ಅಖಿಲ ಭಾರತ ಕೇಂದ್ರದ ರಚನೆ

  • 1920ರಲ್ಲೇ ಕಮ್ಯುನಿಸ್ಟ್ ಪಕ್ಷದ ಸ್ಥಾಪನೆಯಾಗಿದ್ದಾಗ್ಯೂ, ಆ ಇಡೀ ದಶಕದ ಉದ್ದಕ್ಕೂ, ನಿರಂತರವಾದ ಒಂದು ಕೇಂದ್ರ ನಾಯಕತ್ವವಿಲ್ಲದೇ ಅದು ತನ್ನ ಕೆಲಸಗಳನ್ನು ಮಾಡಿಕೊಂಡು ಹೋಗುತ್ತಿತ್ತು. ವಿವಿಧ ಕಮ್ಯುನಿಸ್ಟ್ ಗುಂಪುಗಳಾಗಿ ಹಲವರು ತಮ್ಮ ಚಟುವಟಿಕೆಗಳನ್ನು ನಡೆಸುತ್ತಿದ್ದಾಗ್ಯೂ, ಅದರಲ್ಲಿ ಸೈದ್ಧಾಂತಿಕ ಹಾಗೂ ಸಂಘಟನಾತ್ಮಕವಾಗಿ ಕೂಡ ಏಕರೂಪತೆ ಇರಲಿಲ್ಲ. ಒಂದು ಸಮರ್ಥವಾದ ಕೇಂದ್ರ ಸಂಘಟನೆಯಿಲ್ಲದೆ, ಈ ಚಟುಟಿಕೆಗಳಿಗೆ ನಾಯಕತ್ವ ಒದಗಿಸಲಾಗಲಿಲ್ಲ. ಮೀರತ್ ಖೈದಿಗಳ ಬಿಡುಗಡೆಯೊಂದಿಗೆ, ಅವರ ಬಂಧನದಿಂದಾಗಿ ಕಡಿದುಹೋಗಿದ್ದ ಹಳೆಯ ಸಂಪರ್ಕಗಳು ಮರುಜೋಡಣೆಯಾದವು ಮಾತ್ರವಲ್ಲ, ಅನೇಕ ಹೊಸ ವ್ಯಕ್ತಿಗಳು ಮತ್ತು ಗುಂಪುಗಳು ಪಕ್ಷದತ್ತ ಆಕರ್ಷಿತರಾದರು. ಸೋವಿಯತ್ ಯೂನಿಯನ್ನಿನ ಉದಯ ಮತ್ತು ಫ್ಯಾಸಿಸಂನ ಬೆಳವಣಿಗೆಯಂತಹ ಘಟನೆಗಳು ಕಾಂಗ್ರೆಸ್ ನಾಯಕರನ್ನು ಮಾತ್ರವಲ್ಲ ಸಾಮಾನ್ಯ ಜನರನ್ನೂ ಆಕರ್ಷಿಸಿದವು. ಸಮಾಜವಾದಿ ಮತ್ತು ಸಮತಾವಾದಿ ಸಿದ್ಧಾಂತಗಳ ಬೆಳವಣಿಗೆಗೆ ಅನುಕೂಲಕರ ವಾತಾವರಣದ ಈ ಸನ್ನಿವೇಶದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷವು ನಿರಂತರ ಕಾರ್ಯನಿರ್ವಹಣೆಯ ಕೇಂದ್ರ ನಾಯಕತ್ವದೊಂದಿಗೆ ಹೊರಹೊಮ್ಮಿತು.

