ದಾದಾ ಅಮೀರ್ ಹೈದರ್ ಖಾನ್ ಒಬ್ಬ ಕೆಚ್ಚೆದೆಯ ಕ್ರಾಂತಿಕಾರಿ

ಬದುಕಿಗಾಗಿ ವಿವಿಧ ಬಗೆಯ ಉದ್ಯೋಗ ಮಾಡುವಾಗ ಮತ್ತು ಜಗತ್ತಿನ ಸುತ್ತ ಪ್ರಯಾಣ ಮಾಡಬೇಕಾದಾಗ ಬದುಕು ಅವರತ್ತ ಎಸೆದ ಸವಾಲುಗಳನ್ನು ಎದುರಿಸಲು ಬಹಳ ಬೇಗ ಕಲಿತರ ಅಮೀರ್ ಹೈದರ್ ಖಾನ್ ಹಡಗಿನಲ್ಲಿ ಕೂಲಿಗಾರನಾಗಿ, ನಂತರ ಬಾಯ್ಲರ್ ಇಂಜಿನಿಯರಾಗಿ, ಏರೋಪ್ಲೇನ್ ಪೈಲಟ್ಟಾಗಿ ಮತ್ತು ಆಟೋ ಕೆಲಸಗಾರನಾಗಿ ದುಡಿಯುತ್ತಲೇ ಜಗತ್ತೆಲ್ಲಾ ಸುತ್ತಿದವರು, ಅದರಿಂದಾಗಿ ಕ್ರಾಂತಿಕಾರಿಗಳ ಸಂಪರ್ಕ ಗಳಿಸಿ  ರಾಜಕೀಯ ಕಾರ್ಯಕರ್ತನಾಗಿ, ಕ್ರಾಂತಿಕಾರಿಯಾಗಿ, ಭಾರತೀಯ ಉಪಖಂಡದಲ್ಲಿ ಕಮ್ಯುನಿಸ್ಟ್ ಆಂದೋಲನದ ಒಬ್ಬ ಪ್ರವರ್ತಕರಾಗಿ  ಹೊರಹೊಮ್ಮಿದರು. ಉತ್ತಮ ನಾಳೆಗಾಗಿ ಜಗತ್ತು ಬದಲಾಗಲೇ ಬೇಕು ಎಂಬ ಮಾರ್ಕ್ಸಿಸ್ಟ್ ಸೂಕ್ತಿಗೆ ತಕ್ಕಂತೆ ಅವರ ಬದುಕು ಅರ್ಥವತ್ತಾಗಿತ್ತು, ಸ್ಫೂರ್ತಿದಾಯಕವಾಗಿತ್ತು.

Communist100 File copyಭಾರತ ಉಪಖಂಡದ ಸರ್ವಸಾಮರ್ಥ್ಯವುಳ್ಳ, ದಂತಕತೆಯಾದ ಕಾರ್ಮಿಕ ಕ್ರಾಂತಿಕಾರಿಗಳಲ್ಲಿ ದಾದಾ ಅಮೀರ್ ಹೈದರ್ ಖಾನ್ ಅವರು ಒಬ್ಬರಾಗಿದ್ದರು. ನಮ್ಮ ದೇಶವನ್ನು ವಿದೇಶಿ ಪ್ರಾಬಲ್ಯದಿಂದ ವಿಮೋಚನೆಗೊಳಿಸಲು ಬ್ರಿಟಿಷ್ ವಸಾಹತುಶಾಹಿಯ ವಿರುದ್ಧ ಅವರು ಸೆಣಸಿದ್ದರು. ಅವರು ಕಾರ್ಮಿಕರು ಮತ್ತು ರೈತರನ್ನು ಅವರ ಹಕ್ಕುಗಳಿಗಾಗಿ ಮತ್ತು ವರ್ಗರಹಿತ ಸಮಾಜವೊಂದನ್ನು ಕಟ್ಟುವ ಸಲುವಾಗಿ ಅಣಿನೆರಸಿದರು ಮತ್ತು ಸಂಘಟಿಸಿದರು. ಅವರು ತಮ್ಮ ಇಡೀ ಜೀವಮಾನವನ್ನು ಕಮ್ಯುನಿಸ್ಟ್ ಚಳುವಳಿ ಕಟ್ಟಲು ಮೀಸಲಾಗಿಟ್ಟಿದ್ದರು. ಶ್ರಮಜೀವಿಗಳ ಕ್ರಾಂತಿಗಾಗಿನ ಅವರ ಬದ್ಧತೆ, ೭೫ ವರ್ಷಗಳಿಗೂ ಹೆಚ್ಚು ಕಾಲ ಎಂತಹ ದಾಳಿ, ದಬ್ಬಾಳಿಕೆ, ಜೈಲುವಾಸ ಮತ್ತು ಹೇಳತೀರದ ಕಷ್ಟಗಳ ನಡುವೆಯೂ ಜನಗಳ ಹಿತಾಸಕ್ತಿಗಾಗಿ ದುಡಿಯುವ ಅವರ ದೃಢ ಸಂಕಲ್ಪ ಮತ್ತು ಸ್ಥೈರ್ಯಕ್ಕೆ ಸಾಟಿಯಿಲ್ಲ. ಅಂತರ್ರಾಷ್ಟ್ರೀಯ ಕ್ರಾಂತಿಕಾರಿ ಸಮಾಜವಾದೀ ಆಲೋಚನೆಗಳ ಬಗ್ಗೆ ಮತ್ತು ಚರಿತ್ರೆಯ ದಿಕ್ಕನ್ನೇ ಬದಲಿಸಲು ಹೋರಾಡುವ ಬಗ್ಗೆ ಅವರಿಗಿದ್ದ ಬದ್ಧತೆ ಆದರ್ಶಪ್ರಾಯವಾದುದು. ಅವರ ಬದುಕಿನ ಸರಳ ಕಥನವನ್ನು ಅವಲೋಕಿಸಿದರೆ ಸಾಕು ಅದು ಇಪತ್ತನೇ ಶತಮಾನದ ಮೊದಲಾರ್ಧದ ಅಂದಿನ ಜಾಗತಿಕ ಇತಿಹಾಸವನ್ನು ಓದಿದಂತಾಗುತ್ತದೆ.

