ಕಾಶ್ಮೀರವನ್ನು ಒಂದು ಬಹಿರಂಗ ಸೆಂಟ್ರಲ್ ಜೈಲು ಎಂದೇ ಘೋಷಿಸಿ ಬಿಡಿ – ತರಿಗಾಮಿ

“ಕಾಶ್ಮೀರಕ್ಕೆ ವಿದೇಶಿ ರಾಜತಾಂತ್ರಿಕರ ಇನ್ನೊಂದು ತಂಡವನ್ನು ಕಳಿಸಿದ್ದೀರಿ. ಆದರೆ ಅಲ್ಲಿ ಎಲ್ಲ ಹೋಟೇಲುಗಳು, ಗೆಸ್ಟ್ ಹೌಸ್‌ಗಳು ಜೈಲುಗಳಾಗಿ ಪರಿವರ್ತನೆಗೊಂಡಿವೆ. ಇವರೆಲ್ಲಿ ಇರುತ್ತಾರೆ? ಬಹುಶಃ ಇಡೀ ಕಾಶ್ಮೀರವನ್ನೇ ಒಂದು ಸೆಂಟ್ರಲ್ ಜೈಲು ಎಂದು ಘೋಷಿಸಿಬಿಟ್ಟರೆ ಸಮಸ್ಯೆಯೇ ಇಲ್ಲ, ಎಲ್ಲರನ್ನೂ ಸ್ಥಾನಬದ್ಧತೆಯಲ್ಲಿಡಲು ಯಾವುದೇ ಅಡ್ಡಿಯಿರುವುದಿಲ್ಲ”- ಇದು ಜಮ್ಮು ಮತ್ತು ಕಾಶ್ಮೀರದ ಹಿರಿಯ ಸಿಪಿಐ(ಎಂ) ನಾಯಕ ಮಹಮ್ಮದ್ ಯುಸುಫ್ ತರಿಗಾಮಿ ಅತ್ಯಂತ ನೋವಿನಿಂದ ಹೇಳಿದ ಮಾತುಗಳು. ಅವರು ಮತ್ತೊಮ್ಮೆ ದಿಲ್ಲಿಗೆ ಬಂದಿದ್ದ  ಸಂದರ್ಭದಲ್ಲಿ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಬಂಧಗಳನ್ನು ಹೇರಿ ಆರು ತಿಂಗಳು ಮುಗಿದಿರುವ ಸಂದರ್ಭದಲ್ಲಿ ಸಿಪಿಐ(ಎಂ) ಕೇಂದ್ರ ಸಮಿತಿ ಕಚೇರಿಯಲ್ಲಿ ಫೆ.೧೨ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಆರಂಭದಲ್ಲಿ ಮಾತಾಡಿದ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ, ಮೊದಲಿಗೆ ದಿಲ್ಲಿಯ ಚುನಾವಣಾ ಫಲಿತಾಂಶಗಳ ಬಗ್ಗೆ ಹರ್ಷ ವ್ಯಕ್ತಪಡಿಸುತ್ತ ಇದಕ್ಕಾಗಿ ದಿಲ್ಲಿಯ ಜನತೆಗೆ ಮತ್ತು ಆಮ್ ಆದ್ಮಿ ಪಕ್ಷಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು. ನಂತರ ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಮಾತಾಡುತ್ತ ಮೂರು ಅಂಶಗಳತ್ತ ಪತ್ರಕರ್ತರ ಗಮನವನ್ನು ಸೆಳೆದರು.
ಮೊದಲನೆಯದಾಗಿ, ನಿರ್ಬಂಧಗಳನ್ನು ಹೇರಿ ಆರು ತಿಂಗಳು ಕಳೆದರೂ, ಅಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಸರಕಾರ ಹೇಳುತ್ತಲೇ ಇದ್ದರೂ , ಇನ್ನೂ ಸಂಪರ್ಕ ವ್ಯವಸ್ಥೆಯನ್ನು ಸಾಮಾನ್ಯಗೊಳಿಸಿಲ್ಲ. ೨ ಜಿ ಯ ನಿಧಾನಗತಿಯ ಸಂಪರ್ಕ ಕೆಲವೊಮ್ಮೆ ಇರುತ್ತದೆ, ಕೆಲವೊಮ್ಮೆ ಹೊರಟು ಹೋಗುತ್ತದೆ. ಇದು ಈ ರಾಜ್ಯದ ಆರ್ಥಿಕ ವ್ಯವಸ್ಥೆಯ ಮೇಲೆ ಭಾರೀ ದುಷ್ಪರಿಣಾಮವನ್ನು ಬೀರಿದೆ. ಪ್ರವಾಸೋದ್ಯಮ, ಹಣ್ಣುಗಳು ಮತ್ತು ಕೇಸರಿ ಇಲ್ಲಿಯ ಅರ್ಥವ್ಯವಸ್ಥೆಯ ಜೀವನಾಡಿ. ಆದರೆ ಇವು ಮೂರೂ ಇಂಟರ್ನೆಟ್ ಸಂಪರ್ಕವನ್ನೇ ಸಂಪೂರ್ಣವಾಗಿ ಅವಲಂಬಿಸಿವೆ. ಆದ್ದರಿಂದ ಈ ಸಂಪರ್ಕ ನಿರ್ಬಂಧಗಳಿಂದಾಗಿ ಅವೆಲ್ಲ ನೆಲಕಚ್ಚಿವೆ, ಇದನ್ನು ಅವಲಂಬಿಸಿರುವ ಲಕ್ಷಾಂತರ ಜನಗಳ ಬದುಕು ಮೂರಾಬಟ್ಟೆಯಾಗಿದೆ ಎಂದು ಯೆಚುರಿ ಹೇಳಿದರು.
ಎರಡನೆಯದಾಗಿ, ಪರಿಸ್ಥಿತಿ ಸಾಮಾನ್ಯವಾಗಿದೆ ಎಂದು ಬಿಂಬಿಸಲು ಮತ್ತೊಂದು ವಿದೇಶಿ ರಾಜತಾಂತ್ರಿಕರ ತಂಡವನ್ನು ಕಳಿಸಲಾಗಿದೆ. ಆದರೆ ಹಿಂದಿನ ಎರಡು ಇಂತಹ ತಂಡಗಳು ಸಾಧಿಸಿದ್ದೇನು ಎಂದು ತಿಳಿಸಿಲ್ಲ. ಕಂಡಬಂದಿರುವ ಒಂದೇ ಫಲಿತಾಂಶವೆಂದರೆ, ಪ್ರತಿಬಾರಿ ವಿದೇಶಿ ತಂಡ ಹೋದ ನಂತರ ಸಾರ್ವಜನಿಕ ಸುರಕ್ಷತೆಯ ಕಾಯ್ದೆ( ಪಿಎಸ್‌ಎ) ಎಂಬ ಕರಾಳ ಶಾಸನದ ಬಳಕೆ ಮತ್ತಷ್ಟು ಹೆಚ್ಚಿದೆ, ಇತ್ತೀಚೆಗೆ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮೇಲೆ ಬಳಸಿದಾಗಲಂತೂ ಹಾಕಿದ ಆಪಾದನೆಗಳು ಹಾಸ್ಯಾಸ್ಪದ ಮಟ್ಟಕ್ಕೆ ಇಳಿದಿವೆ. ಒಮರ್ ಅಬ್ದುಲ್ಲ ಮೇಲಿನ ಒಂದು ಆಪಾದನೆ ಎಂದರೆ ಅವರು ಉಗ್ರವಾದ ತುತ್ತತುದಿಯಲ್ಲಿದ್ದಾಗಲೂ ಜನಗಳು ಮತದಾನಕ್ಕೆ ಹೊರಬರುವಂತೆ ಮಾಡುವ ಸಾಮರ್ಥ್ಯ ತೋರಿದ್ದಾರೆ ಎಂಬುದು! ಮೆಹಬೂಬ ಮುಫ್ತಿಯವರ ಪಕ್ಷದ ಬಾವುಟದ ಬಣ್ಣ ಹಸಿರಾಗಿರುವುದು ಅವರ ಮೇಲೆ ಪಿಎಸ್‌ಎ ಪ್ರಯೋಗಿಸಲು ಕಾರಣವಂತೆ! ಬಿಜೆಪಿ ಸರಕಾರದ ಇಂತಹ ಹಾಸ್ಯಾಸ್ಪದ ಕ್ರಮಗಳನ್ನು ಗೇಲಿ ಮಾಡುತ್ತ ಯೆಚುರಿಯವರು, ಒಬ್ಬ ಜನಪ್ರಿಯ ಮುಖಂಡನಾಗಿರುವುದು, ಜನಗಳು ಮತದಾನ ಮಾಡಬೇಕು ಎಂದು ಆತ ಹೇಳುವುದೂ ಈ ಸರಕಾರದ ಕಣ್ಣಲ್ಲಿ ಅಪರಾಧವಾಗಿಬಿಟ್ಟಿದೆ ಎಂದರು. ಹಸಿರು ಬಣ್ಣ ಈ ಸರಕಾರಕ್ಕೆ ಸಮಸ್ಯೆಯಾಗಿದ್ದರೆ, ನಮ್ಮ ರಾಷ್ಟ್ರೀಯ ಬಾವುಟದಲ್ಲಿ ಮೂರನೇ ಒಂದು ಭಾಗದಷ್ಟಿರುವ ಹಸಿರು ಬಣ್ಣವನ್ನು  ಇವರು ಏನು ಮಾಡಬೇಕೆಂದಿದ್ದಾರೆ, ತೆಗೆದು ಬಿಡುತ್ತಾರೆಯೇ ಎಂದು ಪ್ರಶ್ನಿಸುತ್ತ, ಈ ಸರಕಾರ ತನ್ನೆಲ್ಲ ಮಿತಿಗಳನ್ನೂ ಮೀರಿ ವರ್ತಿಸುತ್ತಿದೆ ಎಂದರು.
ಮೂರನೆಯದಾಗಿ, ಜಮ್ಮು ಮತ್ತು ಲಡಾಖ್‌ನ ಲೇಹ್ ಮತ್ತು ಕಾರ್ಗಿಲ್ ಪ್ರದೇಶಗಳಿಂದ ನಿಯೋಗಗಳು ನನ್ನ ಬಳಿಗೆ ಬರುತ್ತಿವೆ, ಅಲ್ಲಿಯ ಜನಗಳಿಗೆ, ಬುಡಕಟ್ಟುಗಳಿಗೆ ತಮ್ಮ ಅಸ್ಮಿತೆಯ ರಕ್ಷಣೆಯ ಬಗ್ಗೆ ಭಯವುಂಟಾಗಿದೆ. ೩೫ಎ ಕಲಮಿನ ಅಡಿಯಲ್ಲಿ ಇದ್ದ ರಕ್ಷಣೆ ಹೋದ ಮೇಲೆ, ಸರಕಾರ ಕೈಗೊಳ್ಳುತ್ತಿರುವ ಕ್ರಮಗಳು ಅವರಲ್ಲಿ ಭೀತಿ ಹುಟ್ಟಿಸುತ್ತಿವೆ ಎಂದು ಯೆಚುರಿ ಹೇಳಿದರು. ೩೭೦ ಮತ್ತು ೩೫ಎ ರದ್ಧತಿಯ ಕ್ರಮವನ್ನು ಸುಪ್ರಿಂ ಕೋರ್ಟಿನಲ್ಲಿ ಪ್ರಶ್ನಿಸಲಾಗಿದೆ, ಅದೇಕೋ ನ್ಯಾಯಾಲಯ ಅದರ ವಿಚಾರಣೆಯನ್ನು ಇನ್ನೂ ಎತ್ತಿಕೊಂಡಿಲ್ಲ. ಆದರೂ ಅದೀಗ ನ್ಯಾಯಾಲಯದಲ್ಲಿರುವುದರಿಂದ ಸರಕಾರ ಅದರಡಿಯಲ್ಲಿ ಬೇರೆ ರಾಜ್ಯಗಳಿಂದ ಬಂದ ವ್ಯಕ್ತಿಗಳಿಗೆ, ಟ್ರಸ್ಟ್‌ಗಳಿಗೆ ಈ ಮೂರೂ ಪ್ರದೇಶಗಳಲ್ಲಿ ಸರಕಾರೀ ಜಮೀನನ್ನು ಕೊಡುವ ನಿರ್ಧಾರವನ್ನು ಮಾಡುವಂತಿಲ್ಲ, ಅದಕ್ಕೆ ಕಾನೂನಿನ ಆಧಾರವಿರುವುದಿಲ್ಲ, ಆದ್ದರಿಂದ ಇಂತಹ ಕ್ರಮಗಳನ್ನು ನಿಲ್ಲಿಸಬೇಕು ಎಂದು ಯೆಚುರಿ ಎಚ್ಚರಿಸಿದರು.
ರಿಯಲ್‌ಎಸ್ಟೇಟ್ ಪ್ರಶ್ನೆಯ ಮಟ್ಟಕ್ಕೆ ಇಳಿಸಲಾಗುತ್ತಿದೆ
ತರಿಗಾಮಿಯವರು ಮಾತಾಡುತ್ತ ಕಾಶ್ಮೀರದಲ್ಲಿ ಏನೆಲ್ಲ ನಡೆಯುತ್ತಿದೆಯೋ ಅವು ಕೇವಲ ಕಾಶ್ಮೀರದ ಸಮಸ್ಯೆಯಲ್ಲ, ಇಡೀ ದೇಶದ ಮುಂದಿರುವ ಪ್ರಶ್ನೆ ಎಂದು ಪರಿಗಣಿಸಿ ಎಂದು ನೆರೆದಿದ್ದ ಪತ್ರಕರ್ತರನ್ನು ಕಳಕಳಿಯಿಂದ ವಿನಂತಿಸಿಕೊಂಡರು. ಕಾಶ್ಮೀರ ಪ್ರಶ್ನೆಯನ್ನು ಒಂದು ರಿಯಲ್ ಎಸ್ಟೇಟ್ ಪ್ರಶ್ನೆಯ ಮಟ್ಟಕ್ಕೆ ಇಳಿಸಲಾಗಿದೆ. ಇದು ಹಾಸ್ಯಾಸ್ಪದ. ಕಾಶ್ಮೀರ ಒಂದು ಮಾನವ ದುರಂತವಾಗಿ ಬಿಡುತ್ತಿದೆ. ಭಾರತದ ಐಕ್ಯತೆಯ ಪರವಾಗಿ ಇದುವರೆಗೂ ಗಟ್ಟಿಯಾಗಿ ನಿಂತಿದ್ದವರನ್ನು ಕಂಬಿಗಳ ಹಿಂದೆ ಹಾಕಲಾಗಿದೆ.
ಮೆಹಬೂಬ ಮುಫ್ತಿಯವರ ಮೇಲೆ ಕಾನೂನೇ ಅಲ್ಲದ ಕಾನೂನು ಆಗಿರುವ ಕರಾಳ ಸಾರ್ವಜನಿಕ ಸುರಕ್ಷತೆಯ ಕಾಯ್ದೆ(ಪಿಎಸ್‌ಎ)ಯ ಅಡಿಯಲ್ಲಿ ಹಾಕಿರುವ ಆಪಾದನೆಗಳು ಅವರ ಜತೆಗೇ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದವರಿಗೆ ಮಾತ್ರವಲ್ಲ,  ಭಾರತೀಯ ನಾಗರಿಕಳಾಗಿರುವ ಒಬ್ಬ ಮಹಿಳೆಗೆ ಮಾಡಿರುವ ಅವಮಾನ. ಈ ಆಪಾದನಾ ಪಟ್ಟಿಗಳು ಬಿಜೆಪಿಯ ಮನೋಭಾವವನ್ನು, ದಿವಾಳಿಕೋರತನವನ್ನು ಪ್ರದರ್ಶಿಸುತ್ತವೆ ಎಂದು ತರಿಗಾಮಿ ಆಕ್ರೋಶ ವ್ಯಕ್ತಪಡಿಸಿದರು. ಅವರು ಪ್ರಜಾಪ್ರಭುತ್ವ ಮತ್ತು ರಾಷ್ಟ್ರೀಯವಾದ ಪರಸ್ಪರ ವಿರುದ್ಧ ವಿಚಾರಗಳು ಎಂಬಂತೆ ಬಿಂಬಿಸುತ್ತಿದ್ದಾರೆ. ಇದು ನಿಜವಲ್ಲ. ಜಮ್ಮು ಮತ್ತು ಕಾಶ್ಮೀರದ ಜನತೆಗೂ ಒಂದು ಪ್ರಜಾಪ್ರಭುತ್ವ ರಚನೆಯನ್ನು ಹೊಂದುವ ಹಕ್ಕಿದೆ, ಗಣತಂತ್ರ ಸಂವಿಧಾನದ ಅಡಿಯಲ್ಲಿ ಅವರಿಗೆ ಈ ಹಕ್ಕು ಇದೆ ಎಂದು ಅವರು ಒತ್ತಿ ಹೇಳಿದರು. ಅಲ್ಲಿ ವಿಧಾನಸಭೆಗೆ ಚುನಾವಣೆಗಳನ್ನು ನಡೆಸಿ ಜನಗಳಿಗೆ ತಮ್ಮ ಪ್ರತಿನಿಧಿಗಳನ್ನು ನಿರ್ಧರಿಸಲು ಬಿಡುತ್ತಿಲ್ಲ ಏಕೆ. ಬದಲಿಗೆ, ಕಾಶ್ಮೀರದಲ್ಲಿ ಇರುವವರೆಲ್ಲರೂ ಪಾಕಿಸ್ತಾನಿಗಳು ಭಯೋತ್ಪಾದಕರು ಎಂದು ಅದು ತೋರಿಸುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಬಂದರೆ ಭಾರತಕ್ಕೆ ತೊಂದರೆ ಎಂಬಂತೆ ಬಿಂಬಿಸುತ್ತಿದ್ದಾರೆ.
ರಾಜ್ಯದ ಪ್ರವಾಸೋದ್ಯಮಕ್ಕೆ ಆಗಿರುವ ಆಘಾತದ ಬಗ್ಗೆ ಹೇಳುತ್ತ ತರಿಗಾಮಿ, ಈ ವರದಿಯ ಆರಂಭದಲ್ಲಿ ಹೇಳಿದಂತೆ ಕಾಶ್ಮೀರವನ್ನೇ ಒಂದು ಬಹಿರಂಗ ಜೈಲೆಂದು ಅಧಿಸೂಚನೆ ಹೊರಡಿಸಲಿ, ಏಕೆಂದರೆ ಇದೀಗ ಕಾಶ್ಮೀರಿಗಳು ಎದುರಿಸುತ್ತಿರುವ ವಾಸ್ತವತೆ ಎಂದು ಖೇದ ವ್ಯಕ್ತಪಡಿಸಿದರು. ಆಗಸ್ಟ್ ೫ ರ ಕರಾಳ ಕ್ರಮ ಕೈಗೊಂಡ ಸರಕಾರ ಇದನ್ನೂ ಮಾಡಬಲ್ಲದು ಎಂದು ಗೇಲಿ ಮಾಡಿದರು. ಕಾಶ್ಮೀರದ ಜನತೆ ಈ ಸರಕಾರದ ಬಗ್ಗೆ ವಿಶ್ವಾಸವನ್ನು ಕಳಕೊಂಡಿದ್ದಾರೆ, ಆದರೆ ಭಾರತದ ಜನತೆಯ ಬಗ್ಗೆ ಅವರಿಗಿನ್ನೂ ಅಪಾರ ನಂಬಿಕೆ ಇದೆ. ದಿಲ್ಲಿಯ ಚುನಾವಣೆಗಳು ದಿಲ್ಲಿಯ ಜನತೆಗಷ್ಟೇ ಅಲ್ಲ, ಕಾಶ್ಮೀರದ ಜನತೆಗೂ ಒಂದು ಆಶಾಕಿರಣ ಎಂದರು.
ಇತ್ತೀಚಿಗೆ ಹಿಂದೆಂದೂ ಕಾಣದ ರೀತಿಯ ಭಾರೀ ಹಿಮಪಾತದಿಂದ ಕಣಿವೆಯಲ್ಲಿ ಸೇಬು ಬೆಳೆಗೆ,  ಮತ್ತು ಜಮ್ಮುವಿನಲ್ಲಿ ವಿಪರೀತ ಮಳೆಯಿಂದ ಭತ್ತದ ಬೆಳೆಗೆ ಆದ ಅಪಾರ ಹಾನಿಯ ಬಗ್ಗೆ ಹೇಳುತ್ತ ಇಡೀ ಮಾರುಕಟ್ಟೆ ಕುಸಿದಿದೆ, ಆದರೆ ಈ ರಾಜ್ಯಕ್ಕೆ ೩೬ ಕೇಂದ್ರ ಮಂತ್ರಿಗಳು ಭೇಟಿ ನೀಡಿದರು, ಅವರಲ್ಲಿ ೩೧ ಮಂದಿ ಜಮ್ಮು ಪ್ರದೇಶಕ್ಕೆ ಹೋದರೆ ೫ ಮಂದಿ ಕಾಶ್ಮೀರ ಕಣಿವೆಗೆ ಭೇಟಿ ನೀಡಿದರು. ಆದರೆ ಅವರ ಭೇಟಿಗಳ ನಂತರವೂ ಬೆಳೆಗಾರರಿಗೆ ಯಾವುದೇ ಪರಿಹಾರ ಬಂದಿಲ್ಲ. ಸರಕಾರ ಇನ್ನೂ ಲಡಾಖಿನ ಬುಡಕಟ್ಟು ಸ್ಥಾನಮಾನದ ಬಗ್ಗೆ ನಿರ್ಧರಿಸಿಲ್ಲ. ಜಮ್ಮು ಮತ್ತು ಲಡಾಖ್‌ನ ಜನಗಳು ತಾವು ಉದ್ಯೋಗ ಮತ್ತು ಭೂಮಿಗೆ ಸಂಬಂಧಪಟ್ಟಂತೆ ಈ ಹಿಂದೆ ಹೊಂದಿದ್ದ ಹಕ್ಕುಗಳನ್ನು ಮತ್ತೆ ಕೊಡುವಂತೆ ಬೊಬ್ಬೆ ಹೊಡೆದು ಕೇಳುತ್ತಿದ್ದಾರೆ, ಜಮ್ಮುವಿನ ಹಿಂದೂಗಳು, ಲೇಹ್‌ನ ಬೌದ್ಧರು ಮತ್ತು ಕಾರ್ಗಿಲ್‌ನ ಮುಸ್ಲಿಮರು ಎಲ್ಲರೂ ಆತಂಕಿತರಾಗಿದ್ದಾರೆ. ಆಗಸ್ಟ್ ೫ ರ ಸರಕಾರದ ಕ್ರಮ ಈಗ ಸುಪ್ರಿಂ ಕೊರ್ಟಿನ ಎದುರು ಇರುವುದರಿಂದ ಸರಕಾರ ಯಾವುದೇ ವಿಪರಿತ ಕ್ರಮಗಳಿಗೆ ಕೈಹಾಕಬಾರದು ಎಂದು ತರಿಗಾಮಿಯವರೂ ಎಚ್ಚರಿಸಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವವನ್ನು ಮತ್ತೆ ನೆಲೆಗೊಳಿಸಿ, ಸಂಪರ್ಕ ವ್ಯವಸ್ಥೆಯನ್ನು ಮತ್ತೆ ನೆಲೆಗೊಳಿಸಿ ರಾಜ್ಯದ ವಿದ್ಯಾರ್ಥಿ-ಯುವಜನ ಶಿಕ್ಷಣ ಉದ್ಯೋಗ ಗಳಿಗೆ, ಜನಗಳು ವಿವಿಧ ಸ್ಕೀಮುಗಳಿಗೆ ಅರ್ಜಿ ಹಾಕಿಕೊಳ್ಳಲು ಅವಕಾಶ ಮಾಡಿಕೊಡಿ ಎಂದು ಆಗ್ರಹಿಸುತ್ತಲೇ ತರಿಗಾಮಿಯವರು ಆಗಸ್ಟ್ ೫ರಂದು ಕೇಂದ್ರ ಸರಕಾರ ಇಡೀ ಜಮ್ಮು ಮತ್ತು ಕಾಶ್ಮಿರದ ಜನತೆಗೆ ಅವಮಾನ ಮಾಡಿದಾಗ ಚಪ್ಪಾಳೆ ತಟ್ಟಿದವರು ಪಶ್ಚಾತ್ತಾಪ ಪಡಬೇಕಾದ ಸಂದರ್ಭ ಬರುತ್ತದೆ ಎಂದೂ ಹೇಳಿದರು, ಈ ಸರಕಾರವನ್ನು ಉತ್ತರದಾಯಿಯಾಗಿ ಮಾಡಿ, ಭಾರತದ ಜನತೆಯಲ್ಲಿ ಇಷ್ಟೇ ನನ್ನ ವಿನಂತಿ ಎನ್ನುತ್ತ ಮಾತನ್ನು ಮುಗಿಸಿದರು.

Leave a Reply

Your email address will not be published. Required fields are marked *