ಉ.ಪ್ರ: ಬದ್ಲಾ ಆಡಳಿತದಲ್ಲಿ ಅಭೂತಪೂರ್ವ ಪೋಲೀಸ್ ಕ್ರೌರ್ಯ

ಸಿಎಎ ನಂತರದ ಘಟನಾವಳಿಯ ನ್ಯಾಯಾಂಗ ತನಿಖೆ- ಸುಭಾಷಿಣಿ ಆಲಿ ಆಗ್ರಹ

ಉತ್ತರ ಪ್ರದೇಶದ ಹಲವು ಜಿಲ್ಲೆಗಳು ಡಿಸೆಂಬರ್ ತಿಂಗಳ ಉತ್ತರಾರ್ಧದಲ್ಲಿ ಅಭೂತಪೂರ್ವ ಪೋಲೀಸ್ ಕ್ರೌರ್ಯವನ್ನು ಕಂಡಿವೆ. ಇದಕ್ಕೆ ೨೧ ಜೀವಗಳ ಬಲಿಯಾಗಿದೆ. ಇದು ಯಾವುದೇ ಭಿನ್ನಾಭಿಪ್ರಾಯ ಮತ್ತು ಪ್ರತಿಭಟನೆ ಕುರಿತಂತೆ ಮುಖ್ಯಮಂತ್ರಿಯ ನಿಲುವಿನ ನೇರ ಪರಿಣಾಮವಾಗಿದೆ.

ಪ್ರತಿಭಟನೆಕಾರರ ವಿರುದ್ಧ ಬದ್ಲಾ ಪ್ರತೀಕಾರ ತಗೊಳ್ಳುವುದಾಗಿಯೂ, ಪ್ರತಿಭಟನೆಗಳ ಕಾಲದಲ್ಲಿ ನಡೆದ ಯಾವುದೇ ಹಾನಿಗೆ ಪ್ರತಿಭಟನಾಕಾರರು ಬೆಲೆ ತೆರುವಂತೆ ಮಾಡಲಾಗುತ್ತದೆ ಎಂದೂ ಆತ ಸಾರ್ವಜನಿಕವಾಗಿಯೇ ಹೇಳಿದ್ದಾರಲ್ಲದೆ, ಅದನ್ನೂ ಮೀರಿ ನಡೆದುಕೊಂಡಿದ್ದಾರೆ. ಹೀಗೆಂದು ಸಿಪಿಐ(ಎಂ) ಪೊಲಿಟ್‌ ಬ್ಯುರೊ ಸದಸ್ಯರಾದ ಸುಭಾಷಿಣ ಅಲಿ ಹೇಳಿದ್ದಾರೆ. ಉತ್ತರಪ್ರದೇಶದ ಹಲವು ಕೇಂದ್ರಗಳಿಗೆ ಭೇಟಿ ನೀಡಿದ ನಂತರ ಅವರು ಜನವರಿ ೭ರಂದು ಒಂದು ಪತ್ರಿಕಾಗೋಷ್ಠಿಯಲ್ಲಿ ಉತ್ತರಪ್ರದೇಶದ ಆಡಳಿತದ ಕ್ರೌರ್ಯದ ಹಲವು ಉದಾಹರಣೆಗಳನ್ನು ನೀಡಿದರು.

ಲಖ್ನೌ, ಕಾನ್ಪುರ, ಮೇರಠ್ ಮತ್ತು ಬಿಜನೌರ್ ಇವು ಅತಿ ಹೆಚ್ಚು ಪೀಡಿತ ಜಿಲ್ಲೆಗಳು. ೧೧ ಸಾವುಗಳು, ಆಸ್ತಿಪಾಸ್ತಿಗಳ ಧ್ವಂಸ, ದುಷ್ಟ ಥಳಿಕೆಗಳು ಮತ್ತು ವ್ಯಾಪಕ ಬಂಧನಗಳು ಈ ನಾಲ್ಕು ಅತಿ ಹೆಚ್ಚು ಜಿಲ್ಲೆಗಳಲೇ ನಡೆದಿವೆ. ಸಾವಿಗೀಡಾದವರು ಎಲ್ಲರೂ ಮುಸ್ಲಿಂ ಯುವಕರು. ಹಲವಾರು ಬಡಕುಟುಂಬಗಳಿಗೆ ಹಾನಿ ವಸೂಲಿಯ ನೋಟೀಸುಗಳು ಹೋಗಿವೆ. ಇವು ಎರಡು ಹೊತ್ತು ರೊಟ್ಟಿಗೂ ಗತಿಯಿಲ್ಲದ ಕುಟುಂಬಗಳು ಎಂದು ಅವರು ತಾವು ಕಂಡ ಹಲವಾರು ಉದಾಹರಣೆಗಳನ್ನು ನೀಡುತ್ತ ಹೇಳಿದರು.