1920ರ ದಶಕದ ಕೊನೆಯ ಮತ್ತು 1930ರ ದಶಕದ ಆರಂಭದ ಅವಧಿಯಲ್ಲಿ ಭಾರತದ ಆಂತರಿಕ ಸನ್ನಿವೇಶ ಸಾಕಷ್ಟು ಸಂಕೀರ್ಣವಾಗಿತ್ತು. ಇಡೀ ಬಂಡವಾಳಶಾಹಿ ಜಗತ್ತನ್ನು ಆವರಿಸಿದ್ದ ಮಹಾ ಕುಸಿತ (ಆರ್ಥಿಕ ಕುಸಿತ)ದ ಪರಿಣಾಮಗಳು ಭಾರತದ ಜನರ ಮೇಲೆ ಬಹಳ ಯಾತನಾಮಯವಾಗಿದ್ದವು. ಏಕೆಂದರೆ ಬ್ರಿಟಿಷ್ ಸಾಮ್ರಾಜ್ಯಶಾಹಿ ತಮ್ಮ ದೇಶವು ಎದುರಿಸುತ್ತಿದ್ದ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳಲು ಅದರ ಹೊರೆಯನ್ನು ಭಾರತದ ಜನರ ಮೇಲೆ ಹೇರಲು ಯತ್ನಿಸುತ್ತಿತ್ತು. ಅದರ ಪರಿಣಾಮವಾಗಿ, ಬ್ರಿಟಿಷ್ ಆಳ್ವಿಕೆಯ ವಿರುದ್ಧ ಪ್ರತಿಭಟನೆಗಳು ಮತ್ತು ಆಕ್ರೋಶ ಮುಗಿಲು ಮುಟ್ಟಿದವು ಹಾಗೂ ವ್ಯಾಪಕವಾದವು. ಬೊಂಬಾಯಿ, ಶೋಲಾಪುರಗಳ ಜವಳಿ ಗಿರಣಿಗಳಲ್ಲಿ ಹಾಗೂ ಕಲ್ಕತ್ತಾದ ಸೆಣಬು ಕೈಗಾರಿಗೆಗಳಲ್ಲಿ ಭುಗಿಲೆದ್ದ ಕಾರ್ಮಿಕರ ಭಾರಿ ಮುಷ್ಕರಗಳು ಕಾರ್ಮಿಕ ವರ್ಗದ ಮಡುಗಟ್ಟಿದ್ದ ಆಕ್ರೋಶದ ಕೆಲವು ನಿದರ್ಶನಗಳಷ್ಟೆ. 1930-1931 ರ ಅವಧಿಯಲ್ಲಿ ಕಾರ್ಮಿಕ ವರ್ಗದ ಮುಷ್ಕರಗಳ ಸಂಖ್ಯೆ ಮತ್ತು ಮಾನವ ದಿನಗಳ ನಷ್ಟವು ಶಿಖರಕ್ಕೇರಿತ್ತು. ಗರಿಗೆದರುತ್ತಿದ್ದ ಕಮ್ಯುನಿಸ್ಟ್ ಪಕ್ಷದ ಎಲ್ಲಾ ಪ್ರಮುಖ ನಾಯಕರುಗಳನ್ನು ಬಂಧಿಸಿ ಮೀರತ್ ಪಿತೂರಿ ಪ್ರಕರಣದಲ್ಲಿ ಸಿಲುಕಿಸಿ ವಿಚಾರಣೆ ನಡೆಸುತ್ತಿದ್ದ ಕಾರಣ ಈ ಮೇಲಿನ ಅನುಕೂಲಕರ ವಾತಾವರಣವನ್ನು ಬಳಸಿಕೊಳ್ಳಲು ಪಕ್ಷಕ್ಕೆ ಸಾಧ್ಯವಾಗಲಿಲ್ಲ. ಅದೂ ಅಲ್ಲದೇ, ಸಾಮ್ರಾಜ್ಯಶಾಹಿ-ವಿರೋಧಿ ಹೋರಾಟದಲ್ಲಿ ಬಂಡವಾಳಶಾಹಿಗಳ ಪಾತ್ರವೇನು ಎನ್ನುವುದರ ಬಗ್ಗೆ ಸರಿಯಾದ ಸೈದ್ಧಾಂತಿಕ ಸ್ಪಷ್ಟತೆಯನ್ನು ಆಗಿನ್ನೂ ಅದು ಪಡೆದಿರಲಿಲ್ಲ.

ಭಾರತೀಯ ಕಮ್ಯುನಿಸ್ಟ್ ಚಳುವಳಿಯ ಆರಂಭದ ಅವಧಿಯಲ್ಲಿ, ಎಂ.ಎನ್.ರಾಯ್ ಅತ್ಯಂತ ಉಪಯುಕ್ತ ಪಾತ್ರ ವಹಿಸಿದ್ದರು. ಆದರೆ, ಎಂ.ಎನ್.ರಾಯ್ ಅವರನ್ನು ಕಾಮಿಂಟರ್ನ್‌ನಿಂದ ಉಚ್ಛಾಟನೆ ಮಾಡಿದ ಮೇಲೆ, ಎಂ.ಎನ್.ರಾಯ್ ಮತ್ತು ಟ್ರಾಟ್ಸ್ಕಿಯನ್ನು ಅನುಸರಿಸುವ ಕೆಲವು ಗುಂಪುಗಳು ಹುಟ್ಟಿಕೊಂಡವು ಮತ್ತು ಅವು ಅಂತರ್ರಾಷ್ಟ್ರೀಯ ನಾಯಕತ್ವದ ವಿರುದ್ಧ ಕೆಲಸ ಮಾಡಲು ಶುರುಮಾಡಿದವು. ಈ ಸಂಘಟನೆಗಳು ಪಕ್ಷಕ್ಕೆ ಸಮಸ್ಯೆಗಳನ್ನು ಒಡ್ಡಿದವು ಕೂಡ.

