ಆದಿವಾಸಿಗಳ ಹಕ್ಕುಗಳನ್ನು ಕಸಿಯುವ ಬಲಪಂಥೀಯ ಅಸ್ಮಿತೆಯ ರಾಜಕಾರಣ

ಪ್ರಕಾಶ್ ಕಾರಟ್

KaratA copy
ಪ್ರಕಾಶ್ ಕಾರಟ್

ಬುಡಕಟ್ಟು ಜನಗಳ ಹೆಮ್ಮೆಯ ವ್ಯಕ್ತಿಗಳನ್ನು  ಶ್ಲಾಘಿಸುವುದು, ರೈಲು ನಿಲ್ದಾಣಗಳಿಗೆ ಅವರ ಹೆಸರನ್ನಿಡುವುದು, ಅವರ ಪ್ರತಿಮೆಗಳನ್ನು ನಿರ್ಮಿಸುವುದು ಇವೇ ಮುಂತಾದವುಗಳ ಮೂಲಕ ಬುಡಕಟ್ಟು ಅಸ್ಮಿತೆಯನ್ನು ತುಷ್ಟೀಕರಿಸುವುದು; ಅದೇ ಹೊತ್ತಿಗೆ, ಆದಿವಾಸಿಗಳ ಭೂಮಿ ಹಾಗೂ ಅರಣ್ಯ ಹಕ್ಕನ್ನು ಇಲ್ಲವಾಗಿಸಿ, ಅವರ ಪ್ರಜಾಸತ್ತಾತ್ಮಕ ಮತ್ತು ಸಾಂವಿಧಾನಿಕ ಹಕ್ಕುಗಳನ್ನು ತುಳಿದು ಹಾಕುವುದು. – ಇದು ಆದಿವಾಸಿಗಳನ್ನು ಕುರಿತಂತೆ ಮೋದಿ ಸರ್ಕಾರದ ಬಲಪಂಥೀಯ ಅಸ್ಮಿತೆಯ ರಾಜಕೀಯದ ಹಿಂದುತ್ವ ಮಾದರಿ. ಆದಿವಾಸಿಗಳೇ ಹಿಂದುತ್ವ-ಕಾರ್ಪೋರೇಟ್ ಆಳ್ವಿಕೆಯ ಪ್ರಮುಖ ಬಲಿಪಶುಗಳಾಗಿದ್ದಾರೆ.

ದಂತಕಥೆಯಾಗಿರುವ ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಅವರ ಜನ್ಮ ದಿನಾಚರಣೆ ಪ್ರಯುಕ್ತ ನವೆಂಬರ್ 15ರಂದು ಮಧ್ಯ ಪ್ರದೇಶದ ಭೋಪಾಲ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸ್ವಾತಂತ್ರ್ಯಾನಂತರ ಹಲವು ದಶಕಗಳ ಕಾಲ ಆದಿವಾಸಿಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಹೇಳಿದ್ದಾರೆ. ತನ್ನ ಸರ್ಕಾರ ಮಾತ್ರವೇ ಆದಿವಾಸಿಗಳನ್ನು ದೇಶದ ಅಭಿವೃದ್ಧಿಯಲ್ಲಿ ಪಾಲುದಾರರನ್ನಾಗಿ ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳನ್ನಾಗಿ ಮಾಡಿದೆ ಎಂದಿದ್ದಾರೆ.

ಬಿರ್ಸಾ ಮುಂಡಾ ಜನ್ಮ ವರ್ಷಾಚರಣೆಯಂದು ಮೋದಿ ಸರ್ಕಾರ ತಾನು ಬುಡಕಟ್ಟು ಜನರ ಪರ ಎಂದು ಬಿಂಬಿಸಿಕೊಳ್ಳುವ ಭಾರೀ ಯತ್ನದಲ್ಲಿ ತೊಡಗಿರುವುದು ಕಾಣಬಂತು. ಇನ್ನು ಮುಂದೆ ಬಿರ್ಸಾ ಮುಂಡಾ ಜನ್ಮದಿನವನ್ನು ‘ಬುಡಕಟ್ಟು ಗೌರವ ದಿನ’ವೆಂದು ಆಚರಿಸಲಾಗುವುದೆಂದು ಪ್ರಕಟಿಸಲಾಗಿದೆ. ಭೋಪಾಲ್‌ನಲ್ಲಿನ ಹಬೀಬ್‌ಗಂಜ್ ರೈಲ್ವೆ ನಿಲ್ದಾಣಕ್ಕೆ ಗೊಂಡ ರಾಣಿ ಕಮಲಾಪತಿ ಹೆಸರಿಡುವ ಮರುನಾಮಕರಣ ಸಮಾರಂಭದಲ್ಲಿ ಮೋದಿ ಪಾಲ್ಗೊಂಡಿದ್ದರು. ಅದೇ ದಿನ, ರಾಂಚಿಯಲ್ಲಿರುವ ಬಿರ್ಸಾ ಮುಂಡಾ ಹಾಗೂ ಆದಿವಾಸಿ ಇತಿಹಾಸ ಕುರಿತ ವಸ್ತು ಸಂಗ್ರಹಾಲಯವನ್ನು ಮೋದಿ ಆನ್‌ಲೈನ್‌ನಲ್ಲಿ ಉದ್ಘಾಟಿಸಿದರು.

