ಎನ್‌ ಆರ್‌ ಸಿ ವಿರೋಧಿಸುವ ಮುಖ್ಯಮಂತ್ರಿಗಳು ಎನ್‌ಪಿಆರ್ ನ್ನು ತಮ್ಮ ರಾಜ್ಯಗಳಲ್ಲಿ ನಿಲ್ಲಿಸಬೇಕು

“ಎನ್‌ಆರ್‌ಸಿ ಬಗ್ಗೆ ಮೋದಿಯವರ ಅಸತ್ಯಗಳೇನೇ ಇರಲಿ, ಎನ್‌ಪಿಆರ್ ಅದಕ್ಕೆ ಬುನಾದಿಯೆಂಬುದು ಸ್ಪಷ್ಟ

ಕೇಂದ್ರ ಸಂಪುಟ ಡಿಸೆಂಬರ್ 24ರಂದು ”ರಾಷ್ಟ್ರೀಯ ಜನಸಂಖ್ಯಾ ನೋಂದಣಿ'(ಎನ್‌ಪಿಆರ್)ಯನ್ನು ಸಮಕಾಲಿಕಗೊಳಿಸಲು ನಿರ್ಧರಿಸಿದೆ. ಅದಕ್ಕಾಗಿ 8500 ಕೋಟಿ ರೂ. ಹಣಕಾಸು ಮಂಜೂರು ಮಾಡಿದೆ.

ಪ್ರಧಾನಮಂತ್ರಿ ಮೋದಿಯವರ ಅಸತ್ಯಗಳೇನೇ ಇರಲಿ, ಈ ಎನ್‌ ಪಿ ಆರ್ ಎಂಬುದು ಎನ್‌ ಆರ್‌ ಸಿಗೆ ಬುನಾದಿ ಹಾಕುತ್ತದೆ ಎಂಬುದು ಸ್ಪಷ್ಟ. ಎನ್‌ ಆರ್‌ ಸಿಯನ್ನು ವಿರೋಧಿಸಿರುವ ಕೇರಳ ಮತ್ತು ಪಶ್ಚಿಮ ಬಂಗಾಲದ ಮುಖ್ಯಮಂತ್ರಿಗಳು ಈಗಾಗಲೇ ತಮ್ಮ ರಾಜ್ಯಗಳಲ್ಲಿ  ಎನ್‌ ಪಿ ಆರ್ ನಡೆಸದಿರಲು ನಿರ್ಧರಿಸಿದ್ದಾರೆ.

ಇವರೂ ಸೇರಿದಂತೆ ಕನಿಷ್ಟ 12 ಮುಖ್ಯಮಂತ್ರಿಗಳು ತಮ್ಮ ರಾಜ್ಯಗಳಲ್ಲಿ ಎನ್‌ ಆರ್‌ ಸಿಯನ್ನು ಜಾರಿಗೊಳಿಸುವುದಿಲ್ಲ ಎಂದು ಪ್ರಕಟಿಸಿದ್ದಾರೆ. ಈ ಎಲ್ಲ ಮುಖ್ಯಮಂತ್ರಿಗಳನ್ನು, ತಂತಮ್ಮ ರಾಜ್ಯಗಳಲ್ಲಿ ಕೂಡ ಎನ್‌ಪಿಆರ್ ಕವಾಯತನ್ನು ಕೈಬಿಡುವಂತೆ ಖಾತ್ರಿಪಡಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‌ ಬ್ಯುರೊ ವಿನಂತಿಸಿಕೊಂಡಿದೆ.

ಈ ಕವಾಯತಿನಲ್ಲಿ ಜನಗಳು 21 ಹೆಚ್ಚಿನ ಅಂಶಗಳಲ್ಲಿ ಮಾಹಿತಿಗಳನ್ನು ನೀಡುವ ಜೊತೆಗೆ ತಮ್ಮ ತಂದೆ-ತಾಯಿಯರ ಜನ್ಮ ದಿನಾಂಕಗಳನ್ನು ಘೋಷಿಸಬೇಕು. ಈಗ ಸಂಗ್ರಹಿಸಲಾಗುವ ಮಾಹಿತಿಗಳಲ್ಲಿ ಬಹಳಷ್ಟನ್ನು 2010ರ ಈ ಹಿಂದಿನ ಎನ್‌ಪಿಆರ್ ಯೋಜನೆಯಲ್ಲಿ ಸಂಗ್ರಹಿಸಿರಲಿಲ್ಲ.

ವಾಜಪೇಯಿ ಸರಕಾರ ಪೌರತ್ವ ಕಾಯ್ದೆ, 1955ನ್ನು ತಿದ್ದುಪಡಿ ಮಾಡಿ, ಡಿಸೆಂಬರ್ 10, 2003ರಂದು ಅಧಿಸೂಚಿಸಿದ ನಿಯಮಗಳ ಪ್ರಕಾರ ‘ರಾಷ್ಟ್ರೀಯ ಜನಸಂಖ್ಯಾ ನೋಂದಣಿ’ಯ ಆಧಾರದಲ್ಲಿ ‘ರಾಷ್ಟ್ರೀಯ ಪೌರತ್ವ ನೋಂದಣಿ’ಯನ್ನು ತಯಾರಿಸಲಾಗುತ್ತದೆ. ಆದ್ದರಿಂದ ಈ ಎನ್‌ಆರ್‌ಸಿಯನ್ನು ಜಾರಿಗೊಳಿಸುವ ಕವಾಯತಿನಲ್ಲಿ ಎನ್‌ಪಿಆರ್ ಮೊದಲ ಘಟ್ಟ ಎಂಬುದು ಸ್ಪಷ್ಟ ಎಂದು ಪೊಲಿಟ್‌ ಬ್ಯುರೊ ಹೇಳಿದೆ.

ಇವೆರಡರ ನಡುವಿನ ಸಂಬಂಧವನ್ನು, ಜುಲೈ 23, 2014ರಂದೇ, ಮೋದಿ ಸರಕಾರ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ರಾಜ್ಯಸಭೆಯಲ್ಲಿ ಒಂದು ಪ್ರಶ್ನೆಗೆ (ಚಿಹ್ನಿತ ಪ್ರಶ್ನೆ ನಂ. 229) ನೀಡಿದ ಉತ್ತರದಲ್ಲಿ ಗೃಹ ವ್ಯವಹಾರಗಳ ಖಾತೆಯ ರಾಜ್ಯಮಂತ್ರಿಗಳು ಸ್ಪಷ್ಟಗೊಳಿಸಿದ್ದರು. “ಎನ್‌ಪಿಆರ್ ಯೋಜನೆಯ ಅಡಿಯಲ್ಲಿ ಸಂಗ್ರಹಿಸುವ ಮಾಹಿತಿಗಳ ಆಧಾರದಲ್ಲಿ ದೇಶದಲ್ಲಿನ ಎಲ್ಲ ವ್ಯಕ್ತಿಗಳ ಪೌರತ್ವದ ಸ್ಥಾನಮಾನವನ್ನು ತಾಳೆ ಹಾಕಿ ಭಾರತೀಯ ಪೌರರ ರಾಷ್ಟ್ರೀಯ ನೋಂದಣಿ(ಎನ್‌ಆರ್‌ಐಸಿ)ಯನ್ನು ನಿರ್ಮಿಸಲು ಸರಕಾರ ನಿರ್ಧರಿಸಿದೆ” ಎಂದು ಈ ಉತ್ತರದಲ್ಲಿ ಹೇಳಲಾಗಿತ್ತು.

ಆದ್ದರಿಂದ ಪ್ರಧಾನಮಂತ್ರಿ ಮೋದಿಯವರ ಅಸತ್ಯಗಳೇನೇ ಇರಲಿ, ಈ ಎನ್‌ ಪಿ ಆರ್ ಎಂಬುದು ಎನ್‌ ಆರ್‌ ಸಿಗೆ ಬುನಾದಿ ಹಾಕುತ್ತದೆ ಎಂಬುದು ಸ್ಪಷ್ಟ ಎಂದಿರುವ ಸಿಪಿಐ(ಎಂ) ಪೊಲಿಟ್‌ ಬುರೊ ಈ ಹಿನ್ನೆಲೆಯಲ್ಲಿ ಎನ್‌ ಆರ್‌ ಸಿಯನ್ನು ವಿರೋಧಿರುವ ಇತರ ಎಲ್ಲ ಮುಖ್ಯಮಂತ್ರಿಗಳೂ ಎನ್‌ ಪಿ ಆರ್ ಪ್ರಕ್ರಿಯೆಯನ್ನು ಕೈಬಿಡುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿನಂತಿಸಿ ಕೊಂಡಿದೆ.

Leave a Reply

Your email address will not be published. Required fields are marked *