ಭಾರತದ ರೈತರಿಗೆ ಮಹಾಮೋಸ ತ್ರಿವಳಿ ಮಸೂದೆಗಳ ತ್ರಿಶೂಲ ಇರಿತ

ಮೋದಿ ಸರಕಾರ ಜೂನ್‌ತಿಂಗಳಲ್ಲಿ ಹೊರಡಿಸಿದ ಮೂರು ಸುಗ್ರೀವಾಜ್ಞೆಗಳು ಕೃಷಿಯ ಕಾರ್ಪೊರೇಟೀಕರಣವನ್ನು ಉತ್ತೇಜಿಸುವ, ಭಾರತೀಯ ಕೃಷಿಯನ್ನು ಜಾಗತಿಕ ಮಾರುಕಟ್ಟೆಯೊಂದಿಗೆ ಸಮಗ್ರೀಕರಿಸಲು ಅನುಕೂಲ ಮಾಡಿ ಕೊಡುವ ಮತ್ತು ಸರಕಾರದಿಂದ ಖರೀದಿ ಮತ್ತು ಕನಿಷ್ಟ ಬೆಂಬಲ ಬೆಲೆ ವ್ಯವಸ್ಥೆಯನ್ನು ಶಿಥಿಲಗೊಳಿಸುವ ಉದ್ದೇಶ ಹೊಂದಿರುವ ಒಂದು ತ್ರಿಶೂಲ. ಕೊವಿಡ್ ಕಾಲ ಮೋದಿ ಸರಕಾರಕ್ಕೆ ರೈತ-ವಿರೋಧಿ, ಕಾರ್ಮಿಕ-ವಿರೋಧಿ ಶಾಸನಗಳನ್ನು ತೂರಿಸಿ ಬಿಡಲು ಒಂದು ಸುವರ್ಣಾವಕಾಶ ಅಗಿಬಿಟ್ಟಿದೆ.

Prakash_karat
ಪ್ರಕಾಶ ಕಾರಟ್

ಜೂನ್ ತಿಂಗಳಲ್ಲಿ ಕೃಷಿ ಮತ್ತು ಮಾರಾಟಕ್ಕೆ ಸಂಬಂಧಪಟ್ಟಂತೆ ಮೂರು ಸುಗ್ರೀವಾಜ್ಞೆಗಳನ್ನು ಹೊರಡಿಸಿದಂದಿನಿಂದ ರೈತ ಸಂಘಟನೆಗಳು ಮತ್ತು ರೈತರು ತಮ್ಮ ಹಕ್ಕುಗಳ ಮೇಲಿನ ತೀವ್ರ ದಾಳಿಗಳ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಸಂಸದ್ ಅಧಿವೇಶನದ ಮುನ್ನಾದಿನ ರ‍್ಯಾಣ, ಪಂಜಾಬ್ ಮತ್ತು ಉತ್ತರಪ್ರದೇಶದ ಪಶ್ಚಿಮ ಭಾಗದಲ್ಲಿ ದೊಡ್ಡ ಪ್ರತಿಭಟನೆಗಳು ನಡೆದಿವೆ.

ಈ ವಿರೋಧವನ್ನೂ ಲೆಕ್ಕಿಸದೆ ಸರಕಾರ ಈ ಮೂರು ಸುಗ್ರೀವಾಜ್ಞೆಗಳ ಜಾಗದಲ್ಲಿ ಮೂರು ಮಸೂದೆಗಳನ್ನು ಸಂಸತ್ತಿನ ಪ್ರಸಕ್ತ ಮಳೆಗಾಲದ ಅಧಿವೇಶನದಲ್ಲಿ ತಕ್ಷಣ ಅಂಗೀಕರಿಸಬೇಕೆಂದು ಮಂಡಿಸಿದೆ.

ಈ ಮೂರು ಸುಗ್ರೀವಾಜ್ಞೆಗಳು ಆಹಾರಧಾನ್ಯಗಳು ಮತ್ತು ಇತರ ಕೃಷಿ ಸರಕುಗಳನ್ನು ಆವಶ್ಯಕ ಸರಕುಗಳ ಪಟ್ಟಿಯಿಂದ ತೆಗೆಯುತ್ತವೆ, ಮತ್ತು ದಾಸ್ತಾನು ಮಿತಿಗಳನ್ನು ಏರಿಸಿವೆ; ರಾಜ್ಯಗಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಗಳನ್ನು ಬದಿಗೊತ್ತಿವೆ ಮತ್ತು ಕೃಷಿ ಉತ್ಪನ್ನಗಳ ಮುಕ್ತ ಅಂತರ-ರಾಜ್ಯ ಸಾಗಾಣಿಕೆಗೆ ಅವಕಾಶ ಮಾಡಿಕೊಟ್ಟಿವೆ; ಗುತ್ತಿಗೆ ಕೃಷಿಗೆ ಅನುಕೂಲ ಮಾಡಿಕೊಡುವ ಕಾನೂನು ಚೌಕಟ್ಟನ್ನು ಒದಗಿಸಿವೆ. ಒಟ್ಟಾಗಿ, ಇವು ದೊಡ್ಡ ವ್ಯಾಪಾರಿಗಳಿಂದ, ಕೃಷಿವ್ಯವಹಾರಸ್ಥರಿಂದ ಮತ್ತು ಕಾರ್ಪೊರೇಟ್‌ಗಳಿಂದ ರೈತರ ಶೋಷಣೆಯ ಸನ್ನದ್ದು.

