ಜೆಎನ್‌ಯು ಉಪಕುಲಪತಿಯನ್ನು ರಾಷ್ಟ್ರಪತಿಗಳು ಕೂಡಲೇ ವಜಾ ಮಾಡಬೇಕು

“ಗೃಹಮಂತ್ರಿಗಳು ಬಿಂಬಿಸಲು ಯತ್ನಿಸಿರುವಂತೆ ಇದು ಗುಂಪು ತಿಕ್ಕಾಟವಲ್ಲ, ಪೂರ್ವಯೋಜಿತ ಹಲ್ಲೆ”

ಜವಹರಲಾಲ್ ನೆಹರು ವಿಶ್ವವಿದ್ಯಾಲಯ(ಜೆ ಎನ್‌ ಯು)ದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಮೇಲೆ ಜನವರಿ ೫ರಂದು ಹೊರಗಿನವರು ಬಂದು ಪಾಶವೀ ಹಲ್ಲೆ ನಡೆಸಿರುವುದನ್ನು ಸಿಪಿಐ(ಎಂ) ಪೊಲಿಟ್‌ ಬ್ಯುರೊ ಬಲವಾಗಿ ಖಂಡಿಸಿದೆ.

ಸಶಸ್ತ್ರ ಮುಸುಕುಧಾರೀ ಮಂದಿ ಜೆ ಎನ್‌ ಯು ಕ್ಯಾಂಪಸ್‌ ನೊಳಕ್ಕೆ ದಿಲ್ಲಿ ಪೋಲೀಸರ ಒಂದು ದೊಡ್ಡ ತುಕಡಿಯ ಎದುರೇ ಪ್ರವೇಶಿಸಿ ಮೂರು ಗಂಟೆಗಳ ಕಾಲ ರಂಪಾಟ ನಡೆಸಿದರು, ವಿದ್ಯಾರ್ಥಿನಿಯರ ಹಾಸ್ಟೆಲ್ ಒಳಹೊಕ್ಕು ಅವರನ್ನು ಥಳಿಸಿದರು. ಈ ಹಲ್ಲೆಯಲ್ಲಿ ಜೆ ಎನ್‌ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿರುವ ಆಯಿಷೇ ಘೋಷ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಮತ್ತು ಇತರ ೨೦ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರುಗಳನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ಆಸ್ಪತ್ರೆಯ ಆಘಾತ ಕೇಂದ್ರಕ್ಕೆ ಸೇರಿಸಲಾಗಿದೆ.

ಉಪಕುಲಪತಿಗಳು ಮತ್ತು ವಿಶ್ವವಿದ್ಯಾಲಯದ ಅಧಿಕಾರಿಗಳು ಪೋಲಿಸ್ ಮಧ್ಯಪ್ರವೇಶಕ್ಕೆ ಕೇಳುವ ಮೊದಲು ಹೀಗೆ ಹೊರಗಿನವರು ಒಳಬಂದು ಗಂಟೆಗಟ್ಟಲೆ ಕಾಲ ರಂಪಾಟ ಮಾಡಲು ಹೇಗೆ ಬಿಟ್ಟರು ಎಂಬುದು ಅರ್ಥವಾಗುತ್ತಿಲ್ಲ ಎಂದು ಪೊಲಿಟ್‌ ಬ್ಯುರೊ ಆಶ್ವರ್ಯ ವ್ಯಕ್ತಡಿಸಿದೆ. ಪೋಲಿಸ್ ಮಧ್ಯಪ್ರವೇಶವನ್ನು ಕೇಳಿದ್ದು ಕೂಡ ದಿಲ್ಲಿಯ ರಾಜ್ಯಪಾಲರು ಪೋಲಿಸರಿಗೆ ಕಾನೂನು-ವ್ಯವಸ್ಥೆಯನ್ನು ಪಾಲಿಸಿ, ಅಪರಾಧಿಗಳನ್ನು ಶಿಕ್ಷಿಸಿ ಎಂದು ನಿರ್ದೇಶನವನ್ನು ನೀಡಿದ ಮೇಲೆಯೇ.

ದೇಶದ ಈ ಪ್ರಧಾನ ವಿಶ್ವವಿದ್ಯಾಲಯವನ್ನು ವ್ಯವಸ್ಥಿತವಾಗಿ ಶಿಥಿಲಗೊಳಿಸುವ ಮತ್ತು ಕಳಚಿ ಹಾಕುವ ಸಾಧನವಾಗಿ ಬಿಟ್ಟಿರುವ ಈ ಉಪಕುಲಪತಿ ಗಂಟೆಗಟ್ಟಲೆ ಈ ರಂಪಾಟವನ್ನು ಯಾವುದೇ ಅಡೆ-ತಡೆಯಿಲ್ಲದೆ ನಡೆಸಲು ಅನುಮತಿ ನೀಡಿದ್ದಾರೆ. ಈ ಹಲ್ಲೆಯನ್ನು ನಡೆಸುವಲ್ಲಿ ಶಾಮೀಲಾಗಿರುವುದಕ್ಕೆ ಈ ಉಪಕುಲಪತಿಯನ್ನು ವಜಾ ಮಾಡಬೇಕಾಗಿದೆ.

ಈ ವಿಶ್ವವಿದ್ಯಾಲಯದ ಸಂದರ್ಶಕರಾಗಿರುವ ಭಾರತದ ರಾಷ್ಟ್ರಪತಿಗಳು ತಕ್ಷಣವೇ ಉಪಕುಲಪತಿಯನ್ನು ವಜಾ ಮಾಡಬೆಕು ಮತ್ತು ವಿ.ವಿ. ಆವರಣದಲ್ಲಿ ಸಾಮಾನ್ಯ ಸ್ಥಿತಿ ನೆಲೆಸುವಂತೆ ಖಾತ್ರಿಪಡಿಸಬೇಕು ಎಂದು ಪೊಲಿಟ್‌ ಬ್ಯುರೊ ಆಗ್ರಹಿಸಿದೆ.

ಕೇಂದ್ರ ಗೃಹಮಂತ್ರಿಗಳು ಚಿತ್ರಿಸಲು ಯತ್ನಿಸಿರುವ ರೀತಿಯಲ್ಲಿ ಇದು ಎರಡು ಗುಂಪುಗಳ ನಡುವಿನ ತಿಕ್ಕಾಟವಲ್ಲ. ವ್ಯಾಪಕವಾಗಿ ಪ್ರಸಾರಗೊಂಡಿರುವ ಈ ರಂಪಾಟದ ವೀಡಿಯೋ ರೆಕಾರ್ಡಿಂಗ್‌ಗಳು ಮತ್ತು “ಯುನೈಟ್ ಅಗೆಂಸ್ಟ್ ಲೆಫ್ಟ್ ” ನಂತಹ ಗುಂಪುಗಳ ವಾಟ್ಸ್‌ ಆಪ್ ಚಿತ್ರಗಳು ಈ ಹಲ್ಲೆ ಪೂರ್ವಯೋಜಿತ ಮತ್ತು ವಿ.ವಿ. ಅಧಿಕಾರಿಗಳಿಗೆ ಈ ಬಗ್ಗೆ ಸಂಪೂರ್ಣವಾಗಿ ಗೊತ್ತಿತ್ತು ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತವೆ. ಈ ಹೊರಗಿನ ಮಂದಿ ಕೂಗುತ್ತಿದ್ದ ಘೋಷಣೆಗಳಿಂದ ಅವರು ಆರೆಸ್ಸೆಸ್-ಬಿಜೆಪಿಯ ಭಾಗ ಎಂಬುದು ಸ್ಪಷ್ಟವಾಗುತ್ತದೆ. ಈ ಗೂಂಡಾಗಳನ್ನು ತಕ್ಷಣವೇ ಶಿಕ್ಷಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‌ ಬ್ಯುರೊ ಹೇಳಿದೆ.

Leave a Reply

Your email address will not be published. Required fields are marked *