ವಸಾಹತುಶಾಹಿ-ವಿರೋಧಿ ಹೋರಾಟಗಳು ಸಮಾಜದ ಎಲ್ಲಾ ವಿಭಾಗಗಳಿಂದ ಅನೇಕ ಧೀರ ಕಮ್ಯುನಿಸ್ಟ್ ಸ್ವಾತಂತ್ರ್ಯ ಚಳುವಳಿಗಾರರರನ್ನು ಹುಟ್ಟುಹಾಕಿತು. ಕಮ್ಯುನಿಸ್ಟ್ ಚಳುವಳಿಯ ಈ ಪ್ರವರ್ತಕ ಹೋರಾಟಗಾರರಲ್ಲಿ ಅನೇಕರು ಮುಸ್ಲಿಂ ಸಮುದಾಯದಿಂದ ಬಂದರು. ಅಂತಹ ಕಟ್ಟಾಳುಗಳಲ್ಲಿ ಅಮೀರ್ ಹೈದರ್ ಖಾನ್ ಒಬ್ಬರು.

ದಾದಾ ಅಮೀರ್ ಹೈದರ್ ಖಾನ್ ಅವರು ೧೯೦೦ ರಲ್ಲಿ ಈಗ ಪಾಕಿಸ್ತಾನದಲ್ಲಿರುವ ಉತ್ತರ ಪಂಜಾಬ್ ಪ್ರಾಂತ್ಯದ ಗುಜ್ಜರ್ ಖಾನ್ ಪ್ರದೇಶದ ಕಲಿಯಾನ್ ಸಿಯಾಲಿಯನ್ ಎಂಬ ಕುಗ್ರಾಮದ ಸಣ್ಣ ರೈತ ಕುಟುಂಬದಲ್ಲಿ ಜನಿಸಿದರು. ಪಂಜಾಬ್‌ನ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಅತ್ಯಂತ ಹಿಂದುಳಿದ ಈ ಪ್ರದೇಶವು ಆ ಅವಧಿಯಲ್ಲಿ ಒಂದು ನವ ರಾಷ್ಟ್ರೀಯ ಜಾಗೃತಿಯ ಕೇಂದ್ರವಾಗಿ ಹೊರಹೊಮ್ಮಿತು ಮತ್ತು ಅನೇಕ ದೇಶಪ್ರೇಮಿಗಳನ್ನು ಮತ್ತು ಕ್ರಾಂತಿಕಾರಿಗಳನ್ನು ಸೃಷ್ಟಿಸಿತು. ಈ ಪ್ರದೇಶದಿಂದಲೇ ದೊಡ್ಡ ಸಂಖ್ಯೆಯ ಯುವಜನರು ಆಝಾದ್ ಹಿಂದ್ ಫೌಜನ್ನು(ಐ.ಎನ್.ಎ) ಸೇರಿದ್ದರು. ಈ ಮೂಲೆಯಲ್ಲಿರುವ ಪ್ರದೇಶದಿಂದ ಬಂದಿರುವ ಅಮೀರ್ ಹೈದರ್ ಖಾನ್ ಭಾರತೀಯ ಕಮ್ಯುನಿಸ್ಟ್ ಚಳುವಳಿಯ ಪ್ರವರ್ತಕರಲ್ಲಿ ಒಬ್ಬರಾಗಿದ್ದರು ಎಂಬುದು ಅಚ್ಚರಿಯ ವಿಷಯವೇನಲ್ಲ.

AMIR HYDER KHANದಾದಾ ಅವರು ಬಾಲ್ಯದಿಂದಲೇ ಕಡು ಕಷ್ಟದಲ್ಲಿ ಬೆಳೆದವರು. ಅವರು ತಮ್ಮ ಐದು ಅಥವಾ ಆರನೇ ವಯಸ್ಸಿನಲ್ಲಿಯೇ ತಮ್ಮ ತಂದೆಯನ್ನು ಕಳೆದುಕೊಂಡರು. ಅವರ ಹಳ್ಳಿಯಲ್ಲಿ ಶಾಲೆ ಇಲದ ಕಾರಣ ಅವರಿಗೆ ಸರಿಯಾದ ಶಿಕ್ಷಣ ಸಿಗಲಿಲ್ಲ ಮತ್ತು ಅವರ ಮಲತಂದೆ ನೆರವು ನೀಡಲು ಇಷ್ಟಪಡಲಿಲ್ಲ. ಅವರ ಕುಟುಂಬದಲ್ಲಿದ್ದ ಅನಾದರಣೆಯ ವಾತಾವರಣದಿಂದಾಗಿ, ತಮ್ಮ ಹದಿನಾಲ್ಕನೇ ವಯಸ್ಸಿನಲ್ಲೇ ಬಹಳ ಮುಂಚೆಯೇ ಅನಿವಾರ್ಯವಾಗಿ ದೊಡ್ಡ ವಿಶಾಲ ಜಗತ್ತಿಗೆ ಅವರು ಕಾಲಿಡಬೇಕಾಯಿತು. ಬದುಕಿಗಾಗಿ ವಿವಿಧ ಬಗೆಯ ಉದ್ಯೋಗ ಮಾಡುವಾಗ ಮತ್ತು ಜಗತ್ತಿನ ಸುತ್ತ ಪ್ರಯಾಣ ಮಾಡಬೇಕಾದಾಗ ಬದುಕು ಅವರತ್ತ ಎಸೆದ ಸವಾಲುಗಳನ್ನು ಎದುರಿಸಲು ಬಹಳ ಬೇಗ ಕಲಿತರು.

೧೯೧೪ ರಲ್ಲಿ ಬೊಂಬಾಯಿಗೆ ಹೋದರು ಮತ್ತು ಲಂಡನ್ನಿಗೆ ಹೊರಟಿದ್ದ ಹಡಗಿನಲ್ಲಿ ಕೂಲಿಗಾರನಾಗಿ ಸೇರಿಕೊಂಡರು. ಅವರ ಬಂಡಾಯ ಪ್ರವೃತ್ತಿಯಿಂದಾಗಿ ತಮ್ಮ ಸಹ-ಕೂಲಿಕಾರರು ಮಾಲೀಕನಿಂದ ಅನುಭವಿಸುತ್ತಿದ್ದ ಅನ್ಯಾಯಗಳ ವಿರುದ್ಧ ದನಿ ಎತ್ತಿದರು ಮತ್ತು ಅವರ ಸಮಸ್ಯೆಗಳಿಗೆ ಪರಿಹಾರ ಕೊಡಿಸುವಲ್ಲಿಯೂ ಯಶಸ್ವಿಯಾದರು. ೧೯೧೮ ರಲ್ಲಿ ಅಮೆರಿಕಾದ ವ್ಯಾಪಾರಿ ನೌಕೆಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಈ ಕಾರ್ಯಭಾರಗಳು ದಾದಾ ಅವರನ್ನು ಯೂರೋಪ್, ಅಮೆರಿಕಾ ಮತ್ತು ದೂರಪ್ರಾಚ್ಯ (ಮಲೇಶಿಯಾ, ಇಂಡೋನೇಶಿಯಾ, ಮುಂತಾದ) ದೇಶಗಳಿಗೆ ಕೊಂಡೊಯ್ಯಿತು ಮತ್ತು ಜಗತ್ತಿನಾದ್ಯಂತ ಪ್ರಯಾಣ ಮಾಡುವ ಅವಕಾಶ ಒದಗಿಸಿತು; ಅಂತರ್ರಾಷ್ಟ್ರೀಯ ವಿದ್ಯಮಾನಗಳನ್ನು ಕಲಿಸಿತು, ವಸಾಹತುಗಳಲ್ಲಿನ ಪರಿಸ್ಥಿತಿ ಹಾಗೂ ಕಾರ್ಮಿಕ ವರ್ಗಗಳ ದುರವಸ್ಥೆಯನ್ನು ತಿಳಿಯಲು ಸಹಾಯ ಮಾಡಿತು. ಈ ಸಮಯದಲ್ಲಿ, ಅವರನ್ನು ಐರಿಷ್ ರಾಷ್ಟ್ರವಾದಿ ಜೋಸೆಫ್ ಮುಲ್ಕಾನೆ ಭೇಟಿಯಾದರು ಮತ್ತು ಬ್ರಿಟಿಷ್ ವಿರೋಧಿ ರಾಜಕೀಯ ಚಿಂತನೆಗಳನ್ನು ಪರಿಚಯಿಸಿದರು. ೧೯೨೦ ರಲ್ಲಿ ಅವರು ಭಾರತೀಯ ರಾಷ್ಟ್ರೀಯವಾದಿಗಳು ಭೇಟಿಯಾದರು ಮತ್ತು ನ್ಯೂಯಾರ್ಕ್ ನಗರದಲ್ಲಿ ಗದರ್ ಪಕ್ಷದ ಸದಸ್ಯರ ಭೇಟಿಯೂ ಆಯಿತು; ನಿಷೇಧಿಸಲ್ಪಟ್ಟಿದ್ದ ಗದರ್ ಪಕ್ಷದ ಸಾಹಿತ್ಯವನ್ನು, ತನ್ನ ಜೀವವನ್ನೇ ಪಣಕ್ಕಿಟ್ಟು ಜಗತ್ತಿನೆಲ್ಲೆಡೆಯ ಭಾರತೀಯರಿಗೆ ಹಂಚಲು ಆರಂಭಿಸಿದರು.

