ಕಾರ್ಮಿಕರ ಮತ್ತು ರೈತರ ಪಕ್ಷ ಸ್ಥಾಪನೆ

  • ರಾಷ್ಟ್ರೀಯ ಪ್ರಜಾಸತ್ತಾತ್ಮಕ ಕ್ರಾಂತಿಯನ್ನು ಸಾಧಿಸಲು ಕಾರ್ಮಿಕ ವರ್ಗ, ರೈತರು ಮತ್ತು ಪುಟ್ಟ ಬಂಡವಾಳಶಾಹಿಗಳ ಐಕ್ಯರಂಗದ ಸಂಘಟನಾ ರೂಪ ಎಂದು ಭಾವಿಸಲಾಗಿದ್ದ ವರ್ಕರ್ಸ್ ಅಂಡ್ ಪೆಸಂಟ್ಸ್ ಪಾರ್ಟಿ(ಡಬ್ಲ್ಯುಪಿಪಿ-ರೈತರು ಮತ್ತು ಕಾರ್ಮಿಕರ ಪಕ್ಷ) ಕಲ್ಕತಾ, ಮುಂಬೈ ಮುಂತಾದೆಡೆಗಳಲ್ಲಿ ಕೆಲಸ ಮಾಡುತ್ತಿದ್ದು, ಇನ್ನೂ ಕೆಲವೆಡೆಗಳಲ್ಲಿ ಅವನ್ನು ಆರಂಭಿಸಿ ಅಖಿಲ ಭಾರತ ಮಟ್ಟದಲ್ಲಿ ಅದನ್ನು ರಚಿಸುವ ಕೆಲಸ ಡಿಸೆಂಬರ್ ೧೯೨೮ರಲ್ಲಿ ಕಲ್ಕತ್ತಾದಲ್ಲಿ ಅಖಿಲ ಭಾರತ ಸಮ್ಮೇಳನವನ್ನು ನಡೆಸುವುದರೊಂದಿಗೆ ಈಡೇರಿತು. ಇದು ಕಾಮಿಕರನ್ನು, ರೈತರನ್ನು ಹಾಗೂ ಯುವಜನರನನು ಸಂಗಟಿಸುವ ಕೆಲಸದಲ್ಲಿ ನೆರವಾಯಿತು.

Communist100 File copyಕಾನ್ಪುರ್ ಕಮ್ಯುನಿಸ್ಟ್ ಸಮ್ಮೇಳನ ಜರುಗಿದ ನಂತರದ ಅವಧಿಯಲ್ಲಿ ಭಾರತದ ಹಲವಾರು ಪ್ರಾಂತಗಳಲ್ಲಿ ಕಾರ್ಮಿಕರ ಮತ್ತು ರೈತರ ಪಕ್ಷಗಳು ರಚನೆಗೊಂಡವು. ಆ ನಂತರ ೧೯೨೮ರಲ್ಲಿ ಆ ಪಕ್ಷಗಳನ್ನೆಲ್ಲಾ ಒಟ್ಟುಗೂಡಿಸಿ ಅಖಿಲ ಭಾರತ ಕಾರ್ಮಿಕರ ಮತ್ತು ರೈತರ ಪಕ್ಷ (ಡಬ್ಲ್ಯುಪಿಪಿ)ವನ್ನು ಸ್ಥಾಪಿಸಲಾಯಿತು. ಹಲವಾರು ಪ್ರಾಂತಗಳಲ್ಲಿ ಈ ಪಕ್ಷಗಳಿಗೆ ಕಮ್ಯುನಿಸ್ಟರು ನೇತೃತ್ವ ಕೊಟ್ಟಿದ್ದಾಗ್ಯೂ, ಡಬ್ಲ್ಯುಪಿಪಿಯು ಕಮ್ಯುನಿಸ್ಟ್ ಪಕ್ಷವಾಗಿರಲಿಲ್ಲ ಅಥವಾ ಮುಸುಕಿನ ಕಮ್ಯುನಿಸ್ಟ್ ಪಕ್ಷ ಕೂಡ ಆಗಿರಲಿಲ್ಲ. ಡಬ್ಲ್ಯುಪಿಪಿಯನ್ನು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಕ್ರಾಂತಿಯನ್ನು ಮಾಡಲು ಕಾರ್ಮಿಕ ವರ್ಗ, ರೈತರು ಮತ್ತು ಪುಟ್ಟ ಬಂಡವಾಳಶಾಹಿಗಳ ಐಕ್ಯರಂಗದ ಸಂಘಟನಾ ರೂಪ ಎಂದು ಭಾವಿಸಲಾಗಿತ್ತು.