ಬಿರ್ಸಾ ಮುಂಡಾ ಜನ್ಮ ದಿನಾಚರಣೆ ಹಾಗೂ ಆದಿವಾಸಿಗಳ ಹಿತಾಸಕ್ತಿಯ ಸಂರಕ್ಷಕ ಎಂಬ ಮೋದಿಯ ಹೇಳಿಕೆಗಳು ವಾಸ್ತವದಲ್ಲಿ ಆದಿವಾಸಿ ಹಕ್ಕುಗಳನ್ನು ದಮನ ಮಾಡಲು ಹಾಗೂ ಅವರ ಜೀವನೋಪಾಯ ಮತ್ತು ಜೀವನ ವಿಧಾನವನ್ನು ನಾಶ ಮಾಡಲು ನಡೆಸುತ್ತಿರುವ ಆಟಾಟೋಪಗಳಿಗೆ ತೀರಾ ವ್ಯತಿರಿಕ್ತವಾಗಿದೆ. ದೇಶದ ಅರಣ್ಯ ಮತ್ತು ಅರಣ್ಯ ಭೂಮಿಯೊಂದಿಗೆ ಈ ಜನರ ಜೀವನ ಅವಿನಾಭಾವ ಸಂಬಂಧ ಹೊಂದಿದೆ. ಅದನ್ನೇ ನಾಶ ಮಾಡಲು ಮೋದಿ ಸರ್ಕಾರ ಪ್ರಯತ್ನಿಸುತ್ತಿದೆ.

ವಂಚನೆ 2014ರಲ್ಲಿ ನಿಲ್ಲಲಿಲ್ಲ, ವೇಗ ಪಡೆಯಿತು

ಸ್ವತಂತ್ರ ಭಾರತದಲ್ಲಿ ಬುಡಕಟ್ಟು ಜನಸಮುದಾಯದ ಚಿಂತಾಜನಕ ಪರಿಸ್ಥಿತಿಗೆ ಅಭಿವೃದ್ಧಿಯ ಬಂಡವಾಳಶಾಹಿ ಪಥವೇ ಕಾರಣವಾಗಿದೆ. ಸರ್ಕಾರಿ ಪ್ರಾಯೋಜಿತ ಮೂಲಸೌಕರ್ಯ ಯೋಜನೆಗಳು ಮತ್ತು ಖಾಸಗಿ ಕಾರ್ಪೊರೇಟ್ ಸಂಸ್ಥೆಗಳು ಆದಿವಾಸಿಗಳನ್ನು ಅವರ ಪಾರಂಪರಿಕ ನೆಲೆಗಳಿಂದ ಒಕ್ಕಲೆಬ್ಬಿಸುತ್ತಿವೆ. ಬಹಳಷ್ಟು ಜನರು ದರೋಡೆಕೋರ ಗುತ್ತಿಗೆದಾರರ ಗುಲಾಮರಾಗುವಂತೆ ಬಲವಂತ ಮಾಡಲಾಗುತ್ತಿದೆ  ಹಾಗೂ ಅವರ ಮೂಲಭೂತ ಪ್ರಜಾಸತ್ತಾತ್ಮಕ ಮತ್ತು ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ.  ಆದರೆ, ಈ ಸ್ಥಳಾಂತರ ಹಾಗೂ ವಂಚನೆ 2014ರಲ್ಲಿ ಮೋದಿ ಅಧಿಕಾರಕ್ಕೆ ಬಂದಾಗ ನಿಲ್ಲಲಿಲ್ಲ. ಅದಕ್ಕೆ ಬದಲು, ಖಾಸಗಿ ಬಂಡವಾಳವು ನೈಸರ್ಗಿಕ ಸಂಪನ್ಮೂಲ ಮತ್ತು ಅರಣ್ಯ ಸಂಪತ್ತನ್ನು ಶೋಷಿಸುವ  ಪ್ರಕ್ರಿಯೆ ಇನ್ನಷ್ಟು ವೇಗ ಪಡೆದಿದೆ. ಗಣಿಗಾರಿಕೆ, ಖನಿಜಗಳನ್ನು ತೆಗೆಯಲು ಕ್ರಮ ಮತ್ತು ಕೈಗಾರಿಕೆಗಳ ಮೂಲಕ ಇದನ್ನು ಮಾಡಲಾಗುತ್ತಿದೆ.

