ಬೆಂಗಳೂರು ಹಿಂಸಾಚಾರ ಯಾವ ಕಾರಣಕ್ಕೂ ಸಮರ್ಥನೀಯವಲ್ಲ

ಬೆಂಗಳೂರು ಕೆ.ಜಿ. ಹಳ್ಳಿ ಮತ್ತು ಡಿ. ಜೆ ಹಳ್ಳಿ ಪ್ರದೇಶದಲ್ಲಿ ಆಗಸ್ಟ್ 10 ರಾತ್ರಿ ಒಂದು ವಿಭಾಗದ ಜನ ನಡೆಸಿದ ದೊಂಬಿ ಮತ್ತು ಹಿಂಸಾಚಾರ ಯಾವ ಕಾರಣಕ್ಕೂ ಸಮರ್ಥನೀಯವಲ್ಲ. ಎಲ್ಲ ಶಾಂತಿಪ್ರಿಯ ಜನ ಈ ಭೀಕರ ದುಷ್ಕೃತ್ಯವನ್ನು ತೀವ್ರವಾಗಿ ಖಂಡಿಸಬೇಕಾಗಿದೆ. ಇದರ ಹಿಂದೆ ಯಾವುದೇ ರೀತಿಯ ಪ್ರಚೋದನೆ ಇದ್ದರೂ, ಅದು ಧಾರ್ಮಿಕವೂ ಅಥವಾ ಸಾಮಾಜಿಕವೂ ಆಗಿರಲಿ. ಇಂತಹ ಪ್ರಚೋದನೆಗೆ ಒಳಗಾಗಿ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಪಾಸ್ತಿಯನ್ನು ನಾಶ ಮಾಡುವುದು, ಮನೆಗಳಿಗೆ, ವಾಹನಗಳಿಗೆ ಬೆಂಕಿ ಹಚ್ಚಿ ಭಯೋತ್ಪಾದಕರಂತೆ ಜನರಲ್ಲಿ ಭಯ ಭೀತಿ ಉಂಟು ಮಾಡುವುದನ್ನು ಎಲ್ಲರೂ ಒಕ್ಕೊರಲಿನಿಂದ ತಿರಸ್ಕರಿಸಬೇಕಾಗಿದೆ.

ಇವರು ನಮ್ಮವರು ಅವರು, ನಮ್ಮವರಲ್ಲ, ಇವರು ಅಲ್ಪಸಂಖ್ಯಾತರು, ಅವರು ಬಹುಸಂಖ್ಯಾತರು ಎಂಬ ಬೇದವಿಲ್ಲದೆ ಇವರು ಯಾವ ಪಕ್ಷದ ಬೆಂಬಲಿಗರು, ಅವರು ಯಾವ ಪಕ್ಷದ ಬೆಂಬಲಿಗರು ಎಂಬ ಎಳ್ಳಷ್ಟೂ ತಾರತಮ್ಯ ಮಾಡದೆ ಹಿಂಸಾಚಾರಿಗಳಿಗೆ ಧರ್ಮ ಎಂಬುದಿಲ್ಲ, ಅವರಿಗೆ ನಮ್ಮವರೆನ್ನುವವರಿಲ್ಲ ಎಂಬುದನ್ನು ಮರೆಯದ ಈ ಹಿಂಸಾವಾದಿಗಳನ್ನು ನಾವು ನಮ್ಮಿಂದ ಪ್ರತ್ಯೇಕಗೊಳಿಸಬೇಕು.

ಹಿಂಸಾಚಾರವನ್ನು ತಡೆಗಟ್ಟಲು ಪೊಲೀಸರು ಜನಜಂಗುಳಿಯ ಮೇಲೆ ಗುಂಡು ಹಾರಿಸಿದ್ದಾರೆ. ಮೂವರು ಗುಂಡಿಗೆ ಬಲಿಯಾಗಿ ಸಾವನ್ನಪ್ಪಿದ್ದಾರೆ. ಅವರು ಅಮಾಯಕರೇ ಆಗಿರಬಹುದು. ನೂರಾರು ಜನ ಗಾಯಗೊಂಡಿದಾರೆ. ಅವರಲ್ಲಿ ಕರ್ತವ್ಯ ಪಾಲನೆಗಾಗಿ ಹಾಜರಾದ ಪೊಲೀಸರು ಇರಬಹುದು. ಪೊಲೀಸರು ಸುಮಾರು ೨೦೦ ಮಂದಿಯನ್ನು ಬಂಧಿಸಿದ್ದಾರೆ. ಅವರಲ್ಲಿ ಕೆಲವರಾದರೂ ನಿರಪರಾಧಿಗಳಾಗಿರಬಹುದು. ಪ್ರತಿಸಲ ಇಂತಹ ಘಟನೆ ಜರುಗಿದಾಗ ಕೆಲವು ಜನ ನಿರಪರಾಧಿಗಳು ಪ್ರಾಣ ಕಳೆದುಕೊಳ್ಳುತ್ತಾರೆ, ಅಥವಾ ಬಂಧನಕ್ಕೆ ಒಳಗಾಗುತ್ತಾರೆ. ಹೀಗಾಗುವುದು ಬೇಕಾ?

