ಕಮ್ಯುನಿಸ್ಟರು ಮತ್ತು ರಾಷ್ಟ್ರೀಯತೆಯ ಪ್ರಶ್ನೆ

  • ಭಾರತದಲ್ಲಿ ವಿಭಿನ್ನ ರಾಷ್ಟ್ರೀಯತೆಗಳು ಇವೆ ಎಂಬುದನ್ನು ಒಪ್ಪಿಕೊಂಡಾಗ ಮಾತ್ರವೇ ಭಾರತದ ಸ್ವಾತಂತ್ರ್ಯದ ಕಲ್ಪನೆ ಸಂಪೂರ್ಣವಾಗುತ್ತದೆ ಮತ್ತು ಸ್ಪಷ್ಟವಾಗುತ್ತದೆ ಎಂಬ ಕಣ್ಣೋಟದಿಂದ ಕಮ್ಯುನಿಸ್ಟರು ಭಾರತದ ರಾಜಕೀಯ ಭವಿಷ್ಯವನ್ನು ವಿಶ್ಲೇಷಣೆ ಮಾಡುತ್ತಿದ್ದ ಸಮಯದಲ್ಲಿ ಜಿನ್ನಾ ಅವರ ’ಎರಡು-ರಾಷ್ಟ್ರಗಳ ಸಿದ್ಧಾಂತ’ ಮತ್ತು ಮುಸ್ಲಿಮೇತರ ರಾಷ್ಟ್ರೀಯವಾದಿಗಳ ’ಒಂದು ರಾಷ್ಟ್ರ ಸಿದ್ಧಾಂತ’ಗಳ ನಡುವೆ ತಿಕ್ಕಾಟ ನಡೆಯುತ್ತಿತ್ತು. ಈ ತಿಕ್ಕಾಟದಿಂದ ಹುಟ್ಟಿದ ಸಮಸ್ಯೆಗಳಿಗೆ ಒಂದು ಪರಿಹಾರವಾಗಿ ಕಮ್ಯುನಿಸ್ಟರು ತಮ್ಮ ಅಭಿಪ್ರಾಯವನ್ನು ಮಂಡಿಸಿದರು. ಕಮ್ಯುನಿಸ್ಟರ ನಿಲುವಿನಲ್ಲೂ ದೋಷಗಳಿರಲಿಲ್ಲವೇಂದೇನಲ್ಲ. ಆದರೂ ಭಾರತವು ಒಂದು ಬಹು-ರಾಷ್ಟ್ರೀಯತೆಗಳ ದೇಶ ಮತ್ತು ಎಲ್ಲಾ ರಾಷ್ಟ್ರೀಯತೆಗಳ ಮುಕ್ತ ಬೆಳವಣಿಗೆಯ ಪರಿಸ್ಥಿತಿಯಲ್ಲಿ ಮಾತ್ರವೇ ಭಾರತದ ಐಕ್ಯತೆಯನ್ನು ಕಾಪಾಡಿಕೊಳ್ಳಲು ಸಾಧ್ಯ ಎಂಬ ವಿಚಾರವನ್ನು ಜನರ ನಡುವೆ ಪ್ರಚಾರ ಮಾಡುವ ಮೂಲಕ ಕಮ್ಯುನಿಸ್ಟ್ ಪಕ್ಷವು ಭಾರತದ ರಾಜಕೀಯಕ್ಕೆ ಅಮೂಲ್ಯವಾದ ಕೊಡುಗೆ ನೀಡಿದೆ.

Communist100 File copyಭಾರತ ಎರಡು ರಾಷ್ಟ್ರಗಳನ್ನು ಹೊಂದಿದೆ, ಇದು ಜನಗಳ ಧಾರ್ಮಿಕ ನಂಬಿಕೆಗಳ ಆಧಾರದಲ್ಲಿ ವಿಭಜಿತ ದೇಶ ಎಂದು ಹಿಂದೂ ಹಾಗೂ ಮುಸ್ಲಿಂ ಕೋಮುವಾದಿಗಳು ಪರಿಗಣಿಸಿದ್ದರು. ಈ ಕಾರಣದಿಂದಾಗಿಯೇ ಸಾವರ್ಕರ್ ಮತ್ತು  ಜಿನ್ನಾ ಇಬ್ಬರೂ ಪ್ರತಿಪಾದಿಸಿದ ಎರಡು-ರಾಷ್ಟ್ರ ಸಿದ್ಧಾಂತದ ಬಗ್ಗೆ ಅವರಿಗೆ ಪರಸ್ಪರ ಯಾವ ತಕರಾರೂ ಕಾಣಲಿಲ್ಲ. ೧೯೪೨ರಲ್ಲಿ ’ಭಾರತ ಬಿಟ್ಟು ತೊಲಗಿ’ ಎಂದು ಕಾಂಗ್ರೆಸ್ ಕರೆ ಕೊಟ್ಟಿದ್ದಾಗ, ಮುಸ್ಲಿಂ ಲೀಗ್ ’ಭಾರತ ವಿಭಜನೆ ಮಾಡಿ ತೊಲಗಿ’ ಎಂದು ಕರೆ ಕೊಟ್ಟಿತು. ಮತ್ತೊಂದು ಕಡೆ ಹಿಂದೂ ಮಹಾಸಭಾ ಮತ್ತು ಆರ್.ಎಸ್.ಎಸ್. ’ಭಾರತ ಹಿಂದೂಗಳಿಗೆ ಮಾತ್ರ ಎಂದು ಹೇಳುತ್ತಾ ಹಿಂದೂಯೇತರರು ಭಾರತದಲ್ಲಿ ಎರಡನೇ ದರ್ಜೆ ಪ್ರಜೆಗಳಾಗಿ ಮಾತ್ರ ಇರಬಹುದು ಎಂದು ಪ್ರಚಾರ ಮಾಡಿತು.