ಭಾರತದ ಸನ್ನಿವೇಶದಲ್ಲಿ ಒಂದು ಬುಡಮಟ್ಟದ ಬದಲಾವಣೆ ತರಲು ಮತ್ತು ದೇಶದಲ್ಲಿ ಸಾಮ್ರಾಜ್ಯಶಾಹೀ-ವಿರೋಧಿ ಹೋರಾಟವನ್ನು ಮುಂದುವರಿಸಲು ಸಮರ್ಥ ನಾಯಕತ್ವವೊಂದನ್ನು ಒಗ್ಗೂಡಿಸುವ ದಿಕ್ಕಿನಲ್ಲಿ ಕಮ್ಯುನಿಸ್ಟ್ ಅಂತರ್ರಾಷ್ಟ್ರೀಯದ ಮುಖಂಡರು ಪ್ರಯತ್ನ ಮಾಡಿದರು. ಹಲವಾರು ಬಾರಿ ಅಂತರ್ರಾಷ್ಟ್ರೀಯದ ಪ್ರತಿನಿಧಿಗಳು ಭಾರತಕ್ಕೆ ಬಂದರು; ಬಗೆಬಗೆಯ ಕಮ್ಯುನಿಸ್ಟ್ ಗುಂಪುಗಳ ಜತೆ ಸಂಪರ್ಕ ಮಾಡಿದರು ಮತ್ತು ಅಂದಿನ ರಾಜಕೀಯ ಸನ್ನಿವೇಶ ಕುರಿತ ತಮ್ಮ ತಿಳುವಳಿಕೆಯ ಆಧಾರದಲ್ಲಿ ಸಲಹೆಗಳನ್ನು ನೀಡಿದರು. ಮೀರತ್ ಪ್ರಕರಣ ಮತ್ತು ಆರೋಪಿಗಳ ಬಂಧನ ಪಕ್ಷದ ಸಂಘಟನೆಗೆ ಭಾರಿ ಪೆಟ್ಟು ಕೊಟ್ಟಿತ್ತು; ತ್ವರಿತವಾಗಿ ಬದಲಾಗುತ್ತಿದ್ದ ಅಂತರ್ರಾಷ್ಟ್ರೀಯ ಹಾಗೂ ರಾಷ್ಟ್ರೀಯ ಸನ್ನಿವೇಶಗಳನ್ನು ಗ್ರಹಿಸಿ ಸೂಕ್ತವಾದ ಹಾಗೂ ಸಕಾಲಿಕ ನಾಯಕತ್ವ ನೀಡಲು ಸಾಧ್ಯವಾಗಲಿಲ್ಲ.

1920ರಲ್ಲೇ ಕಮ್ಯುನಿಸ್ಟ್ ಪಕ್ಷದ ಸ್ಥಾಪನೆಯಾಗಿದ್ದಾಗ್ಯೂ, ಆ ಇಡೀ ದಶಕದ ಉದ್ದಕ್ಕೂ, ನಿರಂತರವಾದ ಒಂದು ಕೇಂದ್ರ ನಾಯಕತ್ವವಿಲ್ಲದೇ ಅದು ತನ್ನ ಕೆಲಸಗಳನ್ನು ಮಾಡಿಕೊಂಡು ಹೋಗುತ್ತಿತ್ತು. ಹೌದು, ಆಗ ಒಂದು ಕಮ್ಯುನಿಸ್ಟ್ ಪಕ್ಷ ಇತ್ತು ಮತ್ತು ಪಕ್ಷದ ಪ್ರತಿಯೊಬ್ಬ ಸದಸ್ಯರೂ ಎಡೆಬಿಡದ ರಾಜಕೀಯ ಹಾಗೂ ಸಂಘಟನಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಆದರೆ, ಅವರ ಚಟುವಟಿಕೆಗಳ ಪ್ರಧಾನ ಕ್ಷೇತ್ರವು, ಮುಖ್ಯವಾಗಿ ೧೯೨೦ರ ದಶಕದ ದ್ವಿತೀಯಾರ್ಧದಲ್ಲಿ ಕಾರ್ಮಿಕರ ಮತ್ತು ರೈತರ ಪಕ್ಷದ ಮೂಲಕ ನಡೆಯುತ್ತಿತ್ತು. ಒಂದು ಸಾಮೂಹಿಕ ಕ್ರಾಂತಿಕಾರಿ ಪಕ್ಷ ಕಟ್ಟುವ ಕಡೆ ಅವರ ಗಮನವೆಲ್ಲಾ ಕೇಂದ್ರೀಕೃತವಾಗಿತ್ತು, ಅದರಲ್ಲಿ ಕಮ್ಯುನಿಸ್ಟರಲ್ಲದವರೂ ಪಾತ್ರ ವಹಿಸುತ್ತಿದ್ದರು. ಯಾವುದೇ ಸಮಯದಲ್ಲಿ ತಮ್ಮ ಮೇಲೆ ದಾಳಿಯಾಗಬಹುದು ಮತ್ತು ಆದಕಾರಣ ಭೂಗತರಾಗಿ ಕೆಲಸ ಮಾಡಬೇಕೆಂಬ ಅರಿವನ್ನು ಪಕ್ಷದ ನಾಯಕತ್ವ ಹೊಂದಿರಲಿಲ್ಲ. ಅದರ ಪರಿಣಾಮವಾಗಿ, ಯಾವಾಗ ಕಮ್ಯುನಿಸ್ಟರು ಮತ್ತು ಅವರ ಜತೆಯಲ್ಲಿ ಕಾರ್ಮಿಕರ ಮತ್ತು ರೈತರ ಪಕ್ಷದ ಒಡನಾಡಿಗಳು ದಾಳಿಗೆ ಒಳಗಾದರೋ, ಆಗ ಪಕ್ಷದ ಸಂಘಟನೆಯು ವಸ್ತುಶಃ ಅಸ್ತಿತ್ವ ಕಳೆದುಕೊಂಡಿತು.