ಪ್ರವಾದಿ ಪೈಗಂಬರ್ ಅವರ ಬಗ್ಗೆ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಪ್ರಕಟಿಸಲಾಗಿದೆ ಎಂದು ವರದಿಯಾಗಿದ್ದು ಅದುವೇ ಬೆಂಗಳೂರಿನ ವ್ಯಾಪಕ ಹಿಂಸಾಚಾರಕ್ಕೆ ಕಾರಣ ಎನ್ನಲಾಗಿದೆ. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳು ಬಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ದಿನಗಳಿಂದ ಧಾರ್ಮಿಕ ಅಲ್ಪಸಂಖ್ಯಾತರನ್ನು ಅವಮಾನಿಸುವ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಬಿಜೆಪಿ ಮಾರ್ಗದರ್ಶನ ಪಡೆಯುತ್ತಿರುವ ಆರ್.ಎಸ್.ಎಸ್. ಇಂತಹ ಪ್ರಚೋದನೆಗಳನ್ನು ಬಡಿದೆಬ್ಬಿಸುವುದರಲ್ಲಿ ಎತ್ತಿದ ಕೈ.

ಆದರೆ ಆರೆಸ್ಸೆಸ್ ನಂತಹ ಸಂಘಟನೆಗಳಿಂದ ಪ್ರಚೋದಿಸಲ್ಪಟ್ಟು ಕಾನೂನು ಕೈಯಲ್ಲಿ ತೆಗೆದುಕೊಳ್ಳುವ ಪ್ರವೃತ್ತಿಯನ್ನು ಬೆಂಬಲಿಸಲಾಗದು, ಬೆಂಬಲಿಸಬಾರದು. ಆರೆಸ್ಸೆಸ್ ಹಿಂದೂ ಯುವಕರಲ್ಲಿ ದ್ವೇಷ ಬಿತ್ತುತ್ತಿರುವಂತೆ ಮುಸ್ಲಿಂ ಯುವಕರಲ್ಲಿ ದ್ವೇಷ ಬೆಳೆಸುವ ಕೆಲಸ ಮಾಡಲು ಎಸ್.ಡಿ.ಪಿ.ಐ. ಅಂತಹ ಸಂಘಟನೆಗಳು ಹುಟ್ಟಿವೆ. ಮೇಲ್ನೋಟಕೆ ಇವು ಪ್ರಗತಿಪರ ಜಾತ್ಯತೀತ ಸಂಘಟನೆಗಳಂತೆ ಕಾಣುತ್ತವೆ. ಮುಗ್ಧ ಯುವಕರು ಇವುಗಳಿಗೆ ಆಕರ್ಷಿತರಾಗುತ್ತಾರೆ. ನಿಧಾನವಾಗಿ ಹಾಗೂ ಗುಪ್ತವಾಗಿ ಈ ಯುವಕರು ಭಯೋತ್ಪಾದಕರ ಸಂಪರ್ಕಕ್ಕೆ ಬರುತ್ತಾರೆ. ಒಟ್ಟಾರೆಯಾಗಿ ಆರ್.ಎಸ್.ಎಸ್. ಮತ್ತು ಎಸ್.ಡಿ.ಪಿ.ಐ. ಎರಡೂ ಸಂಘಟನೆಗಳು ಒಂದೇ ನಾಣ್ಯದ ಎರಡು ಮುಖಗಳು. ಒಂದು ಇನ್ನೊಂದನ್ನು ನುಂಗಿ ಬೆಳೆಯುತ್ತಿರುತ್ತವೆ.

ಪೊಲೀಸರು ಪರಿಸ್ಥಿತಿ ಕೈಮೀರಿ ಹೋಗುವವರೆಗೂ ಸುಮ್ಮನಿದ್ದು ಆನಂತರ ಅನಿಯಂತ್ರಿತ ಜನಜಂಗುಳಿಯ ಮೇಲೆ ಗುಂಡು ಹಾರಿಸಿ ಸಾವು-ನೋವುಗಳಿಗೆ ಕಾರಣರಾಗುವುದೂ ಸಹ ಸರಿಯಲ್ಲ. ಕೆಲವು ಮುಸ್ಲಿಂ ಗುಂಪುಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾದ ಅವಹೇಳನಕಾರಿ ಪೋಸ್ಟ್ ಬಗ್ಗೆ ಪೊಲೀಸರ ಗಮನಕ್ಕೆ ತಂದಾಗ ಪೊಲೀಸರು ಅದಕ್ಕೆ ಸ್ಪಂಧಿಸಲಿಲ್ಲ ಎಂಬ ವರದಿಯಿದೆ. ಪೊಲೀಸರ ವೈಫಲ್ಯದ ಕುರಿತೂ ತನಿಖೆಯಾಗಬೇಕು.

ರಾಜಕೀಯ ಪಕ್ಷಗಳು ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ, ಕೆಸರೆರಚಾಟದಲ್ಲಿ ತೊಡಗಿರುವುದು ಕಂಡು ಬರುತ್ತದೆ. ನೈಜ ಆರೋಪಿಗಳನ್ನು ಪತ್ತೆಹಚ್ಚಿ ಶಿಕ್ಷಿಸುವುದು ಅಗತ್ಯವಾಗಿ ಆಗಬೇಕಾದದ್ದು. ಎಲ್ಲರೂ ಸೇರಿ ಕೊರೊನಾ ಹಾವಳಿ ವಿರುದ್ಧ ಹೋರಾಡಬೇಕಾದ ಸಮಯದಲ್ಲಿ ಇಂತಹ ಘಟನೆಗಳು ನಡೆದು ನಮ್ಮ ಐಕ್ಯತೆಯನ್ನು ಛಿಧ್ರ ಗೊಳಿಸಬಾರದು. ತಪ್ಪಿತಸ್ಥರನ್ನು ಶಿಕ್ಷಿಸುವ ವಿಷಯದಲ್ಲಿ ರಾಜಕೀಯ ಮಾಡುವುದು ಸಲ್ಲದು.

Leave a Reply

Your email address will not be published. Required fields are marked *