ಸರ್ವ ಪಕ್ಷ ಸಭೆಯನ್ನು ಕರೆಯಿರಿ-ದಿಲ್ಲಿ ಮುಖ್ಯಮಂತ್ರಿಗೆ ಸಿಪಿಐ(ಎಂ) ಪತ್ರ

 
ದಿಲ್ಲಿ ಸರಕಾರದ ಕೆಲಸಕ್ಕೆ ಬಹಳಷ್ಟು ಮಿತಿಗಳಿವೆ ನಿಜ, ಏಕೆಂದರೆ ದಿಲ್ಲಿ ಪೋಲೀಸ್ ದಿಲ್ಲಿ ರಾಜ್ಯ ಸರಕಾರದ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ, ಕೇಂದ್ರ ಸರಕಾರದ ಅಡಿಯಲ್ಲಿ ಬರುತ್ತದೆ. “ಆದರೂ ನಿಮ್ಮ ಸರಕಾರ ಕೆಲವು ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳಬಹುದು. ತುರ್ತಾಗಿ ದಿಲ್ಲಿಯಲ್ಲಿ ಒಂದು ಸರ್ವ ಪಕ್ಷ ಸಭೆಯನ್ನು ಕರೆಯಿರಿ. ನಾವು ಒಟ್ಟುಗೂಡಿ ಹೇಗೆ ದಿಲ್ಲಿಯಲ್ಲಿ ಕೋಮು ಸೌಹಾರ್ದವನ್ನು ಮತ್ತು ಶಾಂತಿಯನ್ನು ಖಾತ್ರಿಪಡಿಸಬಹುದು ಎಂಬ ಬಗ್ಗೆ ನಿರ್ಧರಿಸಬಹುದು” ಎಂದು ಸಿಪಿಐ(ಎಂ) ಪರವಾಗಿ ಪೊಲಿಟ್‌ಬ್ಯುರೊ ಸದಸ್ಯರಾದ ಬೃಂದಾ ಕಾರಟ್ ಮತ್ತು ದಿಲ್ಲಿ ರಾಜ್ಯ ಕಾರ್ಯದರ್ಶಿ ಕೆ.ಎಂ.ತಿವಾರಿ ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್‌ರವರಿಗೆ ಫೆಬ್ರ್ರುವರಿ ೨೭ರಂದು ಪತ್ರ ಬರೆದಿದ್ದಾರೆ.
ಈ ಸಂದರ್ಭದಲ್ಲಿ ಒಬ್ಬ ಆಮ್ ಆದ್ಮಿ ಪಾರ್ಟಿ ಕೌನ್ಸಿಲರ್ ತನ್ನ ಮನೆಯ ತಾರಸಿಯಲ್ಲಿ ನಿಂತಿರುವಾಗ ಅಲ್ಲಿಂದಲೇ ಪೆಟ್ರೋಲ್ ಬಾಂಬ್‌ಗಳು, ಕಲ್ಲುಗಳನ್ನು ಕೆಲವರು ಎಸೆಯುತ್ತಿರುವ ವೀಡಿಯೋ ಪ್ರಸಾರದಲ್ಲಿರುವುದರತ್ತ ಈ ಪತ್ರದಲ್ಲಿ ಮುಖ್ಯಮಂತ್ರಿಗಳ ಗಮನ ದೆಳೆಯುತ್ತ, ಇದು ಬಹಳ ಕಳವಳಕಾರಿ, ತಕ್ಷಣವೇ ಆತನ ವಿರುದ್ಧ ಕ್ರಮವನ್ನು ಕೈಗೊಳ್ಳಬೇಕು ಎಂದೂ  ಸಿಪಿಐ(ಎಂ) ಮುಖಂಡರು ಆಗ್ರಹಿಸಿದ್ದಾರೆ.
“ನೀವು ಎ.ಎ.ಪಿ.ಯ ಮುಖ್ಯಸ್ಥರಾಗಿ ಆತನ ವಿರುದ್ಧ ಸಂಘಟನಾ ಮಟ್ಟದಲ್ಲಿಯೂ ಕ್ರಮ ಕೈಗೊಂಡರೆ, ಇದು ದಿಲ್ಲಿಯ ಜನತೆಗೆ ಒಂದು ಬಲವಾದ ಸಂದೇಶವನ್ನು ಕೊಡುತ್ತದೆ. ತಮ್ಮ ಪಕ್ಷದವರ ದ್ವೇಷ ಭಾಷಣಗಳನ್ನು ಮತ್ತು ಕ್ರಿಯೆಗಳನ್ನು ಸಮರ್ಥಿಸಿಕೊಳ್ಳಲು ಸರ್ವ ಪ್ರಯತ್ನಗಳನ್ನು ನಡೆಸಿರುವ ರಾಜಕೀಯ ಮುಖಂಡರುಗಳಿಗೆ ಇದೊಂದು ಮಾದರಿಯಾಗುತ್ತದೆ” ಎಂದು ಸಿಪಿಐ(ಎಂ) ಮುಖಂಡರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಈ ವ್ಯಕ್ತಿಯನ್ನು ಈಗ ಆಮ್ ಆದ್ಮಿ ಪಕ್ಷದ  ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಲಾಗಿದೆ ಎಂದು ವರದಿಯಾಗಿದೆ. ಅತ್ತ ಕೇಂದ್ರ ಸರಕಾರ ಈ ಎಲ್ಲ ಗಲಭೆಗಳನ್ನು ಪ್ರಚೋದಿಸಿದ ದ್ವೇಷ ಭಾಷಣಗಳನ್ನು ಮಾ ಡಿದ ತಮ್ಮ ಪಕ್ಷದ ಮುಖಂಡರ ವಿರುದ್ಧ ಎಫ್‌ಐಆರ್ ದಾಖಲಿಸಲು ಕೂಡ ನಾಲ್ಕು ವಾರಗಳ ಸಮಯವನ್ನು ದಿಲ್ಲಿ ಹೈಕೋರ್ಟಿನಿಂದ ಪಡೆದುಕೊಂಡಿದೆ. ಇದಕ್ಕೆ ಮೊದಲು ದಿಲ್ಲಿ ಪೋಲಿಸರ ವಿಫಲತೆಯನ್ನು ಕಟುವಾಗಿ ಪ್ರಶ್ನಿಸಿದ ನ್ಯಾಯಾಧೀಶರನ್ನು ತರಾತುರಿಯಿಂದ ವರ್ಗಾವಣೆ ಮಾಡಲಾಗಿದೆ.

Leave a Reply

Your email address will not be published. Required fields are marked *