ಪ್ರವಾಹ-ಪೀಡಿತ ರಾಜ್ಯಗಳಿಗೆ ತುರ್ತಾಗಿ ಪರಿಹಾರ ಒದಗಿಸಬೇಕು

“ನೈಸರ್ಗಿಕ ವಿಪತ್ತು, ಸಾವು-ನೋವುಗಳ ಸಮಯದಲ್ಲಿ ರಾಜಕೀಯ ಪಕ್ಷಪಾತ ಸರಿಯಲ್ಲ”

ದೇಶದ ವಿವಿಧ ಭಾಗಗಳಲ್ಲಿ ಪ್ರವಾಹಗಳಿಂದಾಗಿ ಪ್ರಾಣಹಾನಿಗಳು, ಆಸ್ತಿಗಳು ಮತ್ತು ಜಾನುವಾರುಗಳ ನಾಶವಾಗಿರುವ ಬಗ್ಗೆ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಗಂಭೀರ ಆತಂಕವನ್ನು ವ್ಯಕ್ತಪಡಿಸಿದೆ.

ಕೇರಳ, ಸರಿಯಾಗಿ ಒಂದು ವರ್ಷದ ಹಿಂದೆ ಪ್ರವಾಹದಿಂದಾಗಿ ಭಾರೀ ವಿನಾಶವನ್ನು ಕಂಡ ರಾಜ್ಯ, ಮತ್ತೆ ಅತೀ ಹೆಚ್ಚು ಬಾಧಿತವಾಗಿದೆ. ಇದುವರೆಗೆ ಸಾವುಗಳ ಸಂಖ್ಯೆ 72ನ್ನು ತಲುಪಿದೆ, ರಕ್ಷಣಾ ಕಾರ್ಯಾಚರಣೆಗಳಲ್ಲಿ ಮತ್ತಷ್ಟು ಹೆಣಗಳು ಸಿಕ್ಕಿವೆ. ಸುಮಾರು 3ಲಕ್ಷ ಜನಗಳನ್ನು ಸ್ಥಳಾಂತರಗೊಳಿಸಿ ರಾಜ್ಯಾದ್ಯಂತ  1639 ಪರಿಹಾರ ಶಿಬಿರಗಳಲ್ಲಿ ನೆಲೆಗೊಳಿಸಲಾಗಿದೆ.  ರಾಜ್ಯದ ಎಲ್‍ ಡಿ ಎಫ್‍ ಸರಕಾರ ಮತ್ತೊಮ್ಮೆ ದಕ್ಷತೆಯಿಂದ  ಭಾರೀ ಆಪತ್ತನ್ನು ಎದುರಿಸುತ್ತಿದೆ.

ಮಹಾರಾಷ್ಟ್ರದಲ್ಲಿ 40 ಪ್ರಾಣಹಾನಿಯಾಗಿದೆ, ಕರ್ನಾಟಕದಲ್ಲಿ 32 ಮತ್ತು ಗುಜರಾತ್‍ 24 ಮಂದಿ ಪ್ರಾಣ ಕಳಕೊಂಡಿದ್ದಾರೆ. ತುಂಗಭದ್ರಾ, ಕೃಷ್ಣಾ ಆಂಧ್ರ ಪ್ರದೇಶ/ತೆಲಂಗಾಣದಲ್ಲಿ, ಅವುಗಳ ಉಪನದಿಗಳು ಉಕ್ಕಿ ಹರಿಯುತ್ತಿವೆ, ಅಪಾರ ನಾಶ-ವಿನಾಶಗಳನ್ನು ಮಾಡುತ್ತಲೇ ಇವೆ.

ಗೃಹಮಂತ್ರಿಗಳು ಪ್ರವಾಹದ ವೈಮಾನಿಕ ಸರ್ವೆ ನಡೆಸಲು ಮಹಾರಾಷ್ಟ್ರ, ಕರ್ನಾಟಕದಂತಹ ಬಿಜೆಪಿ ಆಳ್ವಿಕೆಯ ರಾಜ್ಯಗಳಿಗೆ ಮಾತ್ರ ಹೋಗಿದ್ದಾರೆ. ಅತಿ ಹೆಚ್ಚು ಬಾಧಿತವಾದ ರಾಜ್ಯ ಕೇರಳದಲ್ಲಿ ಸರ್ವೆಗೆ ಅವರು ಉದ್ದೇಶಪೂರ್ವಕವಾಗಿಯೇ ಹೋಗಿಲ್ಲ ಎಂದು ಕಾಣುತ್ತಿದೆ. ಆರೆಸ್ಸೆಸ್‍-ಬಿಜೆಪಿಯೊಂದಿಗೆ ಸಂಬಂಧ ಇರುವ ಕೆಲವು ಸಂಘಟನೆಗಳು ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದಾನ ಮಾಡಬೇಡಿ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಮಾಡುತ್ತಿವೆ.

ನೈಸರ್ಗಿಕ ವಿಪತ್ತುಗಳ ಮತ್ತು ದುರದೃಷ್ಟವಶಾತ್‍ ಜನಗಳು ಸಾಯುತ್ತಿರುವ ಸಮಯದಲ್ಲಿ ರಾಜಕೀಯ ಪಕ್ಷಪಾತವನ್ನಂತೂ ಯಾರೂ ನಿರೀಕ್ಷಿಸುವುದಿಲ್ಲ ಎಂದಿರುವ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಕೇಂದ್ರ ಸರಕಾರ  ವಿಪತ್ತನ್ನು ಎದುರಿಸಲು ರಾಜ್ಯ ಸರಕಾರಗಳಿಗೆ ಅಗತ್ಯವಾದ  ಸಕಲ ನೆರವನ್ನು ಒದಗಿಸಬೇಕು ಎಂದು ಕರೆ ನೀಡಿದೆ.

Leave a Reply

Your email address will not be published. Required fields are marked *