ಸ್ವಾತಂತ್ರ್ಯ ಸಂಗ್ರಾಮ: ಕಮ್ಯುನಿಸ್ಟರ ಮತ್ತು ಆರ್.ಎಸ್.ಎಸ್.ನ ಪಾತ್ರ

ಆರ್.ಅರುಣ್ ಕುಮಾರ್

ಆರ್.ಎಸ್.ಎಸ್. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಲೇ ಇಲ್ಲ. ವಿ.ಡಿ.ಸಾವರ್ಕರ್ ಮೂಲಕ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದೆವು ಎಂಬ ಅವರ ಸಮರ್ಥನೆ ಕೂಡ ಟೊಳ್ಳೆಂದು ಸಾಬೀತಾಗಿದೆ. ತನ್ನ ಹಿಂದಿನ ವರ್ಷಗಳಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿನ ತನ್ನ ಪಾತ್ರದ ಬಗ್ಗೆ ಸಾವರ್ಕರ್ ಪಶ್ಚಾತ್ತಾಪಪಟ್ಟುಕೊಂಡಿದ್ದು ಮಾತ್ರವಲ್ಲ, ಮುಂದೆಂದೂ ತಾನು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವುದಿಲ್ಲ ಎಂದು ವಾಗ್ದಾನ ಮಾಡಿದ್ದರು ಕೂಡ. ಮತ್ತು ತಮ್ಮ ವಾಗ್ದಾನವನ್ನು ಅವರು ಉಳಿಸಿಕೊಂಡರು. ಆರ್.ಎಸ್.ಎಸ್. ಮತ್ತು ಅದರ ಪೂಜನೀಯಮಹಾನ್ ವೀರಸಾವರ್ಕರ್ ಅವರ ಧೋರಣೆ ಇದಾಗಿತ್ತು.

ಭಾರತದ ಸ್ವಾತಂತ್ರ್ಯ ಸಂಗ್ರಾಮವು ನಮ್ಮ ದೇಶದ ಚರಿತ್ರೆಯಲ್ಲಿ ಒಂದು ಭವ್ಯವಾದ ವೀರಗಾಥೆ. ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯ ಚಳುವಳಿಯ ಮೇಲೆ ಪೂರ್ಣ ಏಕಸ್ವಾಮ್ಯದ ಹಕ್ಕು ಸಾಧಿಸುವುದು ಸಾಧ್ಯವಿಲ್ಲ. ಕಮ್ಯುನಿಸ್ಟರು ಮತ್ತು ವಿವಿಧ ಸಮಾಜವಾದಿ ಬಣಗಳು ಕಾಂಗ್ರೆಸ್ ಮತ್ತದರ ತಂತ್ರಗಳೊಂದಿಗೆ ಅಸಂತುಷ್ಟರಾಗಿ ಬದ್ಧತೆಯಿಂದ ಹೋರಾಡಿದರು ಮತ್ತು ಈ ಚಳುವಳಿಗಾಗಿ ತಮ್ಮ ಇಡೀ ಬದುಕನ್ನೇ ಮುಡುಪಾಗಿಟ್ಟಿದ್ದರು. ದೇಶಾದ್ಯಂತ ವ್ಯಾಪಿಸಿದ್ದ ದೇಶಭಕ್ತಿಯ ಆ ಅಲೆಗೆ ಒಂದು ಅಪವಾದವಿತ್ತು – ಅದು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್.ಎಸ್.ಎಸ್.) ಸ್ವಾತಂತ್ರ್ಯ ಚಳುವಳಿಯಲ್ಲಿ ಅದು ಭಾಗವಹಿಸಲೇ ಇಲ್ಲ.

savarkaratgandhitrialಆರ್.ಎಸ್.ಎಸ್.ನ ಎರಡನೇ ಸರಸಂಘಚಾಲಕರಾಗಿದ್ದ ಎಂ.ಎಸ್. ಗೋಲ್ವಾಲ್ಕರ್ ತಮ್ಮ ಪುಸ್ತಕ ‘ಚಿಂತನ ಗಂಗಾ’ (ದಿ ಬಂಚ್ ಆಫ್ ಥಾಟ್ಸ್)ದಲ್ಲಿ ಸ್ವಾತಂತ್ರ್ಯ ಚಳುವಳಿಯನ್ನು ‘ಪ್ರಾದೇಶಿಕ ರಾಷ್ಟ್ರೀಯವಾದ’ ಎಂದು ಬಹಿರಂಗವಾಗಿ ಖಂಡಿಸಿದ್ದರು; “ಅದು ನಮ್ಮ ನೈಜ ಹಿಂದೂ ರಾಷ್ಟ್ರೀಯತೆಯ ಸಕಾರಾತ್ಮಕ ಹಾಗೂ ಸ್ಪೂರ್ತಿದಾಯಕ ಹುರುಳನ್ನು ಕಸಿದುಕೊಂಡಿತ್ತು ಮತ್ತು ಹಲವಾರು ‘ಸ್ವಾತಂತ್ರ್ಯ ಚಳುವಳಿಗಳನ್ನು’ ಕಾರ್ಯತಃ ಬರಿಯ ಬ್ರಿಟಿಷ್-ವಿರೋಧಿ ಚಳುವಳಿಯನ್ನಾಗಿ ಮಾಡಿತ್ತು”. ಈ ತಿಳುವಳಿಕೆಯೊಂದಿಗೆ 1925ರಲ್ಲಿ ಪ್ರಾರಂಭವಾಗಿದ್ದ ಆರ್.ಎಸ್.ಎಸ್., ಭಾರತದ ಸ್ವಾತಂತ್ರ್ಯ ಚಳುವಳಿಯಿಂದ ದೂರಸರಿದಿತ್ತು. ದೂರ ಸರಿದಿದ್ದು ಮಾತ್ರವಲ್ಲ, ಸ್ವಾತಂತ್ರ್ಯ ಹೋರಾಟಗಾರರಿಗೆ ನಂಬಿಕೆ ದ್ರೋಹವೆಸಗಲು ಸಿದ್ಧವಾಗಿದ್ದರು ಕೂಡ.

