ʻ2003ರ ಪೌರತ್ವ ತಿದ್ದುಪಡಿ ಕಾಯ್ದೆʼಯ ತಿದ್ದುಪಡಿ ಅಗತ್ಯ: ನಿಬಂಧನೆಗಳನ್ನು ರದ್ದು ಮಾಡಿ

ದಿಲ್ಲಿಯನ್ನು ಇತ್ತೀಚೆಗೆ ಅಲುಗಾಡಿಸಿ ಬಿಟ್ಟ ಭೀಕರ ಕೋಮುವಾದಿ ಹಿಂಸಾಚಾರದ ಮೇಲಿನ ಚರ್ಚೆಗೆ ಉತ್ತರಿಸುತ್ತ ಕೇಂದ್ರ ಗೃಹಮಂತ್ರಿ ಅಮಿತ್ ಷಾ “ಎನ್‌ ಪಿ ಆರ್ ಬಗ್ಗೆ ಯಾರೂ ಭಯಪಡಬೇಕಾಗಿಲ್ಲ, ಸಮಕಾಲಿಕಗೊಳಿಸುವ ಪ್ರಕ್ರಿಯೆಯಲ್ಲಿ ಯಾರನ್ನೂ ಸಂದೇಹಾಸ್ಪದರು  ಎಂದು ಗುರುತು ಮಾಡುವುದಿಲ್”ಲ ಎಂದು ಗುಡುಗಿದರು.
ಈ ಟಿಪ್ಪಣಿಯ ಬಗ್ಗೆ ಈ ಬಿಜೆಪಿ ಸರಕಾರ ಪ್ರಾಮಾಣಿಕವಾಗಿರುವುದಾದರೆ, ಅವರು ೨೦೦೩ರ ಪೌರತ್ವ ತಿದ್ದುಪಡಿ ಕಾಯ್ದೆಯ ನಿಬಂಧನೆಗಳನ್ನು ತಿದ್ದುಪಡಿ ಮಾಡಬೇಕಾಗುತ್ತದೆ ಎಂದು ಸಿಪಿಐ(ಎಂ) ಪೊಲಿಟ್‌ ಬ್ಯುರೊ ಅಭಿಪ್ರಾಯ ಪಟ್ಟಿದೆ. ನಿಬಂಧನೆ ಸಂಖ್ಯೆ ೩, ೪, ೫, ೫(ಎ), (ಬಿ), ೬(ಎ), (ಬಿ), (ಸಿ) ನಿರ್ದಿಷ್ಟವಾಗಿ ಎನ್‌ ಪಿ ಆರ್ ಸಿದ್ಧಗೊಳಿಸುವ ಪ್ರಕ್ರಿಯೆಗೆ ಮತ್ತು ಪೌರತ್ವ ಸಂದೇಹಾಸ್ಪದವಾಗಿರುವ ವ್ಯಕ್ತಿಗಳನ್ನು ಗುರುತಿಸುವುದಕ್ಕೆ ಸಂಬಂಧಪಟ್ಟವುಗಳು. ಹೀಗೆ ಸಂದೇಹಾಸ್ಪದರು ಎಂದು ಗುರುತಿಸಲ್ಪಟ್ಟ ಜನಗಳ ಮುಂದಿನ ವಿಚಾರಣೆಯ ಪ್ರಕ್ರಿಯೆ ಮತ್ತು ಅವರಿಂದ ಬೇಕಾಗುವ ದಸ್ತಾವೇಜುಗಳೇನು ಎಂದು ಅವು ವಿಧಿಸುತ್ತವೆ.
ಸಂಸತ್ತಿಗೆ ಗೃಹಮಂತ್ರಿಗಳ ಆಶ್ವಾಸನೆಯನ್ನು ನಂಬಬೇಕಾದರೆ, ಈ ಸರಕಾರ ತಕ್ಷಣವೇ ಈ ನಿಬಂಧನೆಗಳನ್ನು ರದ್ದು ಮಾಡಬೇಕಾಗುತ್ತದೆ. ಹಾಗೆ ಮಾಡಿದಾಗ ೨೦೦೩ರ ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಎನ್‌ ಆರ್‌ ಸಿ ಗೆ ಕಾನೂನಾತ್ಮಕ ಸ್ಥಾನಮಾನವನ್ನು ನೀಡುವ ಅಂಶಗಳು ನಿರರ್ಥಕಗೊಳ್ಳುತ್ತವೆ, ಅದರಿಂದಾಗಿ ಎನ್‌ ಆರ್‌ ಸಿ ಯನ್ನು ರದ್ದು ಮಾಡಲು ಈ ಕಾನೂನನ್ನೂ ತಿದ್ದುಪಡಿ ಮಾಡಬೇಕಾಗುತ್ತದೆ.
ಬಹುಪಾಲು ರಾಜ್ಯ ಸರಕಾರಗಳು ಎನ್‌ ಆರ್‌ ಸಿ ಗೆ ವಿರೋಧವನ್ನು ವ್ಯಕ್ತಪಡಿಸಿವೆ. ಇವು ನಮ್ಮ ಜನಸಂಖ್ಯೆಯ ಒಂದು ದೊಡ್ಡ ಭಾಗವನ್ನು ಪ್ರತಿನಿಧಿಸುವವುಗಳು. ಇದಕ್ಕೆ ಗೌರವ ನೀಡಲು ಕೂಡ, ೨೦೦೩ರ ತಿದ್ದುಪಡಿಯನ್ನು ಎನ್‌ ಆರ್‌ ಸಿ ಯನ್ನು ರದ್ದು ಪಡಿಸಲಿಕ್ಕಾಗಿ ಸೂಕ್ತವಾಗಿ ತಿದ್ದುಪಡಿ ಮಾಡಬೇಕಾಗುತ್ತದೆ.
ಕೇವಲ ಸಂಸತ್ತಿನಲ್ಲಿ  ಒತ್ತಿ ಹೇಳುವುದರಿಂದಷ್ಟೇ, ಜನಗಳಲ್ಲಿ ಎನ್‌ ಪಿ ಆರ್‌ ನ್ನು ಮುಂದೊಂದು ದಿನ ಎನ್‌ ಆರ್‌ ಸಿ ಗೆ ಅನುಕೂಲ ಕಲ್ಪಿಸಲು ಬಳಸಲಾಗುವುದಿಲ್ಲ ಎಂಬ ವಿಶ್ವಾಸವನ್ನು ಮೂಡಿಸಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿರುವ ಸಿಪಿಐ(ಎಂ) ಪೊಲಿಟ್‌ ಬ್ಯುರೊ ಸಂಬಂಧಪಟ್ಟ ನಿಬಂಧನೆಗಳನ್ನು ರದ್ದು ಮಾಡಬೇಕು ಮತ್ತು ೨೦೦೩ರ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕು ಎಂದು ಆಗ್ರಹಿಸಿದೆ.

Leave a Reply

Your email address will not be published. Required fields are marked *