ಅಖಿಲ ಭಾರತ ಎನ್‌ಆರ್‌ಸಿ ಇಲ್ಲ ಎಂದು ಪ್ರಧಾನಿ ಹೇಳಲಿ-ಯೆಚುರಿ

ದಿಲ್ಲಿಯಲ್ಲಿ ಪ್ರಧಾನ ಮಂತ್ರಿಗಳ ಚುನಾವಣಾ ಭಾಷಣ ಅಸತ್ಯಗಳು, ಅರೆ-ಸತ್ಯಗಳು ಮತ್ತು ದಾರಿ ತಪ್ಪಿಸುವ ಹೇಳಿಕೆಗಳಿಂದ ತುಂಬಿದೆ, ಅದು ಎನ್‌ ಆರ್‌ ಸಿ ಬಗ್ಗೆಯಾಗಿರಬಹುದು, ಸಿಎಎ ಅಥವ ನಿರ್ಬಂಧನ ಶಿಬಿರಗಳ ಬಗ್ಗೆ ಇರಬಹುದು. ನಿಜಸಂಗತಿಗಳು ತದ್ವಿರುದ್ಧವಾಗಿವೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಟಿಪ್ಪಣಿ ಮಾಡಿದ್ದಾರೆ.

ಪ್ರಧಾನಿಗಳು ಹೇಳಿರುವ ನಿಜಸಂಗತಿಗಳು ಒತ್ತಟ್ಟಿಗಿರಲಿ. ಸನ್ನಿವೇಶದಲ್ಲಿ ಬದಲಾವಣೆ  ತರಬಹುದಾದ  ಯಾವುದೇ ಸಂಗತಿ ಅವರ ಈ ಚುನಾವಣಾ ಭಾಷಣದಲ್ಲಿ ಇರಲಿಲ್ಲ. ಗೃಹಮಂತ್ರಿಗಳು ಸಂಸತ್ತಿನಲ್ಲಿ ಪ್ರಕಟಿಸಿರುವ ಅಖಿಲ ಭಾರತ ಎನ್‌ ಆರ್‌ ಸಿಯನ್ನು ರದ್ದು ಮಾಡಲಾಗಿದೆ, ಸಿಎಎಯನ್ನು ಹಿಂತೆಗೆದುಕೊಳ್ಳಲಾಗಿದೆ ಎಂಬ ಒಂದು ಸ್ಪಷ್ಟ ಪ್ರಕಟಣೆ ಬಿಟ್ಟು ಬೇರೇನೂ ಸನ್ನಿವೇಶವನ್ನು ಬದಲಿಸುವುದಿಲ್ಲ ಎಂದಿರುವ ಯೆಚುರಿಯವರು “ಒಂದು ಅಖಿಲ ಭಾರತ ಎನ್‌ಆರ್‌ಸಿಯನ್ನು ಜಾರಿ ಮಾಡುವುದಿಲ್ಲ ಎಂದು ಪ್ರಧಾನಿಗಳು ನೇರವಾಗಿ ಹೇಳಬೇಕು” ಎಂದು ಹೇಳಿದ್ದಾರೆ.

ಪ್ರಧಾನಿಗಳು  ಈ ಒಂದು ಗಂಟೆಯ ಭಾಷಣದಲ್ಲಿ ಜನಗಳ ಸಂಕಟಗಳ ಬಗ್ಗೆ, ಅತ್ಯುನ್ನತ ಮಟ್ಟಕ್ಕೇರಿರುವ ನಿರುದ್ಯೋಗದ ಬಗ್ಗೆ, ರೈತರನ್ನು ಆತ್ಮಹತ್ಯೆಗಳತ್ತ ತಳ್ಳುತ್ತಿರುವ ಹತಾಶೆಯ ಬಗ್ಗೆ, ಆರ್ಥಿಕ ಮಂದಗತಿಯ ಬಗ್ಗೆ, ಈರುಳ್ಳಿಯನ್ನು ತಿನ್ನದಂತೆ ಮಾಡಿರುವ ಬೆಲೆಯೇರಿಕೆಗಳ ಬಗ್ಗೆ ಚಕಾರ ಎತ್ತಲಿಲ್ಲ ಎಂಬುದು ತೀವ್ರ ವೇದನೆಯುಂಟುಮಾಡುವ ಸಂಗತಿ ಎಂದೂ ಯೆಚುರಿ ಹೇಳಿದ್ದಾರೆ.

Leave a Reply

Your email address will not be published. Required fields are marked *