ಜಮ್ಮು ಮತ್ತು ಕಾಶ್ಮೀರದಲ್ಲಿ ಎಲ್ಲ ನಿರ್ಬಂಧಗಳನ್ನು ತೆಗೆಯಬೇಕು

ಸುಪ್ರಿಂ ಕೋರ್ಟ್  ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕ ಸ್ವಾತಂತ್ರ್ಯಗಳ ಮೇಲೆ ಹೇರಿರುವ ನಿರ್ಬಂಧಗಳ ಬಗ್ಗೆ ಮಹತ್ವದ ಟಿಪ್ಪಣಿಗಳನ್ನು ಮಾಡಿದೆ ಎಂದು ಸಿಪಿಐ(ಎಂ) ಪೊಲಿಟ್‌ ಬ್ಯುರೊ ಹೇಳಿದೆ. ಇವು ಕೇಂದ್ರ ಸರಕಾರವು ಪರಿಸ್ಥಿತಿ ಸಾಮಾನ್ಯವಾಗಿದೆ ಎಂಬ ಸುಳ್ಳು ದಾವೆಗಳನ್ನು ದೇಶಕ್ಕೆ ಮತ್ತು ಜಗತ್ತಿನ ಮುಂದೆ ಬಿತ್ತರಿಸುತ್ತಿರುವುದನ್ನು ಹುಸಿಗೊಳಿಸಿರುವಂತವುಗಳು.

ಈ ತೀರ್ಪು ಬರುವ ಮುನ್ನಾದಿನ ಕೇಂದ್ರ ಸರಕಾರ ತನ್ನ ಈ ಅಧಿಕೃತ ದಾವೆಗಳನ್ನು ವಿದೇಶಿ ರಾಯಭಾರಿಗಳ ಒಂದು ಗುಂಪನ್ನು ಜಮ್ಮು ಮತ್ತು ಕಾಶ್ಮೀರದ ಒಂದು ಸೀಮಿತ ಪ್ರಹಸನಕಾರೀ ಪ್ರವಾಸಕ್ಕೆ ಒಯ್ಯುವ ಮೂಲಕ ಬಲಪಡಿಸುವ ಪ್ರಯತ್ನವನ್ನು ನಡೆಸಿತು. ಅಲ್ಲಿ ಅವರು ಸರಕಾರ ತೋರಿಸಿದ್ದನ್ನಷ್ಟೇ ನೋಡಬೇಕಾಗಿತ್ತು, ಹೇಳಿದ್ದನ್ನಷ್ಟೇ ಕೇಳಬೇಕಾಗಿತ್ತು. ಆದ್ದರಿಂದ ಅವರು ಯಾರೂ ಇನ್ನೂ ಜೈಲಿನಲ್ಲೇ ಇರುವ ಮೂವರು ಮಾಜಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಆಗಲಿಲ್ಲ. ನಿರ್ಬಂಧಗಳನ್ನು ಹೇರಿದ ಐದು ತಿಂಗಳುಗಳ ನಂತರ ಈ ದೇಶದ ಜನಗಳನ್ನು ಪ್ರತಿನಿಧಿಸುವ ರಾಜಕೀಯ ಮುಖಂಡರು, ಸಂಸತ್ ಸದಸ್ಯರು ಮತ್ತು ಪಕ್ಷಗಳು ಕಾಶ್ಮೀರಕ್ಕೆ ಭೇಟಿ ನೀಡದಂತೆ ಸುಮಾರಾಗಿ ನಿಷೇಧವನ್ನೇ ಹೇರಿರುವಾಗ ಇಂತಹ ಪ್ರವಾಸ ಭಾರತದ ಸಂಸತ್ತಿಗೆ ಮಾಡಿರುವ ಅವಮಾನ ಎಂದು ಪೊಲಿಟ್‌ಬ್ಯುರೊ ಹೇಳಿದೆ.

ಸುಪ್ರಿಂ ಕೋರ್ಟ್ ಇಂಟರ್ನೆಟ್ ಸೇವೆಗಳ ಮೇಲೆ ಅನಿರ್ದಿಷ್ಟ ನಿಷೇಧವನ್ನು ಟೀಕಿಸಿದೆ. ಇಂಟರ್ನೆಟ್ ಬಳಕೆ ಒಂದು ಸಂವಿಧಾನಿಕ ಹಕ್ಕು, ಮತ್ತು ವಾಕ್ ಸ್ವಾತಂತ್ರ್ಯ ಹಾಗು ಅಭಿವ್ಯಕ್ತಿ ಸ್ವಾತಂತ್ರ್ಯದ ಒಂದು ಭಾಗ ಎಂದು ಅದು ಹೇಳಿದೆ. ಸೆಕ್ಷನ್ ೧೪೪ನ್ನು ಭಿನ್ನ ಅಭಿಪ್ರಾಯವನ್ನು ದಮನ ಮಾಡುವ ಒಂದು ಸಾಧನವಾಗಿ ಮತ್ತೆ-ಮತ್ತೆ ಬಳಸಲು ಸಾಧ್ಯವಿಲ್ಲ ಎಂದೂ ಸುಪ್ರಿಂ ಕೋರ್ಟ್ ಹೇಳಿದೆ. ಇಂತಹ ಎಲ್ಲ ಆದೇಶಗಳ ಪರಾಮರ್ಶೆಯನ್ನು ಒಂದು ವಾರದ ಒಳಗೆ ಮಾಡಬೇಕು ಎಂದು ಆದೇಶಿಸುತ್ತ,  ಸರಕಾರ ಇಂತಹ ಆದೇಶಗಳನ್ನು ಸಾರ್ವಜನಿಕಗೊಳಿಸಬೇಕು, ಈ ಮೂಲಕ ಬಾಧಿತ ನಾಗರಿಕರು ಅವಕ್ಕೆ ಸವಾಲು ಹಾಕುವ ಹಕ್ಕು ಹೊಂದುವಂತಾಗಬೇಕು ಎಂದು ಹೇಳಿದೆ.

ಕೇಂದ್ರ ಸರಕಾರ ಈ ಎಲ್ಲ ನಿರ್ಬಂಧಗಳನ್ನು ತೆಗೆಯಬೇಕು, ಇಂಟರ್ನೆಟ್ ಸೇವೆಗಳನ್ನು ಪೂರ್ಣವಾಗಿ ತೆರೆಯಬೇಕು, ಸೆಕ್ಷನ್ ೧೪೪ನ್ನು ತೆಗೆಯಬೇಕು ಮತ್ತು ಕಾಶ್ಮೀರದ ಜನತೆಗೆ ವಾಕ್‌ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಜಾಸತ್ತಾತ್ಮಕ ಹಕ್ಕುಗಳು ಲಭ್ಯವಾಗುವಂತೆ ಮಾಡಬೇಕು ಎಂದು ಸಿಪಿಐ(ಎಂ) ಪೊಲಿಟ್‌ ಬ್ಯುರೊ ಆಗ್ರಹಿಸಿದೆ.

Leave a Reply

Your email address will not be published. Required fields are marked *