೧೯೨೨ ರಲ್ಲಿ, ಯುದ್ಧಾನಂತರ ಕಾರ್ಮಿಕ ವರ್ಗದ ಹೋರಾಟಗಳು ಹೆಚ್ಚಾದ ಕಾರಣ ತಲೆದೋರಿದ ಮುಷ್ಕರಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ ನೌಕೆಯ ಕೆಲಸದಿಂದ ಅವರನ್ನು ಹೊರಹಾಕಲಾಯಿತು. ತದನಂತರ, ಬಾಯ್ಲರ್ ಇಂಜಿನಿಯರಾಗಿ, ಏರೋಪ್ಲೇನ್ ಪೈಲಟ್ಟಾಗಿ ಮತ್ತು ಆಟೋ ಕೆಲಸಗಾರನಾಗಿ ದುಡಿದರು. ಆಗ ಅಮೆರಿಕಾದ ಎಲ್ಲ ಕಡೆಗಳಲ್ಲೂ ಪ್ರಯಾಣ ಮಾಡಲು ಸಾಧ್ಯವಾಯಿತು. ಈ ಅವಧಿಯಲ್ಲಿ, ಅವರು ರಾಜಕೀಯ ಕಾರ್ಯಕರ್ತನಾಗಿ ಹೊರಹೊಮ್ಮಿದರು ಮತ್ತು ಸಾಮ್ರಾಜ್ಯಶಾಹಿ ವಿರೋಧಿ ಲೀಗ್ ಮತ್ತು ಅಮೆರಿಕಾದ ಕಾರ್ಮಿಕರ ಪಕ್ಷದ ಜತೆ ಕೆಲಸ ಮಾಡಿದರು.

೧೯೨೬ ರಲ್ಲಿ, ಸೋವಿಯತ್ ಯೂನಿಯನ್ನಿನ ಪೂರ್ವದ ಶ್ರಮಿಕರ ವಿಶ್ವವಿದ್ಯಾನಿಲಯ (ಯೂನಿವರ್ಸಿಟಿ ಆಫ್ ದಿ ಟಾಯ್ಲರ್‍ಸ್ ಆಫ್ ದಿ ಈಸ್ಟ್)ದಲ್ಲಿ ವಿದ್ಯಾಬ್ಯಾಸ ಮಾಡಲು ಅವರನ್ನು ಕಳಿಸಲಾಯಿತು. ಕೈಗಾರಿPಕಾ ಕಾರ್ಮಿಕರನ್ನು ಹೊಂದಿದ್ದ ಎಲ್ಲಾ ವಸಾಹತು ದೇಶಗಳಿಗೂ ಸಹಾಯ ಮಾಡಲು ಮತ್ತು ಕಮ್ಯುನಿಸ್ಟ್ ಪಕ್ಷಗಳನ್ನು ಕಟ್ಟಲು ಕಮ್ಯುನಿಸ್ಟ್ ಅಂತರ್ರಾಷ್ಟ್ರೀಯವು ಪ್ರಯತ್ನಿಸುತ್ತಿತ್ತು. ಈ ಉದ್ದೇಶದೊಂದಿಗೆ, ಕೆಲವು ಕ್ರಾಂತಿಕಾರಿ ಕಾರ್ಯಕರ್ತರನ್ನು ತರಬೇತಿಗೊಳಿಸಿ ತಮ್ಮ ತಮ್ಮ ದೇಶಗಳಲ್ಲಿ ಪಕ್ಷದ ಸಂಘಟಕರಾಗಿ ಮತ್ತು  ರಾಜಕೀಯ ಕಾರ್ಯಕರ್ತರಾಗಲು ಕಮ್ಯುನಿಸ್ಟ್ ಅಂತರ್ರಾಷ್ಟ್ರೀಯವು ಸಹಾಯ ಮಾಡುವ ಪ್ರಯತ್ನ ನಡೆಸಿತ್ತು. ಭಾರತೀಯ ಮೂಲದ ಕೆಲವು ಕಮ್ಯುನಿಸ್ಟರನ್ನು ಕಳಿಸಲು ಸಹಾಯಕ್ಕಾಗಿ ಅಮೆರಿಕನ್ ಕಮ್ಯುನಿಸ್ಟ್ ಪಕ್ಷವನ್ನು ಎಂ.ಎನ್.ರಾಯ್ ಕೇಳಿಕೊಂಡಿದ್ದರು; ಅವರು ಗದರ್ ಪಕ್ಷವನ್ನು ಸಂಪರ್ಕಿಸಿದರು; ಗದರ್ ಪಕ್ಷವು ಆಯ್ಕೆ ಮಾಡಿದ ಐವರು ವಿದ್ಯಾರ್ಥಿಗಳಲ್ಲಿ ದಾದಾ ಒಬ್ಬರಾಗಿದ್ದರು; ಸಕೊರೋವ್ ಎಂಬ ಗುಪ್ತನಾಮದಡಿಯಲ್ಲಿ ದಾದಾ ಅವರು ಮಾಕ್ಸ್‌ವಾದ ಮತ್ತು ಲೆನಿನ್‌ವಾದವನ್ನು ಅಭ್ಯಾಸ ಮಾಡಿದರು; ರಹಸ್ಯ ಕಾಪಾಡುವ ದೃಷ್ಟಿಯಿಂದ ವಸಾಹತು ದೇಶಗಳ ವಿದ್ಯಾರ್ಥಿಗಳಿಗೆ ಕಾಲ್ಪನಿಕ ಹೆಸರುಗಳನ್ನು ನೀಡುವುದು ಆಗ ರೂಢಿಯಲ್ಲಿತ್ತು.

