ದೇನೆ. ಹನ್ನೊಂದು ಬಂಧಿತರಲ್ಲಿ ಒಂಭತ್ತು ಮಂದಿ ಎರಡು ವರ್ಷಗಳಿಂದ ಜೈಲುವಾಸ ಅನುಭವಿಸುತ್ತಿದ್ದಾರೆ. ಇದು ತನಿಖೆ ನಡೆಸಲು ಬೇಕಾಗುವ ಸಮಯಕ್ಕಿಂತ ಹೆಚ್ಚೇ ಆಗಿದೆ. ಆದರೂ ಎನ್.ಐ.ಎ. ಸತತವಾಗಿ ಅವರ ಜಾಮೀನು ಅರ್ಜಿಗಳನ್ನು ವಿರೋಧಿಸುತ್ತ ಬಂದಿದೆ. ಆರೋಪಿಗಳಲ್ಲಿ ಹಲವರ ಆರೋಗ್ಯ ಸೂಕ್ಷ್ಮ ಸ್ಥಿತಿಯಲ್ಲಿದೆ.  ಸುಧಾ ಭಾರದ್ವಾಜ್, ಶೋಮಾ ಸೆನ್, ಸುರೇಂದ್ರ ಗಾಡ್ಲಿಂಗ್, ಮಹೇಶ ರಾವುತ್, ಅರುಣ್ ಫೆರೇರ, ಸುಧೀರ್ ಧವಳೆ, ರೋನಾ ವಿಲ್ಸನ್, ವೆರ್ನೊನ್ ಗೊನ್ಸಾಲ್ವೆಸ್, ವರವರ ರಾವ್, ಗೌತಮ್ ನವ್ಲಖ ಮತ್ತು ಆನಂದ ತೇಲ್ತುಂಬ್ಡೆ ಈ ಪ್ರಕರಣದಲ್ಲಿ ಬಂಧಿತ ಆರೋಪಿಗಳು. ಈ ಕೊವಿಡ್ ಮಹಾಮಾರಿಯ ಕಾಲದಲ್ಲಿ ಅವರು ವೈರಸ್ ಸೋಂಕಿಗೊಳಗಾಗುವ ನಿಜವಾದ ಅಪಾಯವಿದೆ. ಮತ್ತು ಅವರು ಸಹ-ಕಾಯಿಲೆಗಳಿಂದ ನರಳುತ್ತಿರುವುದರಿಂದ ಅಪಾಯದ ಸಂಭವ ಹೆಚ್ಚಿದೆ.

ತೀರಾ ಇತ್ತಿಚಿನ ಉದಾಹರಣೆಯೆಂದರೆ ಶ್ರೀ ಗೌತಮ್ ನವ್ಲಖರವರೊಂದಿಗೆ ನಡೆದಿರುವ ಅಮಾನವೀಯ ವರ್ತನೆ. ದಿಲ್ಲಿ ಹೈಕೋರ್ಟಿನ ಎದುರು ಅವರ ಜಾಮೀನು ಅರ್ಜಿ ವಿಚಾರಣೆಯಲ್ಲಿದ್ದಾಗಲೇ, ಎನ್.ಐ.ಎ. ತಂಡ ಅವರನ್ನು ಮುಂಬೈಗೆ ಒಯ್ದಿತು. ಅವರನ್ನು ಕ್ವಾರಂಟೈನ್ ಸೌಲಭ್ಯ ಎಂದು ಜೈಲಿನ ಬಳಿಯಿರುವ ಒಂದು ಶಾಲೆಗೆ ಕಳಿಸಲಾಯಿತು. ಅಲ್ಲಿ 350 ಮಂದಿಯನ್ನು ಇರಿಸಲಾಗಿದೆ.. ಇರುವುದು ಕೇವಲ ಮೂರು ಸ್ನಾನದ ಕೋಣೆಗಳು, ಬಕೆಟ್‌ಗಳು ಅಥವ ಮಗ್‌ಗಳು ಇಲ್ಲ. ಅವರೊಂದಿಗೆ ಒಂದು ಸಣ್ಣ ತರಗತಿ ಕೋಣೆಯಲ್ಲಿ 34 ಮಂದಿಯಿದ್ದಾರೆ. ಅದು ಕಿಕ್ಕಿರಿದಿದ್ದು ಅತ್ಯಂತ ಅನಾರೋಗ್ಯಕರ ಸ್ಥಿತಿಯಲ್ಲಿದೆ. ಅವರಿಗೆ ಗಂಭೀರ ಜೀರ್ಣಸಂಬಂಧಿ ಸಮಸ್ಯೆಗಳು, ರಕ್ತದೊತ್ತಡ ಮತ್ತು ಹೈಪರ್ ಟೆನ್ಶನ್‌ನಿಂದ ಅಪಾಯದ ಸಂಭವ ಹೆಚ್ಚಿದೆ. ಅವರ ಕ್ವಾರಂಟೈನ್ ಅವಧಿ ಮುಗಿದಿದ್ದರೂ, ಶಿಕ್ಷೆಯ ಕ್ರಮವಾಗಿ ಅಲ್ಲೇ ಇರಿಸಲಾಗಿದೆ. ಒಬ್ಬ ರಾಜಕೀಯ ಬಂಧಿಯೊಡನೆ ಈ ರೀತಿಯಲ್ಲಿ ವರ್ತಿಸುತ್ತಿರುವುದು ಆಘಾತಕಾರಿ. ಅವರನ್ನು ಇರಿಸಲಾಗಿರುವ ಪರಿಸ್ಥಿತಿಗಳ ಬಗ್ಗೆ ನೋಡಿ ಅವರ ಜಾಮೀನು ಅರ್ಜಿ ಇತ್ಯರ್ಥವಾಗುವ ವರೆಗೆ ಹೆಚ್ಚು ಆರೋಗ್ಯಕರವಾದ ಸ್ಥಳಕ್ಕೆ ವರ್ಗಾಯಿಸಬೇಕು ಎಂದು ನಿಮ್ಮನ್ನು ಆಗ್ರಹಿಸುತ್ತೇನೆ.

