ವಿದ್ಯುತ್ ದರ ಏರಿಕೆಯಿಂದ ಜನತೆಗೆ ಮತ್ತಷ್ಟು ಹೊರೆ: ಸಿಪಿಐ(ಎಂ) ವಿರೋಧ

ಪ್ರತಿ ಯುನಿಟ್ ವಿದ್ಯುತ್ ಬೆಲೆಯನ್ನು 10 ಪೈಸೆಗಳಿಂದ 20 ಪೈಸೆಗೆ ಮತ್ತು ವಾಣಿಜ್ಯ ಬಳಕೆಯ ವಿದ್ಯುತ್ ದರ 15 ಪೈಸೆಯಿಂದ 25 ಪೈಸೆಗೆ ಹೆಚ್ಚಳ ಮಾಡುವ ಮೂಲಕ ಜನ ಸಾಮಾನ್ಯರ ಮೇಲೆ ಮತ್ತೊಂದು ಹೊರೆಯನ್ನು ಹೇರಲು ಮುಂದಾದ ವಿದ್ಯುತ್ ಕಂಪನಿಗಳ ಕ್ರಮವನ್ನು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ತೀವ್ರವಾಗಿ ಖಂಡಿಸುತ್ತದೆ ಮತ್ತು ಇದು ಜನತೆಯ ಮೇಲೆ ಎರಡು ರೀತಿಯ ತೆರಿಗೆಯ ಬರೆಯನ್ನು ಎಳೆದಿದ್ದು ಈ ಕೂಡಲೇ ಬೆಲೆ ಏರಿಕೆಯ ಕ್ರಮಗಳನ್ನು ವಾಪಾಸು ಪಡೆಯುವಂತೆ ಬಲವಾಗಿ ಒತ್ತಾಯಿಸುತ್ತದೆ.

ಕಳೆದ 2009 ರಿಂದ 2022ರ ಇಂದಿನ ವರೆಗೆ ಪ್ರತಿ ಯುನಿಟ್ ವಿದ್ಯುತ್ ಬೆಲೆಯನ್ನು 2.70 ರೂ.ಗಳಷ್ಟು ಹೆಚ್ಚಿಸಲಾಗಿದೆ.

ಈ ಬೆಲೆ ಏರಿಕೆಯು ಎಲ್ಲ ಮನೆಗಳ ದರಗಳನ್ನು ಹೆಚ್ಚಿಸಲಿದೆ ಮತ್ತು ವಾಣಿಜ್ಯ ಬಳಕೆಯ ವಿದ್ಯುತ್ ಬೆಲೆಗಳ ಏರಿಕೆಯು ಸಣ್ಣ ಕೈಗಾರಿಕೆಗಳು ಮುಚ್ಚುವಂತಹ ಪರಿಸ್ಥಿತಿಯನ್ನು ವ್ಯಾಪಕಗೊಳಿಸಲಿದೆ ಹಾಗೂ ಜನ ಸಾಮಾನ್ಯರ ಮೇಲೆ ಬೆಲೆ ಏರಿಕೆಯ ಮತ್ತೊಂದು ಹೊರೆ ಹೇರಲಿದೆ. ಆದ್ದರಿಂದ ಕರ್ನಾಟಕ ರಾಜ್ಯ ಸರಕಾರ ಈ ಕೂಡಲೇ ಬೆಲೆ ಏರಿಕೆಯ ಈ ಕ್ರಮಗಳನ್ನು ಹಿಂಪಡೆಯಲು ಅಗತ್ಯ ಕ್ರಮವಹಿಸಲು ಮುಂದಾಗಬೇಕೆಂದು ಸಿಪಿಐ(ಎಂ) ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತದೆ.

ವಿದ್ಯುತ್ ಸರಬರಾಜು ಕಂಪನಿಗಳು ತಮ್ಮ ಸರಬರಾಜುಗಳಲ್ಲಿನ ಸಮಸ್ಯೆಗಳನ್ನು ನಿವಾರಿಸಿಕೊಳ್ಳದೇ ಆ ಮೂಲಕ ಆಗುವ ವಿದ್ಯುತ್ ನಷ್ಠವನ್ನು ಜನ ಸಾಮಾನ್ಯರ ಮೇಲೆ ಹೇರುತ್ತಿರುವುದನ್ನು ಒಪ್ಪಲಾಗದು. ಇದಕ್ಕೆ ಆ ಕಂಪನಿಗಳು ಮತ್ತು ಸರಕಾರ ಅಗತ್ಯ ಕ್ರಮವಹಿಸಬೇಕು.

ಸಾರ್ವಜನಿಕ ಕ್ಷೇತ್ರದ ಕೆಪಿಸಿಎಲ್ ಮೂಲಕ ಅತ್ಯಂತ ಕಡಿಮೆ ಬೆಲೆಗೆ ವಿದ್ಯುತ್ ಉತ್ಪಾದನೆಯಾಗುತ್ತಿದ್ದರೂ ಖಾಸಗೀ ಕಂಪನಿಗಳ ದುಬಾರಿ ವಿದ್ಯುತ್ ಖರೀದಿಯನ್ನು ಮುಂದುವರೆಸಲು ಆಗಿಂದಾಗ್ಗೆ ರಾಜ್ಯದ ಹಲವು ಘಟಕಗಳಲ್ಲಿ ಸಲ್ಲದ ನೆಪ ಹೇಳಿ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗುತ್ತಿದೆ. ಈ ಕುರಿತು ಅಗತ್ಯ ಸ್ವತಂತ್ರ ನ್ಯಾಯಾಂಗದ ತನಿಖೆಗೆ ಕ್ರಮವಹಿಸವುದು ಅಗತ್ಯವಿದೆ.

ಅದೇ ರೀತಿ, ಸಾರ್ವಜನಿಕ ರಂಗದ ವಿದ್ಯುತ್ ಉತ್ಪಾದನೆ (ಕೆಪಿಸಿಎಲ್) ಹಾಗೂ ಸರಬರಾಜು ಕಂಪನಿಗಳನ್ನು ಖಾಸಗೀಕರಿಸುವ ಲೂಟಿಕೋರ ಸಂಚಿನ ದುರುದ್ದೇಶವು ಈ ಬೆಲೆ ಏರಿಕೆಯ ಹಿಂದೆ ಅಡಗಿರುವುದನ್ನು ಸಾರ್ವಜನಿಕರು ಗಮನಿಸಿ ಪ್ರತಿರೋಧಿಸುವಂತೆ ಸಿಪಿಐ(ಎಂ) ಕರೆ ನೀಡುತ್ತದೆ.

ಯು.ಬಸವರಾಜ, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ

Leave a Reply

Your email address will not be published. Required fields are marked *