ಕಾರ್ಮಿಕ ಸಂಘಗಳಲ್ಲಿ ಪಕ್ಷದ ಕೆಲಸ ಕುರಿತು 1952 ರ ಸಮಾವೇಶ

ಕಮ್ಯುನಿಸ್ಟ್ ಪಕ್ಷವು ಸ್ಥಾಪನೆಯಾದ ನಂತರ ಮೊಟ್ಟಮೊದಲ ಬಾರಿಗೆ ಕಾನೂನುಬದ್ಧವಾಗಿ ಕಾರ್ಯನಿರ್ವಹಿಸಲು ಅವಕಾಶ ದೊರೆತ ನಂತರ, ಕಾರ್ಮಿಕ ರಂಗದಲ್ಲಿ(ಮುಖ್ಯವಾಗಿ ಎಐಟಿಯುಸಿ, ಮತ್ತು ಇತರ ಕಾರ್ಮಿಕ ಸಂಘಗಳಲ್ಲಿ ಕೂಡ) ಕೆಲಸ ಮಾಡುತ್ತಿದ್ದ ಪಕ್ಷದ ಕಾರ್ಯಕರ್ತರ ಒಂದು ಸಮಾವೇಶವನ್ನು ಸಂಘಟಿಸಲಾಯಿತು. 1952 ರಲ್ಲಿ ಎರಡು ದಿನ ಕಲ್ಕತ್ತಾದಲ್ಲಿ ನಡೆದ ಸಮಾವೇಶದಲ್ಲಿ ಸುಮಾರು 300 ಸಂಗಾತಿಗಳು ಭಾಗವಹಿಸಿದರು, ಅಲ್ಲಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಪಕ್ಷದ ಧೋರಣೆ ಮತ್ತು ಕಾರ್ಮಿಕ ರಂಗದಲ್ಲಿ ಕೆಲಸ ಮಾಡುವಾಗ ಅನುಸರಿಸಬೇಕಾದ ವಿಧಾನಗಳ ಬಗ್ಗೆ ಚರ್ಚೆ ನಡೆದು ತೀರ್ಮಾನಿಸಲಾಯಿತು ಮತ್ತು ಕೆಲವು ನಿರ್ದೇಶನಗಳನ್ನು ನೀಡಲಾಯಿತು. ಆ ಸಮಾವೇಶದಲ್ಲಿ ಅಂಗೀಕರಿಸಲಾದ ದಸ್ತಾವೇಜಿನ ಕೆಲವು ಅಂಶಗಳನ್ನು ಈ ಕೆಳಗೆ ನೀಡಲಾಗಿದೆ: 

Communist100 File copy
ಶತಮಾನೋತ್ಸವ ಲೇಖನಮಾಲೆ-೪೪

“ನಮ್ಮ ಕಾರ್ಮಿಕ ಸಂಘದ ಕಾರ್ಯನಿರ್ವಾಹಕರು ಕೊನೇ ಪಕ್ಷ ನಮ್ಮ ಹೋರಾಟದ ಹಾಗೂ ಸಾಧನೆಗಳ ಸ್ಥೂಲಚಿತ್ರಣವನ್ನು ತಿಳಿದಿರಬೇಕು ಮತ್ತು ಆ ಮೂಲಕ ಕಾರ್ಮಿಕರಿಗೆ ಆತ್ಮವಿಶ್ವಾಸ, ವರ್ಗಪ್ರಜ್ಞೆ ಮತ್ತು ಗೆಲುವಿನ ಕಣ್ಣೋಟ ನೀಡಬಹುದು ಮತ್ತು ಪ್ರಸ್ತುತ ಹೋರಾಟಗಳಿಗೆ ಸಹಾಯವಾಗುವಂತೆ ಹಿಂದಿನ ಅನುಭವಗಳನ್ನು ಚಿತ್ರಿಸಬಹುದು…. ನಮ್ಮ ಶತ್ರು ಇತಿಹಾಸವನ್ನು ತಿರುಚುತ್ತಾನೆ ಮತ್ತು ಕಾರ್ಮಿಕನ ದಾರಿ ತಪ್ಪಿಸುತ್ತಾನೆ. ಈ ತಿರುಚುವಿಕೆಯನ್ನು ಎದುರಿಸಲು ನಮಗೆ ಸಾಧ್ಯವಾಗಬೇಕು.

