ದಿಲ್ಲಿ ಗಲಭೆಗಳು: ಪೋಲೀಸ್ ವಿಫಲವಾಗಿದೆ, ಸೇನೆಯನ್ನು ಕರೆಸಿ

ಕಳೆದ ಮೂರು ದಿನಗಳಿಂದ ಈಶಾನ್ಯ ದಿಲ್ಲಿಯನ್ನು ಆವರಿಸಿರುವ ಕೋಮುವಾದಿ ಹಿಂಸಾಚಾರದ ಬಗ್ಗೆ ಸಿಪಿಐ(ಎಂ) ಪೊಲಿಟ್ ಬ್ಯುರೊ ಆಳವಾದ ಕಳವಳ ಮತ್ತು ಆತಂಕ ವ್ಯಕ್ತಪಡಿಸಿದೆ. ಕೋಮುವಾದಿ ಘರ್ಷಣೆಗಳನ್ನು ಸೃಷ್ಟಿಸಲು ಹಟ ತೊಟ್ಟಂತಿರುವ ಗ್ಯಾಂಗ್‌ಗಳ ಹಲ್ಲೆಗಳಿಂದಾಗಿ 20 ಮಂದಿ ಪ್ರಾಣ ಕಳಕೊಂಡಿದ್ದಾರೆ, ನೂರಾರು ಮಂದಿ ಗಾಯಗೊಂಡಿದ್ದಾರೆ. ಸತ್ತವರಲ್ಲಿ ಮತ್ತು ಗಾಯಗೊಂಡವರಲ್ಲಿ ಬಹಳಷ್ಟು ಮಂದಿ ಗುಂಡಿನೇಟುಗಳಿಗೆ ಒಳಗಾಗಿದ್ದಾರೆ ಎಂಬುದು ಸಮಾಜಘಾತುಕ ಮತ್ತು ಕ್ರಿಮಿನಲ್ ಶಕ್ತಿಗಳ ಪಾತ್ರವನ್ನು ಸೂಚಿಸುತ್ತದೆ. ಅಂಗಡಿಗಳು, ಮಾರುಕಟ್ಟೆಗಳು ಮತ್ತು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ, ಗಲಭೆಕೋರರು ಯಾವುದೇ ಶಿಕ್ಷೆಯ ಭೀತಿಯಿಲ್ಲದೆ ಬೆಂಕಿ ಹಚ್ಚುವದರಲ್ಲಿ ತೊಡಗಿದ್ದಾರೆ.
ಸೋಮವಾರ ಬೆಳಿಗ್ಯೆ(ಫೆಬ್ರುವರಿ 24)ಯಿಂದ ಹಲ್ಲೆಗಳು, ಹಿಂಸಾಚಾರಗಳು ನಡೆಯುತ್ತಿದ್ದರೂ, ಇದುವರೆಗೂ ಪೋಲೀಸರಿಗೆ ಪರಿಸ್ಥಿತಿಯನ್ನು ಹತೋಟಿಗೆ ತರಲು ಸಾಧ್ಯವಾಗಿಲ್ಲ. ಬದಲಿಗೆ, ಹಿಂಸಾಚಾರ ಹೊಸ ಪ್ರದೇಶಗಳಿಗೆ ಹರಡಿದೆ. ಪೋಲೀಸರ ಪಾತ್ರ ನಿಜಕ್ಕೂ ಆಘಾತಕಾರಿ. ಕೆಲವು ಸಂದರ್ಭಗಳಲ್ಲಿ, ಪೋಲೀಸರು ಮಧ್ಯಪ್ರವೇಶಿಸದೆ ಸುಮ್ಮನೇ ನಿಂತಿದ್ದುದು ಕಂಡು ಬಂದರೆ, ಇತರ ಹಲವು ಸಂದರ್ಭಗಳಲ್ಲಿ ಪೋಲೀಸರು ಜನಜಂಗುಳಿಯೊಂದಿಗೆ ಶಾಮೀಲಾಗಿರುವುದು ಮತ್ತು ನೆರವಾಗಿರುವುದು ಕೂಡ ಕಂಡು ಬಂದಿದೆ.
ಪೋಲೀಸರ ವಿಫಲತೆ ಎಷ್ಟು ಎದ್ದು ಕಾಣುತ್ತಿದೆಯೆಂದರೆ, ಸುಪ್ರಿಂ ಕೋರ್ಟ್ ಇಂದು ಗಲಭೆಗಳಿಗೆ ಸಂಬಂಧಪಟ್ಟಂತೆ, ಪೋಲಿಸರಲ್ಲಿ ವೃತ್ತಿಪರತೆ ಮತ್ತು ಸ್ವಾತಂತ್ರ್ಯದ ಕೊರತೆ ಇದೆ ಎಂದು ಟಿಪ್ಪಣಿ ಮಾಡಿದೆ. ದಿಲ್ಲಿ ಹೈಕೋರ್ಟ್ ಕೂಡ ತನ್ನ ಅಸಮ್ಮತಿಯನ್ನು ವ್ಯಕ್ತಪಡಿಸಿದೆ. ದಿಲ್ಲಿ ಪೋಲಿಸರ ಜವಾಬ್ದಾರಿ ನೇರವಾಗಿ ಕೇಂದ್ರದ ಗೃಹ ಮಂತ್ರಾಲಯದ್ದು. ಗೃಹಮಂತ್ರಿ ಅಮಿತ್ ಷಾ ಇದು ಸ್ವಯಂಸ್ಫೂರ್ತಿಯಿಂದ ಉಂಟಾಗಿರುವಂತದ್ದು ಎನ್ನುತ್ತ, ಅದರ ಯೋಜಿತ ಹಿಂಸಾಚಾರದ ಸ್ವರೂಪದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ.
