ಸಂವಿಧಾನಿಕ ಗಣತಂತ್ರದ ರಕ್ಷಣೆಗೆ ಹಿಂದುತ್ವ ಕೋಮುವಾದದ ವಿರುದ್ಧ ಜಾತ್ಯತೀತ ಶಕ್ತಿಗಳ ವಿಶಾಲ ರಂಗ- ದೇಶಪ್ರೇಮಿಗಳಿಗೆ ಯೆಚುರಿ ಮನವಿ

ಒಂದು ಉತ್ತಮ ಬದುಕಿಗಾಗಿ, ಭಾರತೀಯ ಗಣತಂತ್ರದ ಮತ್ತು ಸಂವಿಧಾನದ ಜಾತ್ಯತೀತ ಪ್ರಜಾಸತ್ತಾತ್ಮಕ ಚಾರಿತ್ರ್ಯವನ್ನು ಕಾಪಾಡಿಕೊಳ್ಳಲಿಕ್ಕಾಗಿ ಜನತೆಯ ಹೋರಾಟಗಳನ್ನು ಬಲಪಡಿಸಲು ಬಿಜೆಪಿಯನ್ನು ಒಬ್ಬಂಟಿಯಾಗಿಸುವುದು ಮತ್ತು ಸೋಲಿಸುವುದು ಅತ್ಯಗತ್ಯವಾಗಿದೆ. ಇದು ಸಾಧ್ಯವಾಗಬೇಕಾದರೆ ಸಮಸ್ತ ಭಾರತೀಯ ದೇಶಪ್ರೇಮಿಗಳು ಜೊತೆಗೂಡಿ ನಮ್ಮ ಸಂವಿಧಾನಿಕ ಗಣತಂತ್ರವನ್ನು ಕಾಪಾಡಿಕೊಳ್ಳಲು ಮತ್ತು ಪರ್ಯಾಯ ಜನಪರ ಧೋರಣೆಗಳಿಗಾಗಿ ಹೋರಾಟಗಳನ್ನು ಬಲಪಡಿಸಬೇಕಾಗಿದೆ, ಇದಕ್ಕಾಗಿ ಹಿಂದುತ್ವ ಕೋಮುವಾದದ ವಿರುದ್ಧ ಜಾತ್ಯತೀತ ಶಕ್ತಿಗಳ ಅತ್ಯಂತ ವಿಶಾಲ ರಂಗವನ್ನು ಬೆಸೆಯುವ ದೃಢನಿರ್ಧಾರವನ್ನು ಕೈಗೊಳ್ಳಬೇಕಾಗಿದೆ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಹೇಳಿದ್ದಾರೆ.

ನರಳುತ್ತಿರುವ ಜನಗಳಿಗೆ ಪರಿಹಾರ ಒದಗಿಸುವ ಬಗ್ಗೆ ಯೋಚಿಸುವ ಬದಲು ಬಿಜೆಪಿಯ ಕೇಂದ್ರ ಸರಕಾರ ಹೆಚ್ಚೆಚ್ಚು ಆರ್ಥಿಕ ಹೊರೆಗಳನ್ನು ಹಾಕುತ್ತಿದೆ, ಪ್ರತಿದಿನ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳನ್ನು ಏರಿಸಿ ಹಣದುಬ್ಬರ ನಾಗಾಲೋಟ ಹೂಡುವಂತೆ ಮಾಡುತ್ತಿದೆ. ಹೆಚ್ಚುತ್ತಿರುವ ನಿರುದ್ಯೋಗ, ಬಡತನ ಮತ್ತು ಹಸಿವಿನ ಜೊತೆಗೆ ಈ ಹಣದುಬ್ಬರ ಜನಗಳ ಬದುಕುಗಳನ್ನು ನಾಶಪಡಿಸುತ್ತಿದೆ. ಆದರೂ ಬಿಜೆಪಿ ಮತ್ತು ಆರೆಸ್ಸೆಸ್ ಇವೆಲ್ಲವನ್ನೂ ಮೀರಿ ನಿಲ್ಲುವ ಹಿಂದುತ್ವದ ಕಥನವನ್ನು ಕಟ್ಟುವಲ್ಲಿ ಯಶಸ್ವಿಯಾಗಿವೆ. ದ್ವೇಷ, ವಿಷ ಮತ್ತು ಹಿಂಸಾಚಾರದಿಂದ ಕೋಮುವಾದಿ ಧ್ರುವೀಕರಣವನ್ನು ತೀಕ್ಷ್ಣಗೊಳಿಸುವ ಮೂಲಕ ಅವು ಭಾರತೀಯ ಸಮಾಜವನ್ನು ಧ್ರುವೀಕರಿಸುತ್ತಿವೆೆ. ಈ ರೀತಿ ಧ್ರುವೀಕರಣವನ್ನು ತೀಕ್ಷ್ಣಗೊಳಿಸುವುದೇ ಅದರ ರಾಜಕೀಯ/ಚುನಾವಣಾ ಅಣಿನೆರಿಕೆಯ ಬೆನ್ನೆಲುಬು. ಇಂತಹ ಸನ್ನಿವೇಶದಲ್ಲಿ ಬಿಜೆಪಿಯನ್ನು ಒಬ್ಬಂಟಿಯಾಗಿಸುವುದು ಮತ್ತು ಸೋಲಿಸುವುದು ಅತ್ಯಗತ್ಯವಾಗಿದೆ ಎಂದು ಯೆಚುರಿ ಹೇಳಿದರು.

ಅವರು ಎಪ್ರಿಲ್ 6ರಂದು ಕೇರಳದ ಕಣ್ಣೂರಿನಲ್ಲಿ ಸಿಪಿಐ(ಎಂ)ನ 23ನೇ ಮಹಾಧಿವೇಶನವನ್ನು ಉದ್ಘಾಟಿಸುತ್ತ ಮಾತಾಡುತ್ತಿದ್ದರು.

23-FLAG HOISTING

ಎಪ್ರಿಲ್ 6 ರ ಬೆಳಿಗ್ಯೆ ಸಿಪಿಐ(ಎಂ)ನ ಹಿರಿಯ ನೇತಾರ ಮತ್ತು ಪೊಲಿಟ್‌ಬ್ಯುರೊ ಸದಸ್ಯರಾದ ಎಸ್. ರಾಮಚಂದ್ರನ್ ಪಿಳ್ಳ ಕೆಂಬಾವುಟದ ಆರೋಹಣವನ್ನು ಮಾಡುವ ಮೂಲಕ 23ನೇ ಮಹಾಧಿವೇಶನ ಆರಂಭವಾಯಿತು. ದೇಶದ ಜಾತ್ಯತೀತತೆಯನ್ನು ಹಾಳುಗೆಡವುತ್ತಿರುವ ಬಿಜೆಪಿಯನ್ನು ಜನಗಳಿಂದ ದೂರ ಮಾಡುವ ಗುರಿ ಇಟ್ಟುಕೊಳ್ಳಬೇಕು ಎಂದು ಧ್ವ್ವಜಾರೋಹಣದ ನಂತರ ಮಾತಾಡುತ್ತ ಅವರು ಹೇಳಿದರು.

ಈ ಕೆಂಬಾವುಟವನ್ನು ಕೆಂಪು ಸ್ವಯಂಸೇವಕರು ರೈತ-ಕಾರ್ಮಿಕ ಹೋರಾಟದ ಐತಿಹಾಸಿಕ ಸ್ಥಳ ಪುನ್ನಪ್ರ-ವಾಯಲಾರ್‌ನಿಂದ ರಿಲೇ ಓಟದ ಮೂಲಕ ಕಣ್ಣೂರಿಗೆ ತಂದಿದ್ದರೆ, ಅದರ ಧ್ವಜಸ್ಥಂಭವನ್ನು ಇನ್ನೊಂದು ಐತಿಹಾಸಿಕ ಭೂಹೋರಾಟದ ಸ್ಥಳ ಕಯ್ಯೂರಿನಿಂದ ಮೆರವಣಿಗೆಯಲ್ಲಿ ತರಲಾಗಿತ್ತು.