“ನಮ್ಮ ಕಾರ್ಮಿಕರು ಉತ್ಪಾದಿಸುವ ಉತ್ಪನ್ನಗಳ ಮಾರುಕಟ್ಟೆಯನ್ನು, ಅಲ್ಲಿ ಅವುಗಳ ಬೆಲೆಯನ್ನು, ಅವುಗಳ ಏರಿಳಿಕೆಯ ಕಾರಣಗಳನ್ನು ನಮ್ಮ ಕಾರ್ಮಿಕ ಸಂಘದ ಕಾರ್ಯನಿರ್ವಾಹಕ ತಿಳಿದಿರಬೇಕು. ಅದರ ಅವಶ್ಯಕತೆ ಏಕಿದೆಯೆಂದರೆ ಬೆಲೆ ಏರಿಕೆಗೆ ನಮ್ಮ ಸಂಬಳಗಳೇ ಕಾರಣ ಎಂದು ಕಾರ್ಮಿಕನ ವಿರುದ್ಧ ಸಾರ್ವಜನಿಕ ಗ್ರಾಹಕರನ್ನು ಎತ್ತಿಕಟ್ಟಲು ಮತ್ತು ಪಟ್ಟಣಗಳ ಕಾರ್ಮಿಕರು ಹಾಗೂ ಗ್ರಾಮೀಣ ಪ್ರದೇಶದ ರೈತರ ನಡುವೆ ವೈಷಮ್ಯವನ್ನು ಹುಟ್ಟುಹಾಕಲು ಸರ್ಕಾರ ಹಾಗೂ ಬಂಡವಾಳಶಾಹಿಗಳು ಪ್ರಯತ್ನಿಸುತ್ತಾರೆ.

“ನಮ್ಮ ಕಾರ್ಮಿಕ ಸಂಘದ ಕಾರ್ಯನಿರ್ವಾಹಕರು ಕನಿಷ್ಠ ಪಕ್ಷ ತಾವು ನಡೆಸುತ್ತಿರುವ ಸಂಘದ ಉದ್ದಿಮೆಯ ಮೂಲ ತಾಂತ್ರಿಕ ವಿವರಗಳನ್ನು ತಿಳಿದುಕೊಂಡಿರಬೇಕು; ಈ ಮೂಲಕ ಸಂಬಳಗಳು ಹಾಗೂ ಕೆಲಸದ ಹೊರೆ, ಕೆಲಸದ ವೇಗ ಹಾಗೂ ಕೂಲಿಯ ದರ ಮುಂತಾದ ಪ್ರಶ್ನೆಗಳ ಬಗ್ಗೆ ಸರಿಯಾಗಿ ಅರಿಯಬಹುದು ಮತ್ತು ಅವುಗಳನ್ನು ಯಥಾರ್ಥವಾಗಿ ನಿರೂಪಿಸಬಹುದು. ಆ ಉದ್ದಿಮೆಯಲ್ಲಿರುವ ಕಾರ್ಮಿಕನೇ ಈ ವಿಷಯದಲ್ಲಿ ನಿಜವಾದ ಶಿಕ್ಷಕ. ಆ ಕಾರ್ಮಿಕನಿಂದ ಕಲಿಯುವುದನ್ನು ನಾವು ಕಡೆಗಣಿಸಬಾರದು.

“ಕೈಗಾರಿಕಾ ವಿಷಯಗಳ ಕಾನೂನನ್ನು ಅನ್ವಯಿಸುವ ಬಗ್ಗೆ ಕೂಡ ನಮ್ಮ ಕಾರ್ಮಿಕ ಸಂಘದ ಕಾರ್ಯನಿರ್ವಾಹಕರು ಗಂಭೀರವಾದ ಗಮನವನ್ನು ನೀಡಲೇಬೇಕು. ಎಲ್ಲಾ ಕಾನೂನುಗಳು ಕಾರ್ಮಿಕ ವರ್ಗದ ಮೇಲೆ ದಾಳಿ ಮಾಡುತ್ತವೆ ಎಂದು ಭಾವಿಸುವ, ಒಟ್ಟಾರೆಯಾಗಿ ಅವುಗಳ ವಿರುದ್ಧ ಹೋರಾಡುವುದು ಬಿಟ್ಟು ಬೇರೇನೂ ಗಮನ ನೀಡುವ ಅಗತ್ಯವಿಲ್ಲ ಎಂಬ ಪ್ರವೃತ್ತಿ ಇದೆ. ಆದರೆ ಎರಡು ರೀತಿಯ ಕಾನೂನುಗಳಿವೆ ಎನ್ನುವುದನ್ನು ಮರೆಯಲಾಗಿದೆ. ಒಂದು ನಾವು ಗಳಿಸಿರುವಂತವುಗಳು, ಅವುಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸುವುದು, ಅದರ ಉಸ್ತುವಾರಿ ಮಾಡುವುದು, ಮತ್ತು ಅನ್ವಯಗೊಳಿಸುವುದು ಕಾರ್ಮಿಕ ಸಂಘಗಳ ಕೆಲಸವಾಗಬೇಕು… ಮತ್ತು ಕಾರ್ಮಿಕ ವರ್ಗದ ಹಿತಾಸಕ್ತಿಗಳ ವಿರುದ್ಧ ಇರುವಂತಹ ಕಾನೂನುಗಳ ವಿರುದ್ಧ ಹೋರಾಡುವ ಸುತ್ತ ಕಾರ್ಮಿಕ ವರ್ಗದ ಚಳುವಳಿಯನ್ನು ನಾವು ಕಟ್ಟಬೇಕು.

