ಭಾರತೀಯ ಸಂಸತ್ತಿನ ಮೇಲೆ ಪ್ರಹಾರ-ದೇಶದ ಆಹಾರ ಭದ್ರತೆಗೆ ಸಂಚಕಾರ ರೈತರ ದೇಶವ್ಯಾಪಿ ಪ್ರತಿಭಟನಾ ಕಾರ್ಯಾಚರಣೆಗೆ ಸಿಪಿಐ(ಎಂ) ಬೆಂಬಲ

ಬಿಜೆಪಿ ಸರಕಾರ ಎಲ್ಲ ಸಂಸದೀಯ ವಿಧಾನಗಳನ್ನು ಉಲ್ಲಂಘಿಸಿ ಮತ್ತು ಸಂಸದ್‍ ಸದಸ್ಯರ ಹಕ್ಕನ್ನು ನಿರಾಕರಿಸಿ ಸಂಸತ್ತಿನಲ್ಲಿ ಬಲವಂತದಿಂದ ಶಾಸನಗಳಿಗೆ ಅಂಗೀಕಾರ ಪಡೆಯುತ್ತಿರುವ ರೀತಿಯನ್ನು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಬಲವಾಗಿ ಖಂಡಿಸಿದೆ. ದೇಶದ ಮೇಲೂ ಮತ್ತು ಜನತೆಯ ಮೇಲೂ ವಿನಾಶಕಾರಿ ಪರಿಣಾಮಗಳನ್ನು ಬೀರುವ ಶಾಸನಗಳನ್ನು ಚರ್ಚಿಸುವ ಮತ್ತು ಗಂಭೀರವಾಗಿ ಪರಿಶೀಲಿಸುವ ಸಂಸದ್‍ ಸದಸ್ಯರ ಹಕ್ಕನ್ನು  ವಂಚಿಸಲಾಗುತ್ತಿದೆ.

rajya-sabha-farm bills-2ಕೊವಿಡ್‍ ಮಹಾಸೋಂಕಿನ ಹರಡಿಕೆಯ ಬಗ್ಗೆ ಉಂಟಾಗಿರುವ ಗಂಭೀರ ಆತಂಕಗಳನ್ನು ದುರುಪಯೋಗ ಪಡಿಸಿಕೊಂಡು, ಈಗಾಗಲೇ ನಿರ್ಬಂಧಗೊಂಡಿರುವ  ಸಂಸದ್‍ ಅಧಿವೇಶನವನ್ನು ಮತ್ತಷ್ಟು ಕಡಿತಗೊಳಿಸಲಾಗಿದೆ ಮತ್ತು ಲಾಕ್‍ಡೌನ್‍ ಅವಧಿಯಲ್ಲಿ ಹೊರಡಿಸಿರುವ ಎಲ್ಲ 11 ಸುಗ್ರೀವಾಜ್ಞೆಗಳನ್ನು ಬಲವಂತದಿಂದ ಕಾನೂನುಗಳಾಗಿ ಮಾಡುವ ತರಾತುರಿಯಲ್ಲಿದೆ.

ಭಾರತೀಯ ಕೃಷಿ ಕುರಿತಾದ ಸುಗ್ರೀವಾಜ್ಞೆಗಳನ್ನು ಬಲವಂತದಿಂದ ಶಾಸನಗಳಾಗಿ ಮಾಡಲಾಗಿದೆ. ಇದಕ್ಕಾಗಿ ಸಂಸತ್ ಸದಸ್ಯರು ಇವನ್ನು ಚರ್ಚಿಸಲು ಅವಕಾಶವನ್ನೂ ಕೊಟ್ಟಿಲ್ಲ, ರಾಜ್ಯಸಭೆಯಲ್ಲಿ ಇದರ ಮೇಲೆ ಮತದಾನ ನಡೆಸಲೂ ಅದು ನಿರಾಕರಿಸಿದೆ. ಇದು ಅಭೂತಪೂರ್ವ ನಡೆ, ಪ್ರಜಾಪ್ರಭುತ್ವದ ಕೊಲೆಯೆಂದೇ ಹೇಳಬಹುದು ಎಂದು ಸಿಪಿಐ(ಎಂ) ಖಂಡಿಸಿದೆ.

ಸಂಸತ್ತಿನ ಮುಂದೆ ಮಂಜೂರಾತಿಗೆ ಬರುವ ಯಾವುದೇ ವಿಷಯದ ಬಗ್ಗೆ ಮತದಾನ ನಡೆಯಬೇಕು ಎಂದು ಕೇಳುವುದು ಪ್ರತಿಯೊಬ್ಬ ಸಂಸತ್‍ ಸದಸ್ಯರ ಪರಭಾರೆ ಮಾಡಲಾಗದ ಹಕ್ಕು. ಇದನ್ನು ಅತ್ಯಂತ ತಿರಸ್ಕಾರದಿಂದ ತುಳಿದು ಹಾಕಲಾಗಿದೆ. ಈ ಸುಗ್ರೀವಾಜ್ಞೆಗಳ ಮೇಲೆ ಮತದಾನ ನಡೆಸಬೇಕು ಎಂದು ಕೇಳಿರುವ 8 ರಾಜ್ಯಸಭಾ ಸದಸ್ಯರನ್ನು ಅಮಾನತುಗೊಳಿಸಲಾಗಿದೆ. ಇದು ಅತ್ಯಂತ ಖಂಡನೀಯ ರೀತಿ. ರಾಜ್ಯಸಭೆಯಲ್ಲಿ ಈ ಶಾಸನಗಳನ್ನು ಕುರಿತಂತೆ  ಬಿಜೆಪಿ/ಎನ್‍ಡಿಎಗೆ ಬಹುಮತ ಇರಲಿಲ್ಲ ಎಂಬುದು ಸ್ಪಷ್ಟ, ಏಕೆಂದರೆ ಎಲ್ಲ ಪ್ರತಿಪಕ್ಷಗಳೂ ಇದಕ್ಕೆ ವಿರುದ್ಧ ನಿಂತಿದ್ದವು. ಆದ್ದರಿಂದ ಈ ಹೊಸ ಶಾಸನಗಳು ನ್ಯಾಯಬಾಹಿರ, ಕಾನೂನುಬಾಹಿರ ಮತ್ತು ಭಾರತದ ರಾಷ್ಟ್ರಪತಿಗಳು ಈ ಶಾಸನಗಳನ್ನು ಭಾರತೀಯ ಸಂವಿಧಾನದ ಕಲಮು 111ರ ಅಡಿಯಲ್ಲಿ ಮರುಪರಿಶೀಲನೆಗೆ ರಾಜ್ಯಸಭೆಗೆ ಹಿಂದಕ್ಕೆ ಕಳಿಸಬೇಕಾಗಿದೆ ಎಂದು ಪೊಲಿಟ್‍ ಬ್ಯುರೊ ಹೇಳಿದೆ.

ಈ ಹೊಸ  ಕಾನೂನುಗಳು ಭಾರತದ ಕೃಷಿಯನ್ನು, ನಮ್ಮ ಉತ್ಪನ್ನಗಳನ್ನು ಮತ್ತು ನಮ್ಮ ಮಾರುಕಟ್ಟೆಗಳನ್ನು ವಿದೇಶೀ ಮತ್ತು ದೇಶೀ ಕೃಷಿ ವ್ಯಾಪಾರೀ ಕಾರ್ಪೊರೇಟ್‍ಗಳಿಗೆ ಹಸ್ತಾಂತರಿಸುತ್ತವೆ. ಇದು ನಮ್ಮ ರೈತರ ಮೇಲೆ  ಮತ್ತು ಜನತೆಯ ಮೇಲೂ ಸಂಕಟಗಳನ್ನು ಹೇರಿ ವಿದೇಶಿ ಮತ್ತು ದೇಶೀ ಕಾರ್ಪೊರೇಟ್‍ಗಳಿಗೆ ಸೂಪರ್‍ ಲಾಭಗಳನ್ನು ಕೊಳ್ಳೆ ಹೊಡೆಯುವ ಅಪಾರ ಸೌಕರ್ಯಗಳನ್ನು ಒದಗಿಸುತ್ತವೆ.  ಕನಿಷ್ಟ ಬೆಂಬಲ ಬೆಲೆಯನ್ನು ಖಂಡಿತವಾಗಿಯೂ ರದ್ದು ಮಾಡಲಾಗುವುದು. ಈಗಿರುವ ಕನಿಷ್ಟ ಬೆಂಬಲ ಬೆಲೆಗಳ ವ್ಯವಸ್ಥೆಯ ಅನುಷ್ಠಾನ ಕಳಪೆ ಮಟ್ಟದಲ್ಲಿದ್ದರೂ, ರೈತರಿಗೆ ಸ್ವಲ್ಪ ಮಟ್ಟಿಗಾದರೂ ಆದಾಯದ ಭದ್ರತೆಯನ್ನು ಒದಗಿಸುತ್ತಿತ್ತು. ಆವಶ್ಯಕ ಸರಕುಗಳ ಕಾಯ್ದೆಗೆ ತಿದ್ದುಪಡಿಗಳೊಂದಿಗೆ ದೊಡ್ಡ ಪ್ರಮಾಣದಲ್ಲಿ ಕಳ್ಳದಾಸ್ತಾನಿಗೆ ಅವಕಾಶವಾಗಿದ್ದು, ಇದು ದೇಶಕ್ಕೆ ಮತ್ತು ಜನತೆಗೆ ಆಹಾರದ ಕೃತಕ ಅಭಾವ ಮತ್ತು ಬೆಲೆಯೇರಿಕೆಯ ಬೆದರಿಕೆ ಒಡ್ಡುತ್ತದೆ. “ಭೂಮಿಸಂಚಯ”( ಲ್ಯಾಂಡ್‍ ಪೂಲಿಂಗ್) ಮತ್ತು ಕಾಂಟ್ರಾಕ್ಟ್ ‍ವ್ಯವಸ್ಥೆಯನ್ನು ಕಾನೂನಬದ್ಧಗೊಳಿಸುವ, ಕೃಷಿ ವ್ಯಾಪಾರಿ ಕಂಪನಿಗಳಿಗೆ ಸೌಕರ್ಯಗಳನ್ನು ಒದಗಿಸುವ ಪ್ರಸ್ತಾವಗಳು ಪಾರಂಪರಿಕ ಬೇಸಾಯವನ್ನು ಸಂಪೂರ್ಣವಾಗಿ ಧ್ವಂಸಗೊಳಿಸುತ್ತದೆ.

ಭಾರತದ ಆಹಾರ ಭದ್ರತೆ ಅಪಾಯದಲ್ಲಿದೆ ಎಂದು ಎಚ್ಚರಿಸಿರುವ ಸಿಪಿಐ(ಎಂ) ಪೊಲಿಟ್‍ ಬ್ಯುರೊ ರೈತ ಸಂಘಟನೆಗಳು ಸಪ್ಟಂಬರ್ 25ರಂದು ಒಂದು ರಾಷ್ಟ್ರವ್ಯಾಪಿ ಬೃಹತ್ ಪ್ರತಿಭಟನಾ ಕಾರ್ಯಾಚರಣೆಗೆ ನೀಡಿರುವ ಕರೆಗೆ ಬೆಂಬಲ ವ್ಯಕ್ತಪಡಿಸಿದೆ.

ಕೇಂದ್ರ ಸರಕಾರ ಭಾರತದ, ನಮ್ಮ ಅನ್ನದಾತರ ಮತ್ತು ಜನಗಳ ಆಹಾರ ಭದ್ರತೆಯ ಹಕ್ಕುಗಳ ಹಿತದೃಷ್ಟಿಯಿಂದ ಈ ಮಸೂದೆಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಸಿಪಿಐ(ಎಂ) ಆಗ್ರಹಿಸಿದೆ.

Leave a Reply

Your email address will not be published. Required fields are marked *