ಒಂದನ್ನು ಬಿಟ್ಟು ಬೇರೆಲ್ಲ ಸಾವುಗಳು ಸಂಭವಿಸಿರುವುದು ಸಿಎಎ-ಎನ್‌ಪಿಆರ್-ಎನ್‌ಆರ್‌ಸಿಯ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಯ ದಿನವಾದ ಡಿಸೆಂಬರ್ ೧೯ರಂದಲ್ಲ, ಅದರ ಮರುದಿನ ಡಿಸೆಂಬರ್ ೨೦ರ ಶುಕ್ರವಾರದಂದು, ೧೦ ಜಿಲ್ಲೆಗಳಲ್ಲಿ ಜನಗಳು ನಮಾಜಿನಿಂದ ತಮ್ಮ ಮನೆಗಳಿಗೆ ಮರಳುವ ವೇಳೆಯಲ್ಲಿ. ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಈ ಕ್ರಮಗಳ ಬಗ್ಗೆ, ಅದನ್ನು ವಿರೋಧಿಸಿದ ಜಾಮಿಯ ಮಿಲಿಯ, ಅಲಿಘಡ್ ವಿಶ್ವವಿದ್ಯಾಲಯಗಳಲ್ಲಿ ನಡೆದ ಘಟನೆಗಳಿಂದ ಎಲ್ಲೆಡೆಯೂ ಕ್ರೋಧದ ವಾತಾವರಣ ಉಂಟಾಗಿದೆ. ಆದರೆ ಎಲ್ಲೆಲ್ಲಿ ಹಿಂಸಾಚಾರಗಳು ನಡೆದಿವೆಯೋ ಅಲ್ಲೆಲ್ಲ ಅವು ಪೋಲೀಸ್ ಅಧಿಕಾರಿಗಳ ಪಕ್ಷಪಾತಪೂರ್ಣ ವರ್ತನೆಗಳು ಅಥವ ಆಡಳಿತದ ವಿಫಲತೆಗಳಿಂದಾಗಿಯೇ ನಡೆದಿವೆ ಎಂದು ಸುಭಾಷಿಣಿ ಆಲಿ ಹೇಳಿದರು.

ರಾಜ್ಯದ ಡಿಜಿಪಿ ಪೋಲಿಸರು ಒಂದೇ ಒಂದು ಗುಂಡು ಹಾರಿಸಲಿಲ್ಲ ಎಂದರು .ಆದರೆ ಸುಮಾರಾಗಿ ಎಲ್ಲ ಸಾವುಗಳೂ ಗುಂಡೇಟಿನಿಂದಲೇ ಸಂಭವಿಸಿರುವುದುಕಂಡು ಬಂದಿದೆ.  ನಂತರ ಒಂದು ಸಾವು ಪೋಲಿಸ್ ಗುಂಡೇಟಿನಿಂದ ಸಂಭವಿಸಿದೆ ಎಂದು ಪೋಲೀಸರೂ ಒಪ್ಪಿಕೊಂಡರು, ಆದರೆ ಸಂಬಂಧಪಟ್ಟ ಅಧಿಕಾರಿ ಆತ್ಮರಕ್ಷಣೆಗೆ ಗುಂಡು ಹಾರಿಸಿದರು ಎಂದು ಸಮರ್ಥಿಸಿಕೊಂಡರು. ಆ ಅಧಿಕಾರಿಗೆ ಯಾವುದೇ ಗಾಯಗಳಾಗಿಲ್ಲ. ಮರಣೋತ್ತರ ಪರೀಕ್ಷೆಗಳ ಫಲಿತಾಂಶಗಳನ್ನು ಕೇವಲ ಎರಡು ಪ್ರಕರಣಗಳಲ್ಲಿ ಮಾತ್ರ ಸಂಬಂಧಿಕರಿಗೆ ನೀಡಲಾಗಿದೆ, ಇವೆರಡೂ ಗುಂಡೇಟಿನಿಂದ ಸಾವು ಸಂಭವಿಸಿರುವುದನ್ನು ತೋರಿಸಿವೆ.