ಕಮ್ಯುನಿಸ್ಟರು ಭಾರತದ ಭವಿಷ್ಯವನ್ನು ಹಿಂದೂ-ಮುಸ್ಲಿಂ ಎಂಬ ಸಂಕುಚಿತ ಮಿತಿಯೊಳಗೆ  ನೋಡಲಿಲ್ಲ. ಭಾರತದ ಜನರು  ವಿವಿಧ ಧರ್ಮಗಳಿಗೆ ಸೇರಿದ್ದಾರೆ ಎನ್ನುವುದು ಭಾರತದ ರಾಜಕೀಯ ವಾಸ್ತವತೆಯ ಒಂದು ಅಂಶವಷ್ಟೆ ಎಂಬುದನ್ನು ಕಮ್ಯುನಿಸ್ಟರು ಅರಿತಿದ್ದರು. ಭಾರತದ ಜನಸಂಖ್ಯೆಯು ವಿಭಿನ್ನ ಭಾಷೆಗಳನ್ನು ಮಾತನಾಡುವ ವಿಭಿನ್ನ ರಾಷ್ಟ್ರೀಯತೆಗಳನ್ನು ಒಳಗೊಂಡಿದೆ, ಅವುಗಳ ಒಳಗಡೆ ತಮ್ಮದೇ ಆದ ವಿಶಿಷ್ಟ ಸಾಮಾಜಿಕ-ಸಾಂಸ್ಕೃತಿಕ ಬದುಕನ್ನು ಹೊಂದಿವೆ ಮತ್ತು ಅಂತಹ ಪ್ರತಿಯೊಂದು ರಾಷ್ಟ್ರೀಯತೆಯು ವಿವಿಧ ಮತಧರ್ಮಗಳು ಮತ್ತು ಜಾತಿಗಳಾಗಿ ಇನ್ನೂ ವಿಭಜನೆಯಾಗಿವೆ ಎಂಬ ಅಷ್ಟೇ ಮುಖ್ಯವಾದ ವಾಸ್ತವಾಂಶವನ್ನು ಕಮ್ಯುನಿಸ್ಟರು ಜನರ ಗಮನಕ್ಕೆ ತಂದರು. ಇದು ರಾಜಕೀಯ ವಾಸ್ತವ ಎಂದು ಕಮ್ಯುನಿಸ್ಟ್ ಪಕ್ಷವು ಒತ್ತುಕೊಟ್ಟು ಹೇಳಿತು.

ಭಾಷಾವಾರು ಪ್ರಾಂತಗಳನ್ನು ಅದರ ಪೂರ್ಣ ಅರ್ಥದಲ್ಲಿ ಜಾರಿ ಮಾಡಬೇಕೆಂದು ಕಮ್ಯುನಿಸ್ಟರು ಒತ್ತಾಯಿಸಿದರು. ಈ ವಿಚಾರವಾಗಿ ಕಮ್ಯುನಿಸ್ಟರು ರಾಷ್ಟ್ರೀಯತೆಯ ಬಗ್ಗೆ ಲೆನಿನ್ ಅವರ ಕಣ್ಣೋಟದ ಮಾರ್ಗದರ್ಶನ ಅನುಸರಿಸಿದರು. ಲೆನಿನ್ ಮತ್ತು ಸ್ಟಾಲಿನ್ ವಿವರಿಸಿದಂತೆ, ಬಂಡವಾಳಶಾಹಿಯ ಬೆಳವಣಿಗೆಯು ಭಾಷಿಕ ಹಾಗೂ ಸಾಂಸ್ಕೃತಿಕ ಏಕರೂಪತೆ ಮತ್ತು ಆರ್ಥಿಕ ಹಾಗೂ ರಾಜಕೀಯ ಅಸ್ಮಿತೆಯೊಂದಿಗೆ ರಾಷ್ಟ್ರೀಯತೆಗಳ ಬೆಳವಣಿಗೆಗೆ ಕಾರಣವಾಗುತ್ತದೆ.

