ಗುತ್ತಿಗೆ ಆಧಾರದಲ್ಲಿ ನೀಡಲಾದ ಜಮೀನುಗಳನ್ನು ಅವರಿಗೆ ಮಾರಾಟ ಮಾಡಲು ಉದ್ದೇಶಿಸಿರುವ ಸುತ್ತೋಲೆಯನ್ನು ಹಿಂಪಡೆಯಲು ಒತ್ತಾಯಿಸಿ ಮನವಿ

ದಿನಾಂಕ: ೧೬-೦೭-೨೦೨೦

ಮಾನ್ಯ ಮುಖ್ಯ ಮಂತ್ರಿಗಳು,
ಕರ್ನಾಟಕ ಸರ್ಕಾರ,
ವಿಧಾನ ಸೌಧ, ಬೆಂಗಳೂರು.

ಮಾನ್ಯರೇ,

ಕರ್ನಾಟಕ ಭೂ ಮಂಜೂರಾತಿ ನಿಯಮಗಳು- ೧೯೬೯ ರ ಆಧಾರದಲ್ಲಿ ೩೦ ವರ್ಷಗಳ ಕಾಲ ಸರಕಾರಿ ಜಮೀನುಗಳನ್ನು ವಿವಿಧ ಸಂಘ, ಸಂಸ್ಥೆಗಳು, ಕೈಗಾರಿಕೆ ಮತ್ತಿತರೇ ಕ್ರಮಗಳಿಗೆ ಗುತ್ತಿಗೆ ಆಧಾರದಲ್ಲಿ ರಾಜ್ಯದಾದ್ಯಂತ ನೀಡಲಾಗಿರುವ ದಶ ಲಕ್ಷಾಂತರ ಎಕರೆ ಜಮೀನುಗಳನ್ನು ಅವರಿಗೆ ಮಾರಾಟ ಮಾಡಲು ರಾಜ್ಯ ಸರಕಾರ ಏಕ ಪಕ್ಷೀಯವಾಗಿ ನಿರ್ಧರಿಸಿ ಸುತ್ತೋಲೆ ಹೊರಡಿಸಿರುವುದನ್ನು ಭಾರತ ಕಮ್ಯುನಿಷ್ಠ್ ಪಕ್ಷ (ಮಾರ್ಕ್ಸ್ವಾದಿ) ದ ಕರ್ನಾಟಕ ರಾಜ್ಯ ಸಮಿತಿ ತೀವ್ರವಾಗಿ ವಿರೋಧಿಸುತ್ತದೆ. ಇದೊಂದು ವಿವೇಚನಾ ರಹಿತ ಕ್ರಮವಾಗಿದ್ದು, ಕೂಡಲೇ ಸದರಿ ನಿರ್ಣಯವನ್ನು ಹಾಗೂ ಅದರ ಆದೇಶದ ಸುತ್ತೋಲೆಯನ್ನು ವಾಪಾಸು ಪಡೆಯಲು ಬಲವಾಗಿ ಒತ್ತಾಯಿಸುತ್ತದೆ.

land_acqಈ ಆದೇಶದಿಂದ ರಾಜ್ಯದಾದ್ಯಂತ ಇರುವ ದಶ ಲಕ್ಷಾಂತರ ಎಕರೆ ಫಲವತ್ತಾದ ಮತ್ತು ಭಾರೀ ಖನಿಜ ಸಂಪನ್ಮೂಲಗಳಿರುವ ಜಮೀನುಗಳು ಬಂಡವಾಳದಾರರ ಪಾಲಾಗಲಿವೆ. ಅದೇ ರೀತಿ, ಇದರಿಂದ ಅವುಗಳು ಸರಕಾರದ ಬೊಕ್ಕಸಕ್ಕೆ ಪ್ರತಿವರ್ಷ ತರುವ ಕೋಟ್ಯಾಂತರ ರೂಗಳ ಆದಾಯವು ಇಲ್ಲವಾಗಲಿದೆ.

ಅಲ್ಲದೇ, ಅವುಗಳಲ್ಲಿ ರೈತರಿಂದ ಬಲವಂತವಾಗಿ ಸ್ವಾಧೀನ ಪಡಿಸಿಕೊಂಡ ಹಲವು ದಶ ಸಾವಿರ ಎಕರೆಗಳ ಜಮೀನುಗಳು ಸೇರಿವೆ. ಗುತ್ತಿಗೆಗೆ ಪಡೆದ ಸಾವಿರಾರು ಎಕರೆ ಜಮೀನುಗಳಲ್ಲಿ ದಶಕಗಳು ಕಳೆದರೂ ಗುತ್ತಿಗೆ ನಿಯಮಗಳಂತೆ ಅಲ್ಲಿ ಅಭಿವೃದ್ಧಿಯನ್ನು ಮಾಡಿಲ್ಲ ಮಾತ್ರವಲ್ಲಾ, ಭೂ ಸಂತ್ರಸ್ಥ ಕುಟುಂಬಗಳಿಗೆ ಉದ್ಯೋಗಗಳನ್ನು, ಇಲ್ಲವೇ ಉದ್ಯೋಗ ಪರಿಹಾರಗಳನ್ನು ನೀಡಲಾಗಿಲ್ಲ.

ಉದಾಹರಣೆಗೆ, ತಲಾ ಎಕರೆಗೆ, ೧೦,೦೦೦ ರೂಗಳ ಆಧಾರದಲ್ಲಿ ಸುಮಾರು ೨,೬೬೦ ಎಕರೆಗಳ ಜಮೀನುಗಳನ್ನು ಬಳ್ಳಾರಿ ಜಿಲ್ಲೆಯಲ್ಲಿ ಗುತ್ತಿಗೆಗೆ ಪಡೆದು ಹತ್ತು ವರ್ಷಗಳಾದರೂ, ಮಿತ್ಥಲ್ ಕಂಪನಿ ಇದುವರೆಗೆ ಕೈಗಾರಿಕೆಗಳನ್ನು ಸ್ಥಾಪಿಸಿಲ್ಲ. ಇಂತಹ ಜಮೀನುಗಳು ರಾಜ್ಯದಲ್ಲಿ ಅದೆಷ್ಠು?

ಅದೇ ಬಳ್ಳಾರಿ ಜಿಲ್ಲೆಯಲ್ಲಿ ಜಿಂದಾಲ್ ಕಂಪನಿ ಸುಮಾರು ೧೩,೦೦೦ ಕ್ಕೂ ಹೆಚ್ಚು ಎಕರೆ ಜಮೀನುಗಳನ್ನು ಗುತ್ತಿಗೆಗೆ ಪಡೆದಿದೆ. ಕೈಗಾರಿಕೆಗಳ ನಿರ್ಮಾಣವಾಗಿದೆ. ಇಂತಹ ಅಭಿವೃದ್ದಿ ಹೊಂದಿದ ಜಮೀನುಗಳು ರಾಜ್ಯದಲ್ಲಿ ಅದೆಷ್ಟು?

ಅದು ಮಾತ್ರವೇ ಅಲ್ಲಾ, ಗಣಿ ಸಂಪನ್ಮೂಲಗಳ ತೆಗೆಯಲು (ಕಬ್ಬಿಣದ ಅದಿರು) ಹಲವು ಕಂಪನಿಗಳು ಬಳ್ಳಾರಿ ಜಿಲ್ಲೆಯಲ್ಲಿ ದಶ ಸಾವಿರ ಎಕರೆ ಪ್ರದೇಶಗಳಷ್ಟು ಜಮೀನುಗಳನ್ನು ಗುತ್ತಿಗೆಗೆ ಪಡೆದು ಮತ್ತಷ್ಠು ಗಣಿ ಜಮೀನುಗಳನ್ನು ಒತ್ತುವರಿ ಮಾಡಿರುವುದನ್ನು ನೋಡಿದ್ದೇವೆ. ಇತರೆ ಗಣಿಗಾರಿಕೆ ಪ್ರದೇಶಗಳು ರಾಜ್ಯದಲ್ಲಿ ಹಲವೆಡೆ ಇವೆ.

ಇವು ಮತ್ತು ಈ ರೀತಿ ಲಾಭ ತರುವ ಗುತ್ತಿಗೆಗಳ ಜಮೀನುಗಳ ಗುತ್ತಿಗೆ ಮೊತ್ತವನ್ನು ವೈಜ್ಞಾನಿಕವಾಗಿ ಪುನರ್ ನಿಗದಿಸಿದಲ್ಲಿ ಪ್ರತಿವರ್ಷವೂ ರಾಜ್ಯದ ಬೊಕ್ಕಸಕ್ಕೆ ಈಗಿನದಕ್ಕೂ ಅಧಿಕ ಉತ್ತಮ ಮೊತ್ತದ ಆದಾಯವನ್ನೇ ತರಲಿವೆ.

