ಹೋರಾಟ ಮತ್ತು ತ್ಯಾಗ-ಬಲಿದಾನಗಳ ಒಂದು ಶತಮಾನ

ಸ್ವಾತಂತ್ರ್ಯ ಆಂದೋಲನದ ವಿವಿಧ ಧಾರೆಗಳ ಅತ್ಯುತ್ತಮ ಮತ್ತು ಅತ್ಯಂತ ಸಮರಧೀರ ಹೋರಾಟಗಾರರನ್ನು ಒಳಗೊಂಡ ಕಮ್ಯುನಿಸ್ಟ್ ಪಕ್ಷ ಕಾರ್ಮಿಕರು ಮತ್ತು ರೈತಾಪಿ ಜನಗಳ ಆರ್ಥಿಕ ಮತ್ತು ಸಾಮಾಜಿಕ ವಿಮೋಚನೆಯಾದರೆ ಮಾತ್ರವೇ ಪೂರ್ಣ ಸ್ವರಾಜ್ಯಕ್ಕೆ ಅರ್ಥ ಬರುತ್ತದೆ ಎಂದು ನಂಬಿತ್ತು. ಕಾರ್ಮಿಕ ವರ್ಗವನ್ನು ಕಾರ್ಮಿಕ ಸಂಘಗಳ ಮೂಲಕ ಮತ್ತು ರೈತಾಪಿ ಜನಗಳನ್ನು ಕಿಸಾನ್ ಸಭಾಗಳ ಮೂಲಕ ರಾಷ್ಟ್ರೀಯ ಆಂದೋಲನಕ್ಕೆ ಸೆಳೆಯುವಲ್ಲಿ ಕಮ್ಯುನಿಸ್ಟರು ಒಂದು ಮಹತ್ವದ ಪಾತ್ರ ವಹಿಸಿದರು. ಸ್ವಾತಂತ್ರ್ಯದ ನಂತರ, ಹೊಸ ಆಳುವ ವರ್ಗ ಪ್ರಜಾಪ್ರಭುತ್ವ ಕ್ರಾಂತಿಯ ಕಾರ್ಯಭಾರಗಳನ್ನು ಪೂರ್ಣಗೊಳಿಸದೆ ಅದಕ್ಕೆ ಬೆನ್ನು ತಿರುಗಿಸಿದಾಗ ಅದನ್ನು ಕಮ್ಯುನಿಸ್ಟರು ಮುಂದೊಯ್ಯುತ್ತಿದ್ದಾರೆ.

-ಪೀಪಲ್ಸ್ ಡೆಮಾಕ್ರಸಿ ಸಂಪಾದಕೀಯ

Communist Part 100 copyಅಕ್ಟೋಬರ್ 17, 2020 ಒಂದು ಚಾರಿತ್ರಿಕ ದಿನ. ಏಕೆಂದರೆ ಈ ದಿನ ಆಗಿನ ಸೋವಿಯೆತ್ ಒಕ್ಕೂಟದ ತಾಷ್ಕೆಂಟಿನಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ಮೊದಲ ಘಟಕ ರಚನೆಯಾಗಿ ನೂರು ವರ್ಷಗಳಾಗಿವೆ.

ಕಮ್ಯುನಿಸ್ಟ್ ಆಂದೋಲನದ ಒಂದು ಶತಮಾನ ಕಳೆದಿದೆ-ಇದು 20ನೇ ಶತಮಾನದ ಎಂಟು ದಶಕಗಳು ಮತ್ತು 21ನೇ ಶತಮಾನದ ಎರಡು ದಶಕಗಳಲ್ಲಿ ಹರಡಿರುವಂತದ್ದು. ಭಾರತದಲ್ಲಿ ಕಮ್ಯುನಿಸ್ಟ್ ಪಕ್ಷದ ಹುಟ್ಟು ಮತ್ತು ಬೆಳವಣಿಗೆ ಹಾಗೂ ಸ್ವಾತಂತ್ರ್ಯ ಹೋರಾಟ ಪರಸ್ಪರ ಹೆಣೆದುಕೊಂಡಿವೆ. ಸ್ವಾತಂತ್ರ್ಯ ಆಂದೋಲನದ ವಿವಿಧ ಧಾರೆಗಳ ಅತ್ಯುತ್ತಮ ಮತ್ತು ಅತ್ಯಂತ ಸಮರಧೀರ ಹೋರಾಟಗಾರರು ಕಮ್ಯುನಿಸ್ಟ್ ಪಕ್ಷವನ್ನು ಸೇರಿದರು. ಇದಕ್ಕೆ ಕಾರಣ ಅದರ ಕಟ್ಟಾ ಸಾಮ್ರಾಜ್ಯಶಾಹಿ-ವಿರೋಧಿ ಪಾತ್ರ. ಆರಂಭದಿಂದಲೇ ತೀವ್ರ ದಮನವನ್ನು ಎದುರಿಸಿದ ಸಾವಿರಾರು ಕಮ್ಯುನಿಸ್ಟರು ವರ್ಷಾನುಗಟ್ಟಲೆ ಜೈಲುವಾಸ ಅನುಭವಿಸಿದರು, ಹಲವರು ಪಾಳೆಯಗಾರಿ-ವಿರೋಧಿ ಮತ್ತು ಸಾಮ್ರಾಜ್ಯಶಾಹಿ-ವಿರೋಧಿ ಹೋರಾಟಗಳಲ್ಲಿ, ನಿರ್ದಿಷ್ಟವಾಗಿ ಮಹಾಯುದ್ಧಾ ನಂತರದ(1945-47) ಉತ್ಕ್ರಾಂತಿಯಲ್ಲಿ ಹುತಾತ್ಮರಾದರು.

ಆ ಸಮಯದ ದಮನ ಮತ್ತು ಕಮ್ಯುನಿಸ್ಟರ ತ್ಯಾಗ-ಬಲಿದಾನದ ಪ್ರಮಾಣವೆಷ್ಟು ಎಂಬುದರ ಒಂದು ಇಣುಕುನೋಟ ಮುಂಬೈಯಲ್ಲಿ ಪಕ್ಷದ ಮೊದಲ ಮಹಾಧಿವೇಶನದಲ್ಲಿ ಭಾಗವಹಿಸಿದ 138 ಪ್ರತಿನಿಧಿಗಳು ಒಟ್ಟು 414 ವರ್ಷಗಳ ಜೈಲುವಾಸ ಅನುಭವಿಸಿದ್ದರು ಎಂಬ ಸಂಗತಿಯಲ್ಲಿ ಸಿಗುತ್ತದೆ.

ಕಾರ್ಮಿಕರು ಮತ್ತು ರೈತಾಪಿ ಜನಗಳ ಆರ್ಥಿಕ ಮತ್ತು ಸಾಮಾಜಿಕ ವಿಮೋಚನೆಯಾದರೆ ಮಾತ್ರವೇ ಪೂರ್ಣ ಸ್ವರಾಜ್ಯಕ್ಕೆ ಅರ್ಥ ಬರುತ್ತದೆ ಎಂದು ಕಮ್ಯುನಿಸ್ಟರು ನಂಬಿದ್ದರು. ಕಾರ್ಮಿಕ ವರ್ಗವನ್ನು ಕಾರ್ಮಿಕ ಸಂಘಗಳ ಮೂಲಕ ಮತ್ತು ರೈತಾಪಿ ಜನಗಳನ್ನು ಕಿಸಾನ್ ಸಭಾಗಳ ಮೂಲಕ ರಾಷ್ಟ್ರೀಯ ಆಂದೋಲನಕ್ಕೆ ಸೆಳೆಯುವಲ್ಲಿ ಅವರು ಒಂದು ಮಹತ್ವದ ಪಾತ್ರ ವಹಿಸಿದರು.

ಸ್ವಾತಂತ್ರ್ಯದ ನಂತರ, ಹೊಸ ಆಳುವ ವರ್ಗ-ಬಂಡವಾಳಶಾಹಿ-ಭೂಮಾಲಕ ಮೈತ್ರಿ- ಪ್ರಜಾಪ್ರಭುತ್ವ ಕ್ರಾಂತಿಯ ಕಾರ್ಯಭಾರಗಳನ್ನು ಪೂರ್ಣಗೊಳಿಸದೆ ಅದಕ್ಕೆ ಬೆನ್ನು ತಿರುಗಿಸಿದರು. ದೊಡ್ಡ ಬಂಡವಾಳಶಾಹಿಗಳ ನೇತೃತ್ವದ ಬಂಡವಾಳಶಾಹಿ-ಭೂಮಾಲಕ ಮೈತ್ರಿಯು ಪ್ರಭುತ್ವ ಶಕ್ತಿಯನ್ನು ಬಂಡವಾಳಶಾಹಿ ಅಭಿವದ್ಧಿ ಪಥದಲ್ಲಿ ಸಾಗಲು ಬಳಸಿಕೊಂಡಿತು. ಈ ದಾರಿಯಲ್ಲಿ ಸಾಗುವುದೆಂದರೆ ಭೂಮಾಲಕತ್ವದೊಂದಿಗೆ ರಾಜಿ ಮತ್ತು ರೈತಾಪಿಗಳನ್ನು ಓಬೀರಾಯನ ಕಾಲದ ಭೂಸಂಬಂಧಗಳ ಸಂಕೋಲೆಗಳಿಂದ ಮುಕ್ತಗೊಳಿಸುವಲ್ಲಿ ವಿಫಲತೆ ಹಾಗೂ ಅವರ ಮೇಲೆ ಬಂಡವಾಳಶಾಹಿ ಶೋಷಣೆಯ ಹೇರಿಕೆಯೇ ಆಗಿತ್ತು. ಸರಕಾರ ಅನುಸರಿಸಿದ ಧೋರಣೆಗಳು ಗುತ್ತೇದಾರಿ ಬಂಡವಾಳಶಾಹಿ ಗುಂಪುಗಳು ಮತ್ತು ಗ್ರಾಮೀಣ ಶ್ರೀಮಂತರ ಪರ ವಾಲಿದವು.

ಇಂತಹ ಸನ್ನಿವೇಶದಲ್ಲಿ, ಕಮ್ಯುನಿಸ್ಟ್ ಪಕ್ಷ ಭೂಸುಧಾರಣೆಗಳು ಮತ್ತು ‘ಉಳುವವನೇ ಹೊಲದೊಡೆಯ’ ಎಂಬ ಘೋಷಣೆಯನ್ನು ಸಾಕಾರಗೊಳಿಸುವ ಹೋರಾಟಗಳ ಮೂಲಕ ಕೃಷಿ ಸಂಬಂಧಗಳನ್ನು ಪ್ರಜಾಪ್ರಭುತ್ವೀಕರಿಸುವ ಕಾರ್ಯಭಾರವನ್ನು ಕೈಗೆತ್ತಿಕೊಂಡಿತು. ಈ ಹೋರಾಟಗಳಿಂದಾಗಿಯೇ ಕೇರಳದಲ್ಲಿ ಮೊದಲ ಕಮ್ಯುನಿಸ್ಟ್ ಮಂತ್ರಿಮಂಡಳ ಮತ್ತು ನಂತರ ಪಶ್ವಿಮ ಬಂಗಾಳ ಮತ್ತು ತ್ರಿಪುರಾದ ಎಡ ನೇತೃತ್ವದ ಸರಕಾರಗಳು ಭೂಸುಧಾರಣೆಗಳನ್ನು ಜಾರಿಗೆ ತಂದವು. ಸ್ವಾತಂತ್ರ್ಯ ನಂತರದ ಮೊದಲ ದಶಕಗಳಲ್ಲಿ ಭೂಸುಧಾರಣೆಗಳನ್ನು ಭಾರತೀಯ ರಾಜಕಾರಣದ ಕೇಂದ್ರಕ್ಕೆ ತಂದದ್ದು ಕಮ್ಯುನಿಸ್ಟ್ ಪಕ್ಷ.

ಕಮ್ಯುನಿಸ್ಟರು ನೇತೃತ್ವದ ಪಾತ್ರ ವಹಿಸಿದ ಇನ್ನೊಂದು ಪ್ರಮುಖ ಹೋರಾಟವೆಂದರೆ ರಾಜ್ಯಗಳ ಭಾಷಾವಾರು ಪುನರ‍್ರಚನೆ. ಸ್ವಾತಂತ್ರ್ಯದ ಮೊದಲೇ, ಕಮ್ಯುನಿಸ್ಟರು ಭಾಷಾವಾರು ನೀತಿಯ ಮೇಲೆ ಆಧಾರಿತ ರಾಜ್ಯಗಳ ಒಂದು ಒಕ್ಕೂಟ ಸ್ವರೂಪದ ಭಾರತೀಯ ಸಂಘದ ಯೋಜನೆಯನ್ನು ಮುಂದಿಟ್ಟಿದ್ದರು.