ಗಣಿಗಾರಿಕೆಯನ್ನು ಗುತ್ತಿಗೆ ಕೊಡಲು ಗ್ರಾಮ ಸಭೆಗಳ ಅನುಮತಿಬೇಕೆಂಬ ಕ್ರಮ ಹಾಗೂ ಐದು ಹಾಗೂ ಆರನೇ ಶೆಡ್ಯೂಲ್‌ನಲ್ಲಿರುವ ಇತರ ನಿಯಮಗಳನ್ನು ಒಕ್ಕೂಟ ಸರ್ಕಾರ ದುರ್ಬಲಗೊಳಿಸಿದೆ. 2015ರ ಗಣಿಗಳು ಮತ್ತು ಖನಿಜಗಳು (ಅಭಿವೃದ್ಧಿ ಹಾಗೂ ನಿಯಂತ್ರಣ) ಕಾನೂನಿಗೆ ತಿದ್ದುಪಡಿ ತರಲಾಗಿದ್ದು ಅದು  ಮೋದಿ ಸರ್ಕಾರ ಪಾಸ್ ಮಾಡಿದ ಮೊದಲ ಕಾನೂನಾಗಿದೆ. ಈ ಮೂಲಕ, 2011ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಕಾನೂನು ತಿದ್ದುಪಡಿ ಮಾಡಿ ಸೇರಿಸಲಾದ ಅನೇಕ ಉತ್ತಮ ನಿಯಮಗಳನ್ನು ಕೈಬಿಡಲಾಗಿದೆ. ಐದು ಹಾಗೂ ಆರನೇ ಶೆಡ್ಯೂಲ್ ಪ್ರದೇಶಗಳಲ್ಲಿ ಗಣಿ ಗುತ್ತಿಗೆಗೆ ಅನುಮತಿ ಕೊಡುವ ಮುಂಚೆ ಗ್ರಾಮ ಸಭೆಗಳೊಂದಿಗೆ ಸಮಾಲೋಚಿಸುವ, ಈ ಶೆಡ್ಯೂಲ್‌ಗಳನ್ವಯ ಕಿರು ಖನಿಜಗಳನ್ನು ಬುಡಕಟ್ಟು ಸಹಕಾರಿಗಳಿಗೆ ನೀಡುವ ಅರ್ಹತೆ, ಕಲ್ಲಿದ್ದಲು ಕಂಪೆನಿಗಳು ತಮ್ಮ ಲಾಭದಲ್ಲಿ ಶೇಕಡ 26ರಷ್ಟನ್ನು ಜಿಲ್ಲಾ ಖನಿಜ ಪ್ರತಿಷ್ಠಾನಕ್ಕೆ (ಡಿಎಂಎಫ್) ಕಡ್ಡಾಯವಾಗಿ ನೀಡಬೇಕು ಇತ್ಯಾದಿ ನಿಯಮಗಳನ್ನು ಮೋದಿ ಸರ್ಕಾರ ತೆಗೆದು ಹಾಕಿದೆ.

