ಚುನಾವಣಾ ಆಯೋಗ ಒಮ್ಮತ ರೂಪಿಸುವ ಆರೋಗ್ಯಕರ ಪರಂಪರೆಗೆ ಬದ್ಧವಾಗಬೇಕು ಆಯೊಗದ ಪ್ರತಿಕ್ರಿಯೆಗೆ ಸಿಪಿಐ(ಎಂ) ಪುನರುಚ್ಛಾರ

ಚುನಾವಣಾ ಅಯೋಗ ಅಂಚೆ ಮತದಾನದ ವಿಸ್ತರಣೆಯ  ಕ್ರಮವನ್ನು ರಾಜಕೀಯ ಪಕ್ಷಗಳೊಡನೆ ಚರ್ಚಿಸಿದೆ ಎಂದು ಹೇಳಿಕೆ ನೀಡಿರುವುದಾಗಿ ಪತ್ರಿಕೆಗಳಲ್ಲಿ ವರದಿಯಾಗಿದೆ. ಇದು ಚುನಾವಣಾ ಆಯೋಗ ರಾಜಕೀಯ ಪಕ್ಷಗಳೊಡನೆ ಸಮಾಲೋಚನೆ ನಡೆಸುವ ತನ್ನ ಎಂದಿನ ಆಚರಣೆಯನ್ನು ಪಾಲಿಸದೆ ಚುನಾವಣಾ ವಿಧಾನಗಳಲ್ಲಿ ಬದಲಾವಣೆಗಳನ್ನು ತರುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿರುವ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿಯವರ ಪತ್ರಕ್ಕೆ ಪ್ರತಿಕ್ರಿಯಿಸುತ್ತ ನೀಡಿರುವ ಹೇಳಿಕೆ. ಈ ಕುರಿತು ಉಪ ಚುನಾವಣಾ ಆಯುಕ್ತ ಶ್ರೀ ಚಂದ್ರ ಭೂಷಣ ಕುಮಾರ್ ಅವರು ಸಿಪಿಐ(ಎಂ) ಕೇಂದ್ರ ಸಮಿತಿಗೂ ಪತ್ರ ಬರೆದಿದ್ದಾರೆ. ಈ ಪತ್ರಕ್ಕೆ ಪ್ರತ್ಯುತ್ತರ ನೀಡುತ್ತ ಸಿಪಿಐ(ಎಂ) ಪೊಲಿಟ್‌ಬ್ಯುರೊ ಸದಸ್ಯ ನೀಲೋತ್ಪಲ ಬಸು ಚುನಾವಣಾ ಆಯೋಗ ಒಮ್ಮತ ರೂಪಿಸುವ ತನ್ನ ಆರೋಗ್ಯಕರ ಪರಂಪರೆಗೆ ಬದ್ಧವಾಗಬೇಕು ಎಂದು ಪುನರುಚ್ಚರಿಸಿದ್ದಾರೆ.

ಬಸುರವರು ಚುನಾವಣಾ ಆಯೋಗದ ಪ್ರತಿಕ್ರಿಯೆಯಲ್ಲಿನ ನಾಲ್ಕು ಅಂಶಗಳ ಬಗ್ಗೆ ತಮ್ಮ ಪ್ರತ್ಯುತ್ತರದಲ್ಲಿ ಪ್ರಸ್ತಾಪಿಸಿದ್ದಾರೆ.

  1. ಯೆಚುರಿಯವರ ಪತ್ರ ಚುನಾವಣಾ ಆಯೋಗಕ್ಕೆ ತಲುಪುವ ಮೊದಲೇ ಮಾಧ್ಯಮಗಳಿಗೆ ಲಭ್ಯಗೊಳಿಸಲಾಗಿದೆ ಎಂಬ ಉಪ ಚುನಾವಣಾ ಆಯುಕ್ತರ ಮಾತು ಸರಿಯಲ್ಲ. ಆಯೋಗಕ್ಕೆ ಪತ್ರವನ್ನು ತಲುಪಿಸಿ ಅದಕ್ಕೆ ಸ್ವೀಕೃತಿಯ ಮೊಹರು ಬಿದ್ದ ಮೇಲೆಯೇ ಅದನ್ನು ಮಾಧ್ಯಮಗಳಿಗೆ ಲಭ್ಯಗೊಳಿಸಲಾಗಿದೆ. ಇದು ಕ್ರಮಬದ್ಧವಾಗಿಯೇ ಇದೆ.
  2. ಯೆಚುರಿಯವರ ಪತ್ರದಲ್ಲಿ ಅಂಚೆ ಮತದಾನವನ್ನು ವಿಸ್ತರಿಸಲು ಸಂವಿಧಾನದ ಕಲಮು 324ನ್ನು ಬಳಸಲಾಗಿದೆ ಎಂದೇನೂ  ಹೇಳಿಲ್ಲ, ಬದಲಿಗೆ, ಈ ಕಲಮಿನ ಅಡಿಯಲ್ಲಿ ಅಧಿಕಾರವಿದ್ದರೂ ಅಯೋಗ ತನ್ನ ಅಧಿಕಾರವನ್ನು ಏಕಪಕ್ಷೀಯವಾಗಿ ಬಳಸುವುದಿಲ್ಲ ಎಂದು ಸದಾ ಒತ್ತು ನೀಡಿ ಹೇಳುತ್ತಿತ್ತು, ಈ ಮೂಲಕ ಆಯೋಗ ಕಳೆದ ಏಳು ದಶಕಗಳಲ್ಲಿ ಸ್ಥಾಪಿಸಿರುವ ಉತ್ತಮ ಪರಂಪರೆಯನ್ನು ಪ್ರಶಂಸಿಸುತ್ತ, ಅದನ್ನು ಈ ವಿಷಯದಲ್ಲಿ ಅನುಸರಿಸಲಾಗಿಲ್ಲ ಎಂದಷ್ಟೇ ಸಿಪಿಐ(ಎಂ) ಹೇಳಿತ್ತು.
  3. ಬಿಹಾರದ ಮುಖ್ಯ ಚುನಾವಣಾ ಅಧಿಕಾರಿ ಒಂದು ಸಭೆ ಕರೆದಿದ್ದರು ಎಂಬುದು ಸಿಪಿಐ(ಎಂ)ಗೆ ಗೊತ್ತಿತ್ತು. ನಿಜ, ಅದರಲ್ಲಿ ಎತ್ತಿದ ಹಲವು ಪ್ರಶ್ನೆಗಳಲ್ಲಿ ಅಂಚೆ ಮತದಾನದ ವಿಸ್ತರಣೆಯೂ ಒಂದಾಗಿತ್ತು. ಆದರೆ ಆ ಸಭೆಯನ್ನು ಕರೆದಿದ್ದು ಈ ವಿಷಯದ ಬಗ್ಗೆ ರಾಜಕೀಯ ಪಕ್ಷಗಳ ಅಭಿಪ್ರಾಯವನ್ನು ಕೇಳಲು ಅಲ್ಲ, ಬದಲಿಗೆ ಆಯೋಗದ ಒಂದು ನಿರ್ಧಾರದ ಮಾಹಿತಿ ನೀಡಲು ಮಾತ್ರ. ಅದೇನೇ ಇರಲಿ, ಇದು ಇಡೀ ದೇಶಕ್ಕೆ ಸಂಬಂಧಪಟ್ಟ ವಿಚಾರವಾದ್ದರಿಂದ ಒಂದು ರಾಜ್ಯದ ಚುನಾವಣಾ ಅಧಿಕಾರಿ ಕರೆದ ಸಭೆ ರಾಷ್ಟ್ರೀಯ  ಮಟ್ಟದ ಸಮಾಲೋಚನೆಗೆ ಬದಲಿಯಾಗಲು ಸಾಧ್ಯವಿಲ್ಲ.
  4. ಮಾರ್ಚ್ 24, 2020ರ ಮಧ್ಯರಾತ್ರಿಯಿಂದ ಅಂಚೆ ಮತದಾನದ ವಿಸ್ತರಣೆಗೆ ಮಾರ್ಗದರ್ಶಕ ಸೂತ್ರಗಳನ್ನು ಹೊರಡಿಸಲಾಗಿದೆ ಎಂದು ಚುನಾವಣಾ ಆಯೋಗದ ಪತ್ರ ಹೇಳುತ್ತದೆ. ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿಗಳು ಎತ್ತಿರುವುದು ಈ ಅಂಶವನ್ನೇ. ಅವನ್ನು ಹೊರಡಿಸುವ ಮೊದಲು ರಾಜಕೀಯ ಪಕ್ಷಗಳೊಡನೆ ಒಂದು ರಾಷ್ಟ್ರೀಯ  ಮಟ್ಟದ ಸಮಾಲೋಚನೆ ಖಂಡಿತಾ ಸಾಧ್ಯವಿತ್ತು, ಅದಕ್ಕೆ ಸೂಕ್ತ ಡಿಜಿಟಲ್ ತಂತ್ರಜ್ಞಾನವನ್ನು ಬಳಸಬಹುದಾಗಿತ್ತು. ಕಳೆದ ಏಳು ದಶಕಗಳಲ್ಲಿ ಈ ರೀತಿಯ ಸಮಾಲೋಚನೆ ಸಾಮಾನ್ಯ ಆಚರಣೆಯಾಗಿತ್ತು.

ಆದ್ದರಿಂದ, ಆಯೋಗ ಸ್ವತಂತ್ರ ಭಾರತದ ಏಳು ದಶಕಗಳಲ್ಲಿ ತಾನೇ ವಿಕಾಸಗೊಳಿಸಿರುವ ಉತ್ತಮ ಆಚರಣೆಯನ್ನು ಪಾಲಿಸಬೇಕು ಮತ್ತು ಚುನಾವಣೆಗಳನ್ನು ನಡೆಸುವ ವಿಧಾನಗಳಲ್ಲಿ ಯಾವುದೇ ಬದಲಾವಣೆಯನ್ನು ತರುವ ಮೊದಲು ರಾಜಕೀಯ ಪಕ್ಷಗಳ ನಡುವೆ ಒಮ್ಮತವನ್ನು ಬೆಸೆಯುವ ಆರೋಗ್ಯಕರ ಪರಂಪರೆಯನ್ನು ಎತ್ತಿ ಹಿಡಿಯಬೇಕು ಎಂಬುದೇ ಸಿಪಿಐ(ಎಂ)ನ ಆಕಾಂಕ್ಷೆ ಎಂದು ನೀಲೋತ್ಪಲ ಬಸುರವರು ಚುನಾವಣಾ ಆಯೋಗದ ಉಪ ಆಯಕ್ತರಿಗೆ ಬರೆದಿರುವ ಪ್ರತ್ಯುತ್ತರದಲ್ಲಿ ಹೇಳಿದ್ದಾರೆ.

Leave a Reply

Your email address will not be published. Required fields are marked *