ಕೇಂದ್ರಮಂತ್ರಿ-ಬಿಜೆಪಿ ಎಂಪಿ ವಿರುದ್ಧ ದೂರು-ಎಫ್‌ಐಆರ್ ದಾಖಲಿಸಲು ಬೃಂದಾ ಕಾರಟ್ ಆಗ್ರಹ

ಮಾತೆತ್ತಿದರೆ ರಾಜದ್ರೋಹದ ಕೇಸು ಹಾಕುವ ದಿಲ್ಲಿ ಪೋಲಿಸರು ಅತ್ಯಂತ ಆಕೇಪಾರ್ಹ ಹೇಳಿಕೆಗಳನ್ನು ನೀಡುತ್ತಿರುವವರ ಬಗ್ಗೆ ಸುಮ್ಮನಿರುವುದೇಕೆ?

ಸಿಪಿಐ(ಎಂ) ಪೊಲಿಟ್‌ ಬ್ಯರೊ ಸದಸ್ಯರಾದ ಬೃಂದಾ ಕಾರಟ್ ಮತ್ತು ದಿಲ್ಲಿ ರಾಜ್ಯ ಸಮಿತಿಯ ಕಾರ್ಯದರ್ಶಿ ಕೆ.ಎಂ.ತಿವಾರಿ ಭಾರತ ಸರಕಾರದ ಹಣಕಾಸು ರಾಜ್ಯ ಮಂತ್ರಿ ಅನುರಾಗ್ ಠಾಕುರ್ ಮತ್ತು ಪಶ್ಚಿಮ ದಿಲ್ಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸತ್ ಸದಸ್ಯ ಪರ್ವೇಶ್ ವರ್ಮ ವಿರುದ್ಧ ಅವರು ಕೋಮು ವೈರತ್ವವನ್ನು ಪ್ರಚೋದಿಸುತ್ತಿದ್ದಾರೆ, ಬೆದರಿಕೆಗಳನ್ನು ಒಡ್ಡುತ್ತಿದ್ದಾರೆ ಮತ್ತು ರಾಷ್ಟ್ರೀಯ ಸಮಗ್ರತೆಗೆ ಸಂಚಕಾರ ತರುವ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ದಿಲ್ಲಿ ಪೋಲೀಸ್ ಕಮಿಶನರ್‌ ಗೆ ದೂರು ಕೊಟ್ಟಿದ್ದಾರೆ ಮತ್ತು ಅವರ ವಿರುದ್ಧ ಕೂಡಲೇ ಎಫ್‌ ಐ ಆರ್ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಸ್ವತಃ ಚುನಾವಣಾ ಆಯೋಗಕ್ಕೇ ಈ ಇಬ್ಬರೂ ಅತ್ಯಂತ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಮೇಲ್ನೋಟಕ್ಕೇ ಅನಿಸಿದ್ದು, ಅವರನ್ನು ’ಸ್ಟಾರ್’ ಚುನಾವಣಾ ಪ್ರಚಾರಕರ ಪಟ್ಟಿಯಿಂದ ತೆಗೆದು ಹಾಕಿದೆ. ಈ ಬಗ್ಗೆ ದಿಲ್ಲಿ ಪೋಲೀಸ್‌ ಗೆ  ಖಂಡಿತಾ ತಿಳಿದಿದೆ. ಆದರೆ ಇತರ ಹಲವರ  ಹೇಳಿಕೆಗಳನ್ನು ತಾವಾಗಿಯೇ ಗಮನಕ್ಕೆ ತಗೊಂಡು ರಾಜದ್ರೋಹ ಇತ್ಯಾದಿ ಕೇಸುಗಳನ್ನು ಹಾಕುತ್ತಿರುವ ದಿಲ್ಲಿ ಪೋಲೀಸರ ಗಮನಕ್ಕೆ ಈ ಇಬ್ಬರು ಮುಖಂಡರುಗಳ ನಗ್ನ ಕೋಮುವಾದಿ ಮತ್ತು ದ್ವೇಷ ಭಾಷಣಗಳು ಯಾವವೂ ಬಂದಿರದಿರುವುದು ಮತ್ತು ಅವರ ವಿರುದ್ಧ ಯಾವುದೇ ಕೇಸು ದಾಖಲಿಸದಿರುವುದು ಅತ್ಯಂತ ಖೇದಕರ ಸಂಗತಿ ಎಂದು ಈ ದೂರಿನಲ್ಲಿ ಹೇಳಲಾಗಿದೆ.

ಕಳೆದ ಕೆಲವು ದಿನಗಳಿಂದ ಅವರು ನೀಡುತ್ತಿರುವ ಹೇಳಿಕೆಗಳು ಪ್ರಚೋದನಾಕಾರಿ ಮತ್ತು ಕಾನೂನುಬಾಹಿರ. ಇವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153ಎ/153bi/504 ಅಡಿಯಲ್ಲಿ ಅಪರಾಧಗಳಾಗಿವೆ, ಮತ್ತು ಸೆಕ್ಷನ್ 295ಎ/298/506 ಅಡಿಯಲ್ಲಿರುವ ಅಂಶಗಳು ಕೂಡ ಇವರಿಗೆ ಅನ್ವಯವಾಗುತ್ತವೆ ಎಂದು ಈ ದೂರಿನಲ್ಲಿ ದಿಲ್ಲಿ ಪೋಲೀಸರ ಗಮನಕ್ಕೆ ತರಲಾಗಿದೆ.

ಪರ್ವೇಶ್ ವರ್ಮ ಜನವರಿ 27ರಂದು ಮಾಡಿದ ಭಾಷಣದಲ್ಲಿ ಬಹಿರಂಗವಾಗಿಯೇ ಶಾಹೀನ್ ಬಾಗ್‌ ನ ಪ್ರತಿಭಟನಾಕಾರರಿಗೆ ಬೆದರಿಕೆ ಹಾಕಿದರು, ಮತ್ತು ಬಿಜೆಪಿ ದಿಲ್ಲಿಯಲ್ಲಿ ಚುನಾಯಿತವಾದರೆ ಒಂದು ಗಂಟೆಯೊಳಗೆ ಶಾಹೀನ್ ಬಾಗ್‌ ನ್ನು ತೆರವು ಮಾಡುವುದಾಗಿ ಹೇಳಿದರು. ಇದು ಬೆದರಿಕೆ, ಇಲ್ಲಿ ಅವರು ಶಾಹೀನ್ ಬಾಗ್‌ ನಲ್ಲಿ ಶಾಂತಿಯುತವಾಗಿ ನೆರೆದಿರುವವರ ಮೇಲೆ ಬಲಪ್ರಯೋಗದ ಪ್ರಸ್ತಾಪ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟ.

ಜನವರಿ 28ರಂದು ಎ ಎನ್‌ ಐ ಗೆ ನೀಡಿದ ಸಂದರ್ಶನದಲ್ಲಿ ಈತ ಶಾಹೀನ್ ಬಾಗ್ ಪ್ರತಿಭಟನಾಕಾರರ ಬಗ್ಗೆ ಮಾತಾಡುತ್ತ “ಈ ಮಂದಿ ನಿಮ್ಮ ಮನೆಗಳೊಳಗೆ ನುಗ್ಗುತ್ತಾರೆ, ನಿಮ್ಮ ಸೋದರಿಯರು, ಹೆಣ್ಣುಮಕ್ಕಳನ್ನು ಎತ್ತಿಕೊಂಡು ಹೋಗುತ್ತಾರೆ, ಮತ್ತು ಅವರ ರೇಪ್ ಮಾಡುತ್ತಾರೆ, ಅವರನ್ನು ಸಾಯಿಸುತ್ತಾರೆ. ಆದ್ದರಿಂದ ಇಂದೇ ಸಮಯ ಬಂದಿದೆ. ನಾಳೆ ಉಳಿಸಲಿಕ್ಕೆ ಮೋದೀಜೀ ಬರುವುದಿಲ್ಲ, ನಾಳೆ ಷಾಜಿ ಉಳಿಸಲಿಕ್ಕೆ ಬರುವುದಿಲ್”ಲ ಎಂದು ಹೇಳಿದ್ದಾರೆ. (ಇದರ ವೀಡಿಯೋ ಮತ್ತು ಲೇಖನ ಇಂಡಿಯಾ ಟುಡೆಯ ವೆಬ್‌ಸೈಟ್‌ ನಲ್ಲಿ ಇದೆ).

ಈ ಹೇಳಿಕೆ ಸ್ಪಷ್ಟವಾಗಿಯೂ ಸುಳ್ಳು, ಉದ್ರೇಕಕಾರಿ ಮತ್ತು ಕೋಮುವಾದಿ. ಏಕೆಂದರೆ ಶಾಹೀನ್ ಬಾಗ್ ಪ್ರತಿಭಟನೆ ಶಾಂತಿಯುತವಾಗಿದೆ, ಮಾತ್ರವಲ್ಲ, ಅದರಲ್ಲಿ ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು, ವಯಸ್ಸಾದವರು, ಮತ್ತು ಮಕ್ಕಳು ಭಾಗವಹಿಸುತ್ತಿದ್ದಾರೆ. ಅವರಲ್ಲಿ ಒಂದು ದೊಡ್ಡ ವಿಭಾಗ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು. ವರ್ಮಾ ಶಾಹೀನ್ ಬಾಗ್‌ ನ ಪ್ರತಿಭಟನಾಕಾರರು ಶಾಂತಿಯುತ ಹಿಂದೂಗಳ ಮನೆಗಳಿಗೆ ನುಗ್ಗಬಹುದಾದ ಅಪಾಯಕಾರಿ ವ್ಯಕ್ತಿಗಳು ಎಂದು ಚಿತ್ರಿಸಲು ಪ್ರಯತ್ನಿಸುತ್ತಿದ್ದಾರೆ. ಅವರನ್ನು ಅತ್ಯಾಚಾರಿಗಳು ಮತ್ತು ಕ್ರಿಮಿನಲ್‌ಗಳು ಎಂದು ಕರೆದು ಮತೀಯ ದ್ವೇಷವನ್ನು ಉದ್ರೇಕಿಸುತ್ತಿದ್ದಾರೆ. ಇದರ ಉದ್ದೇಶ ಬಹುಸಂಖ್ಯಾತ ಸಮುದಾಯಗಳಲ್ಲಿ, ವಿಶೇಷವಾಗಿ ಮಹಿಳೆಯರ ನಡುವೆ ಭೀತಿ ಹುಟ್ಟಿಸುವುದು ಮತ್ತು  ಕೋಮು ವಿಭಜನೆಯನ್ನು ಸೃಷ್ಟಿಸುವುದು ಎಂದು ದಿಲ್ಲಿ ಪೋಲಿಸ್ ಕಮಿಶನರ ಗಮನಕ್ಕೆ ಈ ದೂರು ತಂದಿದೆ.

ವರ್ಮಾರವರ ಇನ್ನೂ ಒಂದು ಹೇಳಿಕೆ ವರದಿಯಾಗಿರುವುದನ್ನು ಈ ದೂರು ಕಮಿಶನರ್‌ರವರ ಗಮನಕ್ಕೆ ತಂದಿದೆ. “ದಿಲ್ಲಿಯಲ್ಲಿ ನನ್ನ ಸರಕಾರ ರಚನೆಗೊಳ್ಳಲಿ, ಫೆಬ್ರುವರಿ 11ರಿಂದ ಒಂದು ತಿಂಗಳ ಸಮಯ ಕೊಡಿ. ನನ್ನ ಲೋಕಸಭಾ ಕ್ಷೇತ್ರದಲ್ಲಿ ಸರಕಾರೀ ಜಾಗದಲ್ಲಿ ಕಟ್ಟಿರುವ ಯಾವುದೇ ಮಸೀದಿಯನ್ನು ಬಿಡುವದಿಲ್ಲ, ಅವೆಲ್ಲವನ್ನೂ ತೆಗೆಸುತ್ತೇನೆ” ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ. ಇದು ಪ್ರಚೋದನಾಕಾರಿ, ಕೋಮುವಾದಿ ಮತ್ತು ಮುಸ್ಲಿಂ ಸಮುದಾಯವನ್ನು ಬೆದರಿಸುವ ಹೇಳಿಕೆ ಎಂಬುದು ಸ್ವಯಂವೇದ್ಯ.

ಅದರಲ್ಲೂ ಒಂದು ಪ್ರಚಾರ ಭಾಷಣದಲ್ಲಿ ಒಬ್ಬ ಚುನಾಯಿತ ಪ್ರತಿನಿಧಿ ಹೇಳುತ್ತಿರುವುದು ಉದ್ದೇಶಪೂರ್ವಕವಾದ ಹೇಳಿಕೆ, ಮತೀಯ ಗುಂಪುಗಳ ನಡುವೆ ವೈರತ್ವವನ್ನು ಪ್ರಚೋದಿಸುವ ಮತ್ತು ಒಟ್ಟಾರೆಯಾಗಿ ಮುಸ್ಲಿಂ ಸಮುದಾಯದ ವಿರುದ್ಧ ಹಿಂಸಾಚಾರದ ಹೆದರಿಕೆಯನ್ನು ಹುಟ್ಟಿಸುವ, ಬೆದರಿಕೆಯನ್ನು ಹಾಕುವ ಗುರಿ ಹೊಂದಿದೆ. ಇಂತಹ ಹೇಳಿಕೆಗಳನ್ನು ಉಪೇಕ್ಷಿಸುವುದು ಸಾಧ್ಯವಿಲ್ಲ, ಏಕೆಂದರೆ ಇವು ಭಾರತೀಯ ಸಂವಿಧಾನ ಮತ್ತು ಸಮಾಜದ ಸತ್ವಕ್ಕೆ ವಿರುದ್ಧವಾಗಿವೆ, ಮಾತ್ರವೇ ಅಲ್ಲ, ಭಾರತೀಯ ದಂಡ ಸಂಹಿತೆಯ ಮೇಲೆ ಹೇಳಿರುವ ಸೆಕ್ಷನ್‌ಗಳ ಅಡಿಯಲ್ಲಿ ಗಂಭೀರ ಶಿಕ್ಷಾರ್ಹ ಅಪರಾಧಗಳೂ ಆಗಿವೆ ಎಂದು ದಿಲ್ಲಿ ಪೋಲೀಸ್ ಕಮಿಶನರಿಗೆ ಕೊಟ್ಟಿರುವ ಈ ದೂರಿನಲ್ಲಿ ನೆನಪಿಸಲಾಗಿದೆ.

ಅಲ್ಲದೆ ಈ ಹೇಳಿಕೆಯನ್ನು ವರ್ಮಾ ಚುನಾವಣಾ ಪ್ರಚಾರದ ವೇಳೆಯಲ್ಲಿ ಹೇಳಿರುವುದರಿಂದ, ಸ್ಪಷ್ಟವಾಗಿಯೂ ಮುಂಬರುವ ಚುನಾವಣೆಗಳಲ್ಲಿ ಮತಗಳನ್ನು ಪಡೆಯಲಿಕ್ಕಾಗಿಯೇ ಹೇಳಿದ್ದಾರೆ ಎಂಬುದು ಸ್ಪಷ್ಟ, ಆದ್ದರಿಂದ ಸೆಕ್ಷನ್ 171 ಜಿ ಅಡಿಯಲ್ಲಿನ ಅಂಶವೂ ಇದಕ್ಕೆ ಅನ್ವಯವಾಗುತ್ತದೆ ಎಂಬ ಸಂಗತಿಯತ್ತವೂ ಈ ದೂರು ದಿಲ್ಲಿ ಪೋಲಿಸರ ಗಮನ ಸೆಳೆದಿದೆ.

ಇದೇ ರೀತಿಯಲ್ಲಿ, ಅನುರಾಗ್ ಠಾಕುರ್ ರಿಥಾಲಾದಲ್ಲಿ ಒಬ್ಬ ಬಿಜೆಪಿ ಅಭ್ಯರ್ಥಿ ಮಾನಿಶ್ ಚೌಧುರಿಯವರ ಪರವಾಗಿ ಪ್ರಚಾರ ಮಾಡುತ್ತ ಒಂದು ಬಿಜೆಪಿ ಬೆಂಬಲಿಗರ ರ‍್ಯಾಲಿಯಲ್ಲಿ “ದೇಶ್ ಕೇ ಗದ್ದಾರೋಂಕೋ, ಗೋಲಿ ಮಾರೋ ಸಾಲೋಂಕೋ” ಎಂಬ ಬೈಗುಳಭರಿತ ಘೋಷಣೆಗೆ ನೇತೃತ್ವ ನೀಡುತ್ತಿರುವುದು ಕಂಡು ಬಂದಿದೆ. ಟೈಮ್ಸ್ ಆಫ್ ಇಂಡಿಯ  ಮತ್ತಿತರ ಸುದ್ದಿ ವೆಬ್‌ಸೈಟ್‌ಗಳಲ್ಲಿ ಹಾಕಿರುವ ವೀಡಿಯೋದಲ್ಲಿ ಅನುರಾಗ್ ಠಾಕುರ್ ಬಿಜೆಪಿ ಬೆಂಬಲಿಗರು ಮತ್ತು ರ‍್ಯಾಲಿಯಲ್ಲಿದ್ದ ಸಾರ್ವಜನಿಕರನ್ನು ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಪ್ರತಿಭಟಿಸುತ್ತಿರುವವರ ಮೇಲೆ, ಅವರನ್ನು ದೇಶದ್ರೋಹಿಗಳು ಎಂದು ಹೇಳುತ್ತ, ಹಲ್ಲೆ ಮಾಡುವಂತೆ ಪ್ರಚೋದಿಸುತ್ತಿರುವುದು ಕಾಣುತ್ತಿದೆ. ನಿಜ ಹೇಳಬೇಕೆಂದರೆ ಈತ ಈ ಘೋಷಣೆ ಅಲ್ಲಿ ವೇದಿಕೆಯ ಮೇಲಿದ್ದ ಕೇಂದ್ರ ಮಂತ್ರಿ ಗಿರಿರಾಜ್ ಸಿಂಗ್ ಮತ್ತಿತರ ಬಿಜೆಪಿಯ ಪದಾಧಿಕಾರಿಗಳಿಗೆ ಕೇಳಿಸುವಂತೆ ಗಟ್ಟಿಯಾಗಿ ಹಾಕಲು ಮತ್ತೆ-ಮತ್ತೆ ಪ್ರಚೋದಿಸುತ್ತಿರುವುದನ್ನೂ ಕಾಣಬಹುದು.

ಆದ್ದರಿಂದ ನಮ್ಮ ರಾಷ್ಟ್ರೀಯ ಸಮಗ್ರತೆಗೆ ಬೆದರಿಕೆ ಒಡ್ಡಿರುವ ಈ ಶಿಕ್ಷಾರ್ಹ ಅಪರಾಧಗಳ ವಿರುದ್ಧ ಈ ದೂರಿನ ಮೇಲೆ ತಕ್ಷಣವೇ ಎಫ್‌ ಐ ಆರ್ ದಾಖಲಿಸಬೇಕು ಎಂದು ಸಿಪಿಐ(ಎಂ) ಮುಖಂಡರುಗಳು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *