ಕೂಡಲೇ ಎನ್ಆರ್‌ಸಿ / ಎನ್‌ಪಿಆರ್ ಹಿಂಗೆದುಕೊಳ್ಳಬೇಕು

ಭಾರತ ಸರಕಾರ ಕೂಡಲೇ ರಾಷ್ಟ್ರೀಯ ಪೌರರ ನೋಂದಣಿ(ಎನ್‌ಸಿಆರ್) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್‌ಪಿಆರ್) ಪ್ರಕ್ರಿಯೆಯನ್ನು ಹಿಂತೆಗೆದುಕೊಳ್ಳುವುದಾಗಿ ಪ್ರಕಟಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‌ ಬ್ಯುರೊ ಆಗ್ರಹಿಸಿದೆ.

ಈಶಾನ್ಯ ರಾಜ್ಯಗಳು ಮಾತ್ರವಲ್ಲ ಇನ್ನೂ ಹತ್ತು ರಾಜ್ಯಗಳ ಮುಖ್ಯಮಂತ್ರಿಗಳು ತಮ್ಮ ರಾಜ್ಯಗಳಲ್ಲಿ ಎನ್‌ಆರ್‌ಸಿ ಜಾರಿ ಮಾಡುವುದನ್ನು ವಿರೋಧಿಸಿದ್ದಾರೆ. ಇನ್ನೂ ಹಲವರು ಇದೇ ದಾರಿ ಅನುಸರಿಸುವ ಸಾಧ್ಯತೆಗಳಿವೆ. ಇಂತಹ ಸನ್ನಿವೇಶದಲ್ಲಿ ಕೇಂದ್ರ ಸರಕಾರದ ಹಠಮಾರಿತನವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸಿಪಿಐ(ಎಂ) ಹೇಳಿದೆ.

CAA & NRC 21 12 2019ಸಂವಿಧಾನ-ವಿರೋಧಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಮತ್ತು ಅದಕ್ಕೆ ಸಂಬಂಧಿಸಿರುವ ಎನ್‌ ಆರ್‌ ಸಿ/ಎನ್‌ ಪಿ ಆರ್ ವಿರುದ್ಧ ಪ್ರತಿಭಟನೆಗಳನ್ನು ಶಾಂತಿಯುತವಾಗಿ ಮುಂದುವರೆಸಬೇಕು ಎಂದು ಪೊಲಿಟ್‌ಬ್ಯುರೊ ಜನತೆಗೆ ಮನವಿ ಮಾಡಿಕೊಂಡಿದೆ. ಹಲವೆಡೆಗಳಲ್ಲಿ ಪ್ರತಿಭಟನೆಗಳ ನಿಷೇಧ ಮತ್ತು ಶಾಂತಿಯುತ ಪ್ರತಿಭಟನಾಕಾರರ ಮೇಲೆ ವಿಪರೀತ ಬಲಪ್ರಯೋಗವನ್ನು ಪೊಲಿಟ್‌ಬ್ಯುರೊ ಖಂಡಿಸಿದೆ. ಹಿಂಸಾಚಾರವನ್ನು ಉದ್ರೇಕಿಸುವ ಉದ್ದೇಶ ಹೊಂದಿರುವ ಯಾವುದೇ ತಂತ್ರಗಳಿಗೆ ಜನ ಬಲಿಬೀಳಬಾರದು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಜನತೆಗೆ ಮನವಿ ಮಾಡಿಕೊಂಡಿದೆ.

ಎನ್‌ಪಿಆರ್ ಪ್ರಕ್ರಿಯೆಗೆ ಸಂಬಂಧಪಟ್ಟ ಎಲ್ಲ ಕೆಲಸಗಳನ್ನು ನಿಲ್ಲಿಸಲು ಕೇರಳ ಎಲ್‌ ಡಿ ಎಫ್ ಸರಕಾರದ ಆದೇಶ:

ಕೇರಳದ ಎಲ್‌ಡಿಎಫ್ ಸರಕಾರ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪಟ್ಟಿಯನ್ನು ಸಮಕಾಲಿಕಗೊಳಿಸುವುಕ್ಕೆ ಸಂಬಂಧಪಟ್ಟ ಎಲ್ಲ ಕೆಲಸಗಳನ್ನು ನಿಲ್ಲಿಸಲು ಡಿಸೆಂಬರ್೨೦ ರಂದು ಆದೇಶ ಹೊರಡಿಸಿದೆ.