ಈ ತ್ರಿವಳಿ ಸುಗ್ರೀವಾಜ್ಞೆಗಳು ಕೃಷಿಯ ಕಾರ್ಪೊರೇಟೀಕರಣವನ್ನು ಉತ್ತೇಜಿಸುವ, ಭಾರತೀಯ ಕೃಷಿಯನ್ನು ಜಾಗತಿಕ ಮಾರುಕಟ್ಟೆಯೊಂದಿಗೆ ಸಮಗ್ರೀಕರಿಸಲು ಅನುಕೂಲ ಮಾಡಿ ಕೊಡುವ ಮತ್ತು ಸರಕಾರದಿಂದ ಖರೀದಿ/ಕನಿಷ್ಟ ಬೆಂಬಲ ಬೆಲೆ ವ್ಯವಸ್ಥೆಯನ್ನು ಶಿಥಿಲಗೊಳಿಸುವ ಉದ್ದೇಶ ಹೊಂದಿರುವ ಒಂದು ತ್ರಿಶೂಲ. ಇದು ಆಹಾರ ಭದ್ರತೆಯ ಶಕ್ತಿಗುಂದಿಸುತ್ತುದೆ.

ಆವಶ್ಯಕ ಸರಕುಗಳ ಕಾಯ್ದೆಗೆ ತರುವ ತಿದ್ದುಪಡಿ ಧಾನ್ಯಗಳು, ಬೇಳೆ ಕಾಳುಗಳು, ಖಾದ್ಯ ತೈಲಗಳು, ಈರುಳ್ಳಿಗಳು, ಆಲೂಗಡ್ಡೆಗಳನ್ನು ಆವಶ್ಯಕ ಸರಕುಗಳ ಮತ್ತು ದಾಸ್ತಾನುಮಿತಿಗಳ ಪಟ್ಟಿಯಿಂದ ತೆಗೆಯುತ್ತದೆ. ವಿಪರೀತ ಬೆಲೆಯೇರಿಕೆ, ಯುದ್ಧ ಅಥವ ಇತರ ಅಸಾಮಾನ್ಯ ಪರಿಸ್ಥಿತಿಗಳಲ್ಲಿ ಮಾತ್ರವೇ ಮಿತಿಗಳನ್ನು ಹಾಕಬಹುದು. ಈ ತಿದ್ದುಪಡಿ ದೊಡ್ಡ ವ್ಯಾಪಾರಸ್ಥರು, ಕಾರ್ಪೊರೇಟ್‌ಗಳು, ಇವನ್ನೆಲ್ಲ ಒಟ್ಟುಗೂಡಿಸುವವರು ಮತ್ತು ಸಂಸ್ಕರಿಸುವವರು ಅನಗತ್ಯವಾಗಿ ದಾಸ್ತಾನು ಮಾಡಲು, ಕಳ್ಳ ದಾಸ್ತಾನಿಗೆ ಸೌಕರ್ಯ ಒದಗಿಸುತ್ತದಷ್ಟೇ. ಇದನ್ನು ‘ವಾಯಿದಾ ವ್ಯಾಪಾರ’(ಫ್ಯೂಚರ್ಸ್ ಟ್ರೇಡಿಂಗ್) ದಲ್ಲಿ ಸಟ್ಟಾಕೋರತನಕ್ಕೆ ಬಳಸಲಾಗುತ್ತದೆ.ಇದರ ಇನ್ನೊಂದು ಮಗ್ಗುಲು ಎಂದರೆ ಬಳಕೆದಾರರ ಮಟ್ಟಿಗೆ ಈ ಸರಕುಗಳಬೆಲೆಯೇರಿಕೆ.

