ಆಹಾರ ವಸ್ತುಗಳ ಮೇಲೆ ಜಿಎಸ್‍ಟಿ ಹೆಚ್ಚಳವನ್ನು ಹಿಂತೆಗೆದುಕೊಳ್ಳಬೇಕು

ಪೂರ್ವ-ಪ್ಯಾಕ್ ಮಾಡಿದ ಅಕ್ಕಿ, ಗೋಧಿ, ಹಾಲು ಮುಂತಾದ ಎಲ್ಲಾ ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ ಹೆಚ್ಚಳದ ಮೂಲಕ ಜನರ ಮೇಲೆ ಇತ್ತೀಚಿನ ಸುತ್ತಿನಲ್ಲಿ ಅಭೂತಪೂರ್ವ ಹೊರೆಗಳನ್ನು ಹೇರಿರುವುದನ್ನು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‍ ಬ್ಯೂರೋ ಬಲವಾಗಿ ಖಂಡಿಸಿದೆ. ಈ ಏರಿಕೆಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಅದು  ಆಗ್ರಹಿಸಿದೆ.

ಸ್ವತಂತ್ರ ಭಾರತವು ವಸಾಹತುಶಾಹಿ ಬ್ರಿಟಿಷ್ ಸರ್ಕಾರದ ಆಹಾರ ಪದಾರ್ಥಗಳ ಮೇಲಿನ ತೆರಿಗೆಯ ನೀತಿಯನ್ನು ಕೈಬಿಟ್ಟಿತು. ಈ ಕಳೆದ 75 ವರ್ಷಗಳಲ್ಲಿ ಅಕ್ಕಿ, ಗೋಧಿ, ಬೇಳೆಕಾಳುಗಳು ಮುಂತಾದ ಆಹಾರ ಪದಾರ್ಥಗಳು, ಮೊಸರು, ಪನೀರ್, ಮಾಂಸ, ಮೀನು, ಬೆಲ್ಲದಂತಹ ದೈನಂದಿನ ಅಗತ್ಯಗಳಿಗೆ ಎಂದಿಗೂ ತೆರಿಗೆ ವಿಧಿಸಲಾಗಿಲ್ಲ. ಇದು ಈ ವರ್ಷದ ಆಜಾದಿ ಕಾ ಅಮೃತ್ ಮಹೋತ್ಸವದಲ್ಲಿ ಭಾರತೀಯ ಜನತೆಗೆ ಮೋದಿ ಸರ್ಕಾರದ ‘ಉಡುಗೊರೆ’ಯಾಗಿದೆ.

ಜಿಎಸ್‌ಟಿ ಹೆಚ್ಚಿಸಲಾದ ವಸ್ತುಗಳ ಶ್ರೇಣಿಯಲ್ಲಿ ಸ್ಮಶಾನದ ಶುಲ್ಕಗಳು, ಆಸ್ಪತ್ರೆಯ ಕೊಠಡಿಗಳು, ಬರವಣಿಗೆಯ ಶಾಯಿ ಇತ್ಯಾದಿಗಳು ಕೂಡ ಸೇರಿವೆ. ಸ್ವಂತ ಉಳಿತಾಯವನ್ನು ತಮ್ಮ ಬ್ಯಾಂಕ್ ಖಾತೆಯಿಂದ ಹಿಂಪಡೆಯಲು ಸಹ ಜನರು ಬ್ಯಾಂಕ್ ಚೆಕ್‌ಗಳ ಮೇಲೆ 18 ಶೇಕಡಾ ಜಿಎಸ್‍ಟಿ ತೆರಬೇಕಾಗುತ್ತದೆ.

ಗ್ರಾಹಕರ ಬೆಲೆ ಸೂಚ್ಯಂಕವು ಶೇಕಡಾ 7 ಕ್ಕಿಂತ ಹೆಚ್ಚು ಮತ್ತು ಸಗಟು ಬೆಲೆ ಸೂಚ್ಯಂಕವು ಶೇಕಡಾ 15 ಕ್ಕಿಂತ ಹೆಚ್ಚಿರುವಂತೆ ಮಾಡಿರುವ ವಿಪರೀತ ಬೆಲೆ ಏರಿಕೆ, ಗಗನಕ್ಕೇರುತ್ತಿರುವ ನಿರುದ್ಯೋಗ, ಕೆಳಕ್ಕೆ ಉರುಳುತ್ತಿರುವ ರೂಪಾಯಿ, ಅಭೂತಪೂರ್ವ ವ್ಯಾಪಾರ ಕೊರತೆ ಮತ್ತು ಜಿಡಿಪಿ ಮುಗ್ಗರಿಸುತ್ತಿರುವ ಸನ್ನಿವೇಶದಲ್ಲಿ ಜನರ ಜೀವನೋಪಾಯದ ಮೇಲೆ ಈ ಕ್ರೂರ ಪ್ರಹಾರ ನಡೆಸಲಾಗಿದೆ. ಈ ಏರಿಕೆಗಳು ಜನರ ಜೀವನೋಪಾಯವನ್ನು ಮತ್ತಷ್ಟು ಹಾಳು ಮಾಡುತ್ತವೆ.

