ಭಾರತದಲ್ಲಿ ಕ್ರಾಂತಿಯ ಸಂಭವ ಇದೆ-ಇಂದಲ್ಲದಿದ್ದರೆ ನಾಳೆ… ಅದು ಅನಿವಾರ್ಯವಾಗಲಿದೆ

ಬ್ರಿಟಿಶ್ ನಾಯಾಲಯದ ಮುಂದೆ ಮೀರತ್ ಪಿತೂರಿ ಪ್ರಕರಣದ ಆರೋಪಿಗಳ ಹೇಳಿಕೆ

  • ಮಾರ್ಚ್ ೨೦, ೧೯೨೯ರಂದು ದೇಶದ ವಿವಿಧ ಭಾಗಗಳಲ್ಲಿ ೩೧ ಕಾರ್ಮಿಕ, ರೈತ ಮತ್ತು ಯುವಜನ ಮತ್ತು ಎಲ್ಲ ಪ್ರಮುಖ ಕಮ್ಯುನಿಸ್ಟ್ ಮುಖಂಡರನ್ನು ಬಂಧಿಸಿ   ಮೇರಠ್ ಜೈಲಿಗೆ ರವಾನಿಸಲಾಯಿತು, ಬ್ರಿಟಿಶ್ ಸಾಮ್ರಾಟನನ್ನು ಕಿತ್ತೊಗೆಯುವ ಪಿತೂರಿ ನಡೆಸಿದ್ದಾರೆ ಎಂದು ಅವರ ಮೇಲೆ ಆರೋಪಗಳನ್ನು ಹೊರಿಸಿ ವಿಚಾರಣೆಗೆ ಗುರಿಪಡಿಸಲಾಯಿತು. ನಾಲ್ಕು ವರ್ಷಗಳ ಕಾಲ ವಿಚಾರಣೆ ನಡೆಯಿತು. ಈ ವಿಚಾರಣೆಯನ್ನು, ಪಕ್ಷದ ಧ್ಯೇಯ-ಧೋರಣೆಗಳನ್ನು ದೇಶಬಾಂಧವರಿಗೆ ತಿಳಿಸುವ ವೇದಿಕೆಯಾಗಿ ಪರಿವರ್ತಿಸಿಕೊಳ್ಳಲು ಬಂಧಿತರಲ್ಲಿ ೧೮ ಕಮ್ಯುನಿಸ್ಟ್ ಮುಖಂಡರು ನಿರ್ಧರಿಸಿ ೪೦೦ ಪುಟಗಳಷ್ಟು ದೀರ್ಘವಾದ ಹೇಳಿಕೆಯೊಂದನ್ನು ಬ್ರಿಟಿಶ್ ನ್ಯಾಯಾಲಯದ ಮುಂದೆ ಮಂಡಿಸಿದರು. ಈ ಮೂಲಕ ಈ ವಿಚಾರನೆ ದೇಶದಲ್ಲೂ, ವಿದೇಶಗಳಲ್ಲೂ ಚರ್ಚೆಗಳ ವಿಷಯವಾಯಿತು.

Communist100 File copyಮೀರತ್ ಪಿತೂರಿ ಪ್ರಕರಣದ ಆರೋಪಿಗಳಲ್ಲಿನ ಹದಿನೆಂಟು ಕಮ್ಯುನಿಸ್ಟರು ತಾವು ಹೋರಾಟ ಮಾಡುತ್ತಿರುವುದು ಯಾವ ತಾತ್ವಿಕ ನೆಲೆಯ ಮೇಲೆ ಎಂಬುದನ್ನು ನ್ಯಾಯಾಲಯಕ್ಕೆ ವಿವರವಾಗಿ ತಿಳಿಸುವ ಸಲುವಾಗಿ ಒಂದು ಸಾರ್ವತ್ರಿಕ ಹೇಳಿಕೆಯನ್ನು ನೀಡಲು ನಿರ್ಧರಿಸಿದರು. ಮೂಲತಃ ೪೦೦ ಪುಟಗಳಷ್ಟು ಉದ್ದವಿರುವ ಆ ಸಾರ್ವತ್ರಿಕ ಹೇಳಿಕೆಯನ್ನು ಆರ್.ಎಸ್.ನಿಂಬ್ಕರ್ ಅವರು ವಿಧ್ಯುಕ್ತವಾಗಿ ಡಿಸೆಂಬರ್ ೨. ೧೯೩೧ರಂದು ಮಂಡಿಸಿದರು, ಜನವರಿ ೧೮, ೧೯೩೨ರಂದು ಪೂರ್ಣಗೊಳಿಸಿದರು. ಎಸ್.ಎ.ಡಾಂಗೆಯವರು ಪ್ರತ್ಯೇಕವಾದ ಹೇಳಿಕೆಯೊಂದನ್ನು ನೀಡಿದರು, ಏಕೆಂದರೆ ಅವರು ಆ ಸಮಯದಲ್ಲಿ ಕಮ್ಯುನಿಸ್ಟ್ ಪಕ್ಷದ ಸದಸ್ಯರಾಗಿರಲಿಲ್ಲ (ಅಶಿಸ್ತಿನ ಕಾರಣದಿಂದ ಪಕ್ಷದಿಂದ ಅಮಾನತ್ತಾಗಿದ್ದರು). ೧೮ ಆರೋಪಿಗಳ ಸಾರ್ವತ್ರಿಕ ಹೇಳಿಕೆಯು ಭಾರತದಲ್ಲಿನ ಕಮ್ಯುನಿಸ್ಟ್ ಪಕ್ಷದ ಚಂತನೆಗಳ ಮೊಟ್ಟಮೊದಲ ಸವಿಸ್ತಾರವಾದ ನಿರೂಪಣೆಯಾಗಿದೆ ಮತ್ತು ಅವರ ವಿಚಾರಗಳು ಎಷ್ಟು ದೂರದೃಷ್ಟಿಯದಾಗಿದ್ದವು ಎನ್ನುವುದನ್ನು ವ್ಯಕ್ತಗೊಳಿಸಿದೆ. ಆ ಸಾರ್ವತ್ರಿಕ ಹೇಳಿಕೆಯಿಂದ ಎತ್ತಿತೆಗೆದ ಕೆಲವು ತುಣುಕುಗಳು ಈ ಕೆಳಗಿವೆ:

ಬ್ರಿಟಿಷ್ ಬಂಡವಾಳಶಾಹಿಯು ಭಾರತಕ್ಕೆ ಬಂದಾಗ ಆ ಸಮಯದಲ್ಲಿ ಭಾರತದಲ್ಲಿ ಇನ್ನೂ ರೂಢಿಯಲ್ಲಿದ್ದ ಪಾಳೇಗಾರಿ ವ್ಯವಸ್ಥೆಗಿಂತ ಮುಂದುವರೆದಿದ್ದ ಒಂದು ಸಾಮಾಜಿಕ ವ್ಯವಸ್ಥೆಯನ್ನು ಅದು ಪ್ರತಿನಿಧಿಸುತ್ತಿತ್ತು, ಆದಕಾರಣ ಭಾರತದಲ್ಲಿನ ಅದರ ಕೆಲಸಗಳಲ್ಲಿ ಕೆಲವು ಪಗತಿಪರ ಲಕ್ಷಣಗಳು ಒಳಗೊಂಡಿದ್ದವು. ಅವುಗಳಲ್ಲಿ, ಬಂಡವಾಳಶಾಹಿ ಪ್ರಜಾಪ್ರಭುತ್ವ ಕ್ರಾಂತಿಯ ಲಕ್ಷಣಗಳಾದ, ಕೆಲವು ಸೃಜನಾತ್ಮಕ ಮತ್ತು ತಕ್ಷಣದಲ್ಲಿ ವಿನಾಶಕಾರಿಯಾದ ಕ್ರಮಗಳನ್ನು ಕೈಗೊಂಡಿತು. ಆದರೆ ಆ ಸಮಯದಲ್ಲಿ ಕೂಡ ಅದು ಕೆಲವು ಪ್ರತಿಗಾಮಿ ಲಕ್ಷಣಗಳನ್ನು ಒಳಗೊಂಡಿತ್ತು. ಅದಾಗಲೇ ಭಾರತದ ಪಾಳೇಗಾರಿ ವ್ಯವಸ್ಥೆಯಲ್ಲಿ ರೂಢಿಯಲ್ಲಿದ್ದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಮುನ್ನಡೆಗೆ ದೊಡ್ಡ ಅಡಚಣೆಯಾಗಿರುವ ಪದ್ಧತಿಗಳನ್ನು ಅದು ಉತ್ತೇಜಿಸಿತು ಮತ್ತು ಉಳಿಸಿಕೊಂಡು ಬಂದಿತು.ಅದರ ಪರಿಣಾಮವಾಗಿ ಅದರ ನೀತಿ ಈಗ ಸಂಪೂರ್ಣವಾಗಿ ಪ್ರತಿಗಾಮಿಯಾಗಿದೆ  . . .ಅದು ಉದ್ದಿಮೆಗಳು ಮತ್ತು ಕೃಷಿ ಎರಡಕ್ಕೂ ಸಂಬಂಧಪಟ್ಟಂತೆ ಉತ್ಪಾದನಾ ಶಕ್ತಿಗಳ ಮುನ್ನಡೆಗೆ ನಿಶ್ಚಿತ ತೊಡರಾಗಿದೆ, ಅದೇ ಸಮಯದಲ್ಲಿ ಜನರ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸ್ಥಾನಮಾನಗಳಿಗೆ ಸಂಬಂಧಪಟ್ಟಂತೆ ಅದರ ನೀತಿಗಳು ಖಂಡಿತವಾಗಿಯೂ, ಮತ್ತು ಭಾಗಶಃ ಪ್ರಜ್ಞಾಪೂರ್ವಕವಾಗಿಯೂ, ಅಡೆತಡೆಯುಂಟುಮಾಡಿವೆ ಮತ್ತು ಪ್ರತಿಗಾಮಿಯಾಗಿವೆ.

