ಹಾಸ್ಟೆಲ್ ‍ಶುಲ್ಕಗಳ ವಿಪರೀತ ಏರಿಕೆಗೆ ಜೆ.ಎನ್‍.ಯು. ವಿದ್ಯಾರ್ಥಿಗಳ ಪ್ರತಿಭಟನೆ

ಪೋಲೀಸ್‍ ಕಾರ್ಯಾಚರಣೆಗೆ ಸಿಪಿಐ(ಎಂ) ಪೊಲಿಟ್ ಬ್ಯುರೊ ಖಂಡನೆ

ಜವಾಹರಲಾಲ್‍ ನೆಹರು ವಿಶ್ವವಿದ್ಯಾಲಯ(ಜೆ.ಎನ್.ಯು.)ದಲ್ಲಿ ಇತ್ತೀಚೆಗೆ ಪ್ರಕಟಿಸಿರುವ ಹಾಸ್ಟೆಲ್‍ ಶುಲ್ಕಗಳ ವಿಪರೀತ ಏರಿಕೆಯನ್ನು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ  ಪೋಲೀಸ್‍ ಕಾರ್ಯಾಚರಣೆ ನಡೆಸಿರುವುದನ್ನು ಸಿಪಿಐ(ಎಂ) ಪೊಲಿಟ್ ‍ಬ್ಯುರೊ ಖಂಡಿಸಿದೆ.

ಇದು ವಿಭಿನ್ನ ಹಿನ್ನೆಲೆಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಕೈಗೆಟಕುವಂತೆ ಮಾಡುವ ಜೆ.ಎನ್‍.ಯು.ನ ಪ್ರಸಕ್ತ ಸ್ವರೂಪವನ್ನು ಬದಲಿಸಿ ಅದನ್ನು ಒಂದು ಮೇಲ್ವರ್ಗದ ಜನಗಳ ವಿಶ್ವವಿದ್ಯಾಲಯವಾಗಿ ಮಾಡುತ್ತದೆ ಎಂದು ಅದು ಹೇಳಿದೆ. ಜೆ.ಎನ್‍.ಯು.ನ ವಾರ್ಷಿಕ ವರದಿಯ ಪ್ರಕಾರ 2017ರಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಲ್ಲಿ 40ಶೇ. ಮಂದಿಯ ಪಾಲಕರ ಮಾಸಿಕ ಆದಾಯ ರೂ.12,000ಕ್ಕಿಂತ ಕಡಿಮೆ ಇದೆ.

ಜೆ.ಎನ್‍.ಯು.ನ ಈ ಸ್ವರೂಪದಿಂದಾಗಿಯೇ, ಹಿಂದುಳಿದ ಪ್ರದೇಶಗಳಿಂದ ಮತ್ತು ಅಂಚಿಗೆ ತಳ್ಳಲ್ಪಟ್ಟ ವಿಭಾಗಗಳಿಂದ ಬರುವ ವಿದ್ಯಾರ್ಥಿಗಳಿಗೆ ಅವರ ಕೈಗೆಟಕುವ ರೀತಿಯಲ್ಲಿ ಶಿಕ್ಷಣವನ್ನು ಒದಗಿಸಿ ಅದು ಹಲವು ತಲೆಮಾರುಗಳ ಸಾಮಾಜಿಕ ಪ್ರಜ್ಞೆಯುಳ್ಳ ನಾಗರಿಕರು ಮತ್ತು ದೇಶ ಕಟ್ಟುವವರನ್ನು ನಿರ್ಮಿಸಿದೆ. ಈ ರೀತಿ ಕೈಗೆಟಕುವ ವೆಚ್ಚದಲ್ಲಿ ಪ್ರತಿಭೆಗಳು ಅರಳುತ್ತಿರುವುದರ ಮೇಲೆಯೇ ಈಗ ಹಲ್ಲೆ ಮಾಡಲಾಗುತ್ತಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸಿಪಿಐ(ಎಂ) ಹೇಳಿದೆ.

ಉಪಕುಲಪತಿ ಈ ಬಗ್ಗೆ ವಿದ್ಯಾರ್ಥಿ ಸಂಘದ ಮುಖಂಡರೊಂದಿಗೆ ಚರ್ಚಿಸಲು ಕೂಡ ಹಠಮಾರಿತನದಿಂದ ನಿರಾಕರಿಸಿರುವುದರಿಂದಾಗಿ ಇಂತಹ ಸನ್ನಿವೇಶ ಏರ್ಪಟ್ಟಿದೆ. ಕೇಂದ್ರ ಮಾನವ ಸಂಪನ್ಮೂಲ ಮಂತ್ರಿಗಳು ಈಗ ಉಪಕುಲಪತಿಗಳಿಗೆ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸುವಂತೆ ನಿರ್ದೇಶಿಸುವುದಾಗಿ ಆಶ್ವಾಸನೆಯನ್ನು ವಿದ್ಯಾರ್ಥಿಗಳಿಗೆ ನೀಡಿದ್ದಾರೆ. ಇದನ್ನು ಕೂಡಲೇ ಮಾಡಬೇಕು ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಆಗ್ರಹಿಸಿದೆ.

Leave a Reply

Your email address will not be published. Required fields are marked *