ಮಾನವೀಯತೆಯ ಆಧಾರದಲ್ಲಿ ತುರ್ತುಕ್ರಮಗಳಿಗೆ ತಕ್ಷಣ ಮಧ್ಯಪ್ರವೇಶಿಸಬೇಕು

ರಾಷ್ಟ್ರಪತಿಗಳಿಗ್ರೆ ಏಳು ಪ್ರತಿಪಕ್ಷಗಳ ಮುಖಂಡರ ಮನವಿ ಪತ್ರ
ದೇಶದ ರಾಜಧಾನಿಯಲ್ಲಿ ಉಂಟಾಗಿರುವ ಪ್ರಕ್ಷುಬ್ಧ ಪರಿಸ್ತಿತಿಯ ಬಗ್ಗೆ ಭೇಟಿಯಾಗಿ ಅಭಿಪ್ರಾಯಗಳನ್ನು ಮಂಡಿಸಲು ಅವಕಾಶ ಮಾಡಿಕೊಡಬೇಕು ಎಂದು ಹಲವು ಪ್ರತಿಪಕ್ಷಗಳ ಪರವಾಗಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ರಾಷ್ಟ್ರಪತಿಗಳಿಗೆ ಫೆಬ್ರುವರಿ ೨೬ರಂದು ಪತ್ರ ಬರೆದಿದ್ದರು. ಫೆಬ್ರುವರಿ ೨೮ರಿಂದ ಮಾರ್ಚ್ ೨ ರವರೆಗೆ ರಾಷ್ಟ್ರಪತಿಗಳನ್ನು ಭೇಟಿಯಾಗಲು ಆಗುವುದಿಲ್ಲ ಎಂಬ ಮಾಹಿತಿಯ ನಂತರ ಏಳು ಪಕ್ಷಗಳ ಮುಖಂಡರು ಫೆಬ್ರುವರಿ ೨೮ರ ಸಂಜೆ ರಾಷ್ಟ್ರಪತಿಗಳಿಗೆ ಒಂದು ಜಂಟಿ ಮನವಿಪತ್ರ ಸಲ್ಲಿಸಿ, ರಾಷ್ಟ್ರಪತಿಗಳು ತಕ್ಷಣವೇ ಮಧ್ಯಪ್ರವೇಶಿಸಿ ಮಾನವೀಯತೆಯ ಆಧಾರದಲ್ಲಿ, ಮನವಿ ಪತ್ರದಲ್ಲಿ ಪಟ್ಟಿ ಮಾಡಿರುವ ಆರು ಕ್ರಮಗಳನ್ನು ತುರ್ತಾಗಿ ಕೈಗೊಳ್ಳುವಂತೆ ಖಾತ್ರಿ ಪಡಿಸಬೇಕು ಮತ್ತು ಗಲಭೆ ಪೀಡಿತ ಪ್ರದೇಶಗಳಲ್ಲಿ ಶಾಂತಿಯಾತ್ರೆ ಕೈಗೊಳ್ಳಲು ಹಾಗೂ ಶಾಂತಿ ಸಮಿತಿಗಳನ್ನು ರಚಿಸಲು ತಮಗೆ ಬಿಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವರಿಕೆ ಮಾಡಿಸಬೇಕು ಎಂದು ಕೋರಿದ್ದಾರೆ.
ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜ, ಡಿಎಂಕೆಯ ಸಂಸದೀಯ ಪಕ್ಷದ ಮುಖಂಡರಾದ ಟಿ.ಆರ್.ಬಾಲು, ಎನ್‌ಸಿಪಿಯ ಸಂಸತ್ ಸದಸ್ಯ ಪ್ರಫುಲ್ ಪಟೇಲ್, ಲೋsಕತಾಂತ್ರಿಕ್ ಜನತಾದಳದ ಅಧ್ಯಕ್ಷ ಶರದ್ ಯಾದವ್, ಆಮ್ ಆದ್ಮಿ ಪಾರ್ಟಿಯ ಸಂಸತ್ ಸದಸ್ಯ ಸಂಜಯ್ ಸಿಂಗ್ ಮತ್ತು ಆರ್‌ಜೆಡಿಯ ಸಂಸತ್ ಸದಸ್ಯ ಪ್ರೊ. ಮನೋಜ್ ಕುಮಾರ್ ಝಾ ಈ ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ.
ರಾಷ್ಟ್ರೀಯ ರಾಜಧಾನಿ ದಿಲ್ಲಿಯನ್ನು ಮೂರು ದಿನಗಳ ಕಾಲ ತಲ್ಲಣಗೊಳಿಸಿರುವ ಗಲಭೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸುತ್ತ ಈ ಮನವಿ ಪತ್ರ, ಅದನ್ನು ಸಲ್ಲಿಸುವ  ವೇಳೆಗೆ ೩೭ಹೆಣಗಳನ್ನು ಬೀಳಿಸಿದೆ, ಅದು ಈಗಲೂ ಹೆಚ್ಚುತ್ತಲೇ ಇದೆ, ೨೦೦ಕ್ಕೂ ಹೆಚ್ಚು ಮಂದಿಯನ್ನು ಗಾಯಾಳುಗಳಾಗಿ ಮಾಡಿದೆ. ಮನೆಮಾರುಗಳು, ಆಸ್ತಿಗಳನ್ನು ಸುಟ್ಟುಹಾಕಿದ್ದು, ಇದರಿಂದಾಗಿ ಸಾವಿರಾರು ಮಂದಿ ಗುಳೆ ಹೋಗಬೇಕಾಗಿ ಬಂದಿದೆ. ಇದು ಸಶಸ್ತ್ರ, ನಿಯಮಹೀನ ಗೂಂಡಾ ಪಡೆಗಳು ಸೃಷ್ಟಿಸಿರುವ ಒಂದು ಬೃಹತ್ ಪ್ರಮಾಣದ ಮಾನವ ವೇದನೆ. ಈ ಗೂಂಡಾ ಪಡೆಗಳು ಮುಕ್ತವಾಗಿ, ಯಾವುದೇ ಅಡೆತಡೆಯಿಲ್ಲದೆ ಅಡ್ಡಾಡಲು ಭದ್ರತಾ ಪಡೆಗಳು ಬಿಟ್ಟಿವೆ ಎಂಬ ಸಂಗತಿಯನ್ನು ಈ ಮನವಿ ಪತ್ರ ರಾಷ್ಟ್ರಪತಿಗಳ ಗಮನಕ್ಕೆ ತಂದಿದೆ. ಇದು ಅತ್ಯಂತ ಖಂಡನೀಯ, ಭಾರತೀಯ ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸಬೇಕಾದ ಜಾತ್ಯತೀತ ಪ್ರಜಾಸತ್ತಾತ್ಮಕ ಗಣತಂತ್ರದಲ್ಲಿ ಇದನ್ನು ಖಂಡಿತಾ ಒಪ್ಪಲು ಸಾಧ್ಯವಿಲ್ಲ ಎಂದು ಮನವಿ ಪತ್ರ ಹೇಳಿದೆ.
ರಾಷ್ಟ್ರಪತಿಗಳು ತಕ್ಷಣವೇ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳುವಂತೆ ಮಧ್ಯಪ್ರವೇಶಿಸಬೇಕು ಎಂದು ಅದು ಕೋರಿದೆ:
  1. ತಕ್ಷಣವೇ ಶಾಂತಿಯ ಸ್ಥಾಪನೆ ಮತ್ತು ರಾಷ್ಟ್ರಪತಿಗಳಿಗೆ ನೇರವಾಗಿ ಉತ್ತರದಾಯಿಯಾಗಿರುವ ಉಪರಾಜ್ಯಪಾಲ ಮತ್ತಿತರ ಅಧಿಕಾರಿಗಳಿಗೆ ತ್ವರಿತವಾಗಿ ಪರಿಸ್ಥಿತಿಯನ್ನು ಸಾಮಾನ್ಯಗೊಳಿಸುವಂತೆ ನಿರ್ದೇಶನ ನೀಡಬೇಕು, ಹಾಗೂ ಉದ್ರೇಕಕಾರಿ ದ್ವೇಷ ಭಾಷಣಗಳನ್ನು ಮಾಡಿದ ಎಲ್ಲರ ವಿರುದ್ಧ ತಕ್ಷಣವೇ ಎಫ್‌ಐಆರ್ ಹಾಕುವಂತೆ ಮತ್ತು ಹಿಂಸಾಚಾರ ನಡೆಸಿದವರನ್ನು ಶಿಕ್ಷಿಸುವಂತೆ ಖಾತ್ರಿಪಡಿಸಬೇಕು
  2. ಮನೆಮಾರು ಕಳಕೊಂಡವರಿಗೆ ಪರಿಹಾರ ಶಿಬಿರಗಳನ್ನು ರಚಿಸಬೇಕು, ಅವರ ಮೇಲೆ ಇನ್ನಷ್ಟು ಹಲ್ಲೆಗಳು ನಡೆಯದಂತೆ ಭದ್ರತೆ ಹಾಗೂ ಅಗತ್ಯ ಸರಕುಗಳ ಸಾಕಷ್ಟು ಪೂರೈಕೆ ಒದಗಿಸಬೇಕು.
