ಭಾರತೀಯ ರೈಲ್ವೆಯ ಖಾಸಗೀಕರಣ : ಸ್ವಯಂ-ದಾಸ್ಯವೇ ಹೊರತು ಸ್ವಾವಲಂಬನೆಯಲ್ಲ

“ಸಾರ್ವಜನಿಕ ಸೇವೆಗಳನ್ನು ಖಾಸಗೀಕರಣ ದುರ್ಬಲಗೊಳಿಸುತ್ತದೆ- ಇದು ಕೊವಿಡ್ ಪಾಟ”

ಭಾರತೀಯ ರೈಲ್ವೆಯ ಖಾಸಗೀಕರಣದ, ನಿರ್ದಿಷ್ಟವಾಗಿ ಭಾರತೀಯ ರೈಲ್ವೆಯ ಜಾಲವನ್ನು ಬಳಸಿಕೊಂಡು ಖಾಸಗಿ ಹೂಡಿಕೆದಾರರು ಪ್ರಯಾಣಿಕ ರೈಲುಗಳನ್ನು ಓಡಿಸಲು ಅವಕಾಶ ನೀಡುವ ನಿರ್ಧಾರವನ್ನು ಸಿಪಿಐ(ಎಂ) ಪೊಲಿಟ್‌ಬ್ಯುರೊ ಬಲವಾಗಿ ವಿರೋಧಿಸಿದೆ. ಇದು ಸ್ವತಂತ್ರ ಭಾರತದಲ್ಲಿ ಮೊದಲ ಬಾರಿ ಸಂಭವಿಸುತ್ತಿದೆ. ಶತಮಾನಗಳಿಂದ ಕಟ್ಟಿದ ಮೂಲರಚನೆಗಳನ್ನು ಹೊಂದಿರುವ ಒಂದು ಜಾಲವನ್ನು ಬಳಸಿಕೊಂಡು ಖಾಸಗಿಯವರು ಪ್ರಯಾಣಿಕ ರೈಲುಗಳನ್ನು ಓಡಿಸಿ ಸೂಪರ್ ಲಾಭಗಳನ್ನು ಗಳಿಸಲು ಅವಕಾಶ ಕಲ್ಪಿಸಲಾಗುತ್ತಿದೆ.

ಭಾರತೀಯ ರೈಲ್ವೆ ನಮ್ಮ ದೇಶವನ್ನು ಒಂದುಗೂಡಿಸುವ ಮತ್ತು ನಮ್ಮ ಕೋಟ್ಯಂತರ ಜನಗಳಿಗೆ ಸಾರ್ವಜನಿಕ ಸಾರಿಗೆಯನ್ನು ಒದಗಿಸುವ ಅತ್ಯಂತ ಮಹತ್ವದ ಜಾಲವಾಗಿದೆ. ನಮ್ಮ ಕೋಟ್ಯಂತರ ಜನಗಳ ಜೀವನೋಪಾಯ ರೈಲ್ವೆಯನ್ನು ಅವಲಂಬಿಸಿದೆ. ಇಂತಹ ಖಾಸಗೀಕರಣ ಭಾರತದ ಸ್ವಾವಲಂಬನೆಯ ಆಧಾರವನ್ನೇ ಶಿಥಿಲಗೊಳಿಸುತ್ತದೆ ಎಂದಿರುವ ಸಿಪಿಐ(ಎಂ) ಪೊಲಿಟ್‌ಬ್ಯುರೊ ಇದು ಉದ್ಯೋಗಾವಕಾಶಗಳನ್ನು ನಿರ್ಮಿಸುತ್ತದೆ ಎಂಬ ಸರಕಾರದ ತರ್ಕವನ್ನು ಪ್ರಶ್ನಿಸಿದೆ.

ಇಂತಹ ಖಾಸಗೀಕರಣದ ಅನುಭವಗಳು ತದ್ವಿರುದ್ಧವಾಗಿವೆ. ವಾಸ್ತವವಾಗಿ ಖಾಸಗೀಕರಣ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ನಷ್ಟಗಳನ್ನು ಉಂಟು ಮಾಡುತ್ತದೆ, ಮತ್ತು ಕೋಟ್ಯಂತರ ನೌಕರರಲ್ಲಿ ಅಭದ್ರತೆಯನ್ನು ಉಂಟು ಮಾಡುತ್ತದೆ ಎಂದು ಅದು ಹೇಳಿದೆ.

ಕೇಂದ್ರ ಸರಕಾರ ಮತ್ತು ಪ್ರಧಾನ ಮಂತ್ರಿಗಳು ಈ ರೀತಿಯಲ್ಲಿ ಸಾರ್ವಜನಿಕ ಸಾರಿಗೆಯ ಖಾಸಗೀಕರಣ ಜನಗಳ ಮೇಲೆ ಅಭೂತಪೂರ್ವ ಕಷ್ಟಗಳನ್ನು ಮತ್ತು ಹೊರೆಗಳನ್ನು ಹಾಕಿದೆ ಎಂಬ ಅಂತ ರ‍್ರಾಷ್ಟ್ರೀಯ  ಅನುಭವಗಳಿಂದ ಪಾಟ ಕಲಿಯಲು ನಿರಾಕರಿಸುತ್ತಿದ್ದಾರೆ. ಭಾರತೀಯ ರೈಲ್ವೆ ಒಂದು ಸಾರ್ವಜನಿಕ ಸೇವೆ. ಅದು ಲಾಭ ಉತ್ಪತ್ತಿ ಮಾಡುವ ಉದ್ದಿಮೆ ಅಲ್ಲ. ಅದರ ಸ್ವರೂಪವನ್ನು ಹೀಗೆ ಶಿಥಿಲಗೊಳಿಸಲು ಸಾಧ್ಯವಿಲ್ಲ.

ಈ ನಿರ್ಧಾರ ದೇಶ ಮತ್ತು ಜನತೆ ವೇಗವಾಗಿ ಹೆಚ್ಚುತ್ತಿರುವ ಕೊವಿಡ್ ಮಹಾಮಾರಿಯನ್ನು ಎದುರಿಸುವ ಗಂಭೀರ ಪ್ರಯತ್ನಗಳನ್ನು ನಡೆಸುತ್ತಿರುವಾಗ ಬಂದಿದೆ. ಜಾಗತಿಕವಾಗಿಯೂ, ಮತ್ತು ನಮ್ಮ ದೇಶದಲ್ಲೂ ಆರೋಗ್ಯ ಸೌಲಭ್ಯಗಳ ಲಂಗುಲಗಾಮಿಲ್ಲದ ಖಾಸಗೀಕರಣ ಹೇಗೆ ಈ ವೈರಸ್ ಮೇಲಿನ ಹೋರಾಟಕ್ಕೆ ಅಡಚಣೆಗಳನ್ನು ಉಂಟು ಮಾಡಿದೆ, ಪ್ರತಿಕೂಲ ಪರಿಣಾಮಗಳನ್ನು ಬೀರಿದೆ ಎಂಬುದನ್ನು ನಾವೀಗ ನೋಡುತ್ತಿದ್ದೇವೆ. ಆರೋಗ್ಯ, ಶಿಕ್ಷಣ, ಸಾರ್ವಜನಿಕ ಸಾರಿಗೆ ಸಾರ್ವಜನಿಕ ಸೇವೆಗಳು, ಅವನ್ನು ಗಟ್ಟಿಗೊಳಿಸಬೇಕು, ಖಾಸಗೀಕರಣದ ಮೂಲಕ ದುರ್ಬಲಗೊಳಿಸಬಾರದು ಎಂದಿರುವ ಸಿಪಿಐ(ಎಂ) ಪೊಲಿಟ್‌ಬ್ಯುರೊ ಕೇಂದ್ರ ಸರಕಾರ ಈ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ.

 

One thought on “ಭಾರತೀಯ ರೈಲ್ವೆಯ ಖಾಸಗೀಕರಣ : ಸ್ವಯಂ-ದಾಸ್ಯವೇ ಹೊರತು ಸ್ವಾವಲಂಬನೆಯಲ್ಲ

  1. ದಿಕ್ಕಾರ… ದಿಕ್ಕಾರ…. ಕೇಂದ್ರ ಸರ್ಕಾರದ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣದ ನೀತಿಗೆ ದಿಕ್ಕಾರ

Leave a Reply

Your email address will not be published. Required fields are marked *