ಬಂಗಾಳದಲ್ಲಿ ಲೇಬರ್ ಸ್ವರಾಜ್ ಪಕ್ಷ(ಎಲ್.ಎಸ್.ಪಿ)ವನ್ನು ಬಂಗಾಳ ರೈತರ ಮತ್ತು ಕಾರ್ಮಿಕರ ಪಕ್ಷವನ್ನಾಗಿ ೧೯೨೬ರಲ್ಲಿ ಪರಿವರ್ತನೆ ಮಾಡುವುದರ ಮೂಲಕ ಡಬ್ಲ್ಯುಪಿಪಿಯನ್ನು ರಚಿಸಲಾಯಿತು. ನ್ಯೂನತೆಗಳನ್ನು ಹೊಂದಿದ್ದಾಗ್ಯೂ ಎಲ್.ಎಸ್.ಪಿ.ಯು ಉಗ್ರಗಾಮಿ ರಾಜಕೀಯ ಕಾರ್ಯಕರ್ತರ ಕೇಂದ್ರವಾಗಿ ಮಾರ್ಪಟ್ಟಿತ್ತು. ಪ್ರಸಿದ್ಧ ಬಂಗಾಳಿ ಕವಿ ಖಾಜಿ ನಜ್ರುಲ್ ಇಸ್ಲಾಮ್ ಅವರು ಲಂಗಾಲ್ ಎಂಬ ಮುಖವಾಣಿಯ ಸಂಪಾದಕರಾಗಿ ಸಕ್ರಿಯ ಪಾತ್ರ ವಹಿಸಿದ್ದರು. ಬಂಗಾಳದಲ್ಲಿ ಕಮ್ಯುನಿಸ್ಟ್ ಪಕ್ಷವನ್ನು ಸ್ಥಾಪಿಸಬೇಕೆಂದು ಮುಜಾಫರ್ ಅಹಮದ್ ನೀಡಿದ್ದ ಕರೆಯನ್ನು ಅದರಲ್ಲಿ ಪ್ರಕಟಿಸಲಾಗಿತ್ತು. ಫೆಬ್ರವರಿ ೧೯೨೬ ರಲ್ಲಿ ನಡೆದ ಎಲ್.ಎಸ್.ಪಿ.ಯ ಸಮ್ಮೇಳನದಲ್ಲಿ ಹೊಸ ಕಾರ್ಯಕ್ರಮವನ್ನು ಅಂಗೀಕರಿಸುವ ಮೂಲಕ ಡಬ್ಲ್ಯುಪಿಪಿಯನ್ನು ವಿಧ್ಯುಕ್ತವಾಗಿ ಘೋಷಿಸಲಾಯಿತು. ಡಬ್ಲ್ಯುಪಿಪಿಯು ಆರಂಭದಿಂದಲೂ ಭಾರತ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಕ್ರಾಂತಿಕಾರಿ ರಾಷ್ಟ್ರೀಯವಾದಿಗಳಿಂದ ದೂರ ಇತ್ತು ಮತ್ತು ನಿಧಾನವಾಗಿ ಸ್ಥಿರವಾಗಿ ಶಕ್ತಿಯುತವಾಗಿ ಬೆಳೆಯಿತು. ಅದು ಗಣವಾಣಿ ಯನ್ನು ಅಧಿಕೃತ ಪತ್ರಿಕೆಯಾಗಿ ಹೊರತರಲು ಪ್ರಾರಂಭಿಸಿತು.

೧೯೨೭ ಜನವರಿ ೧೬-೧೮, ರಂದು ನಡೆದ ಸಿಪಿಐ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಮುಂಬೈ ಪ್ರಾಂತದಲ್ಲಿ ಡಬ್ಲ್ಯುಪಿಪಿಯನ್ನು ಸ್ಥಾಪಿಸಬೇಕೆಂಬ ತೀರ್ಮಾನವನ್ನು ಮಾಡಲಾಯಿತು. ಬಂಗಾಳದ ಹೊರಗೆ ಮೊಟ್ಟ ಮೊದಲ ಬಾರಿಗೆ ಅಂತಹ ಸಂಘಟನೆಯನ್ನು ಸ್ಥಾಪಿಸಲಾಯಿತು ಮತ್ತು ಮರಾಠಿ ವಾರಪತ್ರಿಕೆಯನ್ನು ಪ್ರಕಟಿಸಲು ಆರಂಭಿಸಲಾಯಿತು. ಆ ಸಭೆಯಲ್ಲಿ ಮುಜಾಫರ್ ಅಹಮದ್ ಭಾಗವಹಿಸಿದ್ದರು. ತದನಂತರದಲ್ಲಿ, ಫೆಬ್ರವರಿ ೧೩, ೧೯೨೭ ರಂದು ಬಂಗಾಳ ರೈತರ ಮತ್ತು ಕಾರ್ಮಿಕರ ಪಕ್ಷದ ಎರಡನೇ ಸಮ್ಮೇಳನ ಕಲ್ಕತ್ತಾದಲ್ಲಿ ನಡೆಯುವುದಕ್ಕೆ ಆರು ದಿನಗಳ ಮುಂಚೆ ಮುಂಬೈಯಲ್ಲಿ ಡಬ್ಲ್ಯುಪಿಪಿಯನ್ನು ಸ್ಥಾಪಿಸಲಾಯಿತು. ಕ್ರಾಂತಿ ಎಂಬ ವಾರಪತ್ರಿಕೆಯನ್ನು ಅದು ಹೊರತಂದಿತು.

