ಬಾದಲ್ ಚೌಧುರಿಯವರನ್ನು ಪೀಡಿಸುವುದನ್ನು ನಿಲ್ಲಿಸಿ

ತ್ರಿಪುರಾದ ಹಿರಿಯ ಸಿಪಿಐ(ಎಂ) ಮುಖಂಡ ಮತ್ತು ಮಾಜಿ ಮಂತ್ರಿ ಬಾದಲ್ ಚೌಧುರಿಯವರನ್ನು ತ್ರಿಪುರಾದ ಪೋಲೀಸರು ನಡೆಸಿಕೊಂಡಿರುವ ಬಗ್ಗೆ ಸಿಪಿಐ(ಎಂ) ಪೊಲಿಟ್‌ಬ್ಯುರೊ ತೀವ್ರ ಕ್ರೋಧವನ್ನು ಮತ್ತು ಖಂಡನೆಯನ್ನು ವ್ಯಕ್ತಪಡಿಸಿದೆ.

ಬಾದಲ್ ಚೌಧುರಿ ಒಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಕ್ಟೋಬರ್ 30 ರಂದು ಆಸ್ಪತ್ರೆಗೆ ಬಂದ ಪೋಲೀಸರು ಅವರನ್ನು ಅಲ್ಲಿಂದ ಬಲವಂತವಾಗಿ ಕರೆದೊಯ್ದು ಪೋಲೀಸ್ ಲಾಕಪ್‌ನಲ್ಲಿ ಹಾಕಿದರು. ಕೆಲವೇ ನಿಮಿಷಗಳಲ್ಲಿ ಬಾದಲ್ ಚೌಧುರಿ ಅಸ್ವಸ್ಥರಾದರು.

ಎದೆನೋವು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ಸರಕಾರೀ ಡಾಕ್ಟರು ಅವರನ್ನು ಆಸ್ಪತ್ರೆಗೆ ಸೇರಿಸಿ ಎಂದು ಸಲಹೆ ನೀಡಿದ್ದರಿಂದ ಒಂದು ಗಂಟೆಯೊಳಗೆ ಮತ್ತೆ ಅವರನ್ನು ಸರಕಾರೀ ಆಸ್ಪತ್ರೆಗೆ ಒಯ್ದು ತೀವ್ರ ನಿಗಾ ಘಟಕ(ಐಸಿಯು)ಗೆ ಸೇರಿಸಬೇಕಾಯಿತು.

ಹೈಕೋರ್ಟ್ ಅವರ ಜಾಮೀನು ಅರ್ಜಿಯನ್ನು ವಿಚಾರಿಸುತ್ತಿದ್ದಾಗಲೇ ಈ ಪೋಲೀಸ್ ಕಾರ್ಯಾಚರಣೆ ನಡೆದಿದೆ ಎಂಬುದನ್ನು ಗಮನಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿದೆ. ನ್ಯಾಯಾಲಯ ತೀರ್ಪನ್ನು ಕಾದಿರಿಸಿದೆ.

ಕಾಯಿಲೆಯಲ್ಲಿರುವ ಒಬ್ಬ ಮುಖಂಡರು, ಎಂಟು ಅವಧಿಗಳಲ್ಲಿ ಶಾಸಕರಾಗಿ ಆಯ್ಕೆಯಾದವರು ಹಾಗೂ ಹಿಂದಿನ ಎಡರಂಗ ಸರಕಾರದಲ್ಲಿ ಮಂತ್ರಿಯಾಗಿದ್ದವರ ವಿರುದ್ಧ ಪೋಲೀಸರ ಇಂತಹ ಬರ್ಬರ ಕಾರ್ಯಾಚರಣೆ ತೀವ್ರ ಖಂಡನೆಗೆ ಅರ್ಹವಾಗಿರುವ ಕೃತ್ಯ ಎಂದಿರುವ ಸಿಪಿಐ(ಎಂ) ಪೊಲಿಟ್‌ಬ್ಯುರೊ ಈ ವಿಷಯದಲ್ಲಿ ತ್ರಿಪುರಾದ ಬಿಜೆಪಿ ಸರಕಾರವೂ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದಿದೆ.

tripua protest 311019

ಬಾದಲ್ ಚೌಧುರಿಯವರೊಂದಿಗೆ ಸರ್ವಾಧಿಕಾರಶಾಹೀ ವರ್ತನೆಯ ವಿರುದ್ಧ ಅಗರ್ತಲಾದಲ್ಲಿ ಭಾರೀ ಪ್ರತಿಭಟನೆ

Leave a Reply

Your email address will not be published. Required fields are marked *