ಈಶ್ವರಪ್ಪಗೆ ಬಿ ರಿಪೋರ್ಟ್-ಅಧಿಕಾರ ದುರುಪಯೋಗದ ದುರ್ವಾಸನೆ

ಪೊಲೀಸರು ಬಿ ರಿಪೋರ್ಟ್ ನೀಡುವ ಮೂಲಕ ಕೆ.ಎಸ್‌.ಈಶ್ವರಪ್ಪರವರನ್ನು ಮುಕ್ತಗೊಳಿಸಲು ಯತ್ನಿಸಿರುವುದು ಆಶ್ಚರ್ಯ ಪಡಬೇಕಾದ ವಿಚಾರವೇನಲ್ಲ! ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಇಂತಹ ಅಧಿಕಾರ ದುರುಪಯೋಗದ ಸಂಭವಗಳಿರುವುದನ್ನು ಗಮನಿಸಿಯೇ ಈ ಪ್ರಕರಣವು ಸೇರಿದಂತೆ, ಗುತ್ತಿಗೆ ಕಾಮಗಾರಿಗಳಲ್ಲಿನ ಶೇ.40 ಕಮಿಷನ್ ವ್ಯವಹಾರ, ಸಾವಿರಾರು ಕೋಟಿ ರೂ.ಗಳ ಬಿಟ್ ಕಾಯಿನ್ ಹಗರಣ, ಗಂಗಾ ಕಲ್ಯಾಣ ಯೋಜನೆಯ ಸಾವಿರಾರು ಕೋಟಿ ರೂ.ಗಳ ಹಗರಣ, ಗೋಶಾಲೆಗಳ ಮೇವು ಹಗರಣ ದಿನ ನಿತ್ಯ ಕಂದಾಯ ಮತ್ತಿತರೆ ಇಲಾಖೆಗಳ ಫಲಾನುಭವಿಗಳ ಜೊತೆಗಿನ ನಿರಂತರ ಭ್ರಷ್ಟಾಚಾರ ಮುಂತಾದ ಈ ಎಲ್ಲವುಗಳನ್ನು ಸ್ವತಂತ್ರ ನ್ಯಾಯಾಂಗ ತನಿಖೆಗೊಳಪಡಿಸಬೇಕೆಂದು ಒತ್ತಾಯಿಸಿತ್ತು. ಈಗಲೂ ಈ ಎಲ್ಲ ಕುರಿತಂತೆ ಯಾವುದೇ ನ್ಯಾಯಾಂಗ ತನಿಖೆಗೊಳಪಡಿಸದೇ ಮುಂದುವರೆಯುತ್ತಿರುವ ಸರಕಾರದ ನಿರ್ಲಜ್ಜ ನಡೆ ತೀವ್ರ ಖಂಡನಾರ್ಹವಾಗಿದೆ.

ಬೆಳಗಾವಿಯ ಹಿಂಡಲಗಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದ 4 ಕೋಟಿ ರೂ. ಕಾಮಗಾರಿಯ ವೆಚ್ಚ ಮಂಜೂರು ಮಾಡಲು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪರವರು ಶೇ. 40 ಲಂಚದ ಬೇಡಿಕೆ ಇಟ್ಡಿದ್ದರೆಂದು ಸ್ವತಃ ಬಿಜೆಪಿಯ ಕಾರ್ಯಕರ್ತನಾಗಿದ್ದ ಮೃತ ಸಂತೋಷ ಪಾಟೀಲ ಬಹಿರಂಗವಾಗಿ ಆರೋಪಿಸಿದ್ದರು. ರಾಜ್ಯದಲ್ಲಿ ವ್ಯಾಪಕವಾಗಿರುವ ಇಂತಹ ಗುತ್ತಿಗೆ ಕಾಮಗಾರಿಗಳಲ್ಲಿ ಶೇ. 40 ಕಮಿಷನ್ ಇರುವುದನ್ನು ತಡೆಯಲು ಪ್ರಧಾನ ಮಂತ್ರಿಗಳಿಗೆ ಕರ್ನಾಟಕ ಗುತ್ತಿಗೆದಾರರ ಸಂಘವು ಬಹಿರಂಗವಾಗಿ ಮನವಿ ಮಾಡಿತ್ತು. ಮಾತ್ರವಲ್ಲಾ, ಮೃತ ಸಂತೋಷ ಪಾಟೀಲರು ಡೆತ್ ನೋಟ್ ಹೇಳಿಕೆಯು ಇತ್ತೆಂದು ಹೇಳಲಾಗಿತ್ತು! ಆದಾಗಲೂ ನಮ್ಮ ಪೊಲೀಸರಿಗೆ ಸಾಕ್ಷಿ ದೊರೆಯದಿರುವುದು ಆಶ್ಚರ್ಯಕರವಾಗಿದೆ.

ಸರಕಾರದ ಉನ್ನತ ಹುದ್ದೆಯಲ್ಲಿರುವವರ ಈ ಅಧಿಕಾರ ದುರುಪಯೋಗವು ಪೊಲೀಸರು ಮುಕ್ತವಾಗಿ ತನಿಖೆ ಮಾಡಲು ಅವಕಾಶಗಳನ್ನು ನೀಡುವುದಿಲ್ಲ. ಇದರಿಂದ, ನಿಷ್ಪಕ್ಷಪಾತ ತನಿಖೆಗೆ ಅವಕಾಶವಾಗುವುದಿಲ್ಲ. ಹೀಗಾಗಿ ಪೊಲೀಸರು ಆಡಳತಾರೂಢರ ಒತ್ತಡಕ್ಕೆ ಒಳಗಾಗಬೇಕಾಗುತ್ತದೆ. ಇಂತಹ ಅಧಿಕಾರ ದುರುಪಯೋಗವು ಕರ್ನಾಟಕ ಪೊಲೀಸ್ ಇಲಾಖೆಯ ಘನತೆಯನ್ನು ಕುಗ್ಗಿಸಲಿದೆ ಮತ್ತು ಜನತೆಯ ವಿಶ್ವಾಸವನ್ನು ಕುಗ್ಗಿಸಲಿದೆ ಎಂಬುದನ್ನು ಸರಕಾರ ಗಮನಿಸ ಬೇಕಾಗಿದೆ ಸಿಪಿಐ(ಎಂ) ಎಚ್ಚರಿಸಿದೆ.

ಈ ಕೂಡಲೇ ಈ ಪ್ರಕರಣವೂ ಸೇರಿದಂತೆ ಈಗಾಗಲೇ ಹೇಳಲಾದ ಹಗರಣಗಳು ಜಗತ್ತಿನ ಮುಂದೆ ಕರ್ನಾಟಕದ ಘನತೆಗೆ ತೀವ್ರ ಹಾನಿಯನ್ನುಂಟು ಮಾಡಿವೆ.

ಈಗಲಾದರೂ ಅವುಗಳನ್ನು ಸ್ವತಂತ್ರ ನ್ಯಾಯಾಂಗ ತನಿಖೆಗೊಳಪಡಿಸಿ ಸರಕಾರದ ಮೇಲಿನ ಕಳಂಕಗಳನ್ನು ತೊಳೆದುಕೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಮತ್ತೊಮ್ಮೆ ಬಲವಾಗಿ ಒತ್ತಾಯಿಸುತ್ತದೆ.

ಯು. ಬಸವರಾಜ, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ

Leave a Reply

Your email address will not be published. Required fields are marked *