ಮುಂಬೈಯ ಡಬ್ಲ್ಯುಪಿಪಿಯ ಮೂಲಗಳು ಬಂಗಾಳದ ರೀತಿಯನ್ನೇ ಹೋಲುತ್ತವೆ. ಎಡಪಂಥೀಯ ಉಗ್ರಗಾಮಿಗಳ ಮತ್ತು ಕಮ್ಯುನಿಸ್ಟರ ಸಣ್ಣ ಗುಂಪೊಂದು ಪಕ್ಷದ ಕೇಂದ್ರ ಬಿಂದುವಾಗಿತ್ತು. ಅವರು ನವಂಬರ್ ೧೯೨೬ ರಲ್ಲಿ ಕಾಂಗ್ರೆಸ್ ಲೇಬರ್ ಪಕ್ಷ(ಸಿ.ಎಲ್.ಪಿ)ವನ್ನು ರಚಿಸಿದರು. ಸಿಪಿಐನ ಜನವರಿ ೧೯೨೭ ರ ತೀರ್ಮಾನದಂತೆ ಸಿ.ಎಲ್.ಪಿ.ಯನ್ನು ಡಬ್ಲ್ಯುಪಿಪಿಯಾಗಿ ಪರಿವರ್ತಿಸಲಾಯಿತು. ರಾಷ್ಟ್ರೀಯ ಕಾಂಗ್ರೆಸ್‌ನ ಒಳಗಡೆ ಕೆಲಸ ಮಾಡುವ ಮತ್ತು ಅಲ್ಲಿ ಎಡ ಗುಂಪಾಗಿ ಕಾರ್ಯ ನಿರ್ವಹಿಸುವ ಸಲುವಾಗಿ ಬೊಂಬಾಯಿಯ ಡಬ್ಲ್ಯುಪಿಪಿಯನ್ನು ಒಂದು ಸ್ವತಂತ್ರ ಪಕ್ಷವನ್ನಾಗಿ ಸಂಘಟಿಸಲಾಯಿತು. ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಹೋರಾಡಲು ವಿಶಾಲ ಸಾಮ್ರಾಜ್ಯಶಾಹಿ ರಂಗವೊಂದನ್ನು ಸ್ಥಾಪಿಸಲು ಅದು ಮುಂದಾಯಿತು. ಪಕ್ಷದ ಘೋಷಿತ ಉದ್ದೇಶವು: ಉತ್ಪಾದನಾ ಸಾಧನಗಳು, ವಿತರಣೆ ಮತ್ತು ವಿನಿಮಯವು ಸಾರ್ವಜನಿಕ ಒಡೆತನ ಮತ್ತು ಸಾಮಾಜಿಕ ನಿಯಂತ್ರಣ ಹೊಂದಿದ ಸಂಪೂರ್ಣ ರಾಷ್ಟ್ರೀಯ ಸ್ವಾತಂತ್ರ್ಯವನ್ನು ಸ್ಥಾಪಿಸುವುದು ಆಗಿತ್ತು.

ಬಂಗಾಳ ಮತ್ತು ಮುಂಬೈಯಲ್ಲಿ ಡಬ್ಲ್ಯುಪಿಪಿಯ ಉದಯವು ಕಾರ್ಮಿಕ ವರ್ಗದ ಚಳುವಳಿಯ ನಿರ್ಣಾಯಕ ಘಟ್ಟವಾಗಿತ್ತು. ಕಾರ್ಮಿಕರನ್ನು ಸಂಘಟಿಸುವಲ್ಲಿ ಕಮ್ಯುನಿಸ್ಟರು ವಹಿಸಿದ ಸಕ್ರಿಯ ಪಾತ್ರದಿಂದಾಗಿ ಎಸ್.ವಿ.ಘಾಟೆ ಎಐಟಿಯುಸಿಯ ಮೊದಲ ಕಮ್ಯುನಿಸ್ಟ್ ಪದಾಧಿಕಾರಿಯಾಗಿ ಆಯ್ಕೆಯಾದರು. ೧೯೨೭ ಕ್ಕಿಂತ ಮುಂಚೆ, ಡಬ್ಲ್ಯುಪಿಪಿಯು ರಾಜ್‌ಪುತಾನಾದಲ್ಲಿ ಕೂಡ ಅರ್ಜುನ್ ಲಾಲ್ ಸೇಥಿ ನೇತೃತ್ವದಲ್ಲಿ ಉದಯವಾಯಿತು; ೧೯೨೫ರ ಕಾನ್ಪುರ್ ಕಮ್ಯುನಿಸ್ಟ್ ಸಮ್ಮೇಳನದಲ್ಲಿ ಸೇಥಿ ಭಾಗವಹಿಸಿದ್ದರು. ಮೇ ೩೧, ೧೯೨೭ ರ ಸಿಪಿಐನ ಮುಂಬೈ ಕೇಂದ್ರ ಕಾರ್ಯಕಾರಿ ಸಮಿತಿ(ಸಿಇಸಿ)ಯ ಸಭೆಯ ಹೊತ್ತಿಗೆ ಬಂಗಾಳ, ಮುಂಬೈ ಮತ್ತು ರಾಜ್‌ಪುತಾನಾ ಪ್ರಾಂತಗಳಲ್ಲಿ ಡಬ್ಲ್ಯುಪಿಪಿಗಳು ಸ್ಥಾಪಿಸಲ್ಪಟ್ಟಿದ್ದವು. ಈ ಮೂರು ಪ್ರಾಂತಗಳಲ್ಲಿನ ಡಬ್ಲ್ಯುಪಿಪಿಯು ರೂಪಿಸಿದ ಕಾರ್ಯಕ್ರಮಗಳನ್ನು ಸಿಇಸಿಯ ವಿಸ್ತರಿತ ಸಭೆಯು ಅನುಮೋದಿಸಿತು; ಮತ್ತು ಅಸ್ತಿತ್ವದಲ್ಲಿಲ್ಲದ ಕಡೆಗಳಲ್ಲಿ ಅಂತಹ ಸಂಘಟನೆಗಳನ್ನು ಸ್ಥಾಪಿಸಲು ಸಿಪಿಐ ಸದಸ್ಯರು ಯತ್ನಿಸಬೇಕು ಎಂದು ನಿರ್ಣಯ ಕೈಗೊಂಡಿತು.

