ಭಾರತೀಯ ಸಂವಿಧಾನದ ರಕ್ಷಣೆಯಲ್ಲಿ ಶಾಂತಿಯುತ ಪ್ರತಿಭಟನೆಗಳ ಅಪರಾಧೀಕರಣವನ್ನು ನಿಲ್ಲಿಸಿ

ಗೃಹಮಂತ್ರಿ ಅಮಿತ್‍ ಷಾರವರ ಅಡಿಯಲ್ಲಿ ದಿಲ್ಲಿ ಪೋಲಿಸ್ ಎಂತಹ ಭಂಡತನದಿಂದ ವರ್ತಿಸುತ್ತಿದೆ ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಆಘಾತ ವ್ಯಕ್ತಪಡಿಸಿದೆ. ಫೆಬ್ರುವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದ ಭೀಷಣ ಕೋಮುವಾದಿ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಅಮಿತ್‍ ಷಾ ಪ್ರಮುಖ ರಾಜಕೀಯ ಮುಖಂಡರನ್ನು, ಅಧ್ಯಯನ ಮತ್ತು ಸಾಂಸ್ಕೃತಿಕ ವಲಯದ ವರಿಷ್ಟರನ್ನು ಹಾಗೂ ಸಕ್ರಿಯ ಕಾರ್ಯಕರ್ತರನ್ನು ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ. ಇಷ್ಟೊಂದು ಒರಟು ಪಕ್ಷಪಾತ ಮತ್ತು ಹಗೆಸಾಧನೆಯ ಕೃತ್ಯವನ್ನು ಎಷ್ಟು ಬಲವಾಗಿ ಖಂಡಿಸಿದರೂ ಕಡಿಮೆಯೇ ಎಂದು ಅದು ಹೇಳಿದೆ.

ಸಂಘಟಿತ ಕೋಮುವಾದಿ ಹಿಂಸಾಚಾರದ ಬಗ್ಗೆ ತನ್ನದೇ ಕಥನವನ್ನು ಕಟ್ಟುವಲ್ಲಿ ಬಿಜೆಪಿ-ಆರೆಸ್ಸೆಸ್‍ ದಿಲ್ಲಿ ಗಲಭೆಗಳು ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)-ವಿರೋಧಿ ಪ್ರತಿಭಟನಾಕಾರರು ಹೂಡಿರುವ “ಆಳವಾಗಿ ಬೇರುಬಿಟ್ಟಿರುವ ಪಿತೂರಿ” ಎಂದು ಚಿತ್ರಿಸುವ ಪ್ರಯತ್ನದಲ್ಲಿದೆ ಎಂಬುದು ಅತ್ಯಂತ ಸ್ಪಷ್ಟವಾಗಿ ಕಾಣುತ್ತದೆ. ಇದರ ಇತ್ತೀಚಿನ ಭಾಗವಾಗಿ ಭಾರತ ಕಮ್ಯುನಿಸ್ಟ್‌  ಪಕ್ಷ (ಮಾರ್ಕ್ಸ್ ವಾದಿ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ, ಪ್ರಖ್ಯಾತ ಅರ್ಥಶಾಸ್ತ್ರಜ್ಞೆ ಜಯತಿ ಘೋಷ್, ದಿಲ್ಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಪೂರ್ವಾನಂದ, ಸ್ವರಾಜ್‍ ಅಭಿಯಾನ ಮುಖಂಡ ಯೋಗೇಂದ್ರ ಯಾದವ್ ಮತ್ತು ಡಾಕ್ಯುಮೆಂಟರಿ ಚಲನಚಿತ್ರಕಾರರಾಗಿರುವ ರಾಹುಲ್‍ ರಾಯ್‍  ಮತ್ತಿತರ ಪ್ರಮುಖ ವ್ಯಕ್ತಿಗಳ ಹೆಸರುಗಳನ್ನು ಒಂದು ‘ಯೋಜನೆ’ಯ ಭಾಗವಾಗಿ ಪ್ರತಿಭಟನಾಕಾರರಿಗೆ ಉತ್ತೇಜನೆ ನೀಡಿದವರು ಎಂದು  ದಿಲ್ಲಿ ಪೋಲಿಸ್‍ ಎಳೆದು ಹಾಕಿದ್ದಾರೆ.

ಈ ಪ್ರಮುಖ ವ್ಯಕ್ತಿಗಳ ಹೆಸರುಗಳು ದಿಲ್ಲಿ ಪೋಲಿಸ್ ಸಿಎಎ-ಎನ್‍.ಆರ್‍.ಸಿ ಪ್ರತಿಭಟನೆಗಳಲ್ಲಿ ವಹಿಸಿದರೆನ್ನಲಾದ ಪಾತ್ರಕ್ಕೆ ಸಂಬಂಧಿಸಿ ಸಲ್ಲಿಸಿರುವ ಎಫ್‍ಐಆರ್‍ 50/20ರ ಪೂರಕ ಆರೋಪ ಪತ್ರದಲ್ಲಿ ಕಂಡು ಬಂದಿವೆ. ಇದು ಪ್ರಮುಖ ವಿರೋಧಿಗಳ ಮೇಲೆ ಆರೋಪ ಹೊರಿಸಿ ಅವರನ್ನು ರಾಕ್ಷಸರಾಗಿ ಬಿಂಬಿಸಲು ಪೋಲಿಸ್‍ ಮತ್ತು ಇತರ ಪ್ರಭುತ್ವ ಸಂಸ್ಥೆಗಳಾದ ಸಿ.ಬಿ.ಐ., ಎನ್.ಐ.ಎ, ಇ.ಡಿ. ಮುಂತಾದವುಗಳ ಅತ್ಯಂತ ನಗ್ನ ದುರುಪಯೋಗದ, ಇತ್ತೀಚೆಗೆ ಬೆಳೆಯುತ್ತಿರುವ  ವಿಧಾನಕ್ಕೆ ಅನುಗುಣವಾಗಿಯೇ ಇದೆ.

ಇದರಲ್ಲಿ ಎನ್‍ಎಸ್‍ಎ, ಯುಎಪಿಎ, ರಾಜದ್ರೋಹ ಕಾಯ್ದೆ ಎಂಬ ಕರಾಳ ಶಾಸನಗಳ ಅಂಶಗಳನ್ನು ಹೇರಿ, ಸಂವಿಧಾನದಲ್ಲಿ ಹೇಳಿರುವುದಕ್ಕೆ ತದ್ವಿರುದ್ಧವಾಗಿ ಅಧಿಕಾರಗಳ ಇಂತಹ ನಗ್ನ ದುರುಪಯೋಗವನ್ನು ಬಲವಾಗಿ ವಿರೋಧಿಸುವವರಿಗೆ ಕಿರುಕುಳ ಕೊಡಲು ಮತ್ತು ಜೈಲಿಗಟ್ಟಲು ಬಳಸುವುದು ಸೇರಿದೆ.  ಭೀಮಾ-ಕೊರೆಗಾಂವ್ ‍ಪ್ರಕರಣದಲ್ಲಿ ಎನ್.ಐ.ಎ. ಮನಬಂದಂತೆ ವರ್ತಿಸುತ್ತಿರುವುದು ಮತ್ತು ಅದರ ವ್ಯಾಪ್ತಿಯನ್ನು ವಿಸ್ತರಿಸುತ್ತಿರುವುದು ಮೋದಿ ಸರಕಾರ ಹಿಡಿದಿರುವ ದಾರಿಯನ್ನು ಎತ್ತಿ ತೋರಿಸುತ್ತಿದೆ. ಅದೇ ರೀತಿಯಲ್ಲಿ ಅಲಹಾಬಾದ್‍ ಹೈಕೋರ್ಟ್ ಡಾ. ಕಫೀಲ್‍ ಖಾನ್‍ ರವರ ಮೇಲೆ ಹಾಕಿದ್ದ ಎನ್‍.ಎಸ್‍.ಎ. ಅಂಶಗಳನ್ನು ರದ್ದುಗೊಳಿಸಿರುವುದು ಹಾಗೂ ಅವರಿಗೆ ಜಾಮೀನು ನೀಡಿರುವುದು ಕೂಡ ಇದನ್ನು ಚಿತ್ರವತ್ತಾಗಿ ಎತ್ತಿ ತೋರಿದೆ.

ಒಟ್ಟಾರೆಯಾಗಿ, ಇದು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ಒಂದು ತೀವ್ರ ದಾಳಿಯ ರೂಪುರೇಷೆಯನ್ನು ಕೊಟ್ಟಿದೆ ಎಂದಿರುವ ಸಿಪಿಐ(ಎಂ) ಪೊಲಿಟ್‍ ಬ್ಯುರೊ, ಇದು ದಿಲ್ಲಿ ಪೋಲೀಸ್‍ ತನ್ನ ರಾಜಕೀಯ ಯಜಮಾನರುಗಳ ಕಥನಗಳನ್ನು ಪುಷ್ಟೀಕರಿಸಲು ಕೈಗೊಂಡಿರುವ ಹೊಲಸು ಕ್ರಿಯೆ ಎಂದು ಖಂಡಿಸಿದೆ, ಈ ರೀತಿಯಲ್ಲಿ ಶಾಂತಿಯುತ ರಾಜಕೀಯ ಪ್ರತಿಭಟನೆಗಳನ್ನು ಕ್ರಿಮಿನಲ‍್ ಅಪರಾಧ ಎಂದು ಬಿಂಬಿಸುವ ಕೃತ್ಯಗಳನ್ನು ಸರಕಾರ ನಿಲ್ಲಿಸಬೇಕು ಎಂದು ಒತ್ತಾಯಿಸಿದೆ. ಸುಳ್ಳು ಕೇಸುಗಳನ್ನು ಹಾಕಿ ಜೈಲಿಗೆ ಹಾಕಿರುವ ರಾಜಕೀಯ ಕೈದಿಗಳನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು ಎಂದೂ ಸಿಪಿಐ(ಎಂ) ಬಲವಾಗಿ ಆಗ್ರಹಿಸಿದೆ. ಪ್ರಜಾಪ್ರಭುತ್ವದ ಮೇಲೆ ಈ ಹೇಡಿತನದ ದಾಳಿಯನ್ನು ಖಂಡಿಸಬೇಕು ಎಂದು ದೇಶಾದ್ಯಂತ ತನ್ನ ಎಲ್ಲ ಘಟಕಗಳಿಗೆ ಕರೆ ನೀಡಿದೆ ಮತ್ತು ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಮೌಲ್ಯಗಳಿಗೆ ಬದ್ಧವಾಗಿರುವ ಎಲ್ಲ ಪಕ್ಷಗಳು, ಸಂಘಟನೆಗಳು ಮತ್ತು ವ್ಯಕ್ತಿಗಳಿಗೆ ಮನವಿ ಮಾಡಿಕೊಂಡಿದೆ.

Leave a Reply

Your email address will not be published. Required fields are marked *