ಪಂಜಾಬ್‌ನಲ್ಲಿ ಅಭಿವೃದ್ಧಿ ಕಂದಾಯ ವಿರೋಧಿ ಹೋರಾಟ

ಹೋರಾಟದ ಉದ್ದಕ್ಕೂ, ಸತ್ಯಾಗ್ರಹದಲ್ಲಿ ೧೯,೦೦೦ ಸ್ವಯಂಸೇವಕರು ಪಾಲ್ಗೊಂಡರು, ೧೦,೦೦೦ ಜನರು ಜೈಲಿಗೆ ಹೋದರು, ೩,೦೦೦ ಸ್ವಯಂಸೇವಕರು ಪೋಲಿಸರ ಕ್ರೂರ ಹೊಡೆತಕ್ಕೆ ಸಿಲುಕಿದರು ಮತ್ತು ಇನ್ನೂ ನೂರಾರು ಜನರು ಪೋಲಿಸ್ ಠಾಣೆಗಳಲ್ಲಿ ಹಿಂಸೆಗೆ ಒಳಗಾದರು. ಮೂರು ಮಹಿಳೆಯರನ್ನೂ ಒಳಗೊಂಡಂತೆ ಎಂಟು ಸಂಗಾತಿಗಳು ಪೋಲಿಸರ ಗುಂಡಿಗೆ ಬಲಿಯಾದರು; ಚಳುವಳಿಯು ರಾಜಾಸ್ತಾನ ಮತ್ತು ಬಿಹಾರ್‌ಗಳಂತಹ ರಾಜ್ಯಗಳ ಮೇಲೂ ಗಮನಾರ್ಹ ಪರಿಣಾಮ ಬೀರಿತು. ಕೆಲವು ದೂರದ ಪ್ರದೇಶಗಳಲ್ಲಿನ ಹಳ್ಳಿಗಳನ್ನು ಹೊರತುಪಡಿಸಿದರೆ ಬೇರೆಲ್ಲೂ ಅಭಿವೃದ್ಧಿ ಕಂದಾಯವನ್ನು ಸಂಗ್ರಹಿಸಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ರೈತಾಪಿ ಜನಗಳಲ್ಲಿ, ಹಿಂದೂ-ಸಿಖ್ ಸಮುದಾಯಗಳ ನಡುವೆ, ಗ್ರಾಮೀಣ ಮತ್ತು ಪಟ್ಟಣವಾಸಿಗಳ ನಡುವೆ ಒಡಕುಂಟು ಮಾಡಲು ಪ್ರಯತ್ನಿಸಿದವರೆಲ್ಲರಿಗೂ  ಚಳುವಳಿಯಿಂದಾಗಿ ದೊಡ್ಡ ಹಿನ್ನಡೆಯಾಯಿತು ಮತ್ತು ಕಮ್ಯುನಿಸ್ಟ್ ಪಕ್ಷ ಮತ್ತು ಕಿಸಾನ್ ಸಭಾ ಹೊಸ ಪ್ರದೇಶಗಳಿಗೆ ವಿಸ್ತರಿಸಿ ಕಾಂಗ್ರೆಸ್ ಪಕ್ಷ ಮತ್ತು ಅದರ ನೀತಿಗಳಿಗೆ ಒಂದು ಬಲಿಷ್ಠ ವಿರೋಧ ಶಕ್ತಿಯಾಗಿ ಹೊರಹೊಮ್ಮಿದವು.

Communist100 File copy
ಶತಮಾನೋತ್ಸವ ಲೇಖನಮಾಲೆ-೪೩

ಅಭಿವೃದ್ಧಿ ಕಂದಾಯ ವಿರೋಧಿಸಿ ಪಂಜಾಬಿನ ರೈತರು ೧೯೫೯ರಲ್ಲಿ ನಡೆಸಿದ ಧೀರೋದಾತ್ತ ಹೋರಾಟವು ಭಾರತೀಯ ಕಿಸಾನ್ ಚಳುವಳಿಯ ಇತಿಹಾಸಕ್ಕೆ ಒಂದು ಭವ್ಯ ಅಧ್ಯಾಯವನ್ನು ಸೇರಿಸಿದೆ. ಐತಿಹಾಸಿಕ ತೆಲಂಗಾಣ ರೈತ ಹೋರಾಟದ ನಂತರ, ಸ್ವಾತಂತ್ರ್ಯೋತ್ತರ ಭಾರತದಲ್ಲಿ ಅತ್ಯಂತ ದೊಡ್ಡ ರೈತ ಹೋರಾಟ ಇದಾಗಿದೆ. ವಿಶಾಲ ತಳಹದಿಯ ರೈತರ ಐಕ್ಯತೆಯನ್ನು ಸಾಧಿಸಲು ಸಾಧ್ಯವಾದ ಈ ಹೋರಾಟವು ಅವರವರ ರಾಜಕೀಯ ನಂಟಿನ ಹೊರತಾಗಿಯೂ ಕೃಷಿ ಕೂಲಿಕಾರರ ಹಾಗೂ ಇತರೆ ಜನವಿಭಾಗಗಳ ವ್ಯಾಪಕ ಬೆಂಬಲವನ್ನು ಪಡೆಯಿತು.