ಈ ಹಿಂದೆ ಭಾರತದ ಜನಗಣತಿ ಆಯುಕ್ತರು ಮತ್ತು ಪ್ರಧಾನ ನೋಂದಣಿಕಾರರ ಕಚೇರಿಯ 31 ಜುಲೈ 2019ರ ಕೋರಿಕೆಯಂತೆ ರಾಜ್ಯ ಸರಕಾರ ಅದು ಕಳಿಸಿದ ಅಧಿಸೂಚನೆಯನ್ನು ಪ್ರಕಟಿಸಿತ್ತು. ಆದರೆ ಈಗ ಪೌರತ್ವ ತಿದ್ದುಪಡಿ ಕಾಯ್ದೆಯ ನಂತರ ಸಾರ್ವಜನಿಕರಲ್ಲಿ  ಎನ್‌ಪಿಆರ್ ಸಂಬಂಧಿತ ಚಟುವಟಿಕೆಗಳು ಎನ್‌ಆರ್‌ಸಿಗೆ ದಾರಿ ಮಾಡಿಕೊಡುತ್ತವೆ ಎಂಬ ಭೀತಿ ಉಂಟಾಗಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪಟ್ಟಿಯನ್ನು ಸಮಕಾಲಿಕಗೊಳಿಸುವುದಕ್ಕೆ ಸಂಬಂಧಪಟ್ಟ ಎಲ್ಲ ಚಟುವಟಿಕೆಗಳಿಗೆ ಕೇರಳ ರಾಜ್ಯದಲ್ಲಿ ತಕ್ಷಣವೇ ತಡೆ ಹಾಕಿರುವುದಾಗಿ ಎಲ್‌ ಡಿ ಎಫ್ ಸರಕಾರದ ಆದೇಶ ಹೇಳಿದೆ.

ಕೇರಳ ಸರಕಾರದ ಈ ಕ್ರಮವನ್ನು ಸ್ವಾಗತಿಸಿರುವ ಸಿಪಿಐ(ಎಂ) ಬೇರೆ ರಾಜ್ಯಗಳೂ ಇಂತಹ ಆದೇಶಗಳನ್ನು ಹೊರಡಿಸಬೇಕೆಂದು ಕೋರಿದೆ.

ಈಶಾನ್ಯ ಭಾರತದ ರಾಜ್ಯಗಳಲ್ಲಂತೂ ಸಿಎಎ/ ಎನ್‌ಆರ್‌ಸಿ/ ಎನ್‌ಪಿಆರ್ ಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಕೇರಳ, ಪಶ್ಚಿಮ ಬಂಗಾಳ ಮತ್ತು ಕಾಂಗ್ರೆಸ್‌ನ ಪಂಜಾಬ್ ಮತ್ತಿತರ ರಾಜ್ಯ ಸರಕಾರಗಳೂ  ತಂತಮ್ಮ ರಾಜ್ಯಗಳಲ್ಲಿ ಎನ್‌ ಆರ್‌ ಸಿ ಯನ್ನು ಜಾರಿ ಮಾಡುವದಿಲ್ಲ ಎಂದು ಹೇಳಿದ ಮೇಲೆ, ಸಿಎಬಿ ಪರವಾಗಿ ಸಂಸತ್ತಿನಲ್ಲಿ ಮತನೀಡಿದ ಒಡಿಶಾ ಮತ್ತು ಆಂಧ್ರಪ್ರದೇಶದ ರಾಜ್ಯ ಸರಕಾರಗಳೂ ಎನ್‌ ಆರ್‌ ಸಿಯನ್ನು ವಿರೋಧಿಸಿವೆ, ಇದಾದ ನಂತರ ಬಿಹಾರದ ಎನ್‌ ಡಿ ಎ ಸರಕಾರದ ಮುಖ್ಯಮಂತ್ರಿಗಳು ಎನ್‌ ಆರ್‌ ಸಿಯನ್ನು ಜಾರಿ ಮಾಡುವುದಿಲ್ಲ ಎಂದ ಹತ್ತನೇ ಮುಖ್ಯಮಂತ್ರಿ ಮತ್ತು ಎನ್‌ ಡಿ ಎ ಕೂಟದ ಮೊದಲ ಮುಖ್ಯಮಂತ್ರಿಯಾಗಿದ್ದಾರೆ.

ಎನ್ ಆರ್‌ ಸಿ ಜಾರಿಯನ್ನು ವಿರೋಧಿಸಿರುವ ರಾಜ್ಯಗಳ ಲೋಕಸಭಾ ಕ್ಷೇತ್ರಗಳ ಒಟ್ಟು ಸಂಖ್ಯೆ ೨೭೪ ಆಗಿದ್ದು, ಒಟ್ಟು ೫೪೩ ಲೋಕಸಭಾ ಕ್ಷೇತ್ರಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಎನ್‌ ಆರ್‌ ಸಿ ಪ್ರಕ್ರಿಯೆ ಜಾರಿಯಾಗುವುದಿಲ್ಲ ಎಂದ ಹಾಗಾಯಿತು ಎಂದೊಬ್ಬ ಸುದ್ದಿ ವಿಶ್ಲೇಷಕರು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಎನ್‌ಪಿಆರ್ ಮತ್ತು ಎನ್‌ಸಿಆರ್ ಪ್ರಕ್ರಿಯೆಗಳನ್ನು ವಾಪಾಸು ಪಡೆಯಬೇಕೆಂಬ ಸಿಪಿಐ(ಎಂ) ಪೊಲಿಟ್‌ ಬ್ಯುರೊ ಆಗ್ರಹ ಗಮನಾರ್ಹ.

Leave a Reply

Your email address will not be published. Required fields are marked *