೧೯೨೮ರಲ್ಲಿ, ಮಾಸ್ಕೋದಲ್ಲಿ ವಿಶ್ವವಿದ್ಯಾನಿಲಯದ ಪದವಿ ಪೂರ್ಣಗೊಳಿಸಿದ ಮೇಲೆ, ದಾದಾ ಭಾರತಕ್ಕೆ ಬಂದರು ಮತ್ತು ಬ್ರಿಟಿಷರ ವಿರುದ್ಧದ ಸ್ವಾತಂತ್ರ ಚಳುವಳಿಯಲ್ಲಿ ನೇರವಾಗಿ ಧುಮುಕಿದರು. ಬೊಂಬಾಯಿಯಲ್ಲಿದ್ದ ಎಸ್.ವಿ.ಘಾಟೆ, ಎಸ್.ಎ.ಡಾಂಗೆ, ಪಿ.ಸಿ.ಜೋಷಿ, ಬಿ.ಟಿ.ರಣದೀವೆ, ಬ್ರಾಡ್ಲಿ ಮತ್ತಿತರ ಹಿರಿಯ ಕಮ್ಯುನಿಸ್ಟ್ ಮುಖಂಡರ ಸಂಪರ್ಕ ಬೆಳೆಸಿದರು. ಜನರಲ್ ಮೋಟಾರ್‍ಸ್(ಜಿಎಮ್)ನಲ್ಲಿ ಕಾರ್ಮಿಕನಾಗಿ ಕೆಲಸಕ್ಕೆ ಸೇರಿದರು; ಬಹುಬೇಗ ಜಿಎಮ್‌ನ ಮತ್ತು ಪಕ್ಕದಲ್ಲೇ ಇದ್ದ ಜವಳಿ ಕಾರ್ಖಾನೆಯ ಕಾರ್ಮಿಕರನ್ನು ಸಂಘಟಿಸಲು ಆರಂಭಿಸಿದರು. ಬೆಳೆಯುತ್ತಿದ್ದ ಕಮ್ಯುನಿಸ್ಟ್ ಚಟುವಟಿಕೆಗಳಿಂದ ಎಚ್ಚರಗೊಂಡ ಅಧಿಕಾರಶಾಹಿಯು ಅಮೀರ್ ಹೈದರ್ ಖಾನ್ ಅವರನ್ನೂ ಒಳಗೊಂಡಂತೆ ಪ್ರಮುಖ ಕಮ್ಯುನಿಸ್ಟ್ ಮುಖಂಡರ ವಿರುದ್ಧ ೧೯೨೯ ರಲ್ಲಿ ಸುಳ್ಳು ಕತೆಗಳನ್ನು ಸೃಷ್ಟಿಸಿ ಮೀರಟ್ ಪಿತೂರಿ ಮೊಕದ್ದಮೆಯನ್ನು ಹೂಡಿದರು.

ಬಂಧನವನ್ನು ತಪ್ಪಿಸಿಕೊಂಡ ಅಮೀರ್ ಹೈದರ್ ಖಾನ್ ಖೋಟಾ ಪಾಸ್‌ಪೋರ್‍ಟ್ ಆಧಾರದಲ್ಲಿ ಸಮುದ್ರದ ಮೂಲಕ ಮಾಸ್ಕೋಗೆ ಹೋದರು; ಅಂತರ್ರಾಷ್ಟ್ರೀಯ ಕಾರ್ಮಿಕ ಸಂಘಟನೆ(ಇಂಟರ್‌ನ್ಯಾಷನಲ್ ಟ್ರೇಡ್ ಯೂನಿಯನ್ – ಪ್ರೋಫಿಂಟರ್ನ್) ಅಧಿವೇಶನದಲ್ಲಿ ಅಧ್ಯಕ್ಷೀಯ ಮಂಡಳಿಯ ಸದಸ್ಯನಾಗಿ ಭಾಗವಹಿಸಿದರು ಮತ್ತು ೧೯೩೦ ರಲ್ಲಿ ಸಿ.ಪಿ.ಎಸ್.ಯು(ಕಮ್ಯುನಿಸ್ಟ್ ಪಾರ್ಟಿ ಆಫ್ ಸೋವಿಯತ್ ಯೂನಿಯನ್)ವಿನ ೧೬ ನೇ ಮಹಾಧಿವೇಶನದಲ್ಲಿಯೂ ಭಾಗವಹಿಸಿದರು.

