ಕೇಂದ್ರ ಸರಕಾರ ರಾಜ್ಯಗಳಿಗೆ ಬಾಕಿಯಿರುವ ಜಿಎಸ್‍ಟಿ ಪರಿಹಾರವನ್ನು ತೆರಬೇಕು ಪ್ರಸಕ್ತ ಹಂಚಿಕೆ ಸೂತ್ರ ಸಾಧ್ಯವಿಲ್ಲವೆನ್ನುವುದು ಇನ್ನಷ್ಟು ಅಧಿಕಾರ ಕೇಂದ್ರೀಕರಣದ ಕ್ರಮ

ಕಳೆದ ಹಣಕಾಸು ವರ್ಷದ ನಾಲ್ಕು ತಿಂಗಳ ನಂತರ, ಕೇಂದ್ರ ಸರಕಾರ ಕೊನೆಗೂ ರಾಜ್ಯಗಳಿಗೆ ಮಾರ್ಚ್ 31ರ ವರೆಗಿನ ಜಿ.ಎಸ್‍.ಟಿ. ಬಾಕಿ ಹಣವನ್ನು ಪಾವತಿ ಮಾಡಿದೆ. ಆದರೆ, ಪ್ರಸಕ್ತ ಹಣಕಾಸು ವರ್ಷ 2020-21 ರಲ್ಲಿ ಈಗಿರುವ ರೆವಿನ್ನೂ ಹಂಚಿಕೆಯ ಸೂತ್ರದ ಪ್ರಕಾರ ರಾಜ್ಯಗಳಿಗೆ ಪಾಲನ್ನು ಕೊಡಲು ಸರಕಾರಕ್ಕೆ ಸಾಧ್ಯವಾಗುವುದಿಲ್ಲ ಎಂದು ಹಣಕಾಸು ಕಾರ್ಯದರ್ಶಿಗಳು ಸಂಸದೀಯ ಸ್ಥಾಯೀ ಸಮಿತಿಗೆ ಹೇಳಿದ್ದಾರೆ.

ರಾಜ್ಯ ಸರಕಾರಗಳಿಗೆ ಜಿ.ಎಸ್‍.ಟಿ. ಅನುಷ್ಠಾನದ ಮೊದಲ ಐದು ವರ್ಷಗಳಲ್ಲಿ ಪರಿಹಾರ ಕೊಡುವುದಾಗಿ ಖಾತ್ರಿಪಡಿಸಲಾಗಿತ್ತು. ಜಿ.ಎಸ್‍.ಟಿ.ಯಿಂದಾಗಿ ಆದಾಯಗಳನ್ನು ಎತ್ತಲು ಕೆಲವು ಪರೋಕ್ಷ ತೆರಿಗೆಗಳನ್ನು ವಿಧಿಸುವ ರಾಜ್ಯಗಳ ಅಧಿಕಾರವನ್ನು ಕಿತ್ತುಕೊಂಡುದರಿಂದ, ಅದಕ್ಕೆ ಬದಲಾಗಿ ಈ ಪರಿಹಾರವನ್ನು ಖಾತ್ರಿಪಡಿಸಲಾಯಿತು.

ರಾಜ್ಯಗಳಿಗೆ ಪರಿಹಾರದ ಈ ನಿರ್ಧಾರ ಜಿ.ಎಸ್‍.ಟಿ. ಶಾಸನದ ಭಾಗವಾಗಿದೆ. ಇದರ ಅನುಷ್ಠಾನಕ್ಕೆ ಜಿ.ಎಸ್‍.ಟಿ.ಮಂಡಳಿ ಮಂಜೂರಾತಿಯನ್ನೂ ನೀಡಿದೆ.

ಈಗ ಕೇಂದ್ರ ಸರಕಾರ ಈ ಭರವಸೆಗಳನ್ನು ಮುರಿಯುವುದು ಅಧಿಕಾರದ ಮತ್ತಷ್ಟು ಕೇಂದ್ರೀಕರಣವಾಗುತ್ತದೆ, ನಮ್ಮ ಸಂವಿಧಾನದ ಒಕ್ಕೂಟ ತತ್ವವನ್ನು ಉಲ್ಲಂಘಿಸುತ್ತದೆ ಮತ್ತು ರಾಜ್ಯಗಳಿಗೆ ನ್ಯಾಯಬದ್ಧ ಆದಾಯಗಳನ್ನು  ವಂಚಿಸುತ್ತದೆ. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದಿರುವ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಈಗ ಈ ನಿಧಿಗಳು ಕೊವಿಡ್‍ ಮಹಾಸೋಂಕನ್ನು ಎದುರಿಸಲು  ಗಮನ ಕೇಂದ್ರೀಕರಿಸಬೇಕಾದ ಸಂದರ್ಭದಲ್ಲಿ ಇನ್ನಷ್ಟು ಅಗತ್ಯವಾಗಿದೆ ಎಂದಿದೆ.

ಮಹಾಸೋಂಕನ್ನು ಎದುರಿಸಲೆಂದು ಪ್ರಧಾನ ಮಂತ್ರಿಗಳ ಹೆಸರಿನ ಒಂದು ಅಪಾರದರ್ಶಕ, ಲೆಕ್ಕಪರಿಶೋಧನೆಯಿಲ್ಲದ ಖಾಸಗಿ ಟ್ರಸ್ಟ್ ನಲ್ಲಿ ಸಂಗ್ರಹಿಸಿರುವ ಸಮಸ್ತ ನಿಧಿಯನ್ನು ಈ ಸಮರದ ಮುಂಚೂಣಿಯಲ್ಲಿರುವ ರಾಜ್ಯ ಸರಕಾರಗಳಿಗೆ ವರ್ಗಾಯಿಸಬೇಕು ಎಂಬ ತನ್ನ ಈ ಹಿಂದಿನ ಆಗ್ರಹವನ್ನು ಸಿಪಿಐ(ಎಂ) ಪುನರುಚ್ಚರಿಸಿದೆ.‌

2020-21ರ ಮೊದಲ ತ್ರೈಮಾಸಿಕ ಮುಗಿದಿದ್ದು ಈ ಅವಧಿಯ ಜಿ.ಎಸ್‍.ಟಿ. ಪರಿಹಾರವನ್ನು ರಾಜ್ಯಗಳಿಗೆ ಕೂಡಲೇ ವರ್ಗಾಯಿಸಬೇಕು, ಇದು ಈ ಹಿಂದಿನ ವಚನಗಳನ್ನು ಪಾಲಿಸಲು ಮತ್ತು ಅದಕ್ಕಿಂತ ಮುಖ್ಯವಾಗಿ ಮಹಾಸೋಂಕನ್ನು ಪರಿಣಾಮಕಾರಿಯಾಗಿ ಎದುರಿಸಲು ಅತ್ಯಗತ್ಯ ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಹೇಳಿದೆ.

Leave a Reply

Your email address will not be published. Required fields are marked *