ಈ ತೀರ್ಮಾನಗಳ ಅನುಸಾರವಾಗಿ, ಏಪ್ರಿಲ್ ೧೯೨೮ರಲ್ಲಿ ಪಂಜಾಬಿನ ಹೋಶಿಯಾರ್‌ಪುರದಲ್ಲಿ ಸೋಹನ್ ಸಿಂಗ್ ಜೋಶ್ ಅವರ ಮುತುವರ್ಜಿಯಿಂದ ಡಬ್ಲ್ಯುಪಿಪಿಯನ್ನು ಸ್ಥಾಪಿಸಲಾಯಿತು. ನಂತರ ಅವರು ಅಖಿಲ ಭಾರತ ಡಬ್ಲ್ಯುಪಿಪಿಯ ಅಧ್ಯಕ್ಷರಾದರು. ಪಂಜಾಬಿನ ಡಬ್ಲ್ಯುಪಿಪಿ ಸ್ಥಾಪನೆಯಾದ ಸ್ವಲ್ಪ ದಿನಗಳಲ್ಲೇ ಯುನೈಟೆಡ್ ಪ್ರಾವಿನ್ಸ್(ಯುಪಿ-ಸಂಯುಕ್ತ ಪ್ರಾಂತ)ದಲ್ಲಿ ಪಕ್ಷದ ಸ್ಥಾಪನೆಯಾಯಿತು. ಯುಪಿಯ ಡಬ್ಲ್ಯುಪಿಪಿಯನ್ನು ಅಕ್ಟೋಬರ್ ೧೯೨೮ರಲ್ಲಿ ಮೀರಟ್‌ನಲ್ಲಿ ನಡೆದ ಸಮ್ಮೇಳನದಲ್ಲಿ ಸ್ಥಾಪಿಸಲಾಯಿತು. ಕಾರ್ಮಿಕ ವರ್ಗ, ರೈತರು ಮತ್ತು ಮಧ್ಯಮ ವರ್ಗಗಳ ನಡುವೆ ಕಮ್ಯುನಿಸ್ಟ್ ಚಳುವಳಿಯನ್ನು ವಿಸ್ತರಿಸುವಲ್ಲಿ ಈ ನಾಲ್ಕು(ಬಂಗಾಳ, ಮುಂಬೈ, ಯುಪಿ ಮತ್ತು ಪಂಜಾಬ್) ಪ್ರಮುಖ ಪ್ರಾಂತಗಳಲ್ಲಿ ಡಬ್ಲ್ಯುಪಿಪಿಯ ಸ್ಥಾಪನೆಯು ಮಹತ್ವದ ಕೊಡುಗೆ ನೀಡಿದೆ.

