ಒಬ್ಬ ಕಮ್ಯುನಿಸ್ಟ್ ಪಥ ಪ್ರದರ್ಶಕ ಕಾಕಾ ಬಾಬು ಅಥವ ಮುಜಾಫರ್ ಅಹಮದ್

  • ಒಂದು ಶತಮಾನದ ಹಿಂದೆ, ರಾಷ್ಟ್ರೀಯ ಚಳುವಳಿಯ ಮಹತ್ವಾಕಾಂಕ್ಷೆಯು ಹಿಂದೂ ಪುನುರುಜ್ಜೀವನದ ರೂಪದಲ್ಲಿ ವ್ಯಕ್ತವಾಗುತ್ತಿದ್ದ ಅಂಶವು ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಂ ಯುವಕರು ಚಳುವಳಿಯ ಭಾಗವಾಗುವುದಕ್ಕೆ ದೊಡ್ಡ ಅಡಚಣೆಯಾಗಿದ್ದ ಪರಿಸ್ಥಿತಿಯಲ್ಲಿ ಧರ್ಮನಿರಪೇಕ್ಷತೆಯ ಮಾತು ನಿಷಿದ್ಧವಷ್ಟೇ ಅಲ್ಲ, ವಾಸ್ತವಿಕವಾಗಿ ಧರ್ಮನಿಂದನೆಯೆಂದೇ ಬಗೆಯುತ್ತಿದ್ದ  ಸನ್ನಿವೇಶದಲ್ಲಿ, ಚಾರಿತ್ರಿಕ ಭೌತವಾದ ಮತ್ತು ಕಮ್ಯುನಿಸಂನತ್ತ ಮುನ್ನಡೆಯುವುದು, ಮತ್ತು, ಬದುಕಿನ ಕೊನೆಯವರೆಗೂ ಅದಕ್ಕೆ ವಿಧೇಯರಾಗಿರುವುದು ಒಂದು ಮಹತ್ಸಾಧನೆಯೇ ಸರಿ. ಮುಜಾಫರ್ ಅಹಮದ್‌ರಿಂದ ಮಾತ್ರವೇ ಅದು ಸಾಧ್ಯ. ಮುಜಾಫರ್ ಅಹಮದ್ ಇತಿಹಾಸ ಎಂದರೇನು ಎಂದು ಅರಿತಿದ್ದರು. ಇತಿಹಾಸ ನಿರ್ಮಿಸುವುರಲ್ಲಿ ನೆರವಾದರು.

ಸಂಗಾತಿ ಮುಜಾಫರ್ ಅಹಮದ್ ಆಗಸ್ಟ್ ೫, ೧೮೮೯ ರಂದು ಬಾಂಗ್ಲಾದೇಶದ ನೌಖಾಲಿ ಜಿಲ್ಲೆಯ ಸಂದ್ವೀಪ್‌ನಲ್ಲಿ ತಂದೆ-ತಾಯಿಯ ಕಿರಿಯ ಮಗನಾಗಿ ಹುಟ್ಟಿದರು. ಅವರ ಶಾಲಾ ಶಿಕ್ಷಣ ಮೊದಲು ಮದ್ರಸಾದಲ್ಲಿ ಮತ್ತು ನಂತರ ೧೯೦೬ ರಲ್ಲಿ ಸಂದ್ವೀಪ್‌ನ ಕಾರ್ಗಿಲ್ ಪ್ರೌಢಶಾಲೆಯಲ್ಲಿ ನಡೆಯಿತು. ೧೯೧೦ ರಲ್ಲಿ ಮುಜಾಫರ್ ಅಹಮದ್ ಕಾರ್ಗಿಲ್ ಪ್ರೌಢಶಾಲೆಯನ್ನು ಬಿಟ್ಟು ನೌಖಾಲಿ ಜಿಲ್ಲಾ ಶಾಲೆಗೆ ಸೇರಿದರು. ೧೯೧೩ ರಲ್ಲಿ ಮ್ಯಾಟ್ರಿಕ್ಯುಲೇಷನ್ ಮುಗಿಸಿದ ಅವರು ಕಲ್ಕತ್ತಾದಲ್ಲಿ ಹೂಗ್ಲಿಯ ಮೊಹ್ಸಿನ್ ಕಾಲೇಜ್ ಸೇರಿಕೊಂಡರು.