ಇನ್ನೊಂದು ಆಘಾತಕಾರಿ ಉದಾಹರಣೆಯೆಂದರೆ ಶ್ರೀ ವರವರ ರಾವ್ ಅವರದ್ದು. ಅವರ ವಯಸ್ಸು 81. ಆರೋಗ್ಯ ಸ್ಥಿತಿ ಅತ್ಯಂತ ಸೂಕ್ಷ್ಮವಾಗಿದೆ. .ಆದರೂ ಅವರಿಗೆ ಜಾಮೀನು ನಿರಾಕರಿಸಲಾಗಿದೆ, ಮಾತ್ರವಲ್ಲ, ಅವರ ಆರೋಗ್ಯ ಆತಂಕಕಾರಿಯಾಗಿ ಹದಗೆಡುತ್ತಿದ್ದರೂ, ಸುಸಜ್ಜಿತ ಜೆ.ಜೆ. ಆಸ್ಪತ್ರೆಯಿಂದ ಅವರನ್ನು ಮೂರೇ ದಿನಗಳಲ್ಲಿ ಡಿಸ್ಚಾರ್ಜ್ ಮಾಡಿ ಮತ್ತೆ ಜೈಲಿಗೆ ಕಳಿಸಲಾಗಿದೆ. ಇದು ಅವರಿಗೆ ಬದುಕುವ ಹಕ್ಕನ್ನು ನಿರಾಕರಿಸುವುದಲ್ಲದೆ ಬೇರೇನೂ ಅಲ್ಲ. ಶ್ರೀಮತಿ ಸುಧಾ ಭಾರದ್ವಾಜ್‌ಗೆ 60 ವರ್ಷ, ಅವರು ಮಧುಮೇಹ, , ಹೈಪರ್ ಟೆನ್ಶನ್, ಅಸ್ತಮಾದಿಂದ ನರಳುತ್ತಿದ್ದಾರೆ, ಕ್ಷಯರೋಗದ ಇತಿಹಾಸವೂ ಇದೆ. 62 ವರ್ಷಗಳ ಶೋಮಾ ಸೆನ್ ಹೆಚ್ಚು ರಕ್ತದೊತ್ತಡ, ತೀವ್ರ ಅರ್ಥರೈಟಿಸ್, ೆ್ತಸ್ ಮತ್ತು ಗ್ಲಾಕೊಮದಿಂದ ನರಳುತ್ತಿದ್ದು, ಅನ್ಯಾಯವಾಗಿ ಜಾಮೀನು ನಿರಾಕರಿಸಲಾಗಿದೆ. ಇವರೆಲ್ಲರ ಜೀವಗಳಿಗೆ ನಿಜವಾದ ಅಪಾಯವಿದ್ದರೂ ಮಹಾಮಾರಿಯ ಅವಧಿಗೆ ತಾತ್ಕಾಲಿಕ ಜಾಮೀನನ್ನಾದರೂ ಕೊಡಬೇಕು ಎಂಬ ಬಗ್ಗೆ ಅರ್ಜಿಯನ್ನು ಎನ್..ಐ.ಎ. ಆಕ್ಷೇಪಗಳನ್ನು ಎತ್ತಿದ್ದರಿಂದ ನಿರಾಕರಿಸಲಾಗಿದೆ. ಜಾಮೀನು ನಿರಾಕರಿಸಲು ಯಾವುದೇ ತರ್ಕಬದ್ಧ ಕಾರಣಗಳಿಲ್ಲ. ಏಕೆಂದರೆ  ಅವರುಗಳು ತನಿಖೆಗೆ ಯಾವಾಗ ಬೇಕಾದರೂ ಲಭ್ಯವಿರುತ್ತಾರೆ. ಮಹಾಮಾರಿಯ ಅವಧಿಯಲ್ಲಾದರೂ ಎನ್.ಐ.ಎ. ಅವರ ಜಾಮೀನು ಅರ್ಜಿಯನ್ನು ವಿರೋಧಿಸಬಾರದು.