ಭಾರತೀಯ ಕಮ್ಯುನಿಸ್ಟರ ಮೇಲೆ ಮೀರತ್ ಪ್ರಕರಣವನ್ನು ಹೊರಿಸಿದ ಆ ಸಮಯದಲ್ಲಿ ಆಗತಾನೇ ಅವರು ಒಂದು ಬಹಿರಂಗ ಹಾಗೂ ಕೇಂದ್ರೀಕೃತ ಕಮ್ಯುನಿಸ್ಟ್ ಪಕ್ಷವನ್ನು ಸ್ಥಾಪಿಸುವ ಸಾಧ್ಯತೆಯನ್ನು ಪರೀಕ್ಷಿಸಲು ಆರಂಭಿಸಿದ್ದರಷ್ಟೆ. ಅದನ್ನು ಡಿಸೆಂಬರ್ ೨೭-೨೯, ೧೯೨೮ರ ಅವಧಿಯಲ್ಲಿ ಕಲ್ಕತ್ತಾದಲ್ಲಿ ಸಿಪಿಐನ ಕಾರ್ಯಕಾರಿ ಸಮಿತಿಯ ಒಂದು ಗುಪ್ತ ಸಭೆಯಲ್ಲಿ ಚರ್ಚೆ ಮಾಡಲಾಗಿತ್ತು. ಆದರೆ, ಯಾವುದೇ ಕ್ರಮ ಕೈಗೊಳ್ಳುವ ಮುಂಚೆಯೇ, ಈ ವಿಷಯದಲ್ಲಿ ಒಂದು ನಿರ್ದಿಷ್ಟ ತೀರ್ಮಾನ ತೆಗೆದುಕೊಳ್ಳುವ ಮೊದಲೇ, ಬಹುತೇಕ ಎಲ್ಲಾ ಮೇಲ್ಮಟ್ಟದ ನಾಯಕರನ್ನು ಬಂಧಿಸಲಾಯಿತು; ಇದು ಎಲ್ಲಾ ಕೇಂದ್ರಗಳಲ್ಲಿನ ಕಮ್ಯುನಿಸ್ಟ್ ಚಟುವಟಿಕೆಗಳಲ್ಲಿ ದೊಡ್ಡ ಕಂದರವನ್ನು ಉಂಟುಮಾಡಿತು.

ಬಂಗಾಳದಲ್ಲಿ ಮಾತ್ರ ಮುಂದಾಳತ್ವದಲ್ಲಿದ್ದ ಅಬ್ದುಲ್ ಹಲೀಮ್ ಅವರನ್ನು ಬ್ರಿಟಿಷ್ ಪೋಲಿಸರು ಕಾರಾಗೃಹಕ್ಕೆ ಕಳಿಸಲಿಲ್ಲ. ಮದ್ರಾಸಿನಲ್ಲಿ, ಸಿಂಗಾರವೇಲು ಚೆಟ್ಟಿಯಾರ್ ೧೮ ತಿಂಗಳ ನಂತರ ಆಗಸ್ಟ್ ೧೯೩೦ ರಲ್ಲಿ ಜೈಲಿನಿಂದ ಹೊರಬಂದರು. ಅವರು ಪೆರಿಯಾರರ ಸ್ವಾಭಿಮಾನಿ ಚಳುವಳಿಯಲ್ಲಿ ಸೇರಿಕೊಂಡರು ಮತ್ತು ಅದರೊಳಗಿದ್ದ ಎಡಪಂಥೀಯರ ಮೇಲೆ ಪ್ರಭಾವ ಬೀರಿದರು. ೧೯೩೨ರಲ್ಲಿ ತಮ್ಮ ಬಂಧನಕ್ಕೆ ಮೊದಲೇ, ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಕಮ್ಯುನಿಸ್ಟ್ ಸಂಘಟನೆಯ ಪುನಶ್ಚೇತನಕ್ಕೆ ಕಾರಣಕರ್ತರಾಗಿದ್ದ ಅಮೀರ್ ಹೈದರ್ ಖಾನ್ ಜತೆ ಕೂಡ ಚೆಟ್ಟಿಯಾರ್ ಸಂಪರ್ಕದಲ್ಲಿದ್ದರು. ಕಾನ್ಪುರದಲ್ಲಿ, ಖಾಲಿ ಸ್ಥಾನ ತುಂಬಲು ಯಾರೂ ಇರಲೇ ಇಲ್ಲ. ಲಾಹೋರಿನಲ್ಲಿ, ಮಜೀದ್ ಮತ್ತು ಸೆಹ್ಗಲ್ ಅವರ ಬಂಧನದ ನಂತರ ಅವರ ಜಾಗ ಭರ್ತಿ ಮಾಡಲು ಒಬ್ಬರೂ ಇರಲಿಲ್ಲ. ಬೊಂಬಾಯಿಯಲ್ಲಿ, ಎಸ್.ವಿ.ದೇಶಪಾಂಡೆ ಮತ್ತು ಬಿ.ಟಿ.ರಣದಿವೆಯವರು ಕಾರ್ಮಿಕ ಸಂಘಗಳಲ್ಲಿನ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಕ್ರಿಯಾಶೀಲರಾಗಿದ್ದರು.

ವಿವಿಧ ಕಮ್ಯುನಿಸ್ಟ್ ಗುಂಪುಗಳಾಗಿ ಹಲವರು ತಮ್ಮ ಚಟುವಟಿಕೆಗಳನ್ನು ನಡೆಸುತ್ತಿದ್ದಾಗ್ಯೂ, ಅದರಲ್ಲಿ ಸೈದ್ಧಾಂತಿಕ ಹಾಗೂ ಸಂಘಟನಾತ್ಮಕವಾಗಿ ಕೂಡ ಏಕರೂಪತೆ ಇರಲಿಲ್ಲ. ಒಂದು ಸಮರ್ಥವಾದ ಕೇಂದ್ರ ಸಂಘಟನೆಯಿಲ್ಲದೆ, ಈ ಚಟುಟಿಕೆಗಳಿಗೆ ನಾಯಕತ್ವ ಒದಗಿಸಲಾಗಲಿಲ್ಲ. ವಿವಿಧ ಕಮ್ಯುನಿಸ್ಟ್ ಗುಂಪುಗಳು ಪರಸ್ಪರರಿಂದ ದೂರವೇ ಇದ್ದವು. ಮೀರತ್ ಪ್ರಕರಣದಿಂದ ಪ್ರಾರಂಭವಾಗಿ ಸರಿ ಸುಮಾರು ನಾಲ್ಕೂವರೆ ವರ್ಷ ಕಾಲ ಜೈಲಿನಿಂದ ಹೊರಗಡೆಯಿದ್ದ ಕಮ್ಯುನಿಷ್ಟರು ಭಿನ್ನಾಭಿಪ್ರಾಯಗಳು ಮತ್ತು ಗುಂಪುಗಾರಿಕೆಯ ಅವಧಿಯಾಗಿತ್ತು.

ಮಿರತ್ ಬಂಧನಗಳ ನಂತರದ ಮೊದಲ ಸವಾಲು ಒಂದು ಅಖಿಲ ಭಾರತ ಕೇಂದ್ರ ಕಟ್ಟುವುದಾಗಿತ್ತು. ೧೯೩೩ರ ಕೊನೆಯಲ್ಲಿ ಮೀರತ್ ಪ್ರಕರಣದ ಆರೋಪಿಗಳ ಬಿಡುಗಡೆಯಾಗುವ ತನಕ ಆ ನಿಟ್ಟಿನಲ್ಲಿ ಮಾಡಿದ ಪ್ರಯತ್ನಗಳು ಯಾವುದೇ ಸ್ಪಷ್ಟ ಫಲಿತಾಂಶ ದೊರಕಿಸಲಿಲ್ಲ. ಈ ಮಧ್ಯೆ, ೧೯೩೩ರ ಆರಂಭದಲ್ಲಿ ಜಾಮೀನು ಪಡೆದು ಹೊರ ಬಂದ ಡಾ.ಅಧಿಕಾರಿಯವರು ಭಾರತದ ವಿವಿಧ ಭಾಗಗಳಲ್ಲಿದ್ದ ಹಲವಾರು ಮಾರ್ಕ್ಸ್‌ವಾದಿಗಳನ್ನು ಮತ್ತು ಎಡಪಂಥೀಯ ಗುಂಪುಗಳನ್ನು ಅಣಿನೆರೆಸಿ ಒಂದು ಐಕ್ಯ ಪಕ್ಷ ಪುನರ್ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮೀರತ್ ಖೈದಿಗಳ ಬಿಡುಗಡೆಯೊಂದಿಗೆ, ಅವರ ಬಂಧನದಿಂದಾಗಿ ಕಡಿದುಹೋಗಿದ್ದ ಹಳೆಯ ಸಂಪರ್ಕಗಳು ಮರುಜೋಡಣೆಯಾದವು ಮಾತ್ರವಲ್ಲ, ಅನೇಕ ಹೊಸ ವ್ಯಕ್ತಿಗಳು ಮತ್ತು ಗುಂಪುಗಳು ಪಕ್ಷದತ್ತ ಆಕರ್ಷಿತರಾದರು. ಜೈಲಿನಿಂದ ಹೊರ ಬಂದ ಗಣನೀಯ ಸಂಖ್ಯೆಯ ಹಿಂದಿನ ಕ್ರಾಂತಿಕಾರಿ ರಾಷ್ಟ್ರೀಯವಾದಿಗಳು ಮತ್ತು ಸಾಮಾನ್ಯ ಕಾಂಗ್ರೆಸ್ಸಿಗರ ಗಮನಾರ್ಹ ವಿಭಾಗವು ಗಾಂಧಿ ವಿಧಾನದ ಹೋರಾಟದಲ್ಲಿನ ದಿವಾಳಿತನದ ಅರಿವಾಗಿ, ಸ್ವಾತಂತ್ರ್ಯ ಚಳುವಳಿಯನ್ನು ಸಮಾಜವಾದ ಮತ್ತು ಸಮತಾವಾದ(ಕಮ್ಯುನಿಸಂ)ದತ್ತ ಕೊಂಡೊಯ್ಯಬೇಕಾದ ಅಗತ್ಯವನ್ನು ಮನಗಂಡರು. ಸೋವಿಯತ್ ಯೂನಿಯನ್ನಿನ ಉದಯ ಮತ್ತು ಫ್ಯಾಸಿಸಂನ ಬೆಳವಣಿಗೆಯಂತಹ ಘಟನೆಗಳು ಕಾಂಗ್ರೆಸ್ ನಾಯಕರನ್ನು ಮಾತ್ರವಲ್ಲ ಸಾಮಾನ್ಯ ಜನರನ್ನೂ ಆಕರ್ಷಿಸಿದವು. ಸಮಾಜವಾದಿ ಮತ್ತು ಸಮತಾವಾದಿ(ಕಮ್ಯುನಿಸಂ) ಸಿದ್ಧಾಂತಗಳ ಬೆಳವಣಿಗೆಗೆ ಅನುಕೂಲಕರ ವಾತಾವರಣದ ಈ ಸನ್ನಿವೇಶದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷವು ನಿರಂತರ ಕಾರ್ಯನಿರ್ವಹಣೆಯ ಕೇಂದ್ರ ನಾಯಕತ್ವದೊಂದಿಗೆ ಹೊರಹೊಮ್ಮಿತು.

ಡಿಸೆಂಬರ್ ೧೯೩೩ರಲ್ಲಿ, ಬಂಗಾಳದ ಕಮ್ಯುನಿಸ್ಟರು ಒಂದು ಅಖಿಲ ಭಾರತ ಸಮ್ಮೇಳನವನ್ನು ಕಲ್ಕತ್ತಾದಲ್ಲಿ ನಡೆಸಿದರು. ಡಾ.ಅಧಿಕಾರಿ, ಅಬ್ದುಲ್ ಹಲೀಮ್, ಸೋಮನಾಥ್ ಲಹಿರಿ, ಡಾ.ರಣೇನ್ ಸೇನ್(ಬಂಗಾಳ), ಪಿ.ಸಿ.ಜೋಶಿ(ಕಾನ್ಪುರ್), ಎಸ್.ಜಿ.ಪತಾಕಾ ಮತ್ತು ಗುರುದೀಪ್ ಸಿಂಗ್(ಪಂಜಾಬ್) ಕಾರ್ಯ ಕಲಾಪಗಳಲ್ಲಿ ಭಾಗವಹಿಸಿದರು. ಈ ಸಭೆಯು ಮೂರು ಕಾರಣಗಳಿಂದ ಪ್ರಮುಖವಾಯಿತು: (ಅ) ಸಿಪಿಐನ ಹಂಗಾಮಿ ಕೇಂದ್ರ ಸಮಿತಿಯನ್ನು ಆರಿಸಲಾಯಿತು; (ಆ) ಒಂದು ಹಂಗಾಮಿ ನಿಬಂಧನೆಗಳ ಕರಡನ್ನು ಅಂಗೀಕರಿಸಲಾಯಿತು; ಮತ್ತು (ಇ) ರಾಜಕೀಯ ಪ್ರತಿಪಾದನೆಗಳ ಕರಡೊಂದನ್ನು ಅಂಗೀಕರಿಸಲಾಯಿತು. ಡಾ.ಅಧಿಕಾರಿಯವರನ್ನು ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು ಮತ್ತು ಹಂಗಾಮಿ ಸಮಿತಿಗಳನ್ನು ಆದಷ್ಟು ಬೇಗ ಮರುಸಂಘಟಿಸಲು ನಿರ್ಧರಿಸಲಾಯಿತು.

ಕೇಂದ್ರ ಸಮಿತಿ ಮತ್ತು ಪೋಲಿಟ್ ಬ್ಯೂರೋದ ರಚನೆಯು ಉಳಿದೆಲ್ಲಾ ಚಟುವಟಿಕೆಗಳಿಗೆ ನಾಂದಿ ಹಾಡಿತು: ಕಮ್ಯುನಿಸ್ಟರು ಮತ್ತು ಎಡಪಂಥೀಯರಿಗೆ ಕಮ್ಯುನಿಸ್ಟ್ ಅಂತರ್ರಾಷ್ಟ್ರೀಯದ ದಸ್ತಾವೇಜುಗಳನ್ನು ಒದಗಿಸುವುದು; ಭಾರತೀಯ ರಾಜಕೀಯ ಸನ್ನಿವೇಶದ ಬಗ್ಗೆ ಕಮ್ಯುನಿಸ್ಟ್ ಪಕ್ಷದ ನಿಲುವುಗಳು ಮತ್ತು ನೀತಿಗಳ ಬಗ್ಗೆ ವಿವರಿಸುವ ದಸ್ತಾವೇಜುಗಳು; ಕಾರ್ಮಿಕ ಸಂಘಗಳ ಚಟುವಟಿಕೆಗಳನ್ನು ಸಂಘಟಿಸುವುದು ಮತ್ತು ಎಡಪಂಥೀಯ ರಾಜಕಾರಣಿಗಳ ಜತೆ ಸಂಬಂಧಗಳನ್ನು ಬೆಸೆಯುವುದು ಇತ್ಯಾದಿ.

ಒಂದು ಕೇಂದ್ರೀಕೃತ, ಶಿಸ್ತುಬದ್ಧ, ಐಕ್ಯ, ಸಾಮೂಹಿಕ, ಭೂಗತ ಕಮ್ಯುನಿಸ್ಟ್ ಪಕ್ಷವನ್ನು ಕಟ್ಟುವ ಅವಶ್ಯಕತೆಯ ಬಗ್ಗೆ ಸಿಪಿಐನ ಹಂಗಾಮಿ ಕೇಂದ್ರ ಸಮಿತಿಯು ಅಂಗೀಕರಿಸಿದ ರಾಜಕೀಯ ಪ್ರತಿಪಾದನೆಯ ಕರಡು ಹೆಚ್ಚು ಒತ್ತು ನೀಡಿತ್ತು. ಭಾರತದ ಕ್ರಾಂತಿಯ ಚಾರಿತ್ರಿಕ ಕಾರ್ಯಭಾರವನ್ನು ಮುಂದಕ್ಕೆ ಕೊಂಡೊಯ್ಯುವ ಸಲುವಾಗಿ ಆಗಿನ್ನೂ ಕಟ್ಟಲ್ಪಡುತ್ತಿದ್ದ ಕಮ್ಯುನಿಸ್ಟ್ ಪಕ್ಷದ ಒಡನಾಡಿಗಳ ಜತೆ ಸೇರಬೇಕೆಂದು ಕಾರ್ಮಿಕ ವರ್ಗದ ಚಳುವಳಿಗೆ ತಮ್ಮನ್ನು ಮುಡುಪಾಗಿಟ್ಟಿರುವ ಮುಂದುವರಿದ ಕಾರ್ಮಿಕರು ಮತ್ತು ಕ್ರಾಂತಿಕಾರಿಗಳಿಗೆ ಪಕ್ಷ ಕರೆ ನೀಡಿತು. ಈ ಕರಡು ಪ್ರತಿಪಾದನೆಯ ಅನುಮೋದನೆಯೊಂದಿಗೆ, ಸಿಪಿಐ ವಿಧ್ಯುಕ್ತವಾಗಿ ಕಾಮಿಂಟರ್ನ್‌ಗೆ ಸಂಯೋಜಿತವಾಯಿತು. ಇದರೊಂದಿಗೆ, ಭಾರತದಲ್ಲಿನ ಕಮ್ಯುನಿಸ್ಟ್ ಚಳುವಳಿಯು ಹೊಸದೊಂದು ಘಟ್ಟವನ್ನು ತಲುಪಿತು.

ಈ ನಾಯಕತ್ವವನ್ನು ಮತ್ತು ಕಲ್ಕತ್ತಾ ಸಭೆಯ ತೀರ್ಮಾನವನ್ನು ಕಾಮಿಂಟರ್ನ್ ಮಾನ್ಯಮಾಡಿತು; ಎರಡು ಪ್ರಮುಖ ದಸ್ತಾವೇಜುಗಳನ್ನು  ಹಂಗಾಮಿ ನಿಬಂಧನೆಗಳ ಕರಡು ಮತ್ತು ರಾಜಕೀಯ ಪ್ರತಿಪಾದನೆಯ ಕರಡನ್ನು – ತನ್ನ ಮುಖವಾಣಿ ಇಂಪ್ರೆಕರ್ ನಲ್ಲಿ ೧೯೩೪ ರಲ್ಲಿ ಪ್ರಕಟಿಸಿತು. ಕಮ್ಯುನಿಸ್ಟ್ ಅಂತರ್ರಾಷ್ಟ್ರೀಯವು ಸೂಚಿಸಿದ ಚೌಕಟ್ಟಿನೊಳಗಡೆ ಮತ್ತು ಭಾರತೀಯ ರಾಜಕೀಯ ಸನ್ನಿವೇಶದಲ್ಲಿನ ಬದಲಾವಣೆಯನ್ನು ಅಂದಾಜು ಮಾಡಿ ಕಾರ್ಯ ನಿರ್ವಹಿಸಲು ನೂತನವಾಗಿ ಆಯ್ಕೆಯಾದ ಕೇಂದ್ರ ನಾಯಕತ್ವವು ಪ್ರಾರಂಭಿಸಿತು; ರಾಷ್ಟ್ರೀಯ ಹಾಗೂ ಅಂತರ್ರಾಷ್ಟ್ರೀಯ ಸನ್ನಿವೇಶಗಳು ತ್ವರಿತಗತಿಯಲ್ಲಿ ಬದಲಾಗುತ್ತಿದ್ದರಿಂದ ಈ ಕಾರ್ಯಭಾರಗಳು ಸುಲಭವಾಗಿರಲಿಲ್ಲ.

ಈ ಚುನಾಯಿತ ಕೇಂದ್ರ ನಾಯಕತ್ವವು(ಕೆಲವು ವ್ಯಕ್ತಿಗಳ ಬದಲಾವಣೆಯೊಂದಿಗೆ) ೧೯೬೪ರಲ್ಲಿ ಪಕ್ಷ ವಿಭಜನೆಯಾಗುವವರೆಗೂ ಮುಂದುವರಿಯಿತು. ಹಿಂದೆ ಮಾಡಿದ ವ್ಯರ್ಥ ಪ್ರಯತ್ನಗಳ ಹೊರತಾಗಿಯೂ ೧೯೩೩-೩೪ರಲ್ಲಿ ಪಕ್ಷದ ಕೇಂದ್ರದ ರಚನೆಯು ಯಶಸ್ವಿಯಾಯಿತು ಎಂದು ಒಂದು ವಾಕ್ಯದಲ್ಲಿ ಹೇಳಬಹುದು. ಒಂದು ದಶಕಗಳ ಕಾಲ ದಮನಕಾರಿ ದಾಳಿಗಳನ್ನು ಅನುಭವಿಸಿದ ಭಾರತ ಕಮ್ಯುನಿಸ್ಟ್ ಪಕ್ಷವು ೧೯೩೪ರ ಹೊತ್ತಿಗೆ ಒಂದು ಕ್ರಿಯಾಶೀಲ ಅಸ್ತಿತ್ವ ಪಡೆಯಲು ಸಾಧ್ಯವಾಯಿತು.

ಕಮ್ಯುನಿಸ್ಟ್ ಚಟುವಟಿಕೆಗಳು ತೀವ್ರವಾಗಿರುವುದರ ದಿಕ್ಸೂಚಿಯಾಗಿ, ೧೯೩೪ರಲ್ಲಿ ಮುಷ್ಕರಗಳ ಮತ್ತು ಮಾನವ ದಿನಗಳ ನಷ್ಟಗಳ ಸಂಖ್ಯೆಯು ಹೆಚ್ಚಾಗಿರುವುದನ್ನು ಕಾಣಬಹುದು; ೧೯೩೨-೩೩ ಎರಡು ವರ್ಷಗಳಲ್ಲಿನ ಸಂಖ್ಯೆಗೆ ಹೋಲಿಸಿದರೆ ಆ ಸಂಖ್ಯೆಯು ದುಪ್ಪಟ್ಟಾಗಿತ್ತು. ಬೆಳೆಯುತ್ತಿದ್ದ ಜನಾಕ್ರೋಶಗಳನ್ನೂ ಅದು ಬಿಂಬಿಸುತ್ತಿತ್ತು. ಸಾಮ್ರಾಜ್ಯಶಾಹೀ ಆಳ್ವಿಕೆಗೆ ಮತ್ತು ಬಂಡವಾಳಶಾಹಿ ನಾಯಕತ್ವಕ್ಕೆ ಈ ಸಾಮ್ರಾಜ್ಯಶಾಹಿ-ವಿರೋಧಿ ಹೋರಾಟ ರಂಗವು ಒಡ್ಡುತ್ತಿದ್ದ ಸವಾಲುಗಳನ್ನು ಕಂಡ ಆಳರಸರು ಅದನ್ನು ಮೊಳಕೆಯಲ್ಲೇ ಚಿವುಟಬೇಕು ಎಂಬ ನಿರ್ಧಾರಕ್ಕೆ ಬಂದರು. ಆದಕಾರಣದಿಂದಲೇ, ಕಾಂಗ್ರೆಸ್ಸಿನ ಮೇಲಿನ ನಿಷೇಧವನ್ನು ತೆಗೆದ ಇದೇ ಸಾಮ್ರಾಜ್ಯಶಾಹಿ ಬ್ರಿಟಿಷ್ ಸರ್ಕಾರವು ಕಮ್ಯುನಿಸ್ಟರ ಮೇಲೆ ನಿಷೇಧ ಹೇರಲು ಮುಂದಾಯಿತು.

 

ಕನ್ನಡಕ್ಕೆ: ಟಿ. ಸುರೇಂದ್ರ ರಾವ್

Leave a Reply

Your email address will not be published. Required fields are marked *