“ನಮ್ಮ ಕಾರ್ಮಿಕ ಸಂಘದ ಕಾರ್ಯ ನಿರ್ವಾಹಕನು ಸಮಾಜ ಸೇವೆ, ಸಹಕಾರ ಮತ್ತು ಕಲ್ಯಾಣ ಕಾರ್ಯ, ಮತ್ತು ಕಾರ್ಮಿಕ ವರ್ಗದ ಸಾಂಸ್ಕೃತಿಕ ಅಗತ್ಯಗಳನ್ನು ಕಡೆಗಣಿಸಬಾರದು. ಅಂತಹ ಎಲ್ಲಾ ಚಟುವಟಿಕೆಗಳಿಗೆ ‘ಪರಿಷ್ಕರಣವಾದಿ’ ಎಂಬ ಹಣೆಪಟ್ಟಿ ಕಟ್ಟುವ ಪ್ರವೃತ್ತಿ ಇದ್ದವು ಮತ್ತು ಇವತ್ತಿಗೂ ಅವು ಅಸ್ತಿತ್ವದಲ್ಲಿವೆ… ಕಾರ್ಮಿಕರಿಗೆ ಉತ್ತಮ ಮನರಂಜನೆ, ಒಳ್ಳೆಯ ಸಾಂಸ್ಕೃತಿಕ ಶಿಕ್ಷಣವನ್ನು ಸಂಘಟಿಸುವುದು ಕಾರ್ಮಿಕ ಸಂಘದ ಕೆಲಸವಾಗಿದೆ. 

“ತನ್ನ ಕಾರ್ಮಿಕ ಸಂಘ ಹಾಗೂ ಉದ್ದಿಮೆಯಲ್ಲಿನ ಕಾರ್ಮಿಕರ ಜಾತಿ ಹಾಗೂ ರಾಷ್ಟ್ರೀಯ ಮನೋಭಾವ, ಅವರ ಸಂಪ್ರದಾಯ ಮತ್ತು ಪರಂಪರೆಗಳು, ಬದುಕಿನ ಬಗೆಗಿನ ಅವರ ಧೋರಣೆ ಮತ್ತು ಜಾತಿ, ಕೋಮು, ಬುಡಕಟ್ಟು ಮತ್ತು ಭಾಷಾ ರಾಷ್ಟ್ರೀಯ ಕಲ್ಪನೆಗಳನ್ನು ಬಳಸಿ ಬಂಡವಾಳಶಾಹಿಯು ಹುಟ್ಟುಹಾಕುವ ವೈಷಮ್ಯಗಳ ಬಗ್ಗೆ ನಮ್ಮ ಕಾರ್ಮಿಕ ಸಂಘದ ಕಾರ್ಯ ನಿರ್ವಾಹಕ ತಿಳಿದಿರಬೇಕು.

“ಬಂಡವಾಳಶಾಹಿಯ ದುಡಿಮೆಯ ಚಕ್ರದಡಿ ಕಾರ್ಖಾನೆಗೆ ಬರುವ ಕಾರ್ಮಿಕನು, ಅವನ ಜತೆಯಲ್ಲಿ ತನ್ನ ಬುಡಕಟ್ಟು, ಜಾತಿ, ಹಳ್ಳಿ, ಧರ್ಮ ಮುಂತಾದ ನಿಷ್ಠೆ ಹಾಗೂ ತನ್ನೆಲ್ಲಾ ಭಾವನಾತ್ಮಕ ಕಲ್ಪನೆಗಳನ್ನು, ಸಂಪ್ರದಾಯಗಳನ್ನು, ಪರಂಪರೆಗಳನ್ನು ಹೊತ್ತು ತಂದಿರುತ್ತಾನೆ. ಈ ಹೊಸ ವರ್ಗದ ನಡೆನುಡಿಗಳನ್ನು ಮೈಗೂಡಿಸಿಕೊಳ್ಳಲು ಅವರಿಗೆ ಬಹಳ ಕಾಲ ಹಿಡಿಯುತ್ತದೆ. ವಾಸ್ತವದಲ್ಲಿ, ಜಾತಿ, ಹಳ್ಳಿ ಅಥವಾ ರಾಷ್ಟ್ರೀಯತೆಯ ಕಟ್ಟುಪಾಡುಗಳು ಅವನ ಅನಾರೋಗ್ಯ, ಕೌಟುಂಬಿಕ ಕಷ್ಟಗಳು ಮತ್ತಿತರ ಅವಶ್ಯಕತೆಗಳ ಸಮಯದಲ್ಲಿ ಅವನ ಪರವಾಗಿ ರಕ್ಷಣೆ ಒದಗಿಸಿರುತ್ತವೆ. ತನ್ನ ಕಷ್ಟಗಳಿಗೆ ಸಂಘದತ್ತ ಮುಖ ಮಾಡುವುದನ್ನು ಕಲಿಯುವ ಮೊದಲು ಅವನು ತನ್ನ ಧಾರ್ಮಿಕ ಸಂಸ್ಥೆಗಳತ್ತ ತಿರುಗುತ್ತಾನೆ. ಅವನ ಈ ಸಂಬಂಧಗಳ ಮೌಲ್ಯಮಾಪನ ಮಾಡುವುದನ್ನು ಮತ್ತು ಅವನ ಹೊಸ ವರ್ಗದ ಅಗತ್ಯಗಳಿಗೆ ಮತ್ತು ನಿಷ್ಠೆಗಳಿಗೆ ಕತ್ತರಿ ಹಾಕದಂತೆ ಅವುಗಳನ್ನು ಹೇಗೆ ತಡೆಯಬೇಕು ಎನ್ನುವುದನ್ನು ನಾವು ಕಲಿಯಬೇಕು. ಅವನ ಶೋಷಕನು ತನ್ನೆಲ್ಲಾ ಜಾತಿ, ಬುಡಕಟ್ಟು, ರಾಷ್ಟ್ರ ಮತ್ತು ಧರ್ಮಗಳನ್ನು ಮೀರಿ ಅವನ ಮೇಲೆ ನಿಂತಿರುವಾಗ ಒಬ್ಬ ಶೋಷಿತ ಮನುಷ್ಯನಾಗಿ ಕಾರ್ಮಿಕನಲ್ಲಿ ವರ್ಗ ದೃಷ್ಟಿಕೋನ, ಸೌಹಾರ್ದ ಮತ್ತು ಕಾರ್ಮಿಕ ಸಂಘದ ಐಕ್ಯತೆಯನ್ನು ಕಟ್ಟಿ ಬೆಳೆಸುವ ಕೆಲಸಕ್ಕೆ ಆ ಕಾರ್ಮಿಕನಲ್ಲಿರುವ ಜಾತಿ, ರಾಷ್ಟ್ರ, ಬುಡಕಟ್ಟನ್ನು ಸಂಯೋಜಿಸಿಕೊಳ್ಳಲು ಸಾಧ್ಯವಾಗಬೇಕು.

“ಮಹಿಳಾ ಕಾರ್ಮಿಕರು ನಮ್ಮ ಅರ್ಥವ್ಯವಸ್ಥೆಯ ಸನ್ನಿವೇಶದಲ್ಲಿ ಕೇವಲ ಕಾರ್ಮಿಕಳಾಗಿ ಮಾತ್ರವಲ್ಲದೇ ಒಬ್ಬ ಮಹಿಳೆಯಾಗಿ, ಅವರ ಮೇಲೆ ವಿಶೇಷ ಸಂಕಷ್ಟಗಳನ್ನು ಹೊರಿಸಿರುವುದರಿಂದಾಗಿ, ಕಾರ್ಮಿಕ ಸಂಘದ ಕಾರ್ಯನಿರ್ವಾಹಕರು ಸಮಾನ ಕೆಲಸಕ್ಕೆ ಸಮಾನ ವೇತನ, ದುಡಿಯುವ ಮಹಿಳೆಯರ ಹೆರಿಗೆ ಸೌಲಭ್ಯಗಳು, ಅವರ ಮಕ್ಕಳ ಆರೈಕೆ ಮುಂತಾದ ಮಹಿಳಾ ಕಾರ್ಮಿಕರ  ಸಮಸ್ಯೆಗಳ ಬಗ್ಗೆ ವಿಶೇಷ ಗಮನ ಹರಿಸಬೇಕು. ಯುವ ಕಾರ್ಮಿಕರಿಗೆ ಸಂಬಂಧಪಟ್ಟಂತೆ ಅವರ ಕೆಲಸದ ಅವಧಿಯ ನಂತರದ ತರಬೇತಿ ಕಾನೂನುಗಳು, ಶಿಕ್ಷಣ, ಕ್ರೀಡೆಗಳು ಮತ್ತಿತರ ಪ್ರಶ್ನೆಗಳ ಬಗ್ಗೆಯೂ ವಿಶೇಷ ಗಮನ ಹರಿಸಬೇಕು.

“ಉದ್ಯೋಗಿಗಳು ಮತ್ತು ನಿರುದ್ಯೋಗಿಗಳ ನಡುವಿನ ಐಕ್ಯತೆಯನ್ನು ಬೆಳೆಸಲು ನಾವು ಕಲಿಯಬೇಕು ಏಕೆಂದರೆ ಅವರಿಬ್ಬರ ಸಮಾನ ಶೋಷಕನು ತನ್ನ ಗುರಿ ಸಾಧಿಸಿಕೊಳ್ಳಲು ಅವರನ್ನು ಪರಸ್ಪರ ಎತ್ತಿಕಟ್ಟಲು ನೋಡುತ್ತಿರುತ್ತಾನೆ.

“ಕಾರ್ಮಿಕರ ಹೋರಾಟಗಳನ್ನು ಮುನ್ನಡೆಸಲು ಕಾರ್ಖಾನೆಗಳಲ್ಲಿರುವ ನಿರ್ಭೀತ ಹಾಗೂ ಸಮರಶೀಲ, ಜಾಗರೂಕ ಹಾಗೂ ಜಾಣರಾದ  ಹೊಸ ಕಾರ್ಯಕರ್ತರನ್ನು ಕಾರ್ಮಿಕರ ಹೋರಾಟಗಳಿಗೆ ನೇತೃತ್ವ ನೀಡುವಂತೆ ಹೇಗೆ ಬೆಳೆಸಬೇಕು ಎನ್ನುವುದನ್ನು ನಾವು ಕಲಿಯಬೇಕು.

“ಜನಸಮೂಹಕ್ಕಿಂತ ಬಹಳ ಮುಂದೆ ಹೋಗದಿರುವುದು ಅಥವಾ ಬಹಳ ಹಿಂದೆ ಬೀಳದಿರುವುದು ಹೇಗೆ ಎನುವುದನ್ನು ನಮ್ಮ ಕಾರ್ಮಿಕ ಸಂಘದ ಕಾರ್ಯನಿರ್ವಾಹಕ ಕಲಿಯಬೇಕು. ಅನುಭವವಿಲ್ಲದ ಜನಸಮೂಹವನ್ನು ಅವನು ಕೆಲವು ಬಾರಿ ನಿಯಂತ್ರಿಸಬೇಕಾಗುತ್ತದೆ, ಮತ್ತೆ ಕೆಲವು ಬಾರಿ, ಅವರನ್ನು ಸರಿಯಾದ ಕಾರ್ಯಾಚರಣೆಗೆ ಹುರಿದಂಬಿಸಬೇಕಾಗುತ್ತದೆ.

“ಸಾಮೂಹಿಕ ಹೋರಾಟದ ತಂತ್ರಗಳನ್ನು ಹಿಂದಿನ ಅನುಭವಗಳ ಮೂಲಕ ನಮ್ಮ ಟಿ.ಯು. ಕಾರ್ಯ ನಿರ್ವಾಹಕ ತಿಳಿದುಕೊಳ್ಳಬೇಕು. ಹೋರಾಟಗಳ ಸ್ಥಳೀಯ ಪರಂಪರೆಗಳನ್ನು ಮತ್ತು ಅಲ್ಲಿಯ ಶಕ್ತಿಗಳನ್ನು ತಿಳಿಯಬೇಕು ಮತ್ತು ಅವರಿಂದ ಕಲಿಯಬೇಕು ಕೂಡ. ಕೆಲವು ಸಾಮಾನ್ಯ ಸಂದರ್ಭಗಳನ್ನು ಹೊರತುಪಡಿಸಿದರೆ ಹೋರಾಟದ ಸಿದ್ಧ ಮಾದರಿಯ ನಿಯಮಗಳು ಪ್ರಯೋಜನಕ್ಕೆ ಬಾರವು.

“ಕಾರ್ಖಾನೆಯು ಗ್ರಾಮೀಣ ಪ್ರದೇಶದಲ್ಲಿದ್ದರೆ ನಮ್ಮ ಟಿ.ಯು. ಕಾರ್ಯನಿರ್ವಾಹಕನು ಸುತ್ತಮುತ್ತಲಿರುವ ರೈತರನ್ನು ತಿಳಿದುಕೊಳ್ಳಬೇಕು. ಅಂತಹ ಪ್ರದೇಶಗಳಲ್ಲಿ ಕಾರ್ಮಿಕನು ಹಳ್ಳಿಯಲ್ಲಿಯೇ ಜೀವಿಸುತ್ತಾನೆ ಮತ್ತು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುತ್ತಾನೆ. ಅಂತಹ ಸಂದರ್ಭಗಳಲ್ಲಿ, ಮುಷ್ಕರದ ಹೋರಾಟಗಳು ಸುತ್ತಮುತ್ತಲ ರೈತರಿಗೆ ನೇರವಾಗಿ ತಳಕುಹಾಕಿಕೊಂಡಿರುತ್ತವೆ. ರೈತರ ಸಹಾಯವನ್ನು ಹೇಗೆ ಪಡೆದುಕೊಳ್ಳಬೇಕು ಹಾಗೂ ಅವರಿಗೆ ನಾವು ಹೇಗೆ ಸಹಾಯ ಮಾಡಬಹುದು ಎನ್ನುವುದನ್ನು ನಾವು ಕಲಿತುಕೊಳ್ಳಬೇಕು. ಸಕ್ಕರೆ ಪ್ಲಾಂಟೇಷನ್ನುಗಳಲ್ಲಿ, ಟೀ ತೋಟಗಳಲ್ಲಿ, ಗಣಿಗಾರಿಕೆಯಲ್ಲಿ ಮತ್ತು ಅಗ್ಗದ ಶ್ರಮ ಮತ್ತು ಕಡಿಮೆ ಬೆಲೆಯ ಜಮೀನು ಪಡೆಯಲು ಹೊಸ ಕಾರ್ಖಾನೆಗಳನ್ನು ಒಳನಾಡುಗಳಲ್ಲಿ ಹರಡಿಸುತ್ತಿರುವಾಗ ರೈತರ ಅನುಕಂಪ ಮತ್ತು ಅವರ ನಂಟು ಟಿ.ಯು.ಹೋರಾಟಗಳ ಯಶಸ್ಸಿಗೆ ಬಹು ಮುಖ್ಯವಾದ ಅಂಶಗಳಾಗುತ್ತವೆ.

“ಮಾರ್ಕ್ಸ್ ವಾದದ ಒಟ್ಟಾರೆ ಜಾಗತಿಕ ಕಣ್ಣೋಟವನ್ನು ನಮ್ಮ ಟಿ.ಯು. ಕಾರ್ಯ ನಿರ್ವಾಹಕ ಹೊಂದಿರಬೇಕು.