ಭಾರತ ರಾಷ್ಟ್ರೀಯ ಕಾಂಗ್ರೆಸಿನ ಮದ್ರಾಸ್ ಅಧಿವೇಶನ(ಡಿಸೆಂಬರ್ ೨೬-೨೮, ೧೯೨೭)ದಲ್ಲಿ ಮುಜಾಫರ್ ಅಹಮದ್ ಅವರು ಫಿಲಿಪ್ ಸ್ಪ್ರಾಟ್ ಅವರ ಜತೆ ಸಮಾಲೋಚನೆ ಮಾಡಿ ಸಿದ್ಧಪಡಿಸಿದ ಪ್ರಣಾಳಿಕೆಯನ್ನು ವಿತರಿಸಲಾಯಿತು. ಕಾಂಗ್ರೆಸ್‌ನೊಂದಿಗಿನ ಧೋರಣೆಯನ್ನು ಮತ್ತು ಸ್ವತಂತ್ರ ಭಾರತದ ಸಂವಿಧಾನವೊಂದನ್ನು ಸಿದ್ಧಪಡಿಸುವ ಪ್ರಶ್ನೆಯ ಬಗ್ಗೆ ತನ್ನ ನಿಲುವನ್ನು ಈ ಪ್ರಣಾಳಿಕೆಯು ಕೂಲಂಕುಷವಾಗಿ ವಿವರಿಸಿತು. ಸಾರ್ವತ್ರಿಕ ವಯಸ್ಕ ಮತದಾನದ ಆಧಾರದಲ್ಲಿ ಜನರ ಆಸೆ ಆಕಾಂಕ್ಷೆಗಳನ್ನು ವ್ಯಕ್ತಪಡಿಸುವ ಒಂದು ಅತ್ಯುನ್ನತ ಧ್ವನಿಯಾಗಿ ರಾಷ್ಟ್ರೀಯ ಸಾಂವಿಧಾನಿಕ ಸಭೆ (ನ್ಯಾಷನಲ್ ಕಾನ್ಸ್ಟಿಟ್ಯುಯೆಂಟ್ ಅಸೆಂಬ್ಲಿ) ಯೊಂದನ್ನು ಚುನಾಯಿಸಬೇಕೆಂದು ಪ್ರಣಾಳಿಕೆ ಕರೆ ನೀಡಿತು. ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಲು ಮದ್ರಾಸಿನಲ್ಲಿ ಸೇರಿದ್ದ ಸಿಪಿಐ ಸಿಇಸಿ ಸದಸ್ಯರು ಸಿಂಗಾರವೇಲು ಚೆಟ್ಟಿಯಾರ್ ಅವರ ಮನೆಯಲ್ಲಿ ಗುಪ್ತ ಸಭೆ ನಡೆಸಿದರು. ಅಖಿಲ ಭಾರತ ಕಾರ್ಮಿಕರ ಮತ್ತು ರೈತರ ಪಕ್ಷವೊಂದನ್ನು ಸ್ಥಾಪಿಸಲು ಕಲ್ಕತ್ತಾದಲ್ಲಿ ಸಮ್ಮೇಳನ ನಡೆಸಬೇಕೆಂದು ಆ ಸಭೆಯು ನಿರ್ಣಯ ಮಾಡಿತು. ಈ ಪ್ರಸ್ತಾಪಿತ ಸಮ್ಮೇಳನವನ್ನು ಸಂಘಟಿಸುವ ಹೊಣೆಯನ್ನು ಮುಜಾಫರ್ ಅಹಮದ್ ಅವರಿಗೆ ವಹಿಸಲಾಯಿತು.

ಸಂಪೂರ್ಣ ಸ್ವಾತಂತ್ರ್ಯಕ್ಕಾಗಿನ ಹೋರಾಟದಲ್ಲಿ ಸಾಧ್ಯವಾದಷ್ಟೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಮತ್ತು ರೈತರನ್ನು ಅಣಿನೆರೆಸುವ ಸಲುವಾಗಿ ಸೈಮನ್ ಆಯೋಗವನ್ನು ಬಹಿಷ್ಕರಿಸುವ ಚಳುವಳಿಯನ್ನು ಸಂಘಟಿಸುವಲ್ಲಿ ಡಬ್ಲ್ಯುಪಿಪಿಯು ಮಹತ್ವದ ಪಾತ್ರ ವಹಿಸಿತು. ಒಂದು ಬೃಹತ್ ಪ್ರತಿಭಟನಾ ರ್‍ಯಾಲಿಯನ್ನು ಜನವರಿ ೧೯೨೯ ರಲ್ಲಿ ಕಲ್ಕತ್ತಾದಲ್ಲಿ ಆಯೋಜಿಸಲಾಯಿತು; ಅಲ್ಲಿ ಮೊಟ್ಟ ಮೊದಲ ಬಾರಿಗೆ ಇಂಕ್‌ಲಾಬ್ ಜಿಂದಾಬಾದ್ ಘೋಷಣೆಯನ್ನು ಕೊಡಲಾಯಿತು.

ಮಾರ್ಚ್/ಏಪ್ರಿಲ್ ೧೯೨೮ ರಲ್ಲಿ ನಡೆದ ಬಂಗಾಳ ಡಬ್ಲ್ಯುಪಿಪಿ ಮೂರನೇ ಸಮ್ಮೇಳನದಲ್ಲಿ ಕಾರ್ಯಾಚರಣೆಗೊಂದು ಕರೆ ಎಂಬ ದಸ್ತಾವೇಜಿನ ಅನುಮೋದನೆಯು ಅಂದಿನ ರಾಜಕೀಯ ಸನ್ನಿವೇಶದಲ್ಲಿ ಅತ್ಯಂತ ಮಹತ್ವಪೂರ್ಣವಾದುದು. ಈ ಸಮ್ಮೇಳನದ ತೀರ್ಮಾನಗಳು ಮತ್ತದರ ಜತೆಯಲ್ಲೇ ಕಾಂಗ್ರೆಸ್ ಹಾಗೂ ಪ್ರಸ್ತುತ ಕಾರ್ಮಿಕ ನಾಯಕತ್ವದ ಬಗ್ಗೆ ನಮ್ಮ ಧೋರಣೆ ಕುರಿತ ಪ್ರಬಂಧದ ಆಧಾರದಲ್ಲಿ ಕಾರ್ಯಾಚರಣೆಗೊಂದು ಕರೆಯನ್ನು ರೂಪಿಸಲಾಗಿತ್ತು.