ಮೋದಿ ಸರ್ಕಾರವು ತನ್ನ ಆದಾಯವನ್ನು ಹೆಚ್ಚಿಸಲು, ಅತಿ ಶ್ರೀಮಂತರ ಮೇಲೆ ತೆರಿಗೆ ವಿಧಿಸಬೇಕೇ ವಿನಹ ಜನರ ಮೇಲೆ ಹೆಚ್ಚಿನ ಹೊರೆಗಳನ್ನು ಹೇರಬಾರದು. ಭಾರತ ವಿಶ್ವದಲ್ಲಿ ಎಲ್ಲರಿಗಿಂತ ವೇಗವಾಗಿ ಬೆಳೆಯುತ್ತಿರುವ ಬಿಲಿಯಾಧಿಪತಿಗಳನ್ನು ಹೊಂದಿರುವುದಲ್ಲದೆ, ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಪಟ್ಟಿ ಮಾಡಲಾದ ಕಂಪನಿಗಳು 2021-222ರಲ್ಲಿ ಸಾಮೂಹಿಕವಾಗಿ ರೂ 9.3 ಲಕ್ಷ ಕೋಟಿಗಳ ಲಾಭವನ್ನು ವರದಿ ಮಾಡಿವೆ, ಅಂದರೆ, ಹಿಂದಿನ ವರ್ಷಕ್ಕಿಂತ 70ಶೇ. ಹೆಚ್ಚು ಮತ್ತು 2010-2020 ರ ದಶಕದಲ್ಲಿ ಗಳಿಸಿದ ಸರಾಸರಿಗಿಂತ ಮೂರು ಪಟ್ಟು ಹೆಚ್ಚು ಲಾಭ ಗಳಿಸಿವೆ. ಈ ಮಹಾ ಶ್ರೀಮಂತರ ಮೇಲೆ ತೆರಿಗೆ ವಿಧಿಸುವ ಬದಲು ಮೋದಿ ಸರ್ಕಾರ ಅವರಿಗೆ ಮತ್ತಷ್ಟು ತೆರಿಗೆ ರಿಯಾಯಿತಿಗಳನ್ನು ಮತ್ತು ಸಾಲ ಮನ್ನಾ ನೀಡುತ್ತಿದೆ. ಭಾರೀ ತೆರಿಗೆ ವಿಧಿಸಬೇಕಾಗಿದ್ದ ಹಲವು ಐಷಾರಾಮಿ ಸರಕುಗಳು ಸಾಧಾರಣ ಜಿಎಸ್‌ಟಿಯನ್ನು ಹೊಂದಿವೆ. ಚಿನ್ನ ಖರೀದಿಗೆ ಶೇ 3, ವಜ್ರಕ್ಕೆ ಶೇ 1.5 ತೆರಿಗೆ ವಿಧಿಸಲಾಗಿದ್ದರೆ, ಆಹಾರ ಪದಾರ್ಥಗಳಿಗೆ ಶೇ 5 ಅಥವಾ ಅದಕ್ಕಿಂತ ಹೆಚ್ಚಿನ ಜಿಎಸ್‌ಟಿ ಇದೆ.

ಈ ಏರಿಕೆಗಳ ವಿರುದ್ಧ ಯಾವುದೇ ವಿರೋಧ ಬಂದಿಲ್ಲ ಎಂಬ ಮೋದಿ ಸರ್ಕಾರದ ಹೇಳಿಕೆಯು ಹಸಿ ಸುಳ್ಳು. ಕೇರಳ ಮುಖ್ಯಮಂತ್ರಿ ತಮ್ಮ ರಾಜ್ಯ ಸರ್ಕಾರದ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ, ನವೆಂಬರ್ 2021ರಷ್ಟು ಹಿಂದೆಯೇ ಈ ಪ್ರಸ್ತಾಪಗಳನ್ನು ಮೊದಲು ಮುಂದಿಟ್ಟಾಗ ರಾಜ್ಯ ಹಣಕಾಸು ಸಚಿವರು ಇದು ಸಮ್ಮತವಲ್ಲ ಎಂದು ತಿಳಿಸಿದ್ದರು ಎಂಬುದನ್ನು ನೆನಪಿಸಿದ್ದಾರೆ.

ಜನರ ಜೀವನದ ಮೇಲಿನ ಈ ಕ್ರೂರ ದಾಳಿಯ ವಿರುದ್ಧ ವಿಶಾಲ ತಳಹದಿಯ ಪ್ರತಿಭಟನಾ ಕ್ರಮಗಳನ್ನು ಸಂಘಟಿಸಲು ಸಿಪಿಐ(ಎಂ) ಪೊಲಿಟ್‍ ಬ್ಯುರೊ  ಪಕ್ಷದ ಎಲ್ಲಾ ಘಟಕಗಳಿಗೆ ಕರೆ ನೀಡಿದೆ.

Leave a Reply

Your email address will not be published. Required fields are marked *