೧೯೩೧ ರಲ್ಲಿ ಬೊಂಬಾಯಿಗೆ ಹಿಂತಿರುಗಿದ ನಂತರ, ಭಾರತ ಕಮ್ಯುನಿಸ್ಟ್ ಪಕ್ಷದ ಕೇಂದ್ರ ಸಮಿತಿಯು ಅವರ ಬಂಧನವನ್ನು ತಪ್ಪಿಸಲು ಅವರನ್ನು ಮದ್ರಾಸಿಗೆ ಕಳಿಸಿತು; ಏಕೆಂದರೆ ಮೀರಟ್ ಪಿತೂರಿ ಮೊಕದ್ದಮೆಯಲ್ಲಿ ಪೋಲಿಸರು ಅವರನ್ನು ಇನ್ನೂ ಹುಡುಕುತ್ತಿದ್ದರು. ದಕ್ಷಿಣ ಭಾರತದ ಎಲ್ಲಾ ಕಡೆಗಳಲ್ಲಿಯೂ ಅವರು ಶಂಕರ್ ಎಂಬ ಗುಪ್ತನಾಮದಡಿ ರಾಜಕೀಯ ಕೆಲಸಗಳನ್ನು ಮುಂದುವರಿಸಿದರು. ಕಾರ್ಮಿಕರು ಮತ್ತು ರೈತರ ನಡುವೆ ತಮ್ಮ ಚಟುವಟಿಕೆಗಳನ್ನು ಆರಂಭಿಸಿದರು. ಮದ್ರಾಸಿನಲ್ಲಿ, ೧೯೩೨ ರಲ್ಲಿ, ಯಂಗ್ ವರ್ಕರ್‍ಸ್ ಲೀಗ್ ಎಂಬ ಕಾರ್ಮಿಕರ ಸಂಘವನ್ನು ಪ್ರಾರಂಭಿಸಿದರು. ತಂಜಾವೂರಿನ ಮುಖಜ ಭೂಮಿಯಲ್ಲಿ ರೈತರನ್ನು ಅಣಿನೆರೆಸಲು ನಿರ್ದಿಷ್ಟ ಘೋಷಣೆಯನ್ನು ರೂಪಿಸಲು ಕಿಸಾನ್ ಸಭಾಕ್ಕೆ ನೆರವು ನೀಡಿದರು. ಆ ಸಮಯದಲ್ಲಿ, ಅನೇಕ ಭರವಸೆ ಮೂಡಿಸಿದ್ದ ಯುವಜನರನ್ನು ಸಂಪರ್ಕ ಮಾಡಿದರು ಮತ್ತು ಅವರನ್ನು ಕಮ್ಯುನಿಸ್ಟ್ ಚಳುವಳಿಯತ್ತ ಆಕರ್ಷಿಸಿದರು. ಅವರಲ್ಲಿ, ಮದ್ರಾಸಿನ ಲೊಯೋಲಾ ಕಾಲೇಜಿನಲ್ಲಿ ಇಂಟರ್ ಮೀಡಿಯಟ್ ಓದುತ್ತಿದ್ದ ವಿದ್ಯಾರ್ಥಿ ಪುಚ್ಚಲಪಳ್ಳಿ ಸಂದರಯ್ಯ ಒಬ್ಬರು. ಆದರೆ, ಸರ್ಕಾರವು ಬಹುಬೇಗ ಕಾರ್ಯಾಚರಣೆ ನಡೆಸಿ ಮೇ ೧೯೩೨ ರಲ್ಲಿ, ಭಗತ್ ಸಿಂಗ್ ಮತ್ತು ಅವನ ಸಹಚರರನ್ನು ಹೊಗಳಿ ಕರಪತ್ರ ಹೊರತಂದಿದ್ದಕ್ಕಾಗಿ ದಾದಾ ಅವರನ್ನು ಬಂಧಿಸಿತು.

ಅವರ ಬಿಡುಗಡೆಯಾದ ಒಂದೇ ವರ್ಷದಲ್ಲಿ ೧೯೩೯ ರಲ್ಲಿ ಬೊಂಬಾಯಿಯಲ್ಲಿ ಡಿಫೆನ್ಸ್ ಆಫ್ ಇಂಡಿಯಾ ರೂಲ್ಸ್ ಅಡಿಯಲ್ಲಿ ಅವರನ್ನು ಮತ್ತೆ ಬಂಧಿಸಿಲಾಯಿತು ಮತ್ತು ಎರಡು ವರ್ಷಗಳ ಶಿಕ್ಷೆ ನೀಡಲಾಯಿತು. ಜೈಲಿನಲ್ಲಿ, ಅವರು ತಮ್ಮ ಬದುಕು ಮತ್ತು ಶ್ರಮದ ಕುರಿತ ಕತೆಯನ್ನು ಬರೆದರು; ನಂತರದಲ್ಲಿ ಅದನ್ನು ಚೈನ್ಸ್ ಟು ಲೂಸ್: ಲೈಫ್ ಅಂಡ್ ಸ್ಟ್ರಗಲ್ಸ್ ಆಫ್ ಎ ರೆವಲ್ಯೂಷನರಿ  ಮೆಮೊರ್ಯ್ಸ್ ಆಫ್ ದಾದಾ ಮೀರ್ ಹೈದರ್ ಖಾನ್ (ಕಳಚಬೇಕಾದ ಸಂಕೋಲೆಗಳು: ಒಬ್ಬ ಕ್ರಾಂತಿಕಾರಿಯ ಬದುಕು ಮತ್ತು ಹೋರಾಟ-ದಾದಾ ಮೀತ್ ಹೈದರ್‌ಖಾನ್ ನೆನಪುಗಳು) ಎಂಬ ಶೀರ್ಷಿಕೆಯಡಿ ಪ್ರಕಟಿಸಲಾಯಿತು.

ಜನತಾ ಯುದ್ಧ ಪ್ರಬಂಧದ ನಂತರ, ೧೯೪೨ ರಲ್ಲಿ ಬಿಡುಗಡೆಯಾದ ಕಮ್ಯುನಿಸ್ಟರಲ್ಲಿ ಅವರು ಕೊನೆಯವರು. ಒಂದು ಅವಧಿಗೆ ಕಾರ್ಮಿಕ ಸಂಘಟನೆ ಮತ್ತು ಕಿಸಾನ್ ಸಭಾದಲ್ಲಿ ಕೆಲಸ ನಿರ್ವಹಿಸಿದ ನಂತರ, ಅಮೀರ್ ಹೈದರ್ ಖಾನ್ ಅವರನ್ನು ೧೯೪೫ ರಲ್ಲಿ ಅವರ ಸ್ವಂತ ಊರಿಗೆ ಅಲ್ಲಿ ಕ್ರಾಂತಿಕಾರಿ ಚಳುವಳಿಯನ್ನು ಕಟ್ಟಿ ಬೆಳಸಲು ಕಳಿಸಲಾಯಿತು. ಅಲ್ಲಿ ಅವರು ರಾವಲ್ಪಿಂಡಿ ಜಿಲ್ಲಾ ಸಮಿತಿಯ ಸದಸ್ಯರಾದರು. ಪಾಕಿಸ್ತಾನದಾದ್ಯಂತ ಅವಿತುಕೊಳ್ಳುವ ತಾಣಗಳ ಜಾಲವನ್ನು ಸಂಘಟಿಸಿದರು ಮತ್ತು ದೇಶ ವಿಭಜನೆಯ ದೊಂಬಿಗಳ ಸಮಯದಲ್ಲಿ ಹಿಂದೂ ಕುಟುಂಬಗಳನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಹಿಂದೆ ಕಳಿಸುವಲ್ಲಿ ಅವರು ನೆರವು ನೀಡಿದರು.

ಪಾಕಿಸ್ತಾನದ ಸ್ಥಾಪನೆಯ ನಂತರ, ಪಾಕಿಸ್ತಾನ ಕಮ್ಯುನಿಸ್ಟ್ ಪಕ್ಷದ ಕೆಲಸಗಳಲ್ಲಿ ಅವರು ಸಕ್ರಿಯ ಪಾತ್ರ ವಹಿಸಿದರು. ಇಸ್ಲಾಮಿಕ್ ಪ್ರಭುತ್ವದ ದಬ್ಬಾಳಿಕೆಯನ್ನು ಧೈರ್ಯವಾಗಿ ಎದುರಿಸುತ್ತಾ, ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿ ಅವರು ದೃಢವಾಗಿ ನಿಂತರು. ಆಳುವವರು ನಿರಂತರವಾಗಿ ಅವರನ್ನು ಬೆನ್ನಟ್ಟುತ್ತಿದ್ದರು ಮತ್ತು ಅನೇಕ ಬಾರಿ ಬಂಧಿಸಿದರು. ೧೯೪೯ ರಲ್ಲಿ ಅವರನ್ನು ಕಮ್ಯುನಲ್ ಕಾಯಿದೆಯಡಿ ಬಂಧಿಸಿ ೧೫ ತಿಂಗಳ ನಂತರ ಬಿಡುಗಡೆ ಮಾಡಿದರು. ರಾವಲ್ಪಿಂಡಿ ಪಿತೂರಿ ಮೊಕದ್ದಮೆಯ ಆರೋಪಿಗಳ ಪರವಾಗಿ ವಕಾಲತ್ತು ಸಂಘಟಿಸಿದ ಅಪರಾಧಕ್ಕಾಗಿ ಮತ್ತೆ ಬಂಧನಕ್ಕೊಳಗಾದರು. ಬೃಹತ್ ಸಾರ್ವಜನಿಕ ಪ್ರತಿಭಟನೆ ಮತ್ತು ಪತ್ರಿಕೆಗಳ ಪ್ರಚಾರದ ನಂತರ ಅವರನ್ನು ಬಿಡುಗಡೆ ಮಾಡಲಾಯಿತು. ಮತ್ತೆ ೧೯೫೮ ರಲ್ಲಿ ಜನರಲ್ ಅಯೂಬ್ ಖಾನ್ ಮಾರ್ಷಲ್ ಕಾನೂನು ಜಾರಿ ಮಾಡಿದಾಗ ದಾದಾ ಅವರನ್ನು ಬಂಧಿಸಿ ರಾವಲ್ಪಿಂಡಿ ಜೈಲಿನಲ್ಲಿ ಇನ್ನಿತರ ಸಂಗಾತಿಗಳೊಂದಿಗೆ ಸ್ಥಾನಬದ್ಧಗೊಳಿಸಲಾಯಿತು. ದಾದಾ ತಮ್ಮ ಬದುಕಿನ ಸಂಜೆಯ ವರ್ಷಗಳನ್ನು  ೧೯೭೦ ರಿಂದ ೧೯೮೦ ರವರೆಗೆ  ರಾವಲ್ಪಿಂಡಿಯಲ್ಲಿ ಕಳೆದರು. ಸ್ವಾತಂತ್ರ್ಯದ ನಂತರ ೧೯೮೮ ರಲ್ಲಿ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿ ತಮ್ಮ ಕಮ್ಯುನಿಸ್ಟ್ ಸಂಗಾತಿಗಳನ್ನು ಕೊನೆಯ ಬಾರಿಗೆ ಕಂಡರು. ೧೯೮೯ರ ಡಿಸೆಂಬರ್ ೨೭ ರಂದು ದಾದಾ ಕೊನೆಯುಸಿರೆಳೆದರು.

ಅವರು ತಮ್ಮ ಬದುಕಿನುದ್ದಕ್ಕೂ ಅವರು ತಮ್ಮನ್ನು ತಾವು ಕರೆದುಕೊಳ್ಳುತ್ತಿದ್ದಂತೆ ಫಕೀರನಂತೆ, ದಿಕ್ಕಿಲ್ಲದ ಅಲೆಮಾರಿಯಂತೆ ಜೀವಿಸಿದರು. ಯಾವುದೇ ಬೆಲೆಬಾಳುವ ವಸ್ತುಗಳನ್ನೂ ಅವರು ಹೊಂದಿರಲಿಲ್ಲ. ತಮ್ಮ ಪೂರ್ವಿಕರ ಊರಿನಲ್ಲಿ ತಮ್ಮ ಪಾಲಿಗೆ ಬಂದಿದ್ದ ಪಿತಾರ್ಜಿತ ಆಸ್ತಿಯನ್ನು ದಾನ ಮಾಡಿದ್ದರು ಮತ್ತು ಅಲ್ಲಿ ಒಂದು ಬಾಲಕ ಮತ್ತು ಬಾಲಕಿಯರ ಶಾಲೆ ತೆರೆದು ಜತೆಯಲ್ಲೇ ಒಂದು ವಿಜ್ಞಾನದ ಪ್ರಯೋಗ ಶಾಲೆಯನ್ನೂ ಕಟ್ಟಿಸಿದ್ದರು. ಅವರೊಬ್ಬ ಮಹಾನ್ ಶ್ರಮಿಕರ ಅಂತರ್ರಾಷ್ಟ್ರೀವಾದಿಯಾಗಿದ್ದರು. ಬ್ರಿಟಿಷ್ ಸಾಮ್ರಾಜ್ಯವಾದಿಗಳ ವಿರುದ್ಧ ಹೋರಾಟದಲ್ಲಿ ಅವರು ತೋರಿದ ಕೌಶಲ್ಯ ಮತ್ತು ದೃಢತೆ ಹೇಗಿತ್ತೆಂದರೆ ಅವರನ್ನು ಒಬ್ಬ ಅತ್ಯಂತ ಅಪಾಯಕಾರಿ ವ್ಯಕ್ತಿ ಎಂಬ ಹಣೆ ಪಟ್ಟಿಯನ್ನು ಬ್ರಿಟಿಷ್ ಅಧಿಕಾರಿಗಳು ತೊಡಿಸಿದ್ದರು. ಅನೇಕ ಬಾರಿ ಬ್ರಿಟಿಷ್ ಬೇಹುಗಾರರಿಗೆ ಚಳ್ಳೆ ಹಣ್ಣು ತಿನ್ನಿಸಿ ತಪ್ಪಿಸಿಕೊಂಡು ವಿದೇಶಕ್ಕೆ ತೆರಳಿ ಅಲ್ಲಿ ತಮ್ಮ ಹಿಂದಿನ ಅನುಭವಗಳನ್ನು ಮತ್ತು ನಾವಿಕನಾಗಿದ್ದಾಗಿನ ಸಂಪರ್ಕಗಳನ್ನು ಬಳಸಿ ಕಾಮಿಂಟರ್ನ್‌ನ ಕೆಲಸ ಕಾರ್ಯಗಳನ್ನು ಸಂಯೋಜಿಸುತ್ತಿದ್ದರು.

ಉತ್ತಮ ನಾಳೆಗಾಗಿ ಜಗತ್ತು ಬದಲಾಗಲೇ ಬೇಕು ಎಂಬ ಮಾರ್ಕ್ಸಿಸ್ಟ್ ಸೂಕ್ತಿಗೆ ತಕ್ಕಂತೆ ಅವರ ಬದುಕು ಅರ್ಥವತ್ತಾಗಿತ್ತು. ಕಾರ್ಮಿಕ ವರ್ಗದ ನಿಜವಾದ ವಿಮೋಚನೆಯಾಗುವುದು ಸಮಾಜವು ಸಮಾಜವಾದಿ ಬದಲಾವಣೆಯತ್ತ ಸಾಗಿದಾಗ ಮಾತ್ರ. ಆ ನಂಬಿಕೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ಪ್ರತಿಯೊಬ್ಬನ ಬದುಕಿನ ಪ್ರಾಥಮಿಕ ಮೌಲ್ಯವಾಗಬೇಕು. ಈ ಮಹಾನ್ ಕ್ರಾಂತಿಕಾರಿಯ ಪರಂಪರೆಯು ರ್‍ಯಾಡಿಕಲ್ ಮತ್ತು ಪ್ರಗತಿಪರ ಜನರ ಇಂದಿನ ಮತ್ತು ಭವಿಷ್ಯದ ತಲೆಮಾರುಗಳಿಗೆ ಸ್ಪೂರ್ತಿ ನೀಡುತ್ತದೆ.

 

ಕನ್ನಡಕ್ಕೆ: ಟಿ.ಸುರೇಂದ್ರ ರಾವ್

Leave a Reply

Your email address will not be published. Required fields are marked *