ಸೈಮನ್ ಆಯೋಗ ವಿರೋಧಿ ಚಳುವಳಿ ಮತ್ತು ಭಾರತಕ್ಕೆ ಸಂವಿಧಾನದ ಕರಡು ಸಿದ್ಧಪಡಿಸುವ ವಿಚಾರದಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ನಾಯಕತ್ವದ ಡೋಲಾಯಮಾನ ಧೋರಣೆಯ ಹಿನ್ನೆಲೆಯಲ್ಲಿ, ಕಾರ್ಯಾಚರಣೆಗೊಂದು ಕರೆಯು ಕಮ್ಯುನಿಸ್ಟರ ಮನೋಭಾವದಲ್ಲಿನ ಬದಲಾವಣೆಯನ್ನು ಪ್ರತಿಬಿಂಬಿಸಿತು. ರಾಷ್ಟ್ರೀಯ ಚಳುವಳಿಯ ನಾಯಕರನ್ನಾಗಿ ಇಡಿಯಾಗಿ ಬಂಡವಾಳಶಾಹಿಗಳತ್ತ ನೋಡುವ ಕಾಲ ಮುಗಿದಿತ್ತು. .ಒಂದು ಬಲಿಷ್ಠ ಪ್ರಜ್ಙೆಯುಳ್ಳ ಹಾಗೂ ಶಿಸ್ತುಬದ್ಧ ಕಾರ್ಮಿಕರ ಮತ್ತು ರೈತರ ಪಕ್ಷವು ಇಂದು ಅತ್ಯಂತ ಅಗತ್ಯವಾಗಿದೆ. . . ಸಾಮ್ರಾಜ್ಯವಾದಿಗಳನ್ನು ವಿರೋಧಿಸುವ ಮಟ್ಟಿಗೆ ನಾವು ಕಾಂಗ್ರೆಸ್ನವರನ್ನು ಬೆಂಬಲಿಸಬೇಕು, ಆದರೆ ಕಾಂಗ್ರೆಸ್ ಮುಖಂಡರ, ಅವರು ಎಷ್ಟೆ ಗಣ್ಯರಾಗಿರಲಿ, ಶಾಮೀಲುಕೋರ ಪ್ರವೃತ್ತಿಯನ್ನು ಟೀಕಿಸಲು ಹಿಂಜರಿಯಬಾರದು. ಕಾಂಗ್ರೆಸ್ಸಿನ ಎಡ ಪುಟ್ಟಬಂಡವಾಳಶಾಹಿಗಳ ಜತೆಗಿನ ಪಕ್ಷದ ಮೈತ್ರಿಯನ್ನು ಸಂಪೂರ್ಣ ಸ್ವಾತಂತ್ರ್ಯಕ್ಕಾಗಿನ ನೇರ ಕಾರ್ಯಾಚರಣೆ ಆಧಾರದಲ್ಲಿ, ಬಂಡವಾಳಶಾಹಿ ನಾಯಕತ್ವದ ಶಾಮೀಲಾಗುವ ಸ್ವಭಾವದ ವಿರುದ್ಧ ಕ್ರೋಢೀಕರಿಸಬೇಕು. ಎಂದು ದಸ್ತಾವೇಜು ಅಭಿಪ್ರಾಯಪಟ್ಟಿತು.