ಹೀಗೆ, ಮೋದಿ ಸರ್ಕಾರ ಒಂದುಕಡೆ ಬುಡಕಟ್ಟು ಜನವಸತಿಯ ಪ್ರದೇಶಗಳಲ್ಲಿ ಗಣಿ ಮತ್ತು ಖನಿಜ ಉದ್ದಿಮೆಗಳ ಸ್ಥಾಪನೆಗೆ ಪರವಾನಿಗೆ ನೀಡಿದೆ. ಅದೇ ವೇಳೆಯಲ್ಲಿ, ಐದು ಹಾಗೂ ಆರನೇ ಶೆಡ್ಯೂಲ್ ಪ್ರದೇಶಗಳಲ್ಲಿನ ಬುಡಕಟ್ಟು ಜನರ ಸಾಂವಿಧಾನಿಕ ಹಕ್ಕನ್ನು ಕಿತ್ತುಕೊಂಡಿದೆ.

1927ರ ಭಾರತೀಯ ಅರಣ್ಯ ಕಾನೂನಿಗೆ ಪ್ರಸ್ತಾಪಿಸಲಾಗಿರುವ ತಿದ್ದುಪಡಿಯು ಗ್ರಾಮ ಸಭೆಗಳ ಪಾತ್ರವನ್ನೇ ಅಳಿಸಿ ಹಾಕಲಿದೆ. ಹಾಗೂ ಅರಣ್ಯಗಳ ಮೇಲೆ ಅವರ ಹಕ್ಕುಗಳಿಗೆ ಸಂಬಂಧಪಟ್ಟಂತೆ ಬುಡಕಟ್ಟು ಜನರನ್ನು ಕೂಡ ಇತರ ಸಮುದಾಯಗಳಂತೆ ಪರಿಗಣಿಸಿ ಅವರ ಸಾಗುವಳಿ, ಮೀನುಗಾರಿಕೆ, ಅರಣ್ಯ ಉತ್ಪನ್ನಗಳು ಮತ್ತು ಹುಲ್ಲುಗಾವಲಿನ ಮೇಲಿನ ಹಕ್ಕುಗಳು ಮೊದಲಾದ ಬುಡಕಟ್ಟು ಬದುಕಿನ ಎಲ್ಲ ಆಯಾಮಗಳನ್ನು ಅಪರಾಧವೆಂದು ಪರಿಗಣಿಸುವತ್ತ ದಾರಿ ಮಾಡಿಕೊಡಲಿದೆ.

jal-jungle-zamin
ಜಲ್-ಜಂಗಲ್-ಜಮೀನ್ ಹೋರಾಟ

ಅರಣ್ಯ ಕಾಯ್ದೆಯ ಉಲ್ಲಂಘನೆ

ಅರಣ್ಯ ಕಾನೂನು ತಿದ್ದುಪಡಿ ಮಸೂದೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು ಸಂಸತ್ತಿನಲ್ಲಿ ಇನ್ನೂ ಅಂಗೀಕಾರವಾಗಿಲ್ಲ. 2018-19ರ ಪ್ರಸ್ತಾಪಿತ ಅರಣ್ಯ ನೀತಿಯೇ ಆಗಿರಲಿ ಅಥವಾ 1980ರ ಅರಣ್ಯ ಸಂರಕ್ಷಣಾ ಕಾಯ್ದೆಯ ಪ್ರಸ್ತಾಪಿತ ಇತರ ತಿದ್ದುಪಡಿಗಳೇ ಇರಲಿ, ಅವೆಲ್ಲದರ ಒಟ್ಟಾರೆ ಪರಿಣಾಮ ಒಂದೇ ಆಗಿರುತ್ತದೆ. ಅದೆಂದರೆ, ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಗಳಿಗೆ ತಿರುಗಿಸುವುದನ್ನು ಸುಲಭಗೊಳಿಸುವುದು; ಅರಣ್ಯಗಳ ಖಾಸಗೀಕರಣ ಹಾಗೂ ವಾಣಿಜ್ಯೀಕರಣಕ್ಕೆ ಉತ್ತೇಜನೆ ಹಾಗೂ ಗ್ರಾಮಸಭೆಗಳ ಸಮ್ಮತಿಯ ಅಧಿಕಾರವನ್ನು ತೆಗೆದು ಹಾಕುವುದು.

ಈ ಎಲ್ಲ ಉದ್ದೇಶಿತ ನೀತಿ ಬದಲಾವಣೆಗಳು, ಕೃಷಿ ಮಾಡುವ ಹಾಗೂ ಕಿರು ಅರಣ್ಯ ಉತ್ಪನ್ನಗಳನ್ನು ಹೊಂದುವ ಬುಡಕಟ್ಟು ಸಮುದಾಯಗಳ ಹಾಗೂ ದೀರ್ಘ ಕಾಲದಿಂದ ಅರಣ್ಯ ಜಮೀನಿನಲ್ಲಿ ವಾಸವಿರುವವರ ಹಕ್ಕುಗಳನ್ನು ಮಾನ್ಯ ಮಾಡಿರುವ ಅರಣ್ಯ ಹಕ್ಕುಗಳ ಕಾಯ್ದೆಯ ಅಂಶಗಳನ್ನು ದುರ್ಬಲಗೊಳಿಸುತ್ತವೆ.