ಸುತ್ತೋಲೆಯು ಸರಕಾರದ ಮಾರ್ಗ ಸೂಚಿಬೆಲೆಯ ಎರಡು ಪಟ್ಟು ಹಣ ನೀಡಿ ಖರೀದಿಸುವ ಕಂಪನಿಗಳು ಮೂಲ ಉದ್ದೇಶವನ್ನು ಕೈಬಿಟ್ಟು ಯಾವ ವಯ್ಯಕ್ತಿಕ ಹಿತಾಸಕ್ತಿಗೆ ಬೇಕಾದರೂ ಬಳಸಲು ಅವಕಾಶ ನೀಡುತ್ತದೆ. ಇದು ಮೂಲ ಉದ್ದೇಶಕ್ಕೆ ಜಮೀನು ನೀಡಿ ಉದ್ಯೋಗ ದೊರೆಯುವುದೆಂಬ ಆಶಯವನ್ನು ಮಣ್ಣುಪಾಲು ಮಾಡಲಿದೆ. ಜಮೀನು ನೀಡಿದ ರೈತರು ಹಾಗೂ ಅವರ ಕುಟುಂಬಗಳ ಸದಸ್ಯರನ್ನು ವಂಚಿಸಲಿದೆ.

ಆದ್ದರಿಂದ, ಸರಕಾರದ ಏಕ ಪಕ್ಷೀಯ ಕ್ರಮಗಳಿಂದ ಸರಕಾರಕ್ಕೆ, ಅದರ ವಶದಲ್ಲಿದ್ದು ಒಳ್ಳೆಯ ಆದಾಯ ತರಲಿರುವ ಮತ್ತು ಸದರಿ ಗುತ್ತಿಗೆಯ ಉದ್ದೇಶವನ್ನು ನೆರವೇರಿಸಲು ಪ್ರೇರಕವಾಗಿರುವ ಮತ್ತು ರೈತ ಕುಟುಂಬಗಳ ಹಿತವನ್ನು ಕಾಯುವ ಉದ್ದೇಶ ಹೊಂದಿರುವ ಮತ್ತು ರಾಜ್ಯದ ನಿರುದ್ಯೋಗ ನಿವಾರಣೆಗೆ ಸಹಾಯಕ ವಾಗಿರುವ, ಒಟ್ಟಾರೆ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿರುವ ಈ ದಶ ಲಕ್ಷಾಂತರ ಎಕರೆ ಜಮೀನುಗಳನ್ನು ಮಾರಾಟ ಮಾಡುವುದನ್ನು ತಡೆಯುವುದು ಅತ್ಯಂತ ತೀವ್ರ ಗತಿಯ ಅಗತ್ಯವಿದೆ.
ಆದ್ದರಿಂದ ಸರಕಾರಿ ಜಮೀನುಗಳನ್ನು ಕಬಳಿಸುವ ಬಂಡವಾಳದಾರರ ಆಮಿಷಕ್ಕೆ ತಾವು ಒಳಗಾಗದೇ, ಸದರಿ ಮಾರಾಟವನ್ನು ತಡೆಯುವಂತೆ ಸಿಪಿಐಎಂ ಈ ಮೂಲಕ ಒತ್ತಾಯಿಸುತ್ತದೆ.
ಅದೇ ರೀತಿ, ರಾಜ್ಯ ಸರಕಾರ ಈ ಕೂಡಲೇ ಲೀಜ್ / ಗುತ್ತಿಗೆಗಾಗಿ ರಾಜ್ಯದಾದ್ಯಂತ ನೀಡಲಾದ ಜಮೀನುಗಳ ಜಿಲ್ಲಾವಾರು ವಿವರ ಮತ್ತು ಅವುಗಳಿಂದ ಸರಕಾರಕ್ಕೆ ವಿವಿಧ ಇಲಾಖೆಗಳಿಗೆ ಬರುವ ಆದಾಯದ ಮಾಹಿತಿ ಒಳಗೊಂಡ ವಿವರ ನೀಡುವ ಶ್ವೇತ ಪತ್ರವನ್ನು ಹೊರಡಿಸಲು ಸಿಪಿಐಎಂ ಮನವಿ ಮಾಡುತ್ತದೆ.

ಯು. ಬಸವರಾಜ
ಕಾರ್ಯದರ್ಶಿ

Leave a Reply

Your email address will not be published. Required fields are marked *