ವಿಶೇಷವಾಗಿ ಬಂಗಾಳ, ಪಂಜಾಬ್ ಮತ್ತು ಮುಂಬೈ ಪ್ರಾಂತಗಳಲ್ಲಿ ಬೆಳೆದುಬರುತ್ತಿದ್ದ ಸಂಘಟಿತ ಯುವಜನ ಚಳುವಳಿಯಲ್ಲಿ ಕಮ್ಯುನಿಸ್ಟರು ಮತ್ತು ಡಬ್ಲ್ಯುಪಿಪಿಯ ಮಧ್ಯಪ್ರವೇಶವು ಮಹತ್ವದ ಹೆಜ್ಜೆಯಾಗಿತ್ತು. ಸೈಮನ್ ಆಯೋಗ ವಿರೋಧಿ ಬಹಿಷ್ಕಾರ ಚಳುವಳಿಯ ಹಿನ್ನೆಲೆಯಲ್ಲಿ ಜನವರಿ ೧೯೨೮ ರಲ್ಲಿ ಮುಂಬೈಯಲ್ಲಿ ಡಬ್ಲ್ಯುಪಿಪಿಯ ವಿಸ್ತೃತ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಯುವಜನರ ಗುಂಪನ್ನು ಸಂಘಟಿಸಬೇಕೆಂಬ ಮೊದಲ ಔಪಚಾರಿಕ ತೀರ್ಮಾನವನ್ನು ಮಾಡಲಾಯಿತು. ಮಾರ್ಚ್ ೧೯೨೮ ರಲ್ಲಿ ಮುಂಬೈ ಮತ್ತು ಬಂಗಾಳದ ಪ್ರಾಂತೀಯ ಸಮ್ಮೇಳನಗಳು ಈ ತೀರ್ಮಾನವನ್ನು ಅನುಮೋದಿಸಿದವು. ಪಕ್ಷವು ಅಂಗೀಕರಿಸಿದ ಕಾರ್ಯಾಚರಣೆಗೊಂದು ಕರೆಯು ಈ ಪ್ರಶ್ನೆಯನ್ನು ವಿಸ್ತಾರವಾಗಿ ನಿಭಾಯಿಸಿತು. ಈ ದಸ್ತಾವೇಜು, ಡಬ್ಲ್ಯುಪಿಪಿಯು ಹೊಸದಾಗಿ ಸಂಘಟಿಸಲ್ಪಡುತ್ತಿದ್ದ ಯುವಜನ ಶಕ್ತಿಯನ್ನು ತನ್ನತ್ತ ಸೆಳೆದುಕೊಳ್ಳಬೇಕು ಮತ್ತು ಒಂದು ಸ್ವತಂತ್ರ ಯುವಜನ ಸಂಘಟನೆಯನ್ನು ಸ್ಥಾಪಿಸಬೇಕು; ಪಾರಂಪರಿಕ ಯುವಜನ ಸಂಘಟನೆಯ ಸಾಮಾಜಿಕ ನೆಲೆಯನ್ನು ವಿಸ್ತರಿಸಲು ಕಾರ್ಮಿಕ ವರ್ಗ ಹಾಗೂ ರೈತಾಪಿ ಯುವಜನರನ್ನು ಆ ಸಂಘಟನೆಗೆ ಭರ್ತಿಮಾಡಿಕೊಳ್ಳಬೇಕು ಎಂದಿತ್ತು. ಇಂತಹ ಒಂದು ಯುವಜನ ಸಂಘಟನೆಗಾಗಿ ಅದು ಆರು ಅಂಶಗಳ ಕಾರ್ಯಾಚರಣೆಯ ಕಾರ್ಯಕ್ರಮವನ್ನು ಸಿದ್ಧಪಡಿಸಿತು.

ಡಬ್ಲ್ಯುಪಿಪಿಯ ನೇರ ಮುತುವರ್ಜಿಯಿಂದ ಬಂಗಾಳದಲ್ಲಿ ೧೯೨೮ರ ಜುಲೈ ಕೊನೆಯಲ್ಲಿ ಯುವಜನ ಲೀಗ್ ರಚನೆಯಾಯಿತು; ಮತ್ತು ಕಾರ್ಯಕ್ರಮ ಮತ್ತು ನೀತಿ ಹೇಳಿಕೆಯೊಂದನ್ನು ಲೀಗ್ ಅಂಗೀಕರಿಸಿತು. ಮುಂಬೈ ಪ್ರೆಸಿಡೆನ್ಸಿ ಯೂಥ್ ಲೀಗ್‌ನ ಮೊದಲ ಸಮ್ಮೇಳನವನ್ನು ಜನವರಿ ೧೯೨೮ರ ಕೊನೆಯಲ್ಲಿ ನಡೆಸಲಾಯಿತು. ಪಂಜಾಬಿನಲ್ಲಿ, ನೌಜವಾನ್ ಭಾರತ್ ಸಭಾ(ಅದರ ರಚನೆಯಲ್ಲಿ ಭಗತ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು)ವನ್ನು ಏಪ್ರಿಲ್ ೧೯೨೮ ರಲ್ಲಿ ಅಣಿನೆರೆಸುವಲ್ಲಿ ಡಬ್ಲ್ಯುಪಿಪಿ ಸಂಘಟಕರು ಪ್ರಧಾನ ಪಾತ್ರ ವಹಿಸಿದ್ದರು. ಆದರೆ, ಈ ಎಲ್ಲಾ ಪ್ರಯತ್ನಗಳ ನಡುವೆಯೂ ಡಬ್ಲ್ಯುಪಿಪಿಯ ಅಖಿಲ ಭಾರತ ಸಮ್ಮೇಳನವು ಸಾಕಷ್ಟು ಗಮನವನ್ನು ಯುವಜನ ಸಂಘಟನೆಗೆ ನೀಡಲಿಲ್ಲ ಎಂಬುದನ್ನು ಗಮನಿಸಬೇಕು.