ಎರಡನೇ ಸುಗ್ರೀವಾಜ್ಞೆ/ ಶಾಸನ ಎಪಿಎಂಸಿಗಳನ್ನು ಬದಿಗೆ ತಳ್ಳಲಿಕ್ಕಾಗಿಯೇ ಬರುತ್ತಿದೆ. ವ್ಯಾಪಾರಿಗಳು ಮತ್ತು ಕಂಪನಿಗಳು ರೈತರಿಂದ ನೇರವಾಗಿ ಅಥವ ಎಪಿಎಂಸಿ ಯಾರ್ಡುಗಳ ಹೊರಗೆ ಖರೀದಿಸಬಹುದು. ಸಂಬಂಧಪಟ್ಟ ರಾಜ್ಯ ಸರಕಾರ ಈ ವ್ಯವಹಾರಗಳ ಮೇಲೆ ಯಾವುದೇ ತೆರಿಗೆ ಹಾಕುವಂತಿಲ್ಲ. ಗುತ್ತಿಗೆ ಬೇಸಾಯಕ್ಕೆ ಉತ್ತೇಜನೆ ನೀಡುವುದರೊಂದಿಗೆ, ಇದರ ಪರಿಣಾಮವೆಂದರೆ, ರೈತರು ತಮ್ಮ ಉತ್ಪನ್ನಗಳನ್ನು ಕೃಷಿ ವ್ಯಾಪಾರ ಕಂಪನಿಗಳು ಮತ್ತು ದೊಡ್ಡ ವ್ಯಾಪಾರಸ್ಥರು ನಿರ್ದೇಶಿಸಿದ ಬೆಲೆಗಳಲ್ಲಿಯೇ ಮಾರಬೇಕಾಗುತ್ತದೆ. ಯಾವುದನ್ನು ಸರಕಾರ “ರೈತರಿಗೆ ಸ್ವಾತಂತ್ರ್ಯ” ಎಂದು ಟಾಂಟಾಂ ಮಾಡುತ್ತಿದೆಯೋ ಅದು ವಾಸ್ತವವಾಗಿ ರೈತರು ಯಾವ ಬೆಲೆಗಳಲ್ಲಿ ಮಾರಬೇಕು ಎಂಬುದನ್ನು ನಿರ್ದೇಶಿಸಲು ದೊಡ್ಡ ವ್ಯಾಪಾರಸ್ಥರಿಗೆ-ಕಾರ್ಪೊರೇಟ್‌ಗಳಿಗೆ ಸಿಗುವ ಸ್ವಾತಂತ್ರ್ಯವಷ್ಟೇ .

ಎಪಿಎಂಸಿಗಳ ಕಾರ್ಯನಿರ್ವಹಣೆ ಮತ್ತು ಅವಶ್ಯಕ ಸರಕುಗಳ ಕಾಯ್ದೆಯಲ್ಲಿ ಸಮಸ್ಯೆಗಳಿವೆ, ನಿಜ. ಆದರೆ ಅವನ್ನು ರಾಜ್ಯಸರಕಾರಗಳ ಮೂಲಕ ನಿಭಾಯಿಸುವ ಬದಲು, ಕೃಷಿಯು ರಾಜ್ಯ ಪಟ್ಟಿಯಲ್ಲಿರುವ ವಿಷಯವಾದರೂ, ಅವನ್ನು ಬದಿಗೊತ್ತಿ, ಮೋದಿ ಸರಕಾರ ಕೃಷಿ ವ್ಯಾಪಾರಿಗಳು, ಕಾರ್ಪೊರೇಟ್‌ಗಳು ಮತ್ತು ದೊಡ್ಡ ವ್ಯಾಪಾರಸ್ಥರ ಹಿತಾಸಕ್ತಿಗಳನ್ನು ಪ್ರೋತ್ಸಾಹಿಸುವ ಸರ್ವಪ್ರಯತ್ನ ನಡೆಸಲು ಮುಂದಾಗಿದೆ. ಎಪಿಎಂಸಿ ಗಳಿಗೆ ಸಂಬಂಧಪಟ್ಟ ಮಸೂದೆ ಕೇಂದ್ರೀಯ ಶಾಸನದ ವ್ಯಾಪ್ತಿಯ ಹೊರಗಿದೆ, ಏಕೆಂದರೆ ಅದು ಕೇವಲ ರಾಜ್ಯಪಟ್ಟಿಯಲ್ಲಿರುವ ವಿಷಯ. ಆದರೂ ಸರಕಾರ ಈ ಶಾಸನವನ್ನು ಮುಂದೊತ್ತುತ್ತಿದೆ.

ಇದೀಗ ಒಂದು ಸಿದ್ಧಮಾದರಿಯಾಗಿರುವಂತೆ, ಬಿಜೆಪಿ ರಾಜ್ಯ ಸರಕಾರಗಳಿಗೆ ಎಪಿಎಂಸಿಯ ರಾಜ್ಯ ಕಾಯ್ದೆಗಳಿಗೆ ತಿದ್ದುಪಡಿ ಮಾಡಲು ಹೇಳಲಾಯಿತು. ಉತ್ತರಪ್ರದೇಶ, ಹರ‍್ಯಾಣ, ಮಧ್ಯಪ್ರದೇಶ ಮತ್ತು ಗುಜರಾತ ಈಗಾಗಲೇ ಇದನ್ನು ಮಾಡಿವೆ. ಕಾರ್ಮಿಕ ಕಾನೂನುಗಳನ್ನು ಕೂಡ ಹೀಗೆಯೇ ರಾಜ್ಯ ಮಟ್ಟದ ಸುಗ್ರೀವಾಜ್ಞೆಗಳು ಮತ್ತು ಕ್ರಮಗಳ ಮೂಲಕ ಬದಲಿಸಲಾಯಿತು ಅಥವ ರದ್ದು ಮಾಡಲಾಯಿತು.

after 3 agri bills-pm-varthabharati
 ವ್ಯಂಗ್ಯಚಿತ್ರ ಕೃಪೆ: ಪಿ.ಮಹಮ್ಮದ್, ವಾರ್ತಾಭಾರತಿ

ಮೋದಿ ಸರಕಾರ ‘ಆತ್ಮನಿರ್ಭರ್ ಭಾರತ್’ ಅಭಿಯಾನದ ವೇಷ ತೊಡಿಸಿ ವಿವಿಧ ನವ-ಉದಾರವಾದಿ ಕ್ರಮಗಳನ್ನು ಮುಂದೊತ್ತುತ್ತಿದೆ. ಕೃಷಿ ಮತ್ತು ಗ್ರಾಮೀಣ ಮೂಲರಚನೆಯ ಆಶ್ರಯದಲ್ಲಿ ಪ್ರಕಟಿಸಿರುವ ಕ್ರಮಗಳು ಯಾವವೂ ವಾಸ್ತವವಾಗಿ ರೈತರಿಗೆ ಹೆಚ್ಚೇನೂ ಕೊಟ್ಟಿಲ್ಲ. ಗದ್ದೆಮಟ್ಟದ ಮೂಲರಚನೆ ನಿಧಿ, ಪ್ರಧಾನ ಮಂತ್ರಿ ಮತ್ಸö್ಯಸಂಪದಾ ಯೋಜನಾ, ಪಶುಸಂಗೋಪನಾ ಮೂಲರಚನೆ ಅಭಿವೃದ್ಧಿ ನಿಧಿ, ಇತ್ಯಾದಿಗಳೆಲ್ಲವೂ ವಾಸ್ತವವಾಗಿ ಈಗಾಗಲೇ ಇರುವ ಅಥವ 2019-20 ಮತ್ತು 2020-21ರ ಬಜೆಟುಗಳಲ್ಲಿ ಈ ಮೊದಲೇ ಪ್ರಕಟಿಸಿರುವ ಸ್ಕೀಮುಗಳ ನವಪೊಟ್ಟಣಗಳಷ್ಟೇ. ಇವಕ್ಕೆ ತಗಲುವ ಹೆಚ್ಚುವರಿ ವೆಚ್ಚ ಕೇವಲ 5000 ಕೋಟಿ ರೂ.

ನಾವೀಗ ಒಂದು ಅರೆಬರೆಗೊಳಿಸಿರುವ ಸಂಸತ್ತು ಕೆಲಸ ಮಾಡುತ್ತಿರುವುದನ್ನು ನೋಡುತ್ತಿದ್ದೇವೆ. ಸರಕಾರ ಈ ಯಾವುದೇ ಮಸೂದೆಯನ್ನು ಸಂಬಂಧಿತ ಸ್ಥಾಯೀ ಸಮಿತಿಗಳಿಗೆ ವಿವರವಾದ ಚರ್ಚೆಗೆ ಕಳಿಸಲು ನಿರಾಕರಿಸಿದೆ. ಚರ್ಚೆಗೆ ಸಮಯವನ್ನು ತೀವ್ರವಾಗಿ ಕಡಿತಮಾಡಲಾಗಿದೆ, ಶಾಸನಗಳನ್ನು ಬಲವಂತದಿಂದ ಪಾಸು ಮಾಡಿಸಿಕೊಳ್ಳಲಾಗುತ್ತಿದೆ. ಕೊವಿಡ್ ಮಹಾಸೋಂಕು ಮೋದಿ ಸರಕಾರಕ್ಕೆ ರೈತ-ವಿರೋಧಿ, ಕಾರ್ಮಿಕ-ವಿರೋಧಿ ಶಾಸನಗಳನ್ನು ಯಾವುದೇ ರೀತಿಯ ಸರಿಯಾದ ಸಂಸದೀಯ ತಪಾಸಣೆ ಅಥವ ಚರ್ಚೆಯಿಲ್ಲದೇ ತೂರಿಸಿ ಬಿಡಲು ಒಂದು ಸುವರ್ಣಾವಕಾಶ ಅಗಿಬಿಟ್ಟಿದೆ.

Leave a Reply

Your email address will not be published. Required fields are marked *