ದೇಶವನ್ನು ಮಾರಾಟಕ್ಕಿಟ್ಟಿರುವ ‘ಮಾರಾಟಗಾರ ಮೋದಿ’: ಮೀನಾಕ್ಷಿ ಸುಂದರಂ

ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಬೆಂಗಳೂರು ದಕ್ಷಿಣ ಜಿಲ್ಲಾ 23ನೇ ಸಮ್ಮೇಳನ

‘ಜನ ಕೊಟ್ಟ ಬಹಮತವನ್ನೇ ಬಂಡವಾಳ ಮಾಡಿಕೊಂಡಿರುವ ಬಿಜೆಪಿ, ದೇಶದ ಸಂಪತ್ತನ್ನು ಲೂಟಿಕೋರ ಬಂಡವಾಳದಾರರಿಗೆ ಧಾರೆ ಎರೆಯುತ್ತಿದೆ. ಮಾನಿಟೈಸೇಷನ್ ಎಂಬ ಪದಪುಂಜ ಬಳಸಿ ಸೇಲ್ಸ್‌ಮ್ಯಾನ್‌ ಕೆಲಸ ಮಾಡುತ್ತಿದೆ’ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ರಾಜ್ಯ ಮುಖಂಡ ಮೀನಾಕ್ಷಿ ಸುಂದರಂ ಹೇಳಿದರು.

ಸಿಪಿಐ(ಎಂ) ಬೆಂಗಳೂರು ದಕ್ಷಿಣ ಜಿಲ್ಲೆಯ 23ನೇ ಸಮ್ಮೇಳನದ ಅಂಗವಾಗಿ ನವೆಂಬರ್ 19ರಂದು, ಸಾರಕ್ಕಿ ವೃತ್ತದ ಬಳಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

CPIM SDC‘ನೋಟು ಅಮಾನ್ಯೀಕರಣ, ಜಿಎಸ್‌ಟಿ ನಂತರ ಒಕ್ಕರಿಸಿದ ಕೊರೊನಾ, ಜನರ ಆದಾಯ ಕಸಿದಿದೆ. ಹೀಗಿದ್ದೂ ಬೆಲೆ ಏರಿಕೆಯ ಹೊರೆಹೊರಿಸಿ ಜನರನ್ನು ಬೀದಿಗೆ ತಳ್ಳಿದೆ. ಸೌದೆ ಒಲೆಯ ಹೊಗೆ ಕುಡಿವ ಗ್ರಾಮೀಣ ಮಹಿಳೆಯರ ಬಗ್ಗೆ ಕಣ್ಣೀರು ಸುರಿಸಿ ಉಚಿತ ಗ್ಯಾಸ್ ಕೊಡುವುದಾಗಿ ಹೇಳಿದ್ದ ಮೋದಿ, ಸಾವಿರ ರೂಪಾಯಿಗೆ ಬೆಲೆ ಏರಿಸಿ, ಇತ್ತ ಗ್ಯಾಸೂ ಇಲ್ಲ, ಅತ್ತ ಸೌದೆ ಒಲೆಯೂ ಇಲ್ಲದಂತೆ ಮಾಡಿದ್ದಾರೆ’ ಎಂದರು.

‘ದೆಹಲಿ ರೈತ ಹೋರಾಟಗಾರರನ್ನು ಖಲಿಸ್ತಾನಿ ಉಗ್ರಗಾಮಿಗಳು ಎಂದು ಮೂದಲಿಸಿದ್ದ ಮೋದಿ, ಉಪಚುನಾವಣೆಗಳಲ್ಲಿ ಸೋಲು ಕಾಣುತ್ತಿದ್ದಂತೆ ರೈತರ ಮೇಲೆ ಮಮತೆ ತೋರಲು ಮುಂದಾಗಿದ್ದಾರೆ. 700 ಜನ ರೈತರನ್ನು ಬಲಿ ಪಡೆದು ರೈತಪರ ಎಂದು ಬಿಂಬಿಸಿಕೊಳ್ಳುವ ಮೋದಿಯ ಕಪಟತವನ್ನು ಜನ ಅರ್ಥ ಮಾಡಿಕೊಂಡಿದ್ದಾರೆ, ಚುನಾವಣೆಗಳಲ್ಲಿನ ಅವರ ಸೋಲು ಮುಂದುವರಿಯಲಿದೆ’ ಎಂದರು.

ಕೃಷಿ ಕಾಯ್ದೆಗಳು ವಾಪಾಸ್ಸಾದಂತೆ, ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನೂ ಜಾರಿ ಮಾಡದಂತೆ ಕಾರ್ಮಿಕ ಚಳುವಳಿಯೂ ದೇಶವ್ಯಾಪಿ ಎದ್ದು ಬರಲಿದೆ. ಇದಕ್ಕೆ ಬೆಂಗಳೂರಿನ ಕಾರ್ಮಿಕ ವರ್ಗವೂ ಜತೆಯಾಗಿ ನಿಲ್ಲಬೇಕು. ರೈತ-ಕಾರ್ಮಿಕರ ಐಕ್ಯತೆಯು ಪರ್ಯಾಯ ನೀತಿಗಳ ಉದಯಕ್ಕೆ ನಾಂದಿ ಹಾಡಲಿದೆ’ ಎಂದರು. ಈ ದಿಸೆಯಲ್ಲಿ ಸಿಪಿಐ(ಎಂ) ದುಡಿಯುವ ವರ್ಗದ ಪರವಾದ ಜನಪರ ಪರ್ಯಾಯವನ್ನು ಕೊಡುವ ದಾರಿಯಲ್ಲಿ ಹೋರಾಡುತ್ತಿದೆ ಎಂದರು.

‘ಭಾರತದ ಕಮ್ಯುನಿಸ್ಟ್ ಆಂದೋಲನ – ಹೋರಾಟಗಳ ನೂರು ವರುಷಗಳು’ (ಲೇಖನಗಳ ಸಂಗ್ರಹ) ಹಾಗು ಆರ್.ಅರುಣ್ ಕುಮಾರ್ ಬರೆದಿರುವ ‘ಭಾರತದಲ್ಲಿ ಕಮ್ಯೂನಿಸ್ಟ್ ಪಕ್ಷ’ ಎಂಬ ಪುಸ್ತಕಗಳನ್ನು ಸಿಪಿಐ(ಎಂ) ಮುಖಂಡರಾದ ಎಸ್.ವರಲಕ್ಷ್ಮೀ ಬಿಡುಗಡೆ ಮಾಡಿದರು. ಹಿರಿಯ ಮುಖಂಡ ಟಿ.ಸುರೇಂದ್ರರಾವ್ ಅಧ್ಯಕ್ಷತೆ ವಹಿಸಿದ್ದರು. ಡಾ.ಕೆ.ಪ್ರಕಾಶ್, ಕೆ.ಎನ್.ಉಮೇಶ್ ಮಾತನಾಡಿದರು. ಭೂಮ್ತಾಯಿ ಬಳಗದವರು ಸೌಹಾರ್ದ ಗೀತೆಗಳನ್ನು ಹಾಡಿದರು. ಇದಕ್ಕೂ ಮೊದಲು ನಡೆದ ಜನತೆಯ ಹಕ್ಕುಗಳಿಗಾಗಿ ರಾಜಕೀಯ ಹಕ್ಕೊತ್ತಾಯ ರ‍್ಯಾಲಿಯಲ್ಲಿ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

IMG_20211119_180606ಹಿರಿಯ ಸಂಗಾತಿಗಳಿಗೆ ಗೌರವ ಸನ್ಮಾನ

ಪಕ್ಷಕ್ಕಾಗಿ ದಶಕಗಳ ಕಾಲ ದುಡಿದ ಹಿರಿಯ ಸಂಗಾತಿಗಳನ್ನು ಸನ್ಮಾನಿಸಲಾಯಿತು. ರೈತ ಮುಖಂಡ ಎನ್.ವೆಂಕಟಾಚಲಯ್ಯ, ಸಾಂಸ್ಕೃತಿಕ ರಂಗದಲ್ಲಿ ಗುರುತಿಸಿಕೊಂಡಿದ್ದ ಟಿ.ಸುರೇಂದ್ರರಾವ್, ವಿಮಾ ರಂಗದ ಚಳುವಳಿಯಲ್ಲಿ ಗುರುತಿಸಿಕೊಂಡಿದ್ದ ಎಚ್.ಎಸ್.ವೆಂಕಟೇಶಮೂರ್ತಿ, ಜಿ.ಕೆ.ಗಂಗಾಧರ್, ದೇಶಾಭಿಮಾನಿ ಶಾಖೆ ಹಿರಿಯ ಸಂಗಾತಿ ಉನ್ನಿಕೃಷ್ಣನ್ ಅವರು ಸನ್ಮಾನ ಸ್ವೀಕರಿಸಿದರು.

ನಾಲ್ಕು ವರ್ಷಗಳ ಹೆಜ್ಜೆಗುರುತು – ಛಾಯಾಚಿತ್ರ ಪ್ರದರ್ಶನ

ಕಾರ್ಮಿಕ ಮುಖಂಡ ಕಾಮ್ರೇಡ್ ಪುರುಷೋತ್ತಮ ಕಲಾಲಬಂಡಿ ಅವರ ಹೆಸರಿನಲ್ಲಿ ಕುಮಾರಸ್ವಾಮಿ ಬಡಾವಣೆಯ ಉಡುಪಿ ಸ್ವಾದ್ ಹೋಟೆಲ್ ನಲ್ಲಿ ನಾಲ್ಕು ವರ್ಷಗಳ ಹೋರಾಟಗಳನ್ನು ಸ್ಮರಿಸುವ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.

ಕಿರುತೆರೆ ನಿರ್ದೇಶಕ ಹಾಗು ನಟ ಬಿ.ಸುರೇಶ್ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ‘ಶೇಕಡ 2ರಷ್ಟಿರುವ ವೈದಿಕಶಾಹಿ ಇಡೀ ದೇಶ ತನ್ನ ಅಣತಿಯಂತೆ ನಡೆಯಬೇಕೆಂದು ಆಜ್ಞೆ ಹೊರಡಿಸುತ್ತಿದೆ,  ಭಾರತದಲ್ಲಿ ಎರಡು ಭಾರತ ಮಾತ್ರವಲ್ಲ ಕಲ್ಲು ಹೊಡೆಯುವವರ ಭಾರತ, ಬಾಯಿ ಮುಚ್ಚಿಸುವವರ ಭಾರತ ಸೇರಿದಂತೆ ಹಲವು ಭಾರತಗಳಿವೆ. ವೀರ್ ದಾಸ್ ಹಾಗು ಹಂಸಲೇಖ ಅವರ ಮೇಲಿನ ದಾಳಿ ಇದನ್ನು ಪುಷ್ಟೀಕರಿಸುತ್ತಿದೆ’ ಎಂದರು. ‘ಕಮ್ಯುನಿಸ್ಟ್ ಪಕ್ಷಗಳು ಅಂಬೇಡ್ಕರ್ ವಾದದ ಜತೆಗೆ ಮಿಳಿತಗೊಂಡು ಜಾತಿ ಪ್ರಶ್ನೆಯನ್ನು ಪ್ರಧಾನವಾಗಿ ಪರಿಗಣಿಸಿ ನಡೆಯಬೇಕಾದ ಅಗತ್ಯವಿದೆ’ ಎಂದರು.

‘ಕಮ್ಯುನಿಸ್ಟ್ ಪಕ್ಷಗಳ ಮೇಲೆ ಬಹಳ ದೊಡ್ಡ ಜವಾಬ್ದಾರಿ ಇದೆ. ಒಡೆದು ಚೂರಾಗಿರುವ ಮನಸ್ಸುಗಳನ್ನು ಒಗ್ಗೂಡಿಸುವ ಸವಾಲು ಇದೆ. ಪ್ರಭಾವಿ ಮಾಧ್ಯವಾಗಿರುವ ಸಿನಿಮಾ, ರಂಗಭೂಮಿಯನ್ನು ಬಳಸಿಕೊಂಡು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಮುಖ್ಯವಾಹಿನಿ ಸಿನಿಮಾಗಳಲ್ಲಿ ಜನರ ನೈಜ ಸಮಸ್ಯೆಗಳು ಬಿಂಬಿತವಾಗಲು ಜೈ ಭೀಮ್ ದಂತಹ ಸಿನಿಮಾ ಬರಬೇಕಾಯಿತು, ಈ ಪ್ರಯತ್ನಗಳು ಇನ್ನಷ್ಟು ಹೆಚ್ಚಬೇಕು’ ಎಂದರು.

ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಬಿ.ರಾಜಶೇಖರ ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕಲಾಲಬಂಡಿಯವರ ಪತ್ನಿ ಶ್ಯಾಮಲಾ ಪೂಜಾರ್ ಇದ್ದರು.

ನವೆಂಬರ್ 21ರಂದು ನಡೆದ ಪ್ರತಿನಿಧಿ ಅಧಿವೇಶನದಲ್ಲಿ ರಾಜಕೀಯ ಸಂಘಟನಾ ವರದಿ ಹಾಗು ಕೋವಿಡ್ ಸಂದರ್ಭದಲ್ಲಿ ಪಕ್ಷದ ಮಧ್ಯಪ್ರವೇಶ ಕುರಿತ ವಿಸ್ತೃತ ವರದಿ ಮೇಲೆ ಪ್ರತಿನಿಧಿಗಳು ಚರ್ಚಿಸಿದರು. ಇದರ ಆಧಾರದ ಮೇಲೆ ಪಕ್ಷವನ್ನು ಜನತೆಯ ನಡುವೆ ಬಲಿಷ್ಟವಾಗಿ ಕಟ್ಟುವ ಮುಂದಿನ ಕರ್ತವ್ಯಗಳನ್ನು ತೀರ್ಮಾನಿಸಲಾಗಿದೆ. ಮುಂಬರುವ ದಿನಗಳಲ್ಲಿ ಜನತೆಯ ಪ್ರಶ್ನೆಗಳ ಮೇಲೆ ಹೋರಾಟಗಳನ್ನು ರೂಪಿಸಲು ನಗರದ ನಾಗರಿಕ ಸಮಸ್ಯೆಗಳು, ಮೂಲಸೌಕರ್ಯ ಅಭಿವೃದ್ಧಿ, ಬಿಬಿಎಂಪಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಬಿಎಸ್ ಪಾಟೀಲ್ ವರದಿ ಆಧರಿಸಿ ಆಡಳಿತ ವಿಕೇಂದ್ರೀಕರಣ ಮಾಡಬೇಕೆಂಬ ಇತ್ಯಾದಿ ಪ್ರಶ್ನೆಗಳ ಮೇಲೆ ನಿರ್ಣಯ ಕೈಗೊಳ್ಳಲಾಗಿದೆ.

WhatsApp Image 2021-11-22 at 12.10.01 PMನೂತನ ಕಾರ್ಯದರ್ಶಿಯಾಗಿ ಬಿ.ಎನ್.ಮಂಜುನಾಥ್ ಆಯ್ಕೆ

ಸಮ್ಮೇಳನವು 17 ಜನರ ನೂತನ ಜಿಲ್ಲಾ ಸಮಿತಿ ಆಯ್ಕೆ ಮಾಡಿದ್ದು, ಜಿಲ್ಲಾ ಕಾರ್ಯದರ್ಶಿಯಾಗಿ ಬಿ.ಎನ್.ಮಂಜುನಾಥ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ ಮಂಡಳಿ ಸದಸ್ಯರಾಗಿ ಡಾ.ಕೆ.ಪ್ರಕಾಶ್, ಕೆ.ಎಸ್. ವಿಮಲಾ, ಬಿ. ರಾಜಶೇಖರಮೂರ್ತಿ, ಲಿಂಗರಾಜು, ಪಿ.ನಾಗರಾಜ್, ಸಿ.ಜಿ. ಶ್ರೀಪತಿ ಆಯ್ಕೆಯಾಗಿದ್ದಾರೆ. ಹಿರಿಯ ಮುಖಂಡ ಟಿ. ಸುರೇಂದ್ರರಾವ್ ವಿಶೇಷ ಆಹ್ವಾನಿತರಾಗಿ ಆಯ್ಕೆ ಮಾಡಲಾಗಿದೆ.

ಪಕ್ಷದ ರಾಜ್ಯ ಸಮಿತಿ ಸದಸ್ಯ ಡಾ. ಕೆ. ಪ್ರಕಾಶ್ ಸಮಾರೋಪ ಭಾಷಣ ಮಾಡಿದರು. ಜಿಲ್ಲಾ ಸಮಿತಿಯಿಂದ ಬಿಡುಗಡೆಯಾದ ಕೆ.ಎನ್. ಉಮೇಶ್ ಅವರನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *