ವೈರಸ್ ನಿರೋಧಕ ಔಷಧಿ ರೆಮ್ಡೆಸಿವಿರ್ ನ ಪೇಟೆಂಟ್ ಗುತ್ತೇದಾರಿಕೆ ಮುರಿದು ಭಾರತದಲ್ಲೇ ಜೆನೆರಿಕ್ ಉತ್ಪಾದನೆಗೆ ‘ಕಡ್ಡಾಯ ಲೈಸೆನ್ಸ್’ ಕೊಡಿ

ಕೊವಿಡ್‍-19 ಶುಶ್ರೂಷೆಯಲ್ಲಿ ಪರಿಣಾಮಕಾರಿಯೆಂದು ಕಂಡು ಬಂದಿರುವ, ಪೇಟೆಂಟ್‍ ಗುತ್ತೇದಾರಿಕೆಯಿಂದಾಗಿ ವಿಪರೀತ ತುಟ್ಟಿಯಾಗಿರುವ ರೆಮ್ಡೆಸಿವಿರ್ ಔಷಧಿಯನ್ನು ಭಾರತದಲ್ಲಿ ಜೆನೆರಿಕ್‍ ಔಷಧಿಯಾಗಿ ತಯಾರಿಸಲು ಭಾರತದ ಪೇಟೆಂಟ್ ‍ಕಾಯ್ದೆಯ ಅಡಿಯಲ್ಲಿ ಅವಕಾಶವಿದೆ. ಇದನ್ನು ಬಳಸಿಕೊಂಡು ಕೇಂದ್ರ ಸರಕಾರ ಜೀವಗಳನ್ನು ಉಳಿಸಲು ಅತ್ಯಗತ್ಯವಾದ ಮತ್ತು ಮಹಾಮಾರಿಯನ್ನು ಎದುರಿಸುವಲ್ಲಿ ಪರಿಣಾಮಕಾರಿಯಾದ ಈ ಔಷಧಿಯ ಜೆನೆರಿಕ್‍ ಆವೃತ್ತಿಯನ್ನು ಜನಗಳಿಗೆ ಕೈಗೆಟಕುವ ಬೆಲೆಯಲ್ಲಿ ತಯಾರಿಸಲು ಕಡ್ಡಾಯ ಲೈಸೆನ್ಸ್ ನೀಡಬೇಕು ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಕೇಂದ್ರ ಸರಕಾರವನ್ನು ಆಗ್ರಹಿಸಿದೆ.

ಗಿಲಿಯೆಡ್ ಸೈನ್ಸೆಸ್  ಕಂಪನಿಯ  ಈ ವೈರಸ್‍-ನಿರೋಧಕ ಔಷಧಿ ಕೊವಿಡ್‍-19 ರೋಗಿಗಳ ಶುಶ್ರೂಷೆಯಲ್ಲಿ ಪರಿಣಾಮಕಾರಿ ಎಂದು ಕಂಡು ಬಂದಿದೆ. ಕೊವಿಡ್‍ ಮಹಾಮಾರಿಯನ್ನು ಎದುರಿಸುವಲ್ಲಿ ಉಪಯೋಗಿ ಎಂದು ಕಂಡು ಬರುವ ಎಲ್ಲ ಔಷಧಿಗಳನ್ನು ಅಮೆರಿಕ ಕಳ್ಳದಾಸ್ತಾನು ಮಾಡುತ್ತಿದೆ ಎಂದು ಮಾಧ್ಯಮ ವರದಿಗಳು ಸೂಚಿಸುತ್ತಿದ್ದು, ಅದು ಗಿಲಿಯಡ್‍ ಕಂಪನಿಯಿಂದ ಮುಂದಿನ ಮೂರು ತಿಂಗಳಿಗೆ ರೆಮ್ಡೆಸಿವಿರ್‍ ಔಷಧಿಯ ಎಲ್ಲ ದಾಸ್ತಾನನ್ನು ಖರೀದಿಸಿಟ್ಟಿದೆ. ಆದ್ದರಿಂದ ಅದು ಜಗತ್ತಿನ ಇತರ ದೇಶಗಳಿಗೆ ಲಭ್ಯವಾಗುವುದಿಲ್ಲ.

ಈ ಔಷಧಿಯನ್ನು  5 ದಿನ ಕೊಡಬೇಕಾಗಿದ್ದು, ಇದರ ಒಟ್ಟು ಬೆಲೆ ಅಮೆರಿಕದಲ್ಲಿ 3000 ಡಾಲರ್‍, ಅಂದರೆ 2.25ಲಕ್ಷ ರೂ. ಭಾರತದ 5 ಕಂಪನಿಗಳು ಗಿಲಿಯಡ್‍ ನ ಲೈಸೆನ್ಸ್ ಪಡೆದು ಇದನ್ನು ಉತ್ಪಾದಿಸುವ ಬಗ್ಗೆ ಮಾತುಕತೆಗಳನ್ನು ನಡೆಸುತ್ತಿವೆ. ಭಾರತದಲ್ಲಿ ಇದನ್ನು ತಯಾರಿಸಿದ ನಂತರ ಇಲ್ಲಿ ಅದರ ರಿಯಾಯ್ತಿ ಬೆಲೆ ಅದೇ 5 ದಿನಗಳಿಗೆ ಒಟ್ಟು 400 ಡಾಲರ್‍ ಅಥವ 30,000-35,000 ರೂ.ಗಳಾಗುತ್ತದೆ. ಇದನ್ನು ಉತ್ಪಾದಿಸುವ ವೆಚ್ಚ, ಪರಿಣಿತರು ಮಾಡಿರುವ ಲೆಕ್ಕಾಚಾರದ ಪ್ರಕಾರ ಅಮೆರಿಕಾದಲ್ಲಿ 10 ಡಾಲರ್ ಅಥವ 750ರೂ., ಭಾರತದಲ್ಲಿ 100ರೂ. ಗಿಲಿಯಡ್‍ ಕಂಪನಿ ತಾನು ಪಡೆದಿರುವ ಪೇಟೆಂಟ್‍ ಗುತ್ತೇದಾರಿಕೆಯಿಂದಾಗಿ ಅದರ ವೆಚ್ಚದ ನೂರು ಪಟ್ಟು ವಸೂಲಿ ಮಾಡಿ ಜಗತ್ತನ್ನು ಸುಲಿಯುತ್ತಿದೆ.

ಭಾರತದ ಔಷಧಿ ಮಹಾ ನಿಯಂತ್ರಕರು(ಡಿ.ಸಿ.ಜಿ.ಐ.) ಭಾರತದಲ್ಲಿ ಕೊವಿಡ್-19 ರೋಗಿಗಳಿಗೆ ರೆಮ್ಡೆಸಿವಿರ್‍ ಬಳಸಲು ಮಂಜೂರಾತಿ ನೀಡಿದ್ದಾರೆ. ಆದರೆ ಒಂದೆಡೆಯಲ್ಲಿ ಅಮೆರಿಕಾ ಸಮಸ್ತ ದಾಸ್ತಾನನ್ನು ಖರೀದಿಸಿ ಬಿಟ್ಟಿದೆ. ಇನ್ನೊಂದೆಡೆಯಲ್ಲಿ ಪೇಟೆಂಟ್‍ ಗುತ್ತೇದಾರಿಕೆಯಿಂದಾಗಿ ಅದರ ಬೆಲೆ ವಿಪರೀತ ಮಟ್ಟದಲ್ಲಿದೆ. ಇದರಿಂದಾಗಿ ಭಾರತೀಯ ರೋಗಿಗಳಿಗೆ ಅದು ಲಭ್ಯವಾಗುಗುವುದಿಲ್ಲ, ಇಲ್ಲವೇ ವಿಪರೀತ ಬೆಲೆಯಿಂದಾಗಿ ಕೊಳ್ಳಲಾಗುವುದಿಲ್ಲ.

ಆದರೆ ಈ ಪೇಟೆಂಟ್‍ ಗುತ್ತೇದಾರಿಕೆಯನ್ನು ಮುರಿಯಲು ಭಾರತದ ಪೇಟೆಂಟ್‍ ಕಾಯ್ದೆಯಲ್ಲಿ ಅವಕಾಶವಿದೆ. ಇದನ್ನು ರೂಪಿಸುವಲ್ಲಿ ಎಡಪಕ್ಷಗಳು ಒಂದು ಕೇಂದ್ರ ಪಾತ್ರ ವಹಿಸಿದ್ದವು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈ ಕಾಯ್ದೆಯ ಪರಿಚ್ಛೇದ 92ರ ಅಡಿಯಲ್ಲಿ ಈ ಔಷಧಿಯನ್ನು ಭಾರತದಲ್ಲಿ ತಯಾರಿಸಲು ಒಂದು ಕಡ್ಡಾಯ ಲೈಸೆನ್ಸ್ ನೀಡುವ ಹಕ್ಕು ಭಾರತಕ್ಕಿದೆ. ಮತ್ತು ಭಾರತದ ಔಷಧಿ ತಯಾರಕರು ಇದನ್ನು ಒಂದು ಜೆನೆರಿಕ್‍ ಔಷಧಿಯಾಗಿ ತಯಾರಿಸಲು ಶಕ್ತರಾಗಿದ್ದಾರೆ ಹಾಗೂ ಅಂತಹ ಇಚ್ಛಾಶಕ್ತಿಯೂ ಕೂಡ ಇದೆ.  ಪೇಟೆಂಟ್‍ ಕಾಯ್ದೆಯ ಪರಿಚ್ಛೇದ 92ಎ ಅಡಿಯಲ್ಲಿ ಈ ಔಷಧಿಯ ಅಗತ್ಯವಿರುವ, ಆದರೆ ಅದನ್ನು ಉತ್ಪಾದಿಸಲಾರದ ದೇಶಗಳಿಗೆ ರಫ್ತು ಮಾಡಲು ಕೂಡ ಕಡ್ಡಾಯ ಲೈಸೆನ್ಸ್  ಕೊಡಲು ಸಾಧ್ಯವಿದೆ.

ಗಿಲಿಯಡ್‍ ಕಂಪನಿ ರೆಮ್ಡೆಸಿವಿರ್‍ ಗೆ ಸುಲಿಗೆಕೋರ ಬೆಲೆ ವಿಧಿಸಿರುವುದರಿಂದ ಸರಕಾರ ಕೂಡಲೇ ಕೆಲವು ಭಾರತೀಯ ತಯಾರಕರಿಗೆ ಇದನ್ನು ತಯಾರಿಸಲು ಕಡ್ಡಾಯ ಲೈಸೆನ್ಸ್ ಕೊಡಬೇಕು ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಆಗ್ರಹಿಸಿದೆ.

ಭಾರತ ಜಗತ್ತಿನಲ್ಲಿ ಜೆನೆರಿಕ್‍ ಔಷಧಿಗಳ ಅತ್ಯಂತ ದೊಡ್ಡ ಉತ್ಪಾದಕರಲ್ಲಿ ಒಂದು ಅಗಿರುವುದರಿಂದ ಭಾರತೀಯ ಜನತೆಗೆ ಈ ಔಷಧಿಯನ್ನು ತ್ವರಿತವಾಗಿ ಮತ್ತು ಕೈಗೆಟಕುವ ಬೆಲೆಯಲ್ಲಿ ಲಭ್ಯಗೊಳಿಸದಿರಲು ಕಾರಣಗಳೇನೂ ಇಲ್ಲ ಎಂದಿರುವ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಕೇಂದ್ರ ಸರಕಾರ ತಕ್ಷಣವೇ ಪೇಟೆಂಟ್‍ ಕಾಯ್ದೆಯ ಪರಿಚ್ಛೇದ 92ನ್ನು ಬಳಸಿಕೊಂಡು ಜೀವಗಳನ್ನು ಉಳಿಸಲು ಅತ್ಯಗತ್ಯವಾದ ಮತ್ತು ಮಹಾಮಾರಿಯನ್ನು ಎದುರಿಸುವಲ್ಲಿ ಪರಿಣಾಮಕಾರಿಯಾದ ಈ ಔಷಧಿಯ ಜೆನೆರಿಲ್‍ ಆವೃತ್ತಿಯನ್ನು ತಯಾರಿಸಲು ಕಡ್ಡಾಯ ಲೈಸೆನ್ಸ್ ನೀಡಬೇಕು ಎಂದು ಕರೆ ನೀಡಿದೆ. 

Leave a Reply

Your email address will not be published. Required fields are marked *