meerut -prisoners replyಆದಕಾರಣ ಭಾರತದಲ್ಲಿ ಕ್ರಾಂತಿಯ ಸಂಭವ ಇದೆ-ಬೇಗನೇ ಅಥವಾ ಸ್ವಲ್ಪ ಅಷ್ಟೇನೂ ಬೇಗ ನಡೆಯದಿದ್ದರೂ, ಅದು ಅನಿವಾರ್ಯವಾಗಲಿದೆ. ಆ ಕ್ರಾಂತಿಯ ಸ್ವಭಾವ ಏನಾಗಿರಬಹುದು  …. … ಅದು ಈ ಕೆಳಗಿನ ಮುಖ್ಯ ಅಂಶಗಳನ್ನು ಒಳಗೊಂಡಿರಬೇಕು:

೧. ಅದು ಪ್ರಧಾನವಾಗಿ ನಿಸ್ಸಂಶಯವಾಗಿಯೂ, ಬ್ರಿಟಿಷ್ ಆಳ್ವಿಕೆಯನ್ನು ಕಿತ್ತೊಗೆದು ಸಂಪೂರ್ಣವಾಗಿ ಸ್ವತಂತ್ರವಾದ ರಾಷ್ಟ್ರೀಯ ಪ್ರಭುತ್ವವನ್ನು ಸ್ಥಾಪನೆ ಮಾಡುವುದು ಹಾಗೂ ಆರ್ಥಿಕ ಸ್ವಾತಂತ್ರ್ಯ, ಅಂದರೆ  ಎಲ್ಲಾ ವಿದೇಶಿ ಸಾಲಗಳ ಮುಟ್ಟುಗೋಲು ಇತ್ಯಾದಿ. ಈ ಹಾದಿಯಲ್ಲಿ ಮಾತ್ರವೇ ಭಾರತದ ಈ ವಿನಾಶಕಾರಿ ಶೋಷಣೆಯನ್ನು ತಡೆಯಲು ಮತ್ತು ಸಾರ್ವತ್ರಿಕವಾಗಿ ಉತ್ಪಾದನಾ ಶಕ್ತಿಗಳ ಮುನ್ನಡೆಗೆ ದಾರಿ ಸಿದ್ಧಗೊಳಿಸಲು ಸಾಧ್ಯ.

೨. ಭೂಪದ್ಧತಿಯಲ್ಲಿನ ಮತ್ತು ಪ್ರಭುತ್ವದಲ್ಲಿನ(ಭಾರತದ ಸಂಸ್ಥಾನಗಳಲ್ಲಿ) ಎಲ್ಲಾ ಪಾಳೇಗಾರಿ ಹಾಗೂ ಅರೆ ಪಾಳೆಗಾರೀ ವ್ಯವಸ್ಥೆಗಳನ್ನು(ಭೂಮಾಲಕತ್ವವನ್ನು) ಸಂಪೂರ್ಣವಾಗಿ ಕೊನೆಗಾಣಿಸುವುದು. ಇವುಗಳು ಸಾಮ್ರಾಜ್ಯಶಾಹಿ ಶೋಷಣಾ ವ್ಯವಸ್ಥೆಯ ಭಾಗವಾಗಿರುವುದರಿಂದ ಆ ವ್ಯವಸ್ಥೆ ಹೋದ ಮೇಲೆ ಅವೂ ಹೋಗಬೇಕು. ಅಷ್ಟೇ ಅಲ್ಲ ಅವು ಕೃಷಿ ಮತ್ತು ಗ್ರಾಮೀಣ ಜನರ ಮುನ್ನಡೆಗೆ ತೀವ್ರ ಅಡ್ಡಿ ಆತಂಕಗಳನ್ನು ಒಡ್ಡುತ್ತವೆಯಾದ್ದರಿಂದ ಅವುಗಳನ್ನು ನಾಶಮಾಡಬೇಕು.

೩. ಕ್ರಾಂತಿಯು ಜನರಿಂದ ಆಗಬೇಕು ಎಂಬುದು ಸ್ಪಷ್ಟವಾಗಿದೆ.. ಇವತ್ತಿನ ಭಾರತದ ಸಂದರ್ಭದಲ್ಲಿ, ಅದು ಕೇವಲ ಒಂದು ಶೋಷಕ ಆಳುವ ವರ್ಗದ ಜಾಗದಲ್ಲಿ ಮತ್ತೊಂದನ್ನು ಕೂರಿಸುಸುವಷ್ಟಕ್ಕೆ ಸೀಮಿತವಾಗಬಾರದು. ಅದು ನಿಜವಾಗಿಯೂ ಒಂದು ರೂಪದ ಜನಪ್ರಿಯ ಪ್ರಜಾಪ್ರಭುತ್ವದ ಆಳ್ವಿಕೆಯಾಗಬೇಕು; ನೈರ್ಮಲ್ಯ, ಆರೋಗ್ಯ, ವಸತಿ, ಶಿಕ್ಷಣ, ಮತ್ತು ಸಾಮಾನ್ಯವಾಗಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ಮುನ್ನಡೆಯಲ್ಲಿ ಜನರನ್ನು ನಿಕಟವಾಗಿ ತಟ್ಟುವ ವಿಚಾರಗಳಲ್ಲಿ ತಕ್ಷಣದ ಸಾಧ್ಯತೆಗಳನ್ನು ತೆರೆದಿಡುವಂತಾಗಬೇಕು.

೪. ಸಂಕ್ಷಿಪ್ತವಾಗಿ, ಭಾರತದಲ್ಲಿನ ಕ್ರಾಂತಿಯು ಬಂಡವಾಳಶಾಹಿ ಪ್ರಜಾಸತ್ತಾತ್ಮಕ ಕ್ರಾಂತಿಯ ಸ್ವರೂಪದ್ದಾಗಿದ್ದು, ವಸಾಹತುಶಾಹಿ ದೇಶವೊಂದರ ಪರಿಸ್ಥಿತಿಗಳಿಗೆ ತಕ್ಕಂತೆ ಮಾರ್ಪಾಟಾಗಿರುವಂತದ್ದು ಆಗಿರುತ್ತದೆ”

ಕ್ರಾಂತಿಯು ಯಾರ ನೇತೃತ್ವದಲ್ಲಿ ನಡೆಯುತ್ತದೆ ಎನ್ನುವುದನ್ನು ವಿವರಿಸುತ್ತಾ ಆ ಹೇಳಿಕೆಯು ಬಂಡವಾಳಿಗರು ಅನಿವಾರ್ಯವಾಗಿ ಕ್ರಾಂತಿಯನ್ನು ವಿರೋಧಿಸುತ್ತಿರುವಾಗಲೂ ಸಹ ಪುಟ್ಟ ಬಂಡವಳಿಗರ ಬೆಂಬಲ ಪಡೆದು ಕಾರ್ಮಿಕ ವರ್ಗ ಮತ್ತು ರೈತಾಪಿಗಳು ಕ್ರಾಂತಿಯನ್ನು ಮುನ್ನಡೆಸುವ ವರ್ಗಗಳಾಗಿರುತ್ತವೆ. ಎಂದಿದೆ. ಆ ಹೇಳಿಕೆಯು ಇನ್ನೂ ಮುಂದುವರಿದು ಇಂದಿನ ಹಂತವು ಸಮಾಜವಾದಿ ಕ್ರಾಂತಿಯಲ್ಲ, ಅದು ಬಂಡವಾಳಶಾಹಿ ಪ್ರಜಾಸತ್ತಾತ್ಮಕ ಕ್ರಾಂತಿ ಎಂದೇಕೆ ಅವರು ಪರಿಗಣಿಸುತ್ತಾರೆ ಎನ್ನುವುದನ್ನು ವಿವರಿಸುತ್ತದೆ.

ಈ ಬಂಡವಾಳಶಾಹಿ ಪ್ರಜಾಸತ್ತಾತ್ಮಕ ಹಂತದ ಕ್ರಾಂತಿಯ ಅವಧಿಯಲ್ಲಿ ಕಮ್ಯುನಿಸ್ಟರು ಏನನ್ನು ಸಾಧಿಸಲು ಬಯಸುತ್ತಾರೆ ಎಂಬುದರ ಕುರಿತು ಅವರು ಹೀಗನ್ನುತ್ತಾರೆ: ಈ ಬಂಡವಾಳಶಾಹಿ ಪ್ರಜಾಸತ್ತಾತ್ಮಕ ಕ್ರಾಂತಿಯ ಮಾದರಿಯು ಮೂಲಭೂತವಾಗಿ ಒಂದೇ ಸಮಯದಲ್ಲಿ ಸಾಮ್ರಾಜ್ಯಶಾಹಿಗಳ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆಯುವುದು ಮತ್ತು ಬಂಡವಾಳಿಗ ವರ್ಗದ ಸರ್ವಾಧಿಕಾರವನ್ನಲ್ಲ ಬದಲು ಜನಸಮೂಹಗಳ ಆಳ್ವಿಕೆಯನ್ನು ಸ್ಥಾಪಿಸುವುದೇ ಆಗಿದೆ. ಪ್ರಸ್ತುತ ಸಾಮ್ರಾಜ್ಯಶಾಹಿ ಬಂಡವಾಳಿಗ ವರ್ಗದ ಕೈಯಲ್ಲಿರುವ ಆರ್ಥಿಕ ಶಕ್ತಿಯ ಸಾಧನಗಳನ್ನು, ಸಾರಿಗೆ ವ್ಯವಸ್ಥೆಯನ್ನು, ರೈಲ್ವೇ, ಬಂದರುಗಳು ಇತ್ಯಾದಿಗಳನ್ನು, ಬ್ಯಾಂಕುಗಳು ಮತ್ತಿತರ ಹಣಕಾಸಿನ ಸಂಸ್ಥೆಗಳನ್ನು ರಾಷ್ಟ್ರೀಕರಿಸಲಾಗುವುದು ಮತ್ತು ವಿದೇಶಿ ಸಾಲಗಳು ಮತ್ತಿತರ ಬಾಧ್ಯತೆಗಳನ್ನು ನಿರಾಕರಿಸಲಾಗುವುದು.

ಬಂಡವಾಳಶಾಹಿಗಳ, ವಿದೇಶಿ ಅಥವಾ ಭಾರತೀಯ, ಧೋರಣೆಯು ಅನಿವಾರ್ಯವಾಗಿ ಪ್ರತಿಕೂಲವಾಗಿರುವುದರಿಂದ ಪ್ರಸ್ತುತ ಬಂಡವಾಳಶಾಹಿಗಳ ಅಧೀನದಲ್ಲಿರುವ ಪ್ರಮುಖ ಉದ್ದಿಮೆಗಳನ್ನು ಯಾವುದೇ ಪರಿಹಾರ ನೀಡದೆ ರಾಷ್ಟ್ರೀಕರಣಗೊಳಿಸಲಾಗುವುದು. ಅದೇ ರೀತಿಯಲ್ಲಿ, ಎಲ್ಲಾ ವಿದೇಶಿ ವ್ಯಾಪಾರವನ್ನು ರಾಷ್ಟ್ರೀಕರಣ ಮಾಡಲಾಗುವುದು. ಸಣ್ಣ ಕೈಗಾರಿಕೆಗಳು ಮತ್ತು ವಾಣಿಜ್ಯ ಸಂಘಟನೆಗಳು, ಕರಕುಶಲ, ಸಣ್ಣ ಚಿಲ್ಲರೆ ವ್ಯಾಪಾರಿಗಳು ಇತ್ಯಾದಿಗಳನ್ನು ಈಗಿರುವಂತೆಯೇ ಅವರ ಮಾಲೀಕತ್ವದಲ್ಲಿಯೇ ಕೆಲಸ ಮಾಡಲು ಅನುವು ಮಾಡಿಕೊಡಲಾಗುತ್ತದೆ; ಆದರೆ ಅವರು ಕಾರ್ಮಿಕರನ್ನು ತೀರ ಶೋಷಣೆ ಮಾಡದಂತೆ ಮತ್ತು ಸಾರ್ವಜನಿಕರನ್ನು ವಂಚಿಸದಂತೆ ಕಠಿಣ ನಿಯಂತ್ರಣ ಹೇರಲಾಗುವುದು. ಕಾರ್ಮಿಕರ ಪ್ರಾಥಮಿಕ ಬೇಡಿಕೆಗಳಾದ ಕಾನೂನುಬದ್ಧ ಕನಿಷ್ಠ ವೇತನ, ಎಂಟು ಗಂಟೆಗಳ ಕೆಲಸದ ದಿನ ಮತ್ತು ವಾರದಲ್ಲಿ ಐದೂವರೆ ದಿನಗಳ ಕೆಲಸ,   ಉದ್ಯೋಗ, ವೃದ್ಧಾಪ್ಯ, ಅನಾರೋಗ್ಯ ಇತ್ಯಾದಿಗಳಿಗೆ ವಿಶೇಷ ವಿಮೆ, ಸರಿಯಾದ ಪರಿಹಾರ ಮತ್ತು ಕಾರ್ಮಿಕ ರಕ್ಷಣೆ ಕಾನೂನುಗಳು ಹಾಗೂ ಇಂಥವುಗಳನ್ನು ಕಡ್ಡಾಯಗೊಳಿಸಲಾಗುವುದು. ಭೂಮಿಯನ್ನು ರಾಷ್ಟ್ರೀಕರಣ ಮಾಡಲಾಗುವುದು, ಯಾವುದೇ ಪರಿಹಾರ ನೀಡದೆ ಜಮೀನನ್ನು ಭೂಮಾಲಕರಿಂದ ಸ್ವಾಧೀನಪಡಿಸಿಕೊಳ್ಳಲಾಗುವುದು; ನಿಜವಾಗಿ ಸಾಗುವಳಿ ಮಾಡುವವರಿಗೆಲ್ಲಾ ಹಿಡುವಳಿಯ ರಕ್ಷಣೆ ಒದಗಿಸಲಾಗುವುದು.

ಭೂಕಂದಾಯವನ್ನು ಉತ್ಪಾದನೆಗೆ ತಕ್ಕಂತೆ ಇಳಿಕೆಯ ಪ್ರಮಾಣಪಟ್ಟಿ(ಸ್ಲೈಡಿಂಗ್ ಸ್ಕೇಲ್)ಯ ಆಧಾರದಲ್ಲಿ ಅಂದಾಜು ಮಾಡಲಾಗುವುದು. ದೊಡ್ಡ ಆದಾಯ ಉಳ್ಳವರ ಮೇಲೆ ಶ್ರೇಣೀಕೃತ ಆದಾಯ ತೆರಿಗೆಯನ್ನು ಕಡ್ಡಾಯ ಮಾಡಲಾಗುವುದು. ಕೃಷಿ ಸಾಲವನ್ನು ಮನ್ನಾ ಮಾಡಲಾಗುವುದು ಅಥವಾ ಕಡಿಮೆ ಮಾಡಲಾಗುವುದು; ಬಡ್ಡಿ ದರವನ್ನು ಕಾನೂನುಬದ್ಧ ನ್ಯಾಯಸಮ್ಮತ ಮಿತಿಯಲ್ಲಿ ವಿಧಿಸಲಾಗುವುದು; ಸರ್ಕಾರಿ ಅನುದಾನಿತ ಮೂಲಗಳಿಂದ ಸಾಲ ಸಿಗುವಂತೆ ಮಾಡಲಾಗುವುದು; ಇವೆಲ್ಲವೂ ಗ್ರಾಮ ಮತ್ತು ಜಿಲ್ಲಾ ರೈತ ಮಂಡಳಿಗಳ ನಿರ್ದೇಶನದ ಅಡಿಯಲ್ಲಿ ನಡೆಯುತ್ತವೆ. ಕ್ರಾಂತಿಯು ಬಂಡವಾಳಶಾಹಿ ಪ್ರಜಾಸತ್ತಾತ್ಮಕ ಮಾದರಿಯದಾದ್ದರಿಂದ ಕಾರ್ಷಿಕ ಕ್ರಾಂತಿಯು ಮೊದಲ ಹೆಜ್ಜೆ ಮಾತ್ರ ಇಡುತ್ತದೆ. ಕಾರ್ಷಿಕ ಕ್ರಾಂತಿಯ ಎರಡನೇ ಹೆಜ್ಜೆಯಲ್ಲಿ ಬಡ ರೈತರು ಮತ್ತು ಕೃಷಿ ಕೂಲಿಕಾರರು ಹೆಚ್ಚು ಶ್ರೀಮಂತ ಬಂಡವಳಿಗ ರೈತರ ನಾಯಕತ್ವವನ್ನು ಕಿತ್ತುಹಾಕುವ ಮತ್ತು  ಅವರ ಜಮೀನನ್ನು ವಿಭಜಿಸುವ ಕ್ರಾಂತಿ ನಡೆಯುವುದಿಲ್ಲ; ಆದರೆ ಕೆಲವು ಸಂದರ್ಭಗಳಲ್ಲಿ ಮತ್ತು ಸ್ಥಳಗಳಲ್ಲಿ ವರ್ಗ ಶಕ್ತಿಗಳ ಸಂಬಂಧಗಳು ಈ ಎರಡನೇ ಹಂತದ ಕ್ರಾಂತಿಗೆ ದಾರಿಯಾಗಬಹುದು.

ಒಂದು ಜನಪ್ರಿಯ ಕಾರ್ಮಿಕರ ಮತ್ತು ರೈತರ ಸೇನೆಯನ್ನು ಸೃಷ್ಟಿಸಲಾಗುವುದು, ಜನರು ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯುವುದರ ಮೇಲಿನ ನಿರ್ಬಂಧವನ್ನು ಹಿಂತೆಗೆದುಕೊಳ್ಳಲಾಗುವುದು. ಶಿಕ್ಷಣದ ತ್ವರಿತ ಮುನ್ನಡೆಯನ್ನು ಸಾಧಿಸಲು, ನೈರ್ಮಲ್ಯ, ಆರೋಗ್ಯ ಮತ್ತು ವಸತಿಗಳ ಸಾಮಾನ್ಯ ಸ್ಥಿತಿಯನ್ನು ಉತ್ತಮಪಡಿಸಲು, ಮಹಿಳೆಯರ ವಿಮೋಚನೆ, ಮತ್ತು ತುಳಿತಕ್ಕೊಳಗಾದ ಜನವಿಭಾಗ ಮತ್ತು ಜನಸಮುದಾಯದ ಇತರೆ ಕನಿಷ್ಠ ಸಾಮಾಜಿಕ ಅಗತ್ಯಗಳಿಗೆ ಚಾಲನೆ ನೀಡಲಾಗುವುದು. ದೇಶದ ವಿವಿಧ ಜನಾಂಗಗಳು ಮತ್ತು ಕೋಮುಗಳ ನಡುವೆ ಒಕ್ಕೂಟ ವ್ಯವಸ್ಥೆಯ ಮೂಲಕ ಸಾಮರಸ್ಯ ಮೂಡಿಸಲಾಗುವುದು, ಎಲ್ಲಾ ಪ್ರದೇಶಗಳಿಗೂ ಹಾಗೂ ಗಣನೀಯ ಅಲ್ಪಸಂಖ್ಯಾತರಿಗಾಗಿ, ಅವರು ಬಯಸುತ್ತಾರೆ ಎಂದು ಕಂಡು ಬರುವ ಮಟ್ಟಿಗೆ ಸಾಂಸ್ಕೃತಿಕ ಮತ್ತು ಆಡಳಿತಾತ್ಮಕ ಸ್ವಾಯತ್ತತೆಯನ್ನು ಕಲ್ಪಿಸಲಾಗುವುದು. ದೇಶದ ಉದ್ದಿಮೆಗಳ ಹಾಗೂ ಸಂಪರ್ಕ ಸಾಧನಗಳ ಮುನ್ನಡೆಗೆ ನೀತಿಗಳನ್ನು ರೂಪಿಸಲಾಗುವುದು. ನೈಸರ್ಗಿಕ ಸಂಪನ್ಮೂಲಗಳನ್ನು ಸರ್ಕಾರದ ನಿಯಂತ್ರಣದ ಅಡಿಯಲ್ಲಿ ಬೆಳೆಸಲಾಗುವುದು. ಜನಸಮುದಾಯದ ಬದುಕಿನ ಸ್ಥಿತಿಗತಿಗಳ ಎತ್ತರಿಸುವಿಕೆಯನ್ನು ಖಾತ್ರಿಪಡಿಸಲು ಇವು ಮಾತ್ರವೇ ದಾರಿ.

  ಈ ವಿಚಾರಣೆ ಭಾರತದಲ್ಲಿ ಮಾತ್ರವಲ್ಲ, ಅಂತರ್ ರಾಷ್ಟ್ರೀಯವಾಗಿಯೂ ಗಮನ ಸೆಳೆಯಿತು. ಬಂಧಿತರಿಗೆ ಎಲ್ಲೆಡೆಗಳಿಂದಲೂ ಸೌಹಾರ್ದತೆ ವ್ಯಕ್ತಗೊಂಡಿತು. ಇಂಗ್ಲೆಂಡಿನ ಮ್ಯಾಚೆಸ್ಟರ್‌ನಲ್ಲಿ ಕಾರ್ಮಿಕರ ರಂಗತಂಡವೊಂದು ದಿ ರೆಡ್ ಪ್ಲೇಯರ್ಸ್ ನಾಟಕವನ್ನು ಪ್ರಸ್ತುತಪಡಿಸಿತು. ಅದರ ಒಂದು ಪೋಸ್ಟರ್
ಈ ವಿಚಾರಣೆ ಭಾರತದಲ್ಲಿ ಮಾತ್ರವಲ್ಲ, ಅಂತರ್ ರಾಷ್ಟ್ರೀಯವಾಗಿಯೂ ಗಮನ ಸೆಳೆಯಿತು. ಬಂಧಿತರಿಗೆ ಎಲ್ಲೆಡೆಗಳಿಂದಲೂ ಸೌಹಾರ್ದತೆ ವ್ಯಕ್ತಗೊಂಡಿತು. ಇಂಗ್ಲೆಂಡಿನ ಮ್ಯಾಚೆಸ್ಟರ್‌ನಲ್ಲಿ ಕಾರ್ಮಿಕರ ರಂಗತಂಡವೊಂದು ದಿ ರೆಡ್ ಪ್ಲೇಯರ್ಸ್ ನಾಟಕವನ್ನು ಪ್ರಸ್ತುತಪಡಿಸಿತು. ಅದರ ಒಂದು ಪೋಸ್ಟರ್

ನಾವು ಸ್ಥಾಪಿಸುವ ಪ್ರಭುತ್ವವು  ಪ್ರಜಾಸತ್ತಾತ್ಮಕವಾಗಿರುತ್ತದೆ, ನಿಶ್ಚಿತವಾಗಿಯೂ, ಪ್ರತಿಕ್ರಾಂತಿಯ ಬೆಂಬಲಿಗರನ್ನು ಹೊರತುಪಡಿಸಿ, ಎಲ್ಲರೂ ಅದರಲ್ಲಿ ಭಾಗವಹಿಸುತ್ತಾರೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಜನರಿಗೆ ಸಂಘ ರಚಿಸಿಕೊಳ್ಳುವ ಮತ್ತು ಚರ್ಚೆಮಾಡುವ ಸ್ವಾತಂತ್ರ್ಯವನ್ನು ವ್ಯವಸ್ಥಿತಗೊಳಿಸಲಾಗುವುದು . . ಕ್ರಾಂತಿಯ ಪ್ರಧಾನ ವರ್ಗಗಳಾದ ಕಾರ್ಮಿಕರು ಮತ್ತು ರೈತರು ನೀತಿ ಮತ್ತು ಅಭಿವೃದ್ಧಿಯ ಮುನ್ನಡೆಯ ಮೇಲೆ ಸಹಜವಾಗಿಯೇ ನಿರ್ಣಾಯಕ ಪ್ರಭಾವವನ್ನು ಹೊಂದಿರುತ್ತಾರೆ. ಅದು ಕಾರ್ಮಿಕರ ಮತ್ತು ರೈತರ ಪ್ರಜಾಸತ್ತಾತ್ಮಕ ಸರ್ವಾಧಿಕಾರವಾಗಿರುತ್ತದೆ. ಪ್ರಭುತ್ವದ ಸ್ವರೂಪವು ಎಂದಿನಂತಹ ಸಂಸದೀಯ ಮಾದರಿಯಾಗಿರುವುದಿಲ್ಲ. ಅಂತಹ ಮಾದರಿಯ ಪ್ರಾತಿನಿಧಿಕ ಆಡಳಿತ ಯಂತ್ರವು ಬಂಡವಾಳಶಾಹಿಗಳ ಹಿತಾಸಕ್ತಿಯನ್ನು ಮತ್ತೆ ದೃಢಪಡಿಸುವ ದಿಕ್ಕಿನಲ್ಲಿ ಮಾತ್ರ ಕೊಂಡೊಯ್ಯುತ್ತದಷ್ಟೆ ಹಾಗೂ ಅದು ಪ್ರತಿಕ್ರಾಂತಿಯನ್ನು ಪೂರ್ಣಗೊಳಿಸುತ್ತದೆಯಷ್ಟೆ. ಪ್ರಭುತ್ವದ ಸಂಘಟನೆಯು ಜನರ ಸಂಘಗಳು, ಕಾರ್ಖಾನೆಗಳಲ್ಲಿನ, ಬಂದರುಗಳಲ್ಲಿನ, ಗಣಿಗಳಲ್ಲಿನ, ರೈಲ್ವೇ ಕೇಂದ್ರಗಳಲ್ಲಿನ ಮುಂತಾದ ಕಾರ್ಮಿಕರ ಮಂಡಳಿಗಳು, ಹಳ್ಳಿಗಳಲ್ಲಿನ ರೈತರ ಸಂಘಗಳು, ಕಾರ್ಮಿಕ ವರ್ಗದ ಗೃಹಿಣಿಯರ ಸಂಘಗಳು, ಸಣ್ಣ ವ್ಯಾಪಾರಿಗಳ ಸಂಘಗಳು, ಕರಕುಶಲ ಕರ್ಮಿಗಳ ಸಂಘಗಳು ಮುಂತಾದವುಗಳ ಮೇಲೆ  ಅವರ ವಾಸ ಪ್ರದೇಶಗಳಲ್ಲಿ  ವೃತ್ತಿಗುಂಪುಗಳ ಆಧಾರದಲ್ಲಿ ರೂಪಿತಗೊಳ್ಳಬೇಕು.

ಮಹಿಳೆಯರ ಪ್ರಶ್ನೆ ಕುರಿತು, ಆ ಹೇಳಿಕೆಯು ಮಹಿಳೆಯರ ಪರಾಧೀನತೆ ಮತ್ತು ಶೋಷಣೆಯು ಮನುಜ ಕುಲದ ಬಹುಪಾಲು ಪುರುಷರ ಪರಾಧೀನತೆಯ ಹಾಗೂ ಶೋಷಣೆಯ ಒಂದು ಆಯಾಮ ಮಾತ್ರವಷ್ಟೆ. ಅದನ್ನು ವರ್ಗಾಧಾರಿತವಾಗಿ ಪರಿಹರಿಸಿಕೊಳ್ಳಬೇಕೇ ವಿನಃ ಲಿಂಗಾಧಾರಿತವಾಗಿ ಅಲ್ಲ. …ಪಕ್ಷವು ತನ್ನ ಕೆಲಸಗಳಲ್ಲಿ ಈ ಕೆಳಗಿನವುಗಳನ್ನು ಖಾತರಿಪಡಿಸಬೇಕು: ೧) ಕಾರ್ಮಿಕ ವರ್ಗದ ಚಳುವಳಿಯೊಳಗೆ ಸಂಪೂರ್ಣ ಲಿಂಗ ಸಮಾನತೆಯನ್ನು ಸ್ಥಾಪಿಸಬೇಕು, ಮತ್ತು ಕಾರ್ಮಿಕ ವರ್ಗದ ಮಧ್ಯೆ ಈ ವಿಚಾರಗಳಲ್ಲಿರುವ ಪೂರ್ವಾಗ್ರಹಗಳನ್ನು ಕೊನೆಗಾಣಿಸಬೇಕು; ೨) ಗೃಹಿಣಿಯರನ್ನು ಮಾನವ ಕುಲದ ಉತ್ಪಾದಕರೆಂದು ಅತ್ಯುನ್ನತ ಮಹತ್ವದೊಂದು ಕಾರ್ಮಿಕರ ವಿಧ ಎಂದು ಮಾನ್ಯ ಮಾಡಬೇಕು, ಮತ್ತು ತಮ್ಮ ಸ್ಥಾನಮಾನ ಉತ್ತಮಗೊಳಿಸಿಕೊಳ್ಳಲು ಅವರು ನಡೆಸುವ ಹೋರಾಟಗಳಿಗೆ ಉತ್ತೇಜನ ನೀಡಬೇಕು; ೩) ಬಂಡವಾಶಾಹಿಯ ವಿರುದ್ಧದ ಸಕ್ರಿಯ ಕಾರ್ಮಿಕ ವರ್ಗದ ಹೋರಾಟಗಳಿಗೆ, ಮುಖ್ಯವಾಗಿ ಪುರುಷ ಕಾರ್ಮಿಕರ ಬದಲಾಗಿ ಮಹಿಳೆಯರನ್ನು ಕಡಿಮೆ ಕೂಲಿಗೆ ದುಡಿಸಿಕೊಳ್ಳುವುದರ ವಿರುದ್ಧ ದುಡಿಯುವ ಮಹಿಳೆಯರನ್ನು ಸೆಳೆದುಕೊಳ್ಳಬೇಕು. ಎಂದಿದೆ.

ಈ ಗುರಿಗಳನ್ನು ಸಾಧಿಸಲು ಒಂದು ಬಲಿಷ್ಠವಾದ ಹಾಗೂ ದೃಢಸಂಕಲ್ಪದ ಕಮ್ಯುನಿಸ್ಟ್ ಪಕ್ಷವನ್ನು ಕಟ್ಟಬೇಕೆಂದು ಆ ಹೇಳಿಕೆಯು ಕರೆ ನೀಡಿತು…

 

ಕನ್ನಡಕ್ಕೆ: ಟಿ.ಸುರೇಂದ್ರ ರಾವ್

Leave a Reply

Your email address will not be published. Required fields are marked *