ಆರ್.ಎಸ್.ಎಸ್. ನ ಸಂಸ್ಥಾಪಕ ಕೆ.ಬಿ.ಹೆಡ್ಗೆವಾರ್ ಅವರ ಆತ್ಮಕತೆಯಲ್ಲಿ ಸ್ಪಷ್ಟವಾಗಿ ಹೀಗೆ ಹೇಳಲಾಗಿತ್ತು: “ಗಾಂಧಿಯವರು 1930ರಲ್ಲಿ ಉಪ್ಪಿನ ಸತ್ಯಾಗ್ರಹವನ್ನು ಪ್ರಾರಂಭಿಸಿದಾಗ, ಈ ಸತ್ಯಾಗ್ರಹದಲ್ಲಿ ಸಂಘವು ಪಾಲ್ಗೊಳ್ಳುವುದಿಲ್ಲ ಎಂದು ಎಲ್ಲ ಕಡೆಯೂ ಸುದ್ದಿ ಕಳುಹಿಸಲಾಗಿತ್ತು.” ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲು ಬಯಸಿದ್ದ ಒಬ್ಬ ವೈದ್ಯರನ್ನು ಭಾಗವಹಿಸದಿರುವಂತೆ ಹೆಡ್ಗೆವಾರ್ ಅವರು ವೈದ್ಯರನ್ನು ತಡೆದ ಸಂಭಾಷಣೆಯನ್ನು ಗೋಲ್ವಾಲ್ಕರ್ ಉಲ್ಲೇಖಿಸಿದ್ದರು.

‘ಭಾರತ ಬಿಟ್ಟು ತೊಲಗಿ’ ಚಳುವಳಿಯ ಸಮಯದಲ್ಲಿಯೂ ಅದೇ ಕತೆ. ಬ್ರಿಟಿಷ್ ಸರ್ಕಾರದ ಅಧಿಕೃತ ಟಿಪ್ಪಣಿಯ ಪ್ರಕಾರ, ಆರ್.ಎಸ್.ಎಸ್. ಮುಖಂಡರು ಗೃಹ ಇಲಾಖೆಯ ಕಾರ್ಯದರ್ಶಿಯನ್ನು ಭೇಟಿ ಮಾಡಿದ್ದರು ಮತ್ತು “ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕ ಕಾವಲು ದಳಕ್ಕೆ ಸೇರುವಂತೆ ಸಂಘದ ಸದಸ್ಯರನ್ನು ಪ್ರೋತ್ಸಾಹಿಸುವುದಾಗಿ ಕಾರ್ಯದರ್ಶಿಗೆ ವಾಗ್ದಾನ ಮಾಡಿದ್ದರು.” ‘ಆಂತರಿಕ ಭದ್ರತೆಗಾಗಿ ವಿಶೇಷ ಕ್ರಮದ’ ಭಾಗವಾಗಿ ಈ ನಾಗರಿಕ ಕಾವಲು ದಳಗಳನ್ನು ಬ್ರಿಟಿಷ್ ಸರ್ಕಾರ ರಚಿಸಿತ್ತು. ಬ್ರಿಟಿಷರು ಈ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿದ್ದರು: “ಸಂಘದವರು ಜಾಗರೂಕತೆಯಿಂದ ಕಾನೂನನ್ನು ಚಾಚೂ ತಪ್ಪದೆ ಪಾಲಿಸುತ್ತ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದರು, ಮತ್ತು ವಿಶೇಷವಾಗಿ, ಆಗಸ್ಟ್ 1942 ರಲ್ಲಿ ಭುಗಿಲೆದ್ದ ಗಲಭೆಗಳಲ್ಲಿ ಭಾಗವಹಿಸದೆ ಸಂಯಮದಿಂದ ನಡೆದುಕೊಂಡಿದ್ದರು” (ಸರ್ಕಾರದ ಮೆಮೋ, ಬಾಂಬೇ ಪ್ರಾಂತ).

ವಿ.ಡಿ.ಸಾವರ್ಕರ್ ಮೂಲಕ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದೆವು ಎಂಬ ಅವರ ಸಮರ್ಥನೆ ಕೂಡ ಟೊಳ್ಳೆಂದು ಸಾಬೀತಾಗಿದೆ. ತನ್ನ ಹಿಂದಿನ ವರ್ಷಗಳಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿನ ತನ್ನ ಪಾತ್ರದ ಬಗ್ಗೆ ಸಾವರ್ಕರ್ ಪಶ್ಚಾತ್ತಾಪಪಟ್ಟುಕೊಂಡಿದ್ದು ಮಾತ್ರವಲ್ಲ, ಮುಂದೆಂದೂ ತಾನು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವುದಿಲ್ಲ ಎಂದು ವಾಗ್ದಾನ ಮಾಡಿದ್ದರು ಕೂಡ. ಮತ್ತು ತಮ್ಮ ವಾಗ್ದಾನವನ್ನು ಅವರು ಉಳಿಸಿಕೊಂಡರು. ‘ತಾನು ಕರುಣಾಮಯಿ ಬ್ರಿಟಿಷ್ ಸರ್ಕಾರದ ಅಪ್ರಯೋಜಕ ಮಗ’ ಎಂದು ಹೇಳಿಕೊಳ್ಳುವ ಸಾವರ್ಕರ್ ಬ್ರಿಟಿಷ್ ಸರ್ಕಾರಕ್ಕೆ ಒಂದು ಸುದೀರ್ಘ ಪತ್ರವನ್ನೂ ಬರೆದಿದ್ದರು. “ಕೊನೆಯಲ್ಲಿ ತಮ್ಮಲ್ಲಿ ನೆನಪಿಸುವುದೇನೆಂದರೆ 1911ರಲ್ಲಿ ನಾನು ಕ್ಷಮಾದಾನ ಮಂಜೂರು ಮಾಡಬೇಕೆಂದು ಭಾರತ ಸರ್ಕಾರಕ್ಕೆ ಕಳಿಸಿದ್ದ ಕ್ಷಮಾದಾನದ ಅರ್ಜಿಯನ್ನೊಮ್ಮೆ ಗೌರವಾನ್ವಿತರಾದ ತಾವು ಓದಬೇಕೆಂದು ಕೋರುತ್ತೇನೆ, .. .. ಬಹುರೂಪದ ಉಪಕಾರ ಹಾಗೂ ಕರುಣೆಯುಳ್ಳ ಸರ್ಕಾರವು ನನ್ನನ್ನು ಬಿಡುಗಡೆ ಮಾಡಿದರೆ, ನಾನು ಇಂಗ್ಲಿಷ್ ಸರ್ಕಾರಕ್ಕೆ ನಿಷ್ಠಾವಂತ ಸಂವಿಧಾನಬದ್ಧ ಸಮರ್ಥಕನಾಗಿ ನಿಷ್ಠೆಯಿಂದ ಇಲ್ಲದಿರಲು ಸಾಧ್ಯವಿಲ್ಲ … .. ಅಷ್ಟೂ ಸಾಲದೆಂಬಂತೆ, ನನ್ನ ಸಂವಿಧಾನಬದ್ಧತೆಯ ನಿಲುವು ಭಾರತದಲ್ಲಿ ಮತ್ತು ವಿದೇಶದಲ್ಲಿರುವ ನನ್ನ ಮಾರ್ಗದರ್ಶನಕ್ಕಾಗಿ ಕಾಯುತ್ತಿರುವ ದಾರಿ ತಪ್ಪಿದ ಯುವಜನರೆಲ್ಲರನ್ನೂ ಹಿಂದಕ್ಕೆ ಕರೆ ತರುತ್ತದೆ”. ಆರ್.ಎಸ್.ಎಸ್. ನ ಮತ್ತು ಅದರ ಪೂಜನೀಯ ‘ಮಹಾನ್ ವೀರ’ ಸಾವರ್ಕರ್ ಅವರ ಧೋರಣೆ ಇದಾಗಿತ್ತು.

ಇವರ ಜತೆ ಕಮ್ಯುನಿಸ್ಟರ ಪಾತ್ರವನ್ನು ಹೋಲಿಸಿ ನೋಡಬೇಕು ಮತ್ತು ಆಗ ನಾವು ಸುಲಭವಾಗಿ ಕಾಳು ಯಾವುದು ಜೊಳ್ಳು ಯಾವುದು ಎಂದು ಪ್ರತ್ಯೇಕಿಸಬಹುದು. ಕಮ್ಯುನಿಸ್ಟ್ ಪಕ್ಷವನ್ನು 1920 ರಲ್ಲಿ ಸ್ಥಾಪಿಸಲಾಯಿತು. ಮೊದಲ ದಿನದಿಂದಲೇ, ಕಮ್ಯುನಿಸ್ಟರ ಕುರಿತಾಗಿ ತಾವು ಯಾವ ಧೋರಣೆ ತಳೆಯಬೇಕೆಂದು ಬ್ರಿಟಿಷರು ಸ್ಪಷ್ಟತೆ ಹೊಂದಿದ್ದರು. “ಭಾರತದಲ್ಲಿ ಕಮ್ಯುನಿಸಂನ ಹರಡುವಿಕೆಯನ್ನು ಯಾವುದೋ ಒಂದು ನಿರ್ದಿಷ್ಟ ‘ದೃಷ್ಟಿಕೋನದಿಂದ’ ನೋಡಬಹುದಾದ ಸಾಮಾನ್ಯ ಸಮಸ್ಯೆಗಳಂತೆ ನೋಡಲಾಗದು; ಅದನ್ನು ನೇರಾ ನೇರಾ ಎದುರಿಸಬೇಕು ಮತ್ತು ಯಾವುದೇ ಅತ್ಯಂತ ದಯಾ ದಾಕ್ಷಿಣ್ಯವಿಲ್ಲದ ವಿರೋಧಿ ನೀತಿಯೊಂದಿಗೆ ಅವರ ವಿರುದ್ಧ ಹೋರಾಡಬೇಕು”. ಕಮ್ಯುನಿಸ್ಟ್ ಪಕ್ಷವು ಸ್ಥಾಪನೆಯಾದ ಒಂದು ದಶಕದೊಳಗೆ ಅದರ ವಿರುದ್ಧ ಮೂರು ‘ಪಿತೂರಿ ಮೊಕದ್ದಮೆ’ಗಳನ್ನು ಬ್ರಿಟಿಷರು ಹೂಡಿದರು – ಪೆಷಾವರ್ ಪಿತೂರಿ ಮೊಕದ್ದಮೆ (1922), ಕಾನ್ಪುರ್ ಪಿತೂರಿ ಮೊಕದ್ದಮೆ (1924) ಮತ್ತು ಮೀರತ್ ಪಿತೂರಿ ಮೊಕದ್ದಮೆ (1929). ನಿಸ್ಸಂದೇಹವಾಗಿ, ಇವಾವುದೂ ಕೂಡ ಕಮ್ಯುನಿಸ್ಟ್ ಪಕ್ಷ ಮತ್ತು ಅದರ ಚಿಂತನೆಗಳ ಹರಡುವಿಕೆಯನ್ನು ತಡೆಯಲಾಗಲಿಲ್ಲ.

ಖಚಿತವಾಗಿ ಸಮಾಜವಾದ ಮತ್ತು ಸಮತಾವಾದದ ಚಿಂತನೆಗಳಿಂದ ಸ್ಪೂರ್ತಿ ಪಡೆದ ಭಗತ್ ಸಿಂಗ್ ಬ್ರಿಟಿಷರನ್ನು ಅಧಿಕಾರದಿಂದ ಕಿತ್ತೊಗೆದರಷ್ಟೇ ಸಾಲದು ಎಂಬ ಅಭಿಪ್ರಾಯಕ್ಕೆ ಬಂದಿದ್ದರು. “ರಾಜಕೀಯ ಕ್ರಾಂತಿಯ ಆಧಾರದಲ್ಲಿ ಇಡೀ ಸಮಾಜವನ್ನು ಸಮಾಜವಾದದ ನೆಲೆಯಲ್ಲಿ ಪರಿವರ್ತಿಸುವ ಕೆಲಸ ಆರಂಭವಾಗಬೇಕು” ಎಂದು ಭಗತ್ ಸಿಂಗ್ ಹೇಳಿದ್ದರು.

ಭಗತ್‌ಸಿಂಗ್ ಕೋಮುವಾದಿ ಶಕ್ತಿಗಳನ್ನು ಖಂಡಿಸಿದ್ದರು ಮತ್ತು ಜನರು ವರ್ಗ ಐಕ್ಯತೆಯನ್ನು ಕಟ್ಟಬೇಕು ಎಂದು ಒತ್ತಾಯಪಡಿಸಿದ್ದರು. “ಜನರು ತಮ್ಮತಮ್ಮೊಳಗೆ ಕಾದಾಡದಂತೆ ಅವರಲ್ಲಿ ವರ್ಗ ಪ್ರಜ್ಞೆಯನ್ನು ಖಾತ್ರಿಪಡಿಸಬೇಕಾದ ಅಗತ್ಯವಿದೆ. ಬಡವರು, ಕಾರ್ಮಿಕ ವರ್ಗ ಹಾಗೂ ರೈತಾಪಿ ಜನರಿಗೆ ಅವರ ನೈಜ ಶತ್ರು ಬಂಡವಾಳವಾದ ಎಂಬುದನ್ನು ಸ್ಪಷ್ಟಪಡಿಸಬೇಕು… ಎಲ್ಲಾ ಬಡವರ – ಅವರು ಯಾವ ಜಾತಿಯವರೇ ಇರಲಿ, ಬಣ್ಣದವರಿರಲಿ, ಧರ್ಮದವರಿರಲಿ ಅಥವಾ ಪ್ರದೇಶದವರಿರಲಿ – ಹಕ್ಕುಗಳು ಒಂದೇ ಆಗಿರುತ್ತವೆ”. ಕೋಮುವಾದ ಮತ್ತು ಕೋಮು ಗಲಭೆಗಳ ಬೆಳವಣಿಗೆಯ ಹಿಂದೆ ಆರ್ಥಿಕ ಕಾರಣಗಳು ಇರುತ್ತವೆ ಎಂದು ಭಗತ್ ಸಿಂಗ್ ಸ್ಪಷ್ಟವಾಗಿ ಗುರುತಿಸಿದ್ದರು: “ಎಲ್ಲಾ ಗಲಭೆಗಳಿಗೆ ಚಿಕಿತ್ಸೆ ಎಂಬುದು ಏನಾದರೂ ಇದ್ದರೆ, ಭಾರತದ ಆರ್ಥಿಕ ಹಾದಿಯ ದಿಕ್ಕನ್ನು ಬದಲಾಯಿಸುವ ಮೂಲಕ ಮಾತ್ರವೇ ಆಗಿದೆ… ಜನರು ಸರ್ಕಾರದ ವಿರುದ್ಧ ನಿರಂತರವಾಗಿ ಹೋರಾಡಬೇಕು ಮತ್ತು ಸರ್ಕಾರ ಬದಲಾವಣೆ ಆಗುವ ತನಕ ಅವರು ವಿಶ್ರಾಂತಿ ತೆಗೆದುಕೊಳ್ಳಬಾರದು”.

ಇದನ್ನೇ ಕಮ್ಯುನಿಸ್ಟ್ ಪಕ್ಷವು ಆಗ ಎತ್ತಿ ಹಿಡಿದಿತ್ತು. ಪಕ್ಷದ ಮೊದಲ ಮೂಲಾವಸ್ಥೆಯ ಕಾರ್ಯಕ್ರಮವಾದ,   ಕಾರ್ಯಾಚರಣೆಯ ವೇದಿಕೆಯ ಕರಡು ಹೇಳಿಕೆಯಲ್ಲಿ ಹೀಗೆ ಹೇಳಲಾಗಿದೆ: “ವಿವಿಧ ರಾಷ್ಟ್ರೀಯತೆಗಳ ಹಾಗೂ ಧಾರ್ಮಿಕ ನಂಬಿಕೆಯುಳ್ಳ ಜನರನ್ನು ಪರಸ್ಪರ ಕಾದಾಡುವಂತೆ ಮಾಡಿ ಅವರವರಲ್ಲೇ ತಿಕ್ಕಾಟಗಳನ್ನು ಉಂಟುಮಾಡುವ, ಬ್ರಿಟಿಷ್ ಸರ್ಕಾರ ಹಾಗೂ ದೇಶೀಯ ಶೋಷಕರ ವಂಚನೆಯ ಪ್ರಚೋದನಕಾರಿ ವಿಧಾನಗಳಿಂದ ಮೋಸ ಹೋಗಬಾರದೆಂದು ಭಾರತ ಕಮ್ಯುನಿಸ್ಟ್ ಪಕ್ಷವು ಭಾರತದ ಕಾರ್ಮಿಕರು ಮತ್ತು ರೈತರಿಗೆ ಕರೆ ನೀಡುತ್ತದೆ.” ಅಸ್ಪೃಶ್ಯರನ್ನೂ ಒಳಗೊಂಡಂತೆ ಎಲ್ಲಾ ದುಡಿಮೆಗಾರರಿಗೂ ಕರೆ ನೀಡಿ ಅಂತಹ ಅವ್ಯವಸ್ಥೆಗೆ ಅವಕಾಶ ನೀಡಬಾರದು ಮತ್ತು ‘ಸ್ಥಳೀಯ ಹಾಗೂ ಬ್ರಿಟಿಷ್ ಶೋಷಕರ’ ವಿರುದ್ಧದ ಹೋರಾಟದೊಂದಿಗೆ ಸೇರಿಕೊಳ್ಳಿ ಎಂದು ಹೇಳಿದೆ. ಈ ವೇದಿಕೆಯು ‘ಲಿಂಗ, ಧರ್ಮ ಮತ್ತು ಜನಾಂಗ ಯಾವುದೇ ಇರಲಿ ಎಲ್ಲಾ ಪ್ರಜೆಗಳಿಗೂ ಪೂರ್ಣ ಸಮಾನತೆಯನ್ನು’ ಮತ್ತು ‘ಪ್ರಭುತ್ವದಿಂದ ಧರ್ಮವನ್ನು ಸಂಪೂರ್ಣವಾಗಿ ಪ್ರತ್ಯೇಕಿಸುವುದನ್ನು’ ದೃಢೀಕರಿಸಿತ್ತು.

ಎ.ಐ.ಟಿ.ಯು.ಸಿ, ಎ.ಐ.ಕೆ.ಎಸ್, ಎ.ಐ.ಎಸ್.ಎಫ್ ಹಾಗೂ ಪಿ.ಡಬ್ಲ್ಯೂ.ಎ ಅಂತಹ ಹಲವಾರು ವರ್ಗ ಹಾಗೂ ಸಾಮೂಹಿಕ ಸಂಘಟನೆಗಳನ್ನು ರಚಿಸುವಲ್ಲಿ ಮತ್ತು ಬಲಪಡಿಸುವಲ್ಲಿ ಮತ್ತು ಈ ವೇದಿಕೆಗಳ ಮೂಲಕ ಜನರನ್ನು ಅಣಿನೆರೆಸುವಲ್ಲಿ ಕಮ್ಯುನಿಸ್ಟ್ ಪಕ್ಷವು ಸಕ್ರಿಯ ಪಾತ್ರ ವಹಿಸಿದೆ. ಸಮಾಜದ ಈ ವಿವಿಧ ವಿಭಾಗಗಳ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಸಮರಶೀಲ ಹೋರಾಟಗಳನ್ನು ನಡೆಸಿದೆ. ವಸಾಹತು ಆಳ್ವಿಕೆಯನ್ನು ಕೊನೆಗಾಣಿಸಬೇಕು ಎಂದು ಒತ್ತಾಯಿಸುವುದರ ಜತೆಯಲ್ಲೇ ಪ್ರಜಾಸತ್ತಾತ್ಮಕ ಹಕ್ಕುಗಳು, ಸಂಘಟಿಸುವ ಹಾಗೂ ಪ್ರತಿಭಟಿಸುವ ಹಕ್ಕುಗಳನ್ನು ವಿಸ್ತರಿಸುವುದರ ಮೂಲಕ ನೈಜ ಪ್ರಜಾಪ್ರಭುತ್ವಕ್ಕಾಗಿ ಕಮ್ಯುನಿಸ್ಟರು ಒತ್ತಾಯಿಸಿದರು. ಎಂಟು ಗಂಟೆ ಕೆಲಸದ ದಿನ, ಮಹಿಳೆಯರು ಮತ್ತು ಪುರುಷರಿಗೆ ಸಮಾನ ಹಕ್ಕುಗಳು, ಸಮಾನ ವೇತನ, ಉಚಿತ ಶಿಕ್ಷಣ, ಅಸ್ಪೃಶ್ಯತೆಯನ್ನು, ಭೂಮಾಲಕತ್ವವನ್ನು, ಪಾಳೇಗಾರಿ ಸೌಲಭ್ಯ, ಸವಲತ್ತುಗಳನ್ನು ಹಾಗೂ ಶೋಷಣೆಯನ್ನು ರದ್ದುಪಡಿಸಬೇಕೆಂದು ಒತ್ತಾಯಿಸಲಾಗಿದೆ. ಈ ಬೇಡಿಕೆಗಳನ್ನು ಎತ್ತುವುದು ಮತ್ತು ಈ ಬೇಡಿಕೆಗಳ ಆಧಾರದಲ್ಲಿ ಜನರನ್ನು ಅಣಿನೆರೆಸುವುದರ ಮೂಲಕ ಜನಸಮುದಾಯದ ಆಸೆ ಆಕಾಂಕ್ಷೆಗಳು ಹಾಗೂ ಹಂಬಲಗಳಿಗೆ ಕಮ್ಯುನಿಸ್ಟ್ ಪಕ್ಷ ಸ್ಪಷ್ಟ ರೂಪ ನೀಡಿತು. ಜನರನ್ನು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವಂತೆ ಮಾಡಿತು ಕೂಡ.

HMS - ML Coalitionವಸಾಹತುಶಾಹಿ-ವಿರೋಧಿ ಹೋರಾಟದಲ್ಲಿ ಕಮ್ಯುನಿಸ್ಟರ ಪಾತ್ರವು ಪಕ್ಷದ ಮೊದಲ ಮಹಾಧಿವೇಶನದಲ್ಲಿ ಭಾಗವಹಿಸಿದ ಪ್ರತಿನಿಧಿಗಳ ಸಂಯೋಜನೆಯಲ್ಲಿ ಪ್ರತಿಫಲನವಾಗಿದೆ. ಪ್ರತಿನಿಧಿಗಳ ಶೇಕಡಾ 70 ರಷ್ಟು ಜನರು ಜೈಲಿನಲ್ಲಿ ಒಂದು ಅಥವಾ ಹೆಚ್ಚು ಬಾರಿ ಕಳೆದಿದ್ದಾರೆ ಮತ್ತು ಅವರೆಲ್ಲರೂ ಜೈಲಿನಲ್ಲಿ ಕಳೆದ ಸರಾಸರಿ ಕಾಲ 411 ವರ್ಷಗಳಿದ್ದವು. ಅವರ ಜೀವಿತಾವಧಿಯ ಅರ್ಧದಷ್ಟು ಕಾಲ ಅವರು ಜೈಲಿನಲ್ಲೇ ಕಳೆದಿದ್ದಾರೆ. ಶೇಕಡಾ 53 ರಷ್ಟು ಪ್ರತಿನಿಧಿಗಳು ಭೂಗತರಾಗಿದ್ದ ಅನುಭವ ಹೊಂದಿದ್ದಾರೆ ಮತ್ತು ಅವರೆಲ್ಲರೂ ಸರಾಸರಿಯಾಗಿ 54 ವರ್ಷಗಳ ಭೂಗತ ಜೀವನ ಅನುಭವಿಸಿದ್ದಾರೆ.

ಭಾರತವು ಹಿಂದು ಮತ್ತು ಮುಸ್ಲಿಂ ಎಂಬ ಜನರ ಧಾರ್ಮಿಕ ನಂಬಿಕೆಗಳ ಆಧಾರದಲ್ಲಿ ವಿಭಜನೆಯಾಗಿ ಎರಡು ದೇಶಗಳನ್ನು ಒಳಗೊಂಡಿದೆ ಎಂದು ಹಿಂದು ಮತ್ತು ಮುಸ್ಲಿಂ ಕೋಮುವಾದಿಗಳು ಭಾವಿಸುತ್ತಾರೆ. ಈ ಕಾರಣಕ್ಕಾಗಿಯೇ ಸಾವರ್ಕರ್ ಮತ್ತು ಜಿನ್ನಾ ಇಬ್ಬರೂ ಪರಸ್ಪರ ಸಮರ್ಥಿಸುವ ದ್ವಿರಾಷ್ಟ್ರ (ಎರಡು-ದೇಶ) ಸಿದ್ಧಾಂತದ ಬಗ್ಗೆ ಅವರಿಗೆ ಯಾವುದೇ ಸಮಸ್ಯೆ ಕಾಣುವುದಿಲ್ಲ ಮತ್ತು ಹಿಂದೂ ಮಹಾಸಭಾದ ಮುಖಂಡರು ಮುಸ್ಲಿಂ ಲೀಗ್ ಸರ್ಕಾರಗಳಲ್ಲಿ ಭಾಗವಹಿಸಿದರು. ಕಮ್ಯುನಿಸ್ಟ್ ಪಕ್ಷವು ಈ ಎರಡೂ ಕೋಮುವಾದಿ ಶಕ್ತಿಗಳನ್ನು ತೀಕ್ಷ್ಣವಾಗಿ ವಿರೋಧಿಸಿತು ಮತ್ತು ಜನರನ್ನು ವಸಾಹತುಶಾಹಿ ಆಳ್ವಿಕೆಯ ವಿರುದ್ಧ ಹೋರಾಟಕ್ಕೆ ಅಣಿನೆರೆಸುವ ಮೂಲಕ ಜನರ ಐಕ್ಯತೆಗೆ ಕೆಲಸ ಮಾಡಿತು. ಹಲವಾರು ರಾಷ್ಟ್ರೀಯತೆಗಳ, ಜನಾಂಗೀಯತೆಗಳ, ಧಾರ್ಮಿಕ ಗುಂಪುಗಳ, ಜಾತಿಗಳ ಅಸ್ತಿತ್ವವನ್ನು ಕಮ್ಯುನಿಸ್ಟ್ ಪಕ್ಷ ಗುರುತಿಸಿತು ಮತ್ತು ಈ ಎಲ್ಲಾ ವಿಭಾಗಗಳ ನಡುವೆ ಸಾಮರಸ್ಯದ ಸಂಬಂಧಗಳ ಪರವಾಗಿದೆ.

ಭಾರತವು ಬಹುರಾಷ್ಟ್ರೀಯತೆಗಳ ದೇಶವಾಗಿದೆ ಮತ್ತು ಎಲ್ಲಾ ರಾಷ್ಟ್ರೀಯತೆಗಳ ಮುಕ್ತ ಬೆಳವಣಿಗೆಯ ಪರಿಸ್ಥಿತಿಯ ಅಡಿಯಲ್ಲಿ ಮಾತ್ರವೇ ಭಾರತದ ಐಕ್ಯತೆಯನ್ನು ಪಾಲಿಸಿಕೊಂಡು ಬರಲು ಸಾಧ್ಯ ಎಂದು ಜನರ ನಡುವೆ ಪ್ರಚಾರ ಮಾಡುವ ಮೂಲಕ ಕಮ್ಯುನಿಸ್ಟ್ ಪಕ್ಷವು ಭಾರತದ ರಾಜಕೀಯಕ್ಕೆ ಅಮೂಲ್ಯ ಕೊಡುಗೆಯನ್ನು ನೀಡಿದೆ. ಸಾಮ್ರಾಜ್ಯವಾದ ಹಾಗೂ ಪಾಳೇಗಾರಿ ಪದ್ಧತಿಯ ವಿರುದ್ಧ ಮತ್ತು ಪ್ರಜಾಪ್ರಭುತ್ವಕ್ಕಾಗಿ ಹೋರಾಡುವ ಭಾಗವಾಗಿ ಕಮ್ಯುನಿಸ್ಟರು ಭಾರತದಲ್ಲಿನ ರಾಷ್ಟ್ರೀಯತೆಗಳ ಸಮಸ್ಯೆಗಳನ್ನು ಪರಾಮರ್ಶಿಸಿದೆ. ದುಡಿಯುವ ಜನರ ಹಿತಾಸಕ್ತಿಯನ್ನು ಕಾಪಾಡುವ, ನೈಜ ಪ್ರಜಾಪ್ರಭುತ್ವದ ಪತಾಕೆಯನ್ನು ಮೇಲಕ್ಕೆ ಎತ್ತಿಹಿಡಿಯುವ ಮತ್ತು ಎಲ್ಲಾ ಸಾಮೂಹಿಕ ಹೋರಾಟಗಳಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಮೂಲಕ ಅದು ಸದಾ ಜನರ ಬಳಿ ಸಾಗಿದೆ.

ಕಮ್ಯುನಿಸ್ಟ್ ಪಕ್ಷವು ರೈತರು ಮತ್ತು ಕಾರ್ಮಿಕರ ಹೋರಾಟಗಳಲ್ಲಿ, ಹಿಂದು-ಮುಸ್ಲಿಂ ಐಕ್ಯತೆಯನ್ನು ಬೆಸೆಯುವಲ್ಲಿ, ಮತ್ತು ದುಡಿಯುವ ಜನರ ನಡುವೆ ವಿವಿಧ ಜಾತಿಗಳ ಐಕ್ಯಮತವನ್ನು ಸಾಧಿಸುವಲ್ಲಿ ತೀವ್ರವಾಗಿ ತೊಡಗಿಕೊಂಡಿದ್ದಾಗ, ಕೋಮುವಾದಿ ಶಕ್ತಿಗಳು ಸಾಮ್ರಾಜ್ಯವಾದಿಗಳ ಜತೆ ರಾಜಿಯ ಮತ್ತು ಜನರ ಹೋರಾಟಗಳನ್ನು ನಾಶಮಾಡುವ ಹಾದಿ ಹಿಡಿದಿದ್ದರು, ಮತ್ತು ಆ ದಾರಿಯು ಕೋಮು ಹತ್ಯಾಕಾಂಡ ಹಾಗೂ ದೇಶದ ವಿಭಜನೆಗೆ ಕಾರಣವಾಯಿತು. ಪಂಜಾಬ್ ಮತ್ತು ಬಂಗಾಳದಲ್ಲಿ ವಿಭಜನೆಯ ನಂತರದ ಗಲಭೆಗಳ ನಡುವೆ, ಕಮ್ಯುನಿಸ್ಟ್ ಪಕ್ಷದ ಸದಸ್ಯರು ಕೊಲೆಗಡುಕ ಗಲಭೆಕೋರರಿಂದ ಜನರನ್ನು ರಕ್ಷಿಸುವ ಪ್ರಯತ್ನಗಳಲ್ಲಿ ಅಸಾಧಾರಣ ಕಲಿತನವನ್ನು ಮೆರೆದರು. ಗಲಭೆಕೋರರನ್ನು ಹಿಮ್ಮೆಟ್ಟಿಸಲು ಅವರು ವೀರೋಚಿತ ಮತಪ್ರದರ್ಶನಗಳನ್ನು ನಡೆಸಿದರು.

BJP Founder n Musllim Leaugueಕೋಮುವಾದಿ ಶಕ್ತಿಗಳು ದೇಶ ಒಡೆಯುವ ಕೆಲಸದಲ್ಲಿ ನಿರತರಾಗಿದ್ದರೆ, ಕಮ್ಯುನಿಸ್ಟರು ದೇಶದ ಏಕತೆಗಾಗಿ ದುಡಿದರು. ಕೋಮು ಶಕ್ತಿಗಳು ರಾಷ್ಟ್ರ ಧ್ವಜವನ್ನು, ಸಂವಿಧಾನವನ್ನು ಅವಮಾನಿಸುತ್ತಿರುವಾಗ ಮತ್ತು ಮನುಸ್ಮೃತಿಯನ್ನು ಭಾರತದ ಕಾನೂನು ಸಂಹಿತೆಯನ್ನಾಗಿ ಜಾರಿಮಾಡಬೇಕೆಂದು ಒತ್ತಾಯಿಸುತ್ತಿರುವಾಗ, ಕಮ್ಯುನಿಸ್ಟರು ಪಾಳೇಗಾರಿ ಪದ್ಧತಿಯ ಮೂಲೋತ್ಪಾಟನೆಗಾಗಿ, ಪುರುಷರು ಮತ್ತು ಮಹಿಳೆಯರ ನಡುವಿನ ಸಮಾನತೆಯ ಸ್ಥಾಪನೆಗಾಗಿ, ಜಾತಿ ತಾರತಮ್ಯದ ರದ್ದತಿಗಾಗಿ, ಧರ್ಮ, ಮತ, ಜನಾಂಗೀಯತೆ ಹಾಗೂ ರಾಷ್ಟ್ರೀಯತೆಯನ್ನು ಮೀರಿ ಎಲ್ಲರ ಸಮಾನತೆಗಾಗಿ ಹೋರಾಡುತ್ತಿದ್ದರು. ಕೋಮು ಶಕ್ತಿಗಳು ಹಿಟ್ಲರ್ ಮತ್ತು ಮುಸೊಲಿನಿಯಂತಹ ಸರ್ವಾಧಿಕಾರಿಗಳನ್ನು ಹಾಡಿ ಹೊಗಳುತ್ತಿರುವಾಗ, ಪ್ರಜಾಸತ್ತಾತ್ಮಕ ಹಕ್ಕುಗಳ ವಿಸ್ತರಣೆ ಮತ್ತು ಕಾರ್ಮಿಕರು, ರೈತರು ಹಾಗೂ ಇತರ ಶ್ರಮಜೀವಿಗಳಿಗೆ ಇನ್ನೂ ಹೆಚ್ಚಿನ ಹಕ್ಕುಗಳನ್ನು ಸೇರಿಸುವ ಮೂಲಕ ಸಂವಿಧಾನವನ್ನು ಬಲಪಡಿಸುವತ್ತ ಕಮ್ಯುನಿಸ್ಟರು ಕೆಲಸ ಮಾಡುತ್ತಿದ್ದರು.

ಒಂದೇ ಶಬ್ದದಲ್ಲಿ ಹೇಳಬೇಕೆಂದರೆ, ಕಮ್ಯುನಿಸ್ಟರು ದೇಶದ ಯೋಗಕ್ಷೇಮ ಮತ್ತು ಅದರ ಐಕ್ಯತೆಗಾಗಿ ತಮ್ಮ ತ್ಯಾಗ ಬಲಿದಾನಗಳನ್ನು ಮಾಡಿ ನಿಜವಾದ ದೇಶಪ್ರೇಮಿಗಳಾಗಿದ್ದಾರೆ, ಕೋಮು ಶಕ್ತಿಗಳು ದೇಶವನ್ನು ವಿಭಜಿಸುವ ಹಾಗೂ ದೇಶವನ್ನು ಬಹುಸಂಖ್ಯಾತರ, ಸರ್ವಾಧಿಕಾರಿಗಳ, ನಿರಂಕುಶ ಪ್ರಭುತ್ವವನ್ನಾಗಿ ಪರಿವರ್ತಿಸುವ ಮೂಲಕ ದೇಶದ್ರೋಹಿಗಳಾಗಿದ್ದಾರೆ.

ನಮ್ಮ ದೇಶವು ನಿಜವಾಗಿಯೂ ಪ್ರಗತಿ ಸಾಧಿಸಬೇಕಾದರೆ, ಕಮ್ಯುನಿಸ್ಟರ ಕಣ್ಣೋಟ ಸರಿಯಾದ ದಿಕ್ಕನ್ನು ತೋರಿಸುತ್ತದಯೇ ವಿನಃ, ಪ್ರತಿಗಾಮಿ, ಕೋಮುವಾದಿ, ಹಿಂದುತ್ವ ಶಕ್ತಿಗಳು ಖಂಡಿತಾ ಅಲ್ಲ.

ಅನುವಾದ: ಟಿ ಸುರೇಂದ್ರ ರಾವ್

Leave a Reply

Your email address will not be published. Required fields are marked *