ಪಂಜಾಬಿನ ರೈತರ ಈ ಶಾಂತಿಯುತ ಹೋರಾಟವು ರೈತರು ಮತ್ತು ಕೃಷಿಕೂಲಿಕಾರರಲ್ಲಿ ಮಡುಗಟ್ಟಿದ್ದ ಅತೃಪ್ತಿಯ ಅಭಿವ್ಯಕ್ತಿಯಾಗಿತ್ತು. ಕಾರ್ಷಿಕ ಬಿಕ್ಕಟ್ಟಿನ ಹೊರೆಯನ್ನು ರೈತರ ಮೇಲೆ ಹೊರಿಸುವ ಗುರಿ ಹೊಂದಿದ್ದ ಸರ್ಕಾರದ ಜನ-ವಿರೋಧಿ ನೀತಿಗಳ ಪರಿಣಾಮವಾಗಿ ಇನ್ನೂ ಆಳಕ್ಕೆ ಕುಸಿಯುತ್ತಿದ್ದ ಕಾರ್ಷಿಕ ಬಿಕ್ಕಟ್ಟಿನ ವಿರುದ್ಧ ರೈತರ ಆಕ್ರೋಶದ ಅಭಿವ್ಯಕ್ತಿಯೂ ಅದಾಗಿತ್ತು. ಅಭಿವೃದ್ಧಿ ಕಂದಾಯ ವಿರೋಧಿ ಹೋರಾಟದ ಮೂಲಕ ಆ ಅತೃಪ್ತಿಯು ತನ್ನ ಅಭಿವ್ಯಕ್ತಿಯನ್ನು ಪಡೆದಿದ್ದಾಗಿದ್ದಾಗ್ಯೂ, ಸ್ವಾತಂತ್ರ್ಯಾನಂತರ ಅನುಸರಿಸಿದ ಜನ-ವಿರೋಧಿ ನೀತಿಗಳ ಒಟ್ಟುಗೂಡಿದ ಫಲದಿಂದಾಗಿ ಅದು ಎದ್ದು ಬಂದಿತು.

ಸ್ವಾತಂತ್ರ್ಯದ ನಂತರ, ಪಂಜಾಬಿನ ಜನರ ಮೇಲಿನ ತೆರಿಗೆಯ ಹೊರೆ ಪ್ರತಿಯೊಬ್ಬರ ತಲೆಯ ಮೇಲೆ ರೂ.೧೪ ರಿಂದ ರೂ.೨೫ಕ್ಕೆ ಹೆಚ್ಚಾಯಿತು. ಋಣಭಾರ ತ್ವರಿತವಾಗಿ ಹೆಚ್ಚಾಯಿತು. ಇದೂ ಸಾಲದೆಂಬಂತೆ, ನಿರುದ್ಯೋಗ ಹೆಚ್ಚಾಯಿತು; ಲಕ್ಷಾಂತರ ಗೇಣಿದಾರರು ಅವರ ಜಮೀನುಗಳಿಂದ ಒಕ್ಕಲೆಬ್ಬಿಸಲ್ಪಟ್ಟರು ಮತ್ತು ಅನಿವಾರ್ಯವಾಗಿ ಕೃಷಿಕಾರ್ಮಿಕರಾಗಿ ಮಾರ್ಪಾಟಾದರು. ಪಂಜಾಬಿನ ರೈತರು ಮಾರುಕಟ್ಟೆ ಶಕ್ತಿಗಳಿಂದಲೂ ಸುಲಿಗೆಗೆ ಒಳಗಾದರು.

೧೯೫೨ರಲ್ಲಿ, ಭಾಕ್ರಾ ನಂಗಲ್ ಕಾಲುವೆ ಪೂರ್ಣವಾಗುವುದಕ್ಕೆ ಮುಂಚೆಯೇ, ಪಂಜಾಬ್ ಸರ್ಕಾರವು ಒಂದು ಶಾಸನವನ್ನು ತಂದು ಇಡೀ ಕಾಲುವೆ ವ್ಯವಸ್ಥೆಯ ವೆಚ್ಚವನ್ನು ಈ ಅಭಿವೃದ್ಧಿ ಕಂದಾಯ(ಬೆಟರ್‌ಮೆಂಟ್ ಲೆವಿ)ದಿಂದಲೇ ಭರಿಸಬೇಕೆಂಬ ಉದ್ದೇಶದಿಂದ ಇದನ್ನು ವಿಧಿಸಿತು. ಕಮ್ಯುನಿಸ್ಟ್ ಪಕ್ಷ ಮತ್ತು ಕಿಸಾನ್ ಸಭಾವು ಆರಂಭದಿಂದಲೇ ಈ ಶಾಸನವನ್ನು ವಿರೋಧಿಸಿದವು. ಈ ಕಂದಾಯದ ಹೇರಿಕೆಯಿಂದ ರೈತರಿಗೆ ಕೃಷಿಯಲ್ಲಿ ತೊಡಗಿಸಲು ಏನೇನೂ ಉಳಿಯುವುದಿಲ್ಲ ಮತ್ತು ಬಡವರಂತೂ ಇದರಿಂದ ತಮ್ಮ ಜಮೀನುಗಳನ್ನು ಮಾರಬೇಕಾಗುತ್ತದೆ ಎಂದು ಅವರು ವಾದ ಮಾಡಿದರು. ಆದರೆ ಕಾಂಗ್ರೆಸ್ ಸರ್ಕಾರವು ಆ ವಾದವನ್ನು ತಿರಸ್ಕರಿಸಿತು ಮತ್ತು ಬದಲಿಗೆ ಜನವರಿ ೧೯೫೯ರಲ್ಲಿ ಒಂದು ಸುಗ್ರೀವಾಜ್ಞೆಯನ್ನು ಹೊರಡಿಸಿ ಅಭಿವೃದ್ಧಿ ಕಂದಾಯವನ್ನು ಮುಂಗಡ ಹಣವಾಗಿ ಪಡೆಯಬೇಕೆಂದು ಸರ್ಕಾರ ಬಯಸಿತು. ಸರ್ಕಾರದ ಈ ಪ್ರಚೋದನಕಾರಿ ಕ್ರಮದಿಂದ ಬೆಂಕಿಗೆ ತುಪ್ಪ ಸುರಿದಂತಾಯಿತು.