“ಜನಸಮೂಹದೊಂದಿಗೆ ಸಭ್ಯವಾಗಿ ಹಾಗೂ ತಾಳ್ಮೆಯಿಂದ ಇರಬೇಕು, ತಾನೇ ಸ್ವತಃ ಅಂತ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು ನಮ್ಮ ಟಿ.ಯು. ಕಾರ್ಯನಿರ್ವಾಹಕ. ಶತೃಗಳೊಂದಿಗೆ ರಾಜಿ ಸಂಧಾನ ಹಾಗೂ ಮಾತುಕತೆಯ ಸಂದರ್ಭದಲ್ಲಿ ಅವರೊಂದಿಗೆ ಮಾತುಕತೆ ಮಾಡುವಾಗ ಹಾಗೂ ವ್ಯವಹರಿಸುವಾಗ ನಯನಾಜೂಕು ಹಾಗೂ ಘನತೆಯಿಂದ ನಡೆದುಕೊಳ್ಳಬೇಕು, ಅದೇ ಸಮಯದಲ್ಲಿ ತಮ್ಮ ನಿಲುವುಗಳಲ್ಲಿ ಕಟುವಾಗಿ ಮತ್ತು ದೃಢವಾಗಿರಬೇಕು. ಒರಟುತನವು ವರ್ಗ ಹೋರಾಟದ ಗುಣಲಕ್ಷಣವಲ್ಲ.

“ಅಂತಹ ಕಾರ್ಯನಿರ್ವಾಹಕನನ್ನು ಮುಂದೆ ತರುವಲ್ಲಿ ನಾವು ಯಶಸ್ವಿಯಾದರೆ ಮತ್ತು ಕಾರ್ಮಿಕರ ಹಿತಾಸಕ್ತಿಯನ್ನು ಧೈರ್ಯವಾಗಿ ಪ್ರತಿಪಾದಿಸಿದರೆ, ಹುಸಿ ಪಂಥೀಯ ಎದೆಗಾರಿಕೆಯಿಂದ ಅಥವಾ ಆತ್ಮವಿಶ್ವಾಸದ ಕೊರತೆಯ ಪರಿಷ್ಕರಣವಾದದಿಂದ ಆತುರದ ತೀರ್ಮಾನಕ್ಕೆ ಬರದಿದ್ದರೆ, ನಾವು ನಮ್ಮ ಟಿ.ಯು. ಚಳುವಳಿಯನ್ನು ಪುನಶ್ಚೇತನ ಗೊಳಿಸಬಹುದು, ಎಲ್ಲಾ ವಿಷಯಗಳ ಮೇಲೆಯೂ ಜನಹೋರಾಟಕ್ಕೆ ನಾವು ನಾಯಕತ್ವ ನೀಡಬಹುದು ಮತ್ತು ಕಾರ್ಮಿಕರ ಹಾಗೂ ಜನರ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಹಾದಿಯಲ್ಲಿ ಹೋಗಬಹುದು.

“ಈ ಕಾರ್ಯಗಳನ್ನು ಮುಂದೆ ಕೊಂಡೊಯ್ಯುವಾಗ, ಕಾರ್ಮಿಕ ವರ್ಗದ ಹಾಗೂ ಕಾರ್ಮಿಕ ಸಂಘಟನೆಗಳ ಐಕ್ಯತೆಯನ್ನು ಬೆಳೆಸುವುದು ಬಹು ಮುಖ್ಯ ಅಂಶವಾಗುತ್ತದೆ, ಜತೆಯಲ್ಲೇ ಆಳುವ ವರ್ಗಗಳ ನಡೆಗಳೇನು, ಕಾರ್ಮಿಕ ವರ್ಗದ ಹೋರಾಟಗಳು ಹಾಗೂ ಸಾಧನೆಗಳು ಮತ್ತವುಗಳ ಪಾಠಗಳೇನು ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ, ಮೇಲೆ ಹೇಳಿದಂತೆ, ಪಕ್ಷ ಮತ್ತು ಅದರ ಮುಂದಾಳತ್ವದಲ್ಲಿನ ಹಾಗೂ ನಿರ್ದೇಶನದಲ್ಲಿನ ಕಾರ್ಮಿಕ ಸಂಘಗಳು ಹೇಗೆ ಕಾರ್ಯ ನಿರ್ವಹಿಸಿವೆ, ಎಲ್ಲಿ ಮತ್ತು ಹೇಗೆ ಅವುಗಳು ಸರಿಯಾಗಿ ನಡೆದುಕೊಂಡಿವೆ ಮತ್ತು ಎಲ್ಲಿ ಎಡವಿವೆ ಎಂಬುದನ್ನು ತಿಳಿದುಕೊಳ್ಳುವುದೂ ಕೂಡ ಅವಶ್ಯವಾಗಿದೆ.

“ಟಿ.ಯು. ಐಕ್ಯತೆಯನ್ನು ಬೆಳೆಸುವಾಗ, ಯಾವ ಸಂಘಟನಾತ್ಮಕ ಐಕ್ಯತೆಗಾಗಿ ನಾವು ಪ್ರಯತ್ನಿಸುತ್ತಿರುತ್ತೇವೋ ಆ  ಸಂಘಟನೆಗಳ ಹಾಗೂ ಅವುಗಳ ನಾಯಕತ್ವದ ಸ್ವಭಾವ ಲಕ್ಷಣಗಳನ್ನು ತಿಳಿದುಕೊಳ್ಳುವುದು ಕೂಡ ಅವಶ್ಯವಾಗಿರುತ್ತದೆ. ಕೆಳಗಿಂದ ಮೇಲೆ ಮತ್ತು ಮೇಲಿಂದ ಕೆಳಗೆ ಈ ಐಕ್ಯತೆಯನ್ನು ಸಾಧಿಸುವಾಗ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ನಿಯಮಗಳನ್ನು ರೂಪಿಸಬೇಕಾದ ಅವಶ್ಯಕತೆಯೂ ಇದೆ.

“ನಾವು ಎಸಗಬಹುದಾದ ತಪ್ಪುಗಳೇನು? ಜನಸಮೂಹದ ಜತೆ ಮತ್ತು ದೊಡ್ಡ ಮಟ್ಟದಲ್ಲಿ ಕಾರ್ಖಾನೆಗಳ ಒಳಗೆ ನೇರವಾಗಿ ಕೆಲಸ ಮಾಡುತ್ತಿರುವ ಸಂಘಟಿತ ಕಾರ್ಯಕರ್ತರ ಜತೆ ಜೀವಂತ ಸಂಪರ್ಕ ಇಟ್ಟುಕೊಳ್ಳದೇ ಇದ್ದರೆ ಕಾರ್ಮಿಕರ ನಾಡಿಯನ್ನು ಅರಿಯಲು ಮತ್ತು ಅವರ ನಿರ್ದಿಷ್ಟವಾದ ಸಂಕಟ ದುಃಖಗಳೇನು ಎಂದು ತಿಳಿಯಲು ನಮಗೆ ಸಾಧ್ಯವಾಗುವುದಿಲ್ಲ. ಆದಕಾರಣ, ತಮ್ಮ ಹೋರಾಟದಲ್ಲಿ ಮುಂದಾಳತ್ವ ವಹಿಸಲಿ ಎಂದು ಜನಸಮೂಹ ಬಯಸುವಾಗ ನಾವು ತ್ವರಿತವಾಗಿ ಸ್ಪಂದಿಸುವುದಿಲ್ಲ. ಇದನ್ನು ನಾವು ಕಾರ್ಖಾನೆಗಳಿಗೆ ಪ್ರವೇಶ ಸಿಗದಿದ್ದಾಗ ಅವರ ವಸತಿ ಪ್ರದೇಶಗಳಲ್ಲಿ ಮತ್ತು ಮಾನ್ಯತೆ ಇಲ್ಲದಿದ್ದಾಗ್ಯೂ ನಮ್ಮ ಟಿ.ಯು. ಸದಸ್ಯತ್ವದಿಂದಾಗಿ ಪ್ರವೇಶ ಪಡೆಯಲು ಸಾಧ್ಯವಾಗುವ ಕಾರ್ಖಾನೆಗಳಲ್ಲಿ ಪ್ರಾಮಾಣಿಕವಾಗಿ ಸಾಮೂಹಿಕ ಮಟ್ಟದಲ್ಲಿ ಮಾಡುವ ಮೂಲಕ ಮಾತ್ರವೇ ಸರಿಪಡಿಸಬಹುದು.

“ಎಲ್ಲಾ ಟಿ.ಯು. ಕಾರ್ಯಕರ್ತರು ಮೊಹಲ್ಲಾ-ಬಸ್ತಿ ಅಥವಾ ಕಾರ್ಖಾನೆ ಸಂಪರ್ಕಗಳ ಮೂಲಕ ಕಾರ್ಮಿಕರು, ಉದ್ಯೋಗಿಗಳು ಮತ್ತು ನಿರುದ್ಯೋಗಿಗಳ ಜತೆ ನಿಕಟ ಸಂಪರ್ಕ ಹೊಂದಿರಬೇಕು.

“ಕಾರ್ಮಿಕರ ಬದುಕಿನ ಎಲ್ಲಾ ಆಯಾಮಗಳನ್ನು ಒಳಗೊಂಡಂತೆ ಟಿ.ಯು.ರಂಗದಲ್ಲಿನ ದಿನನಿತ್ಯದ ಕನಿಷ್ಠ ಕೆಲಸಗಳನ್ನು ಕಾರ್ಯಕರ್ತರು ರೂಪಿಸಿಕೊಳ್ಳಬೇಕು. ಆಹಾರ ಪರಿಸ್ಥಿತಿ ಮತ್ತು ಬಿಕ್ಕಟ್ಟು ಹಾಗೂ ಜನಸಮೂಹದ ದಿನನಿತ್ಯದ ಬೇಡಿಕೆಗಳ ಬಗ್ಗೆ ಅವರ ಪ್ರತಿಕ್ರಿಯೆಗಳೇನು, ಅವರ ಮನಸ್ಸಿನಲ್ಲಿ ಏನಿದೆ ಎನ್ನುವುದನ್ನು ಕಾರ್ಯಕರ್ತರು  ಜಾಡು ಹಿಡಿಯಬೇಕು.

“ಪ್ರತಿಯೊಂದು ಉದ್ಯಮ ಮತ್ತು ಕೈಗಾರಿಕೆಗಳಲ್ಲಿನ ಬೇಡಿಕೆಗಳನ್ನು ಜಾಗರೂಕತೆಯಿಂದ ರೂಪಿಸಬೇಕು. ತರ್ಕಬದ್ಧವಲ್ಲದ ಮಿತಿ ಮೀರಿದ ಬೇಡಿಕೆಗಳ ಪ್ರತಿಪಾದನೆಯನ್ನು ದೂರವಿಡಬೇಕು.

“ಹೋರಾಟವನ್ನು ಆರಂಭಿಸುವ ಮೊದಲು ಮತ್ತು ನಂತರ ನಮ್ಮ ಪರವಾಗಿ ಜನಾಭಿಪ್ರಾಯವನ್ನು -ಕಾರ್ಮಿಕೇತರ ಜನಗಳ ಅಭಿಪ್ರಾಯವನ್ನು- ಮೂಡಿಸಬೇಕು. ಇದನ್ನು ವಿಶೇಷವಾಗಿ ಮುನಿಸಿಪಲ್ ಸೇವೆಗಳು, ಸಾರಿಗೆ,  ಸ್ಥಳೀಯ, ದೀಪವ್ಯವಸ್ಥೆ ಮುಂತಾದವುಗಳಲ್ಲಿ ಬಹಳ ಎಚ್ಚರಿಕೆಯಿಂದ ಮಾಡಬೇಕು. ಮುಷ್ಕರವು ಅರ್ಧ ದಿನವೋ ಅಥವಾ ಒಂದು ದಿನವೋ ಅಥವಾ ದೀರ್ಘಕಾಲದ್ದೋ ಎನ್ನುವುದು ಕಾರ್ಮಿಕರ ಸಿದ್ಧತೆ ಮತ್ತು ನಾಯಕತ್ವದ ಐಕ್ಯತೆಯನ್ನು ಅವಲಂಬಿಸುತ್ತದೆ…. ಕಾರ್ಮಿಕರ ಹಿತಾಸಕ್ತಿಯನ್ನು ರಕ್ಷಿಸುವುದು ಎಂದರೆ ಅದರಲ್ಲಿ ಪೋಲಿಸರ ಭಯೋತ್ಪಾದನೆ ಮತ್ತು ಮಾಲೀಕರ ಗುಂಪುಗಳ ಹಿಂಸೆಗಳಿಂದ ರಕ್ಷಣೆಯೂ ಒಳಗೊಂಡಿರುತ್ತವೆ. ಅದನ್ನು ಹೇಗೆ ಮಾಡುವುದು ಎನ್ನುವುದು ನಿರ್ದಿಷ್ಟ ಸನ್ನಿವೇಶ, ಅನುಭವಿಸಲು ಮತ್ತು ಕಾರ್ಯಾಚರಣೆ ಮಾಡಲು ಜನರ ಸಿದ್ಧತೆಯನ್ನು ಅವಲಂಬಿಸಿರುತ್ತದೆ. 

“ಕಾರ್ಮಿಕರ ಹೋರಾಟಗಳನ್ನು ರೈತರ ಹೋರಾಟಗಳೊಂದಿಗೆ ಹೇಗೆ ಜೋಡಿಸಬೇಕೆಂಬ ಪ್ರಶ್ನೆಯು ಪ್ರದೇಶ ಹಾಗೂ ಕೈಗಾರಿಕೆ ಮತ್ತು ಸಂಬಂಧಪಟ್ಟ ಕಾರ್ಮಿಕರ ಹಾಗೂ ರೈತರ ಸಂಘಟನಾತ್ಮಕ ಹಾಗೂ ಸೈದ್ಧಾಂತಿಕ ಸಿದ್ಧತೆಯ ಸ್ಥಿತಿಯನ್ನು ಅವಲಂಬಿಸಿರುತ್ತದೆ.

“ಎಷ್ಟೇ ಪ್ರಮಾಣದ ವಿವರವಾದ ನಿರ್ದೇಶನಗಳನ್ನು ಕೊಟ್ಟರೂ, ಅವು ಸಾಮೂಹಿಕ ಅನುಭವ ಮತ್ತು ಅದನ್ನು ಕಾರ್ಮಿಕ ಸಂಘಗಳನ್ನು ಕಟ್ಟುವಲ್ಲಿ ಮತ್ತು ಕಾರ್ಮಿಕ ವರ್ಗದ ಬೇಡಿಕೆಗಳನ್ನು ಸಮರ್ಥಿಸಿಕೊಳ್ಳುವಲ್ಲಿ ಬಳಸಿಕೊಳ್ಳುವ ಸಾಮರ್ಥ್ಯ ಹಾಗೂ ಕೌಶಲ್ಯಗಳ ಸ್ಥಾನವನ್ನು ಎಂದಿಗೂ ಪಡೆಯಲು ಸಾಧ್ಯವಿಲ್ಲ ಎನ್ನುವುದನ್ನು ನೆನಪಿನಲ್ಲಿಡಬೇಕು.”

ಕನ್ನಡಕ್ಕೆ: ಟಿ.ಸುರೇಂದ್ರ ರಾವ್

Leave a Reply

Your email address will not be published. Required fields are marked *