23-SY

ರಾಜಕೀಯ ಬಲಪಂಥದತ್ತ ಪಲ್ಲಟದ ಸನ್ನಿವೇಶ

ಸೀತಾರಾಂ ಯೆಚುರಿಯವರು ಈ ಮಹಾಧಿವೇಶನ ನಡೆಯುತ್ತಿರುವ ಸಂದರ್ಭದ ಒಂದು ಪಕ್ಷಿನೋಟವನ್ನು ತಮ್ಮ ಉದ್ಘಾಟನಾ ಭಾಷಣದಲ್ಲಿ ಪ್ರಸ್ತುತ ಪಡಿಸಿದರು. ಬಂಡವಾಳದ ಗರಿಷ್ಟ ಲಾಭಕ್ಕಾಗಿ ದಿವಾಳಿಕೋರ ನವ-ಉದಾರವಾದಿ ಧೋರಣೆಗಳನ್ನು ಮುಂದುವರೆಸಬೇಕಾದರೆ ಸರಕಾರಗಳ ಮೇಲೆ ಹತೋಟಿಯನ್ನು ಕಾಯ್ದುಕೊಳ್ಳಬೇಕೆಂದು ಭಾರತವೂ ಸೇರಿದಂತೆ ಹಲವು ದೇಶಗಳಲ್ಲಿ ರಾಜಕೀಯ ಬಲಪಂಥದತ್ತ ಪಲ್ಲಟ ಮುಂದುವರೆಯುತ್ತಿದೆ. ಇದು ಜನಗಳ ಹೆಚ್ಚುತ್ತಿರುವ ಐಕ್ಯ ಹೋರಾಟಗಳನ್ನು ಛಿದ್ರಗೊಳಿಸಲು ಜನಗಳಲ್ಲಿ ಭಾವೋದ್ರೇಕಗಳನ್ನು ಬಡಿದೆಬ್ಬಿಸಲು ಪ್ರಯತ್ನಿಸುವ ಮೂಲಕ ನಡೆಯುತ್ತಿದೆ. ಜನಗಳ ನಡುವೆ ವಿಚ್ಛಿದ್ರಕಾರಿ ಪ್ರಚಾರ, ಜನಾಂಗವಾದ, ಬೇರೆ ಜನಾಂಗಗಳ ಬಗ್ಗೆ ಭೀತಿ ಸೃಷ್ಟಿಸುವುದು, ಧಾರ್ಮಿಕ ಸಂಕುಚಿತವಾದ, ಮೂಲಭೂತವಾದ ಮತ್ತು ಭಾರತದ ಸಂದರ್ಭದಲ್ಲಿ ಕೋಮುವಾದವನ್ನು ಪ್ರಚೋದಿಸುವ ಮೂಲಕ ಇದನ್ನು ಮಾಡಲಾಗುತ್ತಿದೆ.

ಆದರೆ ಇದಕ್ಕೆ ಪ್ರತಿರೋಧವೂ ಹೆಚ್ಚುತ್ತಿದೆ. ವಿಶೇಷವಾಗಿ ಲ್ಯಾಟಿನ್ ಅಮೆರಿಕದಲ್ಲಿ ಎಡ, ಪ್ರಗತಿಪರ ಶಕ್ತಿಗಳ ಚುನಾವಣಾ ವಿಜಯಗಳ ಮೂಲಕ, ಜಗತ್ತಿನ ಇತರೆಡೆಗಳಲ್ಲಿ ಜನತೆಯ ಹೆಚ್ಚುತ್ತಿರುವ ಪ್ರತಿಭಟನೆಗಳು ಮತ್ತು ಹೋರಾಟಗಳ ಮೂಲಕ ಇದಕ್ಕೆ ಸವಾಲು ಹಾಕುವ ಪ್ರವೃತ್ತಿಗಳೂ ಎದ್ದು ಬರುತ್ತಿವೆ. ಐವತ್ತು ವರ್ಷಗಳ ನಂತರ ಚಿಲಿಯಲ್ಲಿ ಮತ್ತೆ ಪ್ರಗತಿಪರ ಶಕ್ತಿಗಳ ಸರಕಾರ ಬಂದಿದೆ. ಅದರಲ್ಲಿ ಮೂವರು ಕಮ್ಯುನಿಸ್ಟರು ಪ್ರಮುಖ ಜವಾಬ್ದಾರಿ ಸ್ಥಾನಗಳನ್ನು ಪಡೆದಿದ್ದಾರೆ ಎಂಬ ಬೆಳವಣಿಗೆಯತ್ತ ಯೆಚುರಿ ಗಮನ ಸೆಳೆದರು.

