ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಖಾಸಗೀಕರಣಕ್ಕ ವಿರೋಧ

ಕೇಂದ್ರದ ಬಿಜೆಪಿ ಸರ್ಕಾರವು ಲಾಭದಾಯಕ ಸಾರ್ವಜನಿಕ ಸಂಸ್ಥೆಗಳು ಮತ್ತು ಆಸ್ತಿಗಳ ಮಾರಾಟದ ಮುಂದುವರೆಕೆಯಾಗಿ ದೇಶದ ಪ್ರಮುಖ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ಮಾರಾಟ ಮಾಡುವ ಪ್ರಕ್ರಿಯೆಯಲ್ಲಿ ಕರ್ನಾಟಕ ರಾಜ್ಯದ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಖಾಸಗೀಕರಣ ತಡೆಯಬೇಕೆಂದು ರಾಜ್ಯದ ಮುಖ್ಯಮಂತ್ರಿಗಳಿಗೆ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ), ಕರ್ನಾಟಕ ರಾಜ್ಯ ಸಮಿತಿಯು ಸಲ್ಲಿಸಿರುವ ಮನವಿ ಮತ್ರದ ಪೂರ್ಣ ವಿವರಣೆ….

ಇವರಿಗೆ,
ಮಾನ್ಯ ಮುಖ್ಯಮಂತ್ರಿಗಳು,
ಕರ್ನಾಟಕ ಸರಕಾರ, ವಿಧಾನಸೌಧ, ಬೆಂಗಳೂರು.
ಮಾನ್ಯರೇ,
ವಿಷಯ: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಖಾಸಗೀಕರಣವನ್ನು ತಡೆಯಲು ಒತ್ತಾಯಿಸಿ ಮನವಿ
ದೇಶದ ಲಾಭದಾಯಕ ಸಾರ್ವಜನಿಕ ಸಂಸ್ಥೆಗಳು ಮತ್ತು ಆಸ್ತಿಗಳ ಅಕ್ರಮ ಮಾರಾಟವನ್ನು ಕೇಂದ್ರ ಸರಕಾರ ಮುಂದುವರೆಸಿದೆ.
ಇದೀಗ ಶ್ರೀ ಅದಾನಿಯವರ ಕಂಪನಿಗೆ ಅಕ್ರಮ ದರಕ್ಕೆ ವಿಶ್ವದ ಅತ್ಯಂತ ಶ್ರೇಷ್ಠ ದರ್ಜೆಯ ಕರ್ನಾಟಕದ, ಮಂಗಳೂರು ಅಂತರಾಷ್ವ್ರೀಯ ವಿಮಾನ ನಿಲ್ದಾಣವನ್ನು ಮಾರಾಟ ಮಾಡಲು ಮುಂದಾಗಿದೆ. ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಇದನ್ನು ಬಲವಾಗಿ ಖಂಡಿಸುತ್ತದೆ. ಅದೇ ರೀತಿ, ಸದರಿ ನಿಲ್ದಾಣದ ಖಾಸಗೀಕರಣವನ್ನು ತಕ್ಷಣವೇ ಕೈ ಬಿಡುವಂತೆ ಕೇಂದ್ರ ಸರಕಾರವನ್ನು ಬಲವಾಗಿ ಒತ್ತಾಯಿಸುತ್ತದೆ.
ರಾಜ್ಯ ಸರಕಾರ ಲಾಭದಾಯಕವಾಗಿ ನಡೆಯುವ ಈ ಸಂಸ್ಥೆಯ ಖಾಸಗೀಕರಣವನ್ನು ತಡೆಯಲು ಮುಂದಾಗದೇ ಮೌನ ವಹಿಸಿ ನೆರವಾಗುತ್ತಿರುವುದು ಅಕ್ಷಮ್ಯವಾಗಿದೆ. ಕೇರಳದ ಎಡ ಮತ್ತು ಪ್ರಜಾಸತ್ತಾತ್ಮಕ ರಂಗದ ರಾಜ್ಯ ಸರಕಾರ ತಿರುವನಂತಪುರಂ ನ ವಿಮಾನ ನಿಲ್ದಾಣವನ್ನು ಉಳಿಸಿಕೊಳ್ಳಲು ಶತಾಯ- ಗತಾಯ ಪ್ರಯತ್ನ, ತೀವ್ರ ಪ್ರತಿರೋಧ ಒಡ್ಡುತ್ತಿರುವಾಗ, ಕರ್ನಾಟಕ ಸರಕಾರದ ಈ ಅಸಹನೀಯ ಮೌನ ಖಂಡನೀಯವಾಗಿದೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಖಾಸಗೀಕರಣವನ್ನು ತಡೆಯಲು ರಾಜ್ಯ ಸರಕಾರ ಗಂಭೀರವಾಗಿ ಗಮನ ಹರಿಸಬೇಕು. ಕೇಂದ್ರ ಸರಕಾರ ಅದನ್ನು ಖಾಸಗೀಕರಿಸದಂತೆ ತಡೆಯಲು ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅಗತ್ಯ ಬಿದ್ದರೇ, ಕೇರಳ ಸರಕಾರದ ಮಾದರಿಯಲ್ಲಿ ಮಂಗಳೂರು ವಿಮಾನ ನಿಲ್ದಾಣವನ್ನು ಖರೀದಿಸಲು ರಾಜ್ಯ ಸರಕಾರ ಮುಂದಾಗಬೇಕೆಂದು ಭಾರತ ಕಮ್ಯುನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ) ದ ರಾಜ್ಯ ಸಮಿತಿ ಒತ್ತಾಯಿಸುತ್ತದೆ.
ವಂದನೆಗಳೊಂದಿಗೆ,
ಯು. ಬಸವರಾಜ,  ಕಾರ್ಯದರ್ಶಿ

Leave a Reply

Your email address will not be published. Required fields are marked *