ಸುಪ್ರಿಂ ಕೋರ್ಟ್ ಕೂಡ ಮಹಾಮಾರಿಯ ಸಮಯದಲ್ಲಿ ಜೈಲುಗಳಲ್ಲಿ ವಿಚಾರಣಾಧೀನ ಕೈದಿಗಳಿಗೆ ಅಪಾಯಕಾರಿಯಾದ ಸ್ಥಿತಿ ಇದೆ ಎಂಬುದನ್ನು ಗಮನಿಸಿ “ಜೈಲುಗಳಲ್ಲಿ ಜನನಿಬಿಡತೆಯನ್ನು ಕಡಿಮೆ ಮಾಡಿ” ಎಂದು ಸೂಚನೆಗಳನ್ನು ಕೊಟ್ಟಿದೆ. ಇಂತಹ ಸಮಯದಲ್ಲೂ ತಮ್ಮ ಆರೋಗ್ಯ ಪರಿಸ್ಥಿತಿಗಳಿಂದಾಗಿ ಅತ್ಯಂತ ಅಪಾಯದ ಸ್ಥಿತಿಯಲ್ಲಿರುವವರಿಗೆ ಜಾಮೀನನ್ನು ನಿರಾಕರಿಸುತ್ತಿರುವುದು, ಮತ್ತು ಗೌತಮ್ ನವ್ಲಖರವರ ಆರೋಗ್ಯ ಮತ್ತಷ್ಟು ಹದಗೆಡುವಂತೆ ಮಾಡುವ ಪರಿಸ್ಥಿತಿಯಲ್ಲಿ ಇಟ್ಟಿರುವುದು ಅತ್ಯಂತ ದುರದೃಷ್ಟಕರ.

ಬಡವರು ಮತ್ತು ಅಂಚಿಗೆ ತಳ್ಳಲ್ಪಟ್ಟವರ ಸೇವೆ ಮಾಡಿರುವವರ ವಿರುದ್ಧ ಸೇಡು ತೀರಿಸಿಕೊಳ್ಳುವ ರಾಜಕೀಯ ಕ್ರಿಯೆಗಳು ಯಾವುದೇ ಸರಕಾರಕ್ಕೆ ಕೀರ್ತಿ ತರುವಂತದ್ದಲ್ಲ. ಮುಂಬೈ ಜೈಲುವಾಸಿಗಳು ಮತ್ತು ಪೋಲೀಸ್ ಸಿಬ್ಬಂದಿಯ ನಡುವೆ ಕೊವಿಡ್ ಸೋಂಕಿನ ಸಂಖ್ಯೆ ಹೆಚ್ಚುತ್ತಿರುವಾಗ ಇದು ಇನ್ನಷ್ಟು ಆತಂಕಕಾರಿ.

ನೀವು ಇಲ್ಲಿ ಎತ್ತಿರುವ ವಿಷಯಗಳನ್ನು ಪರಿಶೀಲಿಸುತ್ತಿರಿ, ಮತ್ತು ಸೂಕ್ತ ಕ್ರಮ ಕೈಗೊಳ್ಳುತ್ತೀರಿ ಎಂದು ಆಶಿಸುತ್ತೇನೆ.

ನಿಮ್ಮ ವಿಶ್ವಾಸಿ
ಬೃಂದಾ ಕಾರಟ್
ಸದಸ್ಯರು, ಸಿಪಿಐ(ಎಂ) ಪೊಲಿಟ್‌ಬ್ಯುರೊ, ಮಾಜಿ ಸದಸ್ಯರು, ರಾಜ್ಯ ಸಭೆ

Leave a Reply

Your email address will not be published. Required fields are marked *