ಈ ನಡುವೆ ಜಗತ್ತಿನ ಮೇಲೆ ಯಜಮಾನಿಕೆಯನ್ನು ಬಲಪಡಿಸುವ ಅಮೆರಿಕನ್ ಸಾಮ್ರಾಜ್ಯಶಾಹಿಯ ಅಭೀಪ್ಸೆ ಕೋವಿಡೋತ್ತರ ಜಗತ್ತಿನಲ್ಲಿ ಮುಂದುವರೆಯುತ್ತಿದೆ. ಇದಕ್ಕಾಗಿ ಚೀನಾವನ್ನು ‘ತಡೆಗಟ್ಟವ’ ತನ್ನ ಹಿಂದಿನ ಧೋರಣೆಗೆ ಬದಲಾಗಿ ಅದನ್ನು ಒಬ್ಬಂಟಿಯಾಗಿಸುವ ಗುರಿ ಇಟ್ಟುಕೊಂಡಿದೆ. ಇದಕ್ಕಾಗಿ ಅದು ತನ್ನ ಮಿತ್ರ ದೇಶಗಳನ್ನೆಲ್ಲ ಅಣಿನೆರೆಸಲು ಪ್ರಯ್ರತ್ನಿಸುತ್ತಿದೆ. 42 ದಿನಗಳಿಂದ ನಡೆಯುತ್ತಿರುವ ರಷ್ಯ-ಉಕ್ರೇನ್ ಯುದ್ಧ, ವಾಸ್ತವವಾಗಿ, ರಷ್ಯಾ ಮತ್ತು ಅಮೆರಿಕ/ನಾಟೋ ನಡುವಿನ ಯುದ್ದ, ಉಕ್ರೇನ್ ಅದರ ರಣಾಂಗಣವಷ್ಟೇ ಎಂದ ಯೆಚುರಿ, ನಾಟೋವನ್ನು ಸತತವಾಗಿ ರಷ್ಯಾದ ಗಡಿಗಳತ್ತ ವಿಸ್ತರಿಸುವ ಪ್ರಯತ್ನದ ಹಿನ್ನೆಲೆಯಲ್ಲಿ ಈ ಯುದ್ಧ ನಡೆದಿದೆ, ಇದನ್ನು ತಕ್ಷಣವೇ ನಿಲ್ಲಿಸಬೇಕು ಎಂದರು.

 ಈ ಯುದ್ಧ ಮತ್ತು ಭಾರತವು ವಿಶ್ವಸಂಸ್ಥೆಯಲ್ಲಿ ರಷ್ಯಾದ ವಿರುದ್ಧ ನಿರ್ಣಯಗಳಲ್ಲಿ ಸತತವಾಗಿ ಗೈರುಹಾಜರಾಗುತ್ತಿರುವುದು ಭಾರತವನ್ನು ಅಮೆರಿಕನ್ ಸಾಮ್ರಾಜ್ಯಶಾಹಿಯ ಅಡಿಯಾಳು ಮಿತ್ರನಾಗಿ ಗಟ್ಟಿಗೊಳಿಸುವ ಮೋದಿ ಸರಕಾರದ ಹಂಬಲ ಎಷ್ಟು ನಿರರ್ಥಕ ಎಂಬುದನ್ನು ತೋರಿಸಿದೆ. ಭಾರತ ಒಂದು ಸ್ವತಂತ್ರ ವಿದೇಶಾಂಗ ಧೋರಣೆಯ ಮೂಲಕ ತನ್ನ ಹಿತಾಸಕ್ತಿಗಳನ್ನು ಎತ್ತಿ ಹಿಡಿಯಬೇಕು ಎಂದು ಯೆಚುರಿ ಹೇಳಿದರು.