ಮುಜಾಫರ್ ಅವರ ಮುಸ್ಲಿಂ, ಕಾರ್ಮಿಕ ವರ್ಗದ ಹಿನ್ನೆಲೆ ಅವರ ರಾಜಕೀಯ ಚಿಂತನೆಗಳನ್ನು ರೂಪಿಸಿದ ಒಂದು ಪ್ರಧಾನ ಅಂಶವಾಗಿತ್ತು. ೧೯೧೦ ರ ದಶಕದ ಕೊನೆಯ ಭಾಗ ಮತ್ತು ೧೯೨೦ ರ ದಶಕದ ಆರಂಭದಲ್ಲಿ ಅವರು ಪಟ್ಟಣ ಪ್ರದೇಶದ ಬಡವರ ನಡುವಿನಲ್ಲಿ ನಡೆಸಿದ ಕೆಲಸಕಾರ್ಯಗಳು ಮುಜಾಫರ್ ಅವರ ರಾಜಕೀಯ ಬದಲಾವಣೆಗೆ ಕಾರಣವಾಯಿತು. ಅವರ ಬೌದ್ಧಿಕ ಸಾಮಾಜಿಕ ಪರಿಸರ ಮತ್ತು ಜನಸಾಮಾನ್ಯರ ವಿಪ್ಲವಗಳ ನಡುವಿನ ಮುಖಾಮುಖಿಯು ಅವರನ್ನು ಎಡ ರಾಜಕೀಯದತ್ತ ನೂಕಿತು. ಅವರು ಕಲ್ಕತ್ತಾಕ್ಕೆ ಬಂದು ಬರಹಗಾರನಾಗಬೇಕೆಂದು ಆರಂಭದಲ್ಲಿ ಬಯಸಿದರೂ ನಗರದ ವಿಶಾಲವಾದ ಸಂದರ್ಭ ಹಾಗೂ ಅವರದ್ದೇ ಆದ ಹೋರಾಟಗಳು ಅವರನ್ನು ಒಬ್ಬ ರಾಜಕೀಯ ಕಾರ್ಯಕರ್ತನನ್ನಾಗಿ ಪರಿವರ್ತಿಸಿತು. ಯುದ್ಧಾನಂತರದ ೧೯೧೭ರ ಮಹಾನ್ ಅಕ್ಟೋಬರ್ ಸಮಾಜವಾದಿ ಕ್ರಾಂತಿ, ಖಿಲಾಫತ್ ಮತ್ತು ಅಸಹಕಾರ ಚಳುವಳಿಗಳು, ಈ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸಿದವು.

ಮುಜಾಫರ್ ಅಹಮದ್ ಅವರು ನಜ್ರುಲ್ ಇಸ್ಲಾಂ ಅವರ ಜತೆಗೂಡಿ ಜಂಟಿಯಾಗಿ ನವ್‌ಯುಗ್ ಬಂಗಾಳಿ ಪತ್ರಿಕೆಯನ್ನು ಸಂಪಾದಿಸಿದರು. ಈ ಅವಧಿಯಲ್ಲಿ, ಅವರ ಗಮನ ಕಾರ್ಮಿಕರ ಸಮಸ್ಯೆಗಳತ್ತ ಮತ್ತು ಅದೇ ಸಮಯದಲ್ಲಿ ಏಕಕಾಲದಲ್ಲಿ ಮಾರ್ಕ್ಸ್‌ವಾದಿ ಸಾಹಿತ್ಯದತ್ತ ಹರಿಯಿತು. ಅವರು ಭಾರತದ ಶ್ರಮಿಕರ ಬದುಕಿನ ಬಗ್ಗೆ ವಿಶೇಷವಾಗಿ ನಾವಿಕರ ಬದುಕಿನ ಬಗ್ಗೆ ಮತ್ತು ಕಾರ್ಮಿಕ ವರ್ಗದ ರಾಜಕೀಯ ಹಾಗೂ ಆರ್ಥಿಕ ಬೇಡಿಕೆಗಳ ಬಗ್ಗೆ ಅನೇಕ ಲೇಖನಗಳನ್ನು ಬರೆದರು. ೧೯೨೨ ರಲ್ಲಿ, ನಜ್ರುಲ್ ಇಸ್ಲಾಂ ಅವರು ಧೂಮಕೇತು ಎಂಬ ಎರಡು ತಿಂಗಳಿಗೊಮ್ಮೆ ಪ್ರಕಟವಾಗುವ ನಿಯತಕಾಲಿಕವನ್ನು ಆರಂಭಿಸಿದರು.. ಅದರಲ್ಲಿ ಮುಜಾಫರ್ ಭಾರತದ ಹಲವಾರು ರಾಜಕೀಯ ಸಮಸ್ಯೆಗಳ ಕುರಿತು ಲೇಖನಗಳನ್ನು ಬರೆದರು. ತಮ್ಮ ರಾಜಕೀಯ ಜೀವನದ ಆರಂಭದಿಂದಲೂ, ಅವರು ಕಾರ್ಮಿಕರನ್ನು ಸಂಘಟಿಸುವ ಮತ್ತು ಕಮ್ಯುನಿಸ್ಟ್ ಚಿಂತನೆಗಳನ್ನು ಪ್ರಸಾರ ಮಾಡುವ ಕಾರ್ಯಕ್ಕೆ ಹೆಚ್ಚು ಒತ್ತುಕೊಟ್ಟರು.