೧೯೫೭ರ ಕೊನೆಯಲ್ಲಿ ಮತ್ತು ೧೯೫೮ರ ಆರಂಭದಲ್ಲಿ, ಯಾವಾಗ ಕಂದಾಯದ ಅಂದಾಜು ನೋಟೀಸುಗಳು ಬಂದವೋ, ರಾಜ್ಯದ ಇಡೀ ರೈತಾಪಿ ಜನ ಕೆಂಡಾಮಂಡಲವಾದರು. ಸಾಮೂಹಿಕ ಮನವಿಗಳು, ಸಹಿ ಸಂಗ್ರಹ ಆಂದೋಲನ, ಸಮಾವೇಶಗಳು, ಸಮ್ಮೇಳನಗಳು ಹಾಗೂ ಮತಪ್ರದರ್ಶನಗಳ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ೧೧,೦೦೦ ರೈತರು ವೈಯಕ್ತಿಕವಾಗಿ ಕಂದಾಯ ನೋಟೀಸುಗಳ ವಿರುದ್ಧ ಕಾನೂನು ಆಕ್ಷೇಪಣೆ ಸಲ್ಲಿಸಿದರು. ಕಮ್ಯುಸ್ಟ್ ಪಕ್ಷ ಮತ್ತು ಕಿಸಾನ್ ಸಭಾ ಫೆಬ್ರವರಿ ೧೯೫೮ರಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಿದವು. ಎಲ್ಲಾ ಪಕ್ಷಗಳ ಸಮಾವೇಶವೊಂದನ್ನು ಚಂಡೀಘಡದಲ್ಲಿ ನಡೆಸಿ ಜಂಟಿ ಸಮಿತಿಯೊಂದನ್ನು ರಚಿಸಲಾಯಿತು. ಆ ಸಮಿತಿಯು ರಾಜ್ಯ ಸರ್ಕಾರಕ್ಕೆ ಒಂದು ಮನವಿಯನ್ನು ಸಲ್ಲಿಸಿತು. ೧೯೫೮ರ ಸೆಪ್ಟೆಂಬರ್‌ನಲ್ಲಿ, ಒಂದು ಲಕ್ಷಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದ ರೈತರ ಸಾಮೂಹಿಕ ಮತಪ್ರದರ್ಶನವನ್ನು ರಾಜ್ಯಾದ್ಯಂತ ನಡೆಸಲಾಯಿತು. ಕಿಸಾನ್ ಸಭಾವು ಸರ್ಕಾರದ ವಾದವನ್ನು ಪ್ರಶ್ನಿಸದೆ ಹಾಗೇ ಬಿಟ್ಟುಬಿಡಲಿಲ್ಲ. ತನ್ನ ವಾಗ್ವಾದಗಳ ಮೂಲಕ ರಾಜ್ಯದ ಎಲ್ಲಾ ಪ್ರಜಾಸತ್ತಾತ್ಮಕ ಮನಸ್ಸುಗಳ ಬೆಂಬಲವನ್ನು ಪಡೆಯಿತು.

ಕಿಸಾನ್ ಸಭಾವು ಹಲವಾರು ಮಟ್ಟದಲ್ಲಿ ಕಾರ್ಯಾಚರಣೆ ಸಮಿತಿಗಳನ್ನು ರಚಿಸಿತು ಮತ್ತು ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲು ಸ್ವಯಂಸೇವಕರನ್ನು ಆಯ್ಕೆ ಮಾಡಿಕೊಂಡಿತು. ಅದಕ್ಕೆ ಅಪಾರ ಸ್ಪಂದನೆ ದೊರಕಿತು. ಜನವರಿ ಮೂರನೇ ವಾರದ ಹೊತ್ತಿಗೆ, ೧೦,೦೦೦ಕ್ಕೂ ಹೆಚ್ಚು ಸ್ವಯಂಸೇವಕರು ನೋಂದಾಸಿಕೊಂಡರು, ಇವರು ಯಾವುದೇ ತ್ಯಾಗಕ್ಕೂ ಸಿದ್ಧರಾಗಿದ್ದರು. ರಾಜ್ಯ ಮಟ್ಟದ ಒಂದು ಕಾಯಾಚರಣೆ ಸಮಿತಿಯನ್ನು ರಚಿಸಲಾಯಿತು, ಅದು ಭೂಗತವಾಗಿ ಕೆಲಸ ಮಾಡಿತು.

ಜನವರಿ ೧೯೫೯ರಲ್ಲಿ, ಪಂಜಾಬಿನ ಆಹಾರ ಪರಿಸ್ಥಿತಿ ಹದಗೆಟ್ಟಿತು. ೧೯೫೮ರಲ್ಲಿ, ರೈತರು ತಮ್ಮ ಗೋಧಿ ಬೆಳೆಯನ್ನು ಕ್ವಿಂಟಾಲಿಗೆ ರೂ.೩೪ಕ್ಕೆ ಮಾರಾಟ ಮಾಡಬೇಕಾದ ಒತ್ತಡಕ್ಕೆ ಒಳಗಾದರು, ಆದರೆ ಕೇವಲ ಆರೇಳು ತಿಂಗಳೊಳಗೆ ಕೃಷಿ ಕೂಲಿಕಾರರು ಮತ್ತು ಬಡ ರೈತರು ಅದೇ ಗೋಧಿಯನ್ನು ಅದರ ದುಪ್ಪಟ್ಟು ಬೆಲೆಗೆ ಕೊಳ್ಳಬೇಕಾಯಿತು. ಸರ್ಕಾರ ಇತ್ತ ಆಹಾರ ದಾಸ್ತಾನನ್ನೂ ಮಾಡಲಿಲ್ಲ, ಅತ್ತ ಸರಿಯಾದ ಆಹಾರ ವಿತರಣೆ ವ್ಯವಸ್ಥೆಯನ್ನೂ ಸಂಘಟಿಸಲಿಲ್ಲ. ಆಹಾರ ಧಾನ್ಯಗಳಿಗೆ ಸರ್ಕಾರ ಪ್ರಕಟಿಸಿದ ದರವು ಕಾಗದದ ಮೇಲಷ್ಟೆ ಇತ್ತು. ಕಮ್ಯುನಿಸ್ಟ್ ಪಕ್ಷ ಮತ್ತು ಕಿಸಾನ್ ಸಭಾವು ಚಳುವಳಿ ಪ್ರಾರಂಭಿಸಲು ಕಾಳಜಿ ವಹಿಸಿ ಜನತಾ ಆಹಾರ ಸಮಿತಿಗಳನ್ನು ರಚಿಸಿದವು. ಸಾವಿರಾರು ಕೃಷಿ ಕೂಲಿಕಾರರನ್ನು, ಪಟ್ಟಣಗಳಲ್ಲಿರುವ ಕಾರ್ಮಿಕರು ಮತ್ತು ಬಡಜನರನ್ನು ಹಾಗೂ ಮಧ್ಯಮ ವರ್ಗದವರನ್ನೂ ಈ ಚಳುವಳಿಗಾಗಿ ಅಣಿನೆರೆಸಲಾಯಿತು. ಸರ್ಕಾರದ ಜನ-ವಿರೋಧಿ ಆಹಾರ ನೀತಿಯಿಂದಾಗಿ ರೈತರು ನಡೆಸುತ್ತಿದ್ದ ಅಭಿವೃದ್ಧಿ ಕಂದಾಯ ವಿರೋಧಿ ಹೋರಾಟಕ್ಕೆ ಕೃಷಿ ಕೂಲಿಕಾರರ ಮತ್ತು ಪಟ್ಟಣವಾಸಿಗಳ ಜನರ ಸಹಾನುಭೂತಿಯನ್ನು ಗಳಿಸಲು ಸಾಧ್ಯವಾಯಿತು.

ಜನವರಿ ೨೧, ೧೯೫೯ ರಂದು ಯಾವಾಗ ರೈತರಿಗೆ ನೋಟೀಸುಗಳನ್ನು ನೀಡಿದರೋ, ಆಗ ಅಭಿವೃದ್ಧಿ ಕಂದಾಯ ವಿರೋಧಿ ಹೋರಾಟವು ನಾಲ್ಕು ಜಿಲ್ಲೆಗಳಲ್ಲಿ ಪ್ರಾರಂಭವಾದವು. ಎರಡು ವಾರಗಳ ನಂತರ, ಅದು ಇನ್ನೂ ನಾಲ್ಕು ಜಿಲ್ಲೆಗಳಿಗೆ ಹಬ್ಬಿತು, ನಂತರ ಬಾಧಿತ ಎಲ್ಲಾ ಒಂಭತ್ತು ಜಿಲ್ಲೆಗಳಿಗೂ ಹರಡಿತು ಮತ್ತು ಕಡಿಮೆ ಅವಧಿಯಲ್ಲಿಯೇ, ಅದು ಇಡೀ ರಾಜ್ಯದ ಗಮನವನ್ನು ಸೆಳೆಯಿತು. ಸತ್ಯಾಗ್ರಹಿಗಳನ್ನು ಸ್ವಾಗತಿಸಲು ಇಡೀ ಊರಿಗೆ ಊರೇ ಸೇರಿತು ಮತ್ತು ಅವರು ಊರುಗಳಲ್ಲಿ ಜಾಥಾ ಮಾಡುವಾಗ ಅವರ ಜತೆ ಸಾವಿರಾರು ಜನ ಸೇರಿಕೊಂಡರು. ರೈತರ ಗೋಳಿನ ಮತ್ತು ಹೋರಾಟದ ಸಮಯದಲ್ಲಿ ವ್ಯಕ್ತವಾದ ಕೆಚ್ಚೆದೆಯ ಕತೆಗಳ ಬಗ್ಗೆ ಬಾಲಕರು ಮತ್ತು ಬಾಲಕಿಯರು ಹೊಸ ಹೊಸ ಹಾಡುಗಳನ್ನು ಕಟ್ಟಿ ಹಾಡುವ ಮೂಲಕ ಒಂದು ಹೊಸ ಸಾಂಸ್ಕೃತಿಕ ಪುನರ್‌ ಜಾಗೃತಿಯನ್ನೇ ಉಂಟುಮಾಡಿದರು.

ಬಡ ಹಾಗೂ ಮಧ್ಯಮ ರೈತರು ಆರಂಭದಲ್ಲೇ ಚಳುವಳಿಯಲ್ಲಿ ಭಾಗವಹಿಸಿದ್ದರೆ, ಶ್ರೀಮಂತ ರೈತರು ಮುಂದಿನ ಹಂತದಲ್ಲಿ ಸೇರಿಕೊಂಡರು. ಅಭಿವೃದ್ಧಿ ಕಂದಾಯದಿಂದ ಕೃಷಿಕಾರ್ಮಿಕರು ಬಾಧಿತರಾಗದಿದ್ದಾಗಲೂ, ಸಹಾನುಭೂತಿ ವ್ಯಕ್ತಪಡಿಸಲು ಬಂಧನಕ್ಕೆ ಒಳಗಾದರು. ಆಹಾರ ಚಳುವಳಿಗೆ ಮತ್ತು ಕೂಲಿ ಹೆಚ್ಚಳ ಹಾಗೂ ಭೂ ವಿತರಣೆಯ ಬೇಡಿಕೆಗಳಿಗೆ ಕಿಸಾನ್ ಸಭಾ ನೀಡಿದ ಬೆಂಬಲವು ಇದಕ್ಕೆ ಕೊಡುಗೆ ನೀಡಿತು. ನೂರಾರು ಕಂದಾಯ ಸಂಗ್ರಹಗಾರರು, ಪಂಚರು ಮತ್ತು ಸರಪಂಚರು ಈ ಚಳುವಳಿಯಲ್ಲಿ ಭಾಗವಹಿಸಿದರು. ಅಭಿವೃದ್ಧಿ ಕಂದಾಯದ ಸಂಗ್ರಹಕ್ಕಾಗಿ ನೀಡಿದ್ದ ಚೀಟಿಗಳನ್ನು ಕಂದಾಯ ಸಂಗ್ರಹಕಾರರು ಹರಿದು ಹಾಕಿದರು. ಈ ಚಳುವಳಿಯ ಅವಧಿಯಲ್ಲಿ ಎರಡು ತಿಂಗಳ ಕಾಲ ಸಚಿವರು ಮತ್ತು ಕಾಂಗ್ರೆಸ್ ಮುಖಂಡರು ಹಳ್ಳಿಗಳಲ್ಲಿ ಸಭೆ ಮಾಡುವುದಕ್ಕಾಗಲೀ ಅಥವಾ ಹಳ್ಳಿಗಳಿಗೆ ಪ್ರವೇಶ ಮಾಡಲಿಕ್ಕಾಗಲೀ ಸಾಧ್ಯವಾಗಲಿಲ್ಲ. ಹಳ್ಳಿಗಳಲ್ಲಿದ್ದ ಎಲ್ಲಾ ಪಕ್ಷಗಳೂ ಕಿಸಾನ್ ಸಭಾ ನೇತೃತ್ವದ ಚಳುವಳಿಯನ್ನು ಬೆಂಬಲಿಸಿದರು. ಫೆಬ್ರವರಿ ಕೊನೆಯ ಹೊತ್ತಿಗೆ, ಇಡೀ ರಾಜ್ಯದ ವಾತಾವರಣದಲ್ಲಿ ವಿದ್ಯುತ್ ಸಂಚಾರವಾದಂತಾಗಿತ್ತು ಮತ್ತು ಅಭಿವೃದ್ಧಿ ಕಂದಾಯ ವಿರೋಧಿ ಹೋರಾಟವು ಇಡೀ ರಾಜ್ಯದ ಜನರ ಗಮನವನ್ನು ಸೆಳೆದಿತ್ತು.

ಲಕ್ಷಾಂತರ ರೈತರು ನಾನಾ ಸ್ವರೂಪಗಳಲ್ಲಿ ಈ ಚಳುವಳಿಯಲ್ಲಿ ಭಾಗವಹಿಸಿದ್ದರು. ಅವರು ಮತಪ್ರದರ್ಶನಗಳಲ್ಲಿ, ಹಳ್ಳಿಗಳ ಪ್ರಭಾತ ಫೇರಿಗಳಲ್ಲಿ, ಸತ್ಯಾಗ್ರಹಿಗಳನ್ನು ಸ್ವಾಗತಿಸುವಲ್ಲಿ, ಸತ್ಯಾಗ್ರಹಿಗಳ ಮೇಲೆ ದಂಡ ವಿಧಿಸಿ ವಸೂಲಿ ಮಾಡುವುದರ ವಿರುದ್ಧದ ಹೋರಾಟದಲ್ಲಿ, ಮನೆ ಮನೆಗಳಿಗೆ ಹೋರಾಟದ ಸಂದೇಶವನ್ನು ಕೊಂಡೊಯ್ಯುವಲ್ಲಿ ಮತ್ತು ಸರ್ಕಾರದ ದಬ್ಬಾಳಿಕೆಗಳ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿದ್ದರು. ಸರ್ಕಾರವು ಸಂಪೂರ್ಣವಾಗಿ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕಾದ ಸ್ಥಿತಿ ತಲುಪಿತ್ತು. ಅದು ರೈತರಲ್ಲಿ ಒಡಕುಂಟುಮಾಡಲು ಪ್ರಯತ್ನಿಸಿತ್ತು.

ರಿಯಾಯಿತಿಗಳು ಮತ್ತು ಭರವಸೆಗಳ ಆಧಾರದಲ್ಲಿ ಹೋರಾಟವನ್ನು ದುರ್ಬಲಗೊಳಿಸುವ ಕಾಂಗ್ರೆಸ್ಸಿನ ಪ್ರಚಾರವು ವಿಫಲವಾದಾಗ, ಸರ್ಕಾರವು ಕ್ರೂರ ದಬ್ಬಾಳಿಕೆಗೆ ಇಳಿಯಿತು. ಎಲ್ಲಾ ಕಿಸಾನ್ ಸಭಾ ಹಾಗೂ ಕಮ್ಯುನಿಸ್ಟ್ ಕಾರ್ಯಕರ್ತರ ವಿರುದ್ಧ ವಾರಂಟುಗಳನ್ನು ನೀಡಿತು, ಆದರೆ ಅವರನ್ನು ಬಂಧಿಸಲಾಗಲಿಲ್ಲ. ಈ ವೈಫಲ್ಯದಿಂದ ಕೋಪಾವಿಸ್ಟರಾಗಿ ಗ್ರಾಮಸ್ಥರನ್ನು ಗುರಿಯಾಗಿಟ್ಟುಕೊಂಡು ಮಶೀನ್ ಗನ್ನುಗಳ ಸಮೇತ ಜನರ ತಿರುಗಾಟವನ್ನು ನಿರ್ಬಂಧಿಸುವ ಸಲುವಾಗಿ ಸಶಸ್ತ್ರ ಪೋಲಿಸರು ಅನೇಕ ಹಳ್ಳಿಗಳನ್ನು ವಶಪಡಿಸಿಕೊಂಡರು ಮತ್ತು ಇಡೀ ಹಳ್ಳಿಗಳನ್ನು ಲೂಟಿ ಮಾಡಿ ಸತ್ಯಾಗ್ರಹಿಗಳ ಮೇಲೆ ವಿಧಿಸಿದ ದಂಡ ವಸೂಲಿಗಾಗಿ ಹಳ್ಳಿಯವರ ಸಾಮಾನುಗಳನ್ನು ಹರಾಜು ಹಾಕಿದರು. ರೈತರು ಮತ್ತು ಸತ್ಯಾಗ್ರಹಿಗಳನ್ನು ಪೋಲಿಸ್ ಠಾಣೆಗೆ ಎಳೆದೊಯ್ದರು ಮತ್ತು ನಿರ್ದಯವಾಗಿ ಹೊಡೆದರು, ಸರ್ಕಾರಿ ಅಧಿಕಾರಿಗಳು ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡರು, ನ್ಯಾಯಾಂಗ ಮತ್ತು ಕಾರ್ಯಾಂಗ ಆಳುವ ಪಕ್ಷದ ಕೈಗೊಂಬೆಗಳಾದವು. ಅವರ ಕಾರ್ಯಾಚರಣೆಗಳಿಗೆ ಯಾವುದೇ ಲಿಖಿತ ಆದೇಶಗಳಿರಲಿಲ್ಲ, ಸಿಬ್ಬಂದಿಗಳು ಅವರ ಮನಸ್ಸಿಗೆ ಬಂದಹಾಗೆ ನಡೆದುಕೊಂಡರು. ಲಾಠಿ ಚಾರ್ಜ್, ಟಿಯರ್ ಗ್ಯಾಸ್, ಗೋಲಿಬಾರ್ ಮತ್ತು ಲೂಟಿಗಳು ದಿನನಿತ್ಯದ ವಿದ್ಯಮಾನಗಳಾದವು. ಪೋಲಿಸರೊಂದಿಗಿನ ಕಾದಾಟದಲ್ಲಿ ಸುಳ್ಳು ಪ್ರಕರಣ ದಾಖಲಿಸಿ ನೂರಾರು ಪುರುಷರು ಮತ್ತು ಮಹಿಳೆಯರನ್ನು ಬಂಧಿಸಿದರು. ಪೋಲಿಸ್ ದಬ್ಬಾಳಿಕೆಯ ಹೆಚ್ಚು ಆಘಾತವನ್ನು ಜಲಂಧರ್ ಜಿಲ್ಲೆಯು ಎದುರಿಸಿತು. ಹಳ್ಳಿಗಳನ್ನು ಸುತ್ತುವರಿದಾಗ ಪೋಲಿಸರ ಸವಾಲನ್ನು ಸ್ವೀಕರಿಸಿದ ಮಹಿಳೆಯರು ಅವರನ್ನು ಹಿಮ್ಮೆಟ್ಟಿಸಿದರು. ಪೋಲಿಸ್ ದಬ್ಬಾಳಿಕೆಯ ಎದುರಿನಲ್ಲಿ ಮಹಿಳೆಯರು ಸಾಟಿಯಿಲ್ಲದ ಕಲಿತನವನ್ನು ತೋರಿದರು. ಅನೇಕ ಕಮ್ಯುನಿಸ್ಟರು ಮತ್ತು ಕಿಸಾನ್ ಸಭಾದವರನ್ನು ತಲೆಮರೆಸಿಕೊಂಡವರು ಎಂದು ಘೋಷಿಸಿ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡರು.

ಕಿಸಾನ್ ಸಭಾದ ಕಛೇರಿ ಕಾರ್ಯನಿರ್ವಹಣೆಯನ್ನು ಅಸಾಧ್ಯವಾಗಿಸಿದರು. ಕಮ್ಯುನಿಸ್ಟ್ ಪಕ್ಷದ ದಿನಪತ್ರಿಕೆ ‘ನವಾಂ ಜಮಾನಾ’ ಪ್ರಕಟವಾಗದಂತೆ ನೋಡಿಕೊಂಡರು, ಏಕೆಂದರೆ ಅಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳನ್ನೆಲ್ಲಾ ಬಂಧಿಸಿ ಜೈಲಿಗೆ ಕಳಿಸಿದ್ದರು. ಜನರ ಮನೋಭಾವ ಹೇಗಿತ್ತೆಂದರೆ ಪಕ್ಷದ ಪತ್ರಿಕೆಯ ಸಿಬ್ಬಂದಿಗಳನ್ನು ಬಂಧಿಸಿದಾಗ, ಎರಡೇ ದಿನಗಳಲ್ಲಿ ಹಲವಾರು ಜನರು ಮುಂದೆ ಬಂದು ಪತ್ರಿಕೆಯನ್ನು ಮತ್ತೆ ಪ್ರಾರಂಭಿಸಿದರು.

ಸರ್ಕಾರದ ದಬ್ಬಾಳಿಕೆಯು ರಾಜ್ಯದ ಎಲ್ಲಾ ಜನರ ಕೋಪಕ್ಕೆ ಕಾರಣವಾಯಿತು ಮತ್ತು ಜನಚಳುವಳಿಯ ವಿರುದ್ಧದ ದಬ್ಬಾಳಿಕೆಯನ್ನು ಸರ್ಕಾರವು ಮುಂದುವರಿಸಲು ಸಾಧ್ಯವಾಗದಂತೆ ಮಾಡಿದರು. ಇಡೀ ಆಡಳಿತ ವ್ಯವಸ್ಥೆಯನ್ನೇ ನಿತ್ರಾಣಗೊಳಿಸಿದರು. ಸರ್ಕಾರವು ಗತ್ಯಂತರವಿಲ್ಲದೇ ಚಳುವಳಿಯ ಎದುರು ಶರಣಾಗಬೇಕಾಯಿತು. ಅಭಿವೃದ್ಧಿ ಕಂದಾಯವನ್ನು  ಕಡಿಮೆ ಮಾಡಬೇಕೆಂಬ ಬೇಡಿಕೆಯನ್ನು ಹಾಗೂ ಕಿಸಾನ್ ಸಭಾದ ಇತರ ಬೇಡಿಕೆಗಳನ್ನೂ ಮುಖ್ಯಮಂತ್ರಿಗಳು ಒಪ್ಪಿಕೊಂಡರು. ಮಾರ್ಚ್ ೨೨, ೧೯೫೯ ರಂದು ಹೋರಾಟವನ್ನು ಹಿಂತೆಗೆದುಕೊಳ್ಳಲಾಯಿತು.

ಹೋರಾಟದ ಉದ್ದಕ್ಕೂ, ಜಿಲ್ಲಾ ಕೋರ್ಟುಗಳ ಕೆಲಸಕ್ಕೆ ಅಡ್ಡಿಯುಂಟುಮಾಡಿದ ಸತ್ಯಾಗ್ರಹದಲ್ಲಿ ೧೯,೦೦೦ ಸ್ವಯಂಸೇವಕರು ಪಾಲ್ಗೊಂಡರು, ೧೦,೦೦೦ ಜನರು ಜೈಲಿಗೆ ಹೋದರು, ೩,೦೦೦ ಸ್ವಯಂಸೇವಕರು ಪೋಲಿಸರ ಕ್ರೂರ ಹೊಡೆತಕ್ಕೆ ಸಿಲುಕಿದರು ಮತ್ತು ಇನ್ನೂ ನೂರಾರು ಜನರು ಪೋಲಿಸ್ ಠಾಣೆಗಳಲ್ಲಿ ಹಿಂಸೆಗೆ ಒಳಗಾದರು. ಮೂರು ಮಹಿಳೆಯರನ್ನೂ ಒಳಗೊಂಡಂತೆ ಎಂಟು ಸಂಗಾತಿಗಳು ಪೋಲಿಸರ ಗುಂಡಿಗೆ ಹುತಾತ್ಮರಾದರು; ಒಬ್ಬರು ಪೋಲಿಸ್ ಕಿರುಕುಳದಿಂದ ಮಡಿದರೆ ಮತ್ತಿಬ್ಬರು ಜೈಲಿನಲ್ಲಿ ಕೊನೆಯುಸಿರೆಳೆದರು. ಚಳುವಳಿಯನ್ನು ಹಿಂತೆಗೆದುಕೊಂಡ ದಿನವೂ ೨೫೦ ಸತ್ಯಾಗ್ರಹಿಗಳು ಚಂಡೀಗಢವನ್ನು ತಲುಪಿದ್ದರು ಮತ್ತು ೩,೦೦೦ ಕ್ಕೂ ಹೆಚ್ಚು ಜನರು ರಾಜ್ಯದ ಎಲ್ಲಾ ಜಿಲ್ಲಾ ಕೋರ್ಟುಗಳ ಮುಂದೆ ಧರಣಿ ನಡೆಸಲು ತೆರಳಿದ್ದರು.

ಈ ಚಳುವಳಿಯು ರಾಜಾಸ್ತಾನ ಮತ್ತು ಬಿಹಾರ್‌ಗಳಂತಹ ರಾಜ್ಯಗಳ ಮೇಲೂ ಗಮನಾರ್ಹ ಪರಿಣಾಮ ಬೀರಿತು. ಕೆಲವು ದೂರದ ಪ್ರದೇಶಗಳಲ್ಲಿನ ಹಳ್ಳಿಗಳನ್ನು ಹೊರತುಪಡಿಸಿದರೆ ಬೇರೆಲ್ಲೂ ಅಭಿವೃದ್ಧಿ ಕಂದಾಯವನ್ನು ಸಂಗ್ರಹಿಸಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ರೈತರ ನಡುವೆ ಮತ್ತು ರೈತರು ಹಾಗೂ ಕೃಷಿ ಕೂಲಿಕಾರರ ನಡುವಿನ ಹಿಂದೂ ಮತ್ತು ಸಿಖ್ಖರ ಐಕ್ಯತೆಯನ್ನು ಬೆಸೆಯುವ ಮೂಲಕ ಕೋಮುವಾದಿ ಶಕ್ತಿಗಳಿಗೆ ಈ ಚಳುವಳಿಯು ದೊಡ್ಡ ಹೊಡೆತವನ್ನೇ ಕೊಟ್ಟಿತು. ಗ್ರಾಮೀಣ ಮತ್ತು ಪಟ್ಟಣವಾಸಿಗಳ ನಡುವೆ ಒಡಕುಂಟುಮಾಡಲು ಯತ್ನಿಸಿದವರಿಗೂ ಈ ಚಳುವಳಿಯಿಂದಾಗಿ ದೊಡ್ಡ ಹಿನ್ನಡೆಯಾಯಿತು, ಏಕೆಂದರೆ ರೈತರ ಬೇಡಿಕೆಗಳಿಗೆ ಪಟ್ಟಣಗಳ ಜನರೂ ಬೆಂಬಲ ನೀಡಿದರು. ಈ ಹೋರಾಟವು ಪಂಜಾಬ್ ಮತ್ತು ಈಗ ಬೇರೆಯಾಗಿರುವ ಹರ್ಯಾಣದ ಜನರ ನಡುವಿನ ಐಕ್ಯತೆಯನ್ನು ಬಲಪಡಿಸಿತು ಕೂಡ. ಕಮ್ಯುನಿಸ್ಟ್ ಪಕ್ಷ ಮತ್ತು ಕಿಸಾನ್ ಸಭಾ ಹೊಸ ಪ್ರದೇಶಗಳಿಗೆ ವಿಸ್ತರಿಸಿ ಕಾಂಗ್ರೆಸ್ ಪಕ್ಷ ಮತ್ತು ಅದರ ನೀತಿಗಳಿಗೆ ಒಂದು ಬಲಿಷ್ಠ ವಿರೋಧ ಶಕ್ತಿಯಾಗಿ ಹೊರಹೊಮ್ಮಿದವು.

 

ಕನ್ನಡಕ್ಕೆ: ಟಿ.ಸುರೇಂದ್ರ ರಾವ್

Leave a Reply

Your email address will not be published. Required fields are marked *