ಭಾಷಾವಾರು ಪ್ರಾಂತಗಳ ರಚನೆಗಾಗಿನ ಒಲವು ಭಾರತದ ಬೂರ್ಜ್ವಾ ಪ್ರಜಾಪ್ರಭುತ್ವವಾದಿ ರಾಷ್ಟ್ರೀಯ ಚಳುವಳಿಯ ಅವಿಭಾಜ್ಯ ಅಂಗವಾಗಿದೆ ಮತ್ತು ಅದು ಕಾಂಗ್ರೆಸ್ಸಿನಿಂದ ಪಡೆದ ಪ್ರೋತ್ಸಾಹವನ್ನು ಚಾರಿತ್ರಿಕ ವಾಸ್ತವತೆಯ ಅಭಿವ್ಯಕ್ತಿ ಎಂದು ಕಮ್ಯುನಿಸ್ಟರು ಗ್ರಹಿಸಿದರು.

ina-kolkata
ಐ ಎನ್‌ ಎ ಸೇನಾಪತಿಗಳ ವಿಚಾರಣೆ ವಿರುದ್ಧ ಕಾರ್ಮಿಕರ ಪ್ರತಿಭಟನೆ : ಕೋಲ್ಕತ್ತ

ಭಾರತದಲ್ಲಿ ವಿಭಿನ್ನ ರಾಷ್ಟ್ರೀಯತೆಗಳು ಇವೆ ಎಂಬುದನ್ನು ಒಪ್ಪಿಕೊಂಡಾಗ ಮಾತ್ರವೇ ಭಾರತದ ಸ್ವಾತಂತ್ರ್ಯದ ಕಲ್ಪನೆ ಸಂಪೂರ್ಣವಾಗುತ್ತದೆ ಮತ್ತು ಸ್ಪಷ್ಟವಾಗುತ್ತದೆ ಎಂದು ಕಮ್ಯುನಿಸ್ಟರು ಒತ್ತಿಹೇಳಿದರು; ಈ ರಾಷ್ಟ್ರೀಯತೆಗಳು ಪ್ರತಿಯೊಂದರಲ್ಲೂ ಭಿನ್ನ ಧರ್ಮಗಳಾಗಿಯೂ ವಿಂಗಡಣೆ ಇದ್ದರೂ,  ಭಾಷಿಕ ಮತ್ತು ಸಾಮಾಜಿಕ ಬದುಕಿನಲ್ಲಿ ಇವು ಒಟ್ಟಾಗಿದ್ದಾವೆ; ಭಾರತದ ಭವಿಷ್ಯದ ಆಡಳಿತ ರಚನೆಯನ್ನು ಈ ಒಂದೊಂದೂ ರಾಷ್ಟ್ರೀಯತೆಗಳಿಗೆ ಮುಕ್ತವಾಗಿ ಬೆಳೆಯಲು ಅವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ರೂಪಿಸಬೇಕಾಗಿದೆ.. ಭಿನ್ನ ರಾಷ್ಟ್ರೀಯತೆಗಳಾಗಿ ಸಂಯೋಜಿತರಾಗಿರುವ ಭಾರತದ ಜನರು ಚಾರಿತ್ರಿಕ ಕಾರಣಗಳಿಂದಾಗಿ ರಾಜಕೀಯವಾಗಿ ಒಂದುಗೂಡಿದ್ದಾರೆ ಎಂಬುದನ್ನೂ ಕಮ್ಯುನಿಸ್ಟ್ ಪಕ್ಷ ಬೊಟ್ಟು ಮಾಡಿ ತೋರಿಸಿತು. ಬ್ರಿಟಿಷರ ಆಳ್ವಿಕೆಯ ಅಡಿಯಲ್ಲಿ ಅವರು ಕೃತಕವಾಗಿ ಒಂದುಗೂಡಿದ್ದಾರಾದರೂ, ಬ್ರಿಟಿಷರ ಆಳ್ವಿಕೆಯ ವಿರುದ್ಧದ ಹೋರಾಟವು ಭಾರತದ ಜನರ ರಾಷ್ಟ್ರೀಯ ಐಕ್ಯತೆಯನ್ನು ಕ್ರೋಢೀಕರಿಸಿತು. ಸಾಮ್ರಾಜ್ಯಶಾಹಿ-ವಿರೋಧಿ ಹೋರಾಟದ ಮೂಲಕ ಹೊರಹೊಮ್ಮಿದ ರಾಷ್ಟ್ರೀಯ ಐಕ್ಯತೆಯ ಮುಂದುವರಿಕೆಯು ಸ್ವಾತಂತ್ರ್ಯಾನಂತರದ ಜನರ ಇನ್ನೂ ಹೆಚ್ಚಿನ ಮುನ್ನಡೆಗೆ ಸಹಾಯವಾಗಲಿದೆ. ಸ್ವಾತಂತ್ರ್ಯಾನಂತರದ ರಾಷ್ಟ್ರ ನಿರ್ಮಾಣದಲ್ಲಿ ಒಟ್ಟಿಗೇ ನಿಂತು ಹೊಸ ಪ್ರಜಾಸತ್ತಾತ್ಮಕ ಪ್ರಗತಿಪರ ಭಾರತವನ್ನು ಕಟ್ಟಿದಾಗ ಮಾತ್ರವೇ ಈ ಒಂದೊಂದೂ ರಾಷ್ಟ್ರೀಯತೆಗಳ ಅಭಿವೃದ್ಧಿ ಸಾಧ್ಯವಾಗುತ್ತದೆ.

ಕಮ್ಯುನಿಸ್ಟರು ಭಾರತದ ರಾಜಕೀಯ ಭವಿಷ್ಯವನ್ನು ಈ ಕಣ್ಣೋಟದಿಂದ ವಿಶ್ಲೇಷಣೆ ಮಾಡುತ್ತಿದ್ದ ಸಮಯದಲ್ಲಿ ಜಿನ್ನಾ ಅವರ ’ಎರಡು-ರಾಷ್ಟ್ರಗಳ ಸಿದ್ಧಾಂತ’ ಮತ್ತು ಮುಸ್ಲಿಮೇತರ ರಾಷ್ಟ್ರೀಯವಾದಿಗಳ ’ಒಂದು ರಾಷ್ಟ್ರ ಸಿದ್ಧಾಂತ’ಗಳ ನಡುವೆ ತಿಕ್ಕಾಟ ನಡೆಯುತ್ತಿತ್ತು. ಈ ತಿಕ್ಕಾಟದಿಂದ ಹುಟ್ಟಿದ ಸಮಸ್ಯೆಗಳಿಗೆ ಒಂದು ಪರಿಹಾರವಾಗಿ ಕಮ್ಯುನಿಸ್ಟರು ತಮ್ಮ ಅಭಿಪ್ರಾಯವನ್ನು ಮಂಡಿಸಿದರು. ಆದ್ದರಿಂದ ಅದು ಪಾಕಿಸ್ತಾನದ ಬೇಡಿಕೆಗೆ ಬೆಂಬಲ ನೀಡಿದಂತೆ ಎಂದು ಜನರು ಸಹಜವಾಗಿಯೇ ಭಾವಿಸಿದರು.

ಕಮ್ಯುನಿಸ್ಟರು ಕಲ್ಪಿಸಿಕೊಂಡಿದ್ದ ರಾಜಕೀಯ ವ್ಯವಸ್ಥೆಯು ವಾಸ್ತವದಲ್ಲಿ ಪಾಕಿಸ್ತಾನವೆಂಬ ಕಲ್ಪನೆಗಿಂತ ಮೂಲತಃ ಭಿನ್ನವಾಗಿತ್ತು. ಧರ್ಮದ ಆಧಾರದ ಮೇಲೆ ’ಹಿಂದೂ ಭಾರತ’ ಮತ್ತು ’ಮುಸ್ಲಿಂ ಭಾರತ’ದ ನಡುವೆ ವ್ಯತ್ಯಾಸ ಕಲ್ಪಿಸಲು ಕಮ್ಯುನಿಸ್ಟರು ನಿರಾಕರಿಸಿದರು. ಮುಸ್ಲಿಂ ಲೀಗ್ ಒತ್ತಾಯಿಸಿದಂತೆ ಭಾರತವನ್ನು ವಿಭಜಿಸಬೇಕಾಗಿ ಬಂದರೂ, ಅದರಿಂದ ಉದ್ಭವಿಸುವ ಎರಡು ದೇಶಗಳು ಎದುರಿಸಬೇಕಾಗುವ ಸಂಕೀರ್ಣವಾದ ರಾಷ್ಟ್ರೀಯತೆಯ ಸಮಸ್ಯೆಗಳನ್ನು ಎದುರಿಸಬೇಕಾದ ವಾಸ್ತವದ ಕಡೆ ಅವರು ಗಮನ ಸೆಳೆದರು.

20200423_203253
 ಐ ಎನ್‌ ಎ ಸೇನಾಪತಿಗಳು : ಪಿ.ಕೆ. ಸಹಗಲ್‌, ಷಾನವಾಜ್‌ ಖಾನ್‌, ಮತ್ತು ಢಿಲ್ಲೊಂ