ಭಾರತೀಯ ಸಂವಿಧಾನದ ಆಧಾರಸ್ಥಂಭಗಳ ಮೇಲೆ ಪ್ರಹಾರ

ಬಿಜೆಪಿ ಎಂಟು ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದಂದಿನಿಂದ, ವಿಶೇಷವಾಗಿ 2019ರಲ್ಲಿ ಮತ್ತೆ ಬಂದ ನಂತರ, ಆರೆಸ್ಸೆಸ್‌ನ ಫ್ಯಾಸಿಸ್ಟ್ ತೆರನ ಹಿಂದುತ್ವ ಅಜೆಂಡಾವನ್ನು ಹೇರಲು ಸಂವಿಧಾನದ ಮೂಲಾಧಾರಗಳಾದ ಜಾತ್ಯತೀತ ಪ್ರಜಾಪ್ರಭುತ್ವ, ಒಕ್ಕೂಟ ತತ್ವ, ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಸಾರ್ವಭೌಮತೆಯ ಮೇಲೆ ಸತತ ಪ್ರಹಾರ ನಡೆಸುತ್ತಿರುವುದನ್ನು ಕಾಣುತ್ತಿದ್ದೇವೆ. ಈ ಗೀಳನ್ನು ಹಚ್ಚಿಕೊಂಡಿರುವ ಅದರ ಸರಕಾರ ಮಹಾಸೋಂಕನ್ನು ನಿಭಾಯಿಸುವಲ್ಲಿ ಶೋಚನೀಯವಾಗಿ ವಿಫಲವಾದುದರಿಂದ ಭಾರೀ ಸಂಖ್ಯೆಯಲ್ಲಿ ಪ್ರಾಣಹಾನಿ ಸಂಭವಿಸಿತು. ಆದರೂ ಹಿಂದುತ್ವ ಕಥನದ ಮೂಲಕ ಅವನ್ನೆಲ್ಲ ಮರೆಮಾಚಲು ಅದಕ್ಕೆ ಸಾಧ್ಯವಾಗಿದೆ.

ಇಂತಹ ಸನ್ನಿವೇಶದಲ್ಲಿ ಅದನ್ನು ಜನಗಳಿಂದ ದೂರ ಮಾಡುವುದು ಅತ್ಯಗತ್ಯವಾಗಿದೆ. ಆದರೆ ಇದನ್ನು ಕೇವಲ ಚುನಾವಣಾ ತಂತ್ರಗಳ ಮೂಲಕ ಮಾಡಲು ಸಾಧ್ಯವಿಲ್ಲ. ರಾಜಕೀಯ, ಸೈದ್ಧಾಂತಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ರಂಗಗಳಲ್ಲಿ ಅವಿಶ್ರಾಂತ ಪ್ರಯತ್ನಗಳ ಮೂಲಕ ಇದನ್ನು ಮಾಡಬೇಕಾಗಿದೆ.

ಎಲ್ಲ ಎಡ, ಜಾತ್ಯತೀತ ಪ್ರಜಾಪ್ರಭುತ್ವವಾದಿ ಶಕ್ತಿಗಳು ಬಿಜೆಪಿಯನ್ನು ಮೂಲೆಗೊತ್ತಲು ಮತ್ತು ಸೋಲಿಸಲು ಒಂದಾಗಬೇಕು, ಜಾತ್ಯತೀತತೆಗೆ ಬದ್ಧ ಎನ್ನುವ ಎಲ್ಲ ರಾಜಕೀಯ ಪಕ್ಷಗಳು ತಮ್ಮ ದೇಶಪ್ರೇಮೀ ಕರ್ತವ್ಯವನ್ನು ನಿಭಾಯಿಸಬೇಕು. ಕಾಂಗ್ರೆಸ್ ಪಕ್ಷ ಮತ್ತು ಇತರ ಪ್ರಾದೇಶಿಕ ಪಕ್ಷಗಳು ತಮ್ಮ ಅಂತರಿಕ ಪರಿಸ್ಥಿತಿಗಳನ್ನು ಸರಿ ಪಡಿಸಿಕೊಂಡು, ಭಾರತೀಯ ಗಣತಂತ್ರದ ಜಾತ್ಯತೀತ ಪ್ರಜಾಸತ್ತಾತ್ಮಕ ಸ್ವರೂಪವನ್ನು ಉಳಿಸಿಕೊಳ್ಳುವ ಹೋರಾಟದಲ್ಲಿ ತಮ್ಮ ನಡೆ-ನಿಲುವುಗಳೇನು ಎಂದು ನಿರ್ಧರಿಸಿಕೊಳ್ಳಬೇಕು. ಇದರಲ್ಲಿ ಎಡಬಿಡಂಗಿತನ ಈ ಪಕ್ಷಗಳಿಂದ ಕೋಮುವಾದಿ ಶಕ್ತಿಗಳತ್ತ ದೊಡ್ಡ ಪ್ರಮಾಣದ ನಿರ್ಗಮನಕ್ಕೆ ದಾರಿಮಾಡಿಕೊಡುತ್ತದೆ ಎಂಬುದನ್ನು ಅನುಭವವೇ ತೋರಿಸಿಕೊಟ್ಟಿದೆ. ಯಾವುದೇ ರಾಜಿಯಿಲ್ಲದ ಜಾತ್ಯತೀತತೆಯನ್ನು ಪ್ರತಿಪಾದಿಸುವ ಮೂಲಕ ಮಾತ್ರವೇ ಹಿಂದುತ್ವ ಕೋಮುವಾದವನ್ನು ಎದುರಿಸಲು ಸಾಧ್ಯ ಎಂದು ಯೆಚುರಿ ಒತ್ತಿ ಹೇಳಿದರು.

ಸಿಪಿಐ(ಎಂ) ಮತ್ತು ಎಡಪ್ರಜಾಪ್ರಭುತ್ವ ರಂಗ ಯಾವುದೇ ರಾಜಿಯಿಲ್ಲದೆ ಜಾತ್ಯತೀತತೆಎಯನ್ನು ಎತ್ತಿ ಹಿಡಿಯುವುದು, ಜಾತಿ, ಮತ, ಲಿಂಗದ ಬೇಧಭಾವವಿಲ್ಲದೆ ಸಮಾನತೆಯನ್ನು ಗೌರವಿಸುತ್ತ ನವ-ಉದಾರವಾದಿ ಅಜೆಂಡಾಕ್ಕೆ ಪರ್ಯಾಯವಾದ ಜನಪರ ಧೋರಣೆಗಳನ್ನು ಜಾರಿ ಮಾಡುವುದು ಹೇಗೆ ಎಂದು ತೋರಿಸಿಕೊಡುತ್ತಿರುವ ಕೇರಳದ ಹೋರಾಟದ ಕೆಂಪು ಭೂಮಿ ಕಣ್ಣೂರಿನಲ್ಲಿ ನಡೆಯುತ್ತಿರುವ ಸಿಪಿಐ(ಎಂ)ನ 23ನೇ ಮಹಾಧಿವೇಶನ ಹಿಂದುತ್ವ ಅಜೆಂಡಾದ ವಿರುದ್ಧ ಹೋರಾಟವನ್ನು ಬಲಪಡಿಸಲು ಕೈಗೊಳ್ಳಬೇಕಾದ ಮೂರ್ತ ಕ್ರಮಗಳ ಬಗ್ಗೆ ಚರ್ಚೆ ನಡೆಸುತ್ತದೆ ಎಂದು ಯೆಚುರಿ ಹೇಳಿದರು.

23-PV

ಕ್ರಾಂತಿಕಾರಿ ಹೋರಾಟಗಳು ಮತ್ತು ಕೋಮುಸೌಹಾರ್ದದ ನೆಲದಲ್ಲಿ

ಇದಕ್ಕೆ ಮೊದಲು ಮಹಾಧಿವೇಶನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿರುವ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ “ಕ್ರಾಂತಿಕಾರಿ ಹೋರಾಟಗಳ ಮತ್ತು ಕೋಮುಸೌಹಾರ್ದಧ ನೆಲವಾದ ಕಣ್ಣೂರಿಗೆ ಎಲ್ಲರನ್ನೂ ಸ್ವಾಗತಿಸಲು ನನಗೆ ಅಪಾರ ಹರ್ಷವಾಗುತ್ತಿದೆ” ಎಂದರು. ತಮ್ಮ ಸ್ವಾಗತ ಭಾಷಣದಲ್ಲಿ ಅವರು ಕೇರಳದ ಕಮ್ಯುನಿಸ್ಟ್ ಆಂದೋಲನ, ಮತ್ತು ಅದರಲ್ಲಿ ಕಣ್ಣೂರಿನ ಪಾತ್ರದ ಒಂದು ನೋಟವನ್ನು ಮುಂದಿಟ್ಟರು. ಕೇರಳದಲ್ಲಿ ಕಮ್ಯುನಿಸ್ಟ್ ಪಕ್ಷದ ರಚನೆಗೆ ಭೂಮಿಕೆ ಸಿದ್ಧಗೊಳಿಸಿದ ಸಭೆ ನಡೆದದ್ದು ಈ ಜಿಲ್ಲೆಯ ಪಾರಪುರಂನಲ್ಲಿ ಡಿಸೆಂಬರ್ 1939ರಲ್ಲಿ ಎಂದು ಅವರು ನೆನಪಿಸಿದರು.

ಅಲ್ಲದೆ ಭಾರತದ ಕಮ್ಯುನಿಸ್ಟ್ ಇತಿಹಾಸದ ಧ್ರುವತಾರೆಗಳಲ್ಲಿ ಒಬ್ಬರಾದ ಎ.ಕೆ.ಗೋಪಾಲನ್ ಮತ್ತು ರಾಜ್ಯದ ಜನಪ್ರಿಯ ಮುಖ್ಯಮಂತ್ರಿಯಾಗಿದ್ದ ಇ.ಕೆ.ನಾಯನಾರ್ ಕೂಡ ಇದೇ ಜಿಲ್ಲೆಯವರು ಎಂದೂ ಅವರು ನೆನಪಿಸಿದರು.

ಮಹಾಧಿವೇಶನದ ಸಾರ್ವಜನಿಕ ಸಭೆ ನಡೆಯುವ ಸ್ಥಳಕ್ಕೆ ಎಕೆಜಿ ನಗರ ಎಂದು ಹೆಸರಿಡಲಾಗಿದೆ. ಮತ್ತು ಪ್ರತಿನಿಧಿಗಳ ಅಧಿವೇಶನ ನಡೆಯುವ ಸ್ಥಳವನ್ನು ಇ ಕೆ ನಾಯನಾರ್ ನಗರ ಎಂದು ಹೆಸರಿಸಲಾಗಿದೆ.

9509da17-9d62-43d9-a16a-66c9da041269

ಎಡ ಮತ್ತು ಪ್ರಜಾಪ್ರಭುತ್ವವಾದಿ ಪರ್ಯಾಯವನ್ನು ಬೆಳೆಸುವ ತನ್ನ ಹೊಣೆಗಾರಿಕೆ

ಉದ್ಘಾಟನಾ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಪೊಲಿಟ್‌ಬ್ಯುರೊ ಸದಸ್ಯ ಮತ್ತು ಮಾಜಿ ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ತಮ್ಮ ಭಾಷಣದ ಆರಂಭದಲ್ಲಿ ಕಯ್ಯೂರಿನ ಹುತಾತ್ಮರಾದ ಮಡತಿಲ್ ಅಪ್ಪು, ಕುಂಙಂಬು ನಾಯರ್, ಚಿರುಕಂಡನ್ ಮತ್ತು ಅಬುಬಕರ್ ಅವರುಗಳನ್ನು ಸ್ಮರಿಸಿದರು. ಸ್ವಾತಂತ್ರ್ಯದ ನಂತರ ದೇಶದ ಪ್ರಜಾಪ್ರಭುತ್ವ- ಜಾತ್ಯತೀತ ವ್ಯವಸ್ಥೆಗೆ ಹಿಂದೆಂದೂ ಕಾಣದಂತಹ ಸವಾಲುಗಳು ಎದುರಾಗಿರುವ ಸಂದರ್ಭದಲ್ಲಿ ಈ ಮಹಾಧಿವೇಶನ ನಡೆಯುತ್ತಿದೆ ಎಂದ ಅವರು ಇದಕ್ಕೆ ಪ್ರತಿರೋಧವಾಗಿ ಎದ್ದು ಬರುತ್ತಿರುವ ದುಡಿಯುವ ಜನಗಳ ಐಕ್ಯ ಹೋರಾಟಗಳನ್ನು ವ್ಯಾಪಕ ಗೊಳಿಸಬೇಕು, ತೀವ್ರಗೊಳಿಸಬೇಕು, ಇದನ್ನು ಜಾತ್ಯತೀತತೆ ಮತ್ತು ಒಕ್ಕೂಟ ತತ್ವದ ಮೇಲೆ ಆಳುವ ಪಕ್ಷದಿಂದ ಪ್ರಹಾರಗಳನ್ನು ಎದುರಿಸುತ್ತಲೇ ಮಾಡಬೇಕಾಗಿದೆ ಎಂದರು.

ಈ ನಿಟ್ಟಿನಲ್ಲಿ ಈ ಮಹಾಧಿವೇಶನ ಸೂಕ್ತ ಕಾರ್ಯತಂತ್ರಗಳನ್ನು ಚರ್ಚಿಸಿ ನಿರ್ಧರಿಸುತ್ತದೆ, ಪಕ್ಷವನ್ನು ದುಡಿಯುವ ಜನಗಳನ್ನು ವ್ಯಾಪಕವಾಗಿ ಅಣಿನೆರೆಸುವ ಸಾಮರ್ಥ್ಯವನ್ನು ಹೊಂದಿರುವಂತೆ ಸಂಘಟನಾತ್ಮಕವಾಗಿ ಹೇಗೆ ಬಲಪಡಿಸಬೇಕು ಎಂಬುದನ್ನೂ ಚರ್ಚಿಸುತ್ತದೆ, ಸದ್ಯದ ಅಸಮಾನತೆಯ ಮತ್ತು ನಿರಂಕುಶಾಧಿಕಾರದ ಆಳ್ವಿಕೆಗೆ ಒಂದು ಎಡ ಮತ್ತು ಪ್ರಜಾಪ್ರಭುತ್ವವಾದಿ ಪರ್ಯಾಯವನ್ನು ಬೆಳೆಸುವ ತನ್ನ ಹೊಣೆಗಾರಿಕೆಯನ್ನೂ ನಿಭಾಯಿಸುತ್ತದೆ ಎಂದು ಮಾಣಿಕ್ ಸರ್ಕಾರ್ ಹೇಳಿದರು.

ಎಪ್ರಿಲ್ 10 ರ ವರೆಗೆ ನಡೆಯಲಿರುವ ಈ ಮಹಾಧಿವೇಶನದಲ್ಲಿ 17 ಪೊಲಿಟ್‌ಬ್ಯುರೊ ಸದಸ್ಯರು, 78 ಕೇಂದ್ರ ಸಮಿತಿ ಸದಸ್ಯರು, 640 ಪ್ರತಿನಿಧಿಗಳು ಮತ್ತು 77 ವೀಕ್ಷಕರು ಸೇರಿದಂತೆ 25 ರಾಜ್ಯಗಳ ಒಟ್ಟು 812 ಹೋರಾಟಗಾರರು ಭಾಗವಹಿಸುತ್ತಿದ್ದಾರೆ.

23- EKN NAGAR

Leave a Reply

Your email address will not be published. Required fields are marked *