“ಮೋದಿ ಸರಕಾರ ಉಂಟು ಮಾಡಿರುವ ಪರಿಸ್ಥಿತಿಗಳ ವಿರುದ್ಧ ದೇಶವ್ಯಾಪಿ ಪ್ರತಿಭಟನೆ ಅಗತ್ಯ”

ಜೂನ್ ೧೬ ರಂದು ಅಖಿಲ ಭಾರತ ಪ್ರತಿಭಟನಾ ದಿನಾಚರಣೆ: ಸಿಪಿಐ(ಎಂ) ಪೊಲಿಟ್‌ ಬ್ಯುರೊ ಕರೆ

ಅಯೋಜಿತವಾಗಿ, ಏಕಪಕ್ಷೀಯವಾಗಿ ಲಾಕ್‌ಡೌನನ್ನು ಹಾಕಿದ ಮೋದಿ ಸರಕಾರ ಈ ಅವಧಿಯನ್ನು ಮಹಾಮಾರಿಯನ್ನು ಎದುರಿಸಲು ಬೇಕಾಗುವ ಆರೋಗ್ಯ ಸೌಕರ್ಯಗಳನ್ನು ಹೆಚ್ಚಿಸಿಕೊಳ್ಳಲೂ ಬಳಸಲಿಲ್ಲ, ಅತ್ತ ಲಾಕ್‌ಡೌನಿನ ದುಷ್ಪರಿಣಾಮಗಳಿಂದಾಗಿ ಕಂಗಾಲಾದ ಜನಗಳಿಗೆ ಪರಿಹಾರವನ್ನೂ ಒದಗಿಸಲಿಲ್ಲ. ಈಗ ಅಷ್ಟೇ ಅಯೋಜಿತವಾಗಿ ಲಾಕ್ಡೌನ್ ನಿರ್ಬಂಧಗಳನ್ನು ಸಡಿಲಿಸುತ್ತ ಜನಗಳನ್ನು ಮಹಾಮಾರಿಯ ಎದುರು ಅವರ ಪಾಡಿಗೆ ಬಿಟ್ಟು ತೆಪ್ಪಗಾಗುವಂತೆ ಕಾಣುತ್ತಿದೆ, ಎಲ್ಲ ಹೊಣೆಗಳನ್ನೂ ರಾಜ್ಯ ಸರಕಾರಗಳ ಹೆಗಲಿಗೆ ದಾಟಿಸಿದೆ. ಸಾಲದ್ದಕ್ಕೆ, ತಾನು ಮಾತ್ರ ಕೋಮು ಧ್ರುವೀಕರಣದ ಮತ್ತು ನವ-ಉದಾರವಾದಿ ಆರ್ಥಿಕ ಧೋರಣೆಗಳನ್ನು ಅನುಸರಿಸುವ ತನ್ನ ಆಕ್ರಮಣಕಾರೀ ಅಜೆಂಡಾವನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸುವುದರಲ್ಲೇ ತೊಡಗಿದೆ. ಇದನ್ನು ಪ್ರತಿಭಟಿಸಲೇ ಬೇಕಾಗಿದೆ ಎಂದು ಜೂನ್ ೨ರಂದು ಸಭೆ ಸೇರಿದ ಸಿಪಿಐ(ಎಂ) ಪೊಲಿಟ್‌ ಬ್ಯುರೊ ನಿರ್ಧರಿಸಿದೆ.

ರಾಷ್ಟ್ರೀಯ ಲಾಕ್ಡೌನಿನ ಪರಿಸ್ಥಿತಿಗಳಲ್ಲಿ ಮೊದಲ ಬಾರಿಗೆ ವೀಡಿಯೋ ಸಮ್ಮೇಳನದ ಮೂಲಕ ಸಭೆ ಸೇರಿದ  ಪೊಲಿಟ್‌ ಬ್ಯುರೊ ಜೂನ್ ೧೬ರಂದು ನಾಲ್ಕು ಪ್ರಮುಖ ಬೇಡಿಕೆಗಳನ್ನು ಎತ್ತಿಕೊಂಡು ಅಖಿಲ ಭಾರತ ಪ್ರತಿಭಟನಾ ದಿನಾಚರಣೆ ನಡೆಸಬೇಕು ಎಂದು ಕರೆ ನೀಡಿದೆ. ಜತೆಗೇ ಈಗಾಗಲೇ ಪಕ್ಷದ ಸದಸ್ಯರು, ಘಟಕಗಳು ನಡೆಸುತ್ತಿರುವ ಪರಿಹಾರ ಕಾರ್ಯಗಳನ್ನು ಮುಂದುವರೆಸಬೇಕು ಎಂದೂ ಅದು  ಕರೆ ನೀಡಿದೆ.

ಪ್ರಸಕ್ತ ಸನ್ನಿವೇಶವನ್ನು ಆಮೂಲಾಗ್ರವಾಗಿ ಚರ್ಚಿಸಿದ ಸಭೆಯ ನಂತರ ಪ್ರಕಟಿಸಿರುವ ಹೇಳಿಕೆಯ ಪೂರ್ಣ ಪಾಟವನ್ನು ಈ ಮುಂದೆ ಕೊಡಲಾಗಿದೆ:

ಕೇರಳ ಮಾದರಿ

ಕೇರಳ ರಾಜ್ಯ ಕೊವಿಡ್-೧೯ ಮಹಾಮಾರಿಯನ್ನು ಮೇಲ್ಪಂಕಿಯಾಗುವ ರೀತಿಯಲ್ಲಿ ಎದುರಿಸಿದೆ. ಇದಕ್ಕಾಗಿ ಆ ರಾಜ್ಯದ ಜನತೆಯನ್ನು ಮತ್ತು ಎಲ್‌ಡಿಎಫ್ ಸರಕಾರವನ್ನು ಪೊಲಿಟ್‌ ಬ್ಯುರೊ ಪ್ರಶಂಸಿಸಿದೆ. ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯನ್ನು ತಡೆಗಟ್ಟಿ  ಅದರ ಗ್ರಾಫನ್ನು ಸಮತಟ್ಟುಗೊಳಿಸಿದ ನಂತರ ಈಗ ಅವರು ರಾಜ್ಯದೊಳಕ್ಕೆ ವಿದೇಶಗಳಲ್ಲಿ ಮತ್ತು ದೇಶದ ವಿವಿಧೆಡೆಗಳಲ್ಲಿ ಇದ್ದ ಕೇರಳೀಯರು ಮರಳುತ್ತಿರುವುದರಿಂದ ಎದ್ದಿರುವ ಎರಡನೇ ಅಲೆಯ ಸವಾಲನ್ನು ಎದುರಿಸಲು ಪ್ರಯತ್ನಗಳನ್ನು ತೀವ್ರಗೊಳಿಸುತ್ತಿದ್ದಾರೆ. ’ಕೇರಳ ಮಾದರಿ’ ಈಗ ಅಂತರ್ರಾಷ್ಟ್ರೀಯವಾಗಿ ಪ್ರಶಂಸೆಗೆ ಪಾತ್ರವಾಗಿದೆ. ಆದರೆ ಭಾರತದಲ್ಲಿ ಕೇಂದ್ರ ಸರಕಾರ ಈ ಅನುಭವದಿಂದ ಪಾಟ ಕಲಿಯಲು ನಿರಾಕರಿಸುತ್ತಿದೆ.

PBM 020620-2

ಮೋದಿ ಸರಕಾರದ ವಿಫಲತೆ

ತದ್ವಿರುದ್ಧವಾಗಿ , ಕೇಂದ್ರ ಸರಕಾರ ಈಗ ಮಹಾಮಾರಿಯನ್ನು ಎದುರಿಸುವಲ್ಲಿ ಭಾರತೀಯ ಜನತೆಯನ್ನು ಅವರ ಪಾಡಿಗೆ ಬಿಟ್ಟು ತೆಪ್ಪಗೆ ಕೂತಿರುವಂತೆಯೇ ಆಗಿದೆ. ಒಂದು ಅಯೋಜಿತ, ಏಕಪಕ್ಷೀಯ ಲಾಕ್‌ಡೌನನ್ನು ಇದ್ದಕ್ಕಿದ್ದಂತೆ ಘೋಷಿಸಿದ ಪ್ರಧಾನ ಮಂತ್ರಿ ಮೋದಿ, ಅದನ್ನು ಸಡಿಲಗೊಳಿಸುವ ವರೆಗಿನ ಅರವತ್ತು ದಿನಗಳ ಅವಧಿಯನ್ನು ಮಹಾಮಾರಿಯನ್ನು ಎದುರಿಸಲು ಬೇಕಾಗುವ ಆರೋಗ್ಯ ಸೌಕರ್ಯಗಳನ್ನು ಹೆಚ್ಚಿಸಿಕೊಳ್ಳಲೂ ಬಳಸಲಿಲ್ಲ, ಅತ್ತ ಲಾಕ್‌ಡೌನಿನ ಪರಿಣಾಮಗಳನ್ನು ಎದುರಿಸಲು ಯಾವುದೇ ಸಮಯ ಸಿಗದಾದ ಕ್ರೌರ್ಯದಿಂದ ಕಂಗಾಲಾದ ಜನಗಳಿಗೆ ಪರಿಹಾರವನ್ನೂ ಒದಗಿಸಲಿಲ್ಲ. ರಾಜ್ಯಸರಕಾರಗಳೊಡನೆ ಸಮಾಲೋಚನೆ ನಡೆಸದೆ ಏಕಪಕ್ಷೀಯವಾಗಿ ಲಾಕ್‌ಡೌನನ್ನು ಘೋಷಿಸಿದ ನಂತರ, ಅದರ ದುಷ್ಪರಿಣಾಮಗಳ ಹೊರೆಯನ್ನು, ನಿರ್ದಿಷ್ಟವಾಗಿ ದೇಶಾದ್ಯಂತ ಕೋಟ್ಯಂತರ ವಲಸೆ ಕಾರ್ಮಿಕರು ತಮ್ಮ ಕುಟುಂಬಗಳೊಂದಿಗೆ ಹೊರಟಿರುವ ಮಾನವೀಯ ಪ್ರಶ್ನೆಯ ಬೃಹತ್ ಹೊರೆಯನ್ನು, ರಾಜ್ಯ ಸರಕಾರಗಳ ಹೆಗಲ ಮೇಲೆ ದಾಟಿಸಲಾಗಿದೆ. ಮೋದಿ ಪ್ರಧಾನ ಮಂತ್ರಿಯ ಹೆಸರಿನಲ್ಲಿ ಒಂದು ಖಾಸಗಿ ಟ್ರಸ್ಟ್ ನಿಧಿಯಲ್ಲಿ ಸಂಗ್ರಹಿಸುತ್ತಿರುವ ಸಾವಿರ ಕೋಟಿ ರೂ.ಗಳನ್ನು ರಾಜ್ಯಗಳಿಗೆ ಕೊಡಲು ನಿರಾಕರಿಸುತ್ತಿದ್ದಾರೆ.

ನಿರ್ಬಂಧಗಳ ಸಡಿಲಿಕೆಯೂ, ಮತ್ತೆ ಒಂದು ಅಯೋಜಿತ ಶೈಲಿಯಲ್ಲೇ ನಡೆಯುತ್ತಿದೆ, ಕೇಂದ್ರ ಸರಕಾರ ತನ್ನ ಹೊಣೆ ಜಾರಿಸಿಕೊಂಡು ನಿರ್ಧಾರಗಳನ್ನು ರಾಜ್ಯ ಸರಕಾರಗಳಿಗೆ ಬಿಟ್ಟಿದೆ. ಮಹಾಮಾರಿಯ ಹರಡಿಕೆಯನ್ನು ಅಥವ ಸಾವುಗಳ ಸಂಖ್ಯೆಯನ್ನು ತಡೆಗಟ್ಟುವ ಅಥವ ಹತೋಟಿಯಲ್ಲಿಡುವ ಬದಲು ಲಾಕ್‌ಡೌನ್ ಅವಧಿಯಲ್ಲಿ ಸಂಖ್ಯೆಗಳು ತೀವ್ರವಾಗಿ ಏರಿವೆ. ಮಾರ್ಚ್ ೨೪, ೨೦೨೦ರಂದು ಭಾರತದಲ್ಲಿ ೫೬೪ ಸೋಂಕಿತ ಕೇಸುಗಳಿದ್ದವು, ೧೦ ಸಾವುಗಳು ಸಂಭವಿಸಿದ್ದವು. ಎರಡು ತಿಂಗಳ ನಂತರ ಮೇ ೨೪, ೨೦೨೦ರಂದು ೭೪೫೬೦ ಮಂದಿ ಇನ್ನೂ ಸೋಂಕುಗ್ರಸ್ತರಾಗಿದ್ದರು, ೩೮೬೭ ಸಾವುಗಳು ಆಗಿದ್ದವು. ಜೂನ್ ೨ರಂದು ಈ ಸಂಖ್ಯೆಗಳು ೨,೦೭,೬೧೫ ಮತ್ತು ೫,೮೧೫ ಆಗಿವೆ.

ರಾಷ್ಟೀಯ ಲಾಕ್‌ಡೌನಿನ ಅವಧಿಯಲ್ಲಿ ಮಹಾಮಾರಿಯನ್ನು ಎದುರಿಸಲು ಮತ್ತು ಜನಗಳಿಗೆ ಪರಿಹಾರ ಒದಗಿಸಲು ಏಕಚಿತ್ರದಿಂದ ಗಮನ ಕೇಂದ್ರೀಕರಿಸುವುದರ ಬದಲು ಕೇಂದ್ರ ಸರಕಾರ ಕೋಮು ಧ್ರುವೀಕರಣದ ಮತ್ತು ನವ-ಉದಾರವಾದಿ ಆರ್ಥಿಕ ಧೋರಣೆಗಳನ್ನು ಅನುಸರಿಸುವ ತನ್ನ ಆಕ್ರಮಣಕಾರೀ ಅಜೆಂಡಾವನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸುವುದರಲ್ಲೇ ತೊಡಗಿತು. ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯದ ಮೇಲೆ ಗುರಿಟ್ಟಿರುವುದು, ಸಿ ಎ ಎ, ಎನ್‌ ಆರ್‌ ಸಿ ಮತ್ತು ಎನ್‌ ಪಿ ಆರ್ ವಿರುದ್ಧ ಶಾಂತಿಯುತ ಪ್ರತಿಭಟನೆಗಳನ್ನು ನಡೆಸಿದವರ ಬಂಧನ ಮತ್ತು ಜೈಲುವಾ ಮತ್ತು ರಾಜದ್ರೋಹದ ಕಾಯ್ದೆ, ಯು ಎ ಪಿ ಎ ಹಾಗೂ ಎನ್‌ ಎಸ್‌ ಎ ಯಂತಹ ಕರಾಳ ಕಾಯ್ದೆಯಗಳ ಅಡಿಯಲ್ಲಿ ಎಲ್ಲ ಭಿನ್ನಾಭಿಪ್ರಾಯಗಳ ದಮನವನ್ನು ಪೊಲಿಟ್‌ ಬ್ಯುರೊ ಖಂಡಿಸಿದೆ. ಈ ಲಾಕ್‌ಡೌನ್ ಅವಧಿಯನ್ನು ಕೇಂದ್ರ ಸರಕಾರ ಎಲ್ಲ ಅಧಿಕಾರಗಳನ್ನು ತನ್ನ ಕೈಗಳಲ್ಲಿ ಕೇಂದ್ರೀಕರಿಸಲು ಬಳಸಿಕೊಳ್ಳುತ್ತಿದೆ, ಈ ಮೂಲಕ ನಮ್ಮ ಸಂವಿಧಾನದ ಒಂದು ಮೂಲ ಲಕ್ಷಣವಾದ ಒಕ್ಕೂಟತತ್ವವನ್ನು ಸಂಪೂರ್ಣವಾಗಿ ನಿರಾಕರಿಸುತ್ತಿದೆ.

ಹಣಕಾಸು ಪ್ಯಾಕೇಜ್

ಜೂನ್ ೧, ೨೦೨೦ರಂದು ಕೇಂದ್ರ ಸರಕಾರ ಈ ಹಿಂದೆ ಪ್ರಕಟಿಸಿದ ೨೦ ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಅಲ್ಲದೆ ಇನ್ನಷ್ಟು ಹಣಕಾಸು ಪ್ಯಾಕೇಜುಗಳನ್ನು ಪ್ರಕಟಿಸಿದೆ. ಆ ೨೦ ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಈ ಮೊದಲೇ ಪ್ರಕಟಿಸಿದ್ದ ಸ್ಕೀಮುಗಳ ಮರು ಪೊಟ್ಟಣವಾಗಿದೆಯಷ್ಟೇ. ಇದರಲ್ಲಿ ಸರಕಾರ ಮಾಡುವ ಹೆಚ್ಚುವರಿ ವೆಚ್ಚಗಳ ಮೊತ್ತ ಸುಮಾರಾಗಿ ನಮ್ಮ ಜಿಡಿಪಿಯ ೧ ಶೇ.ದಷ್ಟು ಮಾತ್ರ. ಇದು ಸಾಲಗಳನ್ನು ಲಭ್ಯಗೊಳಿಸುವ ಪ್ಯಾಕೇಜಷ್ಟೇ ಆಗಿದೆ, ಪರಿಹಾರ ಒದಗಿಸಬಹುದಾದ ಅನುದಾನಗಳ ಸರಕಾರದ ವೆಚ್ಚಗಳೇನೂ ಇದರಲ್ಲಿಲ್ಲ.

ಈ ಹಣಕಾಸು ಪೊಟ್ಟಣ ನವ-ಉದಾರವಾದಿ ಆರ್ಥಿಕ ಸುಧಾರಣೆಗಳ ಜಾರಿಯ ಒಂದು ನೀಲ ನಕಾಶೆ, ವಿದೇಶಿ ಮತ್ತು ದೇಶೀ ಕಾರ್ಪೊರೇಟ್‌ಗಳ ಲಾಭಗಳನ್ನು ಗರಿಷ್ಟಗೊಳಿಸಲು ಹೊಸ ಮಾರ್ಗೋಪಾಯಗಳನ್ನು ಕಲ್ಪಿಸುವ, ಎಲ್ಲ ರಾಷ್ಟ್ರೀಯ ಆಸ್ತಿಗಳನ್ನು ರಭಸದಿಂದ ಖಾಸಗೀಕರಿಸುವ ಮತ್ತು ಅರ್ಥವ್ಯವಸ್ಥೆಯ ಎಲ್ಲ ವಲಯಗಳನ್ನೂ ಎಫ್‌ಡಿಐಗೆ ತೆರೆದು ಕೊಡುವ ನೀಲ ನಕಾಶೆಯಾಗಿದೆ.

ಇದರೊಂದಿಗೇ ಕಾರ್ಮಿಕ ಕಾನೂನುಗಳ ಮೇಲೆ ಒಂದು ದುಷ್ಟ ದಾಳಿ ಬಂದಿದೆ. ಕನಿಷ್ಟ ಹತ್ತು ರಾಜ್ಯಗಳಲ್ಲಿ, ರಾಷ್ಟ್ರೀಯ ಲಾಕ್‌ಡೌನಿನ ನೆಪವೊಡ್ಡಿ ಈ ಕಾನೂನುಗಳನ್ನು ಸುಮಾರಾಗಿ ನಿರರ್ಥಕಗೊಳಿಸಲಾಗಿದೆ. ಇದನ್ನು ಜನಗಳು ದೃಢವಾಗಿ ಪ್ರತಿರೋಧಿಸುತ್ತಾರೆ.

ಇತ್ತೀಚಿನ ಪ್ರಕಟಣೆಗಳು:

ಜೂನ್ ೧ ರಂದು ಇನ್ನಷ್ಟು ಕಹಳೆ-ತುತ್ತೂರಿಗಳೊಂದಿಗೆ ಸರಕಾರ ಕೆಲವು ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ(ಎಂ ಎಸ್‌ ಪಿ)ಗಳನ್ನು ಪ್ರಕಟಿಸಿದೆ. ಭತ್ತಕ್ಕೆ ಪ್ರಕಟಿಸಿರುವ ಏರಿಕೆ ಕಳೆದ ವರ್ಷದ ಎಂಎಸ್‌ಪಿಗೆ ಹೋಲಿಸಿದರೆ ಕೇವಲ ೨ಶೇ. ಇದೇ ರೀತಿ ಉಳಿದ ಎಲ್ಲ ಸರಕುಗಳಿಗೂ. ಇದು ಕಳೆದ ಒಂದು ವರ್ಷದಲ್ಲಿ ಉತ್ಪಾದನಾ ವೆಚ್ಚದಲ್ಲಿ ಆಗಿರುವ ಏರಿಕೆಗಿಂತಲೂ ಬಹಳ ಕಡಿಮೆಯೇ ಇದೆ. ಇದು ರೈತಾಪಿಗಳಿಗೆ ಯಾವುದೇ ಪರಿಹಾರವನ್ನು ಒದಗಿಸುವುದಿರಲಿ, ವಾಸ್ತವವಾಗಿ ಅವರನ್ನು ಇನ್ನಷ್ಟು ಸಾಲಭಾರದತ್ತ ತಳ್ಳುತ್ತದೆ. ಸರಕಾರವು ಮತ್ತೆ ಎಂಎಸ್‌ಎಂಇ ವಲಯಕ್ಕೆ ಸಾಲವನ್ನು ಲಭ್ಯಗೊಳಿಸುವ ಹಲವು ಕ್ರಮಗಳನ್ನು ಪ್ರಕಟಿಸಿತು. ಸಾಲಗಳು ಪರಿಹಾರಗಳಲ್ಲ. ಎಂ ಎಸ್‌ ಎಂ ಇ ಗಳಿಗೆ ಈಗ ಬೇಕಾಗಿರುವುದು ಪರಿಹಾರ. ಹಿಂದಿನ ೨೦ ಲಕ್ಷದ ಪ್ಯಾಕೇಜಿನಲ್ಲಿ ಈ ಮೊದಲು ರಿಜರ್ವ್ ಬ್ಯಾಂಕ್ ಎಂಎಸ್‌ಎಂಇಗಳಿಗೆ ಪ್ರಕಟಿಸಿದ ೫.೨ ಲಕ್ಷ ಕೋಟಿ ರೂ.ಗಳ ಸಾಲಗಳೂ ಸೇರಿದ್ದವು. ಇದನ್ನು ೨೦೧೦ರಲ್ಲಿ ಇದ್ದುದಕ್ಕಿಂತ ಕಡಿಮೆ ಬಡ್ಡಿದರದಲ್ಲಿ ಕೊಡುವುದಾಗಿ ಹೇಳಲಾಗಿತ್ತು. ಆದರೆ ಈ ಸಾಲಗಳನ್ನೇ ಪಡೆಯುವವರಿಲ್ಲ. ವಾಣಿಜ್ಯ ಬ್ಯಾಂಕುಗಳು ಈ ಹಣವನ್ನು ರಿಜರ್ವ್ ಬ್ಯಾಂಕಿನಲ್ಲಿ ಮರು ಠೇವಣಿ ಇಡಲೇ ಬೇಕಾಗಿ ಬಂದಿದೆ. ಇದು ಸರಳ ಸಂಗತಿ. ಎಂಎಸ್‌ಎಂಇಗಳು ಉತ್ಪಾದಿಸುವ ಸರಕುಗಳನ್ನು ಖರೀದಿಸುವ ಸಾಮರ್ಥ್ಯ ಜನಗಳಿಗೆ ಸಿಗದಿದ್ದರೆ, ಅರ್ಥವ್ಯವಸ್ಥೆಯ ಪುನಶ್ಚೇತನ ಸಾಧ್ಯವಿಲ್ಲ. ಜನಗಳ ಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸದೆ ಎಷ್ಟೇ ಸಾಲಗಳನ್ನು ಕೊಟ್ಟರೂ ಅರ್ಥವ್ಯವಸ್ಥೆಯ ಪುನಶ್ಚೇತನ ಆಗಲಾರದು. ಇದು ನೇರ ಅನುದಾನಗಳ ಮೂಲಕವಷ್ಟೇ ಸಾಧ್ಯ. ಇದನ್ನು ಮೋದಿ ಸರಕಾರ ಮಾಡಲಾರದು, ತಿರಸ್ಕಾರಭರಿತ ಅಸಡ್ಡೆಯೊಂದಿಗೆ ಹೀಗೆ ಮಾಡಲು ಅದು ನಿರಾಕರಿಸುತ್ತಿದೆ.

ಅರ್ಥವ್ಯವಸ್ಥೆ ನಜ್ಜುಗುಜ್ಜಾಗಿದೆ

ಕೊವಿಡ್-೧೯ ಮಹಾಮಾರಿ ನಮ್ಮ ಮೇಲೆ ಎರಗುವ ಮೊದಲೇ ಭಾರತೀಯ ಅರ್ಥವ್ಯವಸ್ಥೆ ಆಗಲೇ ಪತನದತ್ತ ಸಾಗಿತ್ತು, ಹಿಂಜರಿತದತ್ತ ವೇಗವಾಗಿ ಇಳಿಯುತ್ತಿತ್ತು. ೨೦೧೯-೨೦ರ ಜಿಡಿಪಿ ಬೆಳವಣಿಗೆ ದರದ ಅಂಕಿ-ಅಂಶಗಳನ್ನು ಮೇ ೨೯ರಂದು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಇದು ಕಳೆದ ೧೧ ವರ್ಷಗಳಲ್ಲೇ ಅತಿ ಕಡಿಮೆ ೪.೨ಶೇ.ಕ್ಕೆ ಇಳಿದಿದೆ. ೨೦೧೮-೧೯ರಲ್ಲಿ ಇದು ೬.೧ಶೇ. ಇತ್ತು. ನಾಲ್ಕನೇ ತ್ರೈಮಾಸಿಕದಲ್ಲಿ ಅಂದರೆ ಜನವರಿ-ಮಾರ್ಚ್ ೨೦೨೦ರಲ್ಲಿ ಜಿಡಿಪಿ ಬೆಳವಣಿಗೆ ದರ ೩.೧ಶೇ.ಕ್ಕೆ ಕುಸಿಯಿತು. ಹಲವು ಅಂತರ್ರಾಷ್ಟ್ರೀಯ ದರ ಲೆಕ್ಕಾಚಾರಗಳ ಸಂಸ್ಥೆಗಳು ಮತ್ತು ದೇಶದೊಳಗಿನ ಸ್ವತಂತ್ರ ಸಂಸ್ಥೆಗಳು ಜಿಡಿಪಿ ಬೆಳವಣಿಗೆ ದರ ಇದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕುಸಿದಿದೆ ಎಂದು ಅಂದಾಜು ಮಾಡಿವೆ. ಇದು ಮಾರ್ಚ್ ತಿಂಗಳ ಕೊನೆಯ ವಾರವೊಂದನ್ನು ಬಿಟ್ಟು ಮುಖ್ಯವಾಗಿ ಲಾಕ್‌ಡೌನಿನ ಮುಂಚಿನ ಅವಧಿಯದ್ದು.

ಮಹಾಮಾರಿ ಮತ್ತು ನಂತರದ ಲಾಕ್‌ಡೌನ್ ಬಹಳಷ್ಟು ಭಾಗ ಆರ್ಥಿಕ ಚಟುವಟಿಕೆಗಳನ್ನು ನಾಶಮಾಡಿವೆ. ಇವು ನಮ್ಮ ಬಹುಪಾಲು ಜನಗಳ ಜೀವನದ ಪರಿಸ್ಥಿತಿಗಳ ಮೇಲೆ ದುಷ್ಪರಿಣಾಮಗಳನ್ನು ಬೀರಿವೆ.

ಹಣಕಾಸು ಪ್ಯಾಕೇಜುಗಳು:

ಈ ಹೆಚ್ಚಿನ ಪ್ಯಾಕೇಜುಗಳು ಜನಗಳಿಗೆ ಪರಿಹಾರಗಳನ್ನು ಒದಗಿಸುವಲ್ಲಿ ಸಂಪೂರ್ಣವಾಗಿ ನಿರುಪಯೋಗೊಯಾಗಿವೆಯಷ್ಟೇ ಅಲ್ಲ, ಅವಾಸ್ತವವೇ ಆಗಿವೆ. ಏಕೆಂದರೆ ಸರಕಾರದ ರೆವಿನ್ನೂ ಸಂಗ್ರಹಗಳು ತೀವ್ರವಾಗಿ ಕುಸಿದಿವೆ. ಒಟ್ಟು ತೆರಿಗೆ ಆದಾಯ(ಜಿಟಿಆರ್)ನಲ್ಲಿ ೭೦,೦೦೦ ಕೋಟಿ ರೂ.ಗಳಿಗಿಂತಲೂ ಹೆಚ್ಚಿನ ಇಳಿಕೆಯಾಗಿದೆ. ಮತ್ತು ಕಾರ್ಪೊರೇಟ್ ತೆರಿಗೆ ಆದಾಯ(ಸಿಟಿಆರ್) ಕೂಡ ೧,೦೬,೦೦೦ ಕೋಟಿ ರೂ.ಗಳಿಗಿಂತಲೂ ಹೆಚ್ಚಿನ ಇಳಿಕೆ ಕಂಡಿದೆ. ನಿಜವಾದ ಜಿಟಿಆರ್ ಮತ್ತು ಸಿಟಿಆರ್ ಸಂಗ್ರಹಗಳು ಫೆಬ್ರುವರಿ ೨೦೧೯ರಲ್ಲಿ ಸಲ್ಲಿಸಿದ ಬಜೆಟಿನ ಪರಿಷ್ಕೃತ ಅಂದಾಜುಗಳಿಗಿಂತ ಅನುಕ್ರಮವಾಗಿ ೭.೧ಶೇ. ಮತ್ತು ೮.೮ಶೇ.ದಷ್ಟು ಕಡಿಮೆ ಆಗಿವೆ. ಸರಕಾರೀ ರೆವಿನ್ಯೂ ಸಂಗ್ರಹಗಳಲ್ಲಿ ಇಂತಹ ಬೃಹತ್ ಕೊರತೆಗಳಿರುವಾಗ, ಈ ಎಲ್ಲ ಭವ್ಯ ಪ್ರಕಟಣೆಗಳು ಕಾಗದದ ಮೇಲಷ್ಟೇ ಉಳಿಯುತ್ತವೆ. ಸಾಲಗಳನ್ನು ಅಗ್ಗಗೊಳಿಸುವ ಎಲ್ಲ ಹೇಳಿಕೆಗಳ ಹೊರತಾಗಿಯೂ ಅರ್ಥವ್ಯವಸ್ಥೆಯಲ್ಲಿ ಒಟ್ಟು ಹೂಡಿಕೆ ೬ಶೇ.ಕ್ಕಿಂತಲೂ ಹೆಚ್ಚು ಇಳಿದಿದೆ.

ರಾಜ್ಯಗಳ ಹಣಕಾಸುಗಳ ಮೇಲೆ ದಾಳಿಗಳು: ಸರಕಾರದ ರೆವಿನ್ಯೂ ಸಂಗ್ರಹಗಳಲ್ಲಿ ಈ ಕೊರತೆ ಈಗಾಗಲೇ ಹಣವಿಲ್ಲದೆ ಸೊರಗಿರುವ ರಾಜ್ಯಗಳ ಪಾಲುಗಳನ್ನು ಮತ್ತಷ್ಟು ಕಡಿಮೆ ಮಾಡುತ್ತದೆ. ಜಿಎಸ್‌ಟಿ ಪರಿಹಾರಗಳ ಬಾಕಿಯನ್ನು ಇನ್ನೂ ಕೇಂದ್ರ ಸರಕಾರ ರಾಜ್ಯಗಳಿಗೆ ತೆತ್ತಿಲ್ಲ. ಎಲ್ಲ ರಾಜ್ಯಗಳೂ ಮಹಾಮಾರಿಯನ್ನು ಮತ್ತು ಲಾಕ್‌ಡೌನಿನ ಆರ್ಥಿಕ ಪರಿಣಾಮಗಳನ್ನು ಎದುರಿಸಲು ಹಣಕಾಸು ನೆರವನ್ನು ಕೇಳುತ್ತಿವೆ. ಮಹಾಮಾರಿಯ ವಿರುದ್ಧ ಹೋರಾಡುವಲ್ಲಿ ಮುಂಚೂಣಿಯಲ್ಲಿರುವುದು ರಾಜ್ಯಗಳೇ. ಆದರೆ ಕೇಂದ್ರ ಸರಕಾರ ಅವುಗಳಿಗೆ ನಿಧಿಗಳ ವರ್ಗಾವಣೆಯನ್ನು ಮಾಡಲು ನಿರಾಕರಿಸುತ್ತಿದೆ.

ಸಾರ್ವಜನಿಕ ಆರೋಗ್ಯ

ಈ ಎರಡು ತಿಂಗಳುಗಳಿಗೂ ಹೆಚ್ಚಿನ ಅವಧಿ ನಮ್ಮ ದೇಶದಲ್ಲಿ ಸಾರ್ವಜನಿಕ ಆರೋಗ್ಯ ಸೇವೆಗಳ ಮೂಲರಚನೆಗಳು ಸಂಪೂರ್ಣವಾಗಿಯೂ ಅಸಮಪರ್ಕವಾಗಿವೆ ಎಂಬುದನ್ನು ಸ್ಪಷ್ಟವಾಗಿ ಬಯಲಿಗೆ ತಂದಿವೆ. ಪ್ರತಿಯೊಂದನ್ನೂ ಖಾಸಗೀಕರಿಸುವ ಭರದಲ್ಲಿ ಮೋದಿ ಸರಕಾರ ಸಾರ್ವಜನಿಕ ಆರೋಗ್ಯಪಾಲನೆಯನ್ನು ಹೆಚ್ಚು-ಕಡಿಮೆ ಕಳಚಿಯೇ ಹಾಕಿದೆ. ಇದು ಈ ಮಹಾಮಾರಿಯಲ್ಲಿ ತನ್ನ ಬಲಿಯನ್ನು ಪಡೆಯುತ್ತಿದೆ. ಈಗಲಾದರೂ, ಕೇಂದ್ರ ಸರಕಾರ ದೇಶದ ಜಿಡಿಪಿಯ ಕನಿಷ್ಟ ೩ಶೇ.ವನ್ನಾದರೂ ಸಾರ್ವಜನಿಕ ಆರೋಗ್ಯ ಪಾಲನೆಯ ಮೆಲೆ ಖರ್ಚು ಮಾಡಬೇಕು ಎಂಬ ತನ್ನ ಆಗ್ರಹವನ್ನು ಪೊಲಿಟ್‌ ಬ್ಯುರೊ ಪುನರುಚ್ಚರಿಸಿದೆ.

ಡಿಜಿಟಲ್ ಶಿಕ್ಷಣ

ಲಾಕ್‌ಡೌನ್ ಶೈಕ್ಷಣಿಕ ವರ್ಷ ಮುಗಿಯುವ ವೇಳೆಗೆ ಮತ್ತು ಇನ್ನೇನು ಪರೀಕ್ಷೆಗಳು ನಡೆಯಲಿವೆ ಎನ್ನುವಾಗ ಬಂದಿದೆ. ಇದು ಒಂದು ತಲೆಮಾರಿನ ವಿದ್ಯಾರ್ಥಿಗಳ ಭವಿಷ್ಯವನ್ನು ಅಸ್ತವ್ಯಸ್ತಗೊಳಿಸಿದೆ. ಲಾಕ್‌ಡೌನನ್ನು ಬಳಸಿ ಕೇಂದ್ರ ಸರಕಾರ ಸಂಸತ್ತು ಇನ್ನೂ ಮಂಜೂರಾತಿ ನೀಡದಿರುವ ತನ್ನ ಪ್ರತಿಗಾಮಿ ಶಿಕ್ಷಣ ಧೋರಣೆಯನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ ಮತ್ತು ಡಿಜಿಟಲ್ ಬೋಧನೆ/ಕಲಿಕೆಯ ವಿಧಾನಗಳನ್ನು ಹೇರುತ್ತಿದೆ. ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯ ಮೇಲೆ ಡಿಜಿಟಲ್ ವಿಭಜನೆಯನ್ನು ಹೇರಬಾರದು, ಇದು ಭಾರತದ ಭವಿಷ್ಯಕ್ಕೆ ಬಾಧಕವಾಗುತ್ತದೆ. ಶಾಲೆಗಳಲ್ಲಿ ಮತ್ತು ಕಾಲೇಜುಗಳಲ್ಲಿ ಪಾರಂಪರಿಕ ಬೋಧನಾ ವಿಧಾನಗಳ ಜಾಗದಲ್ಲಿ ಡಿಜಿಟಲ್ ವಿಧಾನಗಳನ್ನು ತರುವುದನ್ನು ಪಕ್ಷ ಸದಾ ವಿರೋಧಿಸುತ್ತ ಬಂದಿದೆ, ಈಗಲೂ ವಿರೋಧಿಸುತ್ತಿದೆ. ಮಹಾಮಾರಿಯ ಮತ್ತು ಅದರಿಂದಾಗಿ ಛಿದ್ರವಾಗಿರುವ ಪ್ರಸಕ್ತ ಅವಧಿಯಲ್ಲಿ ಶೈಕ್ಷಣಿಕ ವರ್ಷವು ಛಿದ್ರಗೊಳ್ಳದಂತೆ ತಡೆಯಲು ಡಿಜಿಟಲ್ ವಿಧಾನಗಳನ್ನು ಬಳಸಬಹುದು. ಆದರೆ ಅದು ಎಂದಿಗೂ ಈಗಿರುವ ಬೋಧನಾ ವಿಧಾನಗಳ ಬದಲಾಗಿ ಬರಲು ಸಾಧ್ಯವಿಲ್ಲ. ಇದನ್ನು ಕೂಡ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಎಲ್ಲ ವಿದ್ಯಾರ್ಥಿಗಳಿಗೂ ಡಿಜಿಟಲ್ ಸಾಧನಗಳು ಸಾರ್ವತ್ರಿಕವಾಗಿ ಲಭ್ಯವಿರುವವಲ್ಲಿ ಮಾತ್ರವೇ ಬಳಸಬೇಕು. ಶಿಕ್ಷಣದಲ್ಲಿ ಯಾವುದೇ ಡಜಿಟಲ್ ವಿಭಜನೆಯನ್ನು ಪಕ್ಷವು ವಿರೋಧಿಸುತ್ತದೆ.

ಕೇಂದ್ರ ಮತ್ತು ರಾಜ್ಯ ಸರಕಾರಗಳು, ಪರೀಕ್ಷೆಗಳನ್ನು ಎಂದಿನ ರೀತಿಯಲ್ಲಿ ನಡೆಸಲು ಮತ್ತು ವಿದ್ಯಾರ್ಥಿಗಳಿಗೆ ಒಂದು ವರ್ಷ ನಷ್ಟಗೊಳ್ಳದ ರೀತಿಯಲ್ಲಿ ಶೈಕ್ಷಣಿಕ ಅವಧಿಯನ್ನು ಪುನರ್ರೂಪಿಸಬೇಕು.

ಭಾರತ-ಚೀನಾ ನಡುವೆ ಸಮಸ್ಯೆ

ಲಡಾಖ್ ಮತ್ತು ಸಿಕ್ಕಿಂ ನಲ್ಲಿ ವಾಸ್ತವ ಹತೋಟಿ ರೇಖೆ(ಎಲ್‌ಎಸಿ)ಯ ಮೇಲಿನ ವಿವಿಧೆಡೆಗಳಲ್ಲಿ ಎದ್ದಿರುವ ಪ್ರಶ್ನೆಯನ್ನು ಪೊಲಿಟ್ ಬ್ಯುರೊ ಆತಂಕದಿಂದ ಗಮನಿಸಿತು. ರಕ್ಷಣಾ ಮತ್ತು ರಾಜತಾಂತ್ರಿಕ ಮಟ್ಟಗಳಲ್ಲಿ ಸ್ಥಾಪಿತವಾಗಿರುವ ವ್ಯವಸ್ಥೆಗಳ ಮೂಲಕ ನಡೆಯುತ್ತಿರುವ ಮಾತುಕತೆಗಳು ಈ ಪ್ರಶ್ನೆಯನ್ನು ಪರಿಹರಿಸಲು ಮತ್ತು ಎರಡು ದೇಶಗಳ ನಡುವೆ ಸಾಮಾನ್ಯ ಸಂಬಂಧಗಳನ್ನು ಉಳಿಸಿಕೊಳ್ಳಲು ನೆರವಾಗುತ್ತದೆ ಎಂಬ ಆಶಯವನ್ನು ಅದು ವ್ಯಕ್ತಪಡಿಸಿದೆ.

ಸಿಪಿಐ(ಎಂ) ಪರಿಹಾರ ಕಾರ್ಯ

ರಾಷ್ಟ್ರೀಯ ಲಾಕ್‌ಡೌನಿನ ಅವಧಿಯಲ್ಲಿ ಸಿಪಿಐ(ಎಂ), ಅದರ ಸದಸ್ಯರು ಮತ್ತು ಎಲ್ಲ ಘಟಕಗಳು ಎಲ್ಲ ರಾಜ್ಯಗಳಲ್ಲೂ ಉದ್ಯೋಗಗಳನ್ನು ಮತ್ತು ಜೀವನೋಪಾಯಗಳನ್ನು ಕಳಕೊಂಡವರಿಗೆ ಪರಿಹಾರಗಳನ್ನು ಹಾಗೂ ಹಸಿದವರಿಗೆ ಆಹಾರವನ್ನು ಒದಗಿಸಲು ಸತತ ಪ್ರಯತ್ನಗಳನ್ನು ನಡೆಸಿದ್ದಾರೆ. ಈ ಪರಿಹಾರ ಚಟುವಟಿಕೆಗಳನ್ನು, ವಿಶೇಷವಾಗಿ ವಲಸೆ ಕಾರ್ಮಿಕರಿಗೆ ಬಹಳಷ್ಟು ಅಗತ್ಯವಿರುವ ಪರಿಹಾರ ಒದಗಿಸುವುದನ್ನು ಮುಂದುವರೆಸಬೇಕು ಎಂದು ಪೊಲಿಟ್‌ ಬ್ಯುರೊ ಪಕ್ಷದ ಎಲ್ಲ ಸದಸ್ಯರಿಗೆ ಮತ್ತು ಘಟಕಗಳಿಗೆ ಕರೆ ನೀಡಿದೆ.

ಕೇಂದ್ರ ಸಮಿತಿ ಸಭೆ

ಜುಲೈ ತಿಂಗಳಲ್ಲಿ ಕೇಂದ್ರ ಸಮಿತಿ ಸಭೆಯನ್ನು, ಈ ಪೊಲಿಟ್‌ ಬ್ಯುರೊ ಸಭೆಯನ್ನು ನಡೆಸಿದ ರೀತಿಯಲ್ಲಿ ಡಿಜಿಟಲ್ ತಂತ್ರಜ್ಞಾನವನ್ನು ಬಳಸಿ ನಡೆಸಲು ಪೊಲಿಟ್‌ ಬ್ಯುರೊ ನಿರ್ಧರಿಸಿದೆ.

ಅಖಿಲ ಭಾರತ ಪ್ರತಿಭಟನೆ

ಪ್ರಸಕ್ತ ಸನ್ನಿವೇಶದಲ್ಲಿ, ಈಗಾಗಲೇ ಇರುವ ನಿರುದ್ಯೋಗಿಗಳ ಅಗಾಧ ಸಂಖ್ಯೆಗೆ, ಈ ಲಾಕ್‌ಡೌನ್ ಅವಧಿಯಲ್ಲಿ ಇನ್ನೂ ಕನಿಷ್ಟ ೧೫ ಕೋಟಿ ಜನಗಳು ನಿರುದ್ಯೋಗಿಗಳಾಗಿ ಸೇರಿದ್ದಾರೆ. ನಮ್ಮ ಜನಗಳ ಒಂದು ವಿಶಾಲ ವಿಭಾಗ ಜೀವನೋಪಾಯದ ಎಲ್ಲ ಸಾಧನಗಳನ್ನೂ ಕಳಕೊಂಡಿದೆ. ತಮ್ಮ ಮನೆಗಳಿಗೆ ಹಿಂದಿರುಗಲು ಬೀದಿಗಳಲ್ಲಿ ಸಾಗಿರುವ ಹಸಿದ ವಲಸೆ ಕಾರ್ಮಿಕರ ಹೃದಯವೇದಕ ಅನುಭವಗಳು ನಮ್ಮ ಜನಗಳ ಗಮನಾರ್ಹ ವಿಭಾಗಗಳು ಇಂದು ಎಷ್ಟೊಂದು ಹಸಿವಿನಿಂದ ಪೀಡಿತರಾಗಿದ್ದಾರೆ ಎಂಬುದನ್ನು ತೋರಿಸಿದೆ. ಇಂತಹ ಪರಿಸ್ಥಿತಿಗಳ ವಿರುದ್ದ ಪ್ರತಿಭಟನೆಗಳನ್ನು ದೇಶಾದ್ಯಂತ ಸಂಘಟಿಸಬೇಕು ಎಂದು ಪೊಲಿಟ್‌ ಬ್ಯುರೊ ನಿರ್ಧರಿಸಿದೆ. ಈ ಪ್ರತಿಭಟನೆಗಳನ್ನು ಆಯಾಯ ಪ್ರದೇಶದಲ್ಲಿರುವ ನಿಬಂಧನೆಗಳು ಮತ್ತು ನಿರ್ಬಂಧಗಳನ್ನು ಚಾಚೂ ತಪ್ಪದೆ ಪಾಲಿಸುತ್ತಲೇ, ದೈಹಿಕ ಅಂತರವನ್ನು ಕಾಯ್ದುಕೊಂಡು, ಮುಖಗವಸು ಇತ್ಯಾದಿಗಳನ್ನು ಧರಿಸಿಕೊಂಡು ನಡೆಸಲಾಗುವುದು. ಈ ಕೆಳಗಿನ ಬೇಢಿಕೆಗಳ ಮೇಲೆ ಜೂನ್ ೧೬ರಂದು ಅಖಿಲ ಭಾರತ ಪ್ರತಿಭಟನಾ ದಿನವನ್ನು ಆಚರಿಸಲು ಪೊಲಿಟ್‌ ಬ್ಯುರೊ ಕರೆ ನೀಡಿದೆ:

  1. ಆದಾಯ ತೆರಿಗೆ ತೆರುವ ಮಿತಿಗಳ ಹೊರಗಿರುವ ಎಲ್ಲ ಕುಟುಂಬಗಳಿಗೆ ತಿಂಗಳಿಗೆ ರೂ.೭೫೦೦ ರಂತೆ ಆರು ತಿಂಗಳ ವರೆಗೆ ನಗದು ವರ್ಗಾವಣೆ.
  2. ಪ್ರತಿವ್ಯಕ್ತಿಗೆ ತಿಂಗಳಿಗೆ ೧೦ ಕೆ.ಜಿ. ಯಂತೆ ಆರು ತಿಂಗಳ ವರೆಗೆ ಉಚಿತ ಆಹಾರಧಾನ್ಯಗಳ ವಿತರಣೆ.
  3. ಮನರೇಗದ ಅಡಿಯಲ್ಲಿ ಹೆಚ್ಚಿಸಿದ ಕೂಲಿಗಳೊಂದಿಗೆ ಕನಿಷ್ಟ ೨೦೦ ದಿನಗಳ ಉದ್ಯೋಗ. ನಗರದ ಬಡವರಿಗೂ ಉದ್ಯೋಗ ಖಾತ್ರಿ ಯೋಜನೆಯ ವಿಸ್ತರಣೆ. ನಿರುದ್ಯೋಗಿ ವ್ಯಕ್ತಿಗಳಿಗೆ ತಕ್ಷಣವೇ ಒಂದು ನಿರುದ್ಯೋಗ ಭತ್ಯೆಯ ಪ್ರಕಟಣೆ.
  4. ರಾಷ್ಟ್ರೀಯ ಆಸ್ತಿಗಳ ಲೂಟಿಯನ್ನು, ಸಾರ್ವಜನಿಕ ವಲಯದ ಖಾಸಗೀಕರಣವನ್ನು ಮತ್ತು ಕಾರ್ಮಿಕ ಕಾನೂನುಗಳನ್ನು ರದ್ದು ಮಾಡುವುದನ್ನು ನಿಲ್ಲಿಸಬೇಕು.

Leave a Reply

Your email address will not be published. Required fields are marked *