  3. ಸತ್ತವರ ಕುಟುಂಬಗಳಿಗೆ, ಮತ್ತು ಈ ಹಲ್ಲೆಗಳಲ್ಲಿ ಗಾಯಗೊಂಡವರಿಗೆ ಸೂಕ್ತ ಪರಿಹಾರಗಳನ್ನು ಪ್ರಕಟಿಸಬೇಕು.
  4. ಮನೆ, ಆಸ್ತಿ, ವ್ಯಾಪಾರದ ಸ್ಥಳಗಳು ಧ್ವಂಸಗೊಂಡುದರಿಂದ ಆಗಿರುವ ನಷ್ಟಗಳಿಗೆ ಸಾಕಷ್ಟು ಪರಿಹಾರ.
  5. ಗಲಭೆಪೀಡಿತ ಪ್ರದೇಶಗಳಲ್ಲಿ ಬಹುಧರ್ಮೀಯ ಮತ್ತು ಅಂತರಧರ್ಮೀಯ ಶಾಂತಿಯನ್ನು ಮತ್ತು ಜನಗಳ ನಡುವೆ ಸಾಮಾಜಿಕ ಸಾಮರಸ್ಯದ ಸಂದೇಶವನ್ನು ಬಲಪಡಿಸಲು ಶಾಂತಿಯಾತ್ರೆಗಳನ್ನು ಸಂಘಟಿಸ ಬಯಸುವ ನಮ್ಮಲ್ಲಿನ ಕೆಲವರಿಗೆ ಅನುಮತಿ ನೀಡಬೇಕು
  6. ಈ ಗಲಭೆಗಳು ಜನಗಳ ನಡುವೆ, ಅದರಲ್ಲೂ ಮಕ್ಕಳ ನಡುವೆ ಕಲ್ಪಿಸಲೂ ಆಗದ ಮಾನಸಿಕ ವೇದನೆಯನ್ನು ಉಂಟು ಮಾಡಿರುವುದರಿಂದ, ಪೀಡಿತ ಪ್ರದೇಶಗಳಲ್ಲಿ ಇವನ್ನು ನಿರ್ವಹಿಸಲು ಟ್ರೌಮಾ(ಭಾವಾಘಾತ) ಕೇಂದ್ರಗಳನ್ನು ತೆರೆಯಬೇಕು.

ಈ ಕ್ರಮಗಳನ್ನು ತುರ್ತಾಗಿ ಕೈಗೊಳ್ಳುವಂತೆ ಖಾತ್ರಿ ಪಡಿಸಬೇಕು ಮತ್ತು ಗಲಭೆ ಪೀಡಿತ ಪ್ರದೇಶಗಳಲ್ಲಿ ಶಾಂತಿಯಾತ್ರೆ ಕೈಗೊಳ್ಳಲು ಹಾಗೂ ಶಾಂತಿ ಸಮಿತಿಗಳನ್ನು ರಚಿಸಲು ತಮಗೆ ಬಿಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವರಿಕೆ ಮಾಡಿಸಬೇಕು ಎಂದು ಈ ಏಳು ಪಕ್ಷಗಳ ಮುಖಂಡರು ರಾಷ್ಟ್ರಪತಿಗಳನ್ನು ಕೋರಿದ್ದಾರೆ.

Leave a Reply

Your email address will not be published. Required fields are marked *