ಮುಜಾಫರ್ ಅಹಮದ್ ಅವರು ೧೯೧೮ ರಲ್ಲೇ ಪೂರ್ಣಾವಧಿ ಕಾರ್ಯಕರ್ತರಾದರು ಮತ್ತು ತಮ್ಮ ಕೊನೆಯ ಉಸಿರಿರುವ ತನಕ, ಡಿಸೆಂಬರ್ ೧೮, ೧೯೭೩ ರವರೆಗೆ ಅದೇ ಸ್ಥಾನದಲ್ಲಿ ಉಳಿದುಕೊಂಡಿದ್ದರು. ಪೂರ್ಣಾವಧಿ ಕಾರ್ಯಕರ್ತರಾಗಿ ಅವರು ಮೊದಲು ಕೆಲಸ ಮಾಡಿದ್ದು ಬಂಗಾಳ ಮುಸ್ಲಿಂ ಸಾಹಿತ್ಯ ಸಂಘಕ್ಕಾಗಿ. ರಾಜಕೀಯದತ್ತ ಮುಖಮಾಡಲು ನಿರ್ಧರಿಸಿದ ಒಂದೂವರೆ ವರ್ಷದೊಳಗೆ, ನವಂಬರ್ ೧೯೨೧ ರಲ್ಲಿ ಅವರು ಮಾರ್ಕ್ಸ್‌ವಾದಿ ಸಾಹಿತ್ಯದ ಸಂಪರ್ಕಕ್ಕೆ ಬಂದರು. ಅವರಿಗೆ ಕಾನೂನುಬಾಹಿರವಾಗಿ ಕೊಂಡುಕೊಳ್ಳು ಸಾಧ್ಯವಾದ ಮೊದಲ ಮಾರ್ಕ್ಸ್‌ವಾದಿ ಪುಸ್ತಕಗಳೆಂದರೆ ಬೋಲ್ಶೆವಿಕ್‌ರು ರಾಜ್ಯಾಧಿಕಾರವನ್ನು ಉಳಿಸಿಕೊಂಡಾರೆಯೇ; ಎಡ ಪಂಥೀಯ ಕಮ್ಯುನಿಸಂ, ಒಂದು ಶೈಶವಾವಸ್ಥೆಯ ವ್ಯಾಧಿ; ಜನತೆಯ ಮಾರ್ಕ್ಸ್ ಮತ್ತು ಬಂಡವಾಳದ ಸಂಕ್ಷಿಪ್ತ ಕೃತಿ ಗಳಾಗಿದ್ದವು. ಮುಜಾಫರ್ ಅವರು ಮಾರ್ಕ್ಸ್‌ವಾದ- ಲೆನಿನ್‌ವಾದಕ್ಕೆ ಹೀಗೆ ತೆರೆದುಕೊಂಡರು. ರಾಷ್ಟ್ರೀಯ ಚಳುವಳಿಯ ಮಹತ್ವಾಕಾಂಕ್ಷೆಯು ಹಿಂದೂ ಪುನುರುಜ್ಜೀವನದ ರೂಪದಲ್ಲಿ ವ್ಯಕ್ತವಾಗುತ್ತಿದ್ದ ಅಂಶವು ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಂ ಯುವಕರು ಚಳುವಳಿಯ ಭಾಗವಾಗುವುದಕ್ಕೆ ದೊಡ್ಡ ಅಡಚಣೆಯಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಧರ್ಮನಿರಪೇಕ್ಷತೆಯ ಮಾತು ನಿಷಿದ್ಧವಷ್ಟೇ ಅಲ್ಲ, ಅದು ವಾಸ್ತವಿಕವಾಗಿ ಧರ್ಮನಿಂದನೆಯಾಗುತ್ತಿತ್ತು. ಈ ಸನ್ನಿವೇಶದಲ್ಲಿ, ಚಾರಿತ್ರಿಕ ಭೌತವಾದ ಮತ್ತು ಕಮ್ಯುನಿಸಂನತ್ತ ಮುನ್ನಡೆಯುವುದು, ಮತ್ತು , ಬದುಕಿನ ಕೊನೆಯವರೆಗೂ ಅದಕ್ಕೆ ವಿಧೇಯರಾಗಿರುವುದು ಮುಜಾಫರ್ ಅಹಮದ್ ಮಾತ್ರವೇ ಸಾಧಿಸಬಹುದಾದ ಮಹಾಸಾಧನೆ.