ಪೋಲೀಸ್ ದಾವೆಗಳಿಗೆ ವ್ಯತಿರಿಕ್ತವಾಗಿ ಕಾನ್ಪುರದಲ್ಲಿ ಪೋಲೀಸ್ ಗೋಲೀಬಾರಿನ  ಮತ್ತು ಪೋಲಿಸರೇ ಖಾಸಗೀ ಕಾರುಗಳಿಗೆ ಹಾನಿಯುಂಟುಮಾಡುತ್ತಿರುವ ಪ್ರಮಾಣಿತ ವೀಡಿಯೋಗಳು ರಾಷ್ಟ್ರೀಯ ವಾಹಿನಿಗಳಲ್ಲಿ ಪ್ರಸಾರಗೊಂಡಿವೆ. ಕಾನ್ಪುರ ಮತ್ತು ಲಕ್ನೌನಲ್ಲಿ ಪೋಲೀಸರು ಮನೆಗಳಿಗೆ ನುಗ್ಗಿ ಧಾಂಧಲೆ ನಡೆಸಿದ, ಹೆಂಗಸರನ್ನೂ ಥಳಿಸಿದ. ಮುಝಪ್ಪರ್‌ನಗರದಲ್ಲಿ ಸಣ್ಣ ಹುಡುಗರು ಮತ್ತು ಒಂದು ಮದರಸಾದ ಮೌಲಾನಾ ಮೇಲೆ ಭೀಕರ ಪೋಲಿಸ್ ಅತ್ಯಾಚಾರದ ಘಟನೆಗಳು ವರದಿಯಾಗಿವೆ.

ಕಾನ್ಪುರ ಮತ್ತು ಮೇರಠ್‌ನ ಪೋಲೀಸ್ ಅಧಿಕಾರಿಗಳು ಗುಂಡೇಟುಗಳಿಗೆ ಗುರಿಯಾದ ಎಲ್ಲರನ್ನೂ (ಸತ್ತವರನ್ನೂ) ಗಲಭೆಕೋರರು ಎಂದು ಪರಿಗಣಿಸುವುದಾಗಿ ಪ್ರಕಟಿಸಿದ್ದಾರೆ! ಸತ್ತವರ ಕುಟುಂಬಗಳಿಗೆ ಯಾವುದೇ ಪರಿಹಾರವನ್ನು ಪ್ರಕಟಿಸಿಲ್ಲ, ಮತ್ತು ಗಾಯಗೊಂಡವರಿಗೆ ವೈದ್ಯಕೀಯ ನೆರವನ್ನೂ ಒದಗಿಸಲಿಲ್ಲ. ಬದಲಿಗೆ ಅವರಲ್ಲಿ ಹಲವರನ್ನು ಬಂಧಿಸಲಾಗಿದೆ.

ಇದಲ್ಲದೆ ಹಲವೆಡೆಗಳಲ್ಲಿ ಆದಿತ್ಯನಾಥ ಸರಕಾರ ಪೋಲಿಸ್ ಮಿತ್ರ ಎಂಬವರನ್ನು ಯಾವುದೇ ವಿಧಿ-ವಿಧಾನಗಳು, ಮಾನದಂಡಗಳಿಲ್ಲದೆ ನೇಮಕ ಮಾಡಿಕೊಂಡು, ಅವರಿಗೆ ಪರಿಚಯ ಬ್ಯಾಡ್ಜುಗಳು, ಜಾಕೆಟ್‌ಗಳು ಮತ್ತು ಲಾಠಿಗಳನ್ನು ಕೊಡಲಾಗಿದೆ. ಇವರೆಲ್ಲರೂ ಬಿಜೆಪಿಯ ಸದಸ್ಯರು ಅಥವ ಬೆಂಬಲಿಗರು ಎಂದು ಸ್ಥಳೀಯ ಜನಗಳಿಂದ ಖಾತ್ರಿಯಾಗಿದೆ. ಇವರೇ ಧಾಂಧಲೆ ನಡೆಸುವ,  ಸಾರ್ವಜನಿಕರನ್ನು ಥಳಿಸುವ ಫೋಟೋಗಳು ಪ್ರಕಟವಾಗಿವೆ.

ಪೋಲಿಸರೇ ಸುಳ್ಳು ಸುದ್ದಿ ಹರಡಿಸುವ ಒಂದು ಉದಾಹರಣೆಯನ್ನು ಸುಭಾಷಿಣಿ ಆಲಿ ಹೇಳಿದರು. ಮೇರಠ್‌ನ ಎಸ್‌ಎಸ್‌ಪಿ ಒಂದು ವೀಡಿಯೋ ಪ್ರಕಟಿಸಿ ೩೫ ಪೋಲಿಸ್ ಸಿಬ್ಬಂದಿಯನ್ನು ಜನಗಳು ಒಂದು ಕೋಣೆಯಲ್ಲಿ ಕೂಡಹಾಕಿ ಸುಟ್ಟು ಹಾಕಲು ಪ್ರಯತ್ನಿಸಿದರು ಎಂದು ಹೇಳಿದರು. ಆದರೆ ವಾಸ್ತವವಾಗಿ ಇವರು ಪೋಲಿಸ್ ತರಬೇತಿನಲ್ಲಿದ್ದ ಯುವಕರು., ಗಲಭೆಗಳು ಆರಂಭವಾದಾಗ ಸ್ಥಳೀಯ ಜನಗಳು ಇವರನ್ನು ಕಾಪಾಡಿ ನಂತರ ಪೋಲಿಸರಿಗೆ ಒಪ್ಪಿಸಿದರು ಎಂದು ತಿಳಿದುಬಂದಿದೆ.

ಇಂತಹ ಘೋರ ಪರಿಸ್ಥಿತಿ ಉತ್ತg ಪ್ರದೇಶದಲ್ಲಿ ಉಂಟಾಗಿರುವ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರವಾದ ನಂತರ ರಾಜ್ಯದಲ್ಲಿನ ಸಮಸ್ತ ಘಟನಾವಳಿಯ ನ್ಯಾಯಾಂಗ ತನಿಖೆಯನ್ನು ಅಲಹಾಬಾದ್ ಹೈಕೋರ್ಟಿನ ಒಬ್ಬ ಹಾಲಿ ನ್ಯಾಯಾಧೀಶರಿಂದ ನಡೆಸಬೇಕು ಎಂದು ಸುಭಾಷಿಣಿ ಆಲಿ ಆಗ್ರಹಿಸಿದ್ದಾರೆ. ಅಲ್ಲದೆ, ಎಲ್ಲ ಸತ್ತವರ ಕುಟುಂಬಗಳಿಗೆ ಮತ್ತು ಗಾಯಗೊಂಡವರಿಗೆ ಪರಿಹಾರ ನೀಡಬೇಕು, ಮುಗ್ಧ ಜನಗಳ ಮೇಲೆ ಹಾಕಿರುವ ಕೇಸುಗಳನ್ನು ಹಿಂದಕ್ಕೆ ಪಡೆಯಬೇಕು, ದಂಡ ವಿಧಿಸುವುದು ಇತ್ಯಾದಿ ಪ್ರಯತ್ನಗಳನ್ನು ನಿಲ್ಲಿಸಬೇಕು, ಹಿಂಸಾಚಾರ ಮತ್ತು ಧಾಂಧಲೆಗಳಲ್ಲಿ ತೊಡಗಿದ್ದು ಪೋಲಿಸ್ ಸಿಬ್ಬಂದಿಯ ವಿರುದ್ಧ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಪೋಲೀಸ್ ಮಿತ್ರ ಎಂಬ ಕಾವಲುಕೋರ ಪಡೆಯನ್ನು ಸಂಪೂರ್ಣವಾಗಿ  ಬರ್ಖಾಸ್ತು ಮಾಡಬೇಕು ಎಂದು ಸುಭಾಷಿಣಿ ಆಲಿಯವರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *