ತ್ರಿಪುರಾದ ಹಿರಿಯ ಕಮ್ಯುನಿಸ್ಟ್ ಮುಖಂಡ ಬಜುಬನ್ ರಿಯನ್ ನಿಧನ

ತ್ರಿಪುರಾದ ಹಿರಿಯ ಸಿಪಿಐ(ಎಂ) ಮುಖಂಡ ಹಾಗೂ ಮಾಜಿ ಕೇಂದ್ರ ಸಮಿತಿ ಸದಸ್ಯ ಬಜುಬನ್ ರಿಯನ್ ಫೆಬ್ರುವರಿ ೨೧ರಂದು ಅಗರ್ತಲಾದಲ್ಲಿ ನಿಧನರಾಗಿದ್ದಾರೆ. ಅವರಿಗೆ ೭೯ ವರ್ಷವಾಗಿತ್ತು.
ಅವರು ೧೯೭೩ರಲ್ಲಿ ಪಕ್ಷದ ತ್ರಿಪುರಾ ರಾಜ್ಯ ಸಮಿತಿಗೆ ಚುನಾಯಿತರಾಗಿದ್ದರು, ೨೦೦೨ರಲ್ಲಿ ರಾಜ್ಯ ಕಾರ್ಯದರ್ಶಿ ಮಂಡಳಿಗೆ ಚುನಾಯಿತರಾದರು. ೨೦೦೮ರಲ್ಲಿ ೧೯ನೇ ಮಹಾಧಿವೇಶನದಲ್ಲಿ ಅವರು ಕೇಂದ್ರ ಸಮಿತಿಗೆ ಆಯ್ಕೆಗೊಂಡರು. ೨೦೧೮ರ ವರೆಗೆ ಅವರು ಕೇಂದ್ರ ಸಮಿತಿ ಸದಸ್ಯರಾಗಿ ಮುಂದುವರೆದರು.
ಬಜುಬನ್ ರಿಯನ್ ಒಬ್ಬ ಗಣ್ಯ ಸಂಸತ್ ಸದಸ್ಯರಾಗಿದ್ದರು. ತ್ರಿಪುರಾ ಪೂರ್ವ ಲೋಕಸಭಾ ಕ್ಷೇತ್ರದಿಂದ ಅವರು ಸತತ ಏಳು ಬಾರಿ ಆಯ್ಕೆಯಾದವರು. ಯುಪಿಎ-೧ ಸರಕಾರದ ಅವಧಿಯಲ್ಲಿ ಅರಣ್ಯ ಹಕ್ಕುಗಳ ಕಾಯ್ದೆಯನ್ನು ರೂಪಿಸುವಲ್ಲಿ ಅವರು ಕೊಡುಗೆ ಗಮನಾರ್ಹ. ಇದು ಬುಡಕಟ್ಟು ಜನಗಳಿಗೆ ಅರಣ್ಯ ಭೂಮಿಯ ಹಕ್ಕು ನೀಡಿದ ಕಾಯ್ದೆ. ಇದಕ್ಕೆ ಮೊದಲು ಅವರು ಎರಡು ಬಾರಿ ತ್ರಿಪುರಾ ವಿಧಾನಸಭೆಗೆ ಆಯ್ಕೆಯಾಗಿದ್ದರು ಮತ್ತು ತ್ರಿಪುರಾ ಎಡರಂಗ ಸರಕಾರದಲ್ಲಿ ಕೃಷಿ ಮಂತ್ರಿಯಾಗಿ ಸೇವೆ ಸಲ್ಲಿಸಿದರು.
ಅವರು ಆದಿವಾಸಿ ಅಧಿಕಾರ್ ರಾಷ್ಟ್ರೀಯ ಸಮಿತಿಯ ಸ್ಥಾಪಕ ಮುಖಂಡರು ಮತ್ತು ಅಖಿಲ ಭಾರತ ಕಿಸಾನ್ ಸಭಾ ಹಾಗೂ ಗಣಮುಕ್ತಿ ಪರಿಷದ್‌ನ ಉನ್ನತ ಮುಖಂಡರಲ್ಲಿ ಒಬ್ಬರಾಗಿದ್ದರು.
ಅವರ ನಿಧನದಿಂದ ಪಕ್ಷ ಮತ್ತು ತ್ರಿಪುರಾದಲ್ಲಿ ಕಮ್ಯುನಿಸ್ಟ್ ಆಂದೋಲನಕ್ಕೆ ದೊಡ್ಡ ನಷ್ಟವಾಗಿದೆ ಎಂದಿರುವ ಸಿಪಿಐ(ಎಂ) ಪೊಲಿಟ್‌ ಬ್ಯುರೊ ಅವರ ಕುಟುಂಬದ ಸದಸ್ಯರಿಗೆ ಹಾರ್ದಿಕ ಸಂತಾಪಗಳನ್ನು ವ್ಯಕ್ತಪಡಿಸಿದೆ.

Leave a Reply

Your email address will not be published. Required fields are marked *