ಭಾರತದ ವಿಸ್ತಾರವಾದ ವಸಾಹತುಶಾಹಿ-ಪಾಳೇಗಾರಿ ಪ್ರದೇಶದಲ್ಲಿ ಕಮ್ಯುನಿಸ್ಟ್ ಪಕ್ಷವನ್ನು ಸಂಘಟಿಸಲು ಮುಜಾಫರ್ ಅಹಮದ್ ಅವರು ಓಡಾಡಿದರು. ಅದು ಎದೆಗುಂದಿಸುವ ಸವಾಲಾಗಿತ್ತು ಎಂದರಷ್ಟೇ ಸಾಲದು. ತೊಡಕುಗಳು ಮುಜಾಫರ್ ಅಹಮದ್ ಅವರ ನಿರಂತರ ಒಡನಾಡಿಯಾಗಿದ್ದವು. ಅವರು ತಮ್ಮ ಜೀವಿತಾವಧಿಯಲ್ಲಿ ೨೦ ವರ್ಷಗಳಿಗಿಂತಲೂ ಹೆಚ್ಚು ಕಾಲ ಬ್ರಿಟಿಷ್ ಹಾಗೂ ಸ್ವತಂತ್ರ ಭಾರತದ ಜೈಲುಗಳಲ್ಲಿ ಕಳೆದರು ಮತ್ತು ೮ ವರ್ಷಗಳ ಕಾಲ ತೀರ ಕಷ್ಟದ ಸಂದರ್ಭಗಳಲ್ಲಿ ಅವರು ಭೂಗತರಾಗಿದ್ದರು. ಅವರನ್ನು ಮೊದಲು ಬಂಧಿಸಿದ್ದು ೧೮೧೮ ರ ನಿಯಂತ್ರಣ ಕಾಯಿದೆ  ೩ ರ ಅಡಿಯಲ್ಲಿ ಮತ್ತು ತದನಂತರ ಕಾನ್ಪುರ್ ಬೋಲ್ಶೆವಿಕ್ ಪಿತೂರಿ ಪ್ರಕರಣದಲ್ಲಿ. ತೀವ್ರ ಅನಾರೋಗ್ಯದ ಕಾರಣ ಬಿಡುಗಡೆಯಾದ ಕೂಡಲೇ ಕಾನ್ಪುರ್ ಕಮ್ಯುನಿಸ್ಟ್ ಸಮ್ಮೇಳನದಲ್ಲಿ ಭಾಗವಹಿಸಿದ್ದರು; ಕಾನ್ಪುರದಿಂದ ಹಿಂತಿರುಗಿದ ಕೂಡಲೇ ಕಮ್ಯುನಿಸ್ಟ್ ಪಕ್ಷವನ್ನು ಕಟ್ಟುವ ಹೊಣೆಯನ್ನು ಮುಜಾಫರ್ ವಹಿಸಿಕೊಂಡರು. ಲಂಗಾಲ್ ಪತ್ರಿಕೆ(ನಂತರ ಅದು ಗಣಬಾಣಿ ಹೆಸರಿಗೆ ಬದಲಾಯಿತು)ಯ ಸಂಪಾದಕತ್ವವನ್ನೂ ವಹಿಸಿಕೊಂಡರು; ಅದರಲ್ಲಿ ಮಾರ್ಕ್ಸ್‌ವಾದಿ ತತ್ವದ ಸಮಸ್ಯೆಗಳು, ಅಂತರ್ರಾಷ್ಟ್ರೀಯ ಕಮ್ಯುನಿಸ್ಟ್ ಚಳುವಳಿ ಮತ್ತು ಕ್ರಾಂತಿಕಾರಿ ಕಾರ್ಮಿಕ ವರ್ಗದ ಚಳುವಳಿಯ ಬಗ್ಗೆ ಚರ್ಚೆ ಮಾಡಲು ಹೆಚ್ಚಿನ ಮಹತ್ವ ನೀಡಿದರು.

ಮೇ ೧೯೨೭ ರಲ್ಲಿ ಬೊಂಬಾಯಿಯಲ್ಲಿ ನಡೆದ ಕಮ್ಯುನಿಸ್ಟರ ಸಭೆಯಲ್ಲಿ ಮುಜಾಫರ್ ಅಹಮದ್ ಭಾಗವಹಿಸಿದರು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಯ್ಕೆಯಾದರು. ಅವರು ಕಾನ್ಪುರದಲ್ಲಿ ಮಾರ್ಚ್ ೧೯೨೭ ರಲ್ಲಿ ನಡೆದ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್(ಏಐಟಿಯುಸಿ) ಸಮ್ಮೇಳನದಲ್ಲಿಯೂ ಭಾಗವಹಿಸಿದರು ಮತ್ತು ಏಐಟಿಯುಸಿಯ ಉಪಾಧ್ಯಕ್ಷರಾಗಿ ಚುನಾಯಿತರಾದರು. ಬಂಗಾಳ ಕಾರ್ಮಿಕರ ಮತ್ತು ರೈತರ ಪಕ್ಷ(೧೯೨೮)ದ ಮೂರನೇ ಸಮ್ಮೇಳನದಲ್ಲಿ ಅವರು ಅದರ ಪ್ರಧಾನ ಕಾರ್ಯದರ್ಶಿಯಾಗಿ ಚುನಾಯಿಸಲ್ಪಟ್ಟರು. ಜನವರಿ ೧೯೨೯ ರಲ್ಲಿ ಕಮ್ಯುನಿಸ್ಟರ ಗುಪ್ತ ಸಭೆಯೊಂದು ಕಲ್ಕತ್ತಾದಲ್ಲಿ ನಡೆದು ಕಮ್ಯುನಿಸ್ಟ್ ಅಂತರ್ರಾಷ್ಟ್ರೀಯದ ಆರನೇ ಮಹಾಧಿವೇಶನದ ನಿರ್ಣಯಗಳು ಮತ್ತು ತೀರ್ಮಾನಗಳ ಕುರಿತು ಚರ್ಚಿಸಿತು. ಆ ಸಭೆಯ ಮುಂದಾಳತ್ವ ವಹಿಸಿದವರಲ್ಲಿ ಮುಜಾಫರ್ ಅಹಮದ್ ಅವರೂ ಒಬ್ಬರು.

ಮೀರತ್ ಪಿತೂರಿ ಪ್ರಕರಣದಲ್ಲಿ ಮುಜಾಫರ್ ಅಹಮದ್ ಅವರು ಪ್ರಮುಖ ಆರೋಪಿಯಾಗಿದ್ದರು. ಅವರು ತಮ್ಮ ಜೈಲುವಾಸವನ್ನು ಉತ್ತರಪ್ರದೇಶದ ನೈನಿ ಸೆಂಟ್ರಲ್ ಜೈಲಿನಲ್ಲಿ ಮತ್ತು ನಂತರ ಡಾರ್ಜಿಲಿಂಗ್, ಬರ್ದ್ವಾನ್ ಮತ್ತು ಫರೀದ್‌ಪುರ್ ಜೇಲುಗಳಲ್ಲಿ ಏಕಾಂತ ಜೈಲುವಾಸ ಅನುಭವಿಸಿದರು. ಜೈಲಿನೊಳಗಡೆ ಅವರು ಎರಡು ಬಾರಿ ಉಪವಾಸ ಮುಷ್ಕರ ಮಾಡಿ ಎಲ್ಲಾ ರಾಜಕೀಯ ಖೈದಿಗಳಿಗೆ ದೊರೆಯುವ ಸುದ್ದಿಪತ್ರಿಕೆಗಳು, ನಿಯತಕಾಲಿಕೆಗಳು ಮತ್ತು ಪತ್ರ ಬರೆಯುವ ಹಕ್ಕುಗಳನ್ನು ಪಡೆದರು. ಜೈಲು ಶಿಕ್ಷೆ ಮುಗಿದಮೇಲೆ ಫರೀದ್‌ಪುರ ಜೈಲಿನಿಂದ ಅವರು ಬಿಡುಗಡೆ ಪಡೆದರು. ಜೈಲಿನಿಂದ ಬಿಡುಗಡೆಯಾದ ಮೇಲೆ ತಮ್ಮ ಹುಟ್ಟೂರಾದ ಸಂದ್ವೀಪ್‌ನಲ್ಲಿ ಸ್ಥಾನಬದ್ಧತೆಗೆ ಒಳಗಾಗಿ ಬಂಧಿಸಲ್ಪಟ್ಟರು. ಆನಂತರ, ಮಿಡ್ನಾಪುರ್ ಜಿಲ್ಲೆಯಲ್ಲಿ ಸ್ಥಾನಬದ್ದತೆಯಲ್ಲಿದ್ದು ಅಂತಿಮವಾಗಿ ಜೂನ್ ೨೪, ೧೯೩೬ ರಲ್ಲಿ ಬಿಡುಗಡೆ ಪಡೆದರು.

ಬಿಡುಗಡೆಯಾದ ನಂತರ ಅವರು ಕಿಸಾನ್ ಸಭಾ ಬೆಳೆಸುವತ್ತ ವಿಶೇಷ ಗಮನ ನೀಡಿದರು. ಅಖಿಲ ಭಾರತ ಕಿಸಾನ್ ಸಭಾ(ಎಐಕೆಎಸ್) ಕಟ್ಟಿಬೆಳೆಸಲು ಮುತುವರ್ಜಿ ವಹಿಸಿದರು. ಎಐಕೆಎಸ್ ಮೊದಲ ಸಮ್ಮೇಳನದಲ್ಲಿ ಅವರು ಅದರ ಉಪಾಧ್ಯಕ್ಷರಾಗಿ ಆಯ್ಕೆಯಾದರು. ೧೯೩೬ ರಲ್ಲಿ ನೂರಾರು ಸಂಗಾತಿಗಳು ಬಂಗಾಳದ ಜೈಲಿನಿಂದ ಹೊರ ಬಂದಮೇಲೆ ಅವರೆಲ್ಲರ ಜತೆ ಸಂಪರ್ಕ ಬೆಳೆಸಿ ಜಿಲ್ಲೆಗಳಲ್ಲಿ ಪಕ್ಷ ಕಟ್ಟುವ ನಿರ್ದಿಷ್ಟ ಕೆಲಸವನ್ನು ಅವರಿಗೆ ನೀಡಿದರು. ೧೯೩೭ ರಲ್ಲಿ, ರಾಜಕೀಯ ಖೈದಿಗಳ ಬಿಡುಗಡೆಗಾಗಿ  ಮತ್ತು ಅಂಡಮಾನಿನಲ್ಲಿ ಬಂಧಿತರಾಗಿದ್ದ ರಾಷ್ಟ್ರೀಯ ಕ್ರಾಂತಿಕಾರಿಗಳನ್ನು ತಾಯ್ನಾಡಿಗೆ ಕರೆತರುವ ಚಳುವಳಿಯಲ್ಲಿ ಮುಜಾಫರ್ ಪಾಲ್ಗೊಂಡಿದ್ದರು. ೧೯೩೭ ರಿಂದ ೧೯೪೩ ರವರೆಗೆ ದೇಶಾದ್ಯಂತ ಪಕ್ಷ ಕಟ್ಟಲು ಶ್ರಮಿಸಿದರು. ಭಾರತದಲ್ಲಿ ಮಾತ್ರವೇ ಅಲ್ಲ, ನೆರೆಹೊರೆಯ ದೇಶಗಳಾದ ನೇಪಾಳ ಮತ್ತು ಬರ್ಮಾಗಳಲ್ಲಿಯೂ ಕಮ್ಯುನಿಸ್ಟ್ ಪಕ್ಷ ಕಟ್ಟಿಬೆಳೆಸಲು ಅವರು ವಿಶೇಷ ಪ್ರಯತ್ನಗಳನ್ನು ಮಾಡಿದರು.