ಈ ಹಿಂಸಾಚಾರದಲ್ಲಿ ಸ್ವಯಂಸ್ಫೂರ್ತತೆ ಎಂಬುದೇನೂ ಇಲ್ಲ. ಭಾನುವಾರ (ಫೆಬ್ರುವರಿ 23) ದಂದು ಒಬ್ಬ ಸ್ಥಳೀಯ ಬಿಜೆಪಿ ಮುಖಂಡ, ಕಪಿಲ್ ಮಿಶ್ರ, ಜಫರಾಬಾದ್‌ನಲ್ಲಿ ಒಬ್ಬ ಹಿರಿಯ ಪೋಲೀಸ್ ಅಧಿಕಾರಿಯ ಎದುರಲ್ಲೇ ಒಂದು ಉದ್ರೇಕಕಾರಿ ಭಾಷಣ ಮಾಡಿ, ಸಿಎಎ-ವಿರೋಧಿ ಪ್ರತಿಭಟನಾಕಾರರನ್ನು ಎಬ್ಬಿಸಿ ಬಿಡುವ ಬೆದರಿಕೆ ಹಾಕಿದ್ದರು. ಆದರೂ ಪೋಲಿಸ್ ಪಡೆ ಪರಿಸ್ಥಿತಿಯನ್ನು ನಿರ್ವಹಿಸಲು ಸಿದ್ಧವಾಗಿರಲಿಲ್ಲ.
ಜನಗಳ ನಡುವೆ ವಿಶ್ವಾಸವನ್ನು ಮತ್ತೆ ಕುದುರಿಸಲು ಮತ್ತು ಗಲಭೆಕೋರರ ವಿರುದ್ಧ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳಲು ಇರುವ  ಏಕೈಕ ದಾರಿಯೆಂದರೆ ನಾಗರಿಕ ಅಧಿಕಾರಿಗಳ ನೆರವಿಗೆ ಸೇನೆಯನ್ನು ಕರೆ ತರುವುದು ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ ಪ್ರಾಣ ಕಳಕೊಂಡ ಎಲ್ಲರ ಕಟುಂಬಗಳಿಗೆ ಸಾಕಷ್ಟು ಪರಿಹಾರವನ್ನು ತೆರಬೇಕು, ಮತ್ತು ಗಾಯಗೊಂಡವರಿಗೂ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದೆ.
ಉದ್ರೇಕಿತರಾಗದೆ ಶಾಂತಿಯನ್ನು ಕಾಪಾಡಿಕೊಳ್ಳಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಎಲ್ಲ ಜನವಿಭಾಗಗಳಿಗೆ ಮನವಿ ಮಾಡಿಕೊಂಡಿದೆ. ಶಾಂತಿ ಮೆರವಣಿಗೆಗಳನ್ನು ಸಂಘಟಿಸುವಲ್ಲಿ, ಮತ್ತು ಪರಿಹಾರ ಹಾಗೂ ಮರುವಸತಿ ಚಟುವಟಿಕೆಗಳನ್ನು ನಡೆಸುವಲ್ಲಿ ಪಕ್ಷ ಎಲ್ಲ ಶಾಂತಿಪ್ರಿಯ ಶಕ್ತಿಗಳೊಂದಿಗೆ ಕೈಜೋಡಿಸುತ್ತದೆ ಎಂದು ಅದು ಹೇಳಿದೆ.

Leave a Reply

Your email address will not be published. Required fields are marked *