ಆದರೆ, ಪಾಕಿಸ್ತಾನ ಕುರಿತಾದ ಕಮ್ಯುನಿಸ್ಟರ ನಿಲುವು ದೋಷದಿಂದ ಮುಕ್ತವಾಗಿತ್ತು ಎಂಬುದು ಅದರ ಅರ್ಥವಲ್ಲ. ೧೯೪೫ರಲ್ಲಿ ಪ್ರಕಟಿಸಿ ಪ್ರಬಂಧವೊಂದು ದೇಶದ ವಾಯುವ್ಯ ಭಾಗದಲ್ಲಿ ಮುಸ್ಲಿಂ ರಾಷ್ಟ್ರೀಯತೆಗಳನ್ನು ಗುರುತಿಸುವಂತಹ ಒಂದು ವಾದವನ್ನು ಮುಂದಿಟ್ಟಿತ್ತು. ಈ ತಪ್ಪು ತಿಳುವಳಿಕೆಯನ್ನು ನಂತರದಲ್ಲಿ ತಿದ್ದಿಕೊಳ್ಳಲಾಯಿತು. ಎರಡು ದೇಶಗಳ ನಡುವಿನ ಗಡಿಯನ್ನು ಧರ್ಮದ ಆಧಾರದಲ್ಲಿ ನಿರ್ಧರಿಸಬೇಕು ಎಂಬ ಲೀಗಿನ ನಿಲುವನ್ನು ಅಗತ್ಯವಿದ್ದಷ್ಟು, ಶಕ್ತಿಯುತವಾಗಿ ಮತ್ತು ಪಟ್ಟುಹಿಡಿದು ಬಯಲುಮಾಡುವ ಯತ್ನಕ್ಕೆ ಪಕ್ಷ ಮುಂದಾಗಲಿಲ್ಲ. ಈ ಮೂಲಕ ಪಾಕಿಸ್ತಾನಕ್ಕಾಗಿನ ಲೀಗಿನ ಒತ್ತಾಯ ಮತ್ತು ನಂತರದ ಭಾರತದ ವಿಭಜನೆಗೆ ಪಕ್ಷ ಸಹಾಯ ಮಾಡಿತು ಎಂಬ ಪಕ್ಷ-ವಿರೋಧಿಗಳ ಪ್ರಚಾರಕ್ಕೆ ಅದು ದಾರಿ ಮಾಡಿಕೊಟ್ಟಿತು.

ಪಕ್ಷದ ನಿಲುವಿನಲ್ಲಿ ಮತ್ತೊಂದು ಗಂಭೀರ ದೌರ್ಬಲ್ಯವಿತ್ತು. ಗಾಂಧಿ-ಜಿನ್ನಾ ಮಾತುಕತೆಗಾಗಿ ಸಿದ್ಧತೆ ಮಾಡಿದ್ದ ರಾಜಗೋಪಾಲಾಚಾರಿ, ಅವರ ಪ್ರಸ್ತಾವಗಳ ಆಧಾರದಲ್ಲಿ ಮಾತುಕತೆಯನ್ನು ಆರಂಭಿಸಿದ ಗಾಂಧಿ, ಮತ್ತು ಬಹಳ ಚಾಕಚಕ್ಯತೆಯಿಂದ ಈ ಮಾತುಕತೆಗಳನ್ನು ಬಳಸಿಕೊಂಡ ಜಿನ್ನಾ ಮತ್ತು ಅದರ ನಂತರ ಸಂಭವಿಸಿದ ಘಟನೆಗಳು, ಇವೆಲ್ಲವೂ ರಾಜಕೀಯ ನಾಯಕರುಗಳು ಬ್ರಿಟಿಷ್ ಆಳರಸರ ಜತೆ ಚೌಕಾಸಿ ಮಾಡಿ ತಮ್ಮ ವರ್ಗ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ಸಲುವಾಗಿ ಎಂಬ ಸತ್ಯವನ್ನು ಪುರ್ಣವಾಗಿ ಗ್ರಹಿಸುವಲ್ಲಿ ಪಕ್ಷ ವಿಫಲವಾಯಿತು. ಈ ಬೇಡಿಕೆಯ ಪೂರ್ಣ ಧ್ವನಿಯನ್ನು ಸರಿಯಾಗಿ ತಿಳಿದುಕೊಳ್ಳದೆ, ಆ ರಾಜಕಾರಣಿಗಳ ಶಾಮೀಲಿನ ನಿಲುವನ್ನು ಬೆಂಬಲಿಸಿದ್ದು ಕಮ್ಯುನಿಸ್ಟ್ ಪಕ್ಷದ ನಿಲುವಿನಲ್ಲಿನ ಬಹು ಮುಖ್ಯವಾದ ದೌರ್ಬಲ್ಯವಾಗಿತ್ತು. ಗಾಂಧಿ-ಜಿನ್ನಾ ಮಾತುಕತೆಗಳು ಭಾರತವನ್ನು ಬಾಧಿಸುತ್ತಿದ್ದ ರೋಗಕ್ಕೆ ಸರಿಯಾದ ಮದ್ದು ಎಂದು ರಾಜಗೋಪಾಲಾಚಾರಿ ಮತ್ತಿತರ ರಾಜಕಾರಣಿಗಳು ಹೇಳಿದ್ದ ಅಂಶವನ್ನೇ ಪಕ್ಷವು ತನ್ನ ಪ್ರಚಾರ ಹಾಗೂ ಪತ್ರಿಕೆಗಳಲ್ಲಿ ಬಿಂಬಿಸಲು ಪ್ರಯತ್ನಿಸಿತು. ಈ ಶಾಮೀಲಿನ ರಾಜಕೀಯವನ್ನು ವಿರೋಧಿಸುತ್ತಿದ್ದ ಸ್ವಾತಂತ್ರ್ಯ ಚಳುವಳಿಯ ಯೋಧರಲ್ಲಿನ ಆತ್ಮವಿಶ್ವಾಸವನ್ನು ಬಲಪಡಿಸಿ ಅವರನ್ನು ಒಗ್ಗೂಡಿಸುವ ಮೂಲಕ ಕಾಂಗ್ರೆಸ್ ಹಾಗೂ ಲೀಗಿನ ನಾಯಕತ್ವದ ಚೌಕಾಶಿ ವ್ಯಾಪಾರದ ರಾಜಕೀಯವನ್ನು ಬಯಲುಮಾಡುವಲ್ಲಿ ಪಕ್ಷವು ವಿಫಲವಾಯಿತು. ಆ ವರ್ಷಗಳಲ್ಲಿ ಸಂಭವಿಸಿದ ರಾಜಕೀಯ ಬೆಳವಣಿಗೆಗಳನ್ನು ಕುರಿತು ಜನರಿಗೆ ಸಾಕಷ್ಟು ಎಚ್ಚರಿಕೆ ನೀಡುವಲ್ಲಿ ಸಹ ಪಕ್ಷ ಸೋತಿತು.

ಹೀಗಿದ್ದಾಗ್ಯೂ, ಭಾರತವು ಒಂದು ಬಹು-ರಾಷ್ಟ್ರೀಯತೆಗಳ ದೇಶ ಮತ್ತು ಎಲ್ಲಾ ರಾಷ್ಟ್ರೀಯತೆಗಳ ಮುಕ್ತ ಬೆಳವಣಿಗೆಯ ಪರಿಸ್ಥಿತಿಯಲ್ಲಿ ಮಾತ್ರವೇ ಭಾರತದ ಐಕ್ಯತೆಯನ್ನು ಕಾಪಾಡಿಕೊಳ್ಳಲು ಸಾಧ್ಯ ಎಂಬ ವಿಚಾರವನ್ನು ಜನರ ನಡುವೆ ಪ್ರಚಾರ ಮಾಡುವ ಮೂಲಕ ಕಮ್ಯುನಿಸ್ಟ್ ಪಕ್ಷವು ಭಾರತದ ರಾಜಕೀಯಕ್ಕೆ ಅಮೂಲ್ಯವಾದ ಕೊಡುಗೆ ನೀಡಿದೆ. ಆ ಅವಧಿಯಲ್ಲಿನ ಕಮ್ಯುನಿಸ್ಟರ ಚಟುವಟಿಕೆಗಳು ನಂತರದಲ್ಲಿ, ಭಾಷೆಯ ಆಧಾರದಲ್ಲಿ ಪ್ರಾಂತಗಳ ಮತ್ತು ರಾಜರ ಸಂಸ್ಥಾನಗಳ ಮರುವಿಂಗಡಣೆಗಾಗಿ ’ಐಕ್ಯ ಕೇರಳ,  ’ವಿಶಾಲ ಆಂಧ್ರಾ, ’ಸಂಯುಕ್ತ ಮಹಾರಾಷ್ಟ್ರ, ’ಮಹಾ ಗುಜರಾತ್ ಇತ್ಯಾದಿಗಳಂತಹ ಬಲಿಷ್ಠ ಆಂದೋಲನಗಳ ಉದಯಕ್ಕೆ ಕಾರಣವಾಯಿತು.

ಭಾರತದಲ್ಲಿನ ರಾಷ್ಟ್ರೀಯತೆಗಳ ಸಮಸ್ಯೆಗಳನ್ನು ಸಾಮ್ರಾಜ್ಯಶಾಹಿ ಹಾಗೂ ಪಾಳೇಗಾರಿ ಪದ್ಧತಿಗಳ ವಿರುದ್ಧದ ಹಾಗೂ ಪ್ರಜಾಪ್ರಭುತ್ವಕ್ಕಾಗಿನ ಹೋರಾಟವನ್ನಾಗಿ ನೋಡಬೇಕೆಂದು ಕಮ್ಯುನಿಸ್ಟರು ೧೯೪೪-೪೫ರಿಂದಲೂ ಪ್ರಯತ್ನಿಸುತ್ತಿದ್ದರು. ಈ ದಿಕ್ಕಿನಲ್ಲಿನ ಪ್ರಯತ್ನಗಳು ಮೂರು ಪ್ರಬಂಧಗಳ – ಭವಾನಿ ಸೇನ್ ಅವರ ನೂತನ್ ಬಂಗ್ಲಾ, ಪಿ.ಸುಂದರಯ್ಯ ಅವರ ವಿಶಾಲ ಆಂಧ್ರಾ ಲೊ ಪ್ರಜಾ ರಾಜ್ಯಂ ಮತ್ತು ಇ.ಎಂ.ಎಸ್. ನಂಬೂದಿರಿಪಾಡ್ ಅವರ ಒನ್ನೇಕಾಲ್ ಕೋಟಿ ಮಲಯಾಲಿಕಳ್ (ಒಂದೂ ಕಾಲು ಕೋಟಿ ಮಲಯಾಳಿಗಳು) – ಪ್ರಕಟಣೆಯಲ್ಲಿ ಫಲಕೊಟ್ಟವು. ಅವು ಮಾರ್ಕ್ಸ್‌ವಾದಿ-ಲೆನಿನ್‌ವಾದಿ ದೃಷ್ಟಿಕೋನದಲ್ಲಿ ಮೂರು ರಾಷ್ಟ್ರೀಯತೆಗಳ ಇತಿಹಾಸ ಮತ್ತು ಸಮಕಾಲೀನ ಸಮಸ್ಯೆಗಳನ್ನು ಪರಿವೀಕ್ಷಿಸಿದ್ದವು. ಪಕ್ಷವು ಆ ದಿನಗಳಲ್ಲಿ ನಡೆಸಿದ ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ಕೆಲಸಗಳು ನಂತರದ ವರ್ಷಗಳಲ್ಲಿ ಹಲವಾರು ಚಳುವಳಿಗಳಿಗೆ ಮತ್ತು ಹೋರಾಟಗಳಿಗೆ ನಾಂದಿ ಹಾಡಿದವು; ಬಂಗಾಳದ ತೇಭಾಗಾ ಚಳುವಳಿ, ಆಂಧ್ರದ ತೆಲಂಗಾಣ ಹೋರಾಟ ಮತ್ತು ಕೇರಳದ ಪುನ್ನಪ್ರ-ವಯಲಾರ್ ಹೋರಾಟಗಳು ಇವುಗಳಲ್ಲಿ ಪ್ರಮುಖವಾದದ್ದು.

ಸೋಶಿಯಲಿಸ್ಟರು ಮತ್ತು ಸುಭಾಶ್ ಚಂದ್ರ ಬೋಸ್ ಅವರ ಬೆಂಬಲಿಗರು ಚೌಕಾಸಿ ರಾಜಕೀಯದೊಂದಿಗೆ ಭಾವನಾತ್ಮಕವಾಗಿ ಹೊಂದಿಕೊಳ್ಳಲಾಗಲಿಲ್ಲ. ಈ ಗುಂಪು ಮತ್ತು ಗಾಂಧಿ-ನೆಹರೂ ಗುಂಪಿನ ನಡುವಿನ ಮೂಲ ವೈರುಧ್ಯಗಳು ಬಹಳ ಕಾಲ ಹೊರಬರದೇ ಇರಲು ಸಾಧ್ಯವಾಗಲಿಲ್ಲ. ಈ ಎರಡೂ ಪಾಳೆಯಕ್ಕೆ ಸೇರದೆ ಮತ್ತು ಸ್ವತಂತ್ರವಾಗಿ ಕಮ್ಯುನಿಸ್ಟ್‌ಪಕ್ಷವು ದುಡಿಯುವ ಜನರ ಹಿತಾಸಕ್ತಿಯನ್ನು ಮುಂದಿಟ್ಟುಕೊಂಡು, ನಿಜವಾದ ಪ್ರಜಾಪ್ರಭುತ್ವದ ಪತಾಕೆಯನ್ನು ಎತ್ತಿಹಿಡಿದು ಜನಸಮುದಾಯದ ಬಳಿ ಸಾಗಲು ಮುಂದಾಯಿತು; ಮತ್ತೊಂದೆಡೆ, ಎದ್ದು ಬರುತ್ತಿದ್ದ ಜನಾಕ್ರೋಶದ ಜತೆ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಳ್ಳುವ ಸ್ಥಿತಿಯಲ್ಲಿ ಕಮ್ಯುನಿಸ್ಟರು ಇದ್ದರು.

೧೯೪೫ರ ಕೊನೆಯಲ್ಲಿ ನಡೆದ ಎರಡು ಘಟನೆಗಳು ಯುದ್ಧಾನಂತರದ ಸಾಮ್ರಾಜ್ಯಶಾಹಿ-ವಿರೋಧಿ ಬಿರುಗಾಳಿ ಎಬ್ಬಿಸುವಲ್ಲಿ ಗಮನಾರ್ಹ ಪಾತ್ರ ವಹಿಸಿದವು: ಐ.ಎನ್.ಎ.(ಇಂಡಿಯನ್ ನ್ಯಾಷನಲ್ ಆರ್ಮಿ-ಆಝಾದ್ ಹಿಂದ್ ಸೇನೆ) ವಿಚಾರಣೆ ಮತ್ತು ಇಂಡೋನೇಶ್ಯಾ, ಇಂಡೋ-ಚೈನಾ ಮತ್ತು ಇತರೆ ದಕ್ಷಿಣ ಹಾಗೂ ಆಗ್ನೇಯ ಏಶ್ಯಾ ದೇಶಗಳಿಗೆ ಭಾರತೀಯ ಯೋಧರನ್ನು ಕಳಿಸಲು ಸರ್ಕಾರ ಮಾಡಿದ ತೀರ್ಮಾನ. ಈ ಕ್ರಮಗಳ ವಿರುದ್ಧ ಭಾರಿ ಮತಪ್ರದರ್ಶನಗಳನ್ನು ಸಂಘಟಿಸುವಲ್ಲಿ ಕಮ್ಯುನಿಸ್ಟರು, ಸೋಶಿಯಲಿಸ್ಟರು ಮತ್ತು ಕಾಂಗ್ರೆಸ್ ಹಾಗೂ ಲೀಗಿನ ಕಾರ್ಯಕರ್ತರು ಸಕ್ರಿಯ ಪಾತ್ರ ವಹಿಸಿದರು. ಐ.ಎನ್.ಎ ಮುಖಂಡರನ್ನು ಬಿಡುಗಡೆ ಮಾಡಲು ಒತ್ತಾಯಿಸಿ ಸಾಮ್ರಾಜ್ಯಶಾಹಿ-ವಿರೋಧಿ ಮತಪ್ರದರ್ಶನಗಳನ್ನು ಕೂಡ ಕಲ್ಕತ್ತಾ, ಬೊಂಬಾಯಿ, ಮಥುರಾ, ದಹಲಿ, ಮೀರತ್ ಮತ್ತು ಪೆಶಾವರ್ ಮುಂತಾದ ಸ್ಥಳಗಳಲ್ಲಿ ನಡೆಸಲಾಯಿತು. ದಾಳಿ ದಬ್ಬಾಳಿಕೆಗಳನ್ನು ಎದುರಿಸುತ್ತಲೇ ಜನರು ತಂಡೋಪತಂಡವಾಗಿ ಮುನ್ನುಗ್ಗಿದರು. ಈ ಪ್ರತಿಭಟನಾ ಕಾರ್ಯಕ್ರಮಗಳು ಕಲ್ಕತ್ತಾದಲ್ಲಿ ತೀವ್ರ ಸ್ವರೂಪ ಪಡೆದವು; ಅಲ್ಲಿ ಕಾರ್ಮಿಕರು ಹಲವಾರು ದಿನಗಳ ಕಾಲ ಮುಷ್ಕರ ನಡೆಸಿದ್ದರಿಂದ ವಿದ್ಯುತ್ ಕಾರ್ಯಾಗಾರ, ಸಾರಿಗೆ, ನೀರು ಪೂರೈಕೆ ಮುಂತಾದವು ಸ್ತಬ್ಧವಾದವು. ಕಲ್ಕತ್ತಾದ ದಕ್ಷಿಣ ಭಾಗದಲ್ಲಿ ಜನರು ರಸ್ತೆಗಳಲ್ಲಿ ತಡೆಬೇಲಿ ಹಾಕಿದರು ಮತ್ತು ಮಿಲಿಟರಿ ವಾಹನಗಳಿಗೆ ಬೆಂಕಿ ಹಚ್ಚಿದರು. ಪರಿಸ್ಥಿತಿಯನ್ನು ಹತೋಟಿಗೆ ತರಲು ಬಂಗಾಳದ ಗೌರ್ನರ್ ಮಿಲಿಟರಿಯನ್ನು ಕರೆಸಬೇಕಾಯಿತು.

ಈ ಹಿನ್ನೆಲೆಯಲ್ಲಿ, ಪಕ್ಷವು ಮೊಟ್ಟ ಮೊದಲ ಬಾರಿಗೆ ತನ್ನ ಕಾರ್ಯಕ್ರಮ ಮತ್ತು ಬೇಡಿಕೆಗಳ ಮೇಲೆ ದೊಡ್ಡ ಮಟ್ಟದಲ್ಲಿ ಚುನಾವಣೆಗಳಲ್ಲಿ ಭಾಗವಹಿಸಿತು. ಆದರೆ, ಚುನಾವಣಾ ಕಣದಲ್ಲಿ ಕಾಂಗ್ರೆಸ್ ಮತ್ತು ಲೀಗ್ ಮುಖ್ಯ ಶಕ್ತಿಗಳಾಗಿದ್ದವು. ಕಾಂಗ್ರೆಸ್ ಮತ್ತು ಲೀಗಿನ ಸ್ಪರ್ಧೆಯ ನಡುವೆ ಕಮ್ಯುನಿಸ್ಟ್ ಪಕ್ಷದ ಕಾರ್ಯಕ್ರಮಗಳು ಮತ್ತು ಘೋಷಣೆಗಳು ದೇಶಾದ್ಯಂತ ಮಾನ್ಯತೆ ಪಡೆಯಲಾಗಲಿಲ್ಲ. ಈ ಪರಿಣಾಮವಾಗಿ, ಜನಪ್ರಿಯ ಹೋರಾಟಗಳನ್ನು ನಡೆಸುವಲ್ಲಿ ಕಮ್ಯುನಿಸ್ಟ್ ಪಕ್ಷವು ತನ್ನ ಕ್ರಿಯಾಶೀಲ ಪಾತ್ರವನ್ನು ಮುಂದುವರಿಸುತ್ತಿದ್ದಾಗಲೂ, ಸಂವಿಧಾನ ರಚನೆಯ ಪ್ರಕ್ರಿಯೆಯಲ್ಲಿ ಪರಿಣಾಮಕಾರಿ ಪಾತ್ರ ವಹಿಸುವ ಶಕ್ತಿಯಾಗಿ ಹೊರಹೊಮ್ಮುವ ಹಂತ ತಲುಪಲಿಲ್ಲ.

ಕನ್ನಡಕ್ಕೆ: ಟಿ. ಸುರೇಂದ್ರ ರಾವ್

Leave a Reply

Your email address will not be published. Required fields are marked *