ಬುಡಕಟ್ಟು ಜನಗಳ ಹಕ್ಕುಗಳನ್ನು ಕಿತ್ತುಕೊಳ್ಳುವ ಕೆಲಸ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದೆ. ಕೇಂದ್ರದ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, 2020 ಆಗಸ್ಟ್ 31ರವರೆಗೆ  ಹಕ್ಕುಪತ್ರಕ್ಕಾಗಿ ಸಲ್ಲಿಸಲಾಗಿರುವ ಅರ್ಜಿಗಳಲ್ಲಿ ಶೇಕಡ 46.69ರಷ್ಟನ್ನು ಮಾತ್ರವೇ, ಅಂದರೆ ಅರ್ಧಕ್ಕಿಂತಲೂ ಕಡಿಮೆ ದಾವೆಗಳನ್ನು ಅಂಗೀಕರಿಸಲಾಗಿದೆ. ಬುಡಕಟ್ಟು ಜನರ ಕಲ್ಯಾಣದ ಬಗ್ಗೆ ತನ್ನ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಮೋದಿ ಬಡಾಯಿ ಕೊಚ್ಚಿಕೊಂಡಿರುವ ಮಧ್ಯ ಪ್ರದೇಶ ರಾಜ್ಯದಲ್ಲೇ ಅರಣ್ಯ ಹಕ್ಕುಗಳ ಕಾನೂನಿನಡಿ ಸಲ್ಲಿಸಲಾಗಿರುವ ಸುಮಾರಾಗಿ ಪ್ರತಿ ಐದರಲ್ಲಿ ಮೂರು ಬುಡಕಟ್ಟು ಕುಟುಂಬಗಳ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಬುಡಕಟ್ಟು ಜನಗಳಿಗೆ ಅರಣ್ಯ ಜಮೀನುಗಳ ಹಕ್ಕು ಮತ್ತು ಸಾಗುವಳಿಯ ಹಕ್ಕನ್ನು ಕೊಟ್ಟಿರುವ ಅರಣ್ಯ ಹಕ್ಕುಗಳ ಕಾಯ್ದೆ, 2006ರ ಉಲ್ಲಂಘನೆಯಾಗುತ್ತಿದೆ.

ಮೋದಿ ಆಡಳಿತದಲ್ಲಿ ಆದಿವಾಸಿಗಳ “ಸಮಾಜ ಕಲ್ಯಾಣ’ʼ ಹೇಗಿದೆ ಎನ್ನುವುದಕ್ಕೆ ಆದಿವಾಸಿ ಮಕ್ಕಳ ದುಸ್ಥಿತಿಯೇ ಕನ್ನಡಿ ಹಿಡಿಯುತ್ತದೆ. ಕೋವಿಡ್ ನಿಯಂತ್ರಣಕ್ಕೆಂದು ಹೇರಲಾದ ಮೊದಲ ಲಾಕ್‌ಡೌನ್ 2020 ಮಾರ್ಚ್‌ನಲ್ಲಿ ಆರಂಭವಾಗಿ ಶಾಲೆಗಳನ್ನು ಮುಚ್ಚಿದಾಗ, ಶೇಕಡ 90ರಿಂದ 95ರಷ್ಟು ಗ್ರಾಮೀಣ ಆದಿವಾಸಿ ವಿದ್ಯಾರ್ಥಿಗಳು ಶಿಕ್ಷಣದ ಇದ್ದಬದ್ದ ಅಲ್ಪ ಅವಕಾಶಗಳಿಂದಲೂ ವಂಚಿತರಾದರು. ಆನ್‌ಲೈನ್ ಶಿಕ್ಷಣ ಜಗತ್ತು ಆದಿವಾಸಿ ವಿದ್ಯಾರ್ಥಿಗಳಿಗೆ ಗಗನ ಕುಸುಮವೇ ಸರಿ. ಬಹುತೇಕ ಆದಿವಾಸಿ ಮಕ್ಕಳಿಗೆ ಶಿಕ್ಷಣದ ಹಕ್ಕು ಬರೀ ಪುಸ್ತಕದ ಬದನೆಕಾಯಿಯಾಯಿತು.

ಆಹಾರ ಭದ್ರತೆ ವಿಚಾರಕ್ಕೆ ಬಂದರೆ ಅತಿ ಹೆಚ್ಚು ತೊಂದರೆಗೆ ಒಳಗಾದವರು ಗ್ರಾಮೀಣ ಆದಿವಾಸಿ ಕುಟುಂಬಗಳು. ಹಸಿವಿನ ಅತಿ ಹೆಚ್ಚಿನ ಪ್ರಕರಣ ಅವರಲ್ಲೇ ಇದೆ. ಮನರೇಗಾದಡಿ ಉದ್ಯೋಗ ಸಿಗುವಲ್ಲಿಯೂ ಇವರೇ ಅತಿ ಹೆಚ್ಚು ವಂಚಿತರು.

ವಂಚಕ ಹಿಂದುತ್ವ ನಿಲುವು

ಆದಿವಾಸಿಗಳನ್ನು ಕುರಿತಂತೆ ಮೋದಿ ಸರ್ಕಾರದ ಹಿಂದುತ್ವ ನಿಲುವು ಬಲಪಂಥೀಯ ಅಸ್ಮಿತೆಯ ರಾಜಕೀಯದ ರೀತಿಯದ್ದೇ ಆಗಿದೆ. ಮೋದಿ ತನ್ನ ಭಾಷಣದಲ್ಲಿ ಶ್ರೀರಾಮನ ಆದರ್ಶ ವ್ಯಕ್ತಿತ್ವವು ಬುಡಕಟ್ಟು ಸಮಾಜದೊಂದಿಗೆ ಬೆಸೆದುಕೊಂಡಿದೆ ಎಂದು ಹೇಳಿದರು. ಇದು ಆದಿವಾಸಿಗಳನ್ನು ಹಿಂದೂ ವ್ಯವಸ್ಥೆಯಲ್ಲಿ ವಿಲೀನಗೊಳಿಸಿಕೊಳ್ಳುವ ಹಿಂದುತ್ವ ಯೋಜನೆಗೆ ಅನುಗುಣವಾಗಿದೆ. ನಿಜ, ಈ ವಿಲೀನವನ್ನು ನಡೆಸುವುದು ಸಮಾಜದ ಅತೀ ಕೆಳಸ್ತರದಲ್ಲಿಯೇ ಎಂದು ಬೇರೆ ಹೇಳಬೇಕಾಗಿಲ್ಲ.

ಬುಡಕಟ್ಟು ಜನಗಳ ಹೆಮ್ಮೆಯ ವ್ಯಕ್ತಿಗಳನ್ನು ಶ್ಲಾಘಿಸುವುದು, ರೈಲು ನಿಲ್ದಾಣಗಳಿಗೆ ಅವರ ಹೆಸರನ್ನಿಡುವುದು, ಅವರ ಪ್ರತಿಮೆಗಳನ್ನು ನಿರ್ಮಿಸುವುದು ಇವೇ ಮುಂತಾದವುಗಳ ಮೂಲಕ ಬುಡಕಟ್ಟು ಅಸ್ಮಿತೆಯನ್ನು ತುಷ್ಟೀಕರಿಸುವುದು; ಅದೇ ಹೊತ್ತಿಗೆ, ಆದಿವಾಸಿಗಳ ಭೂಮಿ ಹಾಗೂ ಅರಣ್ಯ ಹಕ್ಕನ್ನು ಇಲ್ಲವಾಗಿಸಿ. ಅವರ ಪ್ರಜಾಸತ್ತಾತ್ಮಕ ಮತ್ತು ಸಾಂವಿಧಾನಿಕ ಹಕ್ಕುಗಳನ್ನು ತುಳಿದು ಹಾಕುವುದು. ಆದಿವಾಸಿಗಳೇ ಹಿಂದುತ್ವ-ಕಾರ್ಪೋರೇಟ್ ಆಳ್ವಿಕೆಯ ಪ್ರಮುಖ ಬಲಿಪಶುಗಳಾಗಿದ್ದಾರೆ.

ಅನು: ವಿಶ್ವ

Leave a Reply

Your email address will not be published. Required fields are marked *