ಆಹಾರ ಧಾನ್ಯ ಜನರಿಗಾಗಿಯೇ ಹೊರತು, ಇಂಧನಕ್ಕಾಗಿ ಅಲ್ಲ

ಜನಗಳ ಜೀವಗಳನ್ನು ಕಾರ್ಪೊರೇಟ್ ಲಾಭಗಳಿಗೆ ಸಾಟಿ ಮಾಡಿಕೊಳ್ಳಬೇಡಿ-ಸಿಪಿಐ(ಎಂ) ಪೊಲಿಟ್‌ಬ್ಯುರೊ “ಆಹಾರ ಧಾನ್ಯಗಳು ಜನರಿಗಾಗಿಯೇ ಹೊರತು, ಇಂಧನಕ್ಕಾಗಿ ಅಲ್ಲ” ಎಂದು ಎಫ್‌ಎಒ ಕೂಡ ಪ್ರತಿಪಾದಿಸಿದೆ.

ಜೈವಿಕ ಇಂಧನವಾಗಿ ಬಳಸಲು ಮತ್ತು ಶುಚಿಕಾರಕ(ಸ್ಯಾನಿಟೈಸರ್)ಗಳ ತಯಾರಿಕೆಗೆ ಸಂಚಯಗೊಂಡಿರುವ ಅಕ್ಕಿ ದಾಸ್ತಾನುಗಳನ್ನು ಇಥನೋಲ್ ಆಗಿ ಪರಿವರ್ತಿಸಬೇಕೆನ್ನುವ ಭಾರತ ಸರಕಾರದ ನಿರ್ಧಾರ ಅಮಾನವೀಯ ಎಂದು ಸಿಪಿಐ(ಎಂ) ಬಲವಾಗಿ ಖಂಡಿಸಿದೆ.

ಈ ನಿರ್ಧಾರ ಲಾಕ್‌ಡೌನಿನಿಂದಾಗಿ ಹೇಳತೀರದ ಕಷ್ಟಗಳನ್ನು ಅನುಭವಿಸುತ್ತಿರುವ, ಆಹಾರ ಸಿಗದೆ ಉಪವಾಸದ ಅಂಚಿಗೂ ತಳ್ಳಲ್ಪಟ್ಟಿರುವ ಲಕ್ಷ-ಲಕ್ಷ ವಲಸೆ ಕಾರ್ಮಿಕರು, ಇತರ ಅಸಂಘಟಿತ ವಲಯದ ಕಾರ್ಮಿಕರು ಮತ್ತು ಇತರ ಬಡವರ ಕಪಾಳಕ್ಕೆ ಬಾರಿಸಿದಂತೆ ಬಂದಿದೆ. ಅಪಾರ ಆಹಾರ ದಾಸ್ತಾನನ್ನು ಅದು ಬಹುವಾಗಿ ಅಗತ್ಯವಿರುವ ಜನಗಳಿಗೆ ಉಚಿತವಾಗಿ ಹಂಚಿ ಎಂದು ಸಿಪಿಐ(ಎಂ) ಮತ್ತೆ-ಮತ್ತೆ ಕೇಳಿಕೊಂಡರೂ, ಕೇಂದ್ರ ಸರಕಾರ ಆಹಾರ ಧಾನ್ಯಗಳ ಪೂರೈಕೆಯನ್ನು ರಾಜ್ಯ ಸರಕಾರಗಳ ಮೂಲಕ ಸಾರ್ವತ್ರಿಕ ವಿತರಣೆಗೆ ಒದಗಿಸುವಂತೆ ವಿಸ್ತರಿಸಿಲ್ಲ. ಆಹಾರ ಧಾನ್ಯಗಳು ಜನರಿಗಾಗಿಯೇ ಹೊರತು, ಇಂಧನಕ್ಕಾಗಿ ಅಲ್ಲ ಎಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ (ಎಫ್‌ಎಒ) ಕೂಡ ಪ್ರತಿಪಾದಿಸಿದೆ ಎಂದು ಸಿಪಿಐ(ಎಂ) ನೆನಪಿಸಿದೆ.

ಅಂತರ್ರಾಷ್ಟ್ರೀಯ ತೈಲ ಬೆಲೆಗಳು ಚರಿತ್ರೆಯಲ್ಲಿ ಹಿಂದೆಂದೂ ಕಾಣದಷ್ಟು ಕೆಳಮಟ್ಟದಲ್ಲಿ ಇರುವಾಗ, ಮತ್ತು ಹೆಚ್ಚಿನ ಪೆಟ್ರೋಲ್-ಚಾಲಿತ ವಾಹನಗಳು ಲಾಕ್‌ಡೌನಿನಿಂದಾಗಿ ರಸ್ತೆಗೆ ಇಳಿಯದಿರುವ ಸಮಯದಲ್ಲಿ ಪೆಟ್ರೋಲಿನಲ್ಲಿ ಇಥನೊಲ್ ಸಂಯೋಜಿಸಲು ಬೆಲೆಬಾಳುವ ಅಕ್ಕಿಯನ್ನು ಬಳಸುವುದಕ್ಕೆ ಇರುವ ತರ್ಕವಾದರೂ ಏನು ಎಂದು ಗ್ರಹಿಕೆಗೆ ಮೀರಿರುವ ಸಂಗತಿ. ತೈಲ ಆಮದಿನ ವೆಚ್ಚ ಇಳಿದಿದೆ ಮತ್ತು ದೇಶದೊಳಗೆ ಸ್ಯಾನಿಟೈಸರ್‌ಗಳಿಗೆ ಬೇಕಾಗಿರುವ ಅಲ್ಕೊಹಾಲ್‌ನ ಉತ್ಪಾದನೆಯ ಸಾಮರ್ಥ್ಯವು ಸಾಕಷ್ಟು ಬಳಕೆಯಾಗದೇ ಉಳಿದಿದೆ.

ಜನಗಳ ಜೀವಗಳನ್ನು, ಹಸಿವಿನಿಂದ, ತಲೆಯ ಮೇಲೆ ಸೂರಿಲ್ಲದೆ ಬದುಕುಳಿಯಲು ಹೋರಾಡುತ್ತಿರುವ ಲಕ್ಷಾಂತರ ವಂಚಿತರ ಬದುಕುಗಳನ್ನು ಕಾರ್ಪೊರೇಟ್‌ಗಳ ಲಾಭಗಳಿಗೆ ವಿನಿಮಯ ಮಾಡಿಕೊಳ್ಳಲು ಸಾಧ್ಯವಿಲ್ಲ. ಇದು ಕ್ರಿಮಿನಲ್ ಎಂದಿರುವ ಸಿಪಿಐ(ಎಂ) ಪೊಲಿಟ್‌ಬ್ಯುರೊ ತಕ್ಷಣವೇ ಈ ಹೇಯ ನಿರ್ಧಾರವನ್ನು ಹಿಂದಕ್ಕೆ ಪಡೆಯುವಂತಾಗಬೇಕು ಎಂದು ಕರೆ ನೀಡಿದೆ.

Leave a Reply

Your email address will not be published. Required fields are marked *