ಡಬ್ಲ್ಯುಪಿಪಿಯ ಅಖಿಲ ಭಾರತ ಸಮ್ಮೇಳನವು ಕಲ್ಕತ್ತಾದಲ್ಲಿ ಡಿಸೆಂಬರ್ ೨೧-೨೪, ೧೯೨೮ ರಂದು ಆಗ ಇದ್ದ ಎಲ್ಲಾ ಪ್ರಾಂತೀಯ ಸಂಘಟನೆಗಳ ಪಾಲ್ಗೊಳ್ಳುವಿಕೆಯ ಮೂಲಕ ನಡೆಯಿತು. ಮುಂಬೈ, ಪಂಜಾಬ್, ಯುಪಿ ಮತ್ತು ಬಂಗಾಳದ ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಭಗತ್ ಸಿಂಗ್ ಕೂಡ ಮಾರುವೇಷದಲ್ಲಿ ಬಂದು ಪಾಲ್ಗೊಂಡಿದ್ದರು. ಸಮ್ಮೇಳನವು ಒಂದು ಕರಡು ಸಂವಿಧಾನವನ್ನು ಅಂಗೀಕರಿಸಿತು. ಅದರಲ್ಲಿ ಬಹುವಾಗಿ ಸಾಮ್ರಾಜ್ಯಶಾಹಿಗಳಿಂದ ಮತ್ತು ನಿರ್ದಿಷ್ಟವಾಗಿ ಬ್ರಿಟಿಷ್ ಸಾಮ್ರಾಜ್ಯಶಾಹಿಗಳಿಂದ ಸಂಪೂರ್ಣ ಸ್ವಾತಂತ್ರ್ಯ ಗಳಿಸುವುದು ಮತ್ತು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಜನಸಮುದಾಯವನ್ನು ವಿಮೋಚನೆಗೊಳಿಸುವ ಆಧಾರದಲ್ಲಿ ಭಾರತವನ್ನು ಪಜ್ರಾಪ್ರಭುತ್ವೀಕರಣಗೊಳಿಸಬೇಕು ಎಂಬ ಉದ್ದೇಶವನ್ನು ಪಕ್ಷ ಹೊಂದಿದೆ ಎಂದು ದಾಖಲಿಸಲಾಗಿದೆ. ಸಮ್ಮೇಳನವು ರೈತ ಸಂಘಟನೆಗಳನ್ನು ಕಟ್ಟಬೇಕು ಮತ್ತು ಗೇಣಿ(ಅಧಿಯಾರ್ ಅಥವಾ ಬರ್ಗಾ) ಪದ್ಧತಿಯನ್ನು ರದ್ದು ಮಾಡಲು ಮತ್ತು ಯಾವುದೇ ಪರಿಹಾರ ನೀಡದೆ ಭೂಮಾಲೀಕತ್ವವನ್ನು ರದ್ದು ಮಾಡಲು ಹೋರಾಡಬೇಕು ನಿರ್ಣಯ ಮಾಡಿತು. ಈ ಸಂವಿಧಾನ ಪಕ್ಷದ ಸದಸ್ಯರು ಯಾವುದೇ ಕೋಮುವಾದಿ ಸಂಘಟನೆಯಲ್ಲಿ ಅಥವಾ ಕೋಮು ಪ್ರಚಾರಗಳಲ್ಲಿ ತೊಡಗಿರುವ ಯಾವುದೇ ರೀತಿಯಲ್ಲಿ ತೊಡಗಬಾರದು ಎಂದು ನಿಷೇಧಿಸಿತು.

ಮೂರು ವರ್ಷಗಳಿಗೂ ಮೀರಿ ಕಮ್ಯುನಿಸ್ಟರ ಸಂಘಟನಾ ಕೆಲಸಗಳಿಂದಾಗಿ ಡಬ್ಲ್ಯುಪಿಪಿ ಸ್ಥಾಪನೆಗೊಂಡಿತು. ಜನರ ಕಣ್ಣಲ್ಲಿ ಡಬ್ಲ್ಯುಪಿಪಿಯು ಕಮ್ಯುನಿಸ್ಟ್ ಪಕ್ಷವಾಗಿ ಬೇರೆ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಅಖಿಲ ಭಾರತ ಸಮ್ಮೇಳನವಾದ ಕೂಡಲೇ ಬ್ರಿಟಿಷ್ ಸರ್ಕಾರವು ಎಲ್ಲಾ ಪ್ರಮುಖ ಕಮ್ಯುನಿಸ್ಟರನ್ನು ಬಂಧಿಸಿತು; ಅದು ಡಬ್ಲ್ಯುಪಿಪಿಯ ಕಾರ್ಯನಿರ್ವಹಣೆಯನ್ನು ಬಾಧಿಸಿತು. ಈ ಎಲ್ಲಾ ಬಂಧಿತ ಮುಖಂಡರನ್ನು ಕುಖ್ಯಾತ ಮೀರಟ್ ಪಿತೂರಿ ಮೊಕದ್ದಮೆಯಡಿ ವಿಚಾರಣೆಗೆ ಗುರಿಪಡಿಸಲಾಯಿತು.

 

ಕನ್ನಡಕ್ಕೆ: ಟಿ.ಸುರೇಂದ್ರ ರಾವ್

Leave a Reply

Your email address will not be published. Required fields are marked *