ರಾಜಕೀಯ ವ್ಯವಸ್ಥೆಯಲ್ಲಿ ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವದ ಅತ್ಯಂತ ನಿಷ್ಟ ಹೋರಾಟಗಾರರಾಗಿ ಕಮ್ಯುನಿಸ್ಟರು ಮೂಡಿ ಬಂದರು. ಕಾಂಗ್ರೆಸ್ ಮತ್ತಿತರ ಬೂರ್ಜ್ವಾ ಪಕ್ಷಗಳು ಜಾತ್ಯತೀತತೆ ಅಥವ ಧರ್ಮನಿರಪೇಕ್ಷತೆ ಎಂದರೆ ಎಲ್ಲ ಧರ್ಮಗಳ ಸಮಾನತೆ ಹಾಗೂ ಪ್ರಭುತ್ವ ಮತ್ತು ರಾಜಕೀಯದಲ್ಲಿ ಹಸ್ತಕ್ಷೇಪಕ್ಕೆ ಅವೆಲ್ಲಕ್ಕೂ ಸಮಾನ ಹಕ್ಕು ಎಂದೇ ವ್ಯಾಖ್ಯಾನಿಸಿವೆ. ಆದರೆ ಜಾತ್ಯಾತೀತತೆ ಎಂದರೆ ಧರ್ಮವನ್ನು ಪ್ರಭುತ್ವ ಮತ್ತು ರಾಜಕೀಯದಿಂದ ಪ್ರತ್ಯೇಕಿಸುವುದು ಎಂಬ ವ್ಯಾಖ್ಯಾನಕ್ಕೆ ಕಮ್ಯುನಿಸ್ಟರು ದೃಢವಾಗಿ ಬದ್ಧರಾದರು. ಜಾತ್ಯತೀತತೆಗೆ ಕಮ್ಯುನಿಸ್ಟರ ಬದ್ಧತೆಯನ್ನು ಪಶ್ಚಿಮ ಬಂಗಾಲ, ಕೇರಳ ಮತ್ತು ತ್ರಿಪುರಗಳಲ್ಲಿ ಎಡನೇತೃತ್ವದ ಸರಕಾರಗಳ ಪಾತ್ರ ಹಲವು ಸಂದರ್ಭಗಳಲ್ಲಿ ಸಾಬೀತು ಪಡಿಸಿದೆ. ಪಶ್ಚಿಮ ಬಂಗಾಲದಲ್ಲಿ 34 ವರ್ಷಗಳ ಕಾಲ ಎಡರಂಗ ಸರಕಾರದ ದಾಖಲೆಯಂತೂ ಈ ನಿಟ್ಟಿನಲ್ಲಿ ಆದರ್ಶಪ್ರಾಯ. 1990ರ ದಶಕದಲ್ಲಿ ಹಿಂದುತ್ವ ಶಕ್ತಿಗಳು ಎದ್ದೇಳಲಾರಂಭಿಸಿದಾಗ ಅಯೋಧ್ಯಾ ವಿವಾದ ಮುಂತಾದ ಪ್ರಶ್ನೆಗಳಲ್ಲಿ ಕೋಮುವಾದಿ ಶಕ್ತಿಗಳೊಂದಿಗೆ ರಾಜಿ ಮಾಡಿಕೊಳ್ಳದೆ ಅವನ್ನು ಎದುರಿಸಬೇಕೆಂಬ ದೃಢ ನಿಲುವು ತಳೆದದ್ದು ಕಮ್ಯುನಿಸ್ಟರು ಮತ್ತು ಎಡಪಕ್ಷಗಳು ಮಾತ್ರ.

ಕಮ್ಯುನಿಸ್ಟ್ ಆಂದೋಲನ ದೇಶದಲ್ಲಿ ಪ್ರಜಾಪ್ರಭುತ್ವವನ್ನು ವಿಸ್ತರಿಸಲು ಮತ್ತು ಆಳಗೊಳಿಸಲು ನಿರಂತರವಾಗಿ ಶ್ರಮಿಸುತ್ತ ಬಂದಿದೆ. ಆಳುವ ವರ್ಗಗಳು ಸದಾ ಪ್ರಜಾಪ್ರಭುತ್ವವನ್ನು ಮತ್ತು ನಾಗರಿಕರ ಸಂವಿಧಾನಿಕ ಹಕ್ಕುಗಳನ್ನು ನಿರ್ಬಂಧಗಳಿಗೆ ಒಳಪಡಿಸಲು ಪ್ರಯತ್ನಿಸಿವೆ. ಆರಂಭದಿಂದಲೇ ಕಮ್ಯುನಿಸ್ಟರು ನಿರೋಧಕ ಬಂಧನ ಕಾನೂನುಗಳನ್ನು ವಿರೋಧಿಸಿಕೊಂಡು ಬಂದಿದ್ದಾರೆ; ಪ್ರತಿ ತಿರುವಿನಲ್ಲೂ ಪ್ರಜಾಪ್ರಭುತ್ವ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳನ್ನು ರಕ್ಷಿಸಲು ಪ್ರಯತ್ನಿಸುತ್ತ ಬಂದಿದ್ದಾರೆ. ಸಿಪಿಐ(ಎಂ) ತುರ್ತುಪರಿಸ್ಥಿತಿಯನ್ನು ವಿರೋಧಿಸಿತು ಮತ್ತು ಅದರ ಹಲವಾರು ಕಾರ್ಯಕರ್ತರು ಜೈಲುವಾಸ ಅನುಭವಿಸಿದರು.

ಬಂಡವಾಳಶಾಹಿ ಬೆಳವಣಿಗೆಯ ಇಡೀ ಮಾದರಿ ಮೂರು ದಶಕಗಳ ಹಿಂದೆ ಆಳುವ ವರ್ಗಗಳು ನವ-ಉದಾರವಾದಿ ಧೋರಣೆಗಳನ್ನು ಅಂಗೀಕರಿಸಿದ ನಂತರ ಬದಲಾಯಿತು. ಕಾಂಗ್ರೆಸ್ ಮತ್ತು ಬಿಜೆಪಿ ಹಾಗೂ ಇತರ ಎಲ್ಲ ಬೂರ್ಜ್ವಾ ಪಕ್ಷಗಳು ನವ-ಉದಾರವಾದಿ ನಿಲುವನ್ನು ಅಪ್ಪಿಕೊಂಡವು. ಆದರೆ ಕಮ್ಯುನಿಸ್ಟರು ನವ-ಉದಾರವಾದಿ ಧೋರಣೆಗಳನ್ನು ಮತ್ತು ಅದರ ಅಂಗವಾಗಿ ಬಂದ ಸಾಮ್ರಾಜ್ಯಶಾಹಿ-ಪರ ಪಲ್ಲಟವನ್ನು ಸತತವಾಗಿ ವಿರೋಧಿಸಿಕೊಂಡು ಬಂದಿದ್ದಾರೆ. ವರ್ಗ ಮತ್ತು ಸಾಮೂಹಿಕ ಸಂಘಟನೆಗಳಲ್ಲಿ ಕೆಲಸ ಮಾಡುತ್ತಿರುವ ಕಮ್ಯುನಿಸ್ಟರು ಈ ಧೋರಣೆಗಳಿಗೆ ಪ್ರತಿರೋಧವನ್ನು ಅಣಿನೆರೆಸುವಲ್ಲಿ ನೇತೃತ್ವದಲ್ಲಿದ್ದಾರೆ. ಈ ನವ-ಉದಾರವಾದಿ ದಾಳಿಗಳನ್ನು ಹಿಮ್ಮೆಟ್ಟಿಸಲು ಕಾರ್ಮಿಕ ವರ್ಗದ ಸಾಕಷ್ಟು ವ್ಯಾಪಕವಾದ ಐಕ್ಯತೆಯನ್ನು ಕಟ್ಟಲು ಕಮ್ಯುನಿಸ್ಟರು ಕೆಲಸ ಮಾಡುತ್ತಿದ್ದಾರೆ. ಈ ಐಕ್ಯ ಕಾರ್ಮಿಕ ಆಂದೋಲನ ಕಳೆದ ಮೂರು ದಶಕಗಳಲ್ಲಿ ನವ-ಉದಾರವಾದದ ವಿವಿಧ ಆಯಾಮಗಳ ವಿರುದ್ಧ 19 ಸಾರ್ವತ್ರಿಕ ಮುಷ್ಕರಗಳನ್ನು ನಡೆಸಿದೆ. 20ನೇಯದಾಗಿ ನವಂಬರ್ 26ರಂದು ಒಂದು ದಿನದ ಸಾರ್ವತ್ರಿಕ ಮುಷ್ಲರ ನಡೆಯಲಿದೆ.

ಕಮ್ಯುನಿಸ್ಟರು ಮತ್ತು ಎಡ ಚಳುವಳಿಯ ಬಗ್ಗೆ ಆಳುವ ವರ್ಗಗಳ ವೈಷಮ್ಯದಿಂದಾಗಿ ಎಡ ಚಳುವಳಿಯ ಕಾರ್ಯಕರ್ತರ ಮೇಲೆ ಸತತ ದಾಳಿಗಳು ನಡೆದಿವೆ. 1970ರ ದಶಕದಲ್ಲಿ ಪಶ್ಚಿಮ ಬಂಗಾಲದಲ್ಲಿ ಮತ್ತು ಒಂದು ದಶಕದ ನಂತರ ತ್ರಿಪುರಾದಲ್ಲಿ ಅರೆ-ಫ್ಯಾಸಿಸ್ಟ್ ಭಯೋತ್ಪಾದನೆ ವರ್ಗಹೋರಾಟ ತೀವ್ರಗೊಂಡಿರುವುದರ ಒಂದು ಫಲಿತಾಂಶ. ಎರಡೂ ರಾಜ್ಯಗಳಲ್ಲಿ ಕಮ್ಯುನಿಸ್ಟ್-ವಿರೋಧಿ ಭಯೋತ್ಪಾದನೆ ಮತ್ತು ಹಿಂಸಾಚಾರ ಮತ್ತೆ-ಮತ್ತೆ ನಡೆದಿವೆ. ಕೇರಳದಲ್ಲೂ ಸಿಪಿಐ(ಎಂ)ನ ನೂರಾರು ಸಿಪಿಐ(ಎಂ) ಕಾರ್ಯಕರ್ತರನ್ನು ಆರೆಸ್ಸೆಸ್ ಸೇರಿದಂತೆ ಆಳುವ ವರ್ಗದ ಶಕ್ತಿಗಳು ಕೊಂದಿವೆ.

ಮಹಿಳಾ ವಿಮೋಚನೆಯ ಬಗ್ಗೆ ಒಂದು ಸಮಗ್ರ ನಿಲುವನ್ನು ರೂಪೀಕರಿಸುವಲ್ಲಿ ಕಮ್ಯುನಿಸ್ಟರು ಒಂದು ಪಥಪ್ರದರ್ಶಕ ಪಾತ್ರವನ್ನು ವಹಿಸಿದ್ದಾರೆ. ನಿಜವಾದ ವಿಮೋಚನೆಯಾಗಬೇಕಾದರೆ ಸಾಮಾಜಿಕ ದಮನ ಮತ್ತು ಪಿತೃಪ್ರಾಧಾನ್ಯತೆ ಅಳಿಯಬೇಕಾಗುತ್ತದೆ. 1931ರಷ್ಟು ಹಿಂದೆಯೇ, ಕಮ್ಯುನಿಸ್ಟರ ‘ಕರಡು ಕ್ರಿಯಾ ವೇದಿಕೆ’ ಜಾತಿ ವ್ಯವಸ್ಥೆಯ ನಿರ್ಮೂಲನೆ ಮತ್ತು ಅಸ್ಪೃಶ್ಯರ ವಿಮೋಚನೆಯನ್ನು ಪ್ರತಿಪಾದಿಸಿತ್ತು. ಕಮ್ಯುನಿಸ್ಟರು ವರ್ಗಹೋರಾಟವನ್ನು ಸಾಮಾಜಿಕ ದಮನದ ವಿರುದ್ಧ ಹೋರಾಟದೊಂದಿಗೆ ಸಮಗ್ರೀಕರಿಸಲು ಪ್ರಯತ್ನಿಸಿದ್ದಾರೆ.

ನವ-ಉದಾರವಾದ ಮತ್ತು ಹಿಂದುತ್ವ ಶಕ್ತಿಗಳ ಒಟ್ಟೊಟ್ಟಿನ ಬೆಳವಣಿಗೆ ಕಮ್ಯುನಿಸ್ಟ್ ಆಂದೋಲನಕ್ಕೆ ಮತ್ತು ಎಲ್ಲ ಎಡ ಹಾಗೂ ಪ್ರಜಾಪ್ರಭುತ್ವವಾದಿ ಶಕ್ತಿಗಳಿಗೆ ಒಂದು ಗಂಭಿರ ಸವಾಲನ್ನು ಒಡ್ಡಿದೆ. ನವ-ಉದಾರವಾದಿ ಬಂಡವಾಳಶಾಹಿಯು ವರ್ಗಗಳ ಸಂರಚನೆ ಮತ್ತು ಸಂಯೋಜನೆಯಲ್ಲಿ ಹಲವಾರು ಬದಲಾವಣೆಗಳನ್ನು ತಂದಿದೆ, ಇವುಗಳಲ್ಲಿ ಕೆಲವು ಕಾರ್ಮಿಕ ವರ್ಗದ ಮತ್ತು ರೈತ ಆಂದೋಲನಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಿವೆ. ಎಲ್ಲ ವಲಯಗಳಲ್ಲೂ ವ್ಯಾಪಕವಾಗಿ ಹರಡಿರುವ ಖಾಸಗೀಕರಣ ಮಧ್ಯಂತರ ವರ್ಗಗಳ ಮೇಲೆ ತನ್ನದೇ ಪರಿಣಾಮ ಬೀರಿದೆ. ಈ ಅವಧಿಯಲ್ಲಿ ಎಡ ನೇತೃತ್ವದ ರಾಜ್ಯ ಸರಕಾರಗಳು ಕೂಡ ಪರ್ಯಾಯ ಧೋರಣೆಗಳನ್ನು ಜಾರಿಗೊಳಿಸುವಲ್ಲಿ ಗಂಭೀರ ಮಿತಿಗಳನ್ನು, ನಿರ್ಬಂಧಗಳನ್ನು ಎದುರಿಸಬೇಕಾಗಿ ಬಂದಿದೆ. ಸಿಪಿಐ(ಎಂ) ಮತ್ತು ಎಡಶಕ್ತಿಗಳು ಈ ಪ್ರಶ್ನೆಗಳನ್ನು ವಿಶ್ಲೇಷಿಸಲು ಮತ್ತು ಹೊಸ ತಂತ್ರಾತ್ಮಕ ನಿಲುವುಗಳನ್ನು ಹಾಗೂ ಘೋಷಣೆಗಳನ್ನು ರೂಪೀಕರಿಸಲು ದೃಢಪ್ರಯತ್ನ ನಡೆಸಿವೆ.

2014ರಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬರುವುದರೊಂದಿಗೆ ಒಂದು ಗುಣಾತ್ಮಕ ಬದಲಾವಣೆ ಬಂದಿದೆ. ಮೊತ್ತಮೊದಲ ಬಾರಿಗೆ, ಹಿಂದುತ್ವ ತತ್ವಸಿದ್ಧಾಂತವನ್ನು ಆಧರಿಸಿದ ಮತ್ತು ಫ್ಯಾಸಿಸ್ಟ್ ಮಾದರಿ ಆರೆಸ್ಸೆಸ್‌ನ ಹತೋಟಿಯಲ್ಲಿರುವ ಒಂದು ಪಕ್ಷ ಕಳೆದ ಆರು ವರ್ಷಗಳಿಂದ ಪ್ರಭುತ್ವ ಅಧಿಕಾರವನ್ನು ಚಲಾಯಿಸುತ್ತಿದೆ. ಜಾತ್ಯಾತೀತತೆ, ಪ್ರಜಾಪ್ರಭುತ್ವ ಮತ್ತು ದುಡಿಯುವ ಜನಗಳ ಕಲ್ಯಾಣದ ಮೇಲೆ ವಿನಾಶಕಾರಿ ಪರಿಣಾಮಗಳು ಅನಾವರಣಗೊಳ್ಳುತ್ತಿವೆ. ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ಪಾತ್ರವಿಲ್ಲದ, ಆ ಹೋರಾಟದ ಸಾಮ್ರಾಜ್ಯಶಾಹಿ-ವಿರೋಧಿ ಜಾತ್ಯಾತೀತ ಹುರುಪನ್ನೂ ಹೊಂದಿರದ ಒಂದು ರಾಜಕೀಯ ಶಕ್ತಿ ಈಗ ಸಂವಿಧಾನವನ್ನು ಬುಡಮೇಲು ಮಾಡಲು ಮತ್ತು ಸರ್ವಾಧಿಕಾರಶಾಹಿ ಆಳ್ವಿಕೆಯನ್ನು ಸ್ಥಾಪಿಸುವಲ್ಲಿ ತೊಡಗಿದೆ- ಇವನ್ನೆಲ್ಲ ಪ್ರತಿಗಾಮಿಯಾದ ಮತ್ತು ಪ್ರತಿಕ್ರಿಯಾವಾದಿಯಾದ ಒಂದು ರಾಷ್ಟ್ರವಾದದ ಹೆಸರಿನಲ್ಲಿ ಮಾಡಲಾಗುತ್ತಿದೆ.

ಈಗಿರುವ ಸವಾಲು ಈ ಖೋಟಾ-ರಾಷ್ಟ್ರವಾದವನ್ನು ಒಂದು ಸಾಮ್ರಾಜ್ಯಶಾಹಿ-ವಿರೋಧಿ, ಜಾತ್ಯಾತೀತ ಮತ್ತು ಎಲ್ಲರನ್ನೂ ಒಳಗೊಳ್ಳುವ ರಾಷ್ಟ್ರವಾದದ ಮೂಲಕ ಎದುರಿಸುವುದು. ಇದನ್ನು ಕೈಗೆತ್ತಿಕೊಳ್ಳಲು ಅತ್ಯುತ್ತಮ ರೀತಿಯಲ್ಲಿ ಸಜ್ಜುಗೊಂಡಿರುವವರೆಂದರೆ ಕಮ್ಯುನಿಸ್ಟರೇ. ಏಕೆಂದರೆ ಅವರು ಸ್ವಾತಂತ್ರ್ಯಕ್ಕಾಗಿ ಸಾಮ್ರಾಜ್ಯಶಾಹಿ-ವಿರೋಧಿ ಹೋರಾಟದ ಪರಂಪರೆಯನ್ನು ಮುಂದೊಯ್ಯುತ್ತಿರುವವರು. ಎಲ್ಲ ಕಮ್ಯುನಿಸ್ಟ್ ಮತ್ತು ಎಡಶಕ್ತಿಗಳ ಐಕ್ಯತೆಯನ್ನು ಕಟ್ಟುವುದು ಎಲ್ಲ ಪ್ರಜಾಪ್ರಭುತ್ವವಾದಿ ಮತ್ತು ಜಾತ್ಯಾತೀತ ಶಕ್ತಿಗಳನ್ನು ಅಣಿನರೆಸಬೇಕಾದ ಈ ಕಾಲಘಟ್ಟದಲ್ಲಿ ಅತ್ಯಂತ ನಿರ್ಣಾಯಕ ಮಹತ್ವದ್ದಾಗಿದೆ.

ಮಾರ್ಕ್ಸ್ ವಾದ-ಲೆನಿನ್‌ವಾದ ಭಾರತದಲ್ಲಿ ಕಮ್ಯುನಿಸ್ಟ್ ಆಂದೋಲನದ ತಾತ್ವಿಕ ಬುನಾದಿಯಾಗಿದೆ. 1964ರಲ್ಲಿ ಸಿಪಿಐ(ಎಂ)ನ ಸ್ಥಾಪನೆ ಪರಿಷ್ಕರಣವಾದದ ವಿರುದ್ಧ ಈ ಸುದೀರ್ಘ ಹೋರಾಟದ ಒಂದು ಫಲಿತಾಂಶ. ಸ್ಥಾಪನೆಯಾದ ಕೂಡಲೇ, ಪಕ್ಷವು ಎಡ-ದುಸ್ಸಾಹಸವಾದದ ವಿರುದ್ಧವೂ ಹೋರಾಡಬೇಕಾಯಿತು. ಮಾರ್ಕ್ಸ್ ವಾದ-ಲೆನಿನ್‌ವಾದವನ್ನು ಭಾರತೀಯ ಸಮಾಜದ ಮೂರ್ತ ಪರಿಸ್ಥಿತಿಗಳಿಗೆ ಅನ್ವಯಿಸುತ್ತ, ಸಿಪಿಐ(ಎಂ) ಒಂದು ಕಾರ್ಯಕ್ರಮವನ್ನು ಮುಂದಿಟ್ಟುಕೊಂಡಿದೆ. ಇದರ ಗುರಿ ಸಮಾಜವಾದದ ದಾರಿಯಲ್ಲಿ ಸಾಗಲು ಅನುಕೂಲ ಕಲ್ಪಿಸಿಕೊಡಬಲ್ಲ ಒಂದು ಜನತಾ ಪ್ರಜಾಪ್ರಭುತ್ವವನ್ನು ಸಾಧಿಸುವುದು. ಈ ವೈಜ್ಞಾನಿಕ ಸಿದ್ಧಾಂತ ಮತ್ತು ಆಚರಣೆಯೊಂದಿಗೆ ಸಜ್ಜುಗೊಂಡು ಭಾರತದಲ್ಲಿನ ಕ್ರಾಂತಿಕಾರಿ ಆಂದೋಲನ ವರ್ಗಶೋಷಣೆ ಮತ್ತು ಸಾಮಾಜಿಕ ದಮನದಿಂದ ಮುಕ್ತವಾದ ಒಂದು ಸಮಾಜವನ್ನು ಕಟ್ಟುವತ್ತ ಮುನ್ನಡೆಯಬಲ್ಲದು.

Leave a Reply

Your email address will not be published. Required fields are marked *