ಸ್ವಾತಂತ್ರ್ಯಾ ನಂತರ, ಕಮ್ಯುನಿಸ್ಟ್ ಪಕ್ಷವನ್ನು ಕಾನೂನುಬಾಹಿರವೆಂದು ೧೯೪೮ ರಲ್ಲಿ ಘೋಷಿಸಲಾಯಿತು ಮತ್ತು ಮುಜಾಫರ್ ಅಹಮದ್ ಅವರನ್ನು ಭಾರತದ ರಕ್ಷಣಾ ಕಾಯಿದೆಯಡಿಯಲ್ಲಿ ಬಂಧಿಸಲಾಯಿತು. ೬ ತಿಂಗಳ ನಂತರ ಬಿಡುಗಡೆಯಾದ ಕೂಡಲೇ ಮತ್ತೆ ಪ್ರತಿಬಂಧಕ ಕಾಯಿದೆ ಅಡಿ ಅವರನ್ನು ಬಂಧಿಸಿದರು. ಅಲಿಪುರ್ ಜೈಲಿನಿಂದ ಬಿಡುಗಡೆಯಾದಾಗ ಅವರನ್ನು ಕಲ್ಕತ್ತಾದಿಂದ ಗಡೀಪಾರು ಮಾಡಲಾಯಿತು. ಆಗ ಅವರು ನಬಾದ್ವೀಪದಲ್ಲಿ ಉಳಿದುಕೊಂಡು ಅಲ್ಲಿ ಭೂಗತರಾಗಿಯೇ ಕೆಲಸ ಮಾಡಿದರು. ೧೯೪೦ ರಲ್ಲಿ, ಪಕ್ಷದ ಭೂಗತ ಕಛೇರಿಯಲ್ಲಿ ಕೆಲಸ ಮಾಡುವಾಗ ಅವರ ಸೋದರ ಸಂಬಂಧಿಗಳು ಕರೆಯುವಂತೆ ಕಾಕಾ ಬಾಬು ಎಂದು ಚಿರಪರಿಚಿತರಾದರು. ವಾತ್ಸಲ್ಯದಿಂದ ಮತ್ತು ಗೌರವದಿಂದ ಪಕ್ಷದ ಒಳಗಡೆ ಹಾಗೂ ಹೊರಗಡೆಯೂ ಅವರನ್ನು ಕಾಕಾ ಬಾಬು ಎಂದೇ ಎಲ್ಲರೂ ಕರೆಯುತ್ತಿದ್ದರು.

ಮುಜಾಫರ್ ಅಹಮದ್ ಅವರು ಹೆಚ್ಚು ಆದ್ಯತೆ ನೀಡುತ್ತಿದ್ದ ಎರಡು ಮುಖ್ಯ ಕೆಲಸಗಳು ಯಾವುವು ಎಂದರೆ: ಪುಸ್ತಕಗಳು, ವರ್ತಮಾನ ಪತ್ರಿಕೆಗಳು, ನಿಯತಕಾಲಿಕೆಗಳು ಮತ್ತು ಸುದ್ದಿಪತ್ರಿಕೆಗಳ ಮೂಲಕ ಮಾರ್ಕ್ಸ್‌ವಾದಿ ಚಿಂತನೆಗಳನ್ನು ಹಾಗೂ ಸಿದ್ಧಾಂತವನ್ನು ಹರಡುವುದು ಮತ್ತು ಜನಸಮುದಾಯದ ಜತೆಯಲ್ಲಿ ಸಾಧ್ಯವಾದಷ್ಟೂ ಅತ್ಯಂತ ಹತ್ತಿರದ ಸಂಪರ್ಕವನ್ನು ಇಟ್ಟುಕೊಳ್ಳುವುದು ಹಾಗೂ ಬಹು ವ್ಯಾಪಕವಾದ ಜನವಿಭಾಗಗಳೊಂದಿಗೆ ಕೆಲಸ ಮಾಡುವುದು. ಗಣಬಾಣಿಯಲ್ಲಿ ಬರೆಯುತ್ತಾ(೧೯೩೫) ಅವರು ಯುವಜನರಿಗೆ ಸಂಪತ್ತು, ಜ್ಞಾನ, ಭೂಒಡೆತನಮತ್ತು ಜಾತಿಯ ಕುಲೀನತೆಯನ್ನು ತೊರೆದು ಯುವಜನರು ತಾವು ಬಯಸುವ ಸ್ವಾತಂತ್ರ್ಯ ಸಿಗಬೇಕೆಂದರೆ, ರೈತರು ಮತ್ತು ಕಾರ್ಮಿಕರ ನಡುವೆ ಅವರಲ್ಲಿ ಒಬ್ಬರಾಗಿ ಕೆಲಸ ಮಾಡಬೇಕು,ಂದು ಹೀಗೆ ಒತ್ತಾಯ ಮಾಡುತ್ತಿದ್ದರು:  ಕ್ರಾಂತಿಯನ್ನು ಸಾಧ್ಯಗೊಳಿಸುವ ಸಾಮರ್ಥ್ಯ ಹೊಂದಿರುವ ಕಮ್ಯುನಿಸ್ಟ್ ಪಕ್ಷವನ್ನು ಕಟ್ಟಬೇಕೆಂದರೆ ಅದಕ್ಕೆ ಅಗತ್ಯವಾದ ಮೊದಲ ಷರತ್ತು: ಕಾರ್ಮಿಕರು ಅದರಲ್ಲೂ ಯುವಜನರು ಜನಸಮುದಾಯದ ನಡುವೆ ಸದಾ ಕೆಲಸ ಮಾಡುತ್ತಿರಬೇಕು ಎಂದು ನಿರಂತರವಾಗಿ ಕಾರ್ಮಿಕರ ಬಳಿ ಹೇಳುತ್ತಿದ್ದರು.

ಪಕ್ಷ ಪ್ರಾರಂಭ ಆದಾಗಿನಿಂದ ನಡೆದ ಪಕ್ಷದ ಮಹಾಧಿವೇಶನಗಳಲ್ಲಿ ಎರಡನ್ನು ಬಿಟ್ಟು ಮುಜಾಫರ್ ಅಹಮದ್ ಅವರು ಎಲ್ಲದರಲ್ಲಿಯೂ ಭಾಗವಹಿಸಿದ್ದರು. ೧೯೬೪ ರ ಕಲ್ಕತ್ತಾ ಮಹಾಧಿವೇಶನದ ಸಮಯದಲ್ಲಿ ಅವರು ಜೈಲಿನಲ್ಲಿದ್ದರು ಹಾಗೂ ೧೯೭೨ ರ ಮಧುರೈ ಮಹಾಧಿವೇಶನದ ಸಂದರ್ಭದಲ್ಲಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಮೀರತ್ ಪಿತೂರಿ ಪ್ರಕರಣದಲ್ಲಿ ಬಂಧನವಾಗಿ ಜೈಲಿನಲ್ಲಿದ್ದರೂ ಅವರು ಕೇಂದ್ರ ಸಮಿತಿಗೆ ಆಯ್ಕೆಯಾಗುತ್ತಿದ್ದರು ಮತ್ತು ಸಾಯುವ ತನಕವೂ ಅವರು ಅದರ ಸದಸ್ಯರಾಗಿಯೇ ಇದ್ದರು. ಪಕ್ಷದ ಪತ್ರಿಕೆಗಳು ಮತ್ತು ಪುಸ್ತಕಗಳ ಪ್ರಕಟಣೆಗೆ ಮಾರ್ಗದರ್ಶನ ನೀಡುವಲ್ಲಿ ಮುಜಾಫರ್ ಮುಖ್ಯ ಪಾತ್ರ ವಹಿಸಿದ್ದರು. ಕಮ್ಯುನಿಸ್ಟ್ ಪಕ್ಷಕ್ಕೆ ತನ್ನದೇ ಆದ ಒಂದು ಮುಖವಾಣಿ(ಪತ್ರಿಕೆ) ಇಲ್ಲದೇ ಇದ್ದರೆ ಅದು ಬೆಳೆಯಲು ಸಾಧ್ಯವಿಲ್ಲ ಎಂಬುದನ್ನು ಸದಾ ಒತ್ತಿ ಹೇಳುತ್ತಿದ್ದರು. ಗಣಶಕ್ತಿ ಮುದ್ರಣಾಲಯ ಬೆಳೆಸುವುದರಲ್ಲಿ ಅವರು ಮಾರ್ಗದರ್ಶಕ ಚೇತನವಾಗಿದ್ದರು. ನ್ಯಾಷನಲ್ ಬುಕ್ ಏಜೆನ್ಸಿಯ ವ್ಯವಸ್ಥಾಪಕರಲ್ಲಿ ಅವರೂ ಒಬ್ಬರಾಗಿದ್ದರು. ಪಕ್ಷದ ಹಲವಾರು ಪತ್ರಿಕೆಗಳಾದ ಜನಯುದ್ಧ, ದಿನ ಪತ್ರಿಕೆ ಸ್ವಾಧೀನತಾ, ಸಂಜೆ ಪತ್ರಿಕೆ ಗಣಶಕ್ತಿ, ವಾರ ಪತ್ರಿಕೆ ದೇಶ್ ಹಿತೈಷಿ, ಮಾಸ ಪತ್ರಿಕೆ ನಂದನ್ ಮತ್ತು ಏಕ್ ಸಾಥಿ(ಮಹಿಳಾ ಸಂಘಟನೆಯ ಪತ್ರಿಕೆ) ಮುಂತಾದವುಗಳನ್ನು ನಡೆಸುವ ನಿಟ್ಟಿನಲ್ಲಿ ಮಾರ್ಗದರ್ಶನ ಮತ್ತು ಸಲಹೆಗಳನ್ನು ನೀಡುತ್ತಿದ್ದರು.

ಮುಜಾಫರ್ ಅಹಮದವರು ಅಪಾರ ಆಸಕ್ತಿಯ ಓದುಗರಾಗಿದ್ದರು ಮತ್ತು ಅವರ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಹೆಚ್ಚೆಚ್ಚು ಓದುವಂತೆ ಪ್ರೇರೇಪಿಸುತ್ತಿದ್ದರು. ತಮ್ಮ ದಿನನಿತ್ಯದ ಬಿಡುವಿಲ್ಲದ ಕೆಲಸಗಳ ನಡುವೆಯೂ ಅವರು ಸಂಗಾತಿಗಳ ವೈಯಕ್ತಿಕ ಸಮಸ್ಯೆಗಳ ಬಗ್ಗೆ ತಾಳ್ಮೆಯಿಂದ ಆಲಿಸಲು ಸಮಯ ನೀಡುತ್ತಿದ್ದರು, ಅನಾರೋಗ್ಯದಿಂದ ನರಳುತ್ತಿರುವವರ ದೇಹಸ್ಥಿತಿಯ ಬಗ್ಗೆ ವಿಚಾರಿಸುತ್ತಿದ್ದರು ಹಾಗೂ ಅವರಿಗೆ ಸರಿಯಾದ ಚಿಕಿತ್ಸೆ ಕೊಡಿಸುವ ಬಗ್ಗೆ ವ್ಯವಸ್ಥೆ ಮಾಡುತ್ತಿದ್ದರು, ಜಿಲ್ಲಾ ಸಂಘಟನಾ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತಿದ್ದರು ಮತ್ತು ಹುತಾತ್ಮರಾದ ವೀರ ಸಂಗಾತಿಗಳ ಕುಟುಂಬದವರಿಗೆ ಸಾಂತ್ವನ ನೀಡುತ್ತಿದ್ದರು.

ತಮ್ಮ ಬದುಕಿನುದ್ದಕ್ಕೂ ಮುಜಾಫರ್ ಅವರು ಮಾರ್ಕ್ಸ್‌ವಾದ ಮತ್ತು ಲೆನಿನ್‌ವಾದಕ್ಕೆ ಅತ್ಯಂತ ವಿನೀತರೂ ಹಾಗೂ ವಿಧೇಯರೂ ಆಗಿದ್ದರು. ವಿನೀತರಾಗಿದ್ದರು ಆದರೆ ಬಲ ಸಮಯಸಾಧಕತನ ಹಾಗೂ ಎಡ-ಪಂಥೀಯವಾದ ಈ ಎರಡರ ವಿರುದ್ಧ ಅಷ್ಟೇ ದೃಢವಾಗಿ ಹೋರಾಡುತ್ತಿದ್ದರು. ಪಕ್ಷದ ಶಿಸ್ತಿನ ವಿಷಯದಲ್ಲಿ ಅವರು ಕಠೋರರಾಗಿದ್ದರು.; ಶಿಸನ್ನು ನಿರ್ದಾಕ್ಷಿಣ್ಯದಿಂದ, ನಿರ್ದಯವಾಗಿ ಜಾರಿ ಮಾಡುತ್ತಿದ್ದರು. ಇದು ಅವರಲ್ಲಿ ಬೇರೂರಿದ್ದ ಲೆನಿನ್‌ವಾದ.

ಮುಜಾಫರ್ ಅಹಮದ್ ಇತಿಹಾಸ ಎಂದರೇನು ಎಂದು ಅರಿತಿದ್ದರು. ಇತಿಹಾಸ ನಿರ್ಮಿಸುವುರಲ್ಲಿ ನೆರವಾದರು. ಆ ಇತ್ತಿಹಾಸ ಇನ್ನೂ ರೂಪುಗೊಳ್ಳುತ್ತಲೇ ಇದೆ.

 

ಕನ್ನಡಕ್ಕೆ: ಟಿ. ಸುರೇಂದ್ರ ರಾವ್

Leave a Reply

Your email address will not be published. Required fields are marked *