ಕಾಮ್ರೇಡ್ ಆರ್.ಶ್ರೀನಿವಾಸ್ ನಮ್ಮೆಲ್ಲರನ್ನು ಅಗಲಿದ್ದಾರೆ

ಆರ್ ಎಸ್. ಎಂದೇ ಪಕ್ಷ ಮತ್ತು ಕಾರ್ಮಿಕರ ನಡುವೆ ಪ್ರೀತಿಯಿಂದ ಕರೆಯಿಸಿಕೊಳ್ಳುತ್ತಿದ್ದ ಕಾಮ್ರೇಡ್ ಆರ್.ಶ್ರೀನಿವಾಸ್ ಇಂದು ನಮ್ಮೆಲ್ಲರನ್ನು ಅಗಲಿದ್ದಾರೆ.

ಅವರು ಸಿಪಿಎಂ ನ ಬೆಂಗಳೂರು ಉತ್ತರ ಜಿಲ್ಲಾ ಸಮಿತಿ ಕಾರ್ಯದರ್ಶಿ ಕಾರ್ಯ ನಿರ್ವಹಿಸುತ್ತಿದ್ದರು. ರಾಜ್ಯ ಸಮಿತಿ‌ ಸದಸ್ಯರಾಗಿ, ಸಿಐಟಿಯು ರಾಜ್ಯ ಉಪಾಧ್ಯಕ್ಷರಾಗಿಯೂ ಬಹಳ ದೀರ್ಘಕಾಲದಿಂದಲೂ ತಮ್ಮ ಸೇವೆ ಸಲ್ಲಿಸಿದ್ದಾರೆ.

ಕಮ್ಯುನಿಸ್ಟ್ ಸಿದ್ದಾಂತದೆಡೆಗೆ ಆಕರ್ಷಿತರಾದ ಕಾಮ್ರೇಡ್ ಆರ್.ಶ್ರೀನಿವಾಸ್, ಅತೀವ ಕಷ್ಟ ಕಾರ್ಪಣ್ಯಗಳ ನಡುವೆಯೂ ತತ್ವ-ಸಿದ್ಧಾಂತಕ್ಕೆ ಬದ್ಧರಾಗಿ, ಕೊನೆಯವರೆಗೂ ಕಮ್ಯುನಿಸ್ಟ್ ಕಟ್ಟಾಳಾಗಿ ತಮ್ಮ ನಿಷ್ಠೆ ಮೆರೆದವರು.

ದಣಿವರಿಯದ ತಮ್ಮ ದುಡಿಮೆ, ಕಾರ್ಮಿಕರನ್ನು ಸಂಘಟಿಸುವ ಅವರ ಸಂಘಟನಾ ಕೌಶಲ್ಯ, ಎಳೆಯ ಸಂಗಾತಿಗಳನ್ನು ಪ್ರೀತಿಯಿಂದ ಕಾಣುತ್ತಿದ್ದ ಅವರ ವಾತ್ಸಲ್ಯಮಯಿ ಸಾಂಗತ್ಯವನ್ನು ಅಪ್ಪಿಕೊಂಡವರ ಸಂಖ್ಯೆಗೆ ಲೆಕ್ಕವಿಲ್ಲ.

ಕಾಮ್ರೇಡ್ ಆರ್. ಶ್ರೀನಿವಾಸ್‌ರವರು

ಫೆದರ್ಲೈಟ್ ಕಾರ್ಖಾನೆಯ ಕಾರ್ಮಿಕರಾಗಿದ್ದವರು. ದುಡಿಯುವ ಜನರಿಗೆ ನ್ಯಾಯಯುತ ವಾಗಿ ಸಿಗಬೇಕಾದ ಸೌಲಭ್ಯ ಗಳಿಗಾಗಿ ಹೋರಾಟ ನಡೆಸಿದರೆಂದು ಅಮಾನತುಗೊಂಡವರು. ಆದರೆ ಹಿಂಜರಿಯದೇ ನಡೆಸಿದ ಹೋರಾಟದಿಂದ ಮತ್ತೆ ಕಾರ್ಖಾನೆ ಯಲ್ಲಿ ಅವರನ್ನು ಕೆಲಸಕ್ಕೆ ತೆಗೆದು ಕೊಳ್ಳಬೇಕಾಯಿತು.

ನಂತರ ಅವರು ಹಲವಾರು ಸಣ್ಣ ಕಾರ್ಖಾನೆಗಳ ಕಾರ್ಮಿಕರ ಹಕ್ಕುಗಳಿಗಾಗಿ ಅವರನ್ನು ಸಂಘಟಿಸಿ ಯೂನಿಯನ್‌ಗಳನ್ನು ಕಟ್ಟಿದವರಿ. ಅಸಂಘಟಿತ ವಲಯದ‌ ಗಾರ್ಮೆಂಟ್ ಕಾರ್ಖಾನೆಗಳಲ್ಲಿಯೂ ಸಂಘ ಕಟ್ಟಿ ಮಾಲಿಕರ ದಬ್ಬಾಳಿಕೆಯ ವಿರುದ್ಧ ಹೋರಾಟ ನಡೆಸಿದವರು.

ಬಿಪಿಎಲ್ ಕಾರ್ಮಿಕರ ಸಂಘದ ನಾಯಕರಾಗಿದ್ದವರು. ಕಾರ್ಮಿಕರ ಸಂಘ ಕಟ್ಟುವ ಸಂವಿಧಾನಾತ್ಮಕ‌ ಹಕ್ಕುಗಳ ಪರವಾಗಿ ಕಾರ್ಮಿಕರ ಜೊತೆ ನಿಂತು ಅಲ್ಲಿ ಸಿ.ಐ.ಟಿ.ಯು.ಸಂಘ ಕಟ್ಟಿದವರು. ಸಂಘದ ಅಡಿಯಲ್ಲಿ ಮಾಲೀಕರ ದಬ್ಬಾಳಿಕೆ ಹಾಗೂ ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಕಾನೂನಾತ್ಮಕವಾದ ಮುಷ್ಕರದಲ್ಲಿ ತೊಡಗಿದ್ದಾಗ, ಕಾರ್ಮಿಕರ ಮುಷ್ಕರವನ್ನು ಮುರಿಯಲು ಕಾರ್ಖಾನೆಯ ಮಾಲೀಕರು ಹಾಗೂ ಪ್ರಭುತ್ವದ ಜತೆ ಸೇರಿ ನಡೆಸಿದ  ಪಿತೂರಿಯಿಂದಾಗಿ ಕಾಂ. ಆರ್.ಎಸ್.  ಜೈಲು ಸೇರುವಂತಾಯಿತು. ಜೀವಾವಧಿ ಶಿಕ್ಷೆಯಾಯಿತು.

ಮಾಡದ ತಪ್ಪಿಗೆ, ನ್ಯಾಯದ ಪರ ನಿಂತದ್ದಕ್ಕೆ, ತಮ್ಮ ಜೀವನದ ಅಮೂಲ್ಯ 17 ವರ್ಷಗಳನ್ನು ಜೈಲಿನಲ್ಲೆ ಕಳೆಯಬೇಕಾಯಿತು.  ಜೈಲಿನಲ್ಲಿಯೂ ಕೈದಿಗಳ ಮನಃ ಪರಿವರ್ತೆಗಾಗಿ, ಜೈಲಿನ ಅವ್ಯವಸ್ಥೆ ವಿರುದ್ಧವೂ  ಹೋರಾಟ ನಡೆಸುವುದನ್ನು ಅವರು ಮುಂದುವರಿಸಿದ್ದರು ಎಂಬುದೇ ಅವರೊಬ್ಬ ಹುಟ್ಟು ಹೋರಾಟಗಾರ ಎಂಬುದಕ್ಕೆ ಸಾಕ್ಷಿ.

ಜೀವಾವಧಿ ಶಿಕ್ಷೆ ನಡುವೆ ಪೆರೋಲ್ ಮೇಲೆ ಹೊರ ಬಂದ ಸಂದರ್ಭಗಳಲ್ಲಿ ಸಭೆ, ಸಮಾರಂಭಗಳು ಹಾಗು ಹೋರಾಟಗಳಿದ್ದಾಗ ತಪ್ಪದೇ ಭಾಗವಹಿಸುತ್ತಿದ್ದರು. ಇದು ಅವರಲ್ಲಿನ ಬದ್ಧತೆ, ಕುಗ್ಗದ ಉತ್ಸಾಹ,  ದೃತಿಗೆಡದ ಅವರ ಮನಸ್ಥಿತಿಯ ದ್ಯೋತಕ.

ತನ್ನ ಜೀವನದ ಬಹು ಅಮೂಲ್ಯವಾದ ಸಮಯದಲ್ಲಿ 17 ವರ್ಷಗಳನ್ನು ಜೈಲಿನಲ್ಲಿ ಕಳೆದರೂ,  ಬಿಡುಗಡೆ ನಂತರವೂ ಪಕ್ಷ ನಿಷ್ಟೆ, ನಂಬಿದ ಸಿದ್ಧಾಂತ ಮೇಲಿನ ಅಚಲವಾದ ನಂಬಿಕೆ  ಅವರನ್ನು ಮತ್ತೆ ಚಳುವಳಿಯಲ್ಲಿ ಮುಂದುವರಿಯುವಂತೆ ಮಾಡಿತು.

ನೇರ ನಡೆ-ನುಡಿಯ, ಮಾತೃ ಹೃದಯಿ ಕಾಮ್ರೇಡ್ ಆರ್. ಶ್ರೀನಿವಾಸ್ ಅವರು, ತಮ್ಮ  ಅಸಂಖ್ಯಾತ ಸಂಗಾತಿಗಳನ್ನು  ಬಿಟ್ಟು ಒಂಟಿಯಾಗಿ ಬಹುದೂರ  ನಡೆದು ಹೋಗಿದ್ದು  ವಿಷಾದನೀಯ.

ಲಾಲ್ ಸಲಾಂ ಕಾಮ್ರೇಡ್….